ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು ತವರಲ್ಲಿ ಹೂವಿಗೆ ಬರ!

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಈ ಬಾರಿ ಮಾವಿನ ಮರಗಳಲ್ಲಿ ಹೂವೇ ಬರುತ್ತಿಲ್ಲ. ಮಾವಿನ ಮರಗಳು ಒಂದು ವರ್ಷ ಹೆಚ್ಚು ಫಸಲು ನೀಡಿದರೆ, ಮುಂದಿನ ವರ್ಷ ಕಡಿಮೆ ಫಸಲು ನೀಡುತ್ತವೆ. ಕಡಿಮೆ ಫಸಲು ಬರುವ ಕಾಲವನ್ನು ಇಳಿ ಹಂಗಾಮು ಎಂದು ಕರೆಯುತ್ತಾರೆ. ಹಾಗೆ ನೋಡಿದರೆ ಕಳೆದ ವರ್ಷ ತೀರಾ ಕಡಿಮೆ ಫಸಲು ಬಂದಿತ್ತು. ಹಾಗಾಗಿ ಈ ವರ್ಷ ಅಧಿಕ ಫಸಲಿನ ನಿರೀಕ್ಷೆ ಬೆಳೆಗಾ­ರರಲ್ಲಿತ್ತು. ನಿರೀಕ್ಷೆ ಹುಸಿಯಾಗಿದೆ.

ತಾಲ್ಲೂಕಿನ ಕಸಬಾ ಹಾಗೂ ಯಲ್ದೂರು ಹೋಬಳಿ ಹೊರತು ಪಡಿಸಿದರೆ ಉಳಿದ ಭಾಗದಲ್ಲಿ ಮಾವಿನ ಹೂವು ಬಂದಿಲ್ಲ. ನೆಲದಲ್ಲಿ ತೇವಾಂಶದ ಕೊರತೆ ಇದಕ್ಕೆ ಕಾರಣ. ಮಳೆ ಇಲ್ಲದೆ ಮಾವಿನ ಮರಗಳು ನಿತ್ರಾಣಗೊಂಡಿವೆ. ಒಣಗುವ ಸ್ಥಿತಿ ತಲುಪಿವೆ. ಹಾಗಾಗಿ ಹೂವು ಬರುತ್ತಿಲ್ಲ. ಏರು ಹಂಗಾಮು ಕೈ ಕೊಟ್ಟಿದೆ ಎಂದು ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಬಿ.ಎಂ.ಮಲ್ಲಿ ಕಾರ್ಜನ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾವಿಗೆ ಹೆಸರಾದ ತಾಲ್ಲೂಕಿನಲ್ಲಿ ಮಾವಿನ ಮರಗಳು ಒಣಗುವ ಪ್ರಮಾಣ ಹೆಚ್ಚಿದೆ. ಈಗಾಗಲೇ ನೂರಾರು ಎಕರೆ ಪ್ರದೇಶದಲ್ಲಿ ಒಣಗಿದ ಮಾವಿನ ಮರಗಳನ್ನು ಕಡಿಯಲಾಗಿದೆ. ಇದರಿಂದ  ಮಾವನ್ನು ನಂಬಿ ಜೀವನ ಸಾಗಿಸುತ್ತಿದ್ದ ಕೃಷಿಕರು ಕಂಗಾಲಾಗಿದ್ದಾರೆ. 
ಬಾದಾಮಿ ಮರಗಳಲ್ಲಿ ಹೂವು ಬಂದಿತ್ತು. ಕಾಯಿ ಕಟ್ಟುವ ಭರವಸೆಯೂ ಇತ್ತು. ಹಾಗೆಂದೇ ಹಲವು ಸಲ ಔಷಧಿ ಸಿಂಪರಣೆ ಮಾಡಿಸಿದೆ. ಆದರೆ ದಟ್ಟವಾಗಿ ಬಂದ ಚಿಗುರು ಹೂವು ಹಾಗೂ ಹೀಚನ್ನು ಬಲಿ ತೆಗೆದುಕೊಂಡಿತು ಎಂದು ಪನಸಮಾಕನಹಳ್ಳಿ ಗ್ರಾಮದ ಮಾವು ಬೆಳೆಗಾರ ಆರ್‌.ಮಂಜುನಾಥರೆಡ್ಡಿ ಅಳಲು ತೋಡಿಕೊಂಡರು.

ಮಾವಿನ ತವರಲ್ಲಿ ಮಾವಿನ ಹೂವಿಗೆ ಬರ ಬಂದಿರುವುದು ಇದೇ ಮೊದಲು. ವಾಡಿಕೆಯಂತೆ ತಾಲ್ಲೂಕನ್ನು ಪ್ರವೇಶಿಸಿದ್ದ ವಲಸೆ ಜೇನ್ನೊಣ, ಅವಧಿಗೆ ಮೊದಲೇ ಜಾಗ ಖಾಲಿ ಮಾಡಿರುವುದು ಇದಕ್ಕೆ ನಿದರ್ಶನವಾಗಿದೆ.

–ಆರ್‌.ಚೌಡರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT