ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆ ಮಾತು

Last Updated 24 ಮೇ 2016, 19:30 IST
ಅಕ್ಷರ ಗಾತ್ರ

ಯುರೊ 500 ನೋಟು ಇತಿಹಾಸದ ಪುಟಕ್ಕೆ? 
ಒಂದು ಕಾಲಕ್ಕೆ ಯುರೋಪಿನ್ನರ ನೆಚ್ಚಿನ ಕರೆನ್ಸಿಯಾಗಿದ್ದ 500 ಯುರೊ ಇತ್ತೀಚೆಗೆ ಕಾನೂನುಬಾಹಿರ ಚಟುವಟಿಕೆಗಳಿಗೆ ಹೆಚ್ಚಾಗಿ ಬಳಕೆಯಾಗುತ್ತಿರುವ ಕಾರಣ ಹೊಸ ತಲೆನೋವು ಉಂಟು ಮಾಡಿದೆ. ಅಕ್ರಮ ಹಣ ಚಲಾವಣೆ,  ಕಾನೂನುಬಾಹಿರ ಚಟುವಟಿಕೆ, ಭಯೋತ್ಪಾದನಾ ಕೃತ್ಯಗಳಿಗೆ ಬಳಕೆಯಾಗುತ್ತಿರುವ  ಈ ನೋಟುಗಳ ಚಲಾವಣೆಯನ್ನು ನಿಲ್ಲಿಸುವ ಮಟ್ಟಕ್ಕೆ ಈ ನೋಟುಗಳು   ಯುರೋಪ್‌ ಕೇಂದ್ರ ಬ್ಯಾಂಕ್‌ಗೆ ಸಮಸ್ಯೆ ತಂದೊಡ್ಡಿವೆ.

ತನ್ನ ದೊಡ್ಡದಾದ ಗಾತ್ರದಿಂದಾಗಿ 500 ಯುರೊ ನೋಟಿಗೆ ಕಾಳಸಂತೆಯಲ್ಲಿ ‘ಬಿನ್‌ ಲಾಡೆನ್‌’ ಎಂಬ ಸಾಂಕೇತಿಕ ಭಾಷೆ ಬಳಸಲಾಗುತ್ತಿದೆ.   ನೇರಳೆ ಬಣ್ಣದ ನೋಟು ತನ್ನ ಮುಖಬೆಲೆಗಿಂತ ಹೆಚ್ಚಿನ ಮೌಲ್ಯಕ್ಕೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಅದಕ್ಕಿಂತ ಹೆಚ್ಚಾಗಿ ಭಯೋತ್ಪಾದಕರಿಗೆ ಹಣಕಾಸು ನೆರವು ಒದಗಿಸಲು ಈ ನೋಟುಗಳೇ ಹೆಚ್ಚಾಗಿ ಬಳಕೆಯಾಗುತ್ತಿವೆ. 

2015ರಲ್ಲಿ ಪ್ಯಾರೀಸ್‌ ಮೇಲಿನ ದಾಳಿಯ ನಂತರ ಭಯೋತ್ಪಾದನೆ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿರುವ ಯುರೋಪ್‌ ಒಕ್ಕೂಟವು, ಭಯೋತ್ಪಾದಕರ ಸಂಪನ್ಮೂಲಕ್ಕೆ ಕತ್ತರಿ ಹಾಕಲು ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.  ಎಲ್ಲರ ಮೆಚ್ಚಿನ ಕರೆನ್ಸಿ 500 ಯುರೊ ಇತಿಹಾಸದ ಪುಟ ಸೇರುವ ದಿನಗಳು ದೂರವಿಲ್ಲ.

***
ಮೊಬೈಲ್‌ ಜಾಹೀರಾತಿನ ಕಿರಿಕಿರಿ

ದೇಶದಲ್ಲಿ ಮೊಬೈಲ್ ಬಳಸುವ ಶೇ 60ರಷ್ಟು ಮಂದಿಗೆ ಮೊಬೈಲ್‌ ಜಾಹೀರಾತುಗಳು ಹೆಚ್ಚು ಕಿರಿಕಿರಿಯುಂಟು ಮಾಡುತ್ತಿವೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಅದರಲ್ಲೂ ಪಾಪ್ ಅಪ್‌ ಮತ್ತು ವಿಡಿಯೊ ಜಾಹೀರಾತಗಳು ಹೆಚ್ಚು ರಗಳೆ ಎಂದು ಅವರಲ್ಲಿ ಶೇ 55ರಷ್ಟು ಮಂದಿ ಹೇಳಿದ್ದಾರೆ.

ಮೊಬೈಲ್‌ ಜಾಹೀರಾತುಗಳ ಕಿರಿಕಿರಿ ತಾಳಲಾರದೆ ಹಲವು ಬಳಕೆದಾರರು ಜಾಹೀರಾತು ತಡೆ ಹಿಡಿಯುವ ಸಾಫ್ಟ್‌ವೇರ್‌ಗಳನ್ನು ಬಳಸಲಾರಂಭಿಸಿದ್ದಾರೆ ಎನ್ನುತ್ತಾರೆ ‘ನಾನು’ (nanu) ಸಂಸ್ಥೆಯ ಸ್ಥಾಪಕ ಮಾರ್ಟಿನ್ ಗೇಟ್‌ ಅವರು.

ದೇಶದಲ್ಲಿ ಸ್ಮಾರ್ಟ್‌ಫೋನ್‌ ಬಳಸುವವರಲ್ಲಿ 3,735 ಬಳಕೆದಾರರ ಮೊಬೈಲ್‌ಗೆ ‘ನಾನು’ ಎಂಬ ಕಾಲಿಂಗ್‌ ಆ್ಯಪ್ ಅಳವಡಿಸಿ ಅಧ್ಯಯನ ನಡೆಸಲಾಗಿದೆ.  ಡೆಲಾಯ್ಟ್‌ ವರದಿ ಪ್ರಕಾರ, ಜಾಹೀರಾತುಗಳಿಗೆ ಮಾಧ್ಯಮದಲ್ಲಿ ವೆಚ್ಚ ಮಾಡುವ ಹಣ ಶೇ 4 ರಲ್ಲಿ ಶೇ 2 ರಷ್ಟು ಮೊಬೈಲ್‌ ಜಾಹೀರಾತಿಗೆ ವೆಚ್ಚಮಾಡಲಾಗುತ್ತಿದೆ. ಇದು 2020ರ ವೇಳೆಗೆ ಶೇ 20 ರಲ್ಲಿ ಶೇ 15ರಷ್ಟಾಗಲಿದೆ.

***
ಜೆರುಸಲೇಂ ಬೆಳಕಿನ ಹಬ್ಬ

ಇಸ್ರೇಲ್‌ ರಾಜಧಾನಿ ಜೆರುಸಲೇಂ  ನಗರವು ಯಹೂದಿ, ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳ ಪವಿತ್ರ ಯಾತ್ರಾ ಸ್ಥಳವಾಗಿದೆ. ಇದೊಂದೇ ಇದರ ಹೆಗ್ಗಳಿಕೆಯಲ್ಲ. ಐತಿಹಾಸಿಕ ಆಕರ್ಷಣೆ ಜತೆಗೆ, ಆಧುನಿಕತೆಯೂ ಮೇಳೈಸಿಕೊಂಡಿರುವ ಈ ನಗರವು ವಿಶ್ವದಾದ್ಯಂತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ನಗರದ ರಾತ್ರಿ ಬದುಕು ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡಲಿದೆ. ಇಲ್ಲಿಯ ಶಾಪಿಂಗ್ ತಾಣ ‘ಮಹಾನೆ ಯಹುದಾ’, ಐತಿಹಾಸಿಕ ಮಹತ್ವದ ಹಳೆಯ ನಗರ, ಯಾದ್‌ ವಶೆಮ್‌ ವಸ್ತುಸಂಗ್ರಹಾಲಯ, ಬಿಬ್ಲಿಕಲ್‌ ಪ್ರಾಣಿ ಸಂಗ್ರಹಾಲಯಗಳು ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಾಗಿವೆ.

ಇದೇ 25ರಿಂದ ಆರಂಭವಾಗುವ ‘ಬೆಳಕಿನ ಹಬ್ಬ’ ಸಪ್ತಾಹವು ಜೂನ್ 2ರವರೆಗೆ ನಡೆಯಲಿದೆ. ಈ ಹಬ್ಬಕ್ಕೆ 2.5 ಲಕ್ಷ ಪ್ರವಾಸಿಗರು ಭೇಟಿ ನೀಡುವ ನಿರೀಕ್ಷೆ ಇದೆ. ಮಾಹಿತಿಗೆ
http://www.itraveljerusalem.com/  ತಾಣಕ್ಕೆ ಭೇಟಿ ನೀಡಬಹುದು.

***
ಅರವಿಂದ ಸ್ಟೋರ್‌ನ ಬೇಸಿಗೆ ಸಂಗ್ರಹ

‘ಅರವಿಂದ್ ಗ್ರೂಪ್’ಗೆ ಸೇರಿದ  ದೇಶದ ಅತಿದೊಡ್ಡ ಜವಳಿ ತಯಾರಿಕಾ ಮತ್ತು ಮಾರಾಟ ಅಂಗಸಂಸ್ಥೆಯಾಗಿರುವ ಅರವಿಂದ ಸ್ಟೋರ್, ವಸ್ತ್ರ ವಿನ್ಯಾಸಕಾರ ಕುನಾಲ್ ಅನಿಲ್ ತನ್ನಾ ಅವರು ರೂಪಿಸಿದ ಸಮಕಾಲೀನ ಬೇಸಿಗೆ ಅವಧಿಯ ವಿವಿಧ ಬಗೆಯ ಉಡುಪುಗಳನ್ನು (ವಿಶೇಷ ಡಿಸೈನರ್‌ ಕಲೆಕ್ಷನ್‌) ಬಿಡುಗಡೆ ಮಾಡಿದೆ. ಈ ಬೇಸಿಗೆ ಸಂಗ್ರಹದಲ್ಲಿ 15 ವಿವಿಧ ಮಾದರಿಗಳಿದ್ದು, ಆಕರ್ಷಕವಾಗಿ ಕಾಣಲು ಭಿನ್ನ ರೀತಿಯ ಜವಳಿ ಬಳಕೆಯಾಗಿದೆ.

***
ಮಾರುಕಟ್ಟೆ ಪ್ರಗತಿ

ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಸ್ಮಾರ್ಟ್ ವಾಚ್‌ ಮತ್ತು ಆರೋಗ್ಯದ ಮೇಲೆ ನಿಗಾ ಇಡುವ ಧರಿಸಬಹುದಾದ (wearables) ಸಾಧನಗಳ ಮಾರುಕಟ್ಟೆಯು ಶೇ 67.2 ರಷ್ಟು ಪ್ರಗತಿ ಸಾಧಿಸಿದೆ.

2016ನೇ ಸಾಲಿನ ಮೊದಲ ಮೂರು ತಿಂಗಳಲ್ಲಿ ಎರಡು ಕೋಟಿ ಸ್ಮಾರ್ಟ್ ವಾಚ್‌  ಹಾಗೂ ಆರೋಗ್ಯ ನಿಗಾ ಸಾಧನಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 1.18 ಕೋಟಿ ಮಾರಾಟವಾಗಿದ್ದವು. 

ದರ ಕಡಿತವೇ ಮಾರಾಟ ಹೆಚ್ಚಳಕ್ಕೆ ಕಾರಣ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಐಡಿಸಿ ವರದಿ ಹೇಳಿದೆ.  ಮೈಮೇಲೆ ಧರಿಸಬಹುದಾದ ಪುಟ್ಟ ಡಿಜಿಟಲ್‌ ಉಪಕರಣಗಳು ಮತ್ತು  ಆರೋಗ್ಯದ ನಿಗಾ ಇಡುವ ಬ್ಯಾಂಡ್‌ ಮಾರುಕಟ್ಟೆ ನಿಧಾನವಾಗಿ ವಿಸ್ತರಿಸುತ್ತಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT