ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಅಬ್ಬರ: ಆರು ಸಾವು

ರಾಜಧಾನಿಯಲ್ಲಿ ಧರೆಗುರುಳಿದ 25ಕ್ಕೂ ಅಧಿಕ ಮರ, 7 ವಿದ್ಯುತ್ ಕಂಬ
Last Updated 29 ಮೇ 2015, 19:47 IST
ಅಕ್ಷರ ಗಾತ್ರ

ಬೆಂಗಳೂರು:  ರಾಜಧಾನಿ ಸೇರಿದಂತೆ ರಾಜ್ಯದ ಹಲವೆಡೆ ಶುಕ್ರವಾರ ಬಿದ್ದ ಭಾರಿ ಮಳೆಗೆ ಆರು ಜನರು ಬಲಿಯಾಗಿದ್ದು, ಅಪಾರ ಹಾನಿ ಸಂಭವಿಸಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ, ಧಾರವಾಡ, ಬಾಗಲಕೋಟೆ, ಉತ್ತರಕನ್ನಡ, ಬೆಳಗಾವಿ, ವಿಜಯಪುರ, ತುಮಕೂರು, ಕೋಲಾರ, ಕಲಬುರ್ಗಿ, ಕೊಪ್ಪಳ, ರಾಯಚೂರು, ಚಿತ್ರದುರ್ಗ, ಹಾಸನ ಸೇರಿದಂತೆ  ವಿವಿಧ   ಜಿಲ್ಲೆಗಳಲ್ಲಿ ಸಿಡಿಲಿಗೆ ಇಬ್ಬರು ಹಾಗೂ ಮರ ಉರುಳಿ ನಾಲ್ವರು ಮೃತಪಟ್ಟಿದ್ದಾರೆ.

ಭಾರಿ ಗಾಳಿ ಸಹಿತ ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆಗೆ ರಾಜಧಾನಿ ತತ್ತರಿಸಿದೆ. ಹೊಸೂರು ರಸ್ತೆಯ ಆನೆಪಾಳ್ಯ ಬಸ್‌ ತಂಗುದಾಣದ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದ್ದರಿಂದ ವ್ಯಕ್ತಿಯೊಬ್ಬರು ಮೃತಪಟ್ಟು, ಐದು ಮಂದಿ ಗಾಯಗೊಂಡಿದ್ದಾರೆ.
ಮೃತರ ಗುರುತು ಪತ್ತೆಯಾಗಿಲ್ಲ.  ಕೂಡ್ಲುಗೇಟಿನ ಪಕೀರಪ್ಪ (45), ಎಲೆಕ್ಟ್ರಾನಿಕ್ ಸಿಟಿಯ ಪ್ರಕಾಶ್ ಡಿಸೋಜಾ(29), ಬೇಗೂರಿನ ಪ್ರವೀಣ್ ಕುಮಾರ್(35), ಹೊಸ ತಿಪ್ಪಸಂದ್ರದ ಶರತ್ (27) ಹಾಗೂ ಕೋರಮಂಗಲದ ಶೀಲಾ ಜಾಯ್(33) ಎಂಬುವರು ಗಾಯಗೊಂಡಿದ್ದು, ಸೇಂಟ್ ಜಾನ್ಸ್‌ ಮತ್ತು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಳೆಯಿಂದ ರಕ್ಷಣೆ ಪಡೆಯಲು ಕೆಲ ಸವಾರರು, ರಸ್ತೆ ಬದಿ ಬೈಕ್‌ಗಳನ್ನು ನಿಲ್ಲಿಸಿ ಆನೆಪಾಳ್ಯ ಬಸ್‌ ತಂಗುದಾಣದಲ್ಲಿ ಆಶ್ರಯ ಪಡೆದಿದ್ದರು. ಈ ವೇಳೆ ಡಿಫೆನ್ಸ್‌ ಕಾಲೋನಿ ತಡೆಗೋಡೆ ಒಳಗಿದ್ದ ಹಳೆಯ ಮರವು ತಂಗುದಾಣದ ಮೇಲೆ ಬಿದ್ದಿತು. ಕೂಡಲೇ ಸ್ಥಳೀಯರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ತಂಗುದಾಣದ ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಿಸಲು ಪ್ರಾರಂಭಿಸಿದರು.

ಘಟನೆಯಲ್ಲಿ ನಾಲ್ಕೈದು ಬೈಕ್‌ಗಳು ಜಖಂಗೊಂಡವು. ಏಳೆಂಟು ನಿಮಿಷಗಳಲ್ಲೇ ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಬೆಸ್ಕಾಂ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗಳಿಗೆ ಕಳುಹಿಸಿದರು. ಆದರೆ, ಮರದ ತುಂಡು ತಲೆ ಮೇಲೆ ಬಿದ್ದಿದ್ದರಿಂದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು.

ಘಟನೆಯಿಂದಾಗಿ ಬ್ರಿಗೇಡ್ ರಸ್ತೆಯಿಂದ ಕೋರಮಂಗಲದವರೆಗೆ ಭಾರಿ ಸಂಚಾರ ದಟ್ಟಣೆ ಉಂಟಾಗಿ, ಸವಾರರು ಗಂಟೆಗಟ್ಟಲೆ ಕಾಯಬೇಕಾಯಿತು.

ಧರೆಗುರುಳಿದ ಮರ, ಕಂಬಗಳು: ಮಳೆಯಿಂದಾಗಿ 20ಕ್ಕೂ ಹೆಚ್ಚು ಮರಗಳು ಮತ್ತು  7 ವಿದ್ಯುತ್ ಕಂಬಗಳು ಧರೆಗುರುಳಿದವು. ವಿಜಯನಗರ, ಪ್ರಶಾಂತ ನಗರ, ಡೈರಿ ವೃತ್ತ, ಅರಮನೆ ರಸ್ತೆ, ವಸಂತನಗರದ ಬಿಬಿಎಂಪಿ ವಸತಿ ಸಮುಚ್ಚಯ, ಜೆ.ಪಿ. ನಗರ, ಜಯನಗರ 9ನೇ ಬ್ಲಾಕ್, ಇಂದಿರಾನಗರ 80 ಅಡಿ ರಸ್ತೆ ಹಾಗೂ ದಾಸರಹಳ್ಳಿಯಲ್ಲಿ ಮರಗಳು ನೆಲಕ್ಕುರುಳಿವೆ. ರೆಸಿಡೆನ್ಸಿ ರಸ್ತೆಯ ಸೇಂಟ್ ಪ್ಯಾಟ್ರಿಕ್ ಚರ್ಚ್‌, ಕೆ.ಜಿ. ಹಳ್ಳಿ, ಪ್ರೆಸ್‌ಕ್ಲಬ್, ಶೇಷಾದ್ರಿಪುರದ ಕಿನೊ ಚಿತ್ರಮಂದಿರ, ಹಲಸೂರಿನ ಗುಪ್ತಾ ಬಡಾವಣೆ ಎಚ್‌ಎಂಟಿ ವೃತ್ತ, ರಾಜಾಜಿನಗರ 1ನೇ ಬ್ಲಾಕ್, ಗಂಗಾನಗರ, ಕನ್ನಿಂಗ್ ಹ್ಯಾಂ ರಸ್ತೆ,  ಮ್ಯೂಸಿಯಂ ರಸ್ತೆಯಲ್ಲಿ ಮರಗಳು ಬಿದ್ದಿವೆ ಎಂದು ಬಿಬಿಎಂಪಿ ನಿಯಂತ್ರಣ ಕೊಠಡಿ ಸಿಬ್ಬಂದಿ ತಿಳಿಸಿದ್ದಾರೆ. ಪ್ರೆಸ್‌ಕ್ಲಬ್‌ ಆವರಣದ ವಾಹನ ನಿಲುಗಡೆ ಪ್ರದೇಶದಲ್ಲಿ ನಿಂತಿದ್ದ ಎರಡು ಕಾರುಗಳ ಮೇಲೆ ಮರ ಮುರಿದು ಬಿದ್ದಿತು.

ವಿದ್ಯುತ್ ವ್ಯತ್ಯಯ: ಮಳೆಯಿಂದಾಗಿ ದಕ್ಷಿಣ ಭಾಗದಲ್ಲಿ ಒಂದು, ಪೂರ್ವದಲ್ಲಿ ಎರಡು ಹಾಗೂ ಉತ್ತರ ಭಾಗದಲ್ಲಿ ನಾಲ್ಕು ವಿದ್ಯುತ್‌ ಕಂಬಗಳು ಮುರಿದು ಬಿದ್ದಿದ್ದು, ಇದರಿಂದಾಗಿ ಈ ಭಾಗದ ಕೆಲ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಿತ್ತು. ಸಂಚಾರ ದಟ್ಟಣೆ: ಮೆಜೆಸ್ಟಿಕ್, ರೆಸಿಡೆನ್ಸಿ ರಸ್ತೆ, ಬ್ರಿಗ್ರೇಡ್ ರಸ್ತೆ, ಹೊಸೂರು ರಸ್ತೆ, ಸಿಲ್ಕ್‌ ಬೋರ್ಡ್‌,  ಜಾಲಹಳ್ಳಿ ಕ್ರಾಸ್‌, ಕನಕಪುರ ರಸ್ತೆ, ಎಂ.ಜಿ. ರಸ್ತೆ,  ಕಾರ್ಪೋರೇಷನ್, ಜೆ.ಸಿ. ರಸ್ತೆ, ಪುರಭವನ, ಶಾಂತಿನಗರ, ವಿಲ್ಸನ್‌ಗಾರ್ಡನ್, ಕೆ.ಆರ್‌. ಮಾರ್ಕೆಟ್, ಹಳೆ ಮದ್ರಾಸ್ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಮಳೆಯಿಂದಾಗಿ ಸಂಚಾರ ದಟ್ಟಣೆ ಕಂಡುಬಂತು.

ರಸ್ತೆ ಮೇಲೆ ಹರಿದ ನೀರು: ಮಳೆಯಿಂದಾಗಿ ಕೆಲ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದರಿಂದ, ಸಾರ್ವಜನಿಕರು ಪರಿತಪಿಸಬೇಕಾಯಿತು.  ಅಲ್ಲದೆ, ಚರಂಡಿ ಹಾಗೂ ಮ್ಯಾನ್‌ಹೋಲ್‌ಗಳು ತುಂಬಿ ಕೊಳಚೆ ನೀರು ರಸ್ತೆ ಮೇಲೆ ಹರಿಯಿತು. ಇದರಿಂದಾಗಿ ಚಾಲಕರು ತೀವ್ರ ತೊಂದರೆ ಅನುಭವಿಸಿದರು.

ಲಕ್ಷ ಪರಿಹಾರ
ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ನಗರ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು, ಮೃತರ ಕುಟುಂಬಕ್ಕೆ  1 ಲಕ್ಷ ಪರಿಹಾರ ಘೋಷಿಸಿದರು.

18 ಮಿ.ಮೀ. ಮಳೆ
ನಗರದ ಒಳ ಭಾಗದಲ್ಲಿ 18 ಮಿ.ಮೀ ಮತ್ತು ಎಚ್‌ಎಎಲ್‌ ವಿಮಾನ ನಿಲ್ದಾಣದ ಸುತ್ತಮುತ್ತ 13.2 ಮಿ.ಮೀ.  ಮಳೆ ಸುರಿದಿದೆ. ಯಲಹಂಕದಲ್ಲಿ 18 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT