ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಂದ ಸಂಚಾರ ನಿರ್ವಹಣೆ

ಸ್ವಯಂಪ್ರೇರಿತವಾಗಿ ಸೇವೆ ಸಲ್ಲಿಸುತ್ತಿರುವ ಗೃಹಿಣಿಯರ ತಂಡ
Last Updated 29 ನವೆಂಬರ್ 2015, 19:47 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ಬಡಾವಣೆ ರಸ್ತೆಯ ಸಂಚಾರ ದಟ್ಟಣೆ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಂಡಿರುವ ಮಹಿಳೆಯರು, ದೇವರ ಬೀಸನಹಳ್ಳಿಯ ಬೆಳ್ಳಂದೂರು ಜಂಕ್ಷನ್‌ ಬಳಿ ಸಂಚಾರ ನಿರ್ವಹಣೆ ಮಾಡುವ ಮೂಲಕ  ಹುಬ್ಬೇರಿಸುವಂತೆ ಮಾಡಿದ್ದಾರೆ. ಸಾಫ್ಟ್‌ವೇರ್‌ ಕಂಪೆನಿ ಉದ್ಯೋಗಿಗಳು, ಗೃಹಿಣಿಯರು ಸೇರಿ ತಂಡ ರಚಿಸಿಕೊಂಡು ಸ್ವಯಂಪ್ರೇರಿತವಾಗಿ ಈ  ಕೆಲಸ ಮಾಡುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ದೇವರಬಿನಹಳ್ಳಿಯ ನಿವಾಸಿ ಸೀಮಾ, ‘ಬೆಳ್ಳಂದೂರು ಜಂಕ್ಷನ್‌ ಸಮೀಪದ ಪಾಸ್‌ಪೋರ್ಟ್ ಕಚೇರಿ ಬಳಿ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ಪ್ರತಿನಿತ್ಯ ಹೆಚ್ಚಿನ ದಟ್ಟಣೆ ಉಂಟಾಗುತ್ತದೆ. ಇದರಿಂದಾಗಿ ನಿತ್ಯ ಓಡಾಟಕ್ಕೆ ತುಂಬಾ ತೊಂದರೆಯಾಗುತ್ತದೆ’ ಎಂದರು.

‘ದಟ್ಟಣೆಯಿಂದಾಗಿ ಪ್ರತಿದಿನ ಕೆಲಸಕ್ಕೆ ಹೋಗಲು ತಡವಾಗುತ್ತಿತ್ತು. ಮಕ್ಕಳಿಗೂ ಸರಿಯಾದ ಸಮಯಕ್ಕೆ ಶಾಲೆಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಪೊಲೀಸರ ಅನುಮತಿ ಪಡೆದು, ನಾವೇ ಸಂಚಾರ ನಿರ್ವಹಣೆಗೆ ಮುಂದಾದೆವು’ ಎಂದು ತಿಳಿಸಿದರು.

‘ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಚಿಂತನೆ ನಡೆಸಿದಾಗ ಈ ಉಪಾಯ ಮೂಡಿತು. ಆಗ ಈ ಸಮಾನ ಮನಸ್ಕರ ತಂಡ ರೂಪುಗೊಂಡಿತು. ಎಲ್ಲರೂ ಸೇರಿ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿಕೊಂಡಿದ್ದೇವೆ. ಅದಲ್ಲಿ 51 ಮಂದಿ ಸದಸ್ಯರಿದ್ದೇವೆ’ ಎಂದರು.

‘ಪ್ರತಿದಿನ ನಾಲ್ವರು ಬೆಳಿಗ್ಗೆ 7.30ರಿಂದ ರಾತ್ರಿ 9 ಗಂಟೆವರೆಗೆ ಪಾಳಿಯಂತೆ ಸಂಚಾರ ನಿರ್ವಹಣೆ ಮಾಡುತ್ತಿದ್ದೇವೆ. 8 ದಿನದಿಂದ ಈ ಕೆಲಸ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ರಸ್ತೆಯಲ್ಲಿ ಸಿಗ್ನಲ್ ದೀಪಗಳಿಲ್ಲ. ಸಂಚಾರ ಪೊಲೀಸರನ್ನೂ ನಿಯೋಜಿಸಿಲ್ಲ. ಹೀಗಾಗಿ ವಾರದಲ್ಲಿ ಎರಡು ಮೂರು ಅಪಘಾತಗಳು ಸಂಭವಿಸುತ್ತವೆ. ಪೊಲೀಸ್ ಇಲಾಖೆ ಈ ರಸ್ತೆಗೆ ಸಂಚಾರ ಪೊಲೀಸರನ್ನು ನಿಯೋಜಿಸಿ, ಸಿಗ್ನಲ್‌ ದೀಪ ಅಳವಡಿಸಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT