ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಹಕ್ಕು:30ಸಾವಿರ ಪ್ರಕರಣ ಬಾಕಿ

Last Updated 3 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಮಾಹಿತಿ ಹಕ್ಕು ಆಯೋಗದಲ್ಲಿ 30 ಸಾವಿರ ಪ್ರಕರಣಗಳು ವಿಲೇವಾರಿಯಾಗದೆ ಉಳಿದಿವೆ. ಇವುಗಳ ಇತ್ಯರ್ಥಕ್ಕೆ ಲೋಕ ಅದಾಲತ್‌ ಮಾದರಿಯಲ್ಲಿ ಅದಾಲತ್‌ ನಡೆಸಬೇಕು’ ಎಂದು ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಕಟ್ಟೆಯ (ಕ್ರಿಯಾಕಟ್ಟೆ) ಟ್ರಸ್ಟಿ ವೀರೇಶ್‌ ಆಗ್ರಹಿಸಿದರು.

‘ಸಿವಿಕ್‌ ಬೆಂಗಳೂರು’ ಹಾಗೂ ‘ಕ್ರಿಯಾಕಟ್ಟೆ’ ಆಶ್ರಯದಲ್ಲಿ ನಗರದ ಜೈನ್‌ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಮಾಹಿತಿ ಹಕ್ಕು ಕಾಯ್ದೆಯ 10 ವರ್ಷದ ಅನುಭವ– ಸವಾಲುಗಳು ಹಾಗೂ ಮುಂದಿನ ನಡೆ’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

‘ನಿಯಮದ ಪ್ರಕಾರ ಆಯೋಗದಲ್ಲಿ ಒಬ್ಬರು ಮುಖ್ಯ ಮಾಹಿತಿ ಆಯುಕ್ತರು ಹಾಗೂ 10 ಆಯುಕ್ತರು ಇರಬೇಕು. ಮಹಾರಾಷ್ಟ್ರ ಹೊರತುಪಡಿಸಿ ಬೇರೆ ಯಾವ ರಾಜ್ಯದಲ್ಲೂ ಈ ನಿಯಮ ಪಾಲನೆ ಆಗಿಲ್ಲ. ರಾಜ್ಯದಲ್ಲಿ ಇಬ್ಬರು ಆಯುಕ್ತರು ಇದ್ದಾರೆ. ಮುಖ್ಯ ಆಯುಕ್ತರ ಹುದ್ದೆ ಖಾಲಿ ಇದೆ. ಹುದ್ದೆಗಳನ್ನು ಭರ್ತಿ ಮಾಡದೆ ಆಯೋಗವನ್ನು ದುರ್ಬಲಗೊಳಿಸಲು ಸರ್ಕಾರ ಯತ್ನಿಸುತ್ತಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಾಹಿತಿ ಹಕ್ಕು ಕಾರ್ಯಕರ್ತ ಉಮಾಪತಿ ಮಾತನಾಡಿ, ‘ಕೇಂದ್ರ ಮಾಹಿತಿ ಆಯೋಗ ಪ್ರಕರಣಗಳನ್ನು ಒಂದೆರಡು ವಿಚಾರಣೆಗಳಲ್ಲೇ ವಿಲೇವಾರಿ ಮಾಡುತ್ತದೆ. ರಾಜ್ಯದಲ್ಲಿ ಪ್ರಕರಣಗಳನ್ನು ಇತ್ಯರ್ಥ ಮಾಡಲು ಒಂದೆರಡು ವರ್ಷ ತೆಗೆದುಕೊಳ್ಳಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈಚಿನ ದಿನಗಳಲ್ಲಿ ಮಾಹಿತಿ ಹಕ್ಕು ಕಾಯ್ದೆ ಹಾಗೂ ಪಿಐಎಲ್‌ ದುರ್ಬಳಕೆ ಆಗುತ್ತಿದೆ’ ಎಂದು ಹೈಕೋರ್ಟ್‌ ವಕೀಲ ಪಿ.ಎನ್‌. ಅಮೃತೇಶ್‌ ಹೇಳಿದರು. 

ಮಾಹಿತಿ ಹಕ್ಕು ಆಯುಕ್ತ ಎಲ್‌. ಕೃಷ್ಣಮೂರ್ತಿ ಪ್ರತಿಕ್ರಿಯಿಸಿ, ‘ಬಿಬಿಎಂಪಿ ಹಾಗೂ ಬಿಡಿಎ ವ್ಯಾಪ್ತಿಯ ಪ್ರಕರಣಗಳ ಇತ್ಯರ್ಥಕ್ಕೆ ನಗರದಲ್ಲಿ ಅದಾಲತ್‌ ನಡೆಸಲಾಗುವುದು’ ಎಂದು ಭರವಸೆ ನೀಡಿದರು.

ದಂಡ: ಮಾಹಿತಿ ಹಕ್ಕು ಆಯುಕ್ತ ಶಂಕರ ಪಾಟೀಲ ಮಾತನಾಡಿ, ‘ಕಳೆದೊಂದು ವರ್ಷಗಳಲ್ಲಿ 5 ಸಾವಿರ ಪ್ರಕರಣಗಳ ವಿಚಾರಣೆ ನಡೆಸಿ 2 ಸಾವಿರ ಪ್ರಕರಣಗಳ ಇತ್ಯರ್ಥ ಮಾಡಿ ಅಧಿಕಾರಿಗಳಿಗೆ ₹15 ಲಕ್ಷ ದಂಡ ವಿಧಿಸಿದ್ದೇನೆ’ ಎಂದರು.

ನಿವೃತ್ತ ಮುಖ್ಯ ಮಾಹಿತಿ ಹಕ್ಕು ಆಯುಕ್ತ ಎ.ಕೆ.ಎಂ. ನಾಯಕ್ ಮಾತನಾಡಿ, ‘ಆಯೋಗಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌, ಕಂದಾಯ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ  ದೂರುಗಳು ಹೆಚ್ಚು ಬರುತ್ತಿವೆ. ಈ ಇಲಾಖೆಗಳ ಅಧಿಕಾರಿಗಳ ಪ್ರವೃತ್ತಿ ಬದಲಾದರೆ ಆಯೋಗದ ಮೇಲಿನ ಹೊರೆ ಕಡಿಮೆಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಒಬ್ಬನಿಂದಲೇ 14 ಸಾವಿರ ಅರ್ಜಿ!
‘ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಆರು ತಿಂಗಳಲ್ಲಿ 14 ಸಾವಿರ ಅರ್ಜಿ ಸಲ್ಲಿಸಿದ್ದರು. ಒಂದೇ ಕಚೇರಿಗೆ 300–400 ಅರ್ಜಿ ಸಲ್ಲಿಸಿದರೆ  ಅಧಿಕಾರಿಗಳು ಉತ್ತರ ನೀಡುವುದು ಹೇಗೆ’ ಎಂದು ವೀರೇಶ್‌ ಪ್ರಶ್ನಿಸಿದರು.

‘ಕೆಲವು ಕಾರ್ಯಕರ್ತರಿಂದ ಕಾಯ್ದೆಯ ದುರ್ಬಳಕೆ ಆಗುತ್ತಿದೆ. ಕಾರ್ಯಕರ್ತರು ಸಂಯಮ ಹಾಗೂ ವಿವೇಚನೆಯಿಂದ ವರ್ತಿಸಬೇಕು’ ಎಂದು   ಕಿವಿಮಾತು ಹೇಳಿದರು.

‘ದೇಶದಲ್ಲಿ ಕಳೆದೊಂದು ದಶಕದಲ್ಲಿ 70 ಆರ್‌ಟಿಐ ಕಾರ್ಯಕರ್ತರ ಕೊಲೆಯಾಗಿದೆ. ರಾಜ್ಯದಲ್ಲಿ ಲಿಂಗರಾಜು, ಕೆಂಗೇರಿಯ ವೆಂಕಟೇಶ್‌, ವಿದ್ಯಾರ್ಥಿ ಯಲ್ಲಾಲಿಂಗ ಎಂಬುವರ ಕೊಲೆ ಮಾಡಲಾಗಿದೆ. ಕಾರ್ಯಕರ್ತರಿಗೆ ರಕ್ಷಣೆ ಒದಗಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT