ಅದು ಸುಮಾರು 1997ರ ಜೂನ್ ಅಥವಾ ಜೂಲೈ ತಿಂಗಳಿರಬೇಕೆಂದು ನೆನಪು. ಆಗ ನಾನು ಕೆಲಸದ ನಿಮಿತ್ತ ಇಂಗ್ಲೆಂಡ್ನ ಬರ್ಮಿಂಗ್ಹ್ಯಾಂಗೆ ಹೋಗಿದ್ದೆ. ನನ್ನ ಜೊತೆಯಲ್ಲಿ ಸಹೋದ್ಯೋಗಿ ರೇಖಾ ಹಿರೇಮಠ ಕೂಡಾ ಬಂದಿದ್ದಳು. ನಮಗಿಬ್ಬರಿಗೂ ಇಂಗ್ಲೆಂಡ್ ಹೊಸತು. ವಾರಾಂತ್ಯದಲ್ಲಿ ನಾವು ಶಾಪಿಂಗ್ಗೆ ಹೋಗುವುದೋ ಯಾವುದಾದರೂ ಪ್ರೇಕ್ಷಣೀಯ ಸ್ಥಳಕ್ಕೆ ಹೋಗುವುದೋ ಮಾಡುತ್ತಿದ್ದೆವು. ಕೆಲವೇ ವಾರಗಳ ಭೇಟಿಗೆ ಹೋಗಿದ್ದರಿಂದ, ನಮಗೆ ಓಡಾಡಲು ಕಾರು ಇರಲಿಲ್ಲ. ಆದ್ದರಿಂದ ಸುಲಭವಾಗಿ ಸಿಗುತ್ತಿದ್ದ ಟ್ಯಾಕ್ಸಿಯನ್ನು ಮನೆಯ ಫೋನಿನಿಂದಲೇ ಬುಕ್ ಮಾಡಿಕೊಂಡು, ಹೋಗಿ ಬರುತ್ತಿದ್ದೆವು. ನಿಧಾನಕ್ಕೆ ಆ ಊರು ಪರಿಚಯವಾಗತೊಡಗಿತ್ತು.

ಒಂದು ಭಾನುವಾರ ಷೇಕ್ಸ್ಪಿಯರನ ನಾಟಕವೊಂದನ್ನು ಊರ ಹೊರಗಿರುವ ದೊಡ್ಡದೊಂದು ಪಾರ್ಕಿನ ಬಯಲಿನಲ್ಲಿ ಆಡುತ್ತಾರೆಂದೂ, ಅದು ತುಂಬಾ ಚೆನ್ನಾಗಿರುತ್ತದೆಂದೂ ನಮ್ಮ ಸಹೋದ್ಯೋಗಿಯೊಬ್ಬರು ತಿಳಿಸಿದರು. ಈ ನಾಟಕವನ್ನು ಸಂಜೆಯ ಹೊತ್ತು ಆಡುವವರಿದ್ದರು. ಬೇಸಿಗೆಯ ಕಾಲವಾದ್ದರಿಂದ ಸಂಜೆ ಏಳೂವರೆಯ ತನಕ ಬೆಳಕಿರುತ್ತಿತ್ತು. ಆದ್ದರಿಂದ ನಾಟಕದ ಪ್ರಾರಂಭ ಮತ್ತು ಅಂತ್ಯದ ಸಮಯವನ್ನು ತಿಳಿದುಕೊಂಡು, ಅದಕ್ಕೆ ಸರಿಯಾಗಿ ಟ್ಯಾಕ್ಸಿ ಬುಕ್ ಮಾಡಿಕೊಂಡು ಹೊರಟೆವು. ಹೇಳಿದ ಸಮಯಕ್ಕೆ ಸರಿಯಾಗಿ ಟ್ಯಾಕ್ಸಿಯವನು ಬಂದು, ನಮ್ಮನ್ನು ಪಾರ್ಕಿನ ಬಳಿ ಬಿಟ್ಟು, ರಾತ್ರಿ ಸರಿಯಾಗಿ ಏಳೂವರೆಗೆ ನಮ್ಮನ್ನು ಅದೇ ಸ್ಥಳದಿಂದ ವಾಪಾಸು ಕರೆದುಕೊಂಡು ಹೋಗುವುದಾಗಿ ಅಭಯವಿತ್ತು ಹೋದ.

ನಾಟಕ ತುಂಬಾ ಚೆನ್ನಾಗಿತ್ತು. ಆದರೆ ಸ್ವಲ್ಪ ತಡವಾಗಿ ಪ್ರಾರಂಭವಾಗಿದ್ದರಿಂದ ಅದು ಮುಕ್ತಾಯಗೊಳ್ಳುವಾಗ ಆಗಲೇ ಎಂಟು ಗಂಟೆಯಾಗಿ, ಕತ್ತಲು ನಿಧಾನಕ್ಕೆ ಹಬ್ಬುತ್ತಿತ್ತು. ನಾಟಕದ ರೋಚಕತೆಯಲ್ಲಿ ಮುಳುಗಿದ ನಮಗೆ ಸಮಯ ಜಾರಿದ್ದು ಗೊತ್ತಾಗಿರಲೇ ಇಲ್ಲ. ನಾವು ಹೊರಗೆ ಬಂದು ನೋಡಿದರೆ ಟ್ಯಾಕ್ಸಿಯವನು ಇರಲಿಲ್ಲ. ಈಗ ಮತ್ತೆ ಟ್ಯಾಕ್ಸಿ ಕಂಪೆನಿಯನ್ನು ಸಂಪರ್ಕಿಸುವುದು ಹೇಗೆಂದು ನಮಗೆ ಗೊತ್ತಾಗಲಿಲ್ಲ. ಆಗ ತಾನೇ ಮೊಬೈಲ್ ಫೋನ್ಗಳು ಮಾರುಕಟ್ಟೆಯನ್ನು ಪ್ರವೇಶ ಮಾಡಿದ್ದರೂ, ಜನಸಾಮಾನ್ಯರ ಬಳಿ ಅಷ್ಟಾಗಿ ಇರುತ್ತಿರಲಿಲ್ಲ.

ಮೊಬೈಲ್ನಿಂದ ಹೊರ ಹೋಗುವ ಮತ್ತು ಒಳ ಬರುವ ಕರೆಗಳಿಗೂ ದುಬಾರಿ ಹಣವನ್ನು ತೆರಬೇಕಾಗಿತ್ತು. ಆದ್ದರಿಂದ ಮನೆಯ ಫೋನ್ ಮತ್ತು ಸಾರ್ವಜನಿಕ ಫೋನ್ಗಳನ್ನೇ ಬಳಸುತ್ತಿದ್ದೆವು. ಆದರೆ ಆ ಪಾರ್ಕಿನ ಸುತ್ತ–ಮುತ್ತ, ಒಳಗೆಲ್ಲಾ ಅಡ್ಡಾಡಿದರೂ ಎಲ್ಲಿಯೂ ನಮಗೆ ಸಾರ್ವಜನಿಕ ಫೋನ್ ಕಾಣಿಸಲಿಲ್ಲ. ಯಾರನ್ನಾದರೂ ಕೇಳೋಣವೆಂದರೆ ಯಾವ ವ್ಯಕ್ತಿಯೂ ನಮ್ಮ ಕಣ್ಣಿಗೆ ಕಾಣಲಿಲ್ಲ. ನಮಗೆ ಮನೆಯ ದಾರಿ ಗೊತ್ತಿರಲಿಲ್ಲ ಹಾಗೂ ಸಂಜೆ ಐದರ ನಂತರ ಸಿಟಿ ಬಸ್ಸುಗಳು ಆ ಊರಲ್ಲಿ ಅಡ್ಡಾಡುತ್ತಿರಲಿಲ್ಲ. ನನ್ನ ಸಹೋದ್ಯೋಗಿ ರೇಖಾ ತುಂಬಾ ಹೆದರಿಕೊಂಡು ಬಿಟ್ಟಳು. ರಾತ್ರಿಯ ಹೊತ್ತು ಬರ್ಮಿಂಗ್ ಹ್ಯಾಂ ಅಷ್ಟೊಂದು ಸುರಕ್ಷಿತವಲ್ಲವೆಂದು ಆಫೀಸಿನಲ್ಲಿ ನಮಗೆ ಒತ್ತಿ ಹೇಳಿದ್ದರು. ಆಕೆಯ ಹೆದರಿಕೆ ಅತ್ಯಂತ ಸಹಜವಾಗಿತ್ತು.

ಬೇರೆ ದಾರಿ ತೋರದೆ ನಾಟಕ ನಡೆಯುತ್ತಿದ್ದ ಸ್ಥಳಕ್ಕೆ ವಾಪಾಸು ಬಂದೆವು. ಪ್ರೇಕ್ಷಕರೆಲ್ಲಾ ತಮ್ಮ ಕಾರುಗಳಲ್ಲಿ ಮನೆಗಳಿಗೆ ವಾಪಾಸು ಹೋಗಿದ್ದರು. ಒಂದಿಬ್ಬರು ಪೆಂಡಾಲ್ ಕೆಡವುತ್ತಿದ್ದರು. ಒಂದಿಬ್ಬರು ಪೊಲೀಸರು ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಆ ಇಬ್ಬರು ಪೊಲೀಸರಲ್ಲಿ ಒಬ್ಬಾತ ಕಪ್ಪು ಜನಾಂಗದವನಾಗಿದ್ದು, ಅವನು ತನ್ನ ಬೆಲ್ಟಿಗೆ ದೊಡ್ಡ ಮೊಬೈಲ್ ಒಂದನ್ನು ಎಲ್ಲರಿಗೂ ಕಾಣುವಂತೆ ಧರಿಸಿದ್ದ. ನಾನು ಆತನ ಬಳಿಗೆ ಹೋಗಿ ನಮ್ಮ ಪರಿಸ್ಥಿತಿಯನ್ನು ವಿವರಿಸಿದೆ.

ಮೊದಲೇ ಸದ್ಯದ ಪರಿಸ್ಥಿತಿಗೆ ಹೆದರಿಕೊಂಡಿದ್ದೆವು, ಜೊತೆಗೆ ನಮ್ಮ ಭಾರತೀಯ ಇಂಗ್ಲಿಷ್ ಭಾಷೆಯ ಉಚ್ಛಾರ ಅವರಿಗೆ ಸರಿಯಾಗಿ ತಿಳಿಯುತ್ತಿರಲಿಲ್ಲ. ಅವರೂ ವೇಗವಾಗಿ ಮಾತನಾಡಿದರೆ ಅದನ್ನು ಗ್ರಹಿಸುವುದು ನಮಗೆ ಕಷ್ಟವಾಗುತ್ತಿತ್ತು. ಆದರೂ ಆತ ಸಹನೆಯಿಂದ ನಮ್ಮ ಸಮಸ್ಯೆಯನ್ನು ಕೇಳಿಸಿಕೊಂಡು, ಅರ್ಥ ಮಾಡಿಕೊಂಡ. ನನ್ನ ಜೊತೆಯಲ್ಲಿ ಮಹಿಳೆಯೊಬ್ಬಳು ಇದ್ದುದರಿಂದ ಆತನಿಗೆ ಅನುಕಂಪವೂ ಮೂಡಿರಬೇಕು. ಆದ್ದರಿಂದ ತನ್ನ ಟೊಂಕಕ್ಕೆ ಸಿಕ್ಕಿಸಿದ್ದ ಇಷ್ಟುದ್ದದ ಮೊಬೈಲನ್ನು (ಆಗ ಅವು ಭರ್ಜರಿ ಉದ್ದ, ಅಗಲ ಮತ್ತು ದಪ್ಪ ಇರುತ್ತಿದ್ದವು) ನಮಗೆ ಬಳಸಲು ಕೊಟ್ಟ.

ನಾವಿಬ್ಬರೂ ಅದನ್ನು ಸಾಹಸಪಟ್ಟು ಬಳಸಿ, ಟ್ಯಾಕ್ಸಿ ಕಂಪೆನಿಗೆ ಫೋನಾಯಿಸಿದೆವು. ಅವರು ಟ್ಯಾಕ್ಸಿಯವನು ಸರಿಯಾಗಿ ಏಳೂವರೆಗೆ ಬಂದು, ಐದು ನಿಮಿಷ ಕಾದು ವಾಪಾಸು ಹೋದ ಸಂಗತಿಯನ್ನು ತಿಳಿಸಿದರು. ಆದರೆ ಇನ್ನೈದು ನಿಮಿಷದಲ್ಲಿ ಮತ್ತೊಂದು ಟ್ಯಾಕ್ಸಿಯನ್ನು ಅದೇ ಸ್ಥಳಕ್ಕೆ ಕಳುಹಿಸುವುದಾಗಿ ಹೇಳಿದರು. ನಮಗೆ ಧೈರ್ಯ ಮೂಡಿ ಸಂತೋಷವಾಯ್ತು. ನಾನು ಮೊಬೈಲನ್ನು ಆಫ್ ಮಾಡಿ, ಆ ಕಪ್ಪು ಜನಾಂಗದ ಪೊಲೀಸಿನವನಿಗೆ ಕೊಟ್ಟು ಬಂದೆ.

ನಾನು ಹತ್ತು ಹೆಜ್ಜೆ ನಡೆದಿದ್ದೆನೋ ಇಲ್ಲವೋ, “ಮಿಸ್ಟರ್...” ಎಂದು ಆ ಪೊಲೀಸ್ ಕೂಗಿದ್ದು ಕೇಳಿಸಿತು; ಹಿಂತಿರುಗಿ ನೋಡಿದೆ. ಆತನ ಮುಖ ಸಿಟ್ಟಿನಿಂದ ಭುಸುಗುಡುತ್ತಿತ್ತು. ಮೊಬೈಲನ್ನು ಬಲಗೈಯಲ್ಲಿ ಹಿಡಿದು ಎತ್ತಿ ತೋರಿಸಿ “ಥ್ಯಾಂಕ್ಯೂ ವೆರಿ ಮಚ್” ಎಂದು ಗಟ್ಟಿಯಾಗಿ ಅರಚಿದ. ಆಗ ನನ್ನ ತಪ್ಪು ಅರ್ಥವಾಗಿತ್ತು. ಆ ದೇಶದಲ್ಲಿ ಯಾವುದೇ ಸಹಾಯವನ್ನು ತೆಗೆದುಕೊಂಡರೂ “ಥ್ಯಾಂಕ್ಯೂ” ಎನ್ನಬೇಕೆಂದೂ, ತಪ್ಪು ಮಾಡಿದಾಗ “ಸಾರಿ...” ಹೇಳಬೇಕೆಂದೂ ನಮಗೆ ಭಾರತದಲ್ಲಿಯೇ ಹೇಳಿಕೊಟ್ಟಿದ್ದರೂ, ಇನ್ನೂ ರೂಢಿಯಾಗಿರಲಿಲ್ಲ.

ಜೊತೆಗೆ ನನ್ನದೇ ಆತಂಕದ ಸ್ಥಿತಿಯಲ್ಲಿ ನಾನಿದ್ದೆನಾದ ಕಾರಣ, ಮತ್ತೊಂದು ಸಂಸ್ಕೃತಿಯ ಆಚರಣೆಗಳು ತಕ್ಷಣ ಜ್ಞಾಪಕಕ್ಕೆ ಬರುವುದೂ ಕಷ್ಟ. ಆದ್ದರಿಂದ ತಲೆ ತಗ್ಗಿಸಿ ನಿಂತೆ. “ಸಾರಿ...” ಎಂದು ಹೇಳಬೇಕೆಂದೂ ತಿಳಿಯಲಿಲ್ಲ. ಆತನ ಕೋಪ ಮತ್ತಿಷ್ಟು ಭುಗಿಲೆದ್ದು, ಎರಡು ಕೈಗಳನ್ನು ಮೇಲಕ್ಕೆ ಎತ್ತಿ “ನೀನು ಮಾಡಿದ ಕರೆಗೆ ನಾನು ಹಣ ಕೊಡ್ತೀನಿ ಅನ್ನೋದು ನೆನಪಿರ್ಲಿ...” ಎಂದವನೇ ಬೆನ್ನು ತಿರುಗಿಸಿ ಹೊರಟು ಬಿಟ್ಟ. ಹೋಗುವಾಗ “ಮ್ಯಾನರ್ಸ್... ಮ್ಯಾನರ್ಸ್...” ಎಂದು ಅತ್ಯಂತ ರೇಜಿಗೆಯಿಂದ ಒದರುತ್ತಾ ಹೋದ.

ಆಗ ನನಗಿನ್ನೂ ಇಪ್ಪತ್ತೈದರ ಪ್ರಾಯ. ಪರಿಸ್ಥಿತಿಯನ್ನು ಮತ್ತೊಬ್ಬರ ದೃಷ್ಟಿಕೋನದ ಮೂಲಕ ನೋಡುವುದು ತಿಳಿಯುತ್ತಿರಲಿಲ್ಲ. ನನ್ನ ಕಷ್ಟದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ಒಂದು ಜುಜುಬಿ “ಥ್ಯಾಂಕ್ಸ್...” ಪದಕ್ಕೆ ಕೂಗಾಡಿ ನನಗೆ ಅವಮಾನ ಮಾಡಿದ ಎಂದು ತುಂಬಾ ದುಃಖ ಮತ್ತು ಸಿಟ್ಟು ಬಂದಿತ್ತು. ನನ್ನದೇ ವಯಸ್ಸಿನ ರೇಖಾ ಹಿರೇಮಠ ಕೂಡಾ ಅವನದೇ ತಪ್ಪೆಂದು ಹೇಳಿ, ನನ್ನನ್ನು ಸಮಾಧಾನ ಪಡಿಸಲು ನೋಡಿದ್ದಳು. ಹೇಗೋ ಟ್ಯಾಕ್ಸಿಯನ್ನು ಹತ್ತಿ, ಮನೆಗೆ ಬಂದಿದ್ದೆವು. ಆದರೂ ಸುಮಾರು ಒಂದು ವಾರದ ತನಕ ನಡೆದ ಅವಮಾನದಿಂದಾಗಿ ಮನಸ್ಸು ಕುದಿಯುತ್ತಿತ್ತು. ಆ ಅಜಾನುಬಾಹು ಕಪ್ಪು ಜನಾಂಗದ ಪೋಲೀಸ್, ತನ್ನೆರಡೂ ಕೈಗಳನ್ನು ಎತ್ತಿ ಒದರುತ್ತಾ, “ಮ್ಯಾನರ್ಸ್... ಮ್ಯಾನರ್ಸ್...” ಎಂದಿದ್ದು ಕನಸಿನಲ್ಲಿಯೂ ಬಂದು ಕಾಡಿತ್ತು.

ಈಗ ಅದು ನನಗೆ ತಮಾಷೆಯ ಪ್ರಸಂಗವಾಗಿಯೇ ಕಾಣುತ್ತದೆ. ನಮ್ಮ ಪರಿಸ್ಥಿತಿಯನ್ನು ನೋಡಿ ಸಹಾಯ ಮಾಡಿದವನಿಗೆ ಒಂದು ಪುಟ್ಟ ಥ್ಯಾಂಕ್ಸ್ ಹೇಳದಿದ್ದರೆ ಸಿಟ್ಟು ಬರದೆ ಮತ್ತೇನಾದೀತು? ಭಾರತದಲ್ಲಿ ಇದೇ ಘಟನೆ ನಡೆದಿದ್ದರೆ ಇಂತಹ ಅವಮಾನ ನಡೆಯುತ್ತಿರಲಿಲ್ಲ. “ಥ್ಯಾಂಕ್ಸ್...” ಎಂದು ಬಾರಿಬಾರಿಗೂ ಪಲುಕುವುದು ನಮ್ಮ ಸಂಪ್ರದಾಯವಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಪೌಂಡ್ನಲ್ಲಿ ಸಂಬಳ ತೆಗೆದುಕೊಳ್ಳುತ್ತಾ, ರೂಪಾಯಿ ಸಂಸ್ಕೃತಿಯನ್ನು ನಿರೀಕ್ಷಿಸುವುದು ಅಧರ್ಮವಾಗುತ್ತದೆ. ಆದರೆ ಒಂದು ಅನುಮಾನ ನನ್ನಲ್ಲಿ ಉಳಿದುಬಿಟ್ಟಿದೆ.

ಅವನು ಕಣ್ಣಿಗೆ ಹೊಡೆಯುವಂತೆ ಕಪ್ಪು ಜನಾಂಗದ ವ್ಯಕ್ತಿ, ನಾನು ಗೋಧಿ ಬಣ್ಣದವನು. ಆದ್ದರಿಂದ ಅವನಿಗಿಂತಲೂ ನಾನು ಶ್ರೇಷ್ಠ ಎಂಬ ವರ್ಣದ್ವೇಷದ ಭಾವನೆ ನನ್ನೊಳಗೆ ಎಲ್ಲಿಯೋ ಅಡಗಿ ಕುಳಿತಿದ್ದು ಆ ಸಿಟ್ಟಿನ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿರಬೇಕು. ಒಬ್ಬ ಬಿಳಿಯ ಪೊಲೀಸ್ ಹಾಗೆ ಸಿಟ್ಟಾಗಿದ್ದರೆ ನನಗೆ ಕ್ರೋಧ ಮತ್ತು ಸಂಕಟವಾಗದೆ, ನಾಚಿಕೆಯ ಭಾವ ಮೂಡುತ್ತಿತ್ತೇನೋ ಎಂಬ ಅನುಮಾನವು ನನ್ನನ್ನು ಕಾಡುತ್ತದೆ. ನನ್ನನ್ನು ನೋಯಿಸುವ ಉದ್ದೇಶ ಆ ಪೊಲೀಸ್ಗೆ ಇರಲಿಲ್ಲವೆಂದೂ, ಬಹುಶಃ ನನ್ನ ವರ್ತನೆಯಿಂದ ಅವನೇ ನೊಂದಿರಬೇಕೆಂದೂ ಎಷ್ಟೋ ಬಾರಿ ಅನ್ನಿಸಿದೆ. ಆತ “ಥ್ಯಾಂಕ್ಯೂ ವೆರಿ ಮಚ್...” ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ ವ್ಯಂಗ್ಯ ಈಗ ಅಷ್ಟೊಂದು ಕ್ರೂರವಾಗಿ ಕಾಣುತ್ತಿಲ್ಲ.

ಆದರೆ ಉಳಿದ ಸಂದರ್ಭಗಳಲ್ಲಿ ಇಂತಹದೇ ಸಾಂಸ್ಕೃತಿಕ ಭಿನ್ನತೆಯಿಂದಾಗಿ ಕ್ರೂರವಾದ ವ್ಯಂಗ್ಯದ ಮಾತನ್ನು ಜನರು ಹೊರಹಾಕಿ, ಉದ್ದೇಶಪೂರ್ವಕವಾಗಿ ಮತ್ತೊಬ್ಬರ ಮನಸ್ಸನ್ನು ನೋಯಿಸುವುದನ್ನು ನಾನು ಕಂಡಿದ್ದೇನೆ. ಇತ್ತೀಚೆಗೆ ನಾನೊಂದು ಯೋಗ ತರಬೇತಿ ಕೇಂದ್ರದಲ್ಲಿ ಏಳು ದಿನಗಳ ಕಾಲ ತಂಗಿದ್ದೆ. ಭಾರತದ ವಿವಿಧ ಭಾಗಗಳಿಂದ, ಭಿನ್ನ ವಯೋಮಾನದ ಸುಮಾರು ಐವತ್ತು ಜನರು ಆ ತರಬೇತಿಗಾಗಿ ಬಂದಿದ್ದರು. ಪ್ರತಿ ಸಂಜೆ ಧ್ಯಾನದ ತರಗತಿಯನ್ನು ಉನ್ನಿಕೃಷ್ಣನ್ ಎಂಬ ಮಲಯಾಳಿ ಹುಡುಗ ಸೊಗಸಾಗಿ ಇಂಗ್ಲಿಷಿನಲ್ಲಿ ಹೇಳಿಕೊಡುತ್ತಿದ್ದ.

ಆದರೆ ಅವನ ಉಚ್ಚಾರದಲ್ಲಿ ವಿಪರೀತವಾಗಿ ಮಲಯಾಳಿ ಭಾಷೆಯ ನೆರಳು ಬಿದ್ದಿರುತ್ತಿತ್ತು. “ಸಿಂಬಲ್”, “ಕೋಲ್ ಸೆಂಡರ್”, “ಇಂಗಮ್ಡ್ಯಾಕ್ಸ್” ಇತ್ಯಾದಿಯಾಗಿ ಉಚ್ಚಾರ ಮಾಡುತ್ತಿದ್ದ. ಮೊದಮೊದಲು ನನಗೆ ನಗು ತರಿಸುತ್ತಿತ್ತಾದರೂ, ಧ್ಯಾನದ ಬಗ್ಗೆ ಅವನಿಗಿರುವ ತಿಳಿವಳಿಕೆಯ ಅರಿವಾದಾಗ ಅವನ ಮೇಲೆ ಗೌರವಭಾವ ಮೂಡಿ, ಅವನ ಮಾತು ಸಹಜವೆನ್ನಿಸಲಾರಂಭಿಸಿತು.

ಕೊನೆಯ ದಿನದ ತರಗತಿ ಮುಗಿದ ಮೇಲೆ ಅವನ ಬಳಿ ಹೋಗಿ, ನನ್ನ ಅನುಮಾನಗಳನ್ನು ಪರಿಹರಿಸಿಕೊಂಡು, ಅವನಿಗೆ ಧನ್ಯವಾದಗಳನ್ನು ಹೇಳುತ್ತಾ ಮಾತನಾಡುತ್ತಾ ನಿಂತಿದ್ದೆ. ನಮ್ಮ ತಂಡದಲ್ಲಿ ಇದ್ದ ಕಾಲೇಜಿನ ಹುಡುಗಿಯೊಬ್ಬಳು ನಮ್ಮಿಬ್ಬರ ಹತ್ತಿರ ಬಂದು, ಮಧ್ಯೆ ತಲೆಹಾಕದೆ ನಮ್ಮ ಮಾತುಗಳನ್ನು ಕೇಳುತ್ತಾ ನಿಂತಳು. ನಾನು ಅವನ ಕೈಕುಲುಕಿ ಹೊರಡಲು ಅಣಿಯಾದಾಗ, ಉನ್ನಿಕೃಷ್ಣನ್ ಆಕೆಯೆಡೆಗೆ ತಿರುಗಿ ಮುಗುಳ್ನಕ್ಕ. ಆಕೆ “ಆಯ್ ಹ್ಯಾಬ್ ಜೆಸ್ಟು ಕಮ್ಮು ಟು ಸೇ ಹ್ಯಾಬಿ ಓಣಂ” ಎಂದು ಅವನದೇ ಮಲೆಯಾಳಿ ಉಚ್ಚಾರಣೆಯಲ್ಲಿ ಹೇಳಿ, ಅವನ ಕೈಕುಲುಕಿ ಓಡಿ ಹೋದಳು. ಅವನ ಮುಖ ಸಣ್ಣದಾಯ್ತು. ಆಕೆ ಕನ್ನಡದ ಹುಡುಗಿಯೆಂದು ನಮ್ಮಿಬ್ಬರಿಗೂ ಗೊತ್ತಿತ್ತು. ಅವಳ ವರ್ತನೆಯ ಹಿಂದಿರುವ ಉದ್ದೇಶದಿಂದ ಅವನಿಗಾದ ನೋವು ಮತ್ತು ಅವಮಾನದ ಹರಿತ ನನಗೆ ತಿಳಿದಿತ್ತು. “ಸಾರಿ...” ಎಂದು ಅವನ ಕೈ ಹಿಡಿದು ಹೇಳಿದೆ. ಅವನು ತಲೆಯಲ್ಲಾಡಿಸಿ “ಪ್ಚ್...” ಎಂದ. ನಾನು “ಚಿಕ್ಕೋಳು... ತಿಳಿವಳಿಕೆ ಇಲ್ಲ...” ಎಂದೇನೋ ಹೇಳಲು ಹೋದೆ. ಅದಕ್ಕವನು “ಅದಲ್ಲ... ಎಷ್ಟು ಧ್ಯಾನ ಮಾಡಿದ್ರೂ ಅಹಂಕಾರ ಹೋಗಲ್ಲ... ಅವಮಾನಕ್ಕೆ ಮನಸ್ಸು ನೋಯುತ್ತೆ” ಎಂದು ಹೇಳಿ ಹೊರಟು ಹೋದ.

ಹೋಗಲಿ ಬಿಡಿ, ಪ್ರಬುದ್ಧತೆಯಿಲ್ಲದೆ ಹುಡುಗಿಯೊಬ್ಬಳು, ತನ್ನನ್ನು ಮದುವೆಯಾಗಬಹುದಾದ ವಯಸ್ಸಿನ ಹುಡುಗನೊಬ್ಬನಿಗೆ ಮಾಡಿದ ಚೇಷ್ಟೆ ಇದೆಂದು ಕ್ಷಮಿಸಿ ಬಿಡೋಣ. ಆದರೆ ಹಿರಿಯರ ಮಧ್ಯದಲ್ಲಿಯೂ ಇಂತಹ ರೇಜಿಗೆ ಹುಟ್ಟಿಸುವ ವ್ಯಂಗ್ಯದ ಮಾತುಗಳನ್ನು ನಾನು ಕಂಡಿದ್ದೇನೆ. ನಮ್ಮ ಆಫೀಸಿನಲ್ಲಿ ತಮಿಳ್ ಸೆಲ್ವನ್ ಎಂಬ ವ್ಯಕ್ತಿ ಕೆಲಸ ಮಾಡುತ್ತಿದ್ದ. ಸಾಫ್ಟ್ವೇರ್ ತಂತ್ರಜ್ಞಾನದಲ್ಲಿ ಅವನ ಜ್ಞಾನ ವಿಶೇಷವಾದದ್ದಾಗಿತ್ತು. ಕೋಡಿಂಗ್ನಲ್ಲಿ ಯಾವುದೇ ಸಂಕಷ್ಟ ಬಂದರೂ, ಆಫೀಸನಲ್ಲಿ ಎಲ್ಲರೂ ಅವನನ್ನು ಸಂಪರ್ಕಿಸುತ್ತಿದ್ದರು. ಆದರೆ ಈ ಹುಡುಗನಿಗೆ ಸರಿಯಾದ ಇಂಗ್ಲಿಷ್ ಜ್ಞಾನವಿರಲಿಲ್ಲ.

ತಮಿಳುನಾಡಿನ ಹಳ್ಳಿಯೊಂದರ ಬಡಕುಟುಂಬದಿಂದ ಬಂದ ಈತನ ವಿದ್ಯಾಭ್ಯಾಸವೆಲ್ಲವೂ ತಮಿಳು ಮಾಧ್ಯಮದಲ್ಲಿಯೇ ನಡೆದಿತ್ತು. ಸರಳ ವಾಕ್ಯ ರಚನೆಗೂ ಒದ್ದಾಡುತ್ತಿದ್ದ. ಆ ಕಾರಣದಿಂದಾಗಿಯೇ ಆತನನ್ನು ವಿದೇಶಕ್ಕೆ ಕಳುಹಿಸುವುದಕ್ಕೆ ನಾನು ಹಿಂಜರಿಯುತ್ತಿದ್ದೆ. ಯಾವುದೋ ಜಪಾನ್, ಜರ್ಮನ್, ಫ್ರಾನ್ಸ್ನಂತಹ ಇಂಗ್ಲಿಷ್ ಬಾರದ ದೇಶಕ್ಕಾದರೆ ಯಾವ ಅನುಮಾನವಿಲ್ಲದೆ ಇಂತಹವರನ್ನು ಕಳುಹಿಸಿಬಿಡಬಹುದು. ಆದರೆ ನಮ್ಮ ಗ್ರಾಹಕರೆಲ್ಲಾ ಇಂಗ್ಲೆಂಡ್ ಅಥವಾ ಅಮೆರಿಕಾದವರೇ ಆಗಿದ್ದರಿಂದ ನನಗೆ ಅವನನ್ನು ನೇರವಾಗಿ ಗ್ರಾಹಕರ ಮುಂದೆ ನಿಲ್ಲಿಸಲು ಅಳುಕಾಗುತ್ತಿತ್ತು. ಎಲ್ಲರಂತೆ ವಿದೇಶಕ್ಕೆ ಹೋಗಬೇಕೆಂಬ ಆಸೆ ಅವನಿಗೂ ಇತ್ತು. ಅದು ಪೂರೈಕೆಯಾಗದ್ದರಿಂದ ಅವನಿಗೆ ಒಳಗೊಳಗೇ ಅಸಮಾಧಾನ ಹೆಡೆಯಾಡುತ್ತಿತ್ತು.

ತಮಿಳ್ ಸೆಲ್ವನ್ ವ್ಯಕ್ತಿತ್ವಕ್ಕೆ ತದ್ವಿರುದ್ಧವಾಗಿ ಶ್ರೀನಿವಾಸನ್ ರಾಮಚಂದ್ರನ್ ಎಂಬಾತ ನನ್ನ ಗುಂಪಿನಲ್ಲಿಯೇ ಕೆಲಸ ಮಾಡುತ್ತಿದ್ದ. ಈತನೂ ಮೂಲತಃ ತಮಿಳುನಾಡಿನವನೇ ಆಗಿದ್ದ. ಆದರೆ ಹಲವು ತಲೆಮಾರುಗಳ ಕೆಳಗೆ ಅವನ ವಂಶದವರು ಮುಂಬಯಿಗೆ ವಲಸೆ ಹೋಗಿ ನೆಲೆಸಿದ್ದರು. ಮುಂಬಯಿಯ ಪ್ರಸಿದ್ಧ ಕಾನ್ವೆಂಟಿನಲ್ಲಿ ಓದಿ, ಹಲವಾರು ಡಿಬೇಟ್ಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ಈತ, ನೂರಾರು ಥ್ರಿಲ್ಲರ್ಗಳನ್ನು ಓದಿಕೊಂಡಿದ್ದ. ಆದ್ದರಿಂದ ಇಂಗ್ಲಿಷ್ ಭಾಷೆಯೇ ಇವನ ಬಂಡವಾಳವಾಗಿತ್ತು. ಆದರೆ ತಂತ್ರಜ್ಞಾನದ ವಿಷಯಕ್ಕೆ ಬಂದರೆ ಈತ ಮಹಾ ದಡ್ಡ. ಚಿಕ್ಕ ಪುಟ್ಟ ತರ್ಕದ ಸಂಗತಿಗಳೂ ಅವನಿಗೆ ತಿಳಿಯುತ್ತಿರಲಿಲ್ಲ.

ಆದರೆ ಇಂಗ್ಲಿಷ್ ಬಲ್ಲವನೇ ಸುಖ ಪಡುವ ಕಾಲಘಟ್ಟ ನಮ್ಮದಾದ್ದರಿಂದ, ಈತನಿಗೆ ಹಲವಾರು ವಿದೇಶ ಪ್ರವಾಸಗಳು, ಬಡ್ತಿಗಳು ದೊರೆಯುತ್ತಿದ್ದವು. ಪಟಪಟನೆ ಅರುಳು ಹುರಿದಂತೆ ಮಾತನಾಡಿ, ಬ್ರಿಟಿಷರೂ ಬೆರಗಾಗುವಂತೆ ಇ–ಮೇಲ್ ಬರೆಯುತ್ತಿದ್ದ ಈತನನ್ನು ಗ್ರಾಹಕರು ತುಂಬಾ ಮೆಚ್ಚಿಕೊಳ್ಳುತ್ತಿದ್ದರು. ಆದ್ದರಿಂದ ತಾನೇ ರಾಜ ಎನ್ನುವಂತೆ ಈತ ಮೆರೆಯುತ್ತಿದ್ದ. ಈತನ ಮನೆಮಾತು ತಮಿಳೇ ಆದರೂ, ತನ್ನ ಹರಕು-ಮುರುಕು ತಮಿಳಿಗೆ ಉಳಿದವರು ಎಲ್ಲಿ ನಗುತ್ತಾರೋ ಎಂದು ಅಂಜಿ, ಯಾವಾಗಲೂ ಇಂಗ್ಲಿಷಿನಲ್ಲಿಯೇ ಮಾತನಾಡುತ್ತಿದ್ದ.

ಒಮ್ಮೆ ಇಂಗ್ಲೆಂಡಿನ ದೊಡ್ಡ ಕಂಪನಿಯೊಂದಕ್ಕೆ ಪ್ರಾಜೆಕ್ಟ್ ಮಾಡುವದಕ್ಕೆ ಪ್ರಪೋಜಲ್ ತಯಾರಿ ಮಾಡುವ ಜವಾಬ್ದಾರಿ ನನಗೆ ಬಂದಿತು. ನಾನು ಆಲೋಚನೆ ಮಾಡಿ, ಇವರಿಬ್ಬರಿಗೂ ಅದರ ಜವಾಬ್ದಾರಿಯನ್ನು ವಹಿಸಿಕೊಟ್ಟೆ. ಒಬ್ಬರ ಕೊರತೆಯನ್ನು ಮತ್ತೊಬ್ಬರು ತುಂಬಿ, ಇಬ್ಬರ ಸಾಮರ್ಥ್ಯವೂ ಚೆನ್ನಾಗಿ ಕೂಡಿ ಬರುತ್ತದೆಂಬುದು ನನ್ನ ಎಣಿಕೆಯಾಗಿತ್ತು. ಆದರೆ ಅವರಿಬ್ಬರ ಮಧ್ಯದಲ್ಲಿ ಶೀತಲ ಸಮರವೇ ಇತ್ತೆಂದು ನನಗೆ ಗೊತ್ತಿರಲಿಲ್ಲ. ಅದು ಒಂದು ದಿನ ಮೀಟಿಂಗ್ನಲ್ಲಿ ಅಸಹ್ಯಕರವಾಗಿ ಹೊರಬಿತ್ತು.

ಪ್ರಪೋಜಲ್ನ ಮೊದಲ ರೂಪರೇಷೆಯನ್ನು ತಮಿಳ್ ಸೆಲ್ವನ್ ಮಾಡುವುದೆಂದೂ, ಅನಂತರ ಅದರ ಅಂದ-ಚೆಂದವನ್ನು ಶ್ರೀನಿವಾಸನ್ ನೋಡಿಕೊಳ್ಳಬೇಕೆಂದೂ ನಾನು ಹೇಳಿದ್ದೆ. ಅದಕ್ಕೆ ತಕ್ಕಂತೆ ತಮಿಳ್ ಸೆಲ್ವನ್ ಸಾಕಷ್ಟು ಶ್ರದ್ಧೆ ವಹಿಸಿ ಪ್ರಪೋಜಲ್ ತಯಾರಿಸಿ, ನಮ್ಮಿಬ್ಬರಿಗೂ ವಿವರಿಸಲು ಮೀಟಿಂಗ್ ಕರೆದಿದ್ದ. ಎಷ್ಟೇ ತಂತ್ರಜ್ಞಾನದ ಸಂಗತಿಗಳೆಂದರೂ ಪ್ರಪೋಜಲ್ನಲ್ಲಿ ಬರೆಯಲು ಒಂದಿಷ್ಟು ಇಂಗ್ಲಿಷ್ ಜ್ಞಾನ ಬೇಕೇಬೇಕಲ್ಲವೆ? ಅದಕ್ಕೂ ತಮಿಳ್ ಸೆಲ್ವನ್ ತಿಣುಕಾಡಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಶ್ರೀನಿವಾಸನ್ ಅದನ್ನು ಗಮಿನಿಸಿ ವ್ಯಂಗ್ಯದ ನಗೆಯನ್ನು ತುಳುಕಿಸುತ್ತಲೇ ಅವನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ. ಆ ನಗೆ ತಮಿಳ್ ಸೆಲ್ವನ್ನನ್ನು ಕೆರಳಿಸುತ್ತಿತ್ತು. ಮಧ್ಯದಲ್ಲಿ ಯಾವುದೋ ಗಂಭೀರ ತಂತ್ರಜ್ಞಾನದ ವಿಷಯವನ್ನು ತಮಿಳ್ ಸೆಲ್ವನ್ ವಿವರಿಸಲು ಶುರು ಮಾಡಿದ. ಶ್ರೀನಿವಾಸನ್ನ ತಂತ್ರಜ್ಞಾನದ ಅಜ್ಞಾನವನ್ನು ಎತ್ತಿ ತೋರಿಸಬೇಕೆಂಬ ಉದ್ದೇಶದಿಂದ “ಸ್ವಲ್ಪ ಸರಿಯಾಗಿ ಈ ಭಾಗವನ್ನು ಕೇಳಿಸ್ಕೋ... ನನಗೇ ಇದು ಅರ್ಥ ಆಗೋಕೆ ಸುಮಾರು ದಿನ ಹಿಡೀತು” ಎಂದು ಹೇಳಿದ.

ಶ್ರೀನಿವಾಸನ್ಗೆ ಉರಿದು ಹೋಯ್ತು. ಒಂದೆರಡು ನಿಮಿಷ ಕೇಳಿಸಿಕೊಂಡನೋ ಇಲ್ಲವೋ, “ಆ ವಾಕ್ಯ ‘ದಿ’ ಎಂಬ ಇಂಗ್ಲೀಷ್ ಪದದಿಂದ ಶುರುವಾಗಬೇಕು. ನೀನು ಅದನ್ನು ಉಪಯೋಗಿಸಿಲ್ಲ” ಎಂದು ಕ್ಯಾತೆ ತೆಗೆದ. ತಮಿಳ್ ಸೆಲ್ವನ್ ಅದಕ್ಕೆ ಚಿಕ್ಕಾಸಿನ ಬೆಲೆಯನ್ನೂ ಕೊಡದೆ “ದಿ ಅನ್ನುವ ಪದ ತಂತ್ರಜ್ಞಾನಕ್ಕೆ ಅಂತಹ ವ್ಯತ್ಯಾಸವನ್ನು ತರುವುದಿಲ್ಲ” ಎಂದು ಅಲಕ್ಷ್ಯದ ಮಾತನ್ನಾಡಿದ. ತಕ್ಷಣ ಶ್ರೀನಿವಾಸನ್ “ನಿಮ್ಮಪ್ಪ ಮನೆಯಲ್ಲಿ ‘ದಿ ಹಿಂದೂ’ ಪತ್ರಿಕೆ ಓದ್ತಾರೋ ಇಲ್ಲಾ ಬರೀ ‘ಹಿಂದೂ’ ಪತ್ರಿಕೆ ಓದ್ತಾರೋ?” ಎಂದು ಲೇವಡಿ ಮಾಡಿದ.

ಈ ಮಾತಿನಲ್ಲಿ ಮಹಾವ್ಯಂಗ್ಯ ತುಂಬಿತ್ತು. ಇಂಗ್ಲೀಷ್ ಪತ್ರಿಕೆ ಏನಾದರೂ ಓದುತ್ತಿದ್ದರೆ ತಮಿಳ್ ಸೆಲ್ವನ್ನ ಅಪ್ಪ ಓದುತ್ತಿರಬಹುದೇ ವಿನಾಃ, ಇವನಂತೂ ಓದುತ್ತಿರಲು ಸಾಧ್ಯವಿಲ್ಲ ಎನ್ನುವ ಕುಹಕವನ್ನು ಶ್ರೀನಿವಾಸನ್ ಆ ಮಾತಲ್ಲಿ ತುಂಬಿದ್ದ. ಮಹಾಬುದ್ಧಿವಂತನಾದ ತಮಿಳ್ ಸೆಲ್ವನ್ಗೆ ಈ ವ್ಯಂಗ್ಯ ತಿಳಿಯುವುದಿಲ್ಲವೆ? ಕೆರಳಿದ ಸರ್ಪವಾದ. “ನಮ್ಮಪ್ಪ ಮನೆಯಲ್ಲಿ ತಮಿಳು ಪತ್ರಿಕೆ ಓದ್ತಾರೆ. ಅದಕ್ಕೇ ನಂಗೆ ತಮಿಳ್ ಸೆಲ್ವನ್ ಅನ್ನೋ ಜೀವಂತ ಭಾಷೆಯ ಹೆಸರು ಇಟ್ಟಾರೆ. ನಿಮ್ಮಪ್ಪನ ತರಹ ಸತ್ತು ಹೋಗಿರೋ ಭಾಷೆಯ ಹೆಸರಿಟ್ಟಿಲ್ಲ” ಅಂದ. ತೊಗೊಳ್ಳಿ, ಯುದ್ಧ ಶುರುವಾಯ್ತು. ಸ್ವತಃ ತಮಿಳು ಮತ್ತು ಸಂಸ್ಕೃತ ಭಾಷೆಗಳೆರಡನ್ನೂ ಅತ್ಯಂತ ಪ್ರೀತಿಯಿಂದ ಕಾಣುವ ನನಗೆ ಇವರಿಬ್ಬರನ್ನೂ ಹತೋಟಿಗೆ ತರುವಷ್ಟರಲ್ಲಿ ಸುಸ್ತು ಹೊಡೆದು ಹೋಯ್ತು.

ಹೋಗಲಿ ಬಿಡಿ, ಇವರಿಬ್ಬರ ವ್ಯಂಗ್ಯವನ್ನೂ ವಯಸ್ಕರಿಬ್ಬರ ಅಹಂಕಾರದ ಘರ್ಷಣೆ ಎಂದು ಅರ್ಥ ಮಾಡಿಕೊಂಡು ಕ್ಷಮಿಸಿಬಿಡೋಣ. ಆದರೆ ಹಿರಿಯರೊಬ್ಬರು ಕಿರಿಯರಿಗೆ ಇಂತಹ ವ್ಯಂಗ್ಯದಿಂದ ನಡೆದುಕೊಂಡರೆ ಮಾತ್ರ, ಅದು ಅತ್ಯಂತ ಅಸಹ್ಯಕರವಾಗಿರುತ್ತದೆ. ಅಂತಹ ಅನುಭವ ಹೇಳಿ ಈ ಪ್ರಬಂಧವನ್ನು ಮುಕ್ತಾಯಗೊಳಿಸುತ್ತೇನೆ.

ಈ ಹಿಂದೊಮ್ಮೆ ಮೂವತ್ತು ದಿನಗಳ, 258 ಕಿಮೀ ನಡೆಯಬೇಕಾದ ಚಾರಣದ ಕೈಲಾಸ-ಮಾನಸ ಸರೋವರದ ಯಾತ್ರೆ ಕೈಗೊಂಡಿದ್ದೆ. ಶಿವನ ಭಕ್ತರಿಗೆ ಇದು ಅತ್ಯಂತ ಪವಿತ್ರ ಯಾತ್ರೆಯಾದ್ದರಿಂದ, ಸ್ವಲ್ಪ ವಯಸ್ಸಾದವರೂ ಜೀವದ ಆಸೆಯನ್ನು ತೊರೆದು ಈ ಯಾತ್ರೆಯಲ್ಲಿ ಭಾಗವಹಿಸುತ್ತಾರೆ.

ವಿಶಾಲವಾದ ಮತ್ತು ನಿರ್ಜನವಾದ ಹಿಮಾಲಯದಲ್ಲಿ ದಿನಗಟ್ಟಲೆ ನಡೆಯುವಾಗ, ಸಹಜವಾಗಿಯೇ ನಾವೆಲ್ಲರೂ ವೈಯಕ್ತಿಕ ಸಂಗತಿಗಳನ್ನು ಹೇಳಿಕೊಂಡು ತುಂಬಾ ಆತ್ಮೀಯರಾಗಿ ಬಿಟ್ಟಿರುತ್ತೇವೆ. ಈ ಗುಂಪಿನಲ್ಲಿ ಆಂಧ್ರಪ್ರದೇಶದಿಂದ ಸಂಗೀತಾ ಎನ್ನುವ ಮೂವತ್ತೈದರ ವಯೋಮಾನದ ಮಹಿಳೆಯೊಬ್ಬರು ಬಂದಿದ್ದರು. ಆಕೆಗೆ ಮದುವೆಯಾಗಿರಲಿಲ್ಲ. ಯಾವುದೋ ಹಂತದಲ್ಲಿ ಆಕೆ ತನ್ನ ಮದುವೆಯ ಸಮಸ್ಯೆಯನ್ನು ಎಲ್ಲರ ಮುಂದೆ ಹೇಳಿಕೊಂಡಳು. ಆರಂಭದಲ್ಲಿ ಮದುವೆಯಾಗುವ ಗಂಡಿನ ಬಗ್ಗೆ ವಿಪರೀತ ಕಲ್ಪನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ತಂದೆ-ತಾಯಿ ತೋರಿಸಿದ ಎಲ್ಲಾ ಸಂಬಂಧಗಳನ್ನೂ ನಿರಾಕರಿಸಿಬಿಟ್ಟಿದ್ದಳು.

ಆದರೆ ವಯಸ್ಸು ಮೂವತ್ತು ದಾಟುತ್ತಿದ್ದಂತೆಯೇ ಆಕೆಗೆ ತನ್ನ ತಪ್ಪಿನ ಅರಿವಾಗತೊಡಗಿತ್ತು. ಅದನ್ನು ಸರಿಪಡಿಸಲು ಎಷ್ಟೇ ಪ್ರಯತ್ನಿಸಿದರೂ ಆಗ ಒಳ್ಳೆಯ ಸಂಬಂಧಗಳು ಯಾವುವೂ ಸಿಗದಂತಾಗಿ ಒಂಟಿಯಾಗಿ ಬಿಟ್ಟಿದ್ದಳು. ಸರ್ಕಾರಿ ಕಾಲೇಜೊಂದರಲ್ಲಿ ಕೆಲಸ ಮಾಡುವ ಈಕೆ, ಈಗ ತನ್ನ ಒಂಟಿತನವನ್ನು ಸ್ವೀಕರಿಸಿಕೊಂಡು, ಅದರಲ್ಲಿಯೇ ನೆಮ್ಮದಿಯಾಗಿ ಇರಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಳು. ಆದರೂ ಆಕೆಯ ಮನಸ್ಸಿನ ಆಳದಲ್ಲಿ ತುಂಬಾ ನೋವು ತುಂಬಿದೆಯೆಂಬುದು ನಮಗೆಲ್ಲರಿಗೂ ಗೊತ್ತಾಗಿತ್ತು.

ಕಮಲಾ ಬೇನ್ ಎನ್ನುವ ಅರವತ್ತೈದು ವಯಸ್ಸಿನ ಗುಜರಾತಿನ ಧಾರ್ಮಿಕ ಮಹಿಳೆಯೂ ನಮ್ಮ ಗುಂಪಲ್ಲಿದ್ದಳು. ವಿಪರೀತವಾಗಿ ಧಾರ್ಮಿಕ ಆಚರಣೆಗಳನ್ನು ಮಾಡುತ್ತಿದ್ದಳು. ಸಂಜೆಯ ಹೊತ್ತು ಭಜನೆಯ ಸಮಯದಲ್ಲಿಯಂತೂ ಈಕೆಯದೇ ಯಜಮಾನಿಕೆ ಇರುತ್ತಿತ್ತು. ಏಕಾದಶಿ ಉಪವಾಸ, ಸೋಮವಾರ ಮೌನವ್ರತ, ಗುರುವಾರ ಒಪ್ಪತ್ತೂಟ– ಇತ್ಯಾದಿಗಳನ್ನು ಮಾಡುತ್ತಾ, ಯಾವತ್ತೂ ಶಿವನ ಪವಾಡದ ಕತೆಗಳನ್ನು ಹೇಳುತ್ತಿದ್ದಳು. ಆಕೆಯ ವಯಸ್ಸಿಗೆ ಈ ಚಾರಣ ತುಂಬಾ ತ್ರಾಸದಾಯಕವಾದರೂ, ಹೇಗೋ ಕುದುರೆಯ ಮೇಲೆ ಕುಳಿತುಕೊಂಡು ದಾರಿಯನ್ನು ಕ್ರಮಿಸಿ, ಶಿವನ ವಾಸಸ್ಥಾನವಾದ ಕೈಲಾಸವನ್ನು ಕಾಣುವುದು ಆಕೆಯ ಜೀವನದ ಬಹುಮುಖ್ಯ ಉದ್ದೇಶವಾಗಿತ್ತು.

ಒಂದು ದಿನ ನಾನು, ಸಂಗೀತಾ ಮತ್ತು ಇತರ ಯಾತ್ರಿಗಳು ಬೆಳಗಿನ ಕಾಫಿ ಕುಡಿಯುತ್ತಾ, ಆರಾಮಾಗಿ ಹರಟೆ ಹೊಡೆಯುತ್ತಾ ಕುಳಿತಿದ್ದೆವು. ಆಗ ಇದ್ದಕ್ಕಿದ್ದಂತೆಯೇ ಬಂದ ಕಮಲಾ ಬೆನ್, ಸಂಗೀತಾಳ ಹಣೆಗೆ ಕುಂಕುಮವನ್ನು ಹಚ್ಚಿ “ಈವತ್ತು ಕನ್ಯಾದಿವಸ ಅದೆ. ನೀನು ಕನ್ಯಾಮಾತಾ, ದಯವಿಟ್ಟು ನನಗೆ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡು” ಎಂದು ಹೇಳಿ ಆಕೆಯ ಪಾದಗಳಿಗೆ ನಮಸ್ಕಾರ ಮಾಡಿಬಿಟ್ಟಳು. ಅರವತ್ತೈದರ ಹೆಂಗಸು, ಮೂವತ್ತೈದರ ಮಹಿಳೆಗೆ ನಮಸ್ಕರಿಸುವ ಆ ದೃಶ್ಯ ಕಸಿವಿಸಿ ಉಂಟು ಮಾಡುತ್ತಿತ್ತು. ಸಂಗೀತಾಗೆ ಏನು ನಡೆಯುತ್ತಿದೆ ಎನ್ನುವುದೇ ಅರ್ಥವಾಗಲಿಲ್ಲ. ಆಮೇಲೆ ಅದರ ಅರ್ಥ ಗೊತ್ತಾಗಿದ್ದೇ, ಕಣ್ಣಲ್ಲಿ ನೀರನ್ನು ತುಳುಕಿಸುತ್ತಾ, ತನ್ನ ಗುಢಾರಕ್ಕೆ ಓಡಿ ಹೋದಳು. ಇಡೀ ದಿನ ಆಕೆ ತನಗಾದ ಅವಮಾನದಿಂದ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ.

‘ಕನ್ಯಾಪೂಜೆ’ ಎನ್ನುವ ವಿಚಿತ್ರ ಸಂಪ್ರದಾಯ ಉತ್ತರ ಭಾರತದಲ್ಲಿದೆ. ಐದು ಅಥವಾ ಒಂಬತ್ತು ಜನ ಕನ್ಯೆಯರಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುವುದು ಆ ದಿನದ ವೈಶಿಷ್ಟ. ಆದರೆ ಸಾಮಾನ್ಯವಾಗಿ ಚಿಕ್ಕ ಹುಡುಗಿಯರನ್ನು ಆಯ್ಕೆ ಮಾಡಿ, ಅವರಿಗೆ ಸಿಹಿ ತಿಂಡಿಗಳನ್ನು ನೀಡಿ, ನಮಸ್ಕಾರ ಮಾಡುವುದು ರೂಢಿಯಲ್ಲಿದೆ. ಆದರೆ ಈ ನಿರ್ಜನ ಹಿಮಾಲಯದಲ್ಲಿ ಮದುವೆಯಾಗದ ಚಿಕ್ಕ ಹುಡುಗಿಯರು ಹೆಚ್ಚಾಗಿ ಇರಲಿಲ್ಲ. ಕಮಲಾ ಬೆನ್ಗೆ ತನ್ನ ವ್ರತವೆಲ್ಲಿ ಭಂಗವಾಗುತ್ತದೆಯೋ ಎನ್ನುವ ಭಯ. ಆದ್ದರಿಂದ ಮೂವತ್ತೈದರ ಸಂಗೀತಾಳಿಗೆ ಇನ್ನೂ ಮದುವೆಯಾಗಿಲ್ಲವೆಂದು ಗೊತ್ತಿದ್ದರಿಂದ, ನಮಸ್ಕಾರ ಮಾಡಿ ಆಶೀರ್ವಾದ ಬೇಡಿದ್ದಳು. ಅದು ಅವಳಲ್ಲಿ ಎಂತಹ ನೋವನ್ನು ಮೂಡಿಸುತ್ತದೆ ಎನ್ನುವ ಯಾವ ಕಳಕಳಿಯೂ ಆಕೆಗಿರಲಿಲ್ಲ. ಅದಕ್ಕೆ ಬದಲು ತನ್ನ ವ್ರತವನ್ನು ಪೂರ್ತಿಗೊಳಿಸಿಕೊಳ್ಳುವ ಏಕೈಕ ಉದ್ದೇಶವನ್ನು ಆಕೆ ಹೊಂದಿದ್ದಳು.

ಸಂಗೀತಾ ನೋವನ್ನು ಉಂಡರೂ ಸಂಜೆಯ ವೇಳೆಗೆ ಜಾಗೃತಳಾದಳು. ಸಂಜೆಯ ಭಜನೆ ಮುಗಿದ ಮೇಲೆ ನಮ್ಮ ಗೈಡ್, ಚಾರಣದಲ್ಲಿ ಏನಾದರೂ ಸಮಸ್ಯೆಯಿದ್ದರೆ ಹೇಳಿಕೊಳ್ಳುವ ಅವಕಾಶವನ್ನು ಕೊಡುತ್ತಿದ್ದರು. ಆ ಹೊತ್ತಿನಲ್ಲಿ ಎದ್ದು ನಿಂತ ಸಂಗೀತಾ “ನಾನು ದಕ್ಷಿಣ ಭಾರತದವಳು. ಈ ‘ಕನ್ಯಾಪೂಜೆ’ಯ ಸಂಪ್ರದಾಯ ನನಗೆ ತಿಳಿದಿಲ್ಲ. ಆದರೆ ಕಮಲಾ ಬೆನ್ ಅದರ ಬಗ್ಗೆ ನನ್ನನ್ನು ವಿಚಾರಿಸಿ ಒಪ್ಪಿಗೆ ಪಡೆಯದೆ, ನನಗೆ ನಮಸ್ಕಾರ ಮಾಡಿ ಅವಮಾನ ಮಾಡಿದ್ದಾಳೆ. ಹಿರಿಯಳಾದ ಆಕೆಗೆ ತನ್ನ ಸಂಪ್ರದಾಯದಿಂದ ಮತ್ತೊಬ್ಬರಿಗೆ ನೋವಾಗುತ್ತದೆಯೇ ಇಲ್ಲವೋ ಎಂಬ ವಿವೇಚನೆ ಇರಬೇಕು.

ಅದಿಲ್ಲದಂತೆ ಆಕೆ ವರ್ತಿಸಿದ್ದಾಳೆ. ಆದ್ದರಿಂದ ಆಕೆ ನನ್ನ ಕ್ಷಮೆ ಕೇಳಬೇಕು” ಎಂದು ಪಟ್ಟು ಹಿಡಿದಳು. ಕಮಲಾ ಬೆನ್ಗೆ ತಾನು ಮಾಡಿದ ತಪ್ಪಾದರೂ ಏನು ಎಂದು ಅರ್ಥ ಮಾಡಿಸುವುದೇ ನಮಗೆ ಕಷ್ಟವಾಯ್ತು. “ಈ ಗುಂಪಿನಲ್ಲಿ ಕೇವಲ ಐದು ಜನ ಕನ್ಯೆಯರಿದ್ದಾರೆ. ಅವರನ್ನು ಹುಡುಕಿ ನಾನು ನಮಸ್ಕಾರ ಮಾಡಿದ್ದೇನೆ. ಹಿರಿಯರು ಮಾಡಿದ ಸಂಪ್ರದಾಯವನ್ನು ಆಚರಿಸುವುದರಲ್ಲಿ ತಪ್ಪೇನಿದೆ?” ಎಂದು ಮತ್ತೆ ಮತ್ತೆ ಕೇಳಲಾರಂಭಿಸಿದಳು. ಸಂಗೀತ ಹಿಡಿದ ಹಟವನ್ನು ಬಿಡಲಿಲ್ಲ. ಕೊನೆಗೆ ಕಮಲಾ ಬೆನ್ ತಾನು ಮಾಡಿದ ಪವಿತ್ರವಾದ ಕಾರ್ಯ ಸಂಗೀತಾಗೆ ನೋವು ಕೊಟ್ಟಿದ್ದರೆ ಅದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದು ಕಣ್ಣಲ್ಲಿ ನೀರು ಸುರಿಸುತ್ತಾ ಹೇಳಿದ ಮೇಲೆ, ಸಂಗೀತಾ ಬೀಸು ನಡಿಗೆಯಲ್ಲಿ ತನ್ನ ಗುಢಾರಕ್ಕೆ ತೆರಳಿದಳು.

ವ್ಯಂಗ್ಯದ ಮಾತಿಗೆ, ವರ್ತನೆಗೆ ಅತ್ಯಂತ ಜಾಣತನ ಬೇಕು. ಆದರೆ ಅದನ್ನು ಮತ್ತೊಬ್ಬರ ಮನಸ್ಸನ್ನು ನೋಯಿಸುವುದಕ್ಕೆ ನಾವು ಬಳಸುತ್ತಾ ಹೋದರೆ, ಅದಕ್ಕೇ ನಮ್ಮ ಸೃಜನಶೀಲತೆಯನ್ನೆಲ್ಲ ವ್ಯರ್ಥ ಮಾಡಿಕೊಳ್ಳುತ್ತೇವೆ. ಅದನ್ನು ಉತ್ತೇಜಿಸುವ ಗೆಳೆಯರ ಹಿಂಡು ನಮ್ಮ ಸುತ್ತಲೂ ಇದ್ದರಂತೂ ತೀರಿತು. ಕಳ್ಳು ಕುಡಿದ ಕಪಿಯಂತೆ ಅಗಿ ಬಿಡುತ್ತೇವೆ. ಆದರೆ ಪರರ ನೋಯಿಸುವ ವ್ಯಂಗ್ಯವನ್ನು ಅಭ್ಯಾಸ ಮಾಡಿಕೊಳ್ಳುವುದರಿಂದ ನಮ್ಮ ವ್ಯಕ್ತಿತ್ವ ತನ್ನೆಲ್ಲಾ ಶಕ್ತಿಯನ್ನು ಮೈಗೂಡಿಸಿಕೊಂಡರೂ ಒಂದು ಬೊನ್ಸಾಯ್ ಗಿಡವಾಗಿ ಒಂದಿಷ್ಟು ಹಣ್ಣು ಬಿಟ್ಟೀತೇ ಹೊರತು, ದೊಡ್ಡ ವೃಕ್ಷವಂತೂ ಆಗಲು ಸಾಧ್ಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.