ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಪರ ಕಾನೂನು– ಸಿಹಿ, ಕಹಿ

Last Updated 27 ಮೇ 2015, 19:30 IST
ಅಕ್ಷರ ಗಾತ್ರ

ನರೇಂದ್ರ ಮೋದಿಯವರ ಸರ್ಕಾರ ಆಡಳಿತ ವಹಿಸಿಕೊಂಡು ಒಂದು ವರ್ಷ ಪೂರ್ಣವಾಗುತ್ತಿದ್ದಂತೆಯೇ ಆ ಅವಧಿಯಲ್ಲಿ ಅವರು ಕೈಗೊಂಡ ಕ್ರಮಗಳ ಮೌಲ್ಯ ಮಾಪನವೂ ಪ್ರಾರಂಭವಾಗಿದೆ. ಸುಧಾರಣಾ ಕ್ರಮವೆಂದು ಹೇಳಿಕೊಳ್ಳುವ ಯಾವುದೇ ಕ್ರಮದ ಫಲಶ್ರುತಿ  ಅನುಭವಕ್ಕೆ ಬರಬೇಕಾದರೆ ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ ಎಂಬುದು ನಿಜವಾದರೂ ಅಂಥ ಕ್ರಮಗಳನ್ನು ರೂಪಿಸುವ ಸಮಯದಲ್ಲೇ ಎಚ್ಚರ ವಹಿಸಬೇಕಾಗುತ್ತದೆ ಎಂಬುದೂ ಅಷ್ಟೇ ನಿಜ. ಕಾನೂನುಗಳ ಅದರಲ್ಲೂ ಕ್ರಿಮಿನಲ್  ಕಾನೂನುಗಳ ತಿದ್ದುಪಡಿಯ ವಿಷಯದಲ್ಲಂತೂ ಇನ್ನಷ್ಟು ಎಚ್ಚರ ಅಗತ್ಯ.

ಕ್ರಿಮಿನಲ್ ಕಾನೂನುಗಳ ಉದ್ದೇಶ ಮುಖ್ಯವಾಗಿ ಮೂರು. ಅಪರಾಧ ಮಾಡಿದವನಿಗೆ ಶಿಕ್ಷೆ ವಿಧಿಸುವ ಮೂಲಕ ಶಿಕ್ಷೆಯ ಭಯ ಮೂಡಿಸಿ ಇತರರು ಅಪರಾಧವೆಸಗದಂತೆ ತಡೆಯುವುದು. ಅಪರಾಧಿಗೆ ಶಿಕ್ಷೆ ವಿಧಿಸುವ ಮೂಲಕ ಅಪರಾಧಕ್ಕೆ ಒಳಗಾದವನ ಆಕ್ರೋಶವನ್ನು ತಣಿಸುವುದು. ತಮಗೆ ನ್ಯಾಯ ದೊರೆಯುತ್ತದೆ ಮತ್ತು ಅಪರಾಧಿಗಳಿಂದ ತಮಗೆ ರಕ್ಷಣೆಯಿದೆ ಎಂಬ ಭಾವವನ್ನು ಜನತೆಯಲ್ಲಿ ಮೂಡಿಸುವುದು.  ಇದನ್ನು ಸಾಧಿಸಿದಾಗ ಆಡಳಿತದ ಬಗ್ಗೆ ವಿಶ್ವಾಸ ಮೂಡುತ್ತದೆ. ಕಾನೂನಿಗೆ ಸಂಬಂಧಿಸಿದಂತೆ ಮೌಲ್ಯ ಮಾಪನದ ಮಾನದಂಡವೂ ಇದೇ ಆಗುತ್ತದೆ.

ಎಂಬತ್ತರ ದಶಕದಲ್ಲಿ ವರದಕ್ಷಿಣೆಗಾಗಿ ವಧುದಹನ ಪ್ರಕರಣಗಳು ಹಾಗೂ ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಪ್ರಕರಣಗಳು ತಾರಕಕ್ಕೇರಿದಾಗ ವರದಕ್ಷಿಣೆ ಕಿರುಕುಳವನ್ನು ಅಪರಾಧವನ್ನಾಗಿಸುವ 498ಎ ಪ್ರಕರಣವನ್ನು 1986 ರಲ್ಲಿ ಭಾರತ ದಂಡ ಸಂಹಿತೆಗೆ ಸೇರಿಸಲಾಯಿತು. ಅಲ್ಲಿಯವರೆಗೆ ಮಹಿಳೆಗೆ ನೀಡುವ ಹಿಂಸೆಯನ್ನು ಒಂದು ಅಪರಾಧವನ್ನಾಗಿಯಾಗಲೀ ಅವಳ ಮೇಲೆ ನಡೆಯುವ ದೌರ್ಜನ್ಯವನ್ನು ಅವಳ ಮಾನವ ಹಕ್ಕುಗಳ ಉಲ್ಲಂಘನೆಯೆಂದಾಗಲೀ ಪರಿಗಣಿಸಿರಲಿಲ್ಲ ಮತ್ತು ಮಹಿಳೆಯ ಮೇಲೆ ನಡೆಯುವ ಹಿಂಸೆಯನ್ನು ಅಲ್ಲಿಯವರೆಗೆ ಯಾವ ಕಾನೂನೂ ಪರಿಭಾಷಿಸಿರಲಿಲ್ಲ ಎಂಬುದನ್ನು ಮೊದಲಿಗೆ ಗಮನಿಸಬೇಕು.

ವರದಕ್ಷಿಣೆಯ ಸಂಬಂಧದಲ್ಲಿ ಗಂಡ ಹಾಗೂ ಅವನ ಮನೆಯವರು ಕೊಡುವ ಕಿರುಕುಳವನ್ನು ಹಾಗೂ ಅವರಿಂದಾಗುವ ಕೌಟುಂಬಿಕ  ಹಿಂಸೆಯ ವಿರುದ್ಧ ಪ್ರಥಮ ಬಾರಿಗೆ ಈ ಪ್ರಕರಣ ರಕ್ಷಣೆ ನೀಡಿತು. ಈ ಪ್ರಕರಣದ ಪ್ರಕಾರ ಈ ಅಪರಾಧ ಸಂಜ್ಞೇಯವಾದ, ಜಾಮಿನು ಪಡೆಯಲು ಅವಕಾಶವಿಲ್ಲದ ಮತ್ತು ರಾಜಿಮಾಡಿಕೊಳ್ಳಲು ಅವಕಾಶವಿಲ್ಲದ ಅಪರಾಧ. ಹಾಗಾಗಿ ಮಹಿಳೆ ತನ್ನ ದೂರಿನಲ್ಲಿ ಹೆಸರಿಸಿದ ಎಲ್ಲರನ್ನೂ ಕೂಡಲೇ ದಸ್ತಗಿರಿ ಮಾಡಿ ಅನಂತರ ವಿಚಾರಣೆಗೆ ಒಳಪಡಿಸಲು ಅವಕಾಶವಿದೆ.

ಮಹಿಳೆಯ ಮೇಲೆ ಪುರುಷರಿಗಿರುವ ಅಧಿಕಾರವನ್ನು  ಪ್ರಶ್ನಿಸುವ ಮತ್ತು ಅದನ್ನು ವಿರೋಧಿಸುವ ಹಾಗೂ ಅದರಿಂದ ರಕ್ಷಣೆ ಪಡೆಯುವ ಅವಕಾಶ ಪ್ರಥಮ ಬಾರಿಗೆ ಮಹಿಳೆಗೆ ದೊರಯಿತು. ಈ ಪ್ರಕರಣದ ಸೇರ್ಪಡೆ ಮಹಿಳಾ ಹಕ್ಕುಗಳ ಹೋರಾಟಕ್ಕೆ ಸಂದ ಅತಿ ದೊಡ್ಡ ಯಶಸ್ಸು.

ಆದರೆ ಆನಂತರದಲ್ಲಿ ಇದು ಪುರುಷ ವಿರೋಧಿಯೆಂಬ ಹಾಗೂ ಮಹಿಳೆಯರು ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂಬ ಹುಯಿಲು ಒಂದು ಆಂದೋಲನ ರೂಪವನ್ನೇ ತಳೆಯಿತು. ಇದನ್ನು ಕೆಲವೊಂದು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್‌ ಸಹ ಗಮನಿಸಿದೆ ಮತ್ತು ಮಹಿಳೆಯ ದೂರಿನ ಮೇರೆಗೆ ದೂರಿನಲ್ಲಿ ಹೆಸರಿಸಲಾದವರನ್ನೆಲ್ಲ ಪ್ರಾಥಮಿಕ ವಿಚಾರಣೆಯಿಲ್ಲದೆ ದಸ್ತಗಿರಿ ಮಾಡಬಾರದೆಂದು ನಿರ್ದೇಶನ ನೀಡಿದೆ.

ಈಗ, ಈ ಸರ್ಕಾರ ಈ ಅಪರಾಧವನ್ನು ನ್ಯಾಯಾಲಯದ ಅನುಮತಿಯೊಂದಿಗೆ ರಾಜಿ ಮಾಡಿಕೊಳ್ಳಬಹುದಾದ   ಅಪರಾಧವನ್ನಾಗಿ ಮಾಡಲು ಅಗತ್ಯವಾದ ತಿದ್ದುಪಡಿಯನ್ನು ಮಾಡಲು ಹೊರಟಿದೆ. ಈ ಬಗ್ಗೆ ಮಹಿಳಾ ಸಂಘಟನೆಗಳಿಂದ, ಮಹಿಳಾ ನ್ಯಾಯವಾದಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕೆಲವರಿಂದ ದುರುಪಯೋಗವಾಗುತ್ತಿದೆ ಎಂಬ ಕಾರಣಕ್ಕೆ ಶೋಷಿತ ಮಹಿಳೆಯರ ಪರವಾದ ಈ ಕಾನೂನನ್ನು ಸಡಿಲಗೊಳಿಸುವುದು ಖಂಡಿತವಾಗಿ ಸಮರ್ಥನೀಯವಲ್ಲ. ನೆಗಡಿಯಾಯಿತೆಂದು ಮೂಗನ್ನೇ ಕೊಯ್ದರೆ ಹೇಗೆ? ರಾಜಿ ಮಾಡಿಕೊಳ್ಳಲು ಅವಕಾಶ ನೀಡಿದರೆ ಅದನ್ನು ದುರುಪಯೋಗಪಡಿಸಿಕೊಂಡು ಮಹಿಳೆಯನ್ನು ಇನ್ನಷ್ಟು ಅಧೀರಳನ್ನಾಗಿ ಮಾಡುವ ಸಾಧ್ಯತೆ ಇಲ್ಲದಿಲ್ಲ.

ಅದರ ಬದಲಿಗೆ ತನಿಖಾ ಹಂತದಲ್ಲಿ ನುಸುಳುವ ಲೋಪ ದೋಷಗಳ ನಿವಾರಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ 498ಎ ಪ್ರಕರಣ ದುರುಪಯೋಗವಾಗದಂತೆ ತಡೆಯುವ ಕ್ರಮಗಳ ಬಗ್ಗೆ ಚಿಂತನೆ ನಡೆಸಬೇಕು. ರಾಜಿ ಮೂಲಕ ಕೌಟುಂಬಿಕ ಸಾಮರಸ್ಯವನ್ನು ಕಾಪಾಡುವುದಕ್ಕೆ ಆದ್ಯತೆ ನೀಡಬೇಕು ಎಂಬುದು ಸರಿಯಾದರೂ ಮಹಿಳೆಯ ವಿರುದ್ಧ ಅಪರಾಧ ಎಸಗಿದ ಅಪರಾಧಿ ರಾಜಿಮಾಡಿಕೊಳ್ಳುವ ಮೂಲಕ ಶಿಕ್ಷೆಯಿಂದ ಪಾರಾಗಿಬಿಡುವುದು ಎಷ್ಟರಮಟ್ಟಿಗೆ ಸರಿ?      
 
ಮಹಿಳೆಯ ವಿರುದ್ಧ ನಡೆಯುವ ಅತ್ಯಂತ ಹೇಯ ಅಪರಾಧವೆಂದರೆ ಅತ್ಯಾಚಾರ. ದೆಹಲಿಯಲ್ಲಿ ನಡೆದ 'ನಿರ್ಭಯಾ' ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಅದರ ಬೆನ್ನಲ್ಲೇ ಮುಂಬೈನ ಶಕ್ತಿ ಮಿಲ್ಸ್ ಆವರಣದಲ್ಲಿ ನಡೆದ ಅತ್ಯಾಚಾರ ಪ್ರಕರಣ. ಎರಡರಲ್ಲಿಯೂ ಅಪ್ರಾಪ್ತ ವಯಸ್ಕ ಬಾಲಕರು ಭಾಗಿಯಾಗಿದ್ದರು. ಅಂಥ ಹೀನ ಕೃತ್ಯ ಎಸಗಿದ್ದಾಗ್ಯೂ  ಬಾಲಾಪರಾಧಿ ಎಂಬ ಕಾರಣಕ್ಕೆ ಆತನಿಗೆ ವಿಧಿಸಬಹುದಾದ ಶಿಕ್ಷೆ ಕೇವಲ ಮೂರು ವರ್ಷಗಳು! ಈ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು ಮತ್ತು 16 ಮತ್ತು 18ರ ವಯೋಮಾನದಲ್ಲಿರುವ ಬಾಲಕರು ಅತ್ಯಾಚಾರದಂಥ ಹೇಯ ಕೃತ್ಯವನ್ನೆಸಗಿದಾಗ ಅವರನ್ನು ವಯಸ್ಕ ಅಪರಾಧಿಗಳಂತೆಯೇ ಭಾರತ ದಂಡ ಸಂಹಿತೆಯ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲು ಅಗತ್ಯವಾದ ತಿದ್ದುಪಡಿಯನ್ನು ಬಾಲ ನ್ಯಾಯ ಕಾನೂನಿಗೆ ತರಬೇಕೆಂಬ ಒತ್ತಾಯ ತೀವ್ರಗೊಂಡಿತ್ತು. ಈ ಹಿನ್ನೆಲೆಯಲ್ಲಿ ಈಗ ಈ ಕಾನೂನಿಗೆ ತಿದ್ದುಪಡಿ ತರಲಾಗುತ್ತಿದೆ.‌

ಟಿವಿ, ಇಂಟರ್‌ನೆಟ್‌, ಮೊಬೈಲ್‌ಗಳಿಂದಾಗಿ ಈಗಿನ ಮಕ್ಕಳ ಅರಿವಿನ ಪರಿಧಿ ವಿಸ್ತಾರಗೊಂಡಿದೆ ಮತ್ತು ಅವರ ಮಾನಸಿಕ ಪ್ರಬುದ್ಧತೆಯೂ ಹೆಚ್ಚಾಗಿದೆ. ಹಾಗಾಗಿ ಬದಲಾದ ಕಾಲಮಾನಕ್ಕೆ ಸರಿಯಾಗಿ ಅವರು ಮಾಡುವ ಅಪರಾಧಗಳಿಗೆ ಅವರನ್ನು ಸೂಕ್ತವಾಗಿ ಶಿಕ್ಷಿಸದೆ ಇದ್ದಲ್ಲಿ ಅವರು ಸಮಾಜಕ್ಕೆ ಕಂಟಕವಾಗುವುದೇ ಹೆಚ್ಚು. ಹಾಗಾಗಿ ಈ ಕಾನೂನಿಗೆ ತರಲು ಉದ್ದೇಶಿಸಿರುವ ತಿದ್ದುಪಡಿ ಸ್ವಾಗತಾರ್ಹವಾದದ್ದು.      

ನಮ್ಮ ಸಂವಿಧಾನ ಸ್ತ್ರೀಪುರುಷ ಸಮಾನತೆಯ ತತ್ವವನ್ನು ಪ್ರತಿಪಾದಿಸಿದರೂ ನಮ್ಮ ಅನೇಕ ಕಾನೂನುಗಳಲ್ಲಿ ಇಂದಿಗೂ ಈ ತಾರತಮ್ಯ ಉಳಿದುಕೊಂಡು ಬಂದಿದೆ. ಮಹಿಳೆ ಎಂಬ ಕಾರಣಕ್ಕೇ ಅವಳು ಅವಕಾಶಗಳಿಂದ ವಂಚಿತಳಾಗಬೇಕಾಗಿ ಬರುತ್ತದೆ. ಕಾರ್ಖಾನೆಗಳ ಅಧಿನಿಯಮಕ್ಕೆ ತಿದ್ದುಪಡಿ ಮಾಡುವ ಮೂಲಕ ಇದರಲ್ಲಿರುವ ತಾರತಮ್ಯವನ್ನು ನಿವಾರಿಸುವ ಪ್ರಯತ್ನ ಮಾಡಲಾಗಿದೆ -ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶವಿರಬೇಕು ಮತ್ತು ಅದಕ್ಕೆ ಅಗತ್ಯವಾದ ಸುರಕ್ಷಾ ಕ್ರಮಗಳನ್ನು ಹಾಗೂ ಕೆಲಸದ ನಂತರ ಅಗತ್ಯವಿರುವ ಸಾರಿಗೆ ವ್ಯವಸ್ಥೆಯನ್ನು ಮಾಡಬೇಕು. ಈ ಅವಕಾಶ ಕಲ್ಪಿಸುವ ಈ ಪ್ರಸ್ತಾವಿತ ತಿದ್ದುಪಡಿ ಮಹಿಳಾ ಸಬಲೀಕರಣದ ದೃಷ್ಟಿಯಿಂದ ಮಹತ್ವದ್ದಾಗುತ್ತದೆ.

ಮಹಿಳೆ ಎಂಬ ಕಾರಣಕ್ಕೆ ಅವಳಿಗೆ ರಾತ್ರಿ ಪಾಳಿಯನ್ನು ನಿರಾಕರಿಸುವುದು ಸ್ತ್ರೀ ಪುರುಷ ಸಮಾನತೆಯ ಸಂವಿಧಾನದ ಅನುಚ್ಛೇದದ ಉಲ್ಲಂಘನೆಯಾಗುತ್ತದಾದ್ದರಿಂದ ಈ ತಿದ್ದುಪಡಿ ಸಂವಿಧಾನದ ಸಮಾನತೆಯ ಆಶಯಕ್ಕೆ ಪೂರಕವಾಗಿದೆ.  ಗರ್ಭಿಣಿಯರನ್ನು ಹಾಗೂ ಅಂಗವಿಕಲ ವ್ಯಕ್ತಿಗಳನ್ನು ಚಲನೆಯಲ್ಲಿರುವ ಯಂತ್ರಗಳ ಬಳಿ ಕೆಲಸಕ್ಕೆ  ನಿಯೋಜಿಸಬಾರದು- ಎಂದು ವಿಧಿಸುವ ತಿದ್ದುಪಡಿಯೂ ಮಹಿಳೆಯರ ಸಂಬಂಧದಲ್ಲಿ ವಿಶೇಷ ಉಪಬಂಧ ಕಲ್ಪಿಸಲು ಸಂವಿಧಾನದ 15(3)ನೇ ಅನುಚ್ಛೇದದಲ್ಲಿ ಅವಕಾಶವಿರುವುದರಿಂದ ಸಂವಿಧಾನದ ಆಶಯಕ್ಕೆ ಪೂರಕವಾಗಿದೆ. ಹಾಗಾಗಿ ಇವೆರಡೂ ಸ್ವಾಗತಾರ್ಹ ತಿದ್ದುಪಡಿಗಳಾಗಿವೆ.      

ಯಾವುದೇ ಮಹಿಳಾ ಪರವಾದ ಕಾನೂನು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡು ಅದರ ಆಶಯ ನೆರವೇರಬೇಕಾದರೆ ಕಾನೂನನ್ನು ಅನ್ವಯಿಸುವ, ತನಿಖೆ ನಡೆಸುವ ಮತ್ತು ನ್ಯಾಯ ನೀಡಿಕೆಯ ಎಲ್ಲ ಹಂತಗಳಲ್ಲಿ ನಿಷ್ಪಕ್ಷಪಾತವಾದ ಸಂವೇದನಾಶೀಲತೆಯಿರಬೇಕು ಹಾಗೂ  ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ನೋಡುವ ಸಮಾಜದ ಮನೋಧರ್ಮ

ಬದಲಾಗಬೇಕು. 
  
ಲೇಖಕಿ: ಕಾನೂನು ಸಲಹೆಗಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT