ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌: ಮೂಡಿದೆ ಹೊಸ ಭರವಸೆ...

Last Updated 28 ಜೂನ್ 2015, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ವನಿತೆಯರ ಕ್ರಿಕೆಟ್‌ ಟೂರ್ನಿಗಳು ನಡೆಯವುದೇ ಕಡಿಮೆ. ಈ ಬೇಸರದ ನಡುವೆಯೂ ಬಿಸಿಸಿಐ ಇತ್ತೀಚಿಗೆ ಹೆಚ್ಚು ಟೂರ್ನಿಗಳನ್ನು ಆಯೋಜಿಸಲು ಗಮನ ನೀಡುತ್ತಿರುವುದು ಹೊಸ ಭರವಸೆ ಮೂಡಿಸಿದೆ. ಈ ಬಗ್ಗೆ ಬಿ.ಆರ್‌.ಮಾನಸ ಬೆಳಕು ಚೆಲ್ಲಿದ್ದಾರೆ.

ಅಭಿಮಾನಿಗಳ ಚಪ್ಪಾಳೆ.. ಬೆಂಬಲ, ತುಂಬಿದ ಕ್ರೀಡಾಂಗಣ ...ಇದ್ಯಾವುದರ ಹಂಗಿಲ್ಲದೆ  ಭಾರತ ಮಹಿಳೆಯರ ತಂಡ ಹೊಸ ಭರವಸೆಯೊಂದಿಗೆ ಮತ್ತೊಂದು ಸವಾಲನ್ನು ಎದುರಿಸಲು ಸಜ್ಜಾಗಿದೆ. ಮಹಿಳಾ ಕ್ರಿಕೆಟ್‌ಗೆ ಬಿಸಿಸಿಐ ಇತ್ತೀಚಿಗೆ ಹೆಚ್ಚು ಟೂರ್ನಿಗಳನ್ನು ಆಯೋಜಿಸುತ್ತಿದೆ. ಇದರ ಲಾಭ ಪಡೆದುಕೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಎತ್ತರಕ್ಕೇರುವ ಗುರಿ ಭಾರತದ ವನಿತೆಯರಲ್ಲಿದೆ.

ಮಿಥಾಲಿ ರಾಜ್‌ ನಾಯಕತ್ವದ ಭಾರತ ತಂಡ ನ್ಯೂಜಿಲೆಂಡ್‌ ಎದುರು ಐದು ಏಕದಿನ ಹಾಗೂ ಮೂರು ಟ್ವೆಂಟಿ–20 ಪಂದ್ಯಗಳ ಸರಣಿಯನ್ನು ಬೆಂಗಳೂರಿನಲ್ಲಿ ಆಡುತ್ತಿದೆ.

2006ರಲ್ಲಿ ಮಹಿಳಾ ಕ್ರಿಕೆಟ್‌ ಬಿಸಿಸಿಐ ಸುಪರ್ದಿಗೆ ಬಂದ ಮೇಲೆ ಹೆಚ್ಚು ಟೂರ್ನಿಗಳನ್ನು ಆಯೋಜಿಸುತ್ತಿಲ್ಲ ಎನ್ನುವುದು ಈಗ ಗುಟ್ಟಾಗಿ ಉಳಿದಿರುವ ವಿಷಯವೇನಿಲ್ಲ. ಈ ಬಗ್ಗೆ ಮಹಿಳಾ ತಂಡದ ಆಯ್ಕೆ ಸಮಿತಿ ಮುಖ್ಯಸ್ಥೆ ಕರ್ನಾಟಕದ ಶಾಂತಾ ರಂಗಸ್ವಾಮಿ ಹೋದ ವಾರ ಮೈಸೂರಿನಲ್ಲಿ ನಡೆದ ಚಾಲೆಂಜರ್ಸ್‌ ಟ್ರೋಫಿ ಏಕದಿನ ಟೂರ್ನಿಯ ವೇಳೆ ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದರು. ಈ ಬೇಸರದ ನಡುವೆಯೂ ಈಗ ಆಶಾದಾಯಕ ದಿನಗಳು ಬರುತ್ತಿವೆ. ಜೊತೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ)ಯ ಕೆಲ ನಿಯಮಗಳು ಮಹಿಳಾ ಕ್ರಿಕೆಟ್‌ಗೆ ವರದಾನವಾಗುತ್ತಿವೆ.

2017ರ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೂ ಮುನ್ನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಮೊದಲ ಎಂಟು ಸ್ಥಾನ ಹೊಂದಿರುವ ತಂಡಗಳು ಪರಸ್ಪರ ಅಂತರರಾಷ್ಟ್ರೀಯ ಸರಣಿ ಆಡಿರಲೇಬೇಕು ಎಂಬ ಐಸಿಸಿ ನಿಯಮ ಮಹಿಳಾ ಕ್ರಿಕೆಟ್‌ ಬೆಳವಣಿಗೆಗೆ ಹೊಸ ಹೆಜ್ಜೆ ಎಂದೇ ಭಾವಿಸಲಾಗಿದೆ. ಈ ನಿಯಮದಿಂದಾಗಿ ಭಾರತ ವನಿತೆಯರಿಗೆ ಪಂದ್ಯಗಳನ್ನಾಡಲು ಅವಕಾಶಗಳು ಸಿಗುತ್ತಿವೆ.

ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪಂದ್ಯಗಳನ್ನು ಆಡುತ್ತಿರುವ ಭಾರತ ಮಹಿಳಾ ತಂಡ ಯಶಸ್ಸಿಗಿಂತ ವೈಫಲ್ಯ ಅನುಭವಿಸಿದ್ದೇ ಹೆಚ್ಚು.  2013ರಲ್ಲಿ ತವರಿನಲ್ಲಿಯೇ ನಡೆದ ವಿಶ್ವಕಪ್‌ನಲ್ಲಿ ಭಾರತದ ಸಾಧನೆ ಏನೆಂಬುದು ಎಲ್ಲರಿಗೂ ಗೊತ್ತೇ ಇದೆ. ಕಳಪೆ ಆಟ ಆಡಿದ್ದ ಭಾರತ ಏಳನೇ ಸ್ಥಾನ ಪಡೆದಿತ್ತು. ಟೂರ್ನಿಯಲ್ಲಿ ಎಂಟು ತಂಡಗಳು ಪಾಲ್ಗೊಂಡಿದ್ದವು.

ವಿಶ್ವಕಪ್‌ನಲ್ಲಿ ಮುಖಭಂಗ ಅನುಭವಿಸಿದ ಬಳಿಕವೂ ಭಾರತ ಹೇಳಿಕೊಳ್ಳುವಂಥ ಸಾಮರ್ಥ್ಯ ನೀಡಿಲ್ಲ. 2014ರಲ್ಲಿ ಇಂಗ್ಲೆಂಡ್ ಎದುರು ನಡೆದ  ಏಕದಿನ ಸರಣಿಯಲ್ಲಿ ಸೋಲು ಕಂಡಿತ್ತು. ಹೋದ ವರ್ಷದ ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ಮೈಸೂರಿನಲ್ಲಿ ನಡೆದ ಟ್ವೆಂಟಿ–20 ಸರಣಿಯಲ್ಲಿ ಭಾರತ 2–3ರಲ್ಲಿ ಸರಣಿ ಸೋಲು ಕಂಡಿತ್ತು. ಇದೇ ತಂಡದ ಎದುರು ಬೆಂಗಳೂರಿನಲ್ಲಿ ನಡೆದ ಐಸಿಸಿ ಮಹಿಳೆಯರ ಏಕದಿನ ಚಾಂಪಿಯನ್‌ಷಿ ಪ್‌ನಲ್ಲೂ ಭಾರತ 2–1ರಲ್ಲಿ  ನಿರಾಸೆ ಕಂಡಿತ್ತು.

ಎಂಟು ಸಲ ವಿಶ್ವಕಪ್‌ ನಡೆದರೂ ಭಾರತಕ್ಕೆ ಒಮ್ಮೆಯೂ ಪ್ರಶಸ್ತಿ ಜಯಿಸಲು ಸಾಧ್ಯವಾಗಿಲ್ಲ. 2005ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೂರ್ನಿಯಲ್ಲಿ ರನ್ನರ್ಸ್‌ ಆಪ್‌ ಆಗಿದ್ದೇ ಶ್ರೇಷ್ಠ ಸಾಧನೆ ಎನಿಸಿದೆ. ಎರಡು ವರ್ಷ ಕಳೆದರೆ ಮತ್ತೊಂದು ವಿಶ್ವಕಪ್‌ ಬರಲಿದೆ. ಆ ಟೂರ್ನಿಗೆ ಸಜ್ಜಾಗಲು ನ್ಯೂಜಿಲೆಂಡ್ ಎದುರಿನ ಸರಣಿ ಪ್ರಮುಖ ವೇದಿಕೆಯೆನಿಸಿದೆ. ಭಾರತ ಏಕದಿನ ರ್‍ಯಾಂಕಿಂಗ್‌ನಲ್ಲಿ  ಕೊನೆಯ  ಸ್ಥಾನದಲ್ಲಿದ್ದರೆ ಆಸ್ಟ್ರೇಲಿಯಾ  ಅಗ್ರಸ್ಥಾನದಲ್ಲಿದೆ.

ಕಿವೀಸ್‌ ಪಡೆಗೂ ಅಗ್ನಿಪರೀಕ್ಷೆ: ಇಲ್ಲಿನ ವಾತಾವರಣದ ಸವಾಲು ಎದುರಿಸುತ್ತಿರುವ ನ್ಯೂಜಿಲೆಂಡ್ ರಾಷ್ಟ್ರದ ವನಿತೆಯರಿಗೂ ಭಾರತದ ಎದುರಿನ ಸರಣಿ ಅಗ್ನಿಪರೀಕ್ಷೆ ಎನಿಸಿದೆ. ನ್ಯೂಜಿಲೆಂಡ್‌ ಇದೇ ವರ್ಷ ಇಂಗ್ಲೆಂಡ್‌ ಎದುರು ಏಕದಿನ ಹಾಗೂ ಟ್ವೆಂಟಿ–20 ಸರಣಿಯಲ್ಲಿ ಸೋತಿದೆ. 2013ರಲ್ಲಿ ನಡೆದ  ವಿಶ್ವಕಪ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು.

‘ಭಾರತದ ವಾತಾವರಣಕ್ಕೆ ನಾವು ಹೊಂದಿಕೊಂಡು ಆಡಬೇಕು. ಈ ಸರಣಿ ಗೆಲ್ಲುವುದು ಎರಡೂ ತಂಡಗಳಿಗೂ ಮುಖ್ಯ. ಆದ್ದರಿಂದ ಪ್ರಬಲ ಪೈಪೋಟಿ ಎದುರಾಗುವುದಂತೂ ಖಂಡಿತ’ ಎಂದು ನ್ಯೂಜಿಲೆಂಡ್‌ ತಂಡದ ನಾಯಕಿ ಸೂಜಿ ಬೇಟ್ಸ್‌ ಹೇಳಿದ್ದಾರೆ. ‘ಮೈಸೂರಿನಲ್ಲಿ ಹೋದ ವಾರವಷ್ಟೇ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆಡಿ ಬಂದಿದ್ದೇವೆ. ಮತ್ತೊಂದು ಸವಾಲಿಗೆ ಸಜ್ಜಾಗಿದ್ದೇವೆ. ತವರಿನ ನೆಲದಲ್ಲಿ ಸರಣಿ ಗೆಲ್ಲುವುದು ನಮಗೆ ಬಹು ಮುಖ್ಯ ಎಂದು’  ಭಾರತ ತಂಡದ ಆಟಗಾರ್ತಿ ಜೂಲನ್‌  ಗೋಸ್ವಾಮಿ ಹೇಳಿದ್ದಾರೆ.

ಎರಡೂ ತಂಡಗಳಿಗೆ ಸರಣಿ ಗೆಲುವೊಂದೇ ಪ್ರಮುಖ ಗುರಿಯಾಗಿದೆ. ಆದರೆ, ಈ ಹೋರಾಟದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ವಿಷಯಕ್ಕಿಂತ ಭಾರತಕ್ಕೆ ಮತ್ತಷ್ಟು ಪಂದ್ಯಗಳನ್ನು ಆಡಲು ಅವಕಾಶ ಲಭಿಸಿದ್ದು ಖುಷಿಯ ಸಂಗತಿಯೆಂದೇ ಹೇಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT