ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ಅಂತರ್ಜಾಲ ಪರ ಆಂದೋಲನ

ಮೇ ಮಧ್ಯಭಾಗದಲ್ಲಿ ತಜ್ಞರ ವರದಿ: ‘ಟ್ರಾಯ್‌’ಗೆ ಲಕ್ಷಕ್ಕೂ ಹೆಚ್ಚು ಇ–ಮೇಲ್‌
Last Updated 13 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಂತರ್ಜಾಲ ಸ್ವಾತಂತ್ರ್ಯಕ್ಕೆ ಸಂಬಂಧಿಸಿ ಬಿರುಸಿನ ಚರ್ಚೆಯ ನಡುವೆಯೇ ಈ ವಿಷಯವನ್ನು ತಜ್ಞರ ಸಮಿತಿ ಪರಿಶೀಲಿಸುತ್ತಿದ್ದು ಮೇ ಮಧ್ಯ ಭಾಗದಲ್ಲಿ ವರದಿ ಲಭ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಮುಕ್ತ ಅಂತರ್ಜಾಲದ ಬಗ್ಗೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ತನಿಖೆ ನಡೆಸುವ ಸಾಧ್ಯತೆಯೂ ಇದೆ.

ದೂರ ಸಂಪರ್ಕ ನಿರ್ವಾಹಕರು, ಆರಂಭಿಕ ಹಂತದಲ್ಲಿರುವ ಸಣ್ಣ ಉದ್ಯಮ ಸಂಸ್ಥೆಗಳು, ರಾಜಕಾರಣಿಗಳು, ಸಿನಿಮಾ ತಾರೆಯರು  ಅಂತರ್ಜಾಲ ಸ್ವಾತಂತ್ರ್ಯ ವಾಗ್ವಾದದಲ್ಲಿ ಭಾಗಿಯಾಗಿದ್ದು, ಸಾಮಾ ಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

ಜನವರಿಯಲ್ಲಿಯೇ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು ಈ ಸಮಿತಿ ಮೇ ಮಧ್ಯ ಭಾಗದಲ್ಲಿ ವರದಿ ಸಲ್ಲಿಸಲಿದೆ. ವಿಷಯದ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ದೂರ ಸಂಪರ್ಕ ಸಚಿವ ರವಿಶಂಕರ ಪ್ರಸಾದ್‌ ಹೇಳಿದ್ದಾರೆ.    

‘ಅಂತರ್ಜಾಲ ಸ್ವಾತಂತ್ರ್ಯದ ಉದ್ದೇಶ, ಅದರ ಪ್ರಯೋಜನಗಳು, ಮಿತಿಗಳು ಸೇರಿದಂತೆ ಎಲ್ಲ ಆಯಾಮಗಳ ಬಗ್ಗೆ ನನಗೆ ವರದಿ ನೀಡುವುದಕ್ಕಾಗಿ  ದೂರ ಸಂಪರ್ಕ ಇಲಾಖೆಯ ಹಿರಿಯ ಅಧಿ ಕಾರಿಯ ನೇತೃತ್ವದಲ್ಲಿ ಸಮಿತಿ ರಚಿಸ ಲಾಗಿದೆ’ ಎಂದು ಸಚಿವರು ತಿಳಿಸಿದ್ದಾರೆ.

ದೂರ ಸಂಪರ್ಕ ನಿಯಂತ್ರಣ ಸಂಸ್ಥೆ ‘ಟ್ರಾಯ್‌’ ಕೂಡ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಅಂತರ್ಜಾಲದ ಎಲ್ಲ ಮಾಹಿತಿ ಮತ್ತು ಇತರ ಸೇವೆಗಳಿಗೆ ಸಮಾನಾವಕಾಶ ಇರಬೇಕು. ಯಾವುದೇ ಮಾಹಿತಿ ಅಥವಾ ಸೇವೆಗೆ ಹೆಚ್ಚಿನ ಹಣ ಪಾವತಿಯ ಆಧಾರದಲ್ಲಿ ನೀಡುವ ಆದ್ಯತೆ ಅಂತರ್ಜಾಲ ಸ್ವಾತಂತ್ರ್ಯದ ಪರಿಕಲ್ಪನೆಯ ಉಲ್ಲಂಘನೆಯಾಗಿದೆ.

ದೂರಸಂಪರ್ಕ ಸಂಸ್ಥೆ ಭಾರ್ತಿ ಏರ್‌ಟೆಲ್‌ ಈಚೆಗೆ ‘ಏರ್‌ಟೆಲ್‌ ಝೀರೊ’ ಎಂಬ ವ್ಯವಸ್ಥೆಗೆ ಚಾಲನೆ ನೀಡಿದ ನಂತರ ಅಂತರ್ಜಾಲ ಸ್ವಾತಂತ್ರ್ಯದ ಚರ್ಚೆ ಆರಂಭ ಗೊಂಡಿತು. ಈ ವ್ಯವಸ್ಥೆಯ ಪ್ರಕಾರ ಕೆಲವು ನಿರ್ದಿಷ್ಟ ಆ್ಯಪ್‌ಗಳು ಉಚಿತವಾಗಿ ಲಭ್ಯವಾಗಲಿವೆ. ಅದರ ಶುಲ್ಕವನ್ನು ಆ್ಯಪ್‌ ತಯಾರಿಸಿದ ಸಂಸ್ಥೆಗಳೇ ಭರಿಸುತ್ತವೆ.

ಆದರೆ ಈ ಕ್ರಮ ಕೆಲವೇ ಕೆಲವರ ಏಕಸ್ವಾಮ್ಯಕ್ಕೆ ಕಾರಣವಾಗುತ್ತದೆ. ಸಣ್ಣ ಸಂಸ್ಥೆಗಳು ಮುಚ್ಚಿ ಹೋಗುತ್ತವೆ ಎಂದು ಅಂತರ್ಜಾಲ ಸ್ವಾತಂತ್ರ್ಯದ ಪ್ರತಿಪಾದಕರು ಮತ್ತು ಉದ್ಯಮ ಸಂಸ್ಥೆಗಳು ಹೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT