ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ನಡುಗಿತು ಬಿಟೌನ್

ಪಂಚರಂಗಿ
Last Updated 28 ಜೂನ್ 2015, 19:30 IST
ಅಕ್ಷರ ಗಾತ್ರ

ತುಂತುರು ಹನಿಯುತ್ತಾ ಮಣ್ಣಿನ ಘಮವನ್ನು ಎಲ್ಲೆಡೆ ಪಸರಿಸಿ ಇಳೆಗೆ ತಂಪುಣಿಸುವ ಮಳೆ ಎಂದರೆ ಎಲ್ಲರಿಗೂ ಇಷ್ಟವೇ. ಆದರೆ ಅತಿಯಾದರೆ ಯಾವುದೂ ಹಿತವಲ್ಲ. ಮಳೆಗಾಲಕ್ಕೂ–ಮುಂಬೈಗೂ ಅಂಥದ್ದೇ ನಂಟು. ಇಲ್ಲಿ ಮಳೆಗಾಲ ಎನ್ನುವುದು ಖುಷಿ ತರುವುದಕ್ಕಿಂತ ನಷ್ಟ, ಭಯ, ಆತಂಕ ಸೃಷ್ಟಿಸಿ ಜನಜೀವನವನ್ನು ಅಸ್ತವ್ಯಸ್ತ ಮಾಡುವುದೇ ಹೆಚ್ಚು.

ಮಳೆ ಆರಂಭವಾಯಿತು ಎನ್ನುವ ಖುಷಿಗೆ ಮುಂಚೆಯೇ ಹನಿಗಳ ಲೀಲೆ ಬಿಟೌನ್‌ ಮಂದಿಗೆ ಬೇಸರ ತರಿಸಿದಂತಿದೆ. ಮಳೆ, ಮಳೆಯಂತಿದ್ದರೆ ಚೆಂದ, ಮಳೆ ಮಹಾಕಾಳಿಯ ರೂಪ ತಾಳಿದರೆ ಕಷ್ಟ ಎನ್ನುವುದು ಅವರ ಅಸಮಾಧಾನ. ಕೆಲ ದಿನಗಳಿಂದ ಮುಂಬೈಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಚಿತ್ರೀಕರಣ ಹಾಗೂ ದೈನಂದಿನ ಕೆಲಸಗಳಿಗೆ ತೊಡಕಾಗುತ್ತಿದೆ ಎಂದು ಎಲ್ಲರೂ ಗೊಣಗಿಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ ಬಾಲಿವುಡ್‌ ಮಂದಿಯ ಸಿಟ್ಟು, ಅಸಮಾಧಾನ ಮುಂಬೈನ ವ್ಯವಸ್ಥೆಯ ಮೇಲಾದರೂ ಟ್ವಿಟರ್‌ನಲ್ಲಿ ಮಾತ್ರ ಮಳೆರಾಯನಿಗೇ ಬೈಗುಳಗಳ ಸುರಿಮಳೆ.

ವಾಣಿಜ್ಯೋದ್ಯಮದಲ್ಲೇ ದೊಡ್ಡ ಹೆಸರು ಮಾಡಿರುವ ಮುಂಬೈನಲ್ಲಿ ಸುರಿದ ಮಳೆಗೆ ಜನರ ಜೀವನ ಅಸ್ತವ್ಯಸ್ತವಾಗಿದೆಯಂತೆ. ‘ಬೆಳಿಗ್ಗೆ 5.45ಕ್ಕೆ ನಾನೆದ್ದ ದಾಖಲೆಯೇ ಇಲ್ಲ. ಅದೂ ಅಲ್ಲದೆ ನೀರು ತುಂಬಿದ ರಸ್ತೆಯಲ್ಲಿ ವಾಹನ ಚಲಾಯಿಸುವುದು ಬಹುದೊಡ್ಡ ಕಿರಿಕಿರಿ’ ಎಂದು ನಟಿ ಸೋನಾಕ್ಷಿ ಟ್ವೀಟ್‌ ಮಾಡಿದ್ದಾರೆ.

‘ಈ ಮಳೆಯಿಂದಾಗಿ ಸಿನಿಮಾ ಚಿತ್ರೀಕರಣ ನಡೆಯುವ ಸ್ಥಳಕ್ಕೆ ಹೋಗುವುದೇ ದೊಡ್ಡ ಸಾಹಸವಾಗಿದೆ. ಮರಳಿ ಬರುವಾಗ ಮೋಟಾರ್‌ ಬೋಟ್‌ನಲ್ಲಿ ಬರುವಂತಾಗದಿದ್ದರೆ ಸಾಕು’ ಎಂದು ಗೊಣಗಿದ್ದಾರೆ ನಟ ಕುನಾಲ್‌ ಖೇಮು. ‘ಮಳೆ ಎಂದರೆ ನನಗೆ ತುಂಬಾ ಇಷ್ಟ. ಆದರೆ ಈ ಭಾರಿ ಮಳೆ ಹಾಗೂ ಟ್ರಾಫಿಕ್‌ ಸುರಿಮಳೆ ಬೇಸರ ಎನಿಸುತ್ತಿದೆ’ ಎಂದಿದ್ದಾರೆ ಜೂಹಿ ಚಾವ್ಲಾ.

ಮಾದಕ ನಟಿ ಬಿಪಾಶಾ ಬಸು ಕೂಡ ಮಳೆಯ ವಿಡಿಯೊ ಮಾಡಿ ಅದನ್ನು ಅಪ್‌ಲೋಡ್‌ ಮಾಡಿದ್ದಲ್ಲದೆ, ‘ಮೈ ಪರಿಶಾನ್‌ ಮೈ ಪರಿಶಾನ್‌’ ಹಾಡು ಹಿನ್ನೆಲೆಯಲ್ಲಿ ಕೇಳುತ್ತಿತ್ತು. ನಿಧಾನವಾಗಿ ಆ ಸ್ಥಳವೆಲ್ಲ ವೆನಿಸ್‌ ಆದಹಾಗೆ ಭಾಸವಾಗುತ್ತಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಹಾಗೆಯೇ ಫರ್ಹಾನ್‌ ಅಖ್ತರ್‌, ಅದಿತಿ ರಾವ್‌ ಹೈದರಿ, ರಣವೀರ್‌ ಶೆಣೈ ಮುಂತಾದವರು ಮಳೆಗಾಲದಲ್ಲಿ ಮುಂಬೈ ವ್ಯವಸ್ಥೆಯ ಬಗ್ಗೆ ಹೀಗಳೆದಿದ್ದಾರೆ. ‘ಹೆಚ್ಚಾಗಿ ಮುಂಬೈ ಜನತೆ ಸಂದಾಯ ಮಾಡಿದ ತೆರಿಗೆ ಹಣವನ್ನೆಲ್ಲಾ ಚರಂಡಿ ವ್ಯವಸ್ಥೆ ಮುಚ್ಚಲು ಬಳಸಿಕೊಂಡಿರಬೇಕು. ಪ್ರತಿ ವರ್ಷವೂ ಇದೇ ಕಥೆ’ ಎಂದು ಫರ್ಹಾನ್‌ ಕಿಡಿ ಕಾರಿದ್ದರೆ, ಅದಿತಿ ‘ಮಳೆ ಹೀಗೆಯೇ ಸುರಿಯುತ್ತಿದ್ದು, ವ್ಯವಸ್ಥೆ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಮುಂಬೈ ಸುತ್ತಲು ಬೋಟ್‌ ಅನ್ನು ಅವಲಂಬಿಸಬೇಕಾದೀತು’ ಎಂದಿದ್ದಾರೆ.

‘ಕಳೆದ 25 ವರ್ಷಗಳಿಂದ ಮುಂಬೈನಲ್ಲಿ ವಾಸಿಸುತ್ತಿದ್ದೇನೆ. ಅಂದಿನಿಂದ ಇಂದಿಗೆ ಮಳೆ ಬಂದಾಗಲೆಲ್ಲಾ ಇದೇ ಸಮಸ್ಯೆ. ವ್ಯವಸ್ಥೆ ಇಂದಿಗೂ ಸರಿಹೋಗಿಲ್ಲ. ಪ್ರತಿ ಬಾರಿಯೂ ಮಳೆ ಸುರಿಯುತ್ತದೆ. ಮುಂಬೈ ತುಂಬ ನೀರು ತುಂಬುತ್ತದೆ. ರಾಜಕಾರಣಿಗಳು ಗಂಭೀರವಾಗಿ ಸಮಸ್ಯೆಯನ್ನು ಅವಲೋಕಿಸುತ್ತಾರೆ. ಆದರೆ ಸಮಸ್ಯೆ ಮಾತ್ರ ಹಾಗೆಯೇ ಇದೆ’ ಎಂದಿದ್ದಾರೆ ಅನುಭವ ಸಿನ್ಹಾ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT