ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯಾಕನ್ನಡಿ ಹಿಡಿದ ಮಹಾಯಾನಿ

Last Updated 23 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಕಲೆಯಷ್ಟೇ ತೀವ್ರವಾಗಿ ರೈತ ಚಳವಳಿ ಹಾಗೂ ಕೃಷಿಯಲ್ಲಿಯೂ ತೊಡಗಿಕೊಂಡ ಕೆ.ಟಿ. ಶಿವಪ್ರಸಾದ್ ನಮ್ಮ ನಡುವಣ ವಿಶಿಷ್ಟ ಕಲಾವಿದರು. ಅಂತರರಾಷ್ಟ್ರೀಯ ಖ್ಯಾತಿಯ ಅವರಿಗೀಗ ‘ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ’ಯ ಗೌರವ.

ಕಾರ್ಲೆ ತಿಮ್ಮಪ್ಪಯ್ಯ ಶಿವಪ್ರಸಾದ್ (ಕೆ.ಟಿ. ಶಿವಪ್ರಸಾದ್) ಚಿತ್ರಕಲಾ ಜಗತ್ತಿನ ಮಹಾಯಾನಿ. ಹಾಸನ ಜಿಲ್ಲೆಯ ಕಾರ್ಲೆ ಎಂಬ ಊರಿನ ಉದ್ಯಮಿ ಕಾರ್ಲೆ ತಿಮ್ಮಪ್ಪಯ್ಯನವರ ಮಗನಾದ ಶಿವಪ್ರಸಾದ್ ಇಂಜಿನಿಯರಿಂಗ್ ಕಲಿಯಲು ಮುಂಬಯಿಗೆ ಹೋದವರು, ಅದನ್ನು ಬಿಟ್ಟು ಅಲ್ಲಿಯ ಪ್ರತಿಷ್ಠಿತ ಜೆ.ಜೆ. ಕಲಾಶಾಲೆಯ ವಿದ್ಯಾರ್ಥಿಯಾಗಿ ತಮ್ಮ ಕಲಾ ಜೀವನ ಪ್ರಾರಂಭಿಸಿದವರು.

ಹಾಸನಕ್ಕೆ ಮರಳಿ ಹಟಯೋಗಿಯಂತೆ ಚಿತ್ರಕಲೆಯ ಜೊತೆಗೆ ಕೃಷಿಗೆ ತೊಡಗಿಕೊಂಡರು. ರಸ್ತೆ ಬದಿಯಲ್ಲಿ ಬಸ್ಸಿಗೆ ಕಾಯುತ್ತಿದ್ದಾಗ ಆಕಸ್ಮಾತ್ ಪ್ರೊ.ನಂಜುಂಡ­ಸ್ವಾಮಿಯವರ ಜೀಪಿಗೆ ಕೈ ಒಡ್ಡಿದರು. ಜೀಪಿಗೆ ಹತ್ತಿಸಿಕೊಂಡ ಪ್ರೊಫೆಸರ್ ನಂಜುಂಡಸ್ವಾಮಿ ­ಅವರು ಶಿವಪ್ರಸಾದ್ ಅವರನ್ನು ನೇರವಾಗಿ ರೈತ ಚಳವಳಿಯ ನಡುವೆ ಇಳಿಸಿಬಿಟ್ಟರು. ಒಂದಷ್ಟು ದಿನ ಬೀದಿಯ ಚಳವಳಿಯಲ್ಲಿ, ಪರಿಣಾಮವಾಗಿ ಒಂದಷ್ಟು ದಿನ ಜೈಲಿನಲ್ಲಿ, ಮತ್ತೊಂದಷ್ಟು ದಿನ ಹೊಲದಲ್ಲಿ ಮತ್ತು ನಿರಂತರವಾಗಿ ಕ್ಯಾನ್‌ವಾಸಿನ ಮುಂದೆ ನಿಂತ ಶಿವಪ್ರಸಾದ್ ಅಂತರರಾಷ್ಟ್ರೀಯ ಮಟ್ಟದ ಚಿತ್ರಕಲಾವಿದರಾಗಿ ಬೆಳೆದರು.

ಅವರ ಕ್ಯಾನ್‌ವಾಸಿನ ಒಂದಷ್ಟು ಜಾಗವನ್ನು ಕ್ಷೌರಿಕ ಬಾಲು ಮತ್ತು ಅವನ ಮಾಯಾಕನ್ನಡಿ, ಕೆಂಚ ಮತ್ತು ಅವನ ಅಜ್ಜಿ, ನಸೀಮ, ಬೋರಯ್ಯನ ಗಾಡಿ, ಚನ್ನೇಗೌಡ ಮತ್ತು ಅವನ ಕೆಂಪು ಹುಂಜ, ಕರಿಯಪ್ಪ ಮತ್ತು ಮೊಮ್ಮಗಳು, ಮಾರಮ್ಮ ಮತ್ತು ರಾಮನಾಯಕ, ವೀರಾಸಾಮಿ ಮೇಸ್ತ್ರಿ, ರಂಗವ್ವ ಮುಂತಾದ ಜೀವಂತ ಜನಸಮೂಹ ಹಂಚಿಕೊಂಡಿದ್ದಾರೆ.

ಶಿವಪ್ರಸಾದ್ ಕುಪ್ಪಳಿಯ ಸುತ್ತಲಿನ ಬೆಟ್ಟ ಸಾಲುಗಳನ್ನೇ ತಮ್ಮ ಕ್ಯಾನ್‌ವಾಸ್‌ ಆಗಿಸಿಕೊಂಡು ಕುವೆಂಪು ಅವರ ಅನಿಕೇತನ ಪ್ರಜ್ಞೆಯನ್ನು ಶಿಲ್ಪ ಮಹಾಕೃತಿಯನ್ನಾಗಿಸಿದ ಅಪರೂಪದ ಚಿತ್ರ­ಕಲಾವಿದ. ಇಂತಹ ಒಂದು ಬೃಹತ್ತಾದ ಶಿಲ್ಪಸ್ಮಾರಕವೊಂದು ಜಗತ್ತಿನ ಮತ್ಯಾವ ಮಹಾಕವಿಗೂ ಇದ್ದಂತಿಲ್ಲ. ಎಲ್ಲ ತತ್ವದೆಲ್ಲೆ ಮೀರಿ ಅನಿಕೇತನನಾಗಿ ನಡೆವ ಅನುಭವವೊಂದನ್ನು ಮೂರ್ತ ರೂಪಕ್ಕಿಳಿಸಿದ ಶಿವಪ್ರಸಾದ್ ತನ್ನ ಪ್ರೀತಿಯ ಗೆಳೆಯ, ಸಖ ತೇಜಸ್ವಿಗಾಗಿ ಮತ್ತೊಂದು ಶಿಲ್ಪಸ್ಮಾರಕವೊಂದನ್ನು ಅಲ್ಲಿಯೇ ನಿರ್ಮಿಸಬೇಕಾದ ವಿಷಾದವನ್ನೂ ಅನುಭವಿ­ಸಿದವರು.

ಅವರ ಇನ್ನೊಂದು ಪ್ರಖ್ಯಾತ ಇನ್‌ಸ್ಟಲೇಷನ್ ಕೃತಿ ‘ನಿಮಗೆ ಬೇಡದ ನೆನಪುಗಳನ್ನಿಲ್ಲಿ ಬೀಗ ಹಾಕಿಡಿ’ ಇಂದಿಗೂ ಭಿನ್ನ ಕಲಾಮೀಮಾಂಸೆಯನ್ನು ಮುಂದಿಡುವ ಕಲಾ­ಕೃತಿಯಾಗಿದೆ. ಕಾವ್ಯ ಮತ್ತು ಕಲೆಗಳ ಆತ್ಯಂತಿಕ ಉದ್ದೇಶವು ಸಂಕಟ ನಿವಾರಣೆಯೇ ಹೊರತು ಆನಂದ-ಪರಬ್ರಹ್ಮವಲ್ಲ ಎಂಬ ಶ್ರಮಣಧಾರೆಗಳ ಮೀಮಾಂಸೆಯನ್ನು ಅಭಿನಯಿಸಿ ತೋರಿಸುತ್ತದೆ.

ಬೌದ್ಧ ಧರ್ಮ ಮತ್ತು ವಿಜ್ಞಾನ ಅವರ ಅತ್ಯಂತ ಪ್ರೀತಿಯ ಆಯ್ಕೆ. ಬೌದ್ಧ ಮೀಮಾಂಸೆಯ ಪ್ರಮುಖ ಪರಿಕಲ್ಪನೆಗಳಾದ ಅನಿತ್ಯತೆ, ಕಾಲ­ದೇಶಗಳ ನಿರಾಕರಣೆ, ಕರುಣಾಮೈತ್ರಿ, ಅನೇಕಾಂತವಾದಗಳು ಅವರ ಕುಂಚ ಮತ್ತು ಬಣ್ಣವನ್ನು ಆವರಿಸಿವೆ.

ಹೋರಾಟದ ಬದುಕು
ಕೆಟಿಎಸ್ ದಲಿತಪರ ಮತ್ತು ರೈತಪರ ಹೋರಾಟವನ್ನು ತಮ್ಮ ಉಸಿರಾಗಿಸಿ­ಕೊಂಡ­ವರು. ಸುಮಾರು ಮೂರು ದಶಕಗಳಿಂದ ದಣಿವಿಲ್ಲದೆ ಈ ಚಳವಳಿಗಳಲ್ಲಿ ತೊಡಗಿ­ಕೊಂಡವರು. ಅನೇಕ ಸಾರಿ ಜೈಲುವಾಸ ಕಂಡವರು. ತೀರ ಇತ್ತೀಚೆಗೆ ಕೇಸುಗಳಿಂದ ಮುಕ್ತವಾದವರು.
ಲಂಕೇಶ್, ತೇಜಸ್ವಿ, ಕಡಿದಾಳು ಶಾಮಣ್ಣ, ಪ್ರೊ. ನಂಜುಂಡ­ಸ್ವಾಮಿಯವರ ಜೊತೆ ನಿರಂತರ ಇದ್ದವರು. ಸರ್ಕಾರಿ ಕಚೇರಿಗಳನ್ನೇ ಮರುಜಪ್ತಿ ಮಾಡಿ ಜೈಲಿಗೆ ಹೋದವರು. ಜಾತಿಯ ಕಪಿಮುಷ್ಠಿ­ಯಿಂದ ಹೊರಬರಲಾಗದ ರೈತ ಚಳವಳಿಯನ್ನು ತಿರಸ್ಕರಿಸಿ ಹೊರಬಂದ ಶಿವಪ್ರಸಾದ್ ತಮ್ಮ ಜೀವನದ ದೀರ್ಘಾವಧಿಯನ್ನು ದಲಿತ ಚಳವಳಿಯ ಜೊತೆಗೆ ಕಳೆದಿದ್ದಾರೆ.

ತಾವು ಅನುಸರಿಸುತ್ತಿರುವ ಕಲಾಮೀಮಾಂಸೆ ಮತ್ತು ಬಾಳುತ್ತಿರುವ ಜೀವನ ಮೀಮಾಂಸೆಯ ಬಗೆಗಿನ ಎಚ್ಚರವನ್ನು ನಿರಂತರವಾಗಿ  ಕಾಪಾಡಿಕೊಂಡು ಬರುತ್ತಿರುವ ಕೆ.ಟಿ. ಶಿವಪ್ರಸಾದ್ ಅದನ್ನು ಖಚಿತವಾದ ನಿಲುವುಗಳ ಮೂಲಕ ಅದನ್ನು ವ್ಯಕ್ತಪಡಿಸುತ್ತಾರೆ.

ಅವರ ಒಂದೆರಡು ನಿಲುವುಗಳು:
ನೇರವಾಗಿ ಕಲಾಮೀಮಾಂಸೆಯ ಪರಿಕಲ್ಪನೆ­ಗಳಿಗೆ ಬಂದರೆ, ಭಾರತೀಯ ಎಂದು ಕರೆದುಕೊಂಡಿರುವ ಸಂಸ್ಕೃತ ಅಥವಾ ವೈದಿಕ ಮೀಮಾಂಸೆಯು ಎಲ್ಲಾ ಕಲಾಪ್ರಯತ್ನಗಳೂ ಮೂಲವೊಂದರ ಅನುಕರಣೆ ಮಾತ್ರ. ಏನನ್ನು ಮಾಡಿದರೂ ಅದರ ನಿಜ ರೂಪವೊಂದು ಬೇರೆ ಸ್ವತಂತ್ರವಾಗಿ ಇರುತ್ತದೆ, ನಾವು ಮಾಡುವುದೆಲ್ಲ ಅದರ ಅನುಕರಣೆಯಷ್ಟೇ, ಅದು ಅನುಕರಣೆ ಮಾತ್ರ ಆಗಿರುವುದರಿಂದ ಅದು ನಿಜವಲ್ಲ.

ಹಾಗಾಗಿ ಭಾರತೀಯ ಕಾವ್ಯ ಮೀಮಾಂಸೆಯ ಪ್ರಕಾರ ಮಾಡುವ ಎಲ್ಲ ಕಲಾಪ್ರಯತ್ನಗಳು ಮೂಲವನ್ನು ತಲುಪುವ ಪ್ರಯತ್ನಗಳಾಗಿರುತ್ತವೆ. ಆದರೆ ನನ್ನ ಪ್ರಕಾರ ಯಾವ ಕಲಾಕೃತಿಗೂ ಮೂಲವೆನ್ನುವುದು ಇರುವುದಿಲ್ಲ ಮತ್ತು ಕಲಾಕೃತಿಯೊಂದು ಎಂದೂ ಸಿದ್ಧಗೊಂಡು ಇರುವುದಿಲ್ಲ. ಅದು ಸದಾ ಆಗುತ್ತಲೇ ಇರುತ್ತದೆ. ಸದಾ ಬದಲಾಗುತ್ತಲೇ ಇರುವ ಈ ಲೋಕಪ್ರವಾಹದಲ್ಲಿ ಮೂಲವೆನ್ನುವುದೂ ಇರುವುದಿಲ್ಲ; ಪ್ರಾರಂಭವೆನ್ನುವುದೂ ಇರುವುದಿಲ್ಲ; ಕೊನೆಯೆನ್ನುವುದೂ ಇರುವುದಿಲ್ಲ. ನಾವು ನಿರ್ವಹಿಸುವುದು ಏನಿದ್ದರೂ ಈ ನಿರಂತರ ಪ್ರವಾಹದ ಒಂದು ಭಾಗ ಮಾತ್ರ. ಇಲ್ಲಿ ಎಲ್ಲವೂ ಆಗುತ್ತಲೇ ಇರುತ್ತದೆ. ಆಗಿ ಇರುವುದು ಯಾವುದೂ ಇಲ್ಲ. ಇದನ್ನು ಪಾಶ್ಚಾತ್ಯರಲ್ಲಿ ಹೆರಾಕ್ಲೀಟಸ್ ಹೇಳಿದರೆ, ಭಾರತದಲ್ಲಿ ಬುದ್ಧಗುರು ಮೊದಲೇ ಹೇಳಿದ್ದನು.

ಲೋಕದ ಎಲ್ಲ ಸಂಗತಿಗಳೂ ಹೇಗೆ ನಿರಂತರವಾಗಿ ಸಂಯೋಜನೆಗೊಳ್ಳುವುದು ಮತ್ತು ವಿಸರ್ಜನೆಗೊಳ್ಳುವುದರಲ್ಲಿ ತೊಡಗಿವೆಯೋ ಹಾಗೆಯೇ ಕಲಾಕೃತಿ ಎನ್ನುವುದು ಕೂಡ ಒಂದು ಸಂಯೋಜನೆ ಮತ್ತು ವಿಸರ್ಜನೆಯೇ ಆಗಿದೆ. ಕಲಾವಿದ ಮುಂದಿಡುವ ಒಂದು ಸಂಗತಿ, ಅದರ ಸಂದರ್ಭ, ನೋಡುವವನ ಸಂದರ್ಭ ಇವೆಲ್ಲ ಸೇರಿ ನೋಡುಗನಲ್ಲಿ ಒಂದು ಪರಿಣಾಮ ಪಠ್ಯ ಎಂದು ಕರೆಯಬಹುದಾದ ಕಲಾಕೃತಿಯೊಂದು ಉಂಟಾಗುತ್ತದೆ.

ಇವುಗಳ ನಡುವೆ ಸಂಬಂಧ ಏರ್ಪಡದೇ ಹೋದರೆ ಯಾವ ಕಲಾಕೃತಿಯೂ ಉಂಟಾಗುವುದಿಲ್ಲ. ಮತ್ತು ಏರ್ಪಡುವ ಸಂಬಂಧ ಎಂಥದ್ದು ಎನ್ನುವುದರ ಮೇಲೆ ಒಂದು ಕಲಾಕೃತಿ ನೋಡುಗನಲ್ಲಿ ಉಂಟಾಗುತ್ತದೆ. ಇಲ್ಲಿ ಯಾವುದಕ್ಕೂ ಒಂದು ಸ್ವತಂತ್ರ ಸಾಧ್ಯತೆ ಇರುವುದಿಲ್ಲ ಎನ್ನುವುದೇ ಮುಖ್ಯ.

ನೋಡುವವನು ಎಂಥ ಅರ್ಥವನ್ನು ಕಟ್ಟಿಕೊಳ್ಳಬಲ್ಲ ಸಾಮರ್ಥ್ಯ ಪಡೆದಿರುತ್ತಾನೆಯೋ ಅದರ ಮೇಲೆ, ನೋಡುವ ಸಂದರ್ಭ ಎಂಥ ಅರ್ಥವನ್ನು ಕಟ್ಟಲು ಒತ್ತಾಯಿಸುತ್ತದೆಯೋ ಅದರ ಮೇಲೆ, ಕಲಾವಿದ ಮುಂದಿಟ್ಟ ಸಂಗತಿ ಏನನ್ನು ಒತ್ತಾಯಿಸುತ್ತದೆಯೋ ಅದರ ಮೇಲೆ ಕಲಾಕೃತಿ ಉಂಟಾಗುತ್ತಿರುತ್ತದೆ ಮತ್ತು ನಿರಂತರವಾಗಿ ಅದು ಬದಲಾಗುತ್ತಲೇ ಇರುತ್ತದೆ. ಕಲಾಕೃತಿಗೆ ಒಂದು ಸಾಧ್ಯತೆ ಎನ್ನುವುದು ಇರುವುದಿಲ್ಲ. ಎಷ್ಟು ಸಾರಿ ಈ ಸಂಬಂಧಗಳು ಏರ್ಪಡುತ್ತವೆಯೋ ಅಷ್ಟು ಪಠ್ಯಗಳು ಉಂಟಾಗುತ್ತಲೇ ಇರುತ್ತವೆ.
ಹೀಗೆ ಎಲ್ಲವನ್ನೂ ನಿರಸನಗೊಳಿಸಿ ಮುನ್ನಡೆಯುವುದು ಕಲಾವಿದನಿಗೂ ಸವಾಲು, ನೋಡುಗನಿಗೂ ಸವಾಲು. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಹೀಗಾಗುವುದಿಲ್ಲ. ಅಲ್ಲಿ ಒಂದು ಮೂಲವಿದೆ. ಅದನ್ನು ತಲುಪಿದರೆ ಮುಗಿಯಿತು. ಮೂಲದಲ್ಲಿ ಒಂದಾಗುವುದೇ ಅಲ್ಲಿಯ ಆಶಯ. ಈಗಾಗಲೇ ಇರುವುದನ್ನು ಕಂಡುಕೊಳ್ಳುವುದರಿಂದ ಅದು ಆನಂದವನ್ನೂ ಮುಕ್ತಿಯನ್ನೂ ಕೊಡಬಲ್ಲುದು. ಅದಕ್ಕೆ ವರ್ತಮಾನದ ಸಂಕಟ ತಲ್ಲಣಗಳು ಮುಖ್ಯವಲ್ಲ, ಅವನ್ನು ದಾಟಿ ಮೂಲವನ್ನು ತಲುಪಿದರೆ ಆನಂದ ಸಿಗುತ್ತದೆ.

ಹೀಗೆ ಎಲ್ಲವನ್ನೂ ನಿರಸನಗೊಳಿಸಿ ಮುನ್ನಡೆಯುವುದು ಕಲಾವಿದನಿಗೂ ಸವಾಲು, ನೋಡುಗನಿಗೂ ಸವಾಲು. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಹೀಗಾಗುವುದಿಲ್ಲ. ಅಲ್ಲಿ ಒಂದು ಮೂಲವಿದೆ. ಅದನ್ನು ತಲುಪಿದರೆ ಮುಗಿಯಿತು. ಮೂಲದಲ್ಲಿ ಒಂದಾಗುವುದೇ ಅಲ್ಲಿಯ ಆಶಯ. ಈಗಾಗಲೇ ಇರುವುದನ್ನು ಕಂಡುಕೊಳ್ಳುವುದರಿಂದ ಅದು ಆನಂದವನ್ನೂ ಮುಕ್ತಿಯನ್ನೂ ಕೊಡಬಲ್ಲುದು. ಅದಕ್ಕೆ ವರ್ತಮಾನದ ಸಂಕಟ ತಲ್ಲಣಗಳು ಮುಖ್ಯವಲ್ಲ, ಅವನ್ನು ದಾಟಿ ಮೂಲವನ್ನು ತಲುಪಿದರೆ ಆನಂದ ಸಿಗುತ್ತದೆ.

ಆದರೆ ಆಗುವಿಕೆಯ ಮೀಮಾಂಸೆಗೆ ಆ ಕ್ಷಣದ ತಲ್ಲಣ ಸಂಕಟಗಳು ಮುಖ್ಯ. ಅವು ಕೂಡ ನಿರಂತರವಾಗಿ ಬದಲಾಗುತ್ತಲೇ ಇರುವುದರಿಂದ ಕಲಾವಿದನಾಗಲೀ, ನೋಡುಗನಾಗಲೀ, ಎಲ್ಲೂ ನಿಲ್ಲಲಾಗದು. ಅವನೂ ಬದಲಾಗುತ್ತಲೇ ಇರಬೇಕಾಗುತ್ತದೆ. ಇದು ಬಹಳ ಜನರಿಗೆ ಕಷ್ಟ. ತಮ್ಮದೇ ಸ್ಟಾಂಪೊಂದನ್ನು ಮಾಡಿಟ್ಟುಕೊಂಡು ಅದನ್ನೇ ಎಲ್ಲ ಕಡೆ ಒತ್ತುತ್ತಾ ಹೋಗುವವರಿಗೆ ಅದನ್ನು ವಿಸರ್ಜಿಸುವುದು ಒಪ್ಪಿಗೆಯಾಗದ ಮಾತು. ಅಂತಹವರು ನಿಂತು ಹೋಗುತ್ತಾರೆ. ವಿಸರ್ಜಿಸುತ್ತಾ ಮುಂದೆ ಹೋಗುವವರು ಮಾತ್ರ ಜೀವಂತವಿರುತ್ತಾರೆ. ನಮ್ಮಲ್ಲಿ ಅಲ್ಲಮ ಅಂತಹವನು. ಅವನು ತನ್ನನ್ನು ತಾನೇ ವಿಸರ್ಜಿಸಿಕೊಳ್ಳುವ ಮಾತಾಡುತ್ತಾನೆ. ಕೆ.ಟಿ. ಶಿವಪ್ರಸಾದ್ ಅವರು ನಡೆದುಬಂದ ಹಾಗೂ ನಡೆಯುತ್ತಿರುವ ದಾರಿ ಕೂಡ ಇದುವೇ.



 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT