ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ತಿ ಕಥೆಗಳ ರಂಗಾನುಸಂಧಾನ

Last Updated 8 ಜುಲೈ 2016, 19:30 IST
ಅಕ್ಷರ ಗಾತ್ರ

ಬಿ.ವಿ.ಕಾರಂತ್‌, ಕೆ.ವಿ.ಅಕ್ಷರ, ರಘುನಂದನ, ನಟರಾಜ್‌ ಹೊನ್ನವಳ್ಳಿ ಅವರಂತಹ ಜತೆ ಘಟಾನುಘಟಿ ರಂಗಕರ್ಮಿಗಳ ಜತೆ ಕೆಲಸ ಮಾಡಿದ ಅನುಭವವಿರುವ ಶಿರಾ ತಾಲ್ಲೂಕು ಗೋಮಾರದಹಳ್ಳಿ ಗ್ರಾಮದ ಪಿ.ಮಂಜುನಾಥ್‌ ನೀನಾಸಮ್‌ ಪದವೀಧರರು.

ನೀನಾಸಮ್‌ ತಿರುಗಾಟದಲ್ಲಿ ಕಲಾವಿದರಾಗಿ ರಾಜ್ಯದಾದ್ಯಂತ ಸುತ್ತಿರುವ ಅವರು ನಂತರ ತಿಪಟೂರಿನ ‘ಪ್ರೊಥಿಯೂ’ (ಪ್ರೋಪೆಶನಲ್ ಥಿಯೇಟರ್‌ ಯೂನಿಟ್‌)ನಲ್ಲಿ ಸಕ್ರಿಯರಾಗಿದ್ದವರು.

ಅಚ್ಯುತ್‌ಕುಮಾರ್‌, ನಟರಾಜ್‌ ಹೊನ್ನವಳ್ಳಿ, ಚನ್ನಕೇಶವ, ಮಂಜುನಾಥ್‌ ಇನ್ನೊಂದಿಷ್ಟು ಸಮಾನ ಮನಸ್ಕರು ಸೇರಿಕೊಂಡು ಕಟ್ಟಿದ್ದ ತಂಡ ‘ಪ್ರೊಥಿಯೂ’.
ಇದರ ಚಟುವಟಿಕೆಗಳು ಮಂಜುನಾಥ್‌ ಅವರಿಗೆ  ಅಪಾರ ರಂಗಾನುಭವವನ್ನು ತಂದುಕೊಟ್ಟಿತು. ಅವರು ಪಿ.ಲಂಕೇಶ್‌ ಅವರ ‘ಅಕ್ಕ’ ಕಾದಂಬರಿ ಆಧರಿತ ‘ಕ್ಯಾತನ ಪಡ್ಡೆ ದಿನಗಳು’ ಹಾಗೂ ಶಿವರಾಮ ಕಾರಂತರ ‘ನಿಮ್ಮ ಓಟು ಯಾರಿಗೆ?’ ಮತ್ತು ‘ಇಸ್ಪೀಟ್‌ ಗುಲಾಮ’ ನಾಟಕಗಳನ್ನು ನಿರ್ದೇಶಿಸಿದ್ದಾರೆ.
ನಂತರ ಕೆಲವು ಕಾಲ ಪತ್ರಿಕಾರಂಗದಲ್ಲಿಯೂ ಸೇವೆ ಸಲ್ಲಿಸಿದ ಅವರು, ಕಳೆದ ಐದು ವರ್ಷಗಳಿಂದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗೋಮಾರದಹಳ್ಳಿಯಲ್ಲಿ ವ್ಯವಸಾಯ ಮಾಡಿಕೊಂಡಿದ್ದಾರೆ.

ರಂಗಭೂಮಿಯೊಟ್ಟಿಗೆ ಸಾಹಿತ್ಯದ ನಂಟನ್ನೂ ಬೆಳೆಸಿಕೊಂಡಿರುವ ಮಂಜುನಾಥ್‌ ಅವರಿಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ ಕಥೆಗಳ ಕುರಿತು ಯಾವಾಗಲೂ ವ್ಯಾಮೋಹವಿತ್ತು.

ಪ್ರೊಥಿಯೂ ತಂಡದಲ್ಲಿದ್ದಾಗ ನಟರಾಜ್‌ ಹೊನ್ನವಳ್ಳಿ ಅವರು ಮಾಸ್ತಿಯವರ ನಾಲ್ಕು ಕಥೆಗಳನ್ನು ಆಧರಿಸಿಕೊಂಡು ರಂಗಪ್ರಯೋಗ ಮಾಡಿದ್ದರು. ಅದರಲ್ಲಿ ಮಂಜುನಾಥ್‌ ಅವರೂ ಅದರಲ್ಲಿ ನಟಿಸಿದ್ದರು. ಇದು ಮಾಸ್ತಿ ಕಥೆಗಳ ಬಗೆಗೆ ಇನ್ನಷ್ಟು ಆಕರ್ಷಿತರಾಗಲು ಕಾರಣವಾಯಿತು.

ಈ ನಡುವೆ ವ್ಯವಸಾಯದಲ್ಲಿ ತೊಡಗಿಕೊಂಡಿದ್ದರಿಂದ ರಂಗಭೂಮಿಯಲ್ಲಿ ಪೂರ್ತಿಯಾಗಿ ತೊಡಗಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹಾಗೆಂದು ರಂಗಭೂಮಿಯ ಸಂಗವನ್ನು ಪೂರ್ತಿಯಾಗಿ ತೊರೆದಿರಲೂ ಇಲ್ಲ. ಅಗಾಗ ಶಾಲಾ ಮಕ್ಕಳಿಗೆ ನಾಟಕಗಳನ್ನು ಮಾಡಿಸುತ್ತ ರಂಗಪ್ರೀತಿಯ ಸೆಲೆಯನ್ನು ಹಾಗೆಯೇ ಉಳಿಸಿಕೊಂಡಿದ್ದರು.

ಇದೀಗ ಮಾಸ್ತಿಯವರ ‘ವೆಂಕಟಶಾಮಿಯ ಪ್ರಣಯ’ ಹಾಗೂ ‘ಜೋಗ್ಯೋರ ಅಂಜಪ್ಪನ ಕೋಳಿ ಕತೆ’ಗಳನ್ನು ಆಧರಿಸಿದ ‘ಜೋಗಿಯ ಪ್ರಣಯ’ ಏಕವ್ಯಕ್ತಿ ರಂಗಪ್ರಯೋಗದ ಮೂಲಕ ತಾವೇ ರಂಗಮಂಚವನ್ನು ಏರಿದ್ದಾರೆ. 

‘ಕಳೆದ ಐದು ವರ್ಷಗಳಲ್ಲಿ ಆಗೀಗ ಮಕ್ಕಳಿಗೆ ನಾಟಕಗಳನ್ನು ಮಾಡಿಸುತ್ತಿದ್ದೆ. ಇತ್ತೀಚೆಗೆ ನಾನೂ ಮತ್ತೊಮ್ಮೆ ನಾಟಕದಲ್ಲಿ ಅಭಿನಯಿಸಬೇಕು ಎಂಬ ಇಂಗಿತ ಹುಟ್ಟಿತು. ಆದರೆ ನಾಟಕ ಮಾಡಲು ತಕ್ಕ ನಟರು ಇರಲಿಲ್ಲ. ಅಲ್ಲದೇ ಅದು ಈಗ ನಾಟಕ ಮಾಡುವುದು ಸಾಕಷ್ಟು ದುಬಾರಿಯೂ ಆಗಿಬಿಟ್ಟಿದೆ. ಈ ಎಲ್ಲವನ್ನೂ ಯೋಚಿಸುತ್ತಿದ್ದಾಗ ನನಗೆ ಹೊಳೆದಿದ್ದು ಏಕವ್ಯಕ್ತಿ ರಂಗಪ್ರಯೋಗ. ಈ ಆಲೋಚನೆಗೆ ಸೂಕ್ತವಾಗಿ ಹೊಂದಿದ್ದು ಮಾಸ್ತಿ ಅವರ ಕಥೆಗಳು.
‘ಮಾಸ್ತಿ ಅವರು ಕಥೆಯನ್ನು ಹೇಳುವ ಕ್ರಮ ನನಗೆ ತುಂಬ ಇಷ್ಟ. ಏಕವ್ಯಕ್ತಿ ರಂಗ ಪ್ರಯೋಗಕ್ಕೂ ಆ ನಿರೂಪಣಾ ಮಾದರಿ ಚೆನ್ನಾಗಿ ಹೊಂದುತ್ತದೆ. ಆದ್ದರಿಂದ ಅವರ ‘ವೆಂಕಟಶಾಮಿಯ ಪ್ರಣಯ’ ಹಾಗೂ ‘ಜೊಗ್ಯೋರ ಅಂಜಪ್ಪನ ಕೋಳಿ ಕತೆ’ ಕತೆಗಳನ್ನು ಸೇರಿಸಿ ‘ಜೋಗಿಯ ಪ್ರಣಯ’ ಎಂಬ ಏಕವ್ಯಕ್ತಿ ರಂಗಪ್ರಯೋಗವನ್ನು ರೂಪಿಸಿದೆ’ ಎಂದು ಅವರು ವಿವರಿಸುತ್ತಾರೆ.

ಮಾಸ್ತಿ ಅವರ ಈ ಕಥೆಗಳಲ್ಲಿನ ಸರ್ವಕಾಲಿಕತೆ ಮತ್ತು ‘ಉಲ್ಲಂಘನೆ’ಯ ಗುಣ ಅವರನ್ನು ವಿಶೇಷವಾಗಿ ಆಕರ್ಷಿಸಿದೆ.
‘ಮಾಸ್ತಿ ಅವರು ಸಾಂಪ್ರದಾಯಿಕ ಮನಸ್ಥಿತಿಯವರು ಎಂದು ಹೇಳುತ್ತಾರೆ. ಆದರೆ ಅವರ ವೆಂಕಟಶಾಮಿಯ ಪ್ರಣಯ ಕಥೆಯಲ್ಲಿ ಕ್ಷೌರಿಕರ ಹುಡುಗನೊಬ್ಬ ಇಡೀ ಊರನ್ನು ಎದುರು ಹಾಕಿಕೊಂಡು ದೊಂಬರ ಹುಡುಗಿಯನ್ನು ಪ್ರೇಮಿಸುತ್ತಾನೆ. ಜೋಗ್ಯೋರ ಅಂಜಪ್ಪನ ಕೋಳಿ ಕತೆಯಲ್ಲಿಯೂ ಇಂಥದ್ದೇ ಮೀರುವ ಗುಣ ಕಾಣುತ್ತದೆ. ಮಾಸ್ತಿ ಅವರ ಕತೆಗಳಲ್ಲಿನ ಈ ‘ಉಲ್ಲಂಘನೆ’ಯ ಗುಣ ನನ್ನನ್ನು ತುಂಬ ಸೆಳೆಯಿತು’’ ಎಂದು ಮಾಸ್ತಿ ಕಥನವೈಖರಿಯ ಕುರಿತು ಅವರು ಪ್ರತಿಕ್ರಿಯಿಸುತ್ತಾರೆ.

‘ಜೋಗಿಯ ಪ್ರಣಯ’ ರಂಗಪ್ರಯೋಗ ಹೆಚ್ಚು ವೆಚ್ಚದಾಯಕವಾದದ್ದಲ್ಲ. ಕಡಿಮೆ ಖರ್ಚಿನಲ್ಲಿ, ಸರಳವಾಗಿ ಹೆಚ್ಚು ಪರಿಣಾಮಕಾರಿಯಾಗಿ ಪ್ರೇಕ್ಷಕರೊಂದಿಗೆ ಸಂವಾದ ನಡೆಸುವುದೇ ಈ ಪ್ರಯೋಗದ ಉದ್ದೇಶ. ಆದ್ದರಿಂದಲೇ ಮಂಜುನಾಥ್‌ ಅಭಿನಯದ ಮೂರು ಗುಣಗಳಾದ ಆಂಗಿಕ, ವಾಚಿಕ ಮತ್ತು ಸಾತ್ವಿಕಕ್ಕೆ ಒತ್ತುಕೊಟ್ಟು ಒಂದು ಗಂಟೆ ಅವಧಿಯ ಈ ಪ್ರಯೋಗವನ್ನು ಕಟ್ಟಿದ್ದಾರೆ. ರಾಘವೇಂದ್ರ ನಾಯ್ಕ ವಿನ್ಯಾಸ ಮಾಡಿದ್ದಾರೆ. ಈ ನಾಟಕಕ್ಕಾಗಿ 40 ದಿನ ತಾಲೀಮನ್ನೂ ನಡೆಸಿರುವ ಮಂಜುನಾಥ್‌ ಅವರು ಈಗಾಗಲೇ ಎರಡು ಪ್ರದರ್ಶನಗಳನ್ನು ನೀಡಿದ್ದಾರೆ.

‘ಹಲವಾರು ನಟರು ಸೇರಿಕೊಂಡು ಒಂದು ನಾಟಕ ಮಾಡಿದಾಗಲೇ ಅದನ್ನು ಜನರು ನೋಡುವುದು ಕಷ್ಟ. ಅಂಥದ್ದರಲ್ಲಿ ಒಬ್ಬನೇ ವ್ಯಕ್ತಿ ಗಂಟೆಗಟ್ಟಲೇ ನಾಟಕ ಮಾಡಿದರೆ ಜನ ನೋಡುತ್ತಾರಾ ಎಂಬ ಅನುಮಾನ ಇತ್ತು. ಆದರೆ ನನ್ನ ಪ್ರಯೋಗಕ್ಕೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಬಂತು. ನೋಡಿದವರೆಲ್ಲರೂ ಮೆಚ್ಚಿಕೊಂಡು ಪ್ರಶಂಸಿದರು. ಇದರಿಂದ ನನಗೆ ಈ ಪ್ರಯೋಗದ ಬಗ್ಗೆ ನಂಬಿಕೆ ಬಂತು’ ಎಂದು ಮಂಜುನಾಥ್‌ ವಿವರಿಸುತ್ತಾರೆ.

ಈ ವಾರಾಂತ್ಯ ಬೆಂಗಳೂರಿನ ಗಾಂಧಿ ಸಾಹಿತ್ಯ ಸಂಘ ಮತ್ತು ಕೆ.ವಿ. ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ‘ಜೋಗಿಯ ಪ್ರಣಯ’ ಪ್ರದರ್ಶನವಾಗಲಿದೆ.
*
ಪ್ರದರ್ಶನದ ವಿವರಗಳು
ಗೋಮಾರದಹಳ್ಳಿ ಮಂಜುನಾಥ್‌ ಪಿ. ಅವರ ‘ಜೋಗಿಯ ಪ್ರಣಯ’ ರಂಗಪ್ರಯೋಗವು ಇದೇ ಭಾನುವಾರ (ಜುಲೈ 10) ನಗರದ ಎರಡು ಸ್ಥಳಗಳಲ್ಲಿ ಪ್ರದರ್ಶಿತವಾಗಲಿವೆ. ಮಧ್ಯಾಹ್ನ 2ಗಂಟೆಗೆ ಲೋಕಚರಿತ ಸಮುದಾಯ ಕೂಟದಲ್ಲಿ ಪ್ರದರ್ಶನವಾಗಲಿದೆ. ಪ್ರಯೋಗದ ನಂತರ ಕತೆಗಳ ಕುರಿತು ವಿಕ್ರಮ್‌ ಹತ್ವಾರ್‌  ಮಾತನಾಡಲಿದ್ದಾರೆ. ಮಾಸ್ತಿ ಕಥೆಗಳ ಕುರಿತ ಸಂವಾದವೂ ಇದೆ.

(ವಿಳಾಸ: ಗಾಂಧಿ ಸಾಹಿತ್ಯ ಸಂಘ, 8ನೇ ಅಡ್ಡರಸ್ತೆ, ಮಲ್ಲೇಶ್ವರ). ಅವತ್ತೇ ಸಂಜೆ 5 ಗಂಟೆಗೆ ಕೆ.ವಿ.ಸುಬ್ಬಣ್ಣ ಆಪ್ತರಂಗಮಂದಿರದಲ್ಲಿ ಪ್ರದರ್ಶನವಾಗಲಿದೆ. (ವಿಳಾಸ: 7ನೇ ಅಡ್ಡರಸ್ತೆ, ಟೀಚರ್ಸ್‌ ಕಾಲೋನಿ ಮೊದಲನೇ ಹಂತ, ದಯಾನಂದಸಾಗರ ಕಾಲೇಜಿನ ಸಮೀಪ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT