ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯ ಅಳುವೇ ವಾಹಿನಿಗಳ ಬಂಡವಾಳ

ಸಂಸ್ಕೃತ ವಿ.ವಿ ವಿಚಾರ ಸಂಕಿರಣದಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಆಕ್ರೋಶ
Last Updated 17 ಸೆಪ್ಟೆಂಬರ್ 2014, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಸುದ್ದಿ ವಾಹಿನಿಗಳು ಸಂಕಷ್ಟಕ್ಕೆ ಸಿಲುಕಿದ ಮಹಿಳೆಯರ ಅಳುವನ್ನೇ ಬಂಡವಾಳವನ್ನಾಗಿಸಿ­ಕೊಳ್ಳು­ತ್ತಿವೆ. ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಮಹಿಳೆ­ಯರನ್ನು ಮಾನಸಿಕವಾಗಿ ಕೊಲ್ಲುತ್ತಿವೆ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಆಕ್ರೋಶ ವ್ಯಕ್ತಪಡಿಸಿದರು.

ಗಿರಿನಗರದಲ್ಲಿರುವ ‘ಅಕ್ಷರಂ’ನಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಆಯೋಜಿಸಿದ್ದ ‘ಸಂಸ್ಕೃತ ಸಾಹಿತ್ಯದಲ್ಲಿ ಬಿಂಬಿತವಾದ ಮಹಿಳೆಯರ ಪಾತ್ರ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪುರುಷ ಪ್ರಧಾನ ಸಮಾಜದಲ್ಲಿ ಬದುಕುತ್ತಿದ್ದರೂ ಕೊನೆಪಕ್ಷ ತನಗೆ ಅವ­ರಿಂದ ರಕ್ಷಣೆ ಸಿಗುತ್ತಿದೆ ಎಂಬ ವಿಶ್ವಾಸ­ದಲ್ಲಿ ಮಹಿಳೆ ಇದ್ದಳು. ಆದರೆ, ಈಗಿನ ಪರಿಸ್ಥಿತಿ ಗಮನಿಸಿದರೆ ಭ್ರೂಣದಲ್ಲಿಯೇ ಆಕೆಯನ್ನು ಕೊಲೆ ಮಾಡಲಾಗುತ್ತಿದೆ. ಪ್ರಪಂಚಕ್ಕೆ ಕಾಲಿಟ್ಟ ಕ್ಷಣದಿಂದಲೇ ನರಕಯಾತನೆ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆ­ಯರನ್ನು ರಕ್ಷಿಸಿ ಪುರುಷರೇ ಎಂದು ಬೇಡಿಕೊಳ್ಳುವ ಪರಿಸ್ಥಿತಿ ಉದ್ಭವ­ವಾಗಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಮಾಜಿ ಶಾಸಕಿ ಡಾ.ಎಸ್‌.ಆರ್‌.­ಲೀಲಾ, ‘ವೇದ, ಉಪನಿಷತ್‌­ಗಳಲ್ಲಿ ಮಹಿಳೆ­ಯರನ್ನು ಅತ್ಯಂತ ಗೌರವದಿಂದ ಚಿತ್ರಿಸಲಾಗಿದೆ. ಅಲ್ಲದೇ, ಪುರುಷನಿಗೆ ಸರಿಸಮನಾಗಿ ಬಿಂಬಿ­ಸ­ಲಾಗಿದೆ. ಹೆಣ್ಣಿನ ಬಗ್ಗೆ ಅದ್ಭುತ ಕಲ್ಪನೆಗಳಿವೆ. ಒಂದು ಬಟಾಣಿಯ ಎರಡು ಭಾಗಗಳಿದ್ದಂತೆ ಎಂದು ವಿವರಿಸ­ಲಾಗಿದೆ. ಆದರೆ, ಈಗ ಮಹಿಳೆಯನ್ನು ಕೀಳಾಗಿ ಚಿತ್ರಿಸಲಾಗು­ತ್ತಿದೆ. ತಾರತಮ್ಯ ನೀತಿ ಅನುಸರಿಸಲಾಗು­ತ್ತಿದೆ’ ಎಂದು ವಿಶ್ಲೇಷಿಸಿದರು.

‘ನಮ್ಮ ಧರ್ಮ, ನಮ್ಮ ಭಾಷೆ, ನಮ್ಮ ಸಂಪ್ರದಾಯವನ್ನೇ ಕೀಳಾಗಿ ನೋಡುವ ಮನೋಭಾವನೆ ಕೆಲವರಲ್ಲಿದೆ. ಈ ಅಂಶಗಳನ್ನು ಮನಸ್ಸಿನಿಂದ ಕಿತ್ತುಹಾಕ­ಬೇಕು. ಅದಕ್ಕಾಗಿ ಬೇರೆ ಧರ್ಮ, ಬೇರೆ ಭಾಷೆಗಳನ್ನು ಅಧ್ಯಯನ ಮಾಡಬೇಕು. ಅವುಗಳೊಂದಿಗೆ ಹೋಲಿಕೆ ಮಾಡಿ ನೋಡಬೇಕು’ ಎಂದರು.

ಸಂಸ್ಕೃತ ವಿವಿ ಪ್ರಶಾಸನ ಸಮಿತಿ ಸದಸ್ಯ ಪ್ರೊ.ಕೆ.ಇ.ರಾಧಾಕೃಷ್ಣ ಅವರು, ‘ಸ್ವಯಂರಕ್ಷಣೆಗಾಗಿ ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸಿಕೊಡಲಾಗುತ್ತಿದೆ. ಅದೊಂದು ಒಳ್ಳೆಯ ನಿರ್ಧಾರ. ಅದಕ್ಕಿಂತ ಮುಖ್ಯವಾಗಿ ಮಹಿಳೆಯರಿಗೆ ಗೌರವ ನೀಡುವ ಬಗ್ಗೆ ಗಂಡು ಮಕ್ಕಳಿಗೆ ಮನೆಯಲ್ಲಿ ಪಾಠ ಹೇಳಿಕೊಡಬೇಕು’ ಎಂದು ತಿಳಿಸಿದರು. ಮೂರು ದಿನಗಳ ಈ ವಿಚಾರ ಸಂಕಿರಣದಲ್ಲಿ ವಿವಿಧ ರಾಜ್ಯಗಳ 180 ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡಿ­ದ್ದರು. 77 ಮಂದಿ ಪ್ರಬಂಧ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT