ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾಪರ ಕಾನೂನು: ಅವಲೋಕನ

ನಿಮಗಿದು ತಿಳಿದಿರಲಿ
Last Updated 6 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಪ್ರತಿ ವರ್ಷ ಮಾರ್ಚ್ 8 ರಂದು ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ವಿಶ್ವದ ಅರ್ಧದಷ್ಟಿರುವ ಮಹಿಳೆಯರನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನವನ್ನು ಇದು ಪ್ರತಿನಿಧಿಸುತ್ತದೆ. ಭಾರತದಲ್ಲಿಯೂ ಇಂಥ ಪ್ರಯತ್ನಕ್ಕೆ ಒಂದು ಇತಿಹಾಸವೇ ಇದೆ. ಗಾಂಧೀಜಿ ಅವರ ಕರೆಯ ಮೇರೆಗೆ ಮಹಿಳೆಯರು ಹೊರ ಬಂದು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡರು. ಇದರ ಫಲವಾಗಿ ಸಂವಿಧಾನ ರಚನಾ ಸಭೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ದೊರೆಯಿತು. ಇಂದು ಭಾರತದ ಸಂವಿಧಾನ ಮಹಿಳೆಯರ ಹಕ್ಕುಗಳನ್ನು ಹಾಗೂ ಅವರ ಹಿತಾಸಕ್ತಿಗಳನ್ನು ರಕ್ಷಿಸುವ ಅತ್ಯಂತ ಶಕ್ತಿಶಾಲಿಯಾದ ಸಾಧನವಾಗಿದೆ.

ಆ ನಂತರದಲ್ಲಿ ಜಾರಿಯಾದ ಹಲವು ಶಾಸನಗಳಲ್ಲಿ ಸ್ತ್ರೀ ಪುರುಷ ತಾರತಮ್ಯವನ್ನು ತೊಡೆದು ಹಾಕುವ ಪ್ರಯತ್ನಗಳು ನಡೆದಿವೆ. ಹಿಂದೂ ವಿವಾಹ ಅಧಿನಿಯಮ, 1955; ಹಿಂದೂ ಉತ್ತರಾಧಿಕಾರ ಅಧಿನಿಯಮ, 1956; ವಿಶೇಷ ವಿವಾಹ ಅಧಿನಿಯಮ,1954 ಹಾಗೂ ಹಿಂದೂ ದತ್ತಕ ಮತ್ತು ಜೀವನಾಂಶ ಅಧಿನಿಯಮ, ಇವು ರೂಢಿಗತ ಸಂಪ್ರದಾಯಗಳಿಗೆ ತದ್ವಿರುದ್ಧವಾದ ಕೆಲವು ಕ್ರಾಂತಿಕಾರಿ ಬದಲಾವಣೆಗಳನ್ನು ತಂದವು. ಅವೆಂದರೆ, ಬಹುಪತ್ನಿತ್ವ/ ಬಹುಪತಿತ್ವವನ್ನು ಕಾನೂನುಬಾಹಿರಗೊಳಿಸಿದುದು, ಸ್ವಯಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಗಂಡುಮಕ್ಕಳಿಗೆ ಸಮನಾದ ಪಾಲು ನೀಡಿದುದು, ಮಹಿಳೆಗೆ ದತ್ತು ಪಡೆಯುವ ಹಕ್ಕು ನೀಡಿದುದು ಹಾಗೂ ಅಂತರ್ಜಾತೀಯ ಮತ್ತು ಅಂತರ್‌ಧರ್ಮೀಯ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಿದುದು ಈ ಪ್ರಯತ್ನಗಳಲ್ಲಿ ಕೆಲವು. ಅಂದಿನ ಸಾಮಾಜಿಕ ಸಂದರ್ಭದಲ್ಲಿ ಇವುಗಳ ವಾಸ್ತಿವಿಕ ಜಾರಿ ಕಷ್ಟಕರವಾಗಿತ್ತಾದರೂ ದೃಷ್ಟಿಕೋನದ ಬದಲಾವಣೆ ಮಹತ್ವವಾದುದಾಗಿತ್ತು.

ಆ ನಂತರದಲ್ಲಿ, ಸಮಾಜದಲ್ಲಿ ಸ್ತ್ರೀ ಪುರುಷರ ನಡುವೆ ಅನೇಕ ಕ್ಷೇತ್ರಗಳಲ್ಲಿ, ಅನೇಕ ಸ್ತರಗಳಲ್ಲಿ ಇರುವ ತಾರತಮ್ಯವನ್ನು ನಿವಾರಿಸಲು ನೆರವಾಗುವಂಥ ಕಾನೂನುಗಳ ಜಾರಿಗೆ ನಿರಂತರ ಹೋರಾಟಗಳು ನಡೆಯುತ್ತಲೇ ಬಂದಿದೆ. ಹಾಗೆ ಹೋರಾಟದ ಫಲವಾಗಿ ಹಾಗೂ ಮಹಿಳಾ ಸಂಘಟನೆಗಳ ಅವಿರತ ಶ್ರಮದಿಂದ ಜಾರಿಗೆ ಬಂದ ಕಾನೂನುಗಳೆಂದರೆ-ಕೌಟುಂಬಿಕ ಹಿಂಸೆಯಿಂದ ಮಹಿಳೆಯರಿಗೆ ರಕ್ಷಣೆ ಅಧಿನಿಯಮ 2006, ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಅಧಿನಿಯಮ, 2013 ಮತ್ತು ಹಿಂದೂ ಉತ್ತರಾಧಿಕಾರ ಅಧಿನಿಯಮಕ್ಕೆ ತಿದ್ದುಪಡಿ ಮಾಡುವ ಮೂಲಕ ಪಿತ್ರಾರ್ಜಿತ ಆಸ್ತಿಯಲ್ಲಿಯೂ ಹೆಣ್ಣು ಮಕ್ಕಳಿಗೆ ಸಮಪಾಲು ನೀಡುವ ಉಪಬಂಧದ ಸೇರ್ಪಡೆ. ಇವೆಲ್ಲ ಮಹಿಳೆಗೆ ಸಮಾನ ಹಕ್ಕುಗಳನ್ನು ನೀಡುವ ಮೂಲಕ ಸಮಾಜದಲ್ಲಿ ಸಮಾನತೆಯನ್ನು ಕಲ್ಪಿಸಲು ನೆರವಾಗುತ್ತವೆ.

ಇದಲ್ಲದೆ ಆಗಿಂದಾಗ್ಗೆ ನಡೆದ ಹೋರಾಟಗಳೂ ಸಹ ಕಾನೂನಿನಲ್ಲಿ ಮಹಿಳಾ ಪರ ದೃಷ್ಟಿಕೋನವುಳ್ಳ ತಿದ್ದುಪಡಿಗಳನ್ನು ಮಾಡಲು ಮತ್ತು ಕಾನೂನುಗಳಲ್ಲಿನ ದೋಷಗಳನ್ನು ಸರಿಪಡಿಸಲು ಕಾರಣವಾಗಿವೆ. ಹಿಂದೆ ಮಥುರಾ ಪ್ರಕರಣದಲ್ಲಿ ಮತ್ತು ಇತ್ತೀಚಿಗಿನ ನಿರ್ಭಯಾ ಪ್ರಕರಣದಲ್ಲಿ ಅತ್ಯಾಚಾರ ಕಾನೂನಿಗೆ ತಂದ ತಿದ್ದುಪಡಿಗಳು, ವರದಕ್ಷಿಣೆ ಕಿರುಕುಳವನ್ನು ನಿಗ್ರಹಿಸಲು ಭಾರತ ದಂಡ ಸಂಹಿತೆಗೆ ಸೇರ್ಪಡೆ ಮಾಡಿದ 498ಎ ಪ್ರಕರಣ, ಅತ್ಯಾಚಾರ ಪ್ರಕರಣಗಳಲ್ಲಿ ಅತ್ಯಾಚಾರಕ್ಕೆ ಬಲಿಯಾಗಿ ನೊಂದ ಮಹಿಳೆಯ ವಿಚಾರಣೆಯನ್ನು ಹೆಚ್ಚು ಸಹಾನುಭೂತಿಯಿಂದ ಮತ್ತು ಸಂವೇದನಾಶೀಲತೆಯಿಂದ ನಡೆಸುವುದನ್ನು ಕಡ್ಡಾಯಗೊಳಿಸುವ ಸಿಆರ್‌ಪಿಸಿಗೆ ಮಾಡಿದ ತಿದ್ದುಪಡಿಗಳು ಕೆಲವು ಉದಾಹರಣೆಗಳು.

ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮತ್ತು ಸಾಂಸಾರಿಕ ಜೀವನದಲ್ಲಿ ಪುರುಷನಿಗೆ ಹೆಗಲೆಣೆಯಾಗಿ ದುಡಿಯುವ, ಸಾಮಾಜಿಕ ಜೀವನದಲ್ಲಿ ಪುರುಷನಿಗೆ ಸರಿಸಾಟಿಯಾಗಿ ಸಾಧನೆ ಮಾಡಿರುವ ಹಾಗೂ ಮಾಡಬಲ್ಲಂಥ ಮಹಿಳೆ ಸಮಾನತೆಯನ್ನು ಹೋರಾಟ ಮಾಡಿಯೇ ಪಡೆದುಕೊಳ್ಳಬೇಕಾಗಿ ಬಂದಿರುವುದು ವಿಪರ್ಯಾಸ. ಈ ಸಮಾನತೆಯೂ ದೊರಕಿರುವುದು ಕಾನೂನಿನಲ್ಲಿ ಮಾತ್ರ. ವಾಸ್ತವಿಕ ಸಮಾನತೆಯನ್ನು ಮತ್ತೆ ಹೋರಾಟ ಮಾಡಿಯೇ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಇಂದಿಗೂ ಇದೆ.

ಮಹಿಳಾಪರ ಕಾನೂನುಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಬಹಳಷ್ಟು ದೂರುಗಳಿವೆ. ಆ ಕಾರಣಕ್ಕೆ ಅವುಗಳನ್ನು ದುರ್ಬಲಗೊಳಿಸುವ ಚಿಂತನೆಗಳೂ ಪ್ರಯತ್ನಗಳೂ ನಡೆದಿವೆ. ಅವಿರತವಾದ ದೀರ್ಘ ಹೋರಾಟದ ಫಲವಾಗಿ ಜಾರಿಗೆ ಬಂದಿರುವ ಸಮಾನತೆಯ ಕಾನೂನುಗಳು ದುರ್ಬಲಗೊಂಡಲ್ಲಿ ಶೋಷಣೆಗೆ ಗುರಿಯಾಗುವುದು ಮತ್ತೆ ಮಹಿಳೆಯೇ. ಹಾಗಾಗದೆ ಇರಬೇಕಾದರೆ ಮಹಿಳೆಯರು ಕಾನೂನುಗಳ ದುರುಪಯೋಗವನ್ನು ನಿಲ್ಲಿಸಬೇಕು.

ಕಾನೂನು ಒಂದರಿಂದಲೇ ಮಹಿಳೆಯ ಮೇಲೆ ನಡೆಯುತ್ತಿರುವ ಶೋಷಣೆಯನ್ನು ನಿಲ್ಲಿಸಲಾಗುವುದಿಲ್ಲ. ನಿಜ. ಅದಕ್ಕೆ ಬೇಕಾಗಿರುವುದು ಸಮಾಜದ ಚಿಂತನೆಯಲ್ಲಿ ಮತ್ತು ದೃಷ್ಟಿಕೋನದಲ್ಲಿ ಬದಲಾವಣೆ. ಆದರೆ ಕಾನೂನು ತಪ್ಪಿತಸ್ಥರಲ್ಲಿ ಶಿಕ್ಷೆಯ ಭಯ ಮೂಡಿಸಿ ಆಗುವ ಅಪರಾಧವನ್ನು ತಡೆಯಬೇಕು, ಮಾಡಿದ ಅಪರಾಧಕ್ಕೆ ಶಿಕ್ಷೆ ದೊರೆಯುವಂತೆ ಮಾಡಿ ಸಾಮಾಜಿಕ ನ್ಯಾಯವನ್ನು ಸಾಧಿಸಬೇಕು ಅಲ್ಲವೇ?

ಈ ವರ್ಷದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಘೋಷ ವಾಕ್ಯ: ‘ಮಹಿಳಾ ಸಮಾನತೆಯಿಂದ ಎಲ್ಲರ ಪ್ರಗತಿ’. ಮಹಿಳಾ ಸಮಾನತೆ ವಾಸ್ತವಿಕವಾಗಿ ನಿಜವಾಗಲಿ ಮತ್ತು ಎಲ್ಲರ ಪ್ರಗತಿಯಾಗಲಿ ಎಂದು ಆಶಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT