ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಿಕ್‌ ಶತಕ:‍ಪಾಕ್‌ ಜಯಭೇರಿ

ಕ್ರಿಕೆಟ್‌: ಚಿಗುಂಬುರ ಶತಕಕ್ಕೆ ಲಭಿಸದ ಫಲ
Last Updated 27 ಮೇ 2015, 19:30 IST
ಅಕ್ಷರ ಗಾತ್ರ

ಲಾಹೋರ್‌ (ಎಎಫ್‌ಪಿ): ಶೋಯೆಬ್‌ ಮಲಿಕ್ (112; 76ಎ, 12ಬೌಂ, 2ಸಿ)  ದಾಖಲಿಸಿದ ಸೊಗಸಾದ ಶತಕದ ಬಲದಿಂದ ಪಾಕಿಸ್ತಾನ ತಂಡ ಜಿಂಬಾಬ್ವೆ ಎದುರು ಆರಂಭವಾದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 41 ರನ್‌ಗಳ ಗೆಲುವು ಸಾಧಿಸಿದೆ.
ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1–0ರ ಮುನ್ನಡೆ ಸಾಧಿಸಿದೆ.

ಗಡಾಫಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟ್‌ ಮಾಡಿ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 375ರನ್ ಗಳಿಸಿತು. ಕಠಿಣ ಗುರಿ ಬೆನ್ನಟ್ಟಿದ ಜಿಂಬಾಬ್ವೆ 5 ವಿಕೆಟ್‌ ಕಳೆದುಕೊಂಡು 334ರನ್‌ ಪೇರಿಸಿತು.

ಏಕದಿನ ಮಾದರಿಯಲ್ಲಿ ಜಿಂಬಾಬ್ವೆ ಎದುರು ಪಾಕಿಸ್ತಾನ ದಾಖಲಿಸಿದ ಗರಿಷ್ಠ ಮೊತ್ತ ಇದಾಗಿದೆ. 2007ರಲ್ಲಿ ಜಮೈಕಾದಲ್ಲಿ ನಡೆದಿದ್ದ ಪಂದ್ಯದಲ್ಲಿ 349ರನ್‌ ಗಳಿಸಿದ್ದು ಇದುವರೆಗಿನ ಉತ್ತಮ  ಮೊತ್ತ ಎನಿಸಿತ್ತು.

ದಿಟ್ಟ ಆರಂಭ: ಬ್ಯಾಟಿಂಗ್‌ ಆರಂಭಿಸಿದ ಪಾಕಿಸ್ತಾನ ತಂಡಕ್ಕೆ ಅಮೋಘ ಆರಂಭ ಲಭಿಸಿತು. ಮೊಹಮ್ಮದ್‌ ಹಫೀಜ್‌ (86; 83ಎ, 8ಬೌಂ, 4ಸಿ) ಮತ್ತು ನಾಯಕ ಅಜರ್‌ ಅಲಿ (79; 76ಎ, 9ಬೌಂ, 2ಸಿ) ಮೊದಲ ವಿಕೆಟ್‌ಗೆ 26 ಓವರ್‌ಗಳಲ್ಲಿ  170 ರನ್‌ ಕಲೆಹಾಕಿ ಭದ್ರ ಅಡಿಪಾಯ ಹಾಕಿಕೊಟ್ಟರು.

ಮಿಂಚಿನ ಇನಿಂಗ್ಸ್‌: ಶೋಯೆಬ್‌ ಮಲಿಕ್‌ ಮತ್ತು ಹ್ಯಾರಿಸ್‌ ಸೊಹೇಲ್‌ (ಔಟಾಗದೆ 89; 66ಎ, 6ಬೌಂ, 2ಸಿ) ಜಿಂಬಾಬ್ವೆ ತಂಡ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸದಂತೆ ನೋಡಿಕೊಂಡರು.

ಆರಂಭದಿಂದಲೇ ಬಿರುಸಿನ ಆಟಕ್ಕೆ ಒತ್ತುಕೊಟ್ಟ ಮಲಿಕ್‌ 42 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.  ಬಳಿಕ ಅವರು ಇನ್ನಷ್ಟು ಆಕ್ರಮಣಕಾರಿಯಾದರು. 

ಪ್ರಬಲ ಪೈಪೋಟಿ: ಕಠಿಣ ಗುರಿ ಎದುರು ಜಿಂಬಾಬ್ವೆ ಉತ್ತಮ ಆರಂಭ ವನ್ನೇ ಪಡೆಯಿತು. ವುಸಿ ಸಿಬಾಂಡ (23) ಮತ್ತು ಸಿಕಂದರ ರಾಜ (36) ಮೊದಲ ವಿಕೆಟ್‌ಗೆ 56ರನ್‌ ಗಳಿಸಿದರು. 

ಬಳಿಕ ಹ್ಯಾಮಿಲ್ಟನ್‌ ಮಸಕಜ (73; 73ಎ, 4ಬೌಂ, 2ಸಿ) ಹಾಗೂ ನಾಯಕ ಚಿಗುಂಬುರ (117; 95ಎ, 10ಬೌಂ, 4ಸಿ) ಆಕರ್ಷಕ ಆಟ ಆಡಿ ಜಿಂಬಾಬ್ವೆ ಗೆಲುವಿನ ಆಸೆಗೆ ಜೀವ ತುಂಬಿದ್ದರು.  ಇವರಿಬ್ಬರು ಔಟಾಗುತ್ತಿದ್ದಂತೆ ಈ ಆಸೆ ಕಮರಿಹೋಯಿತು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ: 50 ಓವರ್‌ಗಳಲ್ಲಿ 3 ವಿಕೆಟ್‌ಗೆ 375 (ಮೊಹಮ್ಮದ್‌ ಹಫೀಜ್‌ 86, ಅಜರ್‌ ಅಲಿ 79, ಶೋಯೆಬ್‌ ಮಲಿಕ್‌ 112, ಹ್ಯಾರಿಸ್‌ ಸೊಹೇಲ್‌ 89; ಪ್ರಾಸ್ಪರ್‌ ಉತ್ಸೇಯ 2ಕ್ಕೆ63).  ಜಿಂಬಾಬ್ವೆ: 50 ಓವರ್‌ಗಳಲ್ಲಿ 5 ವಿಕೆಟ್‌ಗೆ 334 (ಸಿಕಂದರ ರಾಜ 36, ಹ್ಯಾಮಿಲ್ಟನ್‌ ಮಸಕಜ 73, ಎಲ್ಟನ್‌ ಚಿಗುಂಬುರ 117, ಸೀನ್‌ ವಿಲಿಯಮ್ಸ್‌ 36; ವಹಾಬ್‌ ರಿಯಾಜ್‌ 3ಕ್ಕೆ47, ಶೋಯೆಬ್‌ ಮಲಿಕ್‌ 1ಕ್ಕೆ33).

ಫಲಿತಾಂಶ: ಪಾಕಿಸ್ತಾನಕ್ಕೆ 41ರನ್‌ ಗೆಲುವು ಹಾಗೂ ಮೂರು ಪಂದ್ಯಗಳ ಸರಣಿಯಲ್ಲಿ 1–0ರಲ್ಲಿ ಮುನ್ನಡೆ.
ಪಂದ್ಯ ಶ್ರೇಷ್ಠ: ಶೋಯೆಬ್‌ ಮಲಿಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT