ರಂಗಚೇತನ ಆಯೋಜಿಸಿದ್ದ ಜನಪರ ಸಂಸ್ಕೃತಿ ಉತ್ಸವದ ನಾಟಕೋತ್ಸವದಲ್ಲಿ ಇದೇ ಬುಧವಾರ, 18ರಂದು ದೃಶ್ಯ ತಂಡದವರು ಅಭಿನಯಿಸಿದ `ಮರುಗಡಲು~ ಎಂಬ ಪ್ರಯೋಗವು ವಿಶಿಷ್ಟವಾಗಿತ್ತು.

ತಮ್ಮ ಹವ್ಯಕ ಭಾಷಾ ಸೊಗಡಿನಿಂದ ಬರೆದಿದ್ದ ನವುಲು ಪದ್ಯದಿಂದಲೇ ಹೆಸರಾದ ಕವಿ, ಲೇಖಕ ಗ.ಸು.ಭಟ್ಟ ಬೆತ್ತಗೇರಿ. ಹೊಸ ನಾಟಕಗಳೇ ಬರೆಯುತ್ತಿಲ್ಲ ಎಂದು ಹೇಳಿಕೊಂಡು ಓಡಾಡುವ ಬೆಂಗಳೂರಿಗರಿಗೆ ಕಾಣಿಸುವುದು ಬೆಂಗಳೂರಿನಲ್ಲಿ ಹುಟ್ಟುವ ಹೊಸನಾಟಕಗಳು ಮಾತ್ರ.

ಆದರೆ ಅದಕ್ಕೆ ಅಪವಾದವೆಂಬಂತೆ, ಗ.ಸು. ಭಟ್ಟರು ದೂರದ ಯಲ್ಲಾಪುರದಲ್ಲಿ ಕುಳಿತು ಕೆಲವು ಒಳ್ಳೆಯ ನಾಟಕಗಳನ್ನು ಬರೆದಿದ್ದಾರೆ. ನಾಟಕದ ಪ್ಲಾಟ್ನ ದೃಷ್ಟಿಯಿಂದ, ಸಂಘರ್ಷದ ದೃಷ್ಟಿಯಿಂದ ಭಟ್ಟರು ಆಯ್ದುಕೊಳ್ಳುವ ಕಥಾಹಂದರ ತುಂಬ ಬಿಗಿಯಾದದ್ದು ಮತ್ತು ವಿಶಿಷ್ಟವಾದದ್ದು.

ಅವರ `ಗಂಧವಲ್ಲಿ~ಯೇ ಇರಬಹುದು, `ಪುನರ್ನವ~ವೇ ಇರಬಹುದು. ಆದರೆ ಅದರ ನಿರ್ವಹಣೆ ಮತ್ತು ನಾಟಕದ ಬೆಳವಣಿಗೆಯಲ್ಲಿ ಕೊಂಚ ಎಡವುತ್ತಾರೆ. ಉಳಿದಂತೆ ಮಾತುಗಳು ಕೂಡ ಹಲವು ಕಡೆ ಅಷ್ಟೇ ಬಿಗಿಯಾಗಿರುತ್ತದೆ. ಅವರ ಮೂರೂ ನಾಟಕಗಳಲ್ಲಿ ಕೊಂಚ ಬಿಗಿಯಾದ ನಾಟಕ `ಮರುಗಡಲು~.

ಇಕ್ಷ್ವಾಕು ವಂಶದ ರಾಜ ಸಗರನ ಮಕ್ಕಳಾದ ಅಸಮಂಜ ಮತ್ತು ಸೋರೇ ಕಾಯಿಯ ಬೀಜದಿಂದುದಯಿಸಿದ ಅರವತ್ತು ಸಾವಿರ ಮಕ್ಕಳ ಕಥೆಯೇ `ಮರುಗಡಲು~. ವಿಕ್ಷಿಪ್ತವಾದ ಮನಸ್ಸಿನ ಅಸಮಂಜ, ವಿಚಿತ್ರ ರೀತಿಯಲ್ಲಿ ಹುಟ್ಟಿದ ಅರವತ್ತು ಸಾವಿರ ಮಕ್ಕಳು, ಇವೆಲ್ಲದರ ನಡುವೆ ಹದಗೆಡುತ್ತಿರುವ ರಾಜ್ಯದ ಅಯೋಧ್ಯೆಯ ಸ್ಥಿತಿ, ಮಕ್ಕಳೇ ರಾಜ್ಯವನ್ನು ಲೂಟಿ ಮಾಡುತ್ತಿರುವುದು, ಇದೆಲ್ಲವನ್ನೂ ನೋಡುತ್ತಾ ಅಸಹಾಯಕನಾಗಿ ಕೂರುವ ತಂದೆ ಸಗರ, ಇದೆಲ್ಲದರ ತುತ್ತತುದಿ ಯೆಂಬಂತೆ ರಾಜ್ಯದಲ್ಲಿ ಸರಯೂ ನದಿ ಬತ್ತಿಹೋಗಿ ಕಡಲುಗಳೆಲ್ಲ ಬಂಜೆಯಾದಾಗ ಸಗರ ಅಶ್ವಮೇಧಯಾಗವನ್ನು ನಡೆಸಿ ತನ್ನ ಅರವತ್ತು ಸಾವಿರ ಮಕ್ಕಳನ್ನು ಅಶ್ವದ ಹಿಂದೆ ಅಟ್ಟುತ್ತಾನೆ.

ಅವರು ಕಣ್ತಪ್ಪಿಹೋದ ಅಶ್ವವನ್ನು ಅರಸುತ್ತ ಜಂಭುದ್ವೀಪವನ್ನೇ ಅಗೆದು ಪಾತಾಳದಲ್ಲಿ ತಪಸ್ಸಿಗೆ ಕುಳಿತಿದ್ದ ಕಪಿಲ ಮಹರ್ಷಿಗಳ ಪಕ್ಕವೇ, ಇಂದ್ರನ ಕುತಂತ್ರದಿಂದ ಕಟ್ಟಿ ಹಾಕಲ್ಪಟ್ಟಿದ್ದ ಅಶ್ವವನ್ನು ಕಂಡು ಅದು ಈ ಮಹರ್ಷಿಯದೇ ಕೆಲಸವೆಂದು ತಿಳಿದು ಅವರ ಮೇಲೆ ಆಕ್ರಮಣ ಮಾಡುತ್ತಾರೆ. ಕಪಿಲ ಮಹರ್ಷಿಗಳ ಕೆಂಗಣ್ಣಿಗೆ ಗುರಿ ಯಾಗಿ ಅವರೆಲ್ಲ ಬೂದಿಯಾಗುತ್ತಾರೆ. ಇದಿಷ್ಟು ನಾಟಕದ ಕಥಾಸಾರಾಂಶ.

ಇದಿಷ್ಟು ಮಾತ್ರವಲ್ಲದೇ ನಾಟಕ ಕೃತಿಯಲ್ಲಿ ಬರುವ ಹಳ್ಳಿಯವರು, ಇಷ್ಟುದಿನ ಕುಡುಗೋಲನ್ನು ಮಾಡುತ್ತಿದ್ದ ಕೈ ಈಗ ಕತ್ತಿಯನ್ನು ಮಾಡುವಂತಾದ ಕಮ್ಮೋರ, ಅವನ ಮಗ, ಸೈನಿಕರು ಹೀಗೆ ರಾಜವ್ಯವಸ್ಥೆಯ ಜೊತೆಜೊತೆಗೆ ಅಲ್ಲಿನ ಕೆಳವರ್ಗದ ಜನರ ಮನಸ್ಥಿತಿಯನ್ನೂ ಬಿಂಬಿಸುವ ದೃಶ್ಯಗಳೂ ಇವೆ. ಆದರೆ ಅಸಮಂಜನ ಸಂಕೀರ್ಣತೆ ಏನು ಎಂಬುದು ಅಷ್ಟಾಗಿ ವಿದಿತವಾಗುವುದಿಲ್ಲ.

ಉಳಿದಂತೆ ನಾಟಕಕೃತಿಯು ಎತ್ತುವ ಹಲವು ಪ್ರಶ್ನೆಗಳು ನಿಜಕ್ಕೂ ಪ್ರಸ್ತುತವಾದದ್ದು. ತನ್ನ ಮಕ್ಕಳ ಬೂದಿಯ ರಾಸಿಯಲ್ಲಿ ಕುಳಿತ ಸಗರ ಆತ್ಮಹತ್ಯೆ ಮಾಡಿಕೊಳ್ಳಲೋ, ಪ್ರಾರ್ಥನೆ ಮಾಡಲೋ ಎಂದು ಕೇಳಿ ಕಡೆಗೆ ಪ್ರಾರ್ಥನೆಗೆ ಮೊರೆಹೋಗುವುದು ಮನುಷ್ಯ ಬದುಕಿನ ಆಶಾವಾದಕ್ಕೆ ಪುಷ್ಟಿಕೊಟ್ಟಂತಾಗುತ್ತದೆ. ಈ ಪ್ರಾರ್ಥನೆಯೇ ಮುಂದೆ ಭಗೀರಥನಾಗಿ ಈಡೇರುವಲ್ಲಿ ಭಾರತೀಯ ಮನಷ್ಯನ ಮನಸ್ಥಿತಿಯ ಸೂಚ್ಯವಾದ ಗುಣವನ್ನೂ ಕಾಣಬಹುದಾಗಿದೆ.

ನಾಟಕಕೃತಿಯನ್ನು ಅಷ್ಟೇ ಅಚ್ಚುಕಟ್ಟಾಗಿ ನಿರ್ದೇಶಿಸಿದ್ದಾರೆ ದಾಕ್ಷಾಯಿಣಿ ಭಟ್. ನೀನಾಸಂನಲ್ಲಿ ಪದವಿ ಪಡೆದು ಕರ್ನಾಟಕದ ಹಲವು ಕಡೆ ನಾಟಕ ಕಮ್ಮಟಗಳನ್ನು ನಡೆಸಿ ಹಲವಾರು ನಾಟಕಗಳನ್ನು ರಂಗಕ್ಕೆ ತಂದಿದ್ದಾರೆ. ಬೆರಳೆಣಿಕೆಯಲ್ಲಿರುವ ಅಥವಾ ಇಲ್ಲವೇ ಇಲ್ಲ ಎನ್ನಬಹುದಾದ ಯುವ ಮಹಿಳಾ ನಿರ್ದೇಶಕರಲ್ಲಿ ದಾಕ್ಷಾಯಿಣಿ ಭಟ್ ಥಟ್ಟನೆ ನೆನಪಾಗುತ್ತಾರೆ. ಅವರು ಪ್ರಸ್ತುತ ಪ್ರಯೋಗವನ್ನು ತಾವೇ ಕಟ್ಟಿಕೊಂಡ `ದೃಶ್ಯ~ ತಂಡದ ಮೂಲಕ ಬಹಳ ಮುತುವರ್ಜಿಯಿಂದ ನಿಭಾಯಿಸಿದ್ದಾರೆ.

ಪ್ರಯೋಗದ ವಿನ್ಯಾಸ, ವಸ್ತ್ರವಿನ್ಯಾಸ, ನೃತ್ಯ ಸಂಯೋಜನೆ, ಎಲ್ಲವೂ ಗಮನ ಸೆಳೆಯುತ್ತದೆ. ಆದರೆ ಹೇಳಲೇಬೇಕಾದ ವಿಷಯವೆಂದರೆ ನಟರ ದೇಹಚಲನೆಯ ಕುರಿತಾಗಿ. ದೈಹಿಕ ಚಲನೆ ಅಥವಾ ಕ್ರಿಯೆ ಎಂಬುದು ಪಾತ್ರದ ಮಾನಸಿಕ ಚಲನೆಯ ಅಥವ ಕ್ರಿಯೆಯ ಪ್ರತೀಕವಾದರೆ ಮಾತ್ರ ಅದು ನೋಡುಗರಿಗೆ ಸಮಂಜಸ ವೆನಿಸುತ್ತದೆ, ಹಾಗಾಗದಿದ್ದಾಗ ಅದು ಬರಿದೇ ದೈಹಿಕ ಕಸರತ್ತಾಗಿ ಬಿಡುತ್ತದೆ.

ಹೀಗೆ ಪ್ರಯೋಗದಲ್ಲಿ ಹಲವು ಕಡೆ ಆದದ್ದು ಸುಳ್ಳಲ್ಲ. ಕ್ರಿಯೆಗೂ ಕಸರತ್ತಿಗೂ ತುಂಬಾ ವ್ಯತ್ಯಾಸವಿದೆ. ಕ್ರಿಯೆ ಎಂಬುದಲ್ಲಿ ಕಾರಣದ ಅಗತ್ಯವಿದ್ದೇ ಇದೆ. ಆದರೆ ಕಸರತ್ತು ಹಾಗಲ್ಲ. ಅದು ಸಂಪೂರ್ಣ ದೇಹಕ್ಕೆ ಮಾತ್ರ ಸಂಬಂಧಪಟ್ಟದ್ದು. ಇನ್ನು ಸಂಗೀತದ ಏಕತಾನತೆಯಿಂದ ಪ್ರಯೋಗ ಹೊರಬಂದರೆ ಒಳಿತು. ಅದಕ್ಕೆ ಬಳಸುವ ವಾದ್ಯಗಳಲ್ಲಿ, ಹಾಡುಗಾರಿಕೆಯಲ್ಲಿ ವೈವಿಧ್ಯ ತರಬಹುದೋ ಯೋಚಿಸಬಹುದು.

ಉಳಿದಂತೆ ವಸ್ತ್ರವಿನ್ಯಾಸ, ರಂಗಸಜ್ಜಿಕೆ, ಪರಿಕರಗಳು ಪ್ರಯೋಗಕ್ಕೆ ಪೂರಕವಾಗಿವೆ.
ಇಂದಿನ ಹವ್ಯಾಸಿ ರಂಗತಂಡಗಳಲ್ಲಿ ನಟ-ನಟಿಯರನ್ನ ಕಲೆಹಾಕುವುದೇ ಒಂದು ದೊಡ್ಡ ಸಾಹವಾಗಿರುವಾಗ ದಾಕ್ಷಾಯಿಣಿಯವರ ದೃಶ್ಯದ ಬೆನ್ನಹಿಂದೆ ಒಂದು ದೊಡ್ಡ ಯುವಪಡೆಯೇ ಇರುವುದು ಶ್ಲಾಘನೀಯ ಸಂಗತಿ.

ಅವರೆಲ್ಲರೂ ಶ್ರದ್ಧೆಯಿಂದ ಅಭಿನಯಿ ಸಿದ್ದಾರೆ. ಸಗರನಾಗಿ ನಿಶಾಂತ್, ಅಸಮಂಜನಾಗಿ ಅನಿಲ್ಕುಮಾರ್, ಪುರೋಹಿತನಾಗಿ ಸೀತಾರಾಮ ಶರ್ಮ, ಚಿತ್ರಲೇಖೆಯಾಗಿ ಮೇಘನ ತಮ್ಮನಾಗಿ ಸಂಜಯ್, ಹೆಂಗಸರಾಗಿ ದೀಪಾಭಟ್, ಅಶ್ವಿನಿ, ಸ್ಮಿತಾ ಗಮನಸೆಳೆಯುತ್ತಾರೆ. ಇದೊಂದು ಯುವ ಪಡೆಯಾದುದರಿಂದ ತಾಲೀಮಿನ್ನು ಶ್ರದ್ಧೆಯಿಂದ, ಭಕ್ತಿಯಿಂದ, ಮನಸ್ಸುಕೊಟ್ಟು ಮಾಡಿದಲ್ಲಿ ಪ್ರಯೋಗ ಇನ್ನೂ ಎತ್ತರಕ್ಕೆ ಏರಿ ಅವರ ಅಭಿನಯದ ಸಾಧ್ಯತೆಯೂ ಹಿಗ್ಗುವುದು ನಿಶ್ಚಿತ. ಆ ನಿಟ್ಟಿನಲ್ಲಿ ಯುವಪಡೆ ಪ್ರಯತ್ನಿಸಿದರೆ ಮಾತ್ರ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.