ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸಂವೇದನೆಯ ಸಶಕ್ತ ಅಭಿವ್ಯಕ್ತಿ ‘ಸೂರ್ಯಾಸ್ತ’

ರಂಗಭೂಮಿ
Last Updated 20 ಮಾರ್ಚ್ 2016, 19:38 IST
ಅಕ್ಷರ ಗಾತ್ರ

 ಮಹಿಳೆಯೊಬ್ಬಳ ಅಸೀಮ ತಳಮಳ-ತಲ್ಲಣಗಳಿಗೆ ಕನ್ನಡಿ ಹಿಡಿದ ಉತ್ತಮ ಪ್ರಯೋಗ ‘ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ’ ಹೃದಯಸ್ಪರ್ಶಿಯಾಗಿದ್ದು, ಪ್ರೇಕ್ಷಕರ ಮನದೊಳಗೆ ಗಾಢಮುದ್ರೆಯೊತ್ತಿ ಮೆಚ್ಚುಗೆ ಗಳಿಸಿತು. ಮೂಲ ಸುರೇಂದ್ರವರ್ಮರ ಹಿಂದಿ ನಾಟಕವನ್ನು ಸಿದ್ದಲಿಂಗ ಪಟ್ಟಣಶೆಟ್ಟಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇತ್ತೀಚೆಗೆ ಇದು ಕೆ.ಎಚ್. ಕಲಾಸೌಧದಲ್ಲಿ ನಡೆದ ‘ಶ್ರೀ ವಿವೇಕಾನಂದ ಕಲಾಕೇಂದ್ರ’   ಏರ್ಪಡಿಸಿದ್ದ ‘ರಂಗಸಂಭ್ರಮ’ ನಾಟಕೋತ್ಸವದಲ್ಲಿ ‘ದೃಶ್ಯಕಾವ್ಯ’ ತಂಡದಿಂದ ಪ್ರದರ್ಶಿತವಾಯಿತು.

ತಂಡದ ಈ ನಾಟಕಾಭಿನಯಕ್ಕೆ ಮುಂಬೈ ಕನ್ನಡ ನಾಟಕೋತ್ಸವದಲ್ಲಿ ಅತ್ಯುತ್ತಮ ನಾಟಕದ ಗರಿಮೆಯೊಂದಿಗೆ, 12 ಪ್ರಥಮ ಪ್ರಶಸ್ತಿಗಳು ಲಭಿಸಿದ ಹೆಗ್ಗಳಿಕೆಯಿದೆ. ಪ್ರತಿಯೊಬ್ಬ ನಟರೂ ಭಾವಪೂರ್ಣವಾಗಿ ಅಭಿನಯಿಸಿರುವ ಈ ನಾಟಕವನ್ನು ಆಕರ್ಷಕ ವಿನ್ಯಾಸದೊಂದಿಗೆ ಸಿ. ನಂಜುಂಡೇಗೌಡ ಮನೋಜ್ಞವಾಗಿ ನಿರ್ದೇಶಿಸಿದ್ದಾರೆ.

ಒಂದು ರಾತ್ರಿಯಲ್ಲಿ ನಡೆಯುವ ಘಟನೆಯ ಈ ನಾಟಕದ ಕಥಾವಸ್ತು ಮನಕಲಕುವಂತಿದ್ದು ಅಷ್ಟೇ ಸೂಕ್ಷ್ಮ  ಸಂವೇದನೆಯಿಂದ ನೋಡುಗರನ್ನು ಹಿಡಿದು ಕೂರಿಸುತ್ತದೆ. ಸುಮಾರು 10ನೇ ಶತಮಾನದಲ್ಲಿ ಮಲ್ಲರಾಜ್ಯದಲ್ಲಿ ನಡೆಯುವ ಒಂದು ನಿಯೋಗ ಪದ್ಧತಿಯ ಪ್ರಕರಣದ ಮೇಲೆ ಕೇಂದ್ರೀಕರಿಸುವ ನಾಟಕ ಇದು. ಇಡೀ ಮಹಿಳಾ ಸಮುದಾಯದ ಮನಸ್ಸಿನ ಒಳಪದರಗಳನ್ನು ತೆರೆಯುತ್ತ ಅವಳ ದುಃಖ ದುಮ್ಮಾನ, ಆಶೋತ್ತರಗಳ ಧ್ವನಿಯಾಗಿ ಹೊರಹೊಮ್ಮುತ್ತದೆ.

ರಾಜ ಒಕ್ಕಾಕ ಬಾಲ್ಯದಲ್ಲೇ ಹೆತ್ತವರನ್ನು ಕಳೆದುಕೊಂಡು, ಗುರುಕುಲದಲ್ಲಿ ವಿದ್ಯಾಭ್ಯಾಸ ಪಡೆದು ಅನಾಥಪ್ರಜ್ಞೆಯಿಂದ ಬಳಲುತ್ತಿದ್ದ ಯುವಕ. ತನ್ನಲ್ಲಿ ಪುರುಷತ್ವವಿಲ್ಲವೆಂಬ ನೋವನ್ನು ಅವನು ರಾಜಪುರೋಹಿತನಲ್ಲಿ ತೋಡಿಕೊಂಡಿದ್ದರೂ, ಅದಕ್ಕೆ ಮದುವೆಯೊಂದೇ ಮದ್ದೆಂದು ಅವನಿಗೆ ಬಡ ಹುಡುಗಿ ಶೀಲವತಿಯೊಂದಿಗೆ ಮದುವೆ ಮಾಡಿಸಲಾಗುತ್ತದೆ.

ಸತತ ಐದು ವರ್ಷಗಳು ರಾಜನಿಗೆ ಸಂತಾನವಾಗದಿದ್ದರೆ, ರಾಣಿಯು ತಾನು ಇಚ್ಛಿಸಿದ ನಾಗರಿಕನಿಂದ ಮಗುವನ್ನು ‘ನಿಯೋಗ’ ಪದ್ಧತಿಯ ಮೂಲಕ ಪಡೆಯುವ ರೂಢಿ ಅಂದಿನ ಕಾಲದಲ್ಲಿ ಜಾರಿಯಲ್ಲಿತ್ತು. ಅದರಂತೆ ಓಕ್ಕಾಕನಿಂದ ರಾಣಿಗೆ ಮಕ್ಕಳಾಗದೇ ಹೋದಾಗ ಮಂತ್ರಿ ಪರಿಷತ್ತು, ಗರ್ಭಸಿದ್ಧಿಗಾಗಿ ರಾಣಿ ‘ಧರ್ಮನಟಿ’ಯಾಗಿ, ಒಂದು ರಾತ್ರಿಗೆ ಉಪಪತಿಯನ್ನು ಆರಿಸಿಕೊಳ್ಳಬೇಕೆಂದು ತೀರ್ಮಾನಿಸುತ್ತದೆ. ಅದರಂತೆ ರಾಣಿ ನೆರೆದ ನಾಗರಿಕರಲ್ಲಿ ತನ್ನ ಹಳೆಯ ಪ್ರೇಮಿ ಪ್ರತೋಷನನ್ನು ಆಯ್ಕೆ ಮಾಡಿಕೊಂಡು ಅವನೊಡನೆ ರಾತ್ರಿ ಕಳೆಯುವ ಸನ್ನಿವೇಶದ ಸುತ್ತ ನಾಟಕವನ್ನು ಹೆಣೆಯಲಾಗಿದೆ.

ಕಥೆಯ ಅಂತರಾಳ ಮೇಲುನೋಟಕ್ಕೆ ಕಂಡಷ್ಟು ಸರಳ ಅಲ್ಲ. ಎರಡು ಜೀವಗಳ ಮಾನಸಿಕ ಯುದ್ಧ, ಹೈರಾಣಾಗುವ ವೇದನೆಯ ಪರಾಕಾಷ್ಠೆ, ಸ್ಫೋಟಿಸುವ ಮನದುಮ್ಮಳ-ತಳಮಳ ಹೇಳತೀರದ್ದು. ಪತಿಯೇ ಪರದೈವವೆಂದು ನಂಬಿದ್ದ ಪತಿವ್ರತೆ, ಊಹಿಸಿಕೊಳ್ಳಲೂ ಆಗದಂಥ ಪರಪುರುಷನ ಸಂಗಕ್ಕೆಳೆಸುವ ಮನಸ್ಸೊಪ್ಪದ ಕೃತ್ಯಕ್ಕೆ ಮುನ್ನುಗ್ಗಬೇಕಾದ  ಅನಿವಾರ್ಯದಲ್ಲಿ ಪಡುವ ಸಂಕಟವನ್ನು ನಾಟಕದಲ್ಲಿ ಬಹು ಸಮರ್ಥವಾಗಿ ಕಟ್ಟಿಕೊಡಲಾಗಿದೆ.

ಪ್ರೀತಿಸುವ ಹೆಂಡತಿ ಪರರ ಪಾಲಾಗುವುದನ್ನು ನೆನೆಸಿಕೊಳ್ಳಲಾರದೆ ಇಡೀ ರಾತ್ರಿ ರಾಜ, ವಿಕ್ಷಿಪ್ತತೆಯಿಂದ ಕೊರಗುವ ಅವನ ಮನೋತಲ್ಲಣಗಳನ್ನು ಬಹು ಪರಿಣಾಮಕಾರಿಯಾಗಿ ಸುಂದರವಾದ ರೂಪಕ-ಉಪಮೆಗಳ ಮೂಲಕ ಸೆರೆ ಹಿಡಿಯಲಾಗಿದೆ. ಇಲ್ಲಿನ ಹೆಣ್ಣು ಗಂಡುಗಳ ಮನಸ್ಥಿತಿಯನ್ನು ಯಾರಾದರೂ ಸ್ವತಃ ಅನುಭವಿಸಿ, ಕಲ್ಪಿಸಿ ನೋವನ್ನು ಆವಾಹಿಸಿಕೊಂಡಾಗಷ್ಟೇ ಆ ನೋವಿನ ತೀವ್ರತೆ ಅರಿವಾಗುವುದು.

ಉಸಿರು ಬಿಗಿಹಿಡಿವ, ನಿಟ್ಟುಸಿರು ಧುಮ್ಮಿಕ್ಕುವ ಮನದೊಳಗು ಕಲಕಿಬಿಡುವಂಥ ಈ ಸನ್ನಿವೇಶ ಅಷ್ಟೇ ಆಘಾತದ ಓಘದಲ್ಲಿ ಹೃದಯವನ್ನಾವರಿಸುವುದು. ಇದೇ ನಾಟಕದ ಕೇಂದ್ರಬಿಂದು. ಇಚ್ಛುಕರಿಗೆ ‘ನಿಯೋಗ ರಾತ್ರಿ’ಗೆ ಆಹ್ವಾನ ನೀಡುವ ಸುದ್ದಿ ಡಂಗುರವಾದ ಏಳು ರಾತ್ರಿಗಳಿಂದ ಈ ಗಂಡ ಹೆಂಡಿರಿಬ್ಬರಿಗೂ ನಿದ್ದೆಯಿಲ್ಲ. ತಳಮಳದ ಮಹಾಪೂರದಲ್ಲೇ, ಒಲ್ಲದ ಮನದಿಂದ ಒತ್ತಾಯಕ್ಕೆ ಜಯಮಾಲೆ ಹಿಡಿದುಹೊರಟ ರಾಣಿ, ಅನಿರೀಕ್ಷಿತವಾಗಿ ಇಚ್ಛುಕನಾಗಿ ಬಂದ ಪ್ರತೋಷನನ್ನು ಆರಿಸಿಕೊಂಡು, ಇದುವರೆಗೂ ತಾನು ಕಾಣದ ಸುಖವನ್ನು ಮೈಮನಗಳಲ್ಲಿ ತುಂಬಿ ಕೊಳ್ಳುತ್ತಾಳೆ.

ಸೂರ್ಯೋದಯವಾದೊಡನೆ ಅರಮನೆಗೆ ಹಿಂತಿರುಗಿ ಬಂದವಳಿಗೆ ಜಗತ್ತೆಲ್ಲ ಪ್ರಣಯಮಯವಾಗಿ ಕಾಣುತ್ತದೆ. ಮಂತ್ರಿ, ಸೇನಾಧಿಪತಿ ಮತ್ತು ರಾಜಪುರೋಹಿತರನ್ನು, ‘ನಿಮ್ಮ ರಾತ್ರಿ ಹೇಗಿತ್ತು?’ ಎಂದು ಅಮಲಿನಲ್ಲಿ ಪ್ರಶ್ನಿಸುವ ಸನ್ನಿವೇಶ ನಿಜಕ್ಕೂ ಮಾರ್ಮಿಕವಾಗಿತ್ತು. ಅಷ್ಟಕ್ಕೇ ಬಿಡದೆ, ಕಣ್ಮುಚ್ಚಿಕೊಂಡು ಪರಪುರುಷನಿಗೆ ಮೈ ಒಪ್ಪಿಸಿ, ಮನದೊಳಗೆ ಮುದ್ದಾದ ಮಗುವಿನ ಚಿತ್ರವನ್ನು ಕಲ್ಪಿಸಿಕೊಳ್ಳಿರೆಂದು ತನ್ನನ್ನು ನಿಯೋಗಕ್ಕೊಪ್ಪಿಸಿದ ಆ ಅಧಿಕಾರಿಗಳನ್ನು, ರಾಣಿ, ತರಾಟೆಗೆ ತೆಗೆದುಕೊಳ್ಳುವ ವ್ಯಂಗ್ಯ, ವಿಡಂಬನೆಯ ಕೆಣಕು ನುಡಿಗಳಾಡುವ ಗಂಭೀರ ದೃಶ್ಯವಂತೂ ಮನನೀಯವಾಗಿತ್ತು.

ಇತರರಿಗೆ ಬೋಧಿಸುವ ಅವರುಗಳು ತಮ್ಮ ವೈಯಕ್ತಿಕ ವಿಷಯ ಬಂದಾಗ ಮೌನದಿಂದ ಪೆಚ್ಚಾಗುವ ಸಂದರ್ಭ ಸಮಾಜದ ವಿಪರ್ಯಾಸಕ್ಕೆ ಹಿಡಿದ ಕನ್ನಡಿಯಂತ್ತಿತ್ತು. ರಾಣಿ ಶೀಲವತಿಯ ಸಿಡಿದೇಳುವ ಬಿರುಮಾತುಗಳು ಇಡೀ ಪುರುಷಕುಲಕ್ಕೇ ಸವಾಲಿನಂತ್ತಿದ್ದುದು ಗಮನಾರ್ಹವೆನಿಸಿತು. ‘ಸ್ತ್ರೀತ್ವದ ಸಾರ್ಥಕತೆ ಮಾತೃತ್ವದಲ್ಲಿಲ್ಲ, ಅದು ಕೇವಲ ಪುರುಷನೊಂದಿಗೆ ಒಂದಾಗುವ ಸುಖದಲ್ಲಿದೆ.

ಸಂತಾನ ಕೇವಲ ಅದರ ಒಂದು ಉಪ ಉತ್ಪಾದನೆ ಮಾತ್ರ’ ಎಂಬ ಕಠೋರ ಸತ್ಯ ನುಡಿಯಬಲ್ಲ ಈ ಹೆಣ್ಣಿನ ದಿಟ್ಟ ಮಾತುಗಳ ಶಕ್ತಿ, ಸಂಭಾಷಣೆಯ ಸ್ವಾರಸ್ಯವನ್ನು ನಾಟಕ ವೀಕ್ಷಿಸಿಯೇ ಅದರ ಗಟ್ಟಿ ಅನುಭವವನ್ನು ಮೊಗೆದುಕೊಳ್ಳಬೇಕು. ನಾಟಕದುದ್ದಕ್ಕೂ ಅಂಥ ಅದ್ಭುತ ಸಂಭಾಷಣೆಗಳು! ತನ್ನದಲ್ಲದ ತಪ್ಪಿಗೆ ನೋವನ್ನು ಅನುಭವಿಸುವ ಓಕ್ಕಾಕನ ಬಗ್ಗೆಯೂ ನೋಡುಗರಲ್ಲಿ ಅನುಕಂಪ ಸ್ರವಿಸುತ್ತದೆ. ಇಂಥ ಒಂದು ಶಕ್ತಿಯುತವಾದ ಕೃತಿಯನ್ನು ಅಷ್ಟೇ ಪರಿಣಾಮಕಾರಿಯಾಗಿ ಕಡೆದು ನಿಲ್ಲಿಸಿದ ತಂಡದ ಸಮಷ್ಟಿಗೂ ಮೆಚ್ಚುಗೆ ಅಭಿನಂದನೆ ಸಲ್ಲಲೇಬೇಕು.

ಪ್ರತಿ ಸನ್ನಿವೇಶ, ಭಾವಗಳಿಗನುಗುಣವಾಗಿ ಹಿನ್ನೆಲೆಯಲ್ಲಿ ಮೂಡಿಬರುತ್ತಿದ್ದ ವಿವಿಧ ರಾಗಾಲಾಪ, ಸಂಗೀತ (ರಾಮಚಂದ್ರ ಹಡಪದ್) ನಾಟಕದ ಪರಿಣಾಮವನ್ನು ಉದ್ದೀಪಿಸಿತು. ಶೀಲವತಿಯಾಗಿ ಸಿತಾರ ಭಾವಾವೇಶದಿಂದ ನಟಿಸಿ, ಪಾತ್ರವೇ ತಾವಾಗಿ ಅತ್ಯುಚ್ಛ ಅಭಿನಯ ನೀಡಿ ಮೆಚ್ಚುಗೆಗೆ ಪಾತ್ರರಾದರು. ಓಕ್ಕಾಕನಾಗಿ ಅಭಿನಯಿಸಿದ ಟಿ.ಆರ್. ಮಹೇಶ್ ಕೂಡ ಸರಿಸಮಾನದ ಪ್ರತಿಭೆ, ಭಾವಪೂರ್ಣತೆಯಿಂದ ಉತ್ಕೃಷ್ಟ ಅಭಿನಯ ನೀಡಿದರು.

ಅಮಾತ್ಯ-ಎಸ್.ಎಂ.ಯಶವಂತ್ ಸ್ಫುಟ ಮಾತುಗಳಿಂದ, ಉತ್ತಮ ಆಂಗಿಕಾಭಿನಯದಿಂದ ಗಮನ ಸೆಳೆದರು. ಮಹತ್ತರಿಕಳಾಗಿ ಸವಿತಾ, ಸಹಜತೆಯ ಉತ್ತಮ ನಟನೆ ತೋರಿದರು. ಪ್ರತೋಷನಾಗಿ ರವಿಕಿರಣ್ ಪ್ರೇಮಿಯ ಸಾಕಾರತೆ ಮೂಡಿಸಿದರೆ, ಉಳಿದ ಪಾತ್ರಗಳಲ್ಲಿ ರೋಷನ್, ಎಸ್.ಅನಿಲ್‌ಕುಮಾರ್, ಪಲ್ಲವಿ ಮತ್ತು ಎಸ್.ಕಾರ್ತಿಕ್ ಗಿರೀಶ್ ಚೆನ್ನಾಗಿ ನಟಿಸಿದರು.

ರಂಗಸಜ್ಜಿಕೆ, ಪರಿಕರ ಉತ್ತಮ ಆವರಣ ನಿರ್ಮಿಸಿದ್ದರೆ, ಮಂಜುನಾರಾಯಣರು ನಿರ್ವಹಿಸಿದ ಬೆಳಕು, ಸಿತಾರ-ವಸ್ತ್ರವಿನ್ಯಾಸ, ಪ್ರಸಾಧನ ಮಾಡಿದ ಜೈರಾಜರ ಶ್ರಮ ಸಾರ್ಥಕವೆನಿಸಿತ್ತು. ನಾಟಕದ ಶ್ರೇಷ್ಠತೆಗೆ ತಮ್ಮ ಪ್ರತಿಭೆ ಧಾರೆಯೆರೆದ ನಂಜುಂಡೇಗೌಡರ ಅಚ್ಚುಕಟ್ಟಾದ ಸುಂದರ ವಿನ್ಯಾಸ ಮತ್ತು ಸೂಕ್ಷ್ಮ ನಿರ್ದೇಶನ ನೋಡುಗರ ಮನ್ನಣೆ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT