ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆಯ ಸಾಕಾರಮೂರ್ತಿ ಠಾಕೂರ್

ವ್ಯಕ್ತಿ
ಅಕ್ಷರ ಗಾತ್ರ

ನ್ಯಾಯಮೂರ್ತಿ ತೀರ್ಥಸಿಂಗ್‌ ಠಾಕೂರ್‌ ಅವರ ಕುರಿತು ಏನಾದರೂ ಮಾತನಾಡಬೇಕೆಂದರೆ ಮೊದಲಿಗೆ ಅವರ ತಂದೆಯ ಬಗ್ಗೆ ಒಂದೆರಡು ಮಾತುಗಳನ್ನು ಹೇಳಲೇಬೇಕು. ಟಿ.ಎಸ್‌.ಠಾಕೂರ್‌ ಅವರ ತಂದೆ ದಿವಂಗತ ದೇವಿದಾಸ್ ಠಾಕೂರ್‌ ಜಮ್ಮು ಕಾಶ್ಮೀರದ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಆಗಿದ್ದವರು. ನಂತರ ಜಮ್ಮು ಕಾಶ್ಮೀರದ ಹಣಕಾಸು ಮಂತ್ರಿ ಮತ್ತು ಜಮ್ಮು ಕಾಶ್ಮೀರದ ಉಪ ಮುಖ್ಯಮಂತ್ರಿ ಆದವರು. ಆನಂತರ ಅಸ್ಸಾಂನ ರಾಜ್ಯಪಾಲರೂ ಆಗಿದ್ದರು. ಆಮೇಲೆ ಸುಪ್ರೀಂಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿ ವಕೀಲಿಕೆ ನಡೆಸುತ್ತಾ ನಿವೃತ್ತ ಜೀವನ ಕಳೆದವರು. ದೇವಿದಾಸ್‌ ಠಾಕೂರ್‌ ಒಬ್ಬ ಅತ್ಯುತ್ತಮ ತತ್ವಜ್ಞಾನಿ, ಇತಿಹಾಸದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದ ವ್ಯಕ್ತಿ.

ಶ್ರೀಮಂತ ವೃತ್ತಿಪರತೆಯ, ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದ ತೀರ್ಥಸಿಂಗ್ ಠಾಕೂರ್ ಜನಿಸಿದ್ದು ಜಮ್ಮು– ಶ್ರೀನಗರ ರಾಷ್ಟ್ರೀಯ ಹೆದ್ದಾರಿ 44 ರಲ್ಲಿರುವ ಜಿಲ್ಲಾ ಕೇಂದ್ರ ರಾಮಬನದಲ್ಲಿ. ಚಂದ್ರಭಾಗಾ ನದಿ ತೀರ ಹಾಗೂ ಹಿಮಾಲಯದ ತಪ್ಪಲಲ್ಲಿರುವ ರಾಮಬನ ಅಸೀಮ ಸೌಂದರ್ಯದ ಊರು. 1952ರ ಜನವರಿ 4 ಇವರ ಜನ್ಮದಿನ. ಬಿ.ಎಸ್ಸಿ, ಎಲ್‌ಎಲ್‌.ಬಿ ಪದವೀಧರರಾದ ಟಿ.ಎಸ್‌.ಠಾಕೂರ್‌ 1972ರಲ್ಲಿ ಜಮ್ಮು ಕಾಶ್ಮೀರ ವಕೀಲರ ಪರಿಷತ್‌ನಲ್ಲಿ ವಕೀಲರಾಗಿ ನೋಂದಣಿ ಹೊಂದಿದವರು. ತಮ್ಮ ತಂದೆಯ ಕಚೇರಿಯಲ್ಲೇ ಕಿರಿಯ ವಕೀಲರಾಗಿ ವೃತ್ತಿ ಆರಂಭಿಸಿದ ಅವರು ಸಿವಿಲ್‌, ಕ್ರಿಮಿನಲ್‌, ಸಾಂವಿಧಾನಿಕ, ತೆರಿಗೆ, ಸೇವಾ ಕ್ಷೇತ್ರಗಳ ಪ್ರಕರಣಗಳಲ್ಲಿ ಪರಿಣತಿ ಗಳಿಸಿದವರು. 1990ರಲ್ಲಿ ಜಮ್ಮು ಕಾಶ್ಮೀರ ಹೈಕೋರ್ಟ್‌ ಹಿರಿಯ ವಕೀಲರಾಗಿ ನಿಯುಕ್ತಿಗೊಂಡರು. 1994ರ ಫೆಬ್ರುವರಿ 16ರಂದು ಜಮ್ಮು ಕಾಶ್ಮೀರದ ಹೈಕೋರ್ಟ್‌ನಲ್ಲಿ ಹಂಗಾಮಿ ನ್ಯಾಯಮೂರ್ತಿಯೂ ಆದರು. ಇದರ ಬೆನ್ನಲ್ಲೇ, ಅಂದರೆ ಮಾರ್ಚ್‌ನಲ್ಲಿಯೇ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ವರ್ಗಾವಣೆಗೊಂಡು 1995ರಲ್ಲಿ ಕಾಯಂ ನ್ಯಾಯಮೂರ್ತಿಗಳೆನಿಸಿದರು.

ಸುಮಾರು 10 ವರ್ಷಗಳ ಕಾಲ ಕರ್ನಾಟಕ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸಿರುವ ಠಾಕೂರ್‌ ಅವರಿಗೆ ಈಗಲೂ ಬೆಂಗಳೂರು ಎಂದರೆ ಪಂಚಪ್ರಾಣ. ನೋಡಲಂತೂ ಸ್ಫುರದ್ರೂಪಿ. ಅಕ್ಷರಶಃ ಸುಂದರಾಂಗ. ಸೇಬುಹಣ್ಣಿನಂತಹ ಮುಖದಲ್ಲಿ ಕೆಳದುಟಿಯ ಬಗಲಲ್ಲೊಂದು ದೃಷ್ಟಿಬೊಟ್ಟಿನಂತಹ ನಾರುಳ್ಳೆ. ಆಳದಲ್ಲಿ ಅತ್ಯಂತ ಮಾನವೀಯತೆ ಉಳ್ಳ ಹಾಗೂ ಸೂಕ್ಷ್ಮ ಸಂವೇದನಾ ಜೀವಿ.

ಹಿರಿಯ–ಕಿರಿಯ ವಕೀಲರೆನ್ನದೆ ಎಲ್ಲರನ್ನೂ ಏಕೋಭಾವದಿಂದ ಕಾಣುವ ಸಂಯಮಶೀಲ ನಡವಳಿಕೆ ಅವರದ್ದು. ಅವರಿಗೆ ಮೂವರು ಮಕ್ಕಳು. ಸಿದ್ಧಾರ್ಥ ಮತ್ತು ಶರಣ್‌ ಎಂಬ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ನತಾಶ. ಸಿದ್ಧಾರ್ಥ ಮತ್ತು ಶರಣ್‌ ಸುಪ್ರೀಂ ಕೋರ್ಟ್‌ನಲ್ಲಿ ಹೆಸರಾಂತ ವಕೀಲರು. ಸ್ವಭಾವತಃ ಠಾಕೂರ್‌ ಬಹಳ  ಸಮಾಧಾನಿ. ಅವರ ಎದುರು ಯಾವುದೇ ವಕೀಲರು ವಾದ ಮಾಡಲು ನಿಂತರೂ, ಯಾವತ್ತೂ ನಡುವೆ ಬಾಯಿ ಹಾಕಿದವರಲ್ಲ.

ಬೆಂಗಳೂರಿನಿಂದ ದೆಹಲಿ ಹೈಕೋರ್ಟ್‌ಗೆ ವರ್ಗಾವಣೆಗೊಂಡಾಗ ಬೆಂಗಳೂರು ವಕೀಲರ ಸಂಘದ ವತಿಯಿಂದ ಅವರಿಗೆ ಪುಟ್ಟದೊಂದು ಸನ್ಮಾನ ಕಾರ್ಯಕ್ರಮ ನಡೆಯಿತು. ಆಗ ನಾನು ಅವರ ಕೊರಳಿಗೆ ದೊಡ್ಡದೊಂದು ಹಾರ ಹಾಕಿದೆ (ಹಾರವನ್ನು ನಾನು ತಂದಿರಲಿಲ್ಲ). ಅದಕ್ಕೆ ಅವರು, ‘ಅಯ್ಯೋ ಇಷ್ಟೊಂದು ದೊಡ್ಡ ಹಾರ ಏಕೆ? ನನಗೆ ಮೈಸೂರು ಮಲ್ಲಿಗೆ ಅಂದರೆ ತುಂಬಾ ಇಷ್ಟ. ಅದನ್ನೇ ಕೊಟ್ಟಿದ್ದರೆ ಸಾಕಿತ್ತು’ ಎಂದಿದ್ದರು. ಆಡಂಬರವನ್ನು ಬಯಸದ ಸರಳತೆ ಅವರದ್ದು.

ಠಾಕೂರ್‌ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುವ ಮುನ್ನ ಎರಡು ದಶಕಗಳಿಗೂ ಹೆಚ್ಚಿನ ಕಾಲದ ವಕೀಲಿ ವೃತ್ತಿಯಲ್ಲಿ ಸುಮಾರು 2 ಸಾವಿರ ಪ್ರಕರಣಗಳಲ್ಲಿ ವಾದ ಮಂಡಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

ಕರ್ನಾಟಕ ಹೈಕೋರ್ಟ್‌ನಲ್ಲಿ ಇದ್ದಷ್ಟೂ ದಿನ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು, ಸಹಕಾರ ಸಂಘಗಳ ಪ್ರಕರಣ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದಾಖಲಾದ ಪ್ರಕರಣಗಳು, ಶಿಕ್ಷಣ, ಕಂಪೆನಿ ಹಾಗೂ ಮೂಲಭೂತ ಹಕ್ಕುಗಳ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶಗಳನ್ನು ನೀಡಿದ್ದಾರೆ.

‘ಹೈಕೋರ್ಟ್‌ ಕೇವಲ ಕಾನೂನಿನ ಕಣ್ಪಟ್ಟಿಯಲ್ಲೇ ಸೀಮಿತಗೊಂಡು ನಡೆಯಬೇಕಿಲ್ಲ. ನಾವೆಲ್ಲಾ ನ್ಯಾಯಮೂರ್ತಿಗಳು ಎನಿಸಿಕೊಂಡವರು. ಸಮಾಜವನ್ನು ಒಂದಿಷ್ಟು ಕಣ್ತೆರೆದು ನೋಡುವ ವಿಶಾಲತೆ ಇಟ್ಟುಕೊಂಡಿರಬೇಕು’ ಎಂಬ ಧೋರಣೆ ಮತ್ತು ಆಶಯವನ್ನು ಅವರು ಸದಾ ವ್ಯಕ್ತಪಡಿಸುತ್ತಿದ್ದರು. ‘ಕಿರಿಯ ವಕೀಲರು ಶ್ರದ್ಧೆಯಿಂದ ದುಡಿಯಬೇಕು. ವಕೀಲಿಕೆ ಎಂದರೆ ನಿವೃತ್ತಿ ಇಲ್ಲದ, ಪಿಂಚಣಿಯೂ ದಕ್ಕದ ವೃತ್ತಿ. ವಯಸ್ಸಾದ ಮೇಲೆ ಅಂತ ಒಂದಿಷ್ಟು ಹಣವನ್ನು ಶರೀರದಲ್ಲಿ ಕಸುವಿದ್ದಾಗಲೇ ಕೂಡಿಟ್ಟುಕೊಳ್ಳಿ’ ಎಂದು ಕಿರಿಯರಿಗೆ ಸಲಹೆ ನೀಡುತ್ತಿದ್ದರು.

ಕಿರಿಯ ವಕೀಲರು ಕಾನೂನು ವರದಿಗಳ ಅಧ್ಯಯನಕ್ಕೆ ಅಂತರ್ಜಾಲದ ಮೊರೆ ಹೋಗುವುದನ್ನು ಬಲವಾಗಿ ಆಕ್ಷೇಪಿಸುತ್ತಿದ್ದ ಠಾಕೂರ್‌, ಯಾವತ್ತೂ ಪುಸ್ತಕಗಳನ್ನು ಓದುವುದೇ ಶ್ರೇಷ್ಠ ಎನ್ನುತ್ತಿದ್ದರು. ಯಾಕೆ ಎಂದು ಕೇಳಿದರೆ, ‘ದರ್ಶಿನಿ ಊಟಕ್ಕೂ ಮನೆಯ ಹಬ್ಬದೂಟಕ್ಕೂ ವ್ಯತ್ಯಾಸವಿದೆಯಲ್ಲವೇ’ ಎಂದು ನಕ್ಕುಬಿಡುತ್ತಿದ್ದರು.

ಹೈಕೋರ್ಟ್‌ನಲ್ಲಿ ನನ್ನ ಮೊದಲ ದಿನಗಳವು. ಅದೊಂದು ದಿನ ನಾನು ನ್ಯಾಯಮೂರ್ತಿ ಟಿ.ಎಸ್.ಠಾಕೂರ್‌ ಅವರ ನ್ಯಾಯಪೀಠದ ಮುಂದೆ ವಾದ ಮಂಡಿಸಬೇಕಿತ್ತು.  ಸರಿ, ನನ್ನ ಪ್ರಕರಣವನ್ನು ಕೂಗಿದಾಗ ಹೋಗಿ ವಾದ ಮಂಡಿಸಲು ಆರಂಭಿಸಿದೆ. ಆದರೆ ಕೆಲವೇ ಹೊತ್ತಿನಲ್ಲಿ ಠಾಕೂರ್ ಅವರು, ‘ಏನಿದು?  ದೀಕ್ಷಿತರೇ ಈ ವಾದ ಮಂಡಿಸುತ್ತಿದ್ದಾರೋ ಹೇಗೆ? ಒಂದಿಷ್ಟೂ ಪೂರ್ವ ತಯಾರಿ ಇಲ್ಲದೆ ಬಂದಿರುವ ನೀವು ಕೋರ್ಟ್‌ನ ಸಮಯವನ್ನು ಹಾಳು ಮಾಡುತ್ತಿದ್ದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ನಾನು, ‘ಹೌದು ಸ್ವಾಮಿ  ಪ್ರಕರಣದ ಬಗ್ಗೆ ಓದಿಕೊಂಡು ಬರಲು ಆಗಿಲ್ಲ. ನಿಜಕ್ಕೂ ನಾನು ಕೋರ್ಟ್‌ ಸಮಯ ಹಾಳು ಮಾಡುತ್ತಿದ್ದೇನೆ. ವಾಸ್ತವದಲ್ಲಿ ನನ್ನ ವೈಯಕ್ತಿಕ ಸಮಸ್ಯೆಯೇ ಇದಕ್ಕೆ ಕಾರಣ’ ಎಂದೆ. ಕೂಡಲೇ, ‘ಏನದು ಸಮಸ್ಯೆ’ ಎಂದರು. ‘ಸ್ವಾಮಿ ಇನ್ನೂ ವರುಷ ತುಂಬದ ನನ್ನ ಮಗಳು ಗೌರಿ ನಿನ್ನೆ ಅಮ್ಮನ ಮಡಿಲಿಂದ ಕೆಳಗೆ ಬಿದ್ದುಬಿಟ್ಟಿದ್ದಾಳೆ. ಎಲ್ಲಿ ಅವಳ ತಲೆಗೆ ಪೆಟ್ಟಾಗಿದೆಯೋ ಎಂದು ನಾನು ಚಿಂತಾತುರನಾಗಿದ್ದೇನೆ. ಮನಸ್ಸೆಲ್ಲಾ ಕದಡಿ ಹೋಗಿದೆ’ ಎಂದೆ. ತಕ್ಷಣ ಅವರು ನನ್ನ ಪ್ರಕರಣಕ್ಕೆ ಎರಡು ವಾರಗಳ ಮುದ್ದತ್ತು ನೀಡಿ ಈಗಲೇ ಹೋಗಿ ಮಗಳ ಯೋಗಕ್ಷೇಮದ ಕಾಳಜಿ ವಹಿಸಿ ಎಂದಿದ್ದರು.

ಇದಾದ ಒಂದು ವಾರದ ನಂತರ ನನ್ನನ್ನು ತಮ್ಮ ಚೇಂಬರ್‌ಗೆ ಕರೆಸಿಕೊಂಡು ಮಗಳ ಕುಶಲೋಪರಿ ವಿಚಾರಿಸಿ ಕಳಿಸಿದ್ದರು. ಇದು ಅವರ ಮಾನವೀಯ ಮುಖ. ಪ್ರತಿಯೊಬ್ಬ ವಕೀಲರ ಸುಖ–ದುಃಖಗಳನ್ನು ನಾಜೂಕಾಗಿ ಗಮನಿಸುವ ಗುಣ ಅವರಲ್ಲಿ ಯಾವತ್ತೂ ಹಿಂದೆ ಸರಿಯುತ್ತಿರಲಿಲ್ಲ.

ಠಾಕೂರ್‌ ಅವರಲ್ಲಿನ ನಕಾರಾತ್ಮಕ ಅಂಶಗಳೆಂದರೆ, ಪ್ರಕರಣಗಳ ಪ್ರಾಥಮಿಕ ವಿಚಾರಣೆಯಲ್ಲೇ ಹೆಚ್ಚು ಸಮಯ ಕಳೆದುಬಿಡುವ ಪ್ರವೃತ್ತಿ ಹಾಗೂ ಎದುರುದಾರರಿಗೆ ನೋಟಿಸ್ ಜಾರಿ ಆಗಿ ಅವರು ಆಕ್ಷೇಪಣೆ ಸಲ್ಲಿಸಿದ ಬಳಿಕವೇ ಮಧ್ಯಂತರ ತಡೆಯಾಜ್ಞೆ ನೀಡುವ ಜಾಯಮಾನ.

ಠಾಕೂರ್‌ ದೆಹಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಕರ್ನಾಟಕದಿಂದ ವರ್ಗವಾದ ನಂತರ ಪಂಜಾಬ್‌ ಹರಿಯಾಣ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.  2009ರ ನವೆಂಬರ್‌ 17ರಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದ್ದಾರೆ. ಬರುವ ಡಿಸೆಂಬರ್ 2ರಿಂದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸ್ಥಾನವನ್ನು ಅಲಂಕರಿಸಲಿರುವ ಠಾಕೂರ್  2017ರ ಜನವರಿ 4ರಂದು ನಿವೃತ್ತರಾಗಲಿದ್ದಾರೆ. ಒಂದು ವರ್ಷಕ್ಕೂ ಹೆಚ್ಚಿನ ಅವರ ಈ ಸೇವಾವಧಿಯಲ್ಲಿ ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಖಂಡಿತಾ ಹೊಸದೊಂದು ವ್ಯಕ್ತಿತ್ವ ದಕ್ಕುತ್ತದೆ ಎಂಬ ವಿಶ್ವಾಸ ನನಗಿದೆ.
ಲೇಖಕ ಸಹಾಯಕ ಸಾಲಿಸಿಟರ್‌ ಜನರಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT