ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರಿನ ತಳಮಳ

Last Updated 27 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಈ ವರ್ಷ ಮುಂಗಾರು ಮಳೆಯ ಪ್ರಮಾಣ ವಾಡಿಕೆಗಿಂತಲೂ ಕಡಿಮೆ­ಯಾ­ಗ­ಲಿದೆ. ಹವಾಮಾನ ಇಲಾಖೆ ನೀಡಿದ ಈ ಮುನ್ನೆ­ಚ್ಚ­ರಿ­ಕೆ­ಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿಯೇ ಪರಿ­ಗಣಿ­ಸ­ಬೇಕು. ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಎಂದಿನ ಜಡ ಧೋರಣೆ ಬಿಟ್ಟು ಪರ್ಯಾಯ ವ್ಯವಸ್ಥೆಗಳ ಬಗ್ಗೆ ಈಗಿನಿಂದಲೆ ಸೂಕ್ತ ತಯಾರಿ ಮಾಡಿ­ಕೊಳ್ಳಬೇಕು.

ಸಮರ್ಪಕವಾಗಿ ಮಳೆಯಾಗದೇ ಹೋದರೆ ಅದು ಅನಾಹುತ­ಗಳ ಸರಣಿಗೆ ಎಡೆ ಮಾಡುತ್ತದೆ. ಏಕೆಂದರೆ ಹಳ್ಳಿಗಾಡಿನ ಬಹುಪಾಲು ಕುಟುಂಬ­ಗಳು ಈಗಲೂ ಕೃಷಿಯನ್ನೇ ಅವಲಂಬಿಸಿವೆ. ನಮ್ಮ ದೇಶದ ಅರ್ಧ­ದಷ್ಟು ಕೃಷಿ ಭೂಮಿಗೆ ಈಗಲೂ ನೀರಾವರಿ ಸೌಲಭ್ಯ ಇಲ್ಲ. ಅವಕ್ಕೆಲ್ಲ ಮುಂಗಾರು ಮಳೆಯೇ ಏಕಮಾತ್ರ ಆಧಾರ. ಮಳೆಯ ಏರುಪೇರು ಕೃಷಿ ಉತ್ಪಾ­ದ­ನೆಯನ್ನು ಕುಂಠಿತಗೊಳಿಸಿ ಬೆಲೆ ಏರಿಕೆಗೆ ಕಾರಣವಾಗಬಹುದು. ಹಣ­ದುಬ್ಬರ ಹೆಚ್ಚಬಹುದು, ಬರ ಪರಿಸ್ಥಿತಿ ಎದುರಾಗಬಹುದು.

ಅದರಿಂದ ಗ್ರಾಹಕ ವಸ್ತುಗಳ ಬೇಡಿಕೆ ಕುಗ್ಗಿ ಇಡೀ ಅರ್ಥವ್ಯವಸ್ಥೆ ಮೇಲೆ ಒತ್ತಡ ಹೆಚ್ಚು­ತ್ತದೆ, ಸರ್ಕಾರದ ಆದಾಯವೂ ಕುಸಿಯುತ್ತದೆ, ಬರ ನಿಭಾಯಿಸಲು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಅರ್ಥವ್ಯವಸ್ಥೆಯ ಮಂದಗತಿ ಬೆಳವಣಿಗೆ ಮತ್ತು ಹಣದುಬ್ಬರ ಈಗಲೇ ಇಡೀ ದೇಶವನ್ನು ಬಾಧಿಸುತ್ತಿದೆ. ಇದರ ಸರಣಿ ದುಷ್ಪ­ರಿ­ಣಾಮಗಳನ್ನು ನಿಯಂತ್ರಿಸಲು ರಿಸರ್ವ್ ಬ್ಯಾಂಕ್ ಹೆಣಗುತ್ತಲೇ ಇದೆ. ನಮ್ಮ ದೇಶಿಯ ಆದಾಯದಲ್ಲಿ ಕೃಷಿಯ ಪಾಲು ಶೇ 14ರಷ್ಟು ಮಾತ್ರ ಎನ್ನು­ವು­ದೇನೋ ನಿಜ. ಆದರೆ ಒಟ್ಟಾರೆ ಉದ್ಯೋಗದ ಅರ್ಧದಷ್ಟು ಭಾಗ ಕೃಷಿ ಕ್ಷೇತ್ರದ ಕೊಡುಗೆ ಎಂಬ ವಾಸ್ತವವನ್ನು ಮರೆಯುವಂತಿಲ್ಲ.

ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಗೋದಾಮುಗಳೆಲ್ಲ ತುಂಬಿ ತುಳುಕು­ತ್ತಿವೆ, ಹಾಗಾಗಿ ಏನೂ ತೊಂದರೆಯಾಗದು ಎಂದು ಹುಸಿ ಸಮಾಧಾನ­ಪಟ್ಟು ಮೈಮರೆತರೆ ಅಪಾಯ ಜಾಸ್ತಿ. ಏಕೆಂದರೆ ಉತ್ತಮ ಮಳೆಯ ವರ್ಷ­ದಲ್ಲಿ ನಮ್ಮ ರಾಜ್ಯದಲ್ಲೇ 125ಕ್ಕೂ ಹೆಚ್ಚು ತಾಲ್ಲೂಕುಗಳು ಬರದಿಂದ ತತ್ತ­ರಿ­ಸಿ­ವೆ. ಅದರಿಂದಾಗಿ ಈ ಬೇಸಿಗೆಯಲ್ಲಿ ಕುಡಿಯುವ ನೀರು, ಮೇವು ಮತ್ತು ಗ್ರಾಮೀಣ ಭಾಗದಲ್ಲಿ ದುಡಿವ ಕೈಗಳಿಗೆ ಕೆಲಸದ ಕೊರತೆ ಎದುರಾಗಿದೆ.

ಹವಾಮಾನಕ್ಕೆ ಸಂಬಂಧಪಟ್ಟ ಅಂತರರಾಷ್ಟ್ರೀಯ ಮಟ್ಟದ ಅನೇಕ ಸಂಘಟ­ನೆ­ಗಳು ಕೂಡ ಈ ವರ್ಷ ಮುಂಗಾರು ಮಳೆ ಪ್ರಮಾಣದಲ್ಲಿ ಕುಸಿತದ ಅಂದಾಜು ಮಾಡಿವೆ. ಶಾಂತಸಾಗರದ ನೀರು ಬಿಸಿಯಾಗುವುದರಿಂದ ‘ಎಲ್ ನಿನೊ’ ಪರಿಣಾಮ ಉಂಟಾಗಲಿದೆ. ಅದು ಭಾರತ ಸೇರಿದಂತೆ ಆಗ್ನೇಯ ಏಷ್ಯದ ದೇಶಗಳ ಮಳೆ- ಬೆಳೆ ಮೇಲೆ ಅನಾಹುತಕಾರಿ ಪ್ರಭಾವ ಬೀರು­ತ್ತದೆ. ನಮ್ಮಲ್ಲಿ 2002, 2004 ಮತ್ತು 2009ರಲ್ಲಿ ಎಲ್ ನಿನೊ ಅಂಶ­ದಿಂದಾಗಿಯೇ ಮಳೆ ಕಡಿಮೆಯಾಗಿ ವ್ಯಾಪಕ ಬರದ ಬಿಸಿ ತಟ್ಟಿತ್ತು.

ಪ್ರಕೃತಿ­ಯಲ್ಲಿ ಮುಂಗಾರಿನಷ್ಟು ಚಂಚಲ ಬೇರೊಂದಿಲ್ಲ. ಹಾಗಾಗಿ ಹವಾ­ಮಾನ ತಜ್ಞರು ಮಾಡಿರುವ ಅಂದಾಜು ಲೆಕ್ಕಾಚಾರ ಹೆಚ್ಚೂಕಡಿಮೆ ಆಗಲೂ ಬಹುದು. ಆದರೆ ಎಂಥ ಪರಿಸ್ಥಿತಿಯನ್ನಾದರೂ ಎದುರಿಸಲು ಕಾರ್ಯ­ಪ್ರವೃತ್ತರಾಗಬೇಕು. ಲೋಕಸಭೆ ಚುನಾವಣೆ ನಂತರ ಅಧಿಕಾರಕ್ಕೆ ಬರ­ಲಿ­ರುವ ಸರ್ಕಾರ ಇದಕ್ಕೆಲ್ಲ ಸಜ್ಜಾಗಬೇಕಾಗುತ್ತದೆ. ಕೃಷಿಗೆ ಆಗಬಹು­ದಾದ ತೊಂದರೆಯನ್ನು ಮಿತಿಗೊಳಿಸಲು ಏನು ಮಾಡುತ್ತೇವೆ ಎಂಬುದರ ಮೇಲೆ ಇಡೀ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಜಾಣ್ಮೆ ಅಡ­ಗಿದೆ. ಅದಕ್ಕಾಗಿ ಲಭ್ಯವಿರುವ ತಂತ್ರಜ್ಞಾನ, ಅನುಭವಗಳನ್ನೆಲ್ಲ ಬಳಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT