ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹತ್ವದ ಒಪ್ಪಂದ

Last Updated 9 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕಳೆದ ವಾರ ಭಾರತ ಮತ್ತು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿಗಳು ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಉಭಯ ದೇಶಗಳ ಸಂಬಂಧಕ್ಕೆ ಮತ್ತಷ್ಟು ಬಲ ಬಂದಿದೆ.  ಇದರಿಂದ ಪರಮಾಣು ವಿದ್ಯುತ್‌ ಸ್ಥಾವರಗಳನ್ನು ನಿರ್ವಹಿಸಲು ಭಾರತಕ್ಕೆ ಹೆಚ್ಚು ಅನುಕೂಲವಾಗ­ಲಿದೆ. ನಮ್ಮ ಪರಮಾಣು ವಿದ್ಯುತ್‌ ಸ್ಥಾವರಗಳಿಗೆ ಬೇಕಾದ ಯುರೇನಿಯಂ ಇಂಧನಕ್ಕಾಗಿ  ಕೆಲಮಟ್ಟಿಗೆ ವಿದೇಶಗಳನ್ನೆ ಅವಲಂಬಿಸಿರುವ ಸಂದರ್ಭದಲ್ಲಿ ಇದು ಮಹತ್ವದ್ದು . ಈ ಒಪ್ಪಂದದ ಪ್ರಕಾರ, ಯುರೇನಿಯಂ ಅನ್ನು  ಭಾರತಕ್ಕೆ ಆಸ್ಟ್ರೇಲಿಯಾ ಮಾರಾಟ ಮಾಡಲಿದೆ. 

ಜಲ, ಕಲ್ಲಿದ್ದಲು ಮುಂತಾದ ಸಾಂಪ್ರದಾಯಿಕ ಮೂಲಗಳಿಂದ ವಿದ್ಯುತ್‌ ಉತ್ಪಾದಿಸುವ ನಮ್ಮ ಈಗಿನ ವ್ಯವಸ್ಥೆ ಹೆಚ್ಚು ಒತ್ತಡ ಎದುರಿಸುತ್ತಿದೆ. ದೀರ್ಘಾವಧಿಯಲ್ಲಿ ಪರಮಾಣು ಇಂಧನ ಆಧಾರಿತ ವಿದ್ಯುತ್‌ ಮೇಲೆ ಹೆಚ್ಚು ಹೆಚ್ಚು ಅವಲಂಬನೆ ಅನಿವಾರ್ಯ. ಅದಕ್ಕಾಗಿ ಯುರೇನಿಯಂ ಪೂರೈಕೆ ನಿರಂತರವಾಗಿ ನಡೆಯ­ಬೇಕಾಗುತ್ತದೆ. ಭಾರತದ ಪರಮಾಣು ಸ್ಥಾವರಗಳು ಸುಮಾರು 4,680 ಮೆಗಾ­ವಾಟ್. ವಿದ್ಯುತ್‌ ಉತ್ಪಾದಿಸುತ್ತಿವೆ. ಈ ಪೈಕಿ 2,840 ಮೆ.ವಾ. ಉತ್ಪಾದನೆಗೆ ದೇಶಿ ಯುರೇನಿಯಂ ಬಳಕೆಯಾಗುತ್ತಿದೆ. ಉಳಿದ 1,840 ಮೆ.ವಾ. ವಿದ್ಯುತ್ ಉತ್ಪಾದನೆಗೆ ಆಮದು ಇಂಧನ ಅವಲಂಬಿಸಿದ್ದೇವೆ. 

ಸದ್ಯಕ್ಕೆ ಭಾರತ ಕಝಕಿಸ್ತಾನ ಹಾಗೂ ರಷ್ಯಾದಿಂದ ಯುರೇನಿಯಂ ಅನ್ನು ಆಮದು ಮಾಡಿಕೊಳ್ಳುತ್ತಿದೆ. ಉಜ್ಬೆಕಿಸ್ತಾನದಿಂದಲೂ ಯುರೇನಿಯಂ ಆಮದು ಮಾಡಿಕೊಳ್ಳಲು ಭಾರತ ಒಪ್ಪಂದ ಮಾಡಿಕೊಂಡಿದೆ. ಈ ಆಮದು ವ್ಯವಹಾರ   2015ರಿಂದ  ಆರಂಭವಾಗಲಿದೆ.    ಇಂತಹ ಸಂದರ್ಭದಲ್ಲಿ   ಆಸ್ಟ್ರೇಲಿಯಾ ಜೊತೆಗಿನ ಒಪ್ಪಂದ, ಗಮನಾರ್ಹ ಬೆಳವಣಿಗೆ.

‘ಹಿಂದೆ ಭಾರತದಲ್ಲಿ ಅಣುಶಕ್ತಿ ಘಟಕಗಳಿಗೆ ಸಾಮಗ್ರಿ ಸಾಗಿಸಲು ಎತ್ತಿನ ಗಾಡಿ ಬಳಸಲಾಗುತ್ತಿತ್ತು. ಆದರೆ ಈಗ ಭಾರತ ಮುಂದುವರಿದಿದ್ದು ಅಣು ವಿದ್ಯುತ್‌ ಘಟಕಗಳು ಹೆಚ್ಚು ಸುರಕ್ಷಿತ ಮತ್ತು ಸುಸಜ್ಜಿತಗೊಂಡಿವೆ’ ಎಂದು ಆಸ್ಟ್ರೇಲಿಯ ಪ್ರಧಾನಿ ಟೋನಿ ಅಬಾಟ್‌ ಅಭಿಪ್ರಾಯಪಟ್ಟಿರುವುದು ಆ ದೇಶದ ಧೋರಣೆಯಲ್ಲಿ ಉಂಟಾದ ಬದಲಾವಣೆಯ ದ್ಯೋತಕ. ಅಣು ಪ್ರಸರಣನಿಷೇಧ ಒಪ್ಪಂದಕ್ಕೆ (ಎನ್‌ಪಿಟಿ) ಸಹಿ ಹಾಕಿಲ್ಲದ ರಾಷ್ಟ್ರಕ್ಕೆ ಆಸ್ಟ್ರೇಲಿಯಾ ಯುರೇನಿಯಂ ಮಾರಾಟ ಮಾಡುತ್ತಿರುವುದು ಇದೇ ಮೊದಲು. ಈವರೆಗೆ ಆಸ್ಟ್ರೇಲಿಯಾ ಯುರೇನಿಯಂ ಅನ್ನು ಎನ್‌ಪಿಟಿಗೆ ಸಹಿ ಹಾಕಿದ ರಾಷ್ಟ್ರಗಳಿಗಷ್ಟೇ ಮಾರಾಟ ಮಾಡಿತ್ತು. ಅವು ಚೀನಾ, ಜಪಾನ್, ತೈವಾನ್ ಹಾಗೂ ಅಮೆರಿಕ. 

ಭಾರತಕ್ಕೆ ಯುರೇನಿಯಂ ರಫ್ತಿನ ಮೇಲಿದ್ದ ನಿಷೇಧವನ್ನು ಆಸ್ಟ್ರೇಲಿಯಾ 2012ರಲ್ಲಿ ರದ್ದುಗೊಳಿಸಿತ್ತು ಎಂಬುದು ಗಮನಾರ್ಹ. ಅದರ ಮುಂದುವರಿದ ಭಾಗವೇ ಈ ಒಪ್ಪಂದ.   ಪ್ರಪಂಚದ ಶೇಕಡ 40ರಷ್ಟು ಯುರೇನಿಯಂ ಆಸ್ಟ್ರೇಲಿಯಾದಲ್ಲಿದೆ. ‘ಭಾರತ ಅಣ್ವಸ್ತ್ರ ಹೊಂದಿದ ರಾಷ್ಟ್ರವಾಗಿದ್ದರೂ ಅದರ ನಿರ್ವಹಣೆಯಲ್ಲಿ   ಭಾರತದ್ದು ಹೊಣೆಗಾರಿಕೆಯ ನಡವಳಿಕೆಯಾಗಿದೆ. ಈ ನಿಟ್ಟಿನಲ್ಲಿ ಭಾರತ ಸ್ವಚ್ಛ ದಾಖಲೆ ಹೊಂದಿದೆ’ ಎಂದು  ಟೋನಿ ಅಬಾಟ್‌ ಹೇಳಿರುವುದು ಮಹತ್ವ­ದ್ದಾಗಿದೆ. ಇದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸು ಏರಲಿದೆ.  ಆಸ್ಟ್ರೇಲಿಯ ಭಾರತದ ಮೇಲೆ ವಿಶ್ವಾಸ ತೋರಿಸಿರು­ವುದು ಸ್ವಾಗತಾರ್ಹವಾದ   ಹೆಜ್ಜೆ. ಪರಸ್ಪರ ಸಹಕಾರದ ಮುಂದುವರಿಕೆಗೆ ಇದು ಪೂರಕವಾಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT