ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ– ಪ್ರಾಣಿ ಸಂಘರ್ಷ; ಒಕ್ಕಲೆಬ್ಬಿಸುವ ದುಸ್ಸಾಹಸವೇಕೆ?

Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಕಳೆದ 20-30 ವರ್ಷಗಳಲ್ಲಿ ಪ್ರಾಣಿ- ಮಾನವ ಸಂಘರ್ಷ ಹೆಚ್ಚಿರುವುದಂತೂ ನಿಜ. ಅರಣ್ಯ ಇಲಾಖೆಯ ದಾಖಲೆಗಳು ಸ್ಪಷ್ಟವಾಗಿ ಇದನ್ನು ಹೇಳುತ್ತವೆ. ಆದರೆ, ಈ ಸಂಘರ್ಷ ಹೆಚ್ಚಲು ಕಾರಣವೇನು? ಕಾಡುಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಏಕೆ ಬರುತ್ತಿವೆ ಎಂಬ ಪ್ರಶ್ನೆ ಸಂಕೀರ್ಣವಾದದ್ದಷ್ಟೇ ಅಲ್ಲ ಸುಲಭ ವಿಶ್ಲೇಷಣೆಗೆ ದಕ್ಕುವುದೂ ಇಲ್ಲ. ನಾಡಿಗೆ ಬರುವ ಪ್ರಾಣಿಗಳನ್ನು ಕಾಡಿಗೆ ಸ್ಥಳಾಂತರಿಸಬೇಕು ಎನ್ನುವುದೂ ಇದಕ್ಕೆ ಪರಿಹಾರವಲ್ಲ.

ಈ ಸಮಸ್ಯೆಗೆ ನೂರಾರು ಕಾರಣಗಳಿವೆ. ಅವು ಸ್ಥಳದಿಂದ ಸ್ಥಳಕ್ಕೆ ಜೀವಿಗಳಿಂದ ಜೀವಿಗಳಿಗೆ ಭಿನ್ನವಾಗಿರುತ್ತವೆ. ಮೂಲ ಕಾರಣಗಳನ್ನು ಹುಡುಕಿದರೆ, ಬಹುಶಃ ಗುಣಮಟ್ಟ ಕಳೆದುಕೊಳ್ಳುತ್ತಿರುವ ಕಾಡುಗಳು ಮತ್ತು ಛಿದ್ರವಾಗುತ್ತಿರುವ ಅವುಗಳ ನೆಲೆ, ಜೀವ ಸಂಕುಲದಲ್ಲಿ  ಉಂಟಾಗುತ್ತಿರುವ ತಲ್ಲಣಗಳು ಈ ಸಂಘರ್ಷಗಳ ಮೂಲಕ ವ್ಯಕ್ತವಾಗುತ್ತಿವೆ ಎನಿಸುತ್ತದೆ.

ವನ್ಯಜೀವಿಗಳಿಗೆಂದು ಕಾಯ್ದಿರಿಸಿದ ಅರಣ್ಯಗಳು ಇಂದು ಸುಸ್ಥಿತಿಯಲ್ಲಿಲ್ಲ. ಹಲವಾರು ಕಾರಣಗಳಿಂದ ಅವು ಛಿದ್ರಗೊಂಡು ದ್ವೀಪಗಳಂತೆ ಬಿಡಿಬಿಡಿಯಾಗಿವೆ. ಅಂದರೆ, ಕಾಡು- ಕಾಡುಗಳ ನಡುವೆ ಸಂಪರ್ಕವೇ ಇಲ್ಲವಾಗಿದೆ. ಯಾವುದೇ ಆರೋಗ್ಯಕರ ಜೈವಿಕ ವ್ಯವಸ್ಥೆಯಲ್ಲಿ ಜೀವಿಗಳ ವಂಶವಾಹಿಗಳು ನಿರಂತರವಾಗಿ ಮುಂದುವರಿಯುತ್ತಲೇ  ಇರಬೇಕು. ಅದು ಯಶಸ್ವಿಯಾದಾಗ ಮಾತ್ರ ಒಂದು ಜೀವಿ ಸಂತತಿ ದೀರ್ಘಕಾಲ ಬದುಕುವ ಸಾಮರ್ಥ್ಯ ಉಳಿಸಿಕೊಳ್ಳುತ್ತದೆ. ಕಾಡಿನ ಮಧ್ಯೆ ಮಧ್ಯೆ ಹಳ್ಳಿಗಳೂ, ನಗರಗಳೂ ಹುಟ್ಟಿಕೊಂಡಿವೆ. ಇದರ ಜತೆಗೆ ಕಾಡಿನ ಜೀವವೈವಿಧ್ಯ ಈಗ ಏರುಪೇರಾಗಿದೆ. ಕಾಡಿನ ಸಸ್ಯ ಸಂಯೋಜನೆ ಸಂಪೂರ್ಣ  ಬದಲಾಗಿದೆ. ಲಂಟಾನದಂತಹ ವಿದೇಶಿ ಕಳೆಗಳು ಕಾಡನ್ನು ಆವರಿಸಿವೆ. ಇದು ಸ್ಥಳೀಯ ಸಸ್ಯಗಳ ಅಸ್ತಿತ್ವಕ್ಕೆ ಸವಾಲಾಗಿದೆ. ಇಂತಹ ಬದಲಾವಣೆಗಳು ವನ್ಯಜೀವಿಗಳ ಬದುಕಿನ ಮೇಲೆ ಮಾಡಿರುವ ಪರಿಣಾಮ ಅತ್ಯಂತ ಗಂಭೀರ ಮತ್ತು ಸಂಕೀರ್ಣವಾದದ್ದು. ಉದಾಹರಣೆಗೆ, ಬಂಡೀಪುರ ಅರಣ್ಯ. ಇಲ್ಲಿ ಶೇ 50ರಷ್ಟು ಪ್ರದೇಶವನ್ನು ಲಂಟಾನ ಆವರಿಸಿದೆ. ಇದರಿಂದ ಅಲ್ಲಿ ಹುಲ್ಲು ಬೆಳೆಯಲು ಈ ಕಳೆ ಆಸ್ಪದ ನೀಡುತ್ತಿಲ್ಲ. ಇದಷ್ಟೇ ಅಲ್ಲ, ಇದು ಆನೆಗಳ ಆಹಾರ ಪದ್ಧತಿಯ ಮೇಲೆ ಪ್ರಬಲ ಪರಿಣಾಮ ಬೀರುತ್ತಿದೆ.

ಕಾಡು ಮುಂಚೆಗಿಂತಲೂ ಮೇಲ್ನೋಟಕ್ಕೆ ದಟ್ಟವಾಗಿರುವಂತೆ ಕಂಡರೂ ಅಲ್ಲಿನ ಜೈವಿಕ ವೈವಿಧ್ಯ ಕದಡಿದೆ. ಇದನ್ನು ಕಾಡಿನ ಗುಣಮಟ್ಟ ಎನ್ನುತ್ತೇವೆ. ಜಿಂಕೆ ಹುಲ್ಲು ತಿನ್ನುತ್ತದೆ ಎನ್ನುವುದು ಸಾಮಾನ್ಯ ಜ್ಞಾನ. ಆದರೆ, ಒಂದು ವರ್ಷದಲ್ಲಿ ಅದು ಏನೇನು ತಿನ್ನುತ್ತದೆ ಎಂದು ದಾಖಲಿಸಿದರೆ, ಹುಲ್ಲಿನ ಜತೆಗೆ ಗಿಡ, ಅದರ ಚಿಗುರು, ಹಣ್ಣು, ಕಾಯಿ, ಒಣಗಿದ ಎಲೆ, ಹೂವು ಎಲ್ಲವನ್ನೂ ತಿನ್ನುತ್ತದೆ. ಈ ಆಹಾರ ವೈವಿಧ್ಯತೆಗೆ ಈಗ ಭಂಗ ಬಂದಿದೆ. ಇಲ್ಲಿ ಜಿಂಕೆ ಕೇವಲ ಉದಾಹರಣೆಯಷ್ಟೇ. ಮನುಷ್ಯ ಪ್ರವೇಶದಿಂದ ವೈವಿಧ್ಯ ನಾಶವಾಗಿದೆ. ಜತೆಗೆ, ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ. ಗುಣಮಟ್ಟವಿಲ್ಲದ ಕಾಡಿನಲ್ಲಿ ಅವು ಬದುಕು ನೂಕುವುದು ಸವಾಲಾಗಿ ಪರಿಣಮಿಸಿದೆ.

ಪ್ರಾಣಿಗಳು ಕಾಡು ಬಿಟ್ಟು ಊರಿಗೆ ಬರುತ್ತಿವೆ ಎಂದು ಹೇಳುವುದು ಅಷ್ಟು ಸರಿಯಾದ ವ್ಯಾಖ್ಯಾನವಲ್ಲ. ಚಿರತೆಯಂತಹ ಪ್ರಾಣಿಗಳು ಹಿಂದೆ ನಗರದಿಂದ 10– 15 ಕಿಲೊ ಮೀಟರ್‌ ವ್ಯಾಪ್ತಿಯಲ್ಲೇ ಇರುತ್ತಿದ್ದವು. ಈಗ ನಗರದೊಳಗೇ ಬರುತ್ತಿವೆ. ಹೀಗಿರುವಾಗ ಅವು ಯಾವುದೋ ಕಾಡಿನಿಂದ ಊರಿಗೆ ಬಂದವೆಂದು ಹೇಳುವುದು ಹೇಗೆ? 

ಮಾಧ್ಯಮಗಳ  ಸುದ್ದಿ ಸ್ಫೋಟದಿಂದ ಪ್ರಾಣಿಗಳ ಬಗ್ಗೆ ಮಾನವ ಭಯಭೀತನಾಗುವುದರ ಜತೆಗೆ,  ಅವುಗಳ ಬಗ್ಗೆ ದ್ವೇಷದ ಮನೋಭಾವವನ್ನೂ ಬೆಳೆಸಿಕೊಂಡು ವನ್ಯಜೀವಿಗಳ ಸಂರಕ್ಷಣಾ ಕಾರ್ಯಕ್ಕೆ ತೊಡಕಾಗುವ ಸಾಧ್ಯತೆಗಳೇ ಹೆಚ್ಚು. ಹೀಗಾಗಿ ಇಂತಹ ಸಂದರ್ಭಗಳಲ್ಲಿ ಮಾಧ್ಯಮಗಳು ಹೆಚ್ಚು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು.  ಚಿರತೆ ತಾನೇ ತಾನಾಗಿ ಎಂದಿಗೂ ದಾಳಿ ಮಾಡಿರುವುದಿಲ್ಲ. ಆದರೆ, ಪ್ರಕಟವಾಗುವ ಸುದ್ದಿ ಮಾತ್ರ ‘ಚಿರತೆ ದಾಳಿ’ ಎಂದೇ ಇರುತ್ತದೆ. ಈಚೆಗೆ ಶಾಲೆಗೆ ನುಗ್ಗಿದ ಚಿರತೆಯೂ ತಾನಾಗೇ ದಾಳಿ ಮಾಡಲಿಲ್ಲ. ಅದನ್ನು ಹಿಡಿಯಲು ಹೂಡಿದ ತಂತ್ರ ಕೈಕೊಟ್ಟಿದ್ದರಿಂದ ಅವಾಂತರಕ್ಕೆ ಅವಕಾಶವಾಯಿತು. ಬಹುತೇಕ ಆಕಸ್ಮಿಕವಾಗಿ ಜರುಗುವ ಘಟನೆಗಳಿಗೆ ‘ದಾಳಿ’ ಹಣೆಪಟ್ಟಿ ಕಟ್ಟುವ ಕೆಲಸ ಆಗುತ್ತಲೇ ಇದೆ.

‘ಚಿರತೆಯಂತಹ ಪ್ರಾಣಿಗಳನ್ನು ಕೂಡಲೇ ಕಾಡಿಗೆ ಸ್ಥಳಾಂತರಿಸಬೇಕು, ಇದರಿಂದ ಸಮಸ್ಯೆ ಪರಿಹಾರವಾಗಿ ಬಿಡುತ್ತದೆ’ ಎಂಬಂತಹ ಚರ್ಚೆಗಳು ಸಹ ಅವೈಜ್ಞಾನಿಕ. ಈ ಸಂಬಂಧ, ಕೆಲವು ವರ್ಷಗಳ ಹಿಂದಿನ ಈ ಪ್ರಕರಣವನ್ನು ಉಲ್ಲೇಖಿಸುವುದು ಮುಖ್ಯ ಅನ್ನಿಸುತ್ತದೆ. ಸಕಲೇಶಪುರ ಬಳಿಯ ಕಟ್ಟೇಪುರ ಎಂಬಲ್ಲಿ ಆನೆ ದಾಳಿ ವಿಪರೀತವಾಗಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ಅರಣ್ಯ ಇಲಾಖೆಯು ‘ಕಟ್ಟೇಪುರ ಪ್ರಾಜೆಕ್ಟ್‌’ ಎಂಬ ಹೆಸರಿನ ಕಾರ್ಯತಂತ್ರ ರೂಪಿಸಿತು. ರೇಡಿಯೊ ಕಾಲರ್‌ ಇರದಿದ್ದ ಕಾಲವದು. ಆಗ ಪ್ರಾಯೋಗಿಕವಾಗಿ ಪಶು ವೈದ್ಯರೊಬ್ಬರು ಆನೆಗಳ ಚಲನವಲನಗಳನ್ನು ಪತ್ತೆ ಹಚ್ಚಲು, ಅಲ್ಲಿ ತೊಂದರೆ ಕೊಡುತ್ತಿದ್ದ ಆನೆಗಳನ್ನು ಹಿಡಿದು ಅವುಗಳ ಹೊಟ್ಟೆಯ ಮೇಲೆ 1, 2, 3, 4 ಎಂಬ ಅಂಕಿಗಳನ್ನು ಸುಲಭವಾಗಿ ಅಳಿಸಿ ಹೋಗದಂತಹ ‘ಆಯಿಲ್ ಪೆಯಿಂಟ್‌’ನಲ್ಲಿ ಬರೆಸಿದರು. ಅದರಲ್ಲಿ ನಂ. 1ರ ಆನೆಯನ್ನು ದೂರದ ನಾಗರಹೊಳೆ ಅಭಯಾರಣ್ಯಕ್ಕೆ ಬಿಡಲಾಯಿತು. ಹೀಗೆ ಸ್ಥಳಾಂತರಿಸಿದ  ನಾಲ್ಕೇ ದಿನಗಳಲ್ಲಿ ಆ ಆನೆ ಮತ್ತೆ ಕಟ್ಟೇಪುರಕ್ಕೆ ವಾಪಸು ಬಂದು ಬಿಟ್ಟಿತು.  ಸುಮಾರು 70 ಕಿಲೊ ಮೀಟರ್‌ ದೂರದ ಅಪರಿಚಿತ ಜಾಗದಿಂದ, ಅಪರಿಚಿತ ಮಾರ್ಗದಲ್ಲಿ ಕೇವಲ ಮೂಲಪ್ರವೃತ್ತಿಯ (ಇನ್‌ಸ್ಟಿಂಕ್ಟ್) ಸಹಾಯದಿಂದಲೇ ಅದು ತನ್ನೂರಿಗೆ ಬಂದಿತ್ತು. ಹಾಗಾಗಿ, ಯಾವುದೇ ಪ್ರಾಣಿಯನ್ನು ಅದರ ಜನ್ಮಸ್ಥಳದಿಂದ  ಬೇರ್ಪಡಿಸಿ ದೂರ ಬಿಟ್ಟು ಬಂದರೆ, ಅದು ವಾಪಸು ಬರುವ ಸಾಧ್ಯತೆ ತೀರಾ ಹೆಚ್ಚಿರುತ್ತದೆ. ಹಾಗಾಗಿ, ಸ್ಥಳಾಂತರ ಶಾಶ್ವತ ಪರಿಹಾರ ಆಗಲಾರದು. ಕಾಡಿನ ಜೀವ ಪರಿಸರಕ್ಕೆ ಇಂತಹ ಪ್ರಯತ್ನಗಳು ಧಕ್ಕೆ ತರುತ್ತವೆಂಬುದು ಅಧ್ಯಯನಗಳಿಂದ  ಸಾಬೀತಾಗಿದೆ.

ಈ ಜೀವಿಗಳಲ್ಲಿ ತಮ್ಮ ತವರನ್ನು ಹುಡುಕಿಕೊಂಡು ನಿಖರವಾಗಿ ವಾಪಸು ಬರುವ ಹುಟ್ಟುಗುಣ ಅಡಕವಾಗಿರುತ್ತದೆ. ಹೀಗೆ ತಮ್ಮ ತವರಿಗೆ ವಾಪಸಾಗುವಾಗ ಮಾರ್ಗ ಮಧ್ಯದಲ್ಲಿ ಅಪಘಾತಗಳಿಗೆ ಸಿಲುಕಿ ಸಾಯುವ ಸಂಭವ ಇರುತ್ತದೆ. ಅವು ಬಾವಿಗೆ ಬಿದ್ದು ಸಾಯಬಹುದು ಅಥವಾ ಎದುರಾದ ಮನುಷ್ಯನ ಮೇಲೆರಗಿ ಸಂಘರ್ಷದ ಘಟನೆಯಾಗಬಹುದು. ಒಟ್ಟಿನಲ್ಲಿ ವಾಪಸ್‌ ಬರುವ ಅವುಗಳ ಪ್ರಯತ್ನ ಬಹುತೇಕ ಸಾವಿನಲ್ಲೇ ಪರ್ಯವಸಾನವಾಗುತ್ತದೆ. ಹೀಗಿರುವಾಗ, ನಗರದಲ್ಲಿರುವ ಚಿರತೆಗಳನ್ನು ಹಿಡಿದು ಕಾಡಿಗೆ ಬಿಡುವುದರಲ್ಲಿ ಯಾವ ಅರ್ಥವೂ ಇಲ್ಲ.

ನಾಡಿನಲ್ಲಿ ಕಾಣಿಸಿಕೊಳ್ಳುವ ಹಾವು, ಚಿರತೆ ಮುಂತಾದ ವನ್ಯಜೀವಿಗಳನ್ನು ರಕ್ಷಿಸಬೇಕು ಎನ್ನುವುದು ಭಾವನಾತ್ಮಕ ಪ್ರಯತ್ನವೇ ಹೊರತು ಅವುಗಳ ಸಂತತಿ ಸಂರಕ್ಷಣೆಗೆ ಎಂದಿಗೂ ನೆರವಾಗುವುದಿಲ್ಲ. ಹೀಗಾಗಿ ಸಂರಕ್ಷಣಾ ಪ್ರಯತ್ನಗಳಂತಹ ವೈಜ್ಞಾನಿಕ ಚಿಂತನೆಗಳನ್ನು ನಾವು ರೂಪಿಸಿಕೊಳ್ಳಬೇಕಾಗುತ್ತದೆ.  ಈಗ ಉಳಿದುಕೊಂಡಿರುವ ಕಾಡಿನಲ್ಲಿ ಪ್ರಾಣಿಗಳು ತಾಪತ್ರಯ ಇಲ್ಲದೆ ಬದುಕುಳಿಯುವಂತಹ ಸನ್ನಿವೇಶ ಕಟ್ಟಿಕೊಡುವಂತೆ ಆಗಬೇಕು.

ಇನ್ನು ಈ ರೀತಿಯ ಚಿರತೆಗಳನ್ನು ಮೃಗಾಲಯಕ್ಕೆ ಸಾಗಿಸಬೇಕು ಎನ್ನುವ ಮಾತು ಕೇಳಿ ಬರುತ್ತದೆ. ಸಾವಿರ, ಸಾವಿರ ಸಂಖ್ಯೆಯಲ್ಲಿರುವ ಚಿರತೆಗಳನ್ನು ಮೃಗಾಲಯದಲ್ಲಿ ಹೇಗೆ ತಾನೇ ಇಟ್ಟುಕೊಳ್ಳಲು ಸಾಧ್ಯ?

ಇಂಥ ಕಾರಣಗಳ ಹಿನ್ನೆಲೆಯಲ್ಲಿ, ಬಹಳ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕಾಡುಗಳ ಪುನಶ್ಚೇತನಕ್ಕೆ ಮುಂದಾಗಬೇಕು. ಅದಕ್ಕೆ ಯೋಜನೆಗಳನ್ನು ರೂಪಿಸಿ ಅರಣ್ಯಗಳಿಗೆ ಸೂಕ್ತವಾದ ರಕ್ಷಣೆ ಕೊಡಬೇಕು. ಕಾಡುಪ್ರಾಣಿಗಳು ಇರುವ ನೆಲೆಯನ್ನೇ ಉತ್ತಮವಾಗಿ ರೂಪಿಸಬೇಕು. ಈ ಕಾಡುಗಳ ಆಸುಪಾಸಿನ ಸರ್ಕಾರಿ ಭೂಮಿ ಹಾಗೂ ಕುರುಚಲು ಕಾಡುಗಳನ್ನು ಮುಖ್ಯ ಕಾಡಿಗೆ ಸೇರಿಸುವ ಕೆಲಸ ಆಗಬೇಕು.

ಮಹಾರಾಷ್ಟ್ರದ ಪುಣೆಯಲ್ಲಿ ವಿದ್ಯಾ ಎಂಬ ಸಂಶೋಧಕಿ ಇದ್ದಾರೆ. ನಾಡಿಗೆ ಬರುವ ಚಿರತೆಗಳನ್ನು ಹೇಗೆ ನಿಯಂತ್ರಿಸುವುದು ಎನ್ನುವ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಅವರ ಸಲಹೆಯೊಂದು ಹೀಗಿದೆ- ನಗರಗಳಿಗೆ ಬರುವ ಚಿರತೆಗಳಿಗೆ ಮುಖ್ಯ ಆಹಾರ ಬೀದಿ ನಾಯಿಗಳು. ಈ ಬೀದಿನಾಯಿಗಳನ್ನು ಮೊದಲು ನಿಯಂತ್ರಿಸಬೇಕು. ಅದು ಹೇಗೆ? ನಗರದಲ್ಲಿ ಒಂದೆಡೆ ಸೇರುವ ತ್ಯಾಜ್ಯವನ್ನು ಇಲ್ಲವಾಗಿಸಬೇಕು. ಆಹಾರ ಸಿಗದ ಚಿರತೆ, ನಗರಕ್ಕೆ ಬರುವುದನ್ನು ನಿಲ್ಲಿಸುತ್ತದೆ, ಆಹಾರ ಹುಡುಕಿ ಮತ್ತೆಲ್ಲಿಗೋ ಹೋಗುತ್ತದೆ ಅಥವಾ ನಗರಗಳ ಆಸುಪಾಸಲ್ಲೇ ಹುಟ್ಟಿ ಬೆಳೆದ ಅವುಗಳ ಸಂತತಿ ಇಳಿಮುಖವಾಗುತ್ತದೆ.
ಇಲ್ಲಿ ಒಂದು ಅಂಶವನ್ನು ನಾವು ಅರ್ಥಮಾಡಿಕೊಳ್ಳಬೇಕು. ಮನುಷ್ಯ ತನ್ನ ಬದುಕಿಗೆ ನಿರ್ಮಿಸಿಕೊಂಡ ಪರಿಸರದಲ್ಲಿ ಬದುಕುಳಿಯಲು ಕಲಿಯುವ ಜೀವಿಗಳು ಕೆಲವು ಕಾಲ ಯಶಸ್ವಿಯಾದಂತೆ ಕಾಣುತ್ತವೆ. ಆದರೆ ಅಂಥ ಪ್ರಾಣಿಗಳ ಭವಿಷ್ಯ ದುರಂತದಲ್ಲಿ ಕೊನೆಗೊಳ್ಳುವುದು ಚರಿತ್ರೆಯುದ್ದಕ್ಕೂ ದಾಖಲಾಗಿದೆ. ಇದು ಗುಬ್ಬಿಯ ಕತೆ ಇರಬಹುದು ಅಥವಾ ರಣಹದ್ದುಗಳ ಕತೆಯೂ ಆಗಿರಬಹುದು.

ಗುಬ್ಬಚ್ಚಿ ಮನುಷ್ಯನನ್ನೇ ಹೆಚ್ಚು ಅವಲಂಬಿಸಿ ಬದುಕುವುದನ್ನು ಕಲಿತುಕೊಂಡಿರುವ ಜೀವಿ. ಕೆಲ ವರ್ಷಗಳ ಹಿಂದೆ ಹೆಂಚಿನ ಮನೆಗಳಿದ್ದ ಕಾಲದಲ್ಲಿ ಪ್ರತಿ ನಿತ್ಯ ಅಕ್ಕಿ ಕೇರುತ್ತಿದ್ದಾಗ ಹಿತ್ತಿಲಲ್ಲಿ ಬೀಳುತ್ತಿದ್ದ ಅಕ್ಕಿ ಕಾಳುಗಳನ್ನು ತಿನ್ನುತ್ತಾ, ಹೆಂಚಿನ ಸಂದಿಯಲ್ಲೇ ಗೂಡು ಕಟ್ಟಿ ಸಂತತಿ ಬೆಳೆಸಿಕೊಳ್ಳುತ್ತಿದ್ದವು. ಆದರೆ, ಈಗ ಏಕೆ ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಿದೆ? ಈಗ ಹೆಂಚಿನ ಮನೆಗಳಿಲ್ಲ, ಅಕ್ಕಿ ಕೇರುವುದಿಲ್ಲ, ಅವಕ್ಕೆ ಆಹಾರ ಸಿಗುತ್ತಿಲ್ಲ. ಹಾಗಾಗಿ, ಈಗ ಗುಬ್ಬಿಗಳ ಸಂಖ್ಯೆ ನಗರಗಳಲ್ಲಿ ಇಳಿಮುಖಗೊಂಡಿದೆ. ಈಗ ಮನುಷ್ಯನ ನೆಲೆಯಲ್ಲಿ ಬದುಕು ಕಂಡುಕೊಂಡಿರುವ ಚಿರತೆಗಳಿಗೂ ಮುಂದೊಂದು ದಿನ ಇದೇ ದುರಂತ ಎದುರಾದರೂ ಅಚ್ಚರಿ ಪಡಬೇಕಾಗಿಲ್ಲ.

ಇನ್ನು ರೈತರ ಜಮೀನುಗಳಿಗೆ ದಾಳಿಯಿಡುವ ಕಾಡು ಪ್ರಾಣಿಗಳ ವಿಷಯಕ್ಕೆ ಬಂದರೆ,  ಸಂಘರ್ಷ ಅಲ್ಲೂ ಇದ್ದೇ ಇದೆ. ಸರ್ಕಾರದ ಕಳಪೆ ನೀತಿಗಳಿಂದ ಈ ಸಂಘರ್ಷ ಹೆಚ್ಚುತ್ತಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಬೆಳೆಯೇ ರೈತನ ಬದುಕು. ಬೆಳೆ ನಾಶವಾದಾಗ ರೈತ ಸರ್ಕಾರಕ್ಕೆ ಅರ್ಜಿ ಸಲ್ಲಿಸುತ್ತಾನೆ. ಹಳ್ಳಿಯಿಂದ ನಗರಕ್ಕೆ ಅಲೆದೂ ಅಲೆದೂ ಕೆಲಸ ಕೈಗೂಡದೆ ಅವನು ಅತಂತ್ರನಾಗುತ್ತಾನೆ. ಸಿಕ್ಕುವ ಪರಿಹಾರಕ್ಕಿಂತ, ಅದನ್ನು ಪಡೆಯಲು ಖರ್ಚು ಮಾಡಿದ ಹಣವೇ ಹೆಚ್ಚಾಗಿ ಬಿಡುತ್ತದೆ. ಫೈಲುಗಳು ಟೇಬಲ್ಲಿನಿಂದ ಟೇಬಲ್ಲಿಗೆ ವರ್ಗಾವಣೆಯಾಗಿ ರೈತನ ಸ್ಥಿತಿ ‘ತಬರನ ಕಥೆ’ಯ ‘ತಬರ’ನಂತೆಯೇ ಆಗುತ್ತದೆ! ಕಾಡುಪ್ರಾಣಿ ದಾಳಿ ಮಾಡಿದ ಒಂದು ವಾರದೊಳಗೆ ಪರಿಹಾರದ ಚೆಕ್‌ ರೈತನ ಮನೆಗೆ ನೇರವಾಗಿ ತಲುಪುವ  ವ್ಯವಸ್ಥೆ ಜಾರಿಯಾಗಬೇಕು. ಆಗ ತಮಗೆ ಕಾಟ ಕೊಡುವ ವನ್ಯಜೀವಿಗಳ ಬಗ್ಗೆ ರೈತರ ಸಿಟ್ಟು ಕೊಂಚವಾದರೂ ಕಡಿಮೆಯಾಗಬಹುದು.

ಚಿರತೆ– ಮಾನವ ಸಂಘರ್ಷ ಎಲ್ಲಿ ಹೆಚ್ಚು?
ಎಚ್.ಡಿ. ಕೋಟೆ, ಗುಂಡ್ಲುಪೇಟೆ, ಮೈಸೂರು,ಹುಣಸೂರು, ಕಾರ್ಕಳ ಸೇರಿದಂತೆ ರಾಜ್ಯದ ಒಟ್ಟು 500 ಹಳ್ಳಿಗಳಲ್ಲಿ ಸಂಘರ್ಷ

ಇರಿ, ಇರಿ, ಈಗ್ಲೇ ಹಿಡೀಬೇಡಿ...
ಬಂಡೀಪುರ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಹಳ್ಳಿಯೊಂದರಲ್ಲಿ 20 ದಿನದ ಮಗುವಿನ ಬಾಣಂತಿಯೊಬ್ಬಳು ಒಂದು ಸಣ್ಣ ಮನೆಯಲ್ಲಿ ರಾತ್ರಿ ಮಲಗಿರುತ್ತಾಳೆ. ಆಗ ಕತ್ತಲಲ್ಲಿ ಮನೆಯೊಳಗೆ ನಾಯಿ ನುಗ್ಗುತ್ತದೆ. ಅದರ ಹಿಂದೆ ಚಿರತೆಯೊಂದು ನುಗ್ಗಿ ಬರುತ್ತದೆ. ಗಾಬರಿಯಾದ ಅವಳು ಎದ್ದು ಹೊರಗೋಡಿ ಬರುತ್ತಾಳೆ. ಕೂಗಿಕೊಳ್ಳುತ್ತಾ ಕೊನೆಗೆ ಪ್ರಜ್ಞೆ ತಪ್ಪಿ ಬೀಳುತ್ತಾಳೆ. ಹಳ್ಳಿಯ ಜನ ಓಡಿ ಬಂದು ಅವಳನ್ನು ಉಪಚರಿಸಿದಾಗ ಅವಳು ಮೊದಲು ‘ಮಗು, ಮಗು’ ಎಂದು ಅಳುತ್ತಾಳೆ. ಮನೆಯೊಳಗೆ ಹೋದಾಗ ಮಗು ಸಿಗುತ್ತದೆ. ನಂತರ ಅವಳು ‘ಚಿರತೆ, ಚಿರತೆ’ ಎನ್ನುತ್ತಾಳೆ. ಗಾಬರಿಯಾದ ಜನ, ಮನೆಯೊಳಗೆ ಹೋಗಿ ಹುಡುಕಿದಾಗ ಮಂಚದ ಕೆಳಗೆ ಚಿರತೆಯು ನಾಯಿಯನ್ನು ಕಚ್ಚಿಕೊಂಡು ಅಡಗಿ ಕುಳಿತಿರುವುದು ಕಾಣುತ್ತದೆ. ಕೂಡಲೇ ಹಳ್ಳಿಗರು ಅರಣ್ಯ ಇಲಾಖೆಗೆ ಕರೆ ಮಾಡಿ, ಸಿಬ್ಬಂದಿಯನ್ನು ಕರೆಸುತ್ತಾರೆ.

ಅದೇ ದಿನ ಬೆಳಿಗ್ಗೆ ಮತ್ತೊಂದು ಕಾರ್ಯಾಚರಣೆಯಲ್ಲಿ ಬಳಸಿದ್ದರಿಂದ ಸಿಬ್ಬಂದಿ ಬಳಿ ಇದ್ದ ಅರಿವಳಿಕೆ ಮದ್ದು ಖಾಲಿಯಾಗಿರುತ್ತದೆ. ಕೊನೆಗೆ ಹೇಗೋ ಮಾಡಿ ಅರಿವಳಿಕೆ ಮದ್ದು ತರಿಸಿ, ಮಧ್ಯರಾತ್ರಿ 12.30ರ ಸಮಯದಲ್ಲಿ ಇನ್ನೇನು ಚಿರತೆಗೆ ಅದನ್ನು ದೂರದಿಂದ ಗನ್‌ ಮೂಲಕ ಹೊಡೆಯಬೇಕು ಎನ್ನುವಷ್ಟರಲ್ಲಿ, ಅಂತಹ ಉದ್ವಿಗ್ನ ಸ್ಥಿತಿಯಲ್ಲೂ ಹಳ್ಳಿಗರು ‘ಇರಿ, ಇರಿ ಸ್ವಲ್ಪ ತಾಳಿ’ ಎಂದು ಗಲಭೆ ಎಬ್ಬಿಸುತ್ತಾರೆ. ತಬ್ಬಿಬ್ಬಾದ ಅರಣ್ಯ ಇಲಾಖೆ ಸಿಬ್ಬಂದಿ ಏಕೆಂದು ಕೇಳಿದಾಗ, ‘ಟಿವಿಯವರನ್ನು ಕರೆಸುತ್ತಿದ್ದೇವೆ. ಅವರು ಇನ್ನೇನು ಇಲ್ಲಿಗೆ ಬಂದು ಬಿಡುತ್ತಾರೆ. ಅವರು ಬಂದ ಮೇಲೆ ಅರಿವಳಿಕೆ ಮದ್ದು ಕೊಡಿ’ ಎನ್ನುತ್ತಾರೆ! ಟಿ.ವಿ.ಯಲ್ಲಿ ಚಿರತೆ ಬಗ್ಗೆ ಸುದ್ದಿ ಬರುವುದು ಈಗ ಜನರಿಗೂ ಫ್ಯಾಷನ್‌ ಆಗಿಬಿಟ್ಟಿದೆ.  ತಮ್ಮ ಮುಖಗಳು ಸುದ್ದಿ ವಾಹಿನಿಯಲ್ಲಿ ಮೂಡುವುದು ಅವರಿಗೆ ಮುಖ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT