ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವ – ಅಳಿಯನ ಹಣಾಹಣಿ

Last Updated 9 ಫೆಬ್ರುವರಿ 2016, 20:15 IST
ಅಕ್ಷರ ಗಾತ್ರ

ರಾಯಚೂರು: ದೇವದುರ್ಗ (ಪರಿಶಿಷ್ಟ ಪಂಗಡಕ್ಕೆ ಮೀಸಲು) ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಮಧ್ಯೆ ತ್ರಿಕೋನ ಸ್ಪರ್ಧೆ ಕಂಡುಬಂದರೂ, ಮಾವ (ಕಾಂಗ್ರೆಸ್‌ನ ರಾಜಶೇಖರ ನಾಯಕ) ಮತ್ತು ಅಳಿಯನ (ಬಿಜೆಪಿಯ ಕೆ.ಶಿವನಗೌಡ ನಾಯಕ) ನಡುವೆಯೇ ನೇರ ಹಣಾಹಣಿ ಇದೆ.

ಕಾಂಗ್ರೆಸ್‌ ಶಾಸಕರಾಗಿದ್ದ ಎ.ವೆಂಕಟೇಶ ನಾಯಕ ಅವರು ರೈಲು ಅಪಘಾತದಲ್ಲಿ ಮೃತಪಟ್ಟ ಕಾರಣ ಈ ಉಪ ಚುನಾವಣೆ ನಡೆಯುತ್ತಿದೆ. ಅವರ ಮಗ ರಾಜಶೇಖರ ನಾಯಕಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ.  ಶಿವನಗೌಡ ಅವರು ವೆಂಕಟೇಶ ನಾಯಕರ ಸೋದರಿಯ ಮಗಳ ಮಗ.

ಕಾಂಗ್ರೆಸ್‌ ಮತ್ತು ಬಿಜೆಪಿಯ ಕೋಟ್ಯಧಿಪತಿ ಅಭ್ಯರ್ಥಿಗಳಿಗೆ ಲಕ್ಷಗಳ ಒಡತಿಯಾದ ಜೆಡಿಎಸ್‌ ಅಭ್ಯರ್ಥಿ ಕರೆಮ್ಮ ಗೋಪಾಲಕೃಷ್ಣ ಸಮರ್ಥ ಪೈಪೋಟಿ ನೀಡದಿದ್ದರೂ ಎರಡೂ ಪಕ್ಷಗಳ ಮತಬ್ಯಾಂಕ್‌ಗೆ ‘ಕನ್ನ’ ಹಾಕುವುದಂತೂ ದಿಟ. ಪಕ್ಷೇತರ ಅಭ್ಯರ್ಥಿ ಶಿವರಾಜ ದೊರೆ ಅವರಿಂದ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಗಮನಾರ್ಹ ಹಾನಿಯಾಗುವ ಸಾಧ್ಯತೆ ಕಡಿಮೆ.

ಇದರೊಟ್ಟಿಗೆ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಟಿಕೆಟ್‌ ದೊರೆಯದೆ ಅಸಮಾಧಾನಗೊಂಡಿರುವ ಮತ್ತು ಬಂಡಾಯ ಎದ್ದಿರುವ ಅಭ್ಯರ್ಥಿಗಳು ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಓಟಕ್ಕೆ ತೊಡಕಾಗುವುದು ನಿಶ್ಚಿತ.

ಜಾಣ ಮತದಾರರು ತಾವು ಯಾರಿಗೆ ಮತ ಹಾಕುತ್ತೇವೆ ಎಂಬ ಗುಟ್ಟನ್ನು ಬಿಟ್ಟುಕೊಡುತ್ತಿಲ್ಲ. ದಿವಂಗತ ವೆಂಕಟೇಶ ನಾಯಕರ ಬಗ್ಗೆ ಕ್ಷೇತ್ರದಲ್ಲಿ ಒಳ್ಳೆಯ ಮಾತುಗಳು ಕೇಳಿಬರುತ್ತವೆ. ಆದರೆ, ಈ ಮಾತುಗಳು ಅವರ ಕಿರಿಯ ಮಗ ರಾಜಶೇಖರ ನಾಯಕರ ಕೈ ಹಿಡಿಯಲಿವೆಯೇ ಎಂಬುದು ಪ್ರಶ್ನೆ. 

ತಮ್ಮ ಸೋದರ ರಾಜಶೇಖರ ಅವರನ್ನು  ಶತಾಯಗತಾಯ ಗೆಲ್ಲಿಸಲೇಬೇಕು ಎಂದು ಪಣ ತೊಟ್ಟಿರುವ ರಾಯಚೂರು ಸಂಸದ ಬಿ.ವಿ.ನಾಯಕ ಅವರಿಗೆ ಹೆಗಲೆಣೆಯಾಗಿ  ಜಿಲ್ಲೆಯ ಕಾಂಗ್ರೆಸ್‌ನ ತಲಾ ಮೂವರು ವಿಧಾನ ಪರಿಷತ್‌ ಸದಸ್ಯರು ಮತ್ತು ವಿಧಾನಸಭಾ ಸದಸ್ಯರು ಶ್ರಮಿಸುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ಅವರ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಹಾಜರಿದ್ದ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನಂತರ ಕ್ಷೇತ್ರದಲ್ಲಿ ಕಾಣಿಸಿಲ್ಲ. ಆದರೆ, ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ಕ್ಷೇತ್ರದ ಉಸ್ತುವಾರಿ ವಹಿಸಿದ್ದಾರೆ.  ಸುಮಾರು 10 ದಿನಗಳ ಕಾಲ ಕ್ಷೇತ್ರದಲ್ಲಿ ಬಿರುಸಿನ ಸಂಚಾರ ನಡೆಸಿರುವ ಸೋಮಣ್ಣ, ಮಠ– ಮಂದಿರಗಳಿಗೆ ಎಡತಾಕಿದ್ದಾರೆ. 

ಏಟಿಗೆ ಎದುರೇಟು: ಕ್ಷೇತ್ರದಲ್ಲಿ ಶೇ 40ರಷ್ಟಿರುವ ನಾಯಕ ಜನಾಂಗದವರನ್ನು ಸೆಳೆಯಲು ಸಚಿವ ಸತೀಶ ಜಾರಕಿಹೊಳಿ ಅವರನ್ನು ಕಾಂಗ್ರೆಸ್‌ ನಿಯೋಜಿಸಿದರೆ, ಬಿಜೆಪಿ ಬಳ್ಳಾರಿ ಸಂಸದ ಬಿ. ಶ್ರೀರಾಮುಲು ಅವರನ್ನು ಕಳುಹಿಸಿದೆ. ಶೇ 15ರಷ್ಟು ಸಂಖ್ಯಾಬಲ ಹೊಂದಿರುವ ಪರಿಶಿಷ್ಟ ಜಾತಿಯವರ ಬೆಂಬಲ ಗಳಿಸಲು ಕಾಂಗ್ರೆಸ್‌ನಿಂದ ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ, ಆಂಜನೇಯ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬಂದಿದ್ದಾರೆ. ಬಿಜೆಪಿಯಿಂದ ಮಾಜಿ ಸಚಿವ ಗೋವಿಂದ ಕಾರಜೋಳ ಪ್ರಚಾರ ಕಾರ್ಯ ನಡೆಸಿದ್ದಾರೆ.

ಶೇ 25ರಷ್ಟಿರುವ ಲಿಂಗಾಯಿತರು ಮತ್ತು ಕುರುಬರು, ಕಬ್ಬೇರ್‌ ಸೇರಿ ಶೇ 35ರಷ್ಟಿರುವ ಹಿಂದುಳಿದ ವರ್ಗಗಳ ಬೆಂಬಲ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ, ವಿವಿಧ ಸಮುದಾಯಗಳನ್ನು ಪ್ರತಿನಿಧಿಸುವ ಐದಾರು ಸಚಿವರು, ಬಿಜೆಪಿಯಲ್ಲಿನ ಹಲ ಮುಖಂಡರು ಕ್ಷೇತ್ರದಲ್ಲಿ ಸುತ್ತಾಡಿದ್ದಾರೆ.

ಕರೆಮ್ಮ ಗೋಪಾಲಕೃಷ್ಣ  ಅವರ ಪರ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮೂರು ದಿನಗಳ ಕಾಲ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಜೊತೆಗೆ ಜಿಲ್ಲೆಯ ಜೆಡಿಎಸ್‌ ಶಾಸಕರಾದ ಮಾನಪ್ಪ ವಜ್ಜಲ, ಡಾ.ಎಸ್‌.ಶಿವರಾಜ ಪಾಟೀಲ, ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಮಹಾಂತೇಶ ಪಾಟೀಲ ಅತ್ತನೂರು ಕ್ಷೇತ್ರದಲ್ಲಿ ಸಂಚರಿಸಿ ಮತದಾರರನ್ನು ಸೆಳೆಯಲು ಪ್ರಯತ್ನಿಸಿದ್ದಾರೆ.

ಮತದಾರರ ಮನದಾಳ: ಉಪಚುನಾವಣೆ ಘೋಷಣೆ ಆಗುವುದಕ್ಕೂ ಮುನ್ನ ಸುಮಾರು ₹ 200 ಕೋಟಿ ಅಂದಾಜಿನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿರುವುದು ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇರುವುದು ರಾಜಶೇಖರ ಅವರಿಗೆ ಅನುಕೂಲಕರ ಅಂಶಗಳು ಎಂದು ಹಲವು ಮತದಾರರು ಹೇಳುತ್ತಾರೆ. ಆದರೆ, ವೆಂಕಟೇಶ ನಾಯಕರಂತೆ ಅವರ ಮಕ್ಕಳು ಜನರೊಂದಿಗೆ ಬೆರೆಯುವುದಿಲ್ಲ ಎಂಬ ಅಸಮಾಧಾನ ಅವರ ಸ್ವಗ್ರಾಮ ಅರಕೇರಾದಲ್ಲಿ ಕೇಳಿಬಂತು.

ಶಿವನಗೌಡ ಅವರು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದಾಗ ಕ್ಷೇತ್ರಕ್ಕೆ ಸಾವಿರಾರು ಜನತಾ ಮನೆಗಳನ್ನು ತಂದರು, ಗ್ರಂಥಾಲಯ, ರಸ್ತೆ, ನೀರಿನ ಸೌಕರ್ಯಗಳನ್ನು ಕಲ್ಪಿಸಿದರು ಎಂಬ ಮಾತುಗಳು ಬಿಜೆಪಿ ಅಭ್ಯರ್ಥಿಗೆ ಬೆಂಬಲದ ಮನ್ಸೂಚನೆ ನೀಡಿದವು. ಆದರೆ, ಬಿಸಿರಕ್ತದ ಶಿವನಗೌಡ ಅವರು ಅಧಿಕಾರಿಗಳ ಮೇಲೆ ಮಾಡುವ ಜಬರದಸ್ತು, ಸಡಿಲ ಮಾತುಗಳಿಂದಾಗಿಯೇ 2 ಚುನಾವಣೆಗಳಲ್ಲಿ ಸೋಲು ಕಾಣಬೇಕಾಯಿತು ಎಂಬ ಎಚ್ಚರಿಕೆ ಮಾತನ್ನು ಮತದಾರರು ಹೇಳುತ್ತಾರೆ.

‘ಶಿವನಗೌಡ ಸಚಿವರಾಗಿದ್ದಾಗ ₹ 1 ಸಾವಿರ ಕೋಟಿ ಅನುದಾನವನ್ನು ದೇವದುರ್ಗಕ್ಕೆ ತಂದಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ತಾಲ್ಲೂಕಿನ ಸುಮಾರು 20 ಹಳ್ಳಿಗಳಿಗೆ ಈಗಲೂ ಬಸ್‌ ಸೌಲಭ್ಯ ಇಲ್ಲ. ಆ ಹಣ ಏನಾಯ್ತ? ಈಗ ಕಾಂಗ್ರೆಸ್‌ನವರು ₹ 200 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿ ಘೋಷಣೆ ಮಾಡಿದ್ದಾರೆ. ಈ ಹಣ ಎಲ್ಲಿಗೆ ಹೋಗುವುದೋ? ಒಟ್ಟಿನಲ್ಲಿ ಯಾರೇ ಗೆದ್ದರೂ ಸೋಲುವುದು ಮಾತ್ರ ಮತದಾರ’ ಎಂದು ಗಬ್ಬೂರಿನ ಹಿರಿಯರೊಬ್ಬರು ಹತಾಶೆಯಿಂದ ನುಡಿದರು.

‘ಜನರು ತಮ್ಮ ಬೆಂಬಲ ಅವರಿಗೆ, ಇವರಿಗೆ ಎಂದು ಹೇಳುತ್ತಾರೆ. ಆದರೆ, ಮತದಾನದ ಹಿಂದಿನ ದಿನ ಯಾರು ಎಷ್ಟು ಹಣ, ಹೆಂಡ ಹಂಚಿಕೆ ಮಾಡುತ್ತಾರೆ ಎಂಬುದರ ಮೇಲೆ ಗೆಲುವು ನಿಂತಿದೆ’ ಎಂದು ಹೇಳಿದ ದೇವದುರ್ಗದ ಶಿಕ್ಷಕರೊಬ್ಬರ ಅನಿಸಿಕೆ ಸುಳ್ಳೇನೂ ಅಲ್ಲ.

ಮತದಾರರ ವಿವರ

1.04 ಲಕ್ಷ ಪುರುಷ ಮತದಾರರು

1.06 ಲಕ್ಷ ಮಹಿಳಾ ಮತದಾರರು

24 ತೃತೀಯ ಲಿಂಗಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT