ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಮೇಯರ್‌ ಹುದ್ದೆಗೆ ಪೈಪೋಟಿ

ಆಡಳಿ­ತಾ­ವಧಿ ಇನ್ನು 15 ದಿನಗಳಲ್ಲಿ ಕೊನೆ
Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೇಯರ್‌ ಬಿ.ಎಸ್‌. ಸತ್ಯ­ನಾರಾ­ಯಣ ಹಾಗೂ ಉಪ ಮೇಯರ್‌ ಇಂದಿರಾ ಅವರ ಆಡಳಿ­ತಾ­ವಧಿ ಇನ್ನು 15 ದಿನಗಳಲ್ಲಿ (ಸೆ. 4ರಂದು) ಕೊನೆ­ಗೊಳ್ಳ­­ಲಿದ್ದು, ಆ ಹುದ್ದೆಗಳಿಗೆ ಏರಲು ಬೃಹತ್‌ ಬೆಂಗ­ಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಬಿಜೆಪಿ ಸದಸ್ಯರ ಮಧ್ಯೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.

ಪ್ರಸಕ್ತ ಕೌನ್ಸಿಲ್‌ನ ಕೊನೆಯ ಅವಧಿ ಇದಾಗಿದ್ದು, 2015ರ ಏಪ್ರಿಲ್‌ನಲ್ಲಿ ಮತ್ತೆ ಚುನಾವಣೆ ನಡೆಯ­ಲಿದೆ. ಹೀಗಾಗಿ ಸೆಪ್ಟೆಂಬರ್‌ನಲ್ಲಿ ಆಯ್ಕೆಯಾಗ­ಲಿ­ರುವ ನೂತನ ಮೇಯರ್‌–ಉಪ­ಮೇಯರ್‌ ಅವರಿಗೆ ಕೇವಲ ಆರು ತಿಂಗಳ ಆಡಳಿತಾವಧಿ ಸಿಗಲಿದೆ. ಎರಡೂ ಹುದ್ದೆ­ಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲು ಇಟ್ಟಿರು­ವು­ದ­ರಿಂದ ಎಲ್ಲ ಬಿಜೆಪಿ ಸದಸ್ಯರೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಯತ್ನ ನಡೆಸಿದ್ದಾರೆ.

ತಮಗೊಂದು ಅವಕಾಶ ನೀಡುವಂತೆ ಹಿರಿಯ ಸದಸ್ಯರು ನಾಯಕರ ಮನೆಗೆ ಎಡತಾಕುತ್ತಿದ್ದಾರೆ. ತಮ್ಮ ಪರ ಲಾಬಿಗೆ ಎಲ್ಲ ಪ್ರಭಾವವನ್ನೂ ಬಳಸುತ್ತಿ­ದ್ದಾರೆ. ಪಕ್ಷದಲ್ಲಿ ಪ್ರಭಾವಿ ನಾಯಕ ಎನಿಸಿರುವ ಆರ್‌. ಅಶೋಕ ಅವರ ಸಮ್ಮತಿ ಪಡೆ­ಯಲು ಆಕಾಂಕ್ಷಿಗಳೆಲ್ಲ ಪ್ರಯತ್ನ­ದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ಮೂಲ­ಗಳು ಹೇಳುತ್ತವೆ.

ಕಳೆದ ಅವಧಿಯಲ್ಲೇ ತಮಗೆ ಅವ­ಕಾಶ ನೀಡ­ಬೇ­ಕೆಂದು ಪಟ್ಟು ಹಿಡಿದಿದ್ದ ಮೂಡಲ­ಪಾಳ್ಯ ವಾರ್ಡ್‌ನ ­ಸದಸ್ಯೆ ಶಾಂತ­ಕುಮಾರಿ ಅವರ ಹೆಸರು, ಈ ಸಲ ಮೇಯರ್‌ ಹುದ್ದೆಗೆ ಪ್ರಬಲವಾಗಿ ಕೇಳಿ ಬರುತ್ತಿದೆ. ವಿಧಾನ ಪರಿಷತ್‌ ಸದಸ್ಯ ವಿ.ಸೋಮಣ್ಣ ಅವರ ಬೆಂಬ­ಲವೂ ಅವರಿ­ಗಿದೆ. ವಿಜ್ಞಾನನಗರ ವಾರ್ಡ್‌ನ ಗೀತಾ ವಿವೇಕಾನಂದ ಸಹ ಅವಕಾಶಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

ಗಂಗಬೈರಯ್ಯ (ಡಾ.ರಾಜ­ಕುಮಾರ್‌ ವಾರ್ಡ್‌), ಬಿ.ಆರ್‌. ನಂಜುಂಡಪ್ಪ (ಜೆ.ಪಿ. ಪಾರ್ಕ್‌), ಎ.ಎಚ್‌. ಬಸವ­ರಾಜು (ಬನಶಂಕರಿ ದೇವಸ್ಥಾನ) ಹಾಗೂ ಪಿ.ಎನ್‌. ಸದಾಶಿವ (ಸುಂಕೇನ­ಹಳ್ಳಿ) ಸಹ ಮೇಯರ್‌ ಗೌನು ತೊಡಲು ಪ್ರಯತ್ನ ನಡೆಸಿದ್ದಾರೆ. ಎಚ್.­ರವೀಂದ್ರ (ವಿಜಯನಗರ), ಸಿ.ಕೆ. ರಾಮಮೂರ್ತಿ (ಪಟ್ಟಾಭಿರಾಮನಗರ) ಅವರ ಹೆಸರು­ಗಳು ಸಹ ಕೇಳಿಬರುತ್ತಿವೆ.

‘ಪ್ರತಿ ಸಲವೂ ದಕ್ಷಿಣ ವಲಯದ ಸದಸ್ಯರಿಗೆ ಆದ್ಯತೆ ನೀಡಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸುವ ಬಿಬಿ­ಎಂಪಿ ಹಿರಿಯ ಸದಸ್ಯರೊಬ್ಬರು, ‘ಬೇರೆ ವಲಯ­ಗಳ ಕಡೆಗೂ ಗಮನ ಹರಿಸು­ವಂತೆ ಪಕ್ಷದ ನಾಯಕ­ರನ್ನು ಒತ್ತಾಯಿಸು­ತ್ತೇವೆ’ ಎಂದು ಹೇಳುತ್ತಾರೆ. ‘ಒಕ್ಕ­ಲಿಗ ಮತ್ತು ಕುರುಬ ಸದಸ್ಯರ ಮಧ್ಯೆ ತೀವ್ರ ಪೈಪೋಟಿ ಇದೆ. ಅಂತಿಮವಾಗಿ ಪಕ್ಷದ ನಾಯಕತ್ವ ಯಾರ ಪರ ನಿಲ್ಲುವುದೋ ಕಾಯ್ದು ನೋಡಬೇಕು’ ಎಂದು ವಿವರಿಸುತ್ತಾರೆ.

ಕಳೆದ ಸಲ ಉಪ ಮೇಯರ್‌ ಹುದ್ದೆ­ಯನ್ನು ಪರಿಶಿಷ್ಟ ಪಂಗಡ (ಮಹಿಳೆ) ಸಮು­ದಾಯಕ್ಕೆ ಮೀಸಲು ಇಡಲಾ­ಗಿತ್ತು. ಬಿಜೆಪಿಯಲ್ಲಿ ಈ ಸಮುದಾಯಕ್ಕೆ ಸೇರಿದ ಒಬ್ಬ ಸದಸ್ಯರೂ ಇರದ ಕಾರಣ, ಆ ಹುದ್ದೆ ಕಾಂಗ್ರೆಸ್‌ ಪಾಲಾಗಿತ್ತು. ಈ ಬಾರಿ ಆ ಹುದ್ದೆಯೂ ಸಾಮಾನ್ಯ ವರ್ಗಕ್ಕೆ ಮೀಸಲು ಇಟ್ಟಿರುವುದರಿಂದ ಮೇಯರ್‌ ಗೌನು ಕೈತಪ್ಪಿದರೆ, ಉಪ ಮೇಯರ್‌ ಹುದ್ದೆಯಾದರೂ ದಕ್ಕೀತು ಎಂಬ ದೂರದ ಆಲೋಚನೆ ಸ್ಪರ್ಧಿಗಳಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT