ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಸೈನಿಕನ ಮೇಲೆ ಎಸ್‌ಐ ಹಲ್ಲೆ

ಆಂಬುಲೆನ್ಸ್‌ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಕ್ಕೆ ದರ್ಪ
Last Updated 3 ಮಾರ್ಚ್ 2015, 19:50 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕಾವೇರಿ ಜಂಕ್ಷನ್‌ ಬಳಿ ಮಂಗಳವಾರ ವಾಹನ ದಟ್ಟಣೆಯಲ್ಲಿ ಸಿಲುಕಿದ್ದ ಆಂಬುಲೆನ್ಸ್‌ನ ಸಂಚಾರಕ್ಕೆ ಅನುವು ಮಾಡಿಕೊಡಲು ಬ್ಯಾರಿಕೇಡ್‌ಗಳನ್ನು ಪಕ್ಕಕ್ಕೆ ಸರಿಸಿದ ಮಾಜಿ ಸೈನಿಕರೊಬ್ಬರ ಮೇಲೆ ಸದಾಶಿವನಗರ ಸಂಚಾರ ಠಾಣೆ ಎಸ್‌ಐ ಗಂಗಣ್ಣ ಅವರು ಹಲ್ಲೆ ನಡೆಸಿದ್ದಾರೆ.

ಮಧ್ಯಾಹ್ನ ವಿಲ್ಸನ್‌ಗಾರ್ಡನ್‌ನ ರೆಡ್‌ಕ್ರಾಸ್‌ ಸಂಸ್ಥೆಯಿಂದ ಯಲಹಂಕದ ಖಾಸಗಿ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ತುರ್ತಾಗಿ ರಕ್ತ ಸಾಗಿಸುತ್ತಿದ್ದಾಗ ಈ ಘಟನೆ ನಡೆದಿದೆ. ಇದಕ್ಕೂ ಮುನ್ನ ನಗರದಲ್ಲಿ ಬೆಳಿಗ್ಗೆ ಧಾರಾಕಾರ ಮಳೆ ಸುರಿದಿದ್ದರಿಂದ ಕಾವೇರಿ ಜಂಕ್ಷನ್‌ ಅಂಡರ್‌ಪಾಸ್‌ನಲ್ಲಿ ನೀರು ತುಂಬಿಕೊಂಡು ಸುತ್ತಮುತ್ತ ಸಂಚಾರ ಅಸ್ತವ್ಯಸ್ತವಾಗಿತ್ತು.

ಹೀಗಾಗಿ ಸದಾಶಿವನಗರದ ಭಾಷ್ಯಂ ವೃತ್ತದ ಕಡೆಯಿಂದ ಅಂಡರ್‌ಪಾಸ್‌ ಮೂಲಕ ಬಳ್ಳಾರಿ ರಸ್ತೆಗೆ ಹೋಗುವ ವಾಹನಗಳ ಸಂಚಾರಕ್ಕೆ ಪಕ್ಕದ ರಸ್ತೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ವಿಂಡ್ಸರ್‌ ಮ್ಯಾನರ್‌ ಕಡೆಯಿಂದ ಬಂದ ಆಂಬುಲೆನ್ಸ್‌, ವಾಹನ ದಟ್ಟಣೆಯಲ್ಲಿ ಸಿಲುಕಿತು. ಆಗ ಅದೇ ಮಾರ್ಗವಾಗಿ ಸೈಕಲ್‌ನಲ್ಲಿ ಹೋಗುತ್ತಿದ್ದ ಮಾಜಿ ಸೈನಿಕ ನಾಗಪ್ಪ ಅವರು ಆಂಬುಲೆನ್ಸ್‌, ವಾಹನ ದಟ್ಟಣೆಯಲ್ಲಿ ಸಿಲುಕಿರುವುದನ್ನು ಗಮನಿಸಿದ್ದಾರೆ. ನಂತರ ಅವರು, ರಸ್ತೆ ಮಧ್ಯೆ ಹಾಕಿದ್ದ ಬ್ಯಾರಿಕೇಡ್‌ಗಳ ನಡುವಿನ ಹಗ್ಗವನ್ನು ಬಿಚ್ಚಿ ಆಂಬುಲೆನ್ಸ್‌ನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.


ಈ ಸಂದರ್ಭದಲ್ಲಿ ಸಮೀಪದಲ್ಲೇ ಕರ್ತವ್ಯದಲ್ಲಿದ್ದ ಗಂಗಣ್ಣ, ಬ್ಯಾರಿಕೇಡ್‌ಗಳ ಹಗ್ಗ ಬಿಚ್ಚಿದ ಕ್ರಮವನ್ನು ಪ್ರಶ್ನಿಸಿ ನಾಗಪ್ಪ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ. ಅಲ್ಲದೇ, ಅವರನ್ನು ಎಳೆದಾಡಿ ಹಲ್ಲೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೂಲತಃ ವಿಜಯ­ಪುರ ಜಿಲ್ಲೆಯ ನಾಗಪ್ಪ, ಕುಟುಂಬ ಸದಸ್ಯರೊಂದಿಗೆ ಕಾವಲ್‌ಬೈರಸಂದ್ರದಲ್ಲಿ ವಾಸ­ವಾ­ಗಿದ್ದಾರೆ. ಅವರು ಸದಾಶಿವನಗರದ ಅಪಾರ್ಟ್‌­ಮೆಂಟ್‌ ಒಂದರಲ್ಲಿ ಭದ್ರತಾ ಸಿಬ್ಬಂದಿ­ಯಾಗಿದ್ದಾರೆ.

ಎಸ್‌ಐ ಸಲಹೆಯಂತೆ ಬ್ಯಾರಿಕೇಡ್‌ ಸರಿಸಿದೆ: ‘ಘಟನೆ ವೇಳೆ ಕಾವೇರಿ ಜಂಕ್ಷನ್‌ನಲ್ಲಿ ಕರ್ತವ್ಯದಲ್ಲಿದ್ದ ಸದಾಶಿವನಗರ ಸಂಚಾರ ಠಾಣೆಯ ಮತ್ತೊಬ್ಬ ಎಸ್‌ಐ ರಾಮಮೂರ್ತಿ ಅವರು ಬ್ಯಾರಿಕೇಡ್‌ಗಳ ಹಗ್ಗ ಬಿಚ್ಚಿ ಆಂಬುಲೆನ್ಸ್‌ ಸಂಚಾರಕ್ಕೆ ಅನುಕೂಲ ಮಾಡಿಕೊಡು­ವಂತೆ ಹೇಳಿದರು. ಅವರ ಸಲಹೆಯಂತೆ ಬ್ಯಾರಿಕೇಡ್‌ಗಳನ್ನು ಸರಿಸಿ, ಹಗ್ಗ ಬಿಚ್ಚಿದೆ. ಇದರಿಂದ  ಯಾವುದೇ ಸಮಸ್ಯೆ ಆಗಲಿಲ್ಲ. ಆದರೂ ಎಸ್‌ಐ ಗಂಗಣ್ಣ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದರು’ ಎಂದು ನಾಗಪ್ಪ ಸುದ್ದಿಗಾರರಿಗೆ ತಿಳಿಸಿದರು.

ಅಮಾನತು
ಘಟನೆ ಬಗ್ಗೆ ಕ್ಷಮೆ ಕೋರುತ್ತೇನೆ. ಆಂಬುಲೆನ್ಸ್‌ಗೆ ದಾರಿ ಮಾಡಿ­ಕೊಡು­ವುದು ಪ್ರತಿಯೊಬ್ಬರ ಕರ್ತವ್ಯ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಎಸ್‌ಐ ಗಂಗಣ್ಣ ಅವರನ್ನು ಅಮಾನತು ಮಾಡಲಾಗಿದೆ. –ಎಂ.ಎನ್‌.ರೆಡ್ಡಿ, ನಗರ ಪೊಲೀಸ್‌ ಕಮಿಷನರ್‌

ಖಂಡನೀಯ
ಸ್ಥಳದಲ್ಲಿದ್ದ ಸಿಬ್ಬಂದಿಯೇ ಆಂಬುಲೆನ್ಸ್‌ನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕಿತ್ತು. ಆದರೆ, ಹಾಗೆ ಮಾಡದೆ ನಾಗಪ್ಪ ಅವರ ಮೇಲೆ ಎಸ್‌ಐ ಹಲ್ಲೆ ನಡೆಸಿದ್ದು ತಪ್ಪು. ಸಿಬ್ಬಂದಿಗೆ ತಾಳ್ಮೆ ಬಹಳ ಮುಖ್ಯ. ತಾಳ್ಮೆ ಕಳೆದುಕೊಂಡರೆ ಇಂತಹ ಘಟನೆಗಳು ನಡೆಯು­ತ್ತವೆ. ಗಂಗಣ್ಣ ಅವರು ಸಂಯಮದಿಂದ ವರ್ತಿಸಿ, ನಾಗಪ್ಪನವರ ಕಾರ್ಯವನ್ನು ಶ್ಲಾಘಿಸ­ಬೇಕಿತ್ತು. ಆದರೆ, ಅವರ ಮೇಲೆ ದೌರ್ಜನ್ಯ ಎಸಗಿದ್ದು ಖಂಡನೀಯ. –ಎಂ.ಎನ್‌.ಬಾಬು ರಾಜೇಂದ್ರಪ್ರಸಾದ್ ಪೂರ್ವ ಸಂಚಾರ ವಿಭಾಗದ ಡಿಸಿಪಿ

ನೆರವಿಗೆ ಬರಲಿಲ್ಲ
ಸುಮಾರು ಅರ್ಧ ತಾಸಿನಿಂದ ಆಂಬುಲೆನ್ಸ್‌, ವಾಹನ ದಟ್ಟಣೆಯಲ್ಲಿ ಸಿಲುಕಿತ್ತು. ಸ್ಥಳದಲ್ಲಿದ್ದ ಸಂಚಾರ ಪೊಲೀಸರು ನೆರವಿಗೆ ಬರಲಿಲ್ಲ. ಆದರೆ, ದಾರಿಹೋಕರೊಬ್ಬರು ಬ್ಯಾರಿಕೇಡ್‌ ಸರಿಸಿ ವಾಹನಕ್ಕೆ ದಾರಿ ಮಾಡಿ­ಕೊಟ್ಟರು. ನಂತರ ಅವರ ಹೆಸರು ನಾಗಪ್ಪ ಎಂದು ವಾಹಿನಿಗಳಲ್ಲಿ ಪ್ರಸಾರ­ವಾದ ಸುದ್ದಿಯಿಂದ ಗೊತ್ತಾಯಿತು. – ಬಸವರಾಜು, ಆಂಬುಲೆನ್ಸ್‌ ಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT