ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿನ್ಯ ತಗ್ಗಿಸಲು ಶ್ರಮ

ಇಂದಿನಿಂದ ಹವಾಮಾನ ವೈಪರೀತ್ಯ ತಡೆಗೆ ಪ್ಯಾರಿಸ್‌ ಶೃಂಗಸಭೆ
Last Updated 29 ನವೆಂಬರ್ 2015, 19:47 IST
ಅಕ್ಷರ ಗಾತ್ರ

ನವದೆಹಲಿ: ಜಾಗತಿಕ ತಾಪಮಾನ ತಡೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದ ಪ್ರತಿನಿಧಿಗಳು ಭಾನುವಾರ ಪ್ಯಾರಿಸ್‌ಗೆ ತೆರಳಿದರು.

ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯ ಶೃಂಗಸಭೆ ಫ್ರಾನ್ಸ್‌ನ ರಾಜಧಾನಿಯಲ್ಲಿ ಸೋಮವಾರ ಆರಂಭವಾಗಲಿದೆ. ಶೃಂಗಸಭೆಯ ಫಲಿತಾಂಶ ಪತ್ರದಲ್ಲಿ ಆರು ಮಹತ್ವದ ಅಂಶಗಳನ್ನು ಸೇರಿಸುವ ಬಗ್ಗೆ ಭಾರತದ ಪ್ರತಿನಿಧಿಗಳು ಚರ್ಚೆ ನಡೆಸಲಿದ್ದಾರೆ.

‘ಜಾಗತಿಕ ಹವಾಮಾನ ವೈಪರೀತ್ಯ ಶೃಂಗದಲ್ಲಿ ಪಾಲ್ಗೊಳ್ಳಲು ಪ್ಯಾರಿಸ್‌ಗೆ ತೆರಳುತ್ತಿದ್ದೇನೆ’ ಎಂದು ಮೋದಿ ವಿಮಾನವೇರುವ ಮುನ್ನ ‘ಟ್ವೀಟ್‌’ ಮಾಡಿದ್ದಾರೆ. ಸೌರಶಕ್ತಿಯ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶದಿಂದ ಪ್ರಧಾನಿ ಅವರು ಇದೇ ವೇಳೆ ‘ಅಂತರರಾಷ್ಟ್ರೀಯ ಸೌರಶಕ್ತಿ ಒಕ್ಕೂಟ’ಕ್ಕೆ ಚಾಲನೆ ನೀಡಲಿದ್ದಾರೆ.

ಮೋದಿ ಶೃಂಗಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ವಿಶ್ವದ ಪ್ರಮುಖ ನಾಯಕರಾದ ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರೂ ಪಾಲ್ಗೊಳ್ಳಲಿದ್ದಾರೆ. ಇಂಗಾಲ ಹೊರಸೂಸುವಿಕೆ ಪ್ರಮಾಣ ಕಡಿತಗೊಳಿಸುವ ಒಪ್ಪಂದಕ್ಕೆ ಈ ನಾಯಕರು ರಾಜಕೀಯ ಬೆಂಬಲವನ್ನು ಮುಂದುವರಿಸುವ ನಿರೀಕ್ಷೆಯಿದೆ.

ಹವಾಮಾನ ವೈಪರೀತ್ಯ ಶೃಂಗದಲ್ಲಿ ಭಾರತ ‘ಒಂದು ಸವಾಲಾಗಲಿದೆ’ ಎಂದು ಅಮೆರಿಕ ಆತಂಕ ವ್ಯಕ್ತಪಡಿಸಿತ್ತು. ಆದರೆ ಪ್ಯಾರಿಸ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಭಾರತ ‘ಒಪ್ಪಂದ ಮುರಿಯುವ ರಾಷ್ಟ್ರವಾಗದು’ ಎಂದು ಮೋದಿ ಕಳೆದ ವಾರ ಹೇಳಿದ್ದರು.

ಈ ಬಾರಿಯ ಸಭೆಯಲ್ಲಿ ಭಾರತವು ಆರು ಪ್ರಮುಖ ವಿಷಯಗಳನ್ನು ಮುಂದಿಡಲಿದೆ. ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ

ಹೊಂದುತ್ತಿರುವ ದೇಶಗಳಿಗೆ ಮಾಲಿನ್ಯ ಹೊರಸೂಸುವಿಕೆಗೆ ಸಂಬಂಧಿಸಿದಂತೆ ಭಿನ್ನ ಪ್ರಮಾಣ ನಿಗದಿ ಮಾಡುವುದು ಮತ್ತು ಶ್ರೀಮಂತ ರಾಷ್ಟ್ರಗಳಿಂದ ಉನ್ನತ ಮಟ್ಟದ ಬದ್ಧತೆ ಖಚಿತಪಡಿಸುವ ಅಂಶಗಳೂ ಇದರಲ್ಲಿ ಸೇರಿವೆ.

ವಾರ್ಷಿಕ ₹ 6.6 ಲಕ್ಷ ಕೋಟಿ...
ವಿಶ್ವಸಂಸ್ಥೆ (ಪಿಟಿಐ):
ಹಸಿರುಮನೆ ಅನಿಲಗಳ ಕಡಿತಕ್ಕೆ 2020ರಿಂದ ವಾರ್ಷಿಕ 10 ಸಾವಿರ ಕೋಟಿ ಅಮೆರಿಕನ್ ಡಾಲರ್‌ (ಸುಮಾರು ₹ 6.6 ಲಕ್ಷ ಕೋಟಿ) ಅನುದಾನ ನೀಡಬೇಕು ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್ ಅಭಿವೃದ್ಧಿ ಹೊಂದಿದ ದೇಶಗಳಿಗೆ ಮನವಿ ಮಾಡಿದ್ದಾರೆ. ಕಾರ್ಬನ್ ಕಡಿತಕ್ಕೆ ಅನುದಾನ ಕ್ರೋಡೀಕರಿಸಲು ಪ್ಯಾರಿಸ್‌ ಶೃಂಗಸಭೆಯಲ್ಲಿ ಸ್ಪಷ್ಟ ನೀತಿ ರೂಪಿಸಬೇಕು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT