ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ನಲ್ಲಿ ಮೊದಲ ಹಂತ ಪೂರ್ಣ

ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲಾ ಹೇಳಿಕೆ
Last Updated 31 ಆಗಸ್ಟ್ 2015, 20:04 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದ ನಾಲ್ಕು ಕಡೆ ನಡೆಯುತ್ತಿರುವ ‘ನಮ್ಮ ಮೆಟ್ರೊ’ ಸುರಂಗ ನಿರ್ಮಾಣ ಕಾಮಗಾರಿ 2016ರ ಫೆಬ್ರುವರಿ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಮೊದಲ ಹಂತದ ಸಂಪರ್ಕ ಜಾಲ ಮಾರ್ಚ್‌ ವರೆಗೆ ಸಿದ್ಧಗೊಳ್ಳುವ ಸಾಧ್ಯತೆ ಇದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲಾ ತಿಳಿಸಿದರು.

ಕೆ.ಆರ್‌. ಮಾರುಕಟ್ಟೆಯಿಂದ ಸುರಂಗ ಕೊರೆಯುತ್ತ ಸೋಮವಾರ ಚಿಕ್ಕಪೇಟೆ ನಿಲ್ದಾಣಕ್ಕೆ ತಲುಪಿದ ‘ಕೃಷ್ಣಾ’ ಸುರಂಗ ಕೊರೆಯುವ ಯಂತ್ರವನ್ನು (ಟಿಬಿಎಂ) ವೀಕ್ಷಿಸಿದ ಬಳಿಕ  ಸುದ್ದಿಗಾರರೊಂದಿಗೆ ಮಾತನಾಡಿದರು.

‘ಒಟ್ಟು ನಾಲ್ಕು ಟಿಬಿಎಂಗಳು ಸುರಂಗ ಕೊರೆಯುತ್ತಿವೆ. ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್‌ ಕಡೆಗೆ ‘ಮಾರ್ಗರೀಟಾ’ ಸುರಂಗ ಕೊರೆಯುತ್ತಿದೆ. ಒಂದೂವರೆ ತಿಂಗಳಲ್ಲಿ ಅದು ಮೆಜೆಸ್ಟಿಕ್‌ ತಲುಪಲಿದೆ. ಕೆಟ್ಟು ನಿಂತಿದ್ದ ‘ಗೋದಾವರಿ’ ಯಂತ್ರ ಇನ್ನೆರಡು ದಿನಗಳಲ್ಲಿ ಕೆಲಸ ಶುರು ಮಾಡಲಿದ್ದು, ನಾಲ್ಕು ತಿಂಗಳಲ್ಲಿ ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್‌ಗೆ ಬರಲಿದೆ’ ಎಂದು ವಿವರಿಸಿದರು.

‘ಚಿಕ್ಕಪೇಟೆಯಿಂದ ಮೆಜೆಸ್ಟಿಕ್ ಕಡೆಗೆ ಹೊರಟಿರುವ ‘ಕಾವೇರಿ’ ಐದು ತಿಂಗಳಲ್ಲಿ ಮೆಜೆಸ್ಟಿಕ್‌ಗೆ ಸೇರಲಿದೆ. ‘ಕೃಷ್ಣಾ’ ಸೋಮವಾರ   ತಾನೇ ಇಲ್ಲಿಗೆ ಬಂದಿದೆ. ಒಂದೂವರೆ ತಿಂಗಳ ನಂತರ ಮೆಜೆಸ್ಟಿಕ್ ಕಡೆಗೆ ಕೆಲಸ ಶುರು ಮಾಡಲಿದ್ದು, ಫೆಬ್ರುವರಿ ಅಂತ್ಯಕ್ಕೆ ನಾಲ್ಕೂ  ಯಂತ್ರಗಳು ಮೆಜೆಸ್ಟಿಕ್‌ಗೆ ಬಂದು ಸೇರಲಿವೆ’ ಎಂದರು.

ಪೂರ್ವ–ಪಶ್ಚಿಮದ ಮಧ್ಯೆ ಡಿಸೆಂಬರ್‌ನಲ್ಲಿ ಸಂಚಾರ: ‘ಪೂರ್ವ –ಪಶ್ಚಿಮವನ್ನು ಬೆಸೆಯುವ ಬೈಯಪ್ಪನಹಳ್ಳಿ, ನಾಯಂಡಹಳ್ಳಿ ನಡುವಿನ ಮಾರ್ಗದಲ್ಲಿ ಸೆಪ್ಟೆಂಬರ್‌ನಲ್ಲಿ ಪರೀಕ್ಷಾರ್ಥ ಸಂಚಾರ ನಡೆಯಲಿದೆ. ಡಿಸೆಂಬರ್‌ ಅಂತ್ಯಕ್ಕೆ ವಾಣಿಜ್ಯ ಸಂಚಾರ ಆರಂಭಿಸಲಾಗುವುದು’ ಎಂದರು.

‘ಪುಟ್ಟೇನಹಳ್ಳಿ –ಜಯನಗರದ (ರೀಚ್‌–4) ಮಧ್ಯೆ ಫೆಬ್ರುವರಿಯಲ್ಲಿ ಪರೀಕ್ಷಾರ್ಥ ಸಂಚಾರ ಆರಂಭಿಸಿ, ಮಾರ್ಚ್‌ನಲ್ಲಿ ಪೂರ್ಣಪ್ರಮಾಣದಲ್ಲಿ ವಾಣಿಜ್ಯ ಸಂಚಾರ ಶುರು ಮಾಡಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.

‘ಪರೀಕ್ಷಾರ್ಥ ಸಂಚಾರಕ್ಕಾಗಿ ಪೀಣ್ಯದಲ್ಲಿರುವ ಮೆಟ್ರೊ ರೈಲುಗಳನ್ನು ರೀಚ್-4ಕ್ಕೆ ಸ್ಥಳಾಂತರಿಸಲಾಗುವುದು. ಕಳೆದ ಮೂರು ದಿನಗಳಿಂದ ರೈಲ್ವೆ ಸುರಕ್ಷಾ ಕಮಿಷನರ್‌ (ಸಿಆರ್‌ಎಸ್‌) ಮಿನ್ಸ್ಕ ಚೌಕದಿಂದ ಮಾಗಡಿ ಮಧ್ಯೆ ನಡೆಯುತ್ತಿರುವ ಪರೀಕ್ಷಾರ್ಥ ಸಂಚಾರದ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಮಂಗಳವಾರ ಕೂಡ ಮುಂದುವರೆಯುವ ಸಾಧ್ಯತೆ ಇದೆ’ ಎಂದರು.
*
‘ಕೃಷ್ಣಾ’ಕ್ಕೆ ಶಿಳ್ಳೆ, ಚಪ್ಪಾಳೆ ಸ್ವಾಗತ
ವಾಣಿ ವಿಲಾಸ್‌ ಆಸ್ಪತ್ರೆ ಮುಂಭಾಗದ ಕೆ.ಆರ್‌. ಮಾರುಕಟ್ಟೆ ನಿಲ್ದಾಣದ ಕಡೆಯಿಂದ ಸುಮಾರು 18 ತಿಂಗಳಿಂದ ಸುರಂಗ ನಿರ್ಮಿಸುತ್ತಿದ್ದ ‘ಕೃಷ್ಣಾ’  ಸುರಂಗ ಕೊರೆಯುವ ಯಂತ್ರ (ಟಿಬಿಎಂ) ಸೋಮವಾರ ಚಿಕ್ಕಪೇಟೆ ತಲುಪಿತು. 

ಸಂಜೆ 5 ಗಂಟೆ 5 ನಿಮಿಷಕ್ಕೆ ಭೂಮಿಯ ಹೊಟ್ಟೆ ಸೀಳಿ ‘ಕೃಷ್ಣಾ’ ಹೊರಬರುತ್ತಿದ್ದಂತೆ ಮೆಟ್ರೊ ಸಿಬ್ಬಂದಿ ಶಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸಿದರು. ಬಳಿಕ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು.

‘ಸುರಂಗ ಮಾರ್ಗದಲ್ಲಿ ಹಳೆಯ ಕಟ್ಟಡಗಳು ಮತ್ತು ಬಂಡೆ ಕಾಣಿಸಿಕೊಂಡಿದ್ದರಿಂದ ಕಾರ್ಯ ಸ್ವಲ್ಪ ವಿಳಂಬವಾಯಿತು. ಕೆಲಸ ತಡವಾದರೂ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ ಎಂಬುದು ಸಮಾಧಾನಕರ ಸಂಗತಿ’ ಎಂದು ಪ್ರದೀಪ್‌ ಸಿಂಗ್‌ ಖರೋಲಾ ಹೇಳಿದರು. ಕೆ.ಆರ್‌. ಮಾರುಕಟ್ಟೆಯಿಂದ ಚಿಕ್ಕಪೇಟೆವರೆಗಿನ ಸುರಂಗದ ಉದ್ದ 427 ಮೀಟರ್‌ ಇದೆ.
*
ವಿಧಾನಸೌಧದ ಎದುರಿನ ರಸ್ತೆ ಸಾರ್ವಜನಿಕರಿಗೆ ಮುಕ್ತ
‘ಮೆಟ್ರೊ ಕಾಮಗಾರಿ ಪೂರ್ಣಗೊಂಡಿರುವುದರಿಂದ ವಿಧಾನಸೌಧ ಮುಂಭಾಗದ ರಸ್ತೆ ಮಂಗಳವಾರ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು’ ಎಂದು  ಖರೋಲಾ ತಿಳಿಸಿದರು.

‘ಮೆಟ್ರೊ ಕಾಮಗಾರಿ ಕೈಗೆತ್ತಿಕೊಂಡಿದ್ದ ಕಾರಣ ಕೆ.ಆರ್. ವೃತ್ತದಿಂದ ರಾಜಭವನದ ವರೆಗೆ ಸಂಪರ್ಕ ಕಲ್ಪಿಸುವ ವಿಧಾನಸೌಧ ಮುಂಭಾಗದ ರಸ್ತೆಯಲ್ಲಿ ತಡೆಗೋಡೆಗಳನ್ನು ಹಾಕಲಾಗಿತ್ತು. ಇದರಿಂದ ರಸ್ತೆ ಚಿಕ್ಕದಾಗಿ ವಾಹನಗಳ ಓಡಾಟಕ್ಕೆ ತೊಂದರೆಯಾಗಿತ್ತು. ಈಗ ಕೆಲಸ ಪೂರ್ಣಗೊಂಡಿದ್ದು, ಮೊದಲಿನಂತೆ   ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು’ ಎಂದರು.

ಆಗಸ್ಟ್‌ ಮೊದಲ ವಾರದಲ್ಲಿ ಹೈಕೋರ್ಟ್‌ ಎದುರಿನ ಒಂದು ಬದಿಯ ರಸ್ತೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು.  ಈಗ  ಎರಡೂ ಬದಿಯಿಂದ ತಡೆಗೋಡೆ ತೆಗೆದು ರಸ್ತೆ ನಿರ್ಮಿಸಲಾಗಿದೆ. ಇದರಿಂದ ವಿಧಾನಸೌಧಕ್ಕೆ ಈ ಹಿಂದಿನ ಮೆರುಗು ಬರಲಿದೆ. ವಿಧಾನಸೌಧದ ಎದುರು 2009ರಲ್ಲಿ ಕಾಮಗಾರಿ ಆರಂಭಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT