ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಉದ್ಯಮಿಗಳಿಗೆ ಪ್ರತ್ಯೇಕ ಕೈಗಾರಿಕಾ ವಲಯ

Last Updated 23 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹಿಳೆಯರಿ ಗಾಗಿಯೇ ಪ್ರತ್ಯೇಕ ಕೈಗಾರಿಕಾ ವಲಯ ನಿರ್ಮಿಸಲಿದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ  ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಸೋಮವಾರ ಇಲ್ಲಿ ತಿಳಿಸಿದರು.

ಮಹಿಳಾ ಕೈಗಾರಿಕಾ ವಲಯ ಪ್ರದೇಶ ನಿರ್ಮಾಣಕ್ಕೆ ಅಗತ್ಯವಿರುವ ನೂರಾರು ಎಕರೆ ಭೂಮಿಗಾಗಿ ಹುಡುಕಾಟ ನಡೆದಿದೆ ಎಂದರು.
ಮಹಿಳಾ ಉದ್ಯಮಿಗಳ ಒಕ್ಕೂಟ (ಕೊವೆ) ಹಾಗೂ ಮಹಿಳಾ ಉದ್ಯಮಿಗಳ ಸಂಘದ ಸಹಯೋಗದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸೋಮ ವಾರ ನಗರದಲ್ಲಿ ಆಯೋಜಿಸಿದ್ದ ಮಹಿಳಾ ಉದ್ಯಮಶೀಲತಾ ದಿನಾಚರಣೆ (ವೆಡ್‌) ಉದ್ಘಾಟಿಸಿ ಅವರು ಮಾತನಾಡಿದರು. 

‘ಮಹಿಳಾ ಕೈಗಾರಿಕಾ ವಲಯವನ್ನು ಹೊರತು ಪಡಿಸಿ ರಾಜ್ಯ ಸರ್ಕಾರದ ಇತರ ಕೈಗಾರಿಕಾ ಪ್ರದೇಶಗಳಲ್ಲಿ ಮಹಿಳಾ ಉದ್ಯಮಿಗಳಿಗೆ ಶೇ 5ರಷ್ಟು ವಲಯಗಳನ್ನು ಮೀಸಲಿಡಲು ತೀರ್ಮಾನಿಸಲಾಗಿದೆ. ಮಹಿಳಾ ಉದ್ಯಮಿಗಳಿಗೆ ಸರ್ಕಾರ ಎಲ್ಲ ರೀತಿಯ ನೆರವು ನೀಡಲು ಬದ್ಧವಾಗಿದ್ದು, ಪ್ರತ್ಯೇಕ ಹೊಸ ಉದ್ಯಮ (ಸ್ಟಾರ್ಟ್‌ಅಪ್) ನೀತಿಯಲ್ಲೂ  ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ’ ಎಂದರು.

ಪ್ರದೇಶವಾರು ಯೋಜನೆ: ರಾಜ್ಯ ಸರ್ಕಾರದ ಹೊಸ ಕೈಗಾರಿಕಾ ನೀತಿಯಲ್ಲಿ ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡಲು ಸರ್ಕಾರ ಹೈದರಾಬಾದ್‌ ಕರ್ನಾಟಕ, ಮುಂಬೈ ಕರ್ನಾಟಕ, ಬಯಲುಸೀಮೆ, ಕರಾವಳಿ ಕರ್ನಾಟಕ ಹೀಗೆ ಪ್ರದೇಶವಾರು ಯೋಜನೆ ಪ್ರಕಟಿಸಿದೆ.

ಹೊಸದಾಗಿ ಉದ್ದಿಮೆಗಳನ್ನು ಸ್ಥಾಪಿಸಲು ಮುಂದೆ ಬರುವ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ, ಸಬ್ಸಿಡಿ ಸೇರಿದಂತೆ ಇನ್ನೂ ಹಲವಾರು ಆಕರ್ಷಕ ಯೋಜನೆ ರೂಪಿಸಲಾಗಿದೆ ಎಂದು ರತ್ನಪ್ರಭಾ ಹೇಳಿದರು. ಮಹಿಳೆಯರು ತಮ್ಮ ಉತ್ಪನ್ನಗಳಿಗೆ  ‘ಬ್ರ್ಯಾಂಡ್‌’ ಹುಟ್ಟು ಹಾಕಬೇಕು. ಉತ್ತಮ ಮಾರುಕಟ್ಟೆ ಕಂಡುಕೊಳ್ಳುವ ಮೂಲಕ ಲಭ್ಯವಿರುವ ಹೇರಳ ಅವಕಾಶ ಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ವೃತ್ತಿಪರತೆ ಅಗತ್ಯ: ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಪೈಪೋಟಿ ಯನ್ನು ಸಮರ್ಥವಾಗಿ ಎದುರಿಸಲು ಮಹಿಳಾ ಉದ್ಯಮಿಗಳು ವೃತ್ತಿಪರತೆ ಮತ್ತು ತಂತ್ರಜ್ಞಾನವನ್ನು ಮೈಗೂಡಿಸಿಕೊಳ್ಳಬೇಕು  ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಬೆಂಗಳೂರು ಪ್ರಾದೇಶಿಕ ಕಚೇರಿಯ  ಚೀಫ್‌ ಜನರಲ್‌ ಮ್ಯಾನೇಜರ್‌ ರಜನಿ ಮಿಶ್ರಾ ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಂತಿ ನಗರ ಶಾಸಕ ಎನ್‌.ಎ. ಹ್ಯಾರಿಸ್‌ ಮಾತನಾಡಿ, ಬ್ಯಾಂಕ್‌ ಹಾಗೂ ಸರ್ಕಾರಿ ಅಧಿಕಾರಿಗಳ ವಿಳಂಬ ಧೋರಣೆ ಹಾಗೂ ವರ್ತನೆಯನ್ನು ತರಾಟೆಗೆ ತೆಗೆದುಕೊಂಡರು. ಸಾಲ ನೀಡಲು ಬ್ಯಾಂಕ್‌ ಒಡ್ಡುವ ಷರತ್ತು ಮತ್ತು ಸರ್ಕಾರಿ ಅಧಿಕಾರಿಗಳ ವಿಳಂಬ ಧೋರಣೆ ಸೇರಿದಂತೆ ಮಹಿಳಾ ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅವರು ಪ್ರಸ್ತಾಪಿಸಿದರು.

ನಗರ ಪ್ರದೇಶದ ಹೊರಗಿರುವ ಕೈಗಾರಿಕಾ ಪ್ರದೇಶಗಳಿಂದ ಮಹಿಳೆಯರಿಗೆ ಹೆಚ್ಚಿನ ಲಾಭವಾಗುವುದಿಲ್ಲ. ನಗರ, ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ಮನೆ, ಶೆಡ್ಡುಗಳಲ್ಲಿ ಚಿಕ್ಕ ಉದ್ಯಮದಲ್ಲಿ ತೊಡಗಿರುವ ಮಹಿಳೆಯರಿಗೆ ಅಗತ್ಯ ನೆರವು ನೀಡಬೇಕು ಎಂದು ಮನವಿ ಮಾಡಿದರು.

ಮಹಿಳಾ ಉದ್ಯಮಿಗಳ ಒಕ್ಕೂಟ (ಕೊವೆ) ಅಧ್ಯಕ್ಷೆ ರೂಪಾರಾಣಿ ಪ್ರಸ್ತಾವಿಕ ಮಾತನಾಡಿದರು. ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್‌ ಮೊಹ್ಸಿನ್‌, ವಿಟಿಪಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ಪ್ರಭು, ‘ಕೊವೆ’ ರಾಷ್ಟ್ರ ಘಟಕದ ಅಧ್ಯಕ್ಷೆ ಗಿರಿಜಾ ರೆಡ್ಡಿ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆ ಸಿಸಿಐ) ಅಧ್ಯಕ್ಷ ತಲ್ಲಂ ದ್ವಾರಕನಾಥ್, ಎಫ್‌ಕೆಸಿಸಿಐ ನಿಕಟಪೂರ್ವ ಅಧ್ಯಕ್ಷ ಸಂಪತ್‌ ರಾಮನ್, ಹುಬ್ಬಳ್ಳಿ–ಧಾರವಾಡದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ರಮೇಶ್‌ ಪಾಟೀಲ ವೇದಿಕೆಯಲ್ಲಿದ್ದರು. ವಿವಿಧೆಡೆಯಿಂದ ಬಂದಿದ್ದ ಮಹಿಳಾ ಉದ್ಯಮಿಗಳು, ಸ್ವಸಹಾಯ ಸಂಘದ ಸದಸ್ಯರು ಗೋಷ್ಠಿ, ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT