ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಲಾಗದ ಆಟಗಳು

Last Updated 21 ಜುಲೈ 2014, 19:30 IST
ಅಕ್ಷರ ಗಾತ್ರ

ಕನ್ನಡಿ, ಹಾಗೆ- ಹೀಗೆ, ಗೋವಿಂದ, ನಾಯಕ ಯಾರು?, ಆಕಾಶ- ಭೂಮಿ-ಪಾತಾಳ, ರಾಮ- ರಾವಣ, ಪಿರಮಿಡ್ ಕಟ್ಟು, ನಮ್ಮ ದೇಶ...
ಅರೆ ಇದೇನಿದು? ಇದ್ಯಾವುದರ ಹೆಸರು? ಎಂದು ಎಂಥವರೂ ಒಂದು ಕ್ಷಣ ಅಚ್ಚರಿಗೊಳಗಾಗುವುದು ಸಹಜ. ಗ್ರಾಮೀಣ ಪ್ರದೇಶಗಳ ಕೆಲವೇ ಕೆಲವು ಕಡೆ ಈಗಲೂ ಜೀವಂತಿಕೆ ಉಳಿಸಿಕೊಂಡು ಹಲವೆಡೆ ನಶಿಸಿ ಹೋಗಿರುವ ಇವೆಲ್ಲ ದೇಶಿ ಆಟಗಳ ಹೆಸರು.

ಕ್ರಿಕೆಟ್, ಫುಟ್‌ಬಾಲ್, ವಿಡಿಯೊ ಗೇಮ್ಸ್... ಇವೆಲ್ಲವುಗಳ ಮಧ್ಯೆ ಪಟ್ಟಣ, ಮಹಾನಗರಗಳಲ್ಲಿ ಮಾತ್ರವಲ್ಲದೇ ಗ್ರಾಮೀಣ ಪ್ರದೇಶಗಳಲ್ಲೂ ಮರೆಯಾಗುತ್ತಿರುವ ಈ ಎಲ್ಲ ಆಟಗಳಿಗೆ ಜೀವಂತಿಕೆ ತುಂಬುತ್ತಿರುವುದು ಬೆಂಗಳೂರಿನಲ್ಲಿ. ನೇಪಥ್ಯಕ್ಕೆ ಸರಿಯುತ್ತಿರುವ ಈ ದೇಶಿ ಆಟಗಳನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ ಇಲ್ಲಿಯ ‘ದೇಸೀ ಫೌಂಡೇಶನ್’ ಸಂಸ್ಥೆ. ಇದರ ರೂವಾರಿ ಅನಂತಕುಮಾರ್. ದೈಹಿಕ ಶಿಕ್ಷಕರಾಗಿರುವ ಇವರು ದೇಶಿ ಆಟದ ಸೊಗಡನ್ನು ಮಹಾನಗರಗಳ ಮಕ್ಕಳಿಗೂ ಉಣಬಡಿಸುವ ಕಾಯಕದಲ್ಲಿ ತೊಡಗಿದ್ದಾರೆ.

‘ಆಧುನಿಕತೆಯು ಭರಾಟೆಯಲ್ಲೂ ಗ್ರಾಮೀಣ ಆಟಗಳು ಕೊಡುವಷ್ಟು ಸಂತೋಷ, ನೆಮ್ಮದಿ, ಕ್ರಿಯಾಶೀಲತೆ, ಗೌರವ ಇನ್ಯಾವ ಆಟಗಳು ನೀಡಲಾರವು. ಅದರ ನಿಯಮ ತುಂಬಾ ಸರಳ. ಯಾರು ಬೇಕಾದರೂ ಆದಷ್ಟು ಬೇಗ ಅರ್ಥಮಾಡಿಕೊಳ್ಳುವ ಆಟಗಳಿವು.  ಇಂತಹ ಆಟದಿಂದ ದೇಹಕ್ಕೆ ವ್ಯಾಯಾಮ ಆಗುವುದು ಮಾತ್ರವಲ್ಲದೇ ಬುದ್ಧಿಯೂ ಚುರುಕುಗೊಳ್ಳುತ್ತದೆ. ಆದ್ದರಿಂದ ಇಲ್ಲಿಯ ಮಕ್ಕಳಿಗೂ ಇದರ ಅರಿವು ಆಗಲಿ ಎಂಬ ಉದ್ದೇಶ ನಮ್ಮ ಸಂಸ್ಥೆಯದ್ದು’ ಎನ್ನುತ್ತಾರೆ ಅನಂತಕುಮಾರ್.

ಉಚಿತ ತರಬೇತಿ
ದೇಸೀ ಫೌಂಡೇಶನ್ ಮಕ್ಕಳಿಗಾಗಿ ಉಚಿತವಾಗಿ ತರಬೇತಿ ನೀಡುತ್ತಿದೆ. ದೇಶಿ ಆಟಗಳನ್ನು ಪರಿಚಯಿಸುವ ಉದ್ದೇಶದಿಂದ ‘ಆಡೋಣ ಬಾ’ ಎಂಬ ಶೀರ್ಷಿಕೆಯ ಹೊತ್ತಿಗೆಯನ್ನು ಬಿಡುಗಡೆ ಮಾಡಲಾಗಿದೆ.  ಇದರಲ್ಲಿ ಉತ್ತಮ ಆಟಕ್ಕೆ 10 ಸೂತ್ರಗಳ ಬಗ್ಗೆ ವಿವರಣೆ ಇದೆ. ಅದಲ್ಲದೇ ಈ ಮೊದಲೇ ತಿಳಿಸಿರುವ ಗ್ರಾಮೀಣ ಆಟಗಳ ಜೊತೆ ಹಗ್ಗ ಜಗ್ಗಾಟ, ಒಂಟಿ ಕಾಲು ಮಂಗಣ್ಣ, ಕುರುಡು ರೈಲು, ಕಪ್ಪೆ ಜಿಗಿತ, ಕೋಕೋ ಇದರ ಜೊತೆಗೆ ನಿತ್ಯ ಪ್ರಾರ್ಥನೆ, ಶಾಂತಿ ಮಂತ್ರ ಮುಂತಾದ ಹಲವು ಆಟಗಳ ಮಾಹಿತಿ, ಅವು ಆಡುವ ಬಗೆಯನ್ನೂ ವಿವರಿಸಲಾಗಿದೆ.

ಬೃಹತ್ ದೇಶಿ ಕ್ರೀಡಾಕೂಟ
ಬರುವ ನವೆಂಬರ್ ಮತ್ತು ಡಿಸೆಂಬರ್ನಲ್ಲಿ ದೇಶಿ ಫೌಂಡೇಶನ್ ರಾಜ್ಯ ಮಟ್ಟದ ದೇಶಿ ಕ್ರೀಡಾಕೂಟ ಆಯೋಜಿಸಿದ್ದು, 20 ರಿಂದ 25 ಸಾವಿರ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಬೆಂಗಳೂರಿನಂತಹ ಮಹಾನಗರಗಳಲ್ಲಿ ಚಕ್ರವನ್ನು ಕಾಲಿಗೆ ಕಟ್ಟಿಕೊಂಡಂತೆ ಜೀವನ ಸಾಗಿಸುತ್ತಿದ್ದಾರೆ.  ಮಕ್ಕಳ ಸೃಜನಾತ್ಮಕ, ಕ್ರಿಯಾತ್ಮಕ, ರಚನಾತ್ಮಕ ಗುಣಮಟ್ಟದ ದೇಶಿ ಕ್ರೀಡೆಗಳನ್ನು ಮರೆತಿದ್ದೇವೆ.  ಇಂದಿನ ಟಿ.ವಿ, ಕಾರ್ಟೂನ್, ಮೊಬೈಲ್, ಲ್ಯಾಪ್‌ಟಾಪ್ ಆಟಗಳು ಅನಿವಾರ್ಯವಾಗಿದೆ. ನಾವು ದೇಶಿ ಕ್ರೀಡೆಗಳ ಪರಿಚಯಿಸುವುದರಲ್ಲಿ ವಿಫಲರಾಗಿದ್ದೇವೆ. ಇಂತಹ ಆಟಗಳ ಪರಿಚಯದ ಜೊತೆಗೆ ಸಂಸ್ಕೃತಿಯ ಪರಿಚಯವನ್ನೂ ಮಾಡುವ ಕೆಲಸ ನಾವು ಮಾಡುತ್ತಿದ್ದೇವೆ’ ಎನ್ನುತ್ತಾರೆ ಅನಂತಕುಮಾರ್.

ಎಲ್ಲೋ ಇರುವ ಆಟಗಳು ಮರೆತಿರುವ ನಮಗೆ ಬಾರದಿರುವ ಹಲವಾರು ಆಟಗಳ ಪರಿಚಯ ಮಾಡಿ ಕೊಟ್ಟರೆ ಇದು ಇಂದಿನ ಯುವ ಪೀಳಿಗೆಯ ಮೇಲೆ ಅಪಾರ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ. 

ಸಾಧನೆ
ದೇಶಿ ಫೌಂಡೇಶನ್ ಬೆಂಗಳೂರಿನ ರಾಮಚಂದ್ರಪುರ ದಲ್ಲಿ ಸ್ಥಾಪನೆಗೊಂಡು ಸುಮಾರು 500 ಶಾಲೆಗಳಿಗೆ ಹೋಗಿ ದೇಶಿ ಆಟಗಳ ಪರಿಚಯಿಸುವ ಕೆಲಸ ಮಾಡುತ್ತಿದೆ. ಈಗಾಗಲೇ ಕೋಲಾರ, ಬೆಂಗಳೂರು, ದಾವಣಗೆರೆ, ಹೊನ್ನಾವರ, ಹೊಸಪೇಟೆಯ ಮಕ್ಕಳಿಗೆ ಈ ಆಟಗಳನ್ನು ಪರಿಚಯಿಸಿದೆ. 

ಇಂತಹ ಆಟಗಳ ಪರಿಚಯ ಮಾಡಿಕೊಟ್ಟಿದ್ದು ಇಂದಿನ ಪೀಳಿಗೆಗೆ ವರದಾನವಿದ್ದಂತೆ. ನಮ್ಮ ನಾಡು ಸಂಸ್ಕೃತಿಯನ್ನು ಅರಿತು ಮುಂದಿನ ಪೀಳಿಗೆಗೆ ಅರಿವಾಗಬೇಕಾಗಿದ್ದರೆ ಇಂತಹ ಸಂಸ್ಕೃತಿಯನ್ನು ಬಿಂಬಿಸುವ ಆಟಗಳ ಪರಿಚಯ ಮಾಡಿಕೊಳ್ಳಲೇಬೇಕು. ಸಂಪರ್ಕಕ್ಕೆ: 7829402535.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT