ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೋಡೋಣು ಬಾರಾ...

ಮಳೆ ಕವಿತೆಯ ಜೊತೆ ಎರಡು ದಿನ
Last Updated 16 ಜುಲೈ 2016, 19:30 IST
ಅಕ್ಷರ ಗಾತ್ರ

ಮಳೆಗಾಲದಲ್ಲಿ ಜಲಪಾತಗಳ ಭೋರ್ಗರೆತ – ನೊರೆನೊರೆ ನೀರ ನರ್ತನದ ಸೊಬಗು, ಈಗಷ್ಟೇ ಮಿಂದು ಬಂದು ಅಂಗಳಕ್ಕೆ ನಿಂತ ತರುಣಿಯಂಥ ಸಮೃದ್ಧ  ಪ್ರಕೃತಿಯನ್ನು ಮನದಣಿಯೇ ಆಸ್ವಾದಿಸಬಯಸುವವರು ಉತ್ತರಕನ್ನಡಕ್ಕೆ ಹೊರಡಲು ಇದು ಸಕಾಲ.

ಹೇಳಿಕೇಳಿ ಉತ್ತರ ಕನ್ನಡವೆಂಬುದು ಜಲಪಾತಗಳ ಜಿಲ್ಲೆ ಎಂದೇ ಪ್ರಸಿದ್ಧ. ನಡುಮಳೆಗಾಲದಲ್ಲಿ ಇಲ್ಲಿ ಲಗ್ಗೆಯಿಟ್ಟರಂತೂ ಕಡಿದಾದ ದಾರಿ ಬದಿಗಳಲ್ಲಿ, ಎತ್ತರದ ಗುಡ್ಡಗಳ ಒಡಲಲ್ಲಿ ಎಲ್ಲಿ ನೋಡಿದರಲ್ಲಿ ಅರೆಕಾಲಿಕ ಜಲಪಾತಗಳು ಹುಟ್ಟಿಕೊಂಡಿರುತ್ತವೆ.

ಒಂದು ವಾರಾಂತ್ಯ – ಅಂದರೆ ಎರಡು ದಿನದ ಪ್ರವಾಸ ನಿಮ್ಮದಾಗಿದ್ದರೆ ನೀವು ಉತ್ತರ ಕನ್ನಡದ ಯಲ್ಲಾಪುರವನ್ನು ನಿಮ್ಮ ವಿಹಾರದ ವಸತಿ ಕೇಂದ್ರವಾಗಿರಿಸಿಕೊಳ್ಳುವುದು ಸೂಕ್ತ.

ಯಲ್ಲಾಪುರ ದೊಡ್ಡ ಪಟ್ಟಣವೇನೂ ಅಲ್ಲ. ಐಷಾರಾಮಿ ಹೋಟೆಲ್‌ಗಳು, ಹೋಂ ಸ್ಟೇಗಳು, ರೆಸ್ಟೊರೆಂಟ್‌ಗಳು ಇಲ್ಲಿ ಎಡತಾಕುವುದಿಲ್ಲ. ಆದರೆ ಸರಳ ವಸತಿಗೆ ಯಾವುದೇ ಕುಂದಿಲ್ಲದ ಲಾಡ್ಜ್‌ಗಳು ಇವೆ.

ಯಲ್ಲಾಪುರವನ್ನು ವಸತಿ ಕೇಂದ್ರವಾಗಿರಿಸಿಕೊಂಡು ಯಾವ್ಯಾವ ಸ್ಥಳಗಳಿಗೆ ಭೇಟಿ ನೀಡಬಹುದು ಎಂದು ನೋಡೋಣ.
ಒಂದು ಶನಿವಾರದ ಬೆಳಿಗ್ಗೆ ಆರು ಗಂಟೆಗೆ ನೀವು ಯಲ್ಲಾಪುರದಲ್ಲಿದ್ದೀರಿ ಎಂದುಕೊಳ್ಳಿ. ಮೋಡದ ಮರೆಯಿಂದಲೇ ಬಿರಿದುಕೊಳ್ಳುತ್ತಿರುವ ರವಿಯ ಮಂದಬೆಳಕಿಗೆ ಸಣ್ಣಗೆ ಹನಿಯುತ್ತಿರುವ ಸೋನೆಮಳೆಯಲ್ಲಿಯೇ ಪೇಟೆ ದೈನಂದಿನ ಚಟುವಟಿಕೆಗಳಿಗೆ ಅಣಿಯಾಗುತ್ತಿರುವ ಸಮಯವದು.

ಯಾವುದೋ ಅಂಗಡಿಯ ಮುಂದೆ ದಿನಪತ್ರಿಕೆಗಳನ್ನು ಲೆಕ್ಕಹಾಕಿ ಮಡಿಚಿ ಮಳೆಯಲ್ಲಿ ನೆನೆಯದಂತೆ ಪ್ಲಾಸ್ಟಿಕ್‌ ಕವರ್‌ನಲ್ಲಿ ಕಟ್ಟಿ ಸೈಕಲ್‌ ಕ್ಯಾರಿಯರ್‌ ಏರಿಸುತ್ತಿರುವ ಹುಡುಗರು, ರಸ್ತೆ ಪಕ್ಕದ ಕಾಂಪೌಂಡಿನೊಳಗೆ ಕೊಡೆಹಿಡಿದು, ಚಳಿಗೆ ಸಣ್ಣಗೇ ನಡುಗುತ್ತಲೇ ಗಿಡದ ಕೊಂಬೆ ಬಗ್ಗಿಸಿ ದಾಸವಾಳ, ನಂಜಾಟಲೆ ಹೂಗಳನ್ನು ಕಿತ್ತು ಚಬ್ಬೆಗೆ ತುಂಬುತ್ತಿರುವ ಬರಿಮೈ ಹಿರಿಯರೂ ನಿಮ್ಮ ಕಣ್ಣಿಗೆ ಬೀಳಬಹುದು. ಅವೆಲ್ಲ ಯಲ್ಲಾಪುರದ ಬೆಳಗಿನ ಭಾಗ.

ಹೆಚ್ಚು ಸಮಯ ವ್ಯಯಮಾಡುವುದು ಬೇಡ. ನೀವು ಆಯ್ದುಕೊಂಡು ಮುಂಗಡವಾಗಿ ಕಾಯ್ದಿರಿಸಿದ ಹೋಟೆಲ್‌ ರೂಮಿಗೆ ಹೋಗಿ ಬೆಳಗಿನ ದಿನಚರಿಗಳನ್ನು ಮುಗಿಸಿ ತಿಂಡಿ ತಿಂದು ತಯಾರಾಗಿ. ಆಗಲೇ ಎಂಟರ ಗಡಿ ಮುಟ್ಟಿರುತ್ತದೆ. ಈಗ ನಿಮ್ಮ ಮುಂದೆ ಎರಡು ದಿಕ್ಕುಗಳ ಆಯ್ಕೆಯಿದೆ. ಒಂದು ಯಲ್ಲಾಪುರದಿಂದ ಹೊರವಲಯದಲ್ಲಿರುವ ಕೆಲವು ತಾಣಗಳನ್ನು ನೋಡುವುದು. ಇನ್ನೊಂದು ಯಲ್ಲಾಪುರದ ಸಮೀಪದಲ್ಲಿಯೇ ಇರುವ ತಾಣಗಳಿಗೆ ಭೇಟಿ ನೀಡುವುದು.

ಒಂದನೇ ಆಯ್ಕೆಯ ಮೊದಲ ತಾಣ ಯಾಣದ ಸಮೀಪವಿರುವ ವಿಭೂತಿ ಜಲಪಾತ. ಯಲ್ಲಾಪುರದಿಂದ 60 ಕಿ.ಮೀ ದೂರದಲ್ಲಿರುವ ವಿಭೂತಿ ಫಾಲ್ಸ್‌ಗೆ ಹೋಗಲು ‘ಎನ್‌ಎಚ್‌ 52’ರಲ್ಲಿ ಕಾರವಾರದತ್ತ ಸಾಗಬೇಕು. ರಾಷ್ಟ್ರೀಯ ಹೆದ್ದಾರಿಯಾದ್ದರಿಂದ ರಸ್ತೆಯ ಪರಿಸ್ಥಿತಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಆದರೆ ಅರಬೈಲ್‌ ಘಟ್ಟದ ಕಡಿದಾದ ತಿರುವುಗಳಲ್ಲಿ ಮಾತ್ರ ಎಚ್ಚರಿಕೆಯಿಂದಲೇ ಸಾಗಬೇಕು.

ಹೆದ್ದಾರಿಯಲ್ಲಿಯೇ 45 ಕಿ.ಮೀ ಸಾಗಿದರೆ ಹೆಬ್ಬುಳ ಎಂಬ ಊರು ಸಿಗುತ್ತದೆ. ಆ ಊರು ದಾಟಿ ಸ್ವಲ್ಪ ಮುಂದೆ ಹೋದ ಕೂಡಲೇ ಎಡಕ್ಕೆ (ಗೋಕರ್ಣಕ್ಕೆ ಹೋಗುವ ರಸ್ತೆ) ಹೊರಳಿಕೊಳ್ಳಬೇಕು. ಅದೇ ರಸ್ತೆಯಲ್ಲಿ ಸುಮಾರು ಮೂರು ಕಿ.ಮೀ. ಸಾಗಿದರೆ ರಸ್ತೆ ಕವಲೊಡೆಯುತ್ತದೆ. ಅಲ್ಲಿ ಮತ್ತೆ ಎಡಕ್ಕೆ ಹೊರಳಿಕೊಳ್ಳಬೇಕು. ಅದು ನಿಮ್ಮನ್ನು ವಿಭೂತಿ ಜಲಪಾತದ ಸನಿಹಕ್ಕೆ ಕೊಂಡೊಯ್ಯುತ್ತದೆ. ಆ ರಸ್ತೆಯಲ್ಲಿ ಸಾಗುವಷ್ಟೂ ಸಾಗಿದ ನಂತರ ಒಂದಿಷ್ಟು ದೂರ ಕಾಡಿನ ದಾರಿಯಲ್ಲಿ ನಡೆದುಕೊಂಡು ಹೋದರೆ ಬೆಟ್ಟ ಸಾಲಿನ ನಡುವೆ ಹಂತ ಹಂತವಾಗಿ ಹರಿದು ಬರುತ್ತಿರುವ ನೊರೆನೊರೆ ಜಲಪಾತ ಸ್ವಾಗತಿಸುತ್ತದೆ.

ಯಲ್ಲಾಪುರದಿಂದ ವಿಭೂತಿ ಜಲಪಾತಕ್ಕೆ ಸುಮಾರು ಒಂದೂವರೆ ಗಂಟೆಯ ಪ್ರಯಾಣ. ದಾರಿಯಿಂದ ಮುಂದುವರಿದರೆ ಬೃಹತ್‌್ ಕಲ್ಲುಬಂಡೆಗಳ ತಾಣ ಯಾಣ ಸಿಗುತ್ತದೆ. ಅದನ್ನೂ ನೋಡಿಕೊಂಡು ಹಾಗೆಯೇ ಶಿರಸಿಯತ್ತ ಪ್ರಯಾಣ ಬೆಳೆಸಬಹುದು. ಅದು ಮತ್ತೆ ಒಂದೂವರೆ ಗಂಟೆ ಪ್ರಯಾಣ. ಮಧ್ಯಾಹ್ನ ಊಟಕ್ಕೆ ಶಿರಸಿಗೆ ತಲುಪಿಕೊಳ್ಳುವುದು ಒಳ್ಳೆಯದು. ಶಿರಸಿಯಲ್ಲಿ ಊಟ ಪೂರೈಸಿಕೊಂಡು ಮುಂದುವರಿಯಬಹುದು.
ಶಿರಸಿಯಿಂದ 23 ಕಿ.ಮೀ. ದೂರದಲ್ಲಿ ಮುರೆಗಾರ್‌ ಜಲತಾಪವಿದೆ. ಅದನ್ನು ತೆಪ್ಪಿಗೆ ಫಾಲ್ಸ್ ಎಂದೂ ಕರೆಯುತ್ತಾರೆ.

ಶಿರಸಿಯಿಂದ ಹುಲೇಕಲ್‌ಗೆ ಹೋಗುವ ರಸ್ತೆಯಲ್ಲಿ 10 ಕಿ.ಮೀ. ಸಾಗಿದರೆ ‘ಸಾಲ್ಕಣಿ ಕ್ರಾಸ್‌’ ಸಿಗುತ್ತದೆ. ಅಲ್ಲಿಂದ ಏಳು ಕಿ.ಮೀ ಸಾಗಿ ಮುರೇಗಾರ್‌ ಕ್ರಾಸ್‌ನಲ್ಲಿ ಬಲಕ್ಕೆ ತಿರುಗಿಕೊಳ್ಳಿ. ಅಲ್ಲಿಂದ 1.5 ಕಿ.ಮೀ ದೂರದಲ್ಲಿ ‘ದುಗ್ಗುಮನೆ ಬಸ್‌ಸ್ಟಾಪ್‌’ ಸಿಗುತ್ತದೆ. ಅಲ್ಲಿ ಮುರೇಗಾರ್‌ ರಸ್ತೆಯಲ್ಲಿ ಸಾಗಿದರೆ ನಾಲ್ಕು ಕಿ.ಮೀ ದೂರದಲ್ಲಿ ಜಲಪಾತವಿದೆ. ಶಿರಸಿಯಿಂದ ಮುರೆಗಾರ್‌ಗೆ ಮುಕ್ಕಾಲು ಗಂಟೆ ಪ್ರಯಾಣ.

ಮುರೆಗಾರ್‌ ಹಳ್ಳದ ನೀರು ದೊಡ್ಡ ಬಂಡೆಗಳ ನಡುವಿನಿಂದ ಧುಮ್ಮಿಕ್ಕುವ ಈ ಜಲಪಾತದ ಚೆಂದ, ಈ ಮೊದಲು ನೋಡಿದ ವಿಭೂತಿ ಫಾಲ್ಸ್‌ನ ಆರ್ಭಟಕ್ಕಿಂತ ಭಿನ್ನವಾದದ್ದು. ದೈವಭಕ್ತರಿಗೆ ಶಿವಲಿಂಗ, ಗಣೇಶ, ಷಣ್ಮುಖ ಮೂರ್ತಿಗಳ ದರ್ಶನವೂ ಇಲ್ಲಿ ಸಿಗುತ್ತವೆ.

ಮಳೆಗಾಲದಲ್ಲಿ ಪರ್ವತ ಏರುವ ಮಜವೇ ಬೇರೆ. ಆ ಮಜ ಅನುಭವಿಸುವ ಆಸೆ ನಿಮಗಿದ್ದರೆ ಶಿರಸಿಯಿಂದ ಮೂವತ್ತು ಕಿ.ಮೀ. ದೂರದಲ್ಲಿರುವ ಭೀಮನ ಏರಿ ಗುಡ್ಡ ನಿಮಗಾಗಿ ಕಾಯುತ್ತ ನಿಂತಿದೆ. ಎತ್ತರದ ಪರ್ವತದ ನೆತ್ತಿಯಲ್ಲಿ ನಿಂತು ಸುತ್ತಲಿನ ಹಸಿರು ಜಗತ್ತನ್ನು ನೋಡುವ ಆಹ್ಲಾದ ಅನುಭವಿಸಬಹುದು. ಶಿರಸಿಯಿಂದ ಅಮ್ಮಿನಹಳ್ಳಿ ಹೆಗ್ಗರಣಿ ರಸ್ತೆ ಹಿಡಿದು ಹೋಗಿ ಭೀಮನ ಏರಿಯನ್ನು ಏರಿ ಸಂಜೆಯವರೆಗೂ ಕಾದರೆ ಆಕಾಶ ಮೋಡಗಳನ್ನು ಕೊಡವಿಕೊಂಡು ಅದೃಷ್ಟವನ್ನು ದಯಪಾಲಿಸಿದರೆ ಒಂದು ಸುಂದರ ಸೂರ್ಯಾಸ್ತ ನೋಡುವ ಅವಕಾಶವೂ ಸಿಗಬಹುದು.

ಎರಡು ಜಲಪಾತದಲ್ಲಿ ನೆನೆದು, ಒಂದು ಪರ್ವತ ಆರೋಹಣ ಮಾಡಿ ಇನ್ನೂ ಸುತ್ತುವ ಚೈತನ್ಯ ಮತ್ತು ಸಮಯ ಉಳಿದಿದೆಯೆಂದಾದರೆ ಮರಳಿ ಶಿರಸಿಗೆ ಬಂದು ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಗಡಿಯಲ್ಲಿರುವ ಜೋಗದ ಮಳೆಗಾಲದ ಸೊಬಗನ್ನೂ ನೋಡಿಕೊಂಡು ಬರಬಹುದು. ಇಲ್ಲವಾದರೆ ಮರಳಿ ಶಿರಸಿಗೆ ಬಂದು ಯಲ್ಲಾಪುರದ ದಾರಿ ಹಿಡಿಯಬಹುದು. ಶಿರಸಿಯಿಂದ ಯಲ್ಲಾಪುರ 50 ಕಿ.ಮೀ. ಒಂದು ಗಂಟೆಯಲ್ಲಿ ಕ್ರಮಿಸಬಹುದು.
ಇಲ್ಲಿಗೆ ನಿಮ್ಮ ಒಂದು ದಿನದ ಪ್ರವಾಸ ಮುಗಿದಂತಾಯ್ತು.

ಮೊದಲ ದಿನದ ತುಸು ಹೆಚ್ಚೇ ಅನಿಸುವಷ್ಟು ಸುತ್ತಾಡಿದ್ದರಿಂದ ಮರುದಿನ ಬೆಳಿಗ್ಗೆ ಬೇಗ ಏಳುವ ಮನಸ್ಥಿತಿಯಲ್ಲಿ ನೀವು ಇರುವುದಿಲ್ಲ. ತುಂಬಾ ಬೇಗ ಏಳಬೇಕಾಗಿಯೂ ಇಲ್ಲ ಬಿಡಿ. ಯಾಕೆಂದರೆ ಈ ದಿನ ನೀವು ಭೇಟಿ ನೀಡಲಿರುವ ಸ್ಥಳಗಳು ಅಷ್ಟೊಂದು ಹೆಚ್ಚು ದೂರದ ಪ್ರಯಾಣವನ್ನು ಬೇಡುವುದಿಲ್ಲ.

ಎರಡನೇ ದಿನ ನೀವು ನೋಡಬೇಕಾಗಿರುವುದು ಎರಡು ಜಲಪಾತಗಳು ಮತ್ತು ಒಂದು ವ್ಯೂ ಪಾಯಿಂಟ್‌. ಸಾತೊಡ್ಡಿ ಜಲಪಾತ, ಮಾಗೋಡು ಜಲಪಾತ ಮತ್ತು ಜೇನುಕಲ್ಲು ಗುಡ್ಡ. ಯಾವುದನ್ನು ಬೇಕಾದರೂ ಮೊದಲು ಆರಿಸಿಕೊಳ್ಳಬಹುದು. ಜೇನುಕಲ್ಲು ಗುಡ್ಡ ಮತ್ತು ಮಾಗೋಡು ಜಲಪಾತ ಒಂದೇ ದಿಕ್ಕಿನಲ್ಲಿವೆ ಮತ್ತು ಪರಸ್ಪರ ಐದು ಕಿ.ಮೀ ಅಂತರದಲ್ಲಿವೆ.

ಯಲ್ಲಾಪುರದಿಂದ ಜೇನುಕಲ್ಲು ಗುಡ್ಡಕ್ಕೆ ಹದಿನಾರು ಕಿ.ಮೀ ದೂರ. ಅಂದರೆ ಗರಿಷ್ಠ ಅರ್ಧ ಗಂಟೆಯ ಪ್ರಯಾಣವಷ್ಟೇ. ಅಲ್ಲಿ ಗುಡ್ಡದ ಮೇಲೆ ನಿಂತು ಸಾಲು ಸಾಲು ಪರ್ವತಶ್ರೇಣಿಗಳು, ನಡುವೆ ತೆಳ್ಳಗೆ ಬಳುಕುತ್ತ ಹರಿಯುತ್ತಿರುವ ಗಂಗಾವಳಿಯ ಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ನಂತರ ಅಲ್ಲಿಂದ ಮಾಗೋಡು ಜಲಪಾತದತ್ತ ಹೊರಡಬಹುದು.

ಬೆಟ್ಟದ ತುತ್ತ ತುದಿಯಿಂದ ನೆಗೆದು ಮಧ್ಯದಲ್ಲೊಮ್ಮೆ ಅರೆಮರೆಯಾಗಿ ನಂತರ ಒಮ್ಮೆಲೇ ಗರಿಬಿಚ್ಚಿಕೊಂಡು ಧುಮುಕುವ ಮಾಗೋಡು ಜಲಪಾತದ ಕೆನ್ನೀರಿನ ಆರ್ಭಟವನ್ನು ಮಳೆಗಾಲದಲ್ಲಿ ಸವಿಯುತ್ತ ಮೈಮರೆಯದೇ ಇರಲಾಗುವುದಿಲ್ಲ.

ಮಧ್ಯಾಹ್ನದವರೆಗೆ ಜಲಪಾತದ ಸೊಬಗನ್ನು ಕಣ್ತುಂಬಿಕೊಂಡು ಮರಳಿ ಯಲ್ಲಾಪುರಕ್ಕೆ ಬಂದು ಊಟ ಮಾಡಬಹುದು. ಈ ದಿನದ ಅಪರಾಹ್ನದಲ್ಲಿ ನಿಮ್ಮ ಭೇಟಿಗಾಗಿ ಸಾತೊಡ್ಡಿಯಲ್ಲಿ ಜಲಚೆಲುವೆ ಕಾಯುತ್ತಿದ್ದಾಳೆ ಎಂಬುದನ್ನು ಮರೆಯಬೇಡಿ.

ಯಲ್ಲಾಪುರದಿಂದ ಸಾತೊಡ್ಡಿ ಜಲಪಾತಕ್ಕೆ ಕೇವಲ ಹದಿನೇಳು ಕಿ.ಮೀ ದೂರ ಅಷ್ಟೇ. ಹಾಗೆಂದು ಆರಾಮ ಪ್ರಯಾಣದ ಕನಸು ಕಾಣುವಂತಿಲ್ಲ. ಯಲ್ಲಾಪುರದಿಂದ ಹುಬ್ಬಳ್ಳಿಗೆ ಹೋಗುವ ರಸ್ತೆಯಲ್ಲಿ ಕೊಂಚ ದೂರ ಸಾಗುವಷ್ಟರಲ್ಲಿಯೇ – ‘ಸಾತೊಡ್ಡಿ ಜಲಪಾತಕ್ಕೆ ಹೋಗುವ ದಾರಿ’ ಎಂಬ ಫಲಕ ಕಣ್ಣಿಗೆ ಬೀಳುತ್ತದೆ. ಅಲ್ಲಿ ಎಡಕ್ಕೆ ತಿರುಗಿಕೊಳ್ಳಬೇಕು. ಇಲ್ಲಿನ ರಸ್ತೆಗಳು ಅಷ್ಟೇನೂ ಚೆನ್ನಾಗಿಲ್ಲ. ಹೊಂಡ ಬಿದ್ದ ಕಚ್ಚಾರಸ್ತೆಗಳಲ್ಲಿ ಸಾಗಿ ಸಾತೊಡ್ಡಿ ತಲುಪಲು ಕನಿಷ್ಠ ಮುಕ್ಕಾಲು ಗಂಟೆ ಬೇಕೇ ಬೇಕು.

ವಾಹನ ಹೋಗಬಹುದಾದ ರಸ್ತೆ ಕೊನೆಗೊಂಡ ನಂತರವೂ ನೀವು ಬೆಟ್ಟದ ತಪ್ಪಲಿನ ಕಾಲು ಹಾದಿಯಲ್ಲಿ ಒಂದರ್ಧ ಕಿ.ಮೀ. ಕ್ರಮಿಸುವುದು ಅನಿವಾರ್ಯ. ಆ ನಡೆತದ ದಣಿವನ್ನು ಕ್ಷಣಕಾಲದಲ್ಲಿಯೇ ಮರೆಸುವಂತೆ ಸಾತೊಡ್ಡಿ ಜಲಪಾತ ಭೋರ್ಗರೆಯುತ್ತಿರುತ್ತದೆ.

ಹೆಣ್ಣೊಬ್ಬಳು ಸೀರೆಯ ಸೆರಗನ್ನು ಹಾಗೇ ಹಾರಿಬಿಟ್ಟಂತೆ ಸಪೂರವಾಗಿ ಮೇಲಿನಿಂದ ಹರವಿಕೊಂಡು ಹರಿಯುವ ಸಾತೊಡ್ಡಿ ಜಲಪಾತದ ನೀರಗರ್ಜನೆಗೆ ಹೆಸರೂ ಮರೆತುಹೋಗುವಂತೆ ಪರವಶರಾಗುವುದರಲ್ಲಿ ಯಾವ ಸಂಶಯವೂ ಇಲ್ಲ.
ಇಲ್ಲಿಗೆ ನಿಮ್ಮ ಎರಡನೇ ದಿನವೂ ಪೂರೈಸಿದಂತಾಯ್ತು.

ವಾಸ್ತವದಲ್ಲಿ ಉತ್ತರ ಕನ್ನಡದ ಪರ್ಯಟನೆಗೆ ಎರಡು ದಿನ ಯಾವ ಲೆಕ್ಕದಲ್ಲಿಯೂ ಸಾಲುವುದಿಲ್ಲ. ಈ ಪ್ರಕೃತಿ ಸೊಬಗಿನ ಅರಮನೆಯಲ್ಲಿ ನೀವು ನೋಡಿರುವುದು ಈ ಜಿಲ್ಲೆಯ ಒಂದು ಭಾಗದ ಭಾಗಶಃ ಸೊಬಗಷ್ಟೆ. ನೋಡಿರುವುದಕ್ಕಿಂತ ನೋಡದಿರುವುದೇ ಹೆಚ್ಚಿದೆ. ಅಲ್ಲದೇ ಉತ್ತರ ಕನ್ನಡದಲ್ಲಿ ನೋಡಿದ ದಾರಿಗಳಷ್ಟೇ ಅಲ್ಲ, ಮಳೆಗಾಲದಲ್ಲಿ ನೀವು ಸಾಗಿದ ದಾರಿಯೂ ಅಷ್ಟೇ ಪ್ರೇಕ್ಷಣೀಯವಾಗಿರುತ್ತದೆ. ನಾಟಿಯಾಗುತ್ತಿರುವ ಗದ್ದೆ, ಅಡಿಕೆ ತೋಟ, ಹಸಿರ ಇಕ್ಕೆಲ – ಎಲ್ಲವೂ ಮನಸ್ಸಿಗೆ ಖುಷಿಕೊಡುವುದೇ.

ಇನ್ನು ಮುಂದೆ ಕಾಡ ನಡುವೆ ದಿನ ಕಳೆಯುವ ವ್ಯಾಮೋಹ ನಿಮಗಿದ್ದರೆ ಯಲ್ಲಾಪುರದಿಂದ ದಾಂಡೇಲಿ ಕಡೆಗೆ ಮುಖ ಮಾಡಿ. ಮಳೆಗಾಲದಲ್ಲಿ ಸಮುದ್ರಕ್ಕೆ ಮುಖಾಮುಖಿಯಾಗುವ ಹಂಬಲವಿದ್ದರೆ ಗೋಕರ್ಣದತ್ತ ಪಯಣ ಸಾಗಲಿ.

ಜಲಪಾತದ ಸೊಬಗು ಮಳೆಗಾಲದಲ್ಲಿಯೇ ಮೇಳೈಸುವುದು ನಿಜವಾದರೂ ಉತ್ತರಕನ್ನಡದ ಕಾಡ ನಡುವಿನ ಜಲಪಾತಗಳಿಗೆ ಹೋಗುವ ಪ್ರವಾಸಿಗರು ಕೆಲವು ವಿಷಯಗಳಲ್ಲಿ ಎಚ್ಚರ ವಹಿಸುವುದು ಅತ್ಯವಶ್ಯ.

* ಕಾಡ ನಡುವೆ ಸಾಮಾನ್ಯವಾಗಿರುವ ಇಂಬಳಗಳು ತಣ್ಣಗೇ ನಿಮ್ಮ ರಕ್ತ ಕುಡಿದು ಇಳಿದುಹೋಗುತ್ತವೆ. ಅದು ನಿಮಗೆ ತಿಳಿಯುವುದೇ ಇಲ್ಲ. ಅವುಗಳಿಂದ ರಕ್ಷಣೆ ಪಡೆಯಲು ತಂಬಾಕು ಪುಡಿ, ನಶ್ಯ, ಅಥವಾ ಕೊಬ್ಬರಿ ಎಣ್ಣೆಯನ್ನು ಕಾಲುಗಳಿಗೆ ಹಚ್ಚಿಕೊಳ್ಳಬಹುದು. ಒಂದೊಮ್ಮೆ ಇಂಬಳ ಕಚ್ಚಿದರೆ ಗಾಬರಿಯೇನೂ ಆಗಬೇಕಿಲ್ಲ. ಆ ಜಾಗಕ್ಕೆ ಸುಣ್ಣವನ್ನು ಹಚ್ಚಿದರೆ ರಕ್ತಸ್ರಾವ ನಿಲ್ಲಿಸಬಹುದು.

* ಮಳೆಗಾಲದಲ್ಲಿ ಜಲಪಾತದ ಬಳಿಯ ಬಂಡೆಗಲ್ಲುಗಳಲ್ಲಿ ಹಾವಸೆ ಬೆಳೆದಿರುತ್ತದೆ. ಕೊಂಚ ಮೈಮರೆತು ಹೆಜ್ಜೆಯಿಟ್ಟರೂ ಜಾರಿ ಬೀಳುವ ಅಪಾಯ ಇದೆ.

* ನೀರು ನೋಡಲು ಚಂದ. ನೋಡಲಷ್ಟೇ ಚಂದ. ಮಳೆಗಾಲದಲ್ಲಿ ರುದ್ರರೂಪಿಯಾದ ನೀರಿನಲ್ಲಿ ಅಪ್ಪಿತಪ್ಪಿಯೂ ಈಜಾಡುವ, ಆಟವಾಡುವ ದುಸ್ಸಾಹಸಕ್ಕಿಳಿಯಬೇಡಿ. ಅದು ಜೀವಕ್ಕೆ ಎರವಾಗಬಹುದು.

* ಸಾಮಾನ್ಯವಾಗಿ ಈ ಎಲ್ಲ ಜಾಗಗಳಿಗೆ ತೆರಳುವ ರಸ್ತೆಯೂ ಕಚ್ಚಾ ರಸ್ತೆಗಳು. ಅಷ್ಟೇನೂ ಚೆನ್ನಾಗಿರುವುದಿಲ್ಲ. ಆದ್ದರಿಂದ ಸ್ವಂತ ವಾಹನದಲ್ಲಿಯೇ ತೆರಳುವವರಾಗಿದ್ದರೆ ದಯವಿಟ್ಟು ನಿಮ್ಮ ವಾಹನಗಳ ಪರಿಸ್ಥಿತಿಯನ್ನು ಪರೀಕ್ಷಿಸಿಕೊಳ್ಳಿ. ಅಚಾನಕ್‌ ಗಾಡಿ ಕೆಟ್ಟರೆ, ತುರ್ತು ರಿಪೇರಿ ತಿಳಿದಿದ್ದರೆ ಒಳ್ಳೆಯದು. ಕಾಡಿನ ದಾರಿಯಲ್ಲಿ ಗರಾಜುಗಳಿರುವುದಿಲ್ಲ.

* ಸ್ಥಳೀಯರೊಬ್ಬರನ್ನು ಮಾರ್ಗದರ್ಶನಕ್ಕೆ ಇಟ್ಟುಕೊಂಡಿದ್ದರೆ ಒಳ್ಳೆಯದು. ಎಲ್ಲ ಸ್ಥಳಗಳಿಗೆ ತೆರಳುವ ದಾರಿಗಳು ಚೆನ್ನಾಗಿ ತಿಳಿದಿದ್ದರೆ ದಾರಿತಪ್ಪಿ ಅಲೆದಾಡುವ ಪ್ರಮೇಯ ಇರುವುದಿಲ್ಲ.

* ಬಹುದೂರದಿಂದ ಬಂದು ಯಲ್ಲಾಪುರದಲ್ಲಿ ಇಳಿದು ಇಲ್ಲಿಯೇ ಬಾಡಿಗೆ ವಾಹನದಲ್ಲಿ ತಿರುಗಾಡುವ ಯೋಜನೆಯೂ ಒಳ್ಳೆಯದೇ. ಯಲ್ಲಾಪುರದಲ್ಲಿ ಹೀಗೆ ಪ್ರವಾಸಕ್ಕೆ ಬರುವ ಜನರಿಗೆ ‘ಗಿರಿ ಎಂಟರ್‌ಪ್ರೈಸಸ್‌ ಟೂರ್‌ ಆ್ಯಂಡ್‌ ಟ್ರಾವೆಲ್ಸ್‌ ಕಂಪೆನಿ’ ವಾಹನ ಸೌಲಭ್ಯ ಒದಗಿಸುತ್ತದೆ. ಅಲ್ಲಿಗೆ ತಲುಪುವ ಎರಡುದಿನ ಮೊದಲು ನೀವು ಬರುವ ದಿನ, ಜನರ ಸಂಖ್ಯೆಯನ್ನು ಅವರಿಗೆ ತಿಳಿಸಬೇಕು. ಸಂಪರ್ಕ ಸಂಖ್ಯೆ: 944 8737 868 (ಶ್ರೀನಿವಾಸ ಗಾಂವ್ಕರ್‌).

* ನೀವು ರೆಸಾರ್ಟ್‌ ಮಾದರಿಯ ವಸತಿಯನ್ನು ಬಯಸುವುದಾದರೆ ‘ಬನಾನಾ ಕೌಂಟಿ’ (ಸಂಪರ್ಕ ಸಂಖ್ಯೆ: 084192 62838) ಉತ್ತಮ ಆಯ್ಕೆ. ‘ಸಂಕಲ್ಪ ಹೋಟೆಲ್‌’ (08419-261752  / 9448435098) ಕೂಡ ಚೆನ್ನಾಗಿದೆ.
- ಪೂರಕ ಮಾಹಿತಿ: ಸಂಧ್ಯಾ ಹೆಗಡೆ ಆಲ್ಮನೆ, ಸುಬ್ರಹ್ಮಣ್ಯ ಗಾಂವ್ಕಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT