ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರು ಬಳಕೆ ಸಾಧ್ಯವಿಲ್ಲದ ಪ್ಲಾಸ್ಟಿಕ್‌ ತ್ಯಾಜ್ಯದಿಂದಲೂ ಇಂಧನ!

Last Updated 29 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಆಧುನಿಕತೆಯ ಬಹುದೊಡ್ಡ ಶಾಪ ಪ್ಲಾಸ್ಟಿಕ್. ಇದು ಬಹಳಷ್ಟು ಸಂದರ್ಭಗಳಲ್ಲಿ ವರವೂ ಆಗಿದ್ದುಂಟು. ಆದರೆ, ಮನುಷ್ಯನ ದುರಾಸೆ, ಅಜಾಗರೂಕತೆಯಿಂದ ಇದು ಶಾಪವಾಗಿ ಪರಿಣಮಿಸಿದ್ದೇ ಹೆಚ್ಚು.

ನಾಗರಿಕತೆಗಳ ಜತೆಗೇ ಬೆಳೆದುಬಂದ ಮಡಕೆಗಳನ್ನು, ಮೊರಗಳನ್ನು ಕೊನೆಗೆ ಬೀಸಣಿಗೆಗಳನ್ನೂ ಇದು ಮೂಲೆಗುಂಪು ಮಾಡಿತು. ಅಲ್ಲದೇ, ತ್ಯಾಜ್ಯದ ಅವೈಜ್ಞಾನಿಕ ನಿರ್ವಹಣೆಯಿಂದಾಗಿ ಜಲಮೂಲಗಳಿಗೂ ಕಂಟಕವಾಗಿದೆ.

ಹಳೆಪಾತ್ರೆ, ಕಬ್ಬಿಣ, ಹಳೆ ಪೇಪರ್ ಎಂದು ಕೂಗುವವರೂ ಕಳಪೆ ದರ್ಜೆಯ ಪ್ಲಾಸ್ಟಿಕ್‌ ಮುಟ್ಟುವುದೂ ಇಲ್ಲ. ಕಪ್ಪು ಬಣ್ಣದ ತೆಳುವಾದ ಪ್ಲಾಸ್ಟಿಕ್ ಕವರ್, ಕೆಲವು ನೀರಿನ ಬಾಟಲಿಗಳು ಸೇರಿದಂತೆ ಟೂತ್ ಬ್ರಷ್, ಪೇಸ್ಟ್, ಶ್ಯಾಂಪುವಿಗೆ ಬಳಸುವ ಶ್ಯಾಷೆಗಳನ್ನು ಅವರು ಕೊಳ್ಳುವುದಿಲ್ಲ. ಕಾರಣ ಇಷ್ಟೇ ಇವುಗಳ ಪುನರ್‍ ಬಳಕೆ, ಸಂಸ್ಕರಣೆ ಅಸಾಧ್ಯ.

ಈ ಇಂತಹ ಪ್ಲಾಸ್ಟಿಕ್ಕನ್ನೂ ಇಂಧನವಾಗಿ ಪರಿವರ್ತಿಸುವಂತಹ ಪರಿಸರ ಸ್ನೇಹಿ ತಂತ್ರಜ್ಞಾನದ ಅಭಿವೃದ್ಧಿಯ ಯತ್ನವೊಂದು ಅಮೆರಿಕದಲ್ಲಿ ನಡೆಯುತ್ತಿದೆ. ರಾಸಾಯನಿಕ ಮಂಡಳಿಯು ‘ಮಿತಗೊಳಿಸು, ಪುನರ್‍ ಬಳಸು, ಪುನರ್ ಸೃಷ್ಟಿಸು' ಎಂಬ ಧ್ಯೇಯವಾಕ್ಯದಡಿ ಹೊಸದೊಂದು ಸಂಶೋಧನೆಯನ್ನು ಕೈಗೊಂಡಿದೆ. ಇದೇ ‘ಪ್ಲಾಸ್ಟಿಕ್ ಟು ಫ್ಯೂಲ್’ (ಪ್ಲಾಸ್ಟಿಕ್‌ನಿಂದ ಪೆಟ್ರೊಲ್‌ಗೆ). ಪ್ಲಾಸ್ಟಿಕ್‌ನಿಂದ ಇಂಧನ ತಯಾರಿಸಬಹುದು ಎಂಬುದು ಇದರ ಸಾರಾಂಶ.

ಹೇಗೆ ಸಾಧ್ಯ? 
ಮೊದಲು ಪ್ಲಾಸ್ಟಿಕ್‌ ವಿಂಗಡಿಸುವುದು ಮುಖ್ಯ. ಸುಲಭವಾಗಿ ಪುನರ್ ಬಳಕೆಯಾಗಬಹುದಾದ ಪ್ಲಾಸ್ಟಿಕ್‌ನಿಂದ ಪುನರ್ ಬಳಕೆಗೆ ಅಸಾಧ್ಯ ಎನಿಸುವ ಪ್ಲಾಸ್ಟಿಕ್‌ ತ್ಯಾಜ್ಯವನ್ನು ವಿಂಗಡಿಸಿಕೊಳ್ಳಬೇಕು. ನಂತರ, ಅದನ್ನು ಆಮ್ಲಜನಕ ರಹಿತ ಪರಿಸರದಲ್ಲಿ ಬಿಸಿ ಮಾಡಬೇಕು. ಆಗ ಅನಿಲ ಹೊರಹೊಮ್ಮುತ್ತದೆ. ಅನಿಲವನ್ನು ತಂಪುಗೊಳಿಸಿದರೆ ಉರಿಸಬಹುದಾದ ಇಂಧನ ಸಿಗುತ್ತದೆ ಎನ್ನುತ್ತಾರೆ ತಂತ್ರಜ್ಞರು.

ಪ್ಲಾಸ್ಟಿಕ್‌ ತ್ಯಾಜ್ಯದಿಂದ ತಯಾರಾದ ಇಂಧನವನ್ನು ದಹಿಸುವುದರಿಂದ ಪರಿಸರಕ್ಕೆ ಹಾನಿ ಆಗುವುದಿಲ್ಲವೇ? ಎಂಬ ಪ್ರಶ್ನೆ ಏಳುವುದು ಸಹಜ. ಇಂಥ ಇಂಧನ ದಹಿಸುವಿದರಿಂದ ರಾಸಾಯನಿಕ ಹೊರಬೀಳುವ ಪ್ರಮಾಣ ಅತ್ಯಲ್ಪ. ವಾತಾವರಣಕ್ಕೆ ಬಿಡುಗಡೆಯಾಗುವ ಗಂಧಕದ ಪ್ರಮಾಣ ಬಹಳಷ್ಟು ಕಡಿಮೆ. ಹೀಗಾಗಿ, ಇದನ್ನು ಒಂದು ರೀತಿಯಲ್ಲಿ ಪರಿಸರಸ್ನೇಹಿ ಇಂಧನ ಎಂದೇ ಹೇಳಬಹುದಾಗಿದೆ ಎನ್ನುತ್ತದೆ ಸಂಶೋಧನೆ ನಡೆಸುತ್ತಿರುವ ರಾಸಾಯನಿಕ ಮಂಡಳಿ.

*
ಪ್ಲಾಸ್ಟಿಕ್‌ ಬಳಕೆ ಆರಂಭ?
ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಿದ್ದ ವೆಸ್ಲಿ ಹ್ಯಾಟ್ ಎಂಬಾತ ಪ್ಲಾಸ್ಟಿಕ್‍ನ್ನು ಮೊದಲ ಬಾರಿಗೆ ಕಂಡು ಹಿಡಿದ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ. ಈತ ಅಚ್ಚುಮೊಳೆಯನ್ನು ಜೋಡಿಸುವ ಸಂದರ್ಭದಲ್ಲಿ ಬೆರಳಿಗೆ ಗಾಯ ಮಾಡಿಕೊಂಡ. ರಕ್ತ ಸುರಿಯುತ್ತಿದ್ದ ಬೆರಳಿಗೆ ಸುತ್ತಮುತ್ತ ಯಾವುದೇ ಔಷಧ ಸಿಗಲಿಲ್ಲ. ರಕ್ತ ಒಸರುತ್ತಲೇ ಇದ್ದಾಗ ಆತ ಅಲ್ಲೇ ಕೈಗೆ ಸಿಕ್ಕಿದ ಕೊಲೋಡಿಯನ್ ಎಂಬ ದ್ರಾವಣವನ್ನು ಗಾಯದ ಮೇಲೆ ಸವರಿದ. ಇದು ರಕ್ತದ ಜತೆ ಸೇರಿದ ಸ್ವಲ್ಪ ಹೊತ್ತಿನಲ್ಲೇ ಒಣಗಿ ತೆಳು ಪೊರೆಯಾಯಿತು. ಇದೇ ಮೊತ್ತಮೊದಲ ಪ್ಲಾಸ್ಟಿಕ್ ಎಂಬ ಕೀರ್ತಿಗೂ ಪಾತ್ರವಾಯಿತು.

ನಂತರ ಕೆಲವು ಸಣ್ಣ ಸಣ್ಣ ಅಣುಗಳು ರಾಸಾಯನಿಕ ಬಂಧಗಳಿಗೆ ಸಿಲುಕಿ ದೊಡ್ಡ ಅಣುಗಳನ್ನು ಮಾಡುವ ಪಾಲಿಮರ್ ತಂತ್ರಜ್ಞಾನ ರೂಪು ತಳೆಯಿತು. ಅಲ್ಲಿಂದೀಚೆಗೆ ಪ್ಲಾಸ್ಟಿಕ್‌ ಅವತಾರ ಹಂತಹಂತವಾಗಿ ನಡೆಯಿತು. ಬೇಕೆನಿಸಿದ ಆಕಾರದ ವಸ್ತುಗಳನ್ನು ಸಿದ್ಧಪಡಿಸಲು ಒದಗುವ ಮೂಲ ವಸ್ತುವಾಯಿತು.

ಮಾಹಿತಿಗೆ http://www.plastic2oil.com/site/ about-us-overview

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT