ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ಅಭಿವ್ಯಕ್ತಿಗೆ ಎಂಟು ಕಂಟಕ

ಚಿಂತನೆಗೆ ಲಗಾಮು
Last Updated 14 ಆಗಸ್ಟ್ 2016, 20:44 IST
ಅಕ್ಷರ ಗಾತ್ರ

ಸ್ವಾತಂತ್ರ್ಯಕ್ಕೆ ಏನಾದರೂ ಅರ್ಥ ಇದೆ ಎಂದಾದರೆ ಅದು ಜನರು ಏನನ್ನು ಕೇಳಲು ಬಯಸುವುದಿಲ್ಲವೋ ಅದನ್ನು ಹೇಳುವ ಹಕ್ಕು.
-ಜಾರ್ಜ್ ಆರ್ವೆಲ್

ಭಾರತ 50-50 ಪ್ರಜಾತಂತ್ರ ಎಂದು ಕೆಲವು ವರ್ಷಗಳ ಹಿಂದೆ ನಾನು ಬಣ್ಣಿಸಿದ್ದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಹಾಗೂ ಜನರ ಮುಕ್ತ ಚಲನೆಯ ಅವಕಾಶಗಳಂತಹ ವಿಚಾರಗಳಲ್ಲಿ ಭಾರತ ಪ್ರಜಾತಾಂತ್ರಿಕವಾಗಿದೆ. ಆದರೆ ಅಪರಾಧ ನ್ಯಾಯ ವ್ಯವಸ್ಥೆ ಬಹುತೇಕ ಕುಸಿದು ಬಿದ್ದಿದೆ ಮತ್ತು ಭಾರಿ ಪ್ರಮಾಣದ ರಾಜಕೀಯ ಭ್ರಷ್ಟಾಚಾರವನ್ನು ತೊಡೆದು ಹಾಕುವ ಸಾಮರ್ಥ್ಯವೇ ಇಲ್ಲ- ಇಂತಹ ವಿಚಾರಗಳಲ್ಲಿ ಭಾರತ ಆಂಶಿಕವಾಗಿ ಮಾತ್ರ ಪ್ರಜಾತಾಂತ್ರಿಕ.

ಪ್ರಜಾತಂತ್ರದ ಕೊರತೆ ಗಣನೀಯವಾಗಿರುವ ಒಂದು ಕ್ಷೇತ್ರ ಅಭಿವ್ಯಕ್ತಿ ಸ್ವಾತಂತ್ರ್ಯ. ಈ ದೇಶದಲ್ಲಿ ಬರಹಗಾರರು, ಕಲಾವಿದರು ಮತ್ತು ಸಿನಿಮಾ ನಿರ್ದೇಶಕರು ಏನು ಮಾಡಬಹುದು ಮತ್ತು ಏನು ಮಾಡಬಾರದು ಎಂಬುದಕ್ಕೆ ಮಿತಿಗಳಿವೆ. ವಾಕ್ ಸ್ವಾತಂತ್ರ್ಯದ ಈ ಮಿತಿಗಳನ್ನು ವಿದ್ವಾಂಸರು ಮತ್ತು ಹೋರಾಟಗಾರರು ವಿಶ್ಲೇಷಿಸಿದ್ದಾರೆ ಮತ್ತು ಆ ಬಗ್ಗೆ ಮರುಗಿದ್ದಾರೆ. ಕಾನೂನಿನ ಕಣ್ಣಿನಿಂದಲೂ ಇಂತಹ ವಿಶ್ಲೇಷಣೆಗಳು ನಡೆದಿವೆ (ಗೌತಮ್ ಭಾಟಿಯಾ ಅವರ ‘ಅಫೆಂಡ್, ಶಾಕ್ ಆರ್ ಡಿಸ್ಟರ್ಬ್’ ಎಂಬ ಇತ್ತೀಚಿನ ಅಧ್ಯಯನವೂ ಇದರಲ್ಲಿ ಸೇರಿದೆ). ಈ ಪ್ರಬಂಧವು ಕಾನೂನಿನಿಂದ ಆರಂಭಗೊಂಡು, ಸಮಸ್ಯೆಯ ವಿಸ್ತೃತ ಸಾಮಾಜಿಕ ಆಯಾಮಗಳನ್ನು ಶೋಧಿಸುತ್ತದೆ. ಅಸಮರ್ಪಕ ಕಾನೂನುಗಳು ಮಾತ್ರವಲ್ಲ, ಸಾಮಾಜಿಕ ಶಕ್ತಿಗಳು, ಸೈದ್ಧಾಂತಿಕ ಪೂರ್ವಗ್ರಹಗಳು ಮತ್ತು ರಾಜಕೀಯ ಆಯ್ಕೆಗಳ ನಡುವಣ ಪರಸ್ಪರ ಹೆಣೆದುಕೊಳ್ಳುವಿಕೆ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತಡೆ ಒಡ್ಡಿವೆ.

ನನಗೆ ಗೊತ್ತಿರುವ ಪ್ರಕಾರ, ವಾಕ್ ಸ್ವಾತಂತ್ರ್ಯದ ನೈತಿಕ ಮತ್ತು ರಾಜಕೀಯ ಮಹತ್ವದ ಬಗ್ಗೆ ಮೊದಲ ಬಾರಿ ಪರಿಣಾಮಕಾರಿಯಾಗಿ ಬರೆದಾತ ಬರೂಚ್ ಸ್ಪಿನೋಜ. 1670ರಲ್ಲಿ ಅವರು ತಮ್ಮ ‘ಥಿಯೊಲಾಜಿಕಲ್-ಪೊಲಿಟಿಕಲ್ ಟ್ರೀಟೈಸ್‌’ನಲ್ಲಿ ಇದನ್ನು ವಿವರಿಸುತ್ತಾರೆ. ಸ್ಪಿನೋಜ ಹೀಗೆ ಹೇಳುತ್ತಾರೆ: ‘ಯಾವುದೇ ಒಬ್ಬ ವ್ಯಕ್ತಿ ಯಾವುದೇ ವಿಷಯದ ಬಗ್ಗೆ ಮುಕ್ತವಾಗಿ ಚಿಂತಿಸುವ ಮತ್ತು ತನ್ನದೇ ಆದ ನಿರ್ಧಾರಗಳನ್ನು ಕೈಗೊಳ್ಳುವ ಸಹಜ ಹಕ್ಕು ಅಥವಾ ಸಾಮರ್ಥ್ಯವನ್ನು ಮತ್ತೊಬ್ಬ ವ್ಯಕ್ತಿಗೆ ವರ್ಗಾಯಿಸುವುದಕ್ಕೆ ಸಾಧ್ಯವಿಲ್ಲ ಮತ್ತು ಹಾಗೆ ಮಾಡುವಂತೆ ಆ ವ್ಯಕ್ತಿಯ ಒತ್ತಡಕ್ಕೆ ಒಳಗಾಗುವುದಕ್ಕೂ ಸಾಧ್ಯವಿಲ್ಲ. ಹಾಗಾಗಿಯೇ, ಮನಸನ್ನು ನಿಯಂತ್ರಿಸಲು ಬಯಸುವ ಸರ್ಕಾರವನ್ನು ದಮನಕಾರಿ ಎಂದು ಪರಿಗಣಿಸಲಾಗುತ್ತದೆ...’ ಅವರು ಹೀಗೆ ಮುಂದುವರಿಸುತ್ತಾರೆ: ‘ತಾವು ಚಿಂತಿಸುವುದನ್ನು ಮಾತನಾಡಲು ಮತ್ತು ಸಂವಹನ ನಡೆಸಲು ಜನರಿಗೆ ಅವಕಾಶ ನಿರಾಕರಿಸುವ ಸರ್ಕಾರ ಅತ್ಯಂತ ಹಿಂಸಾತ್ಮಕ ಸರ್ಕಾರವಾದರೆ, ಪ್ರತಿಯೊಬ್ಬರಿಗೂ ಈ ಸ್ವಾತಂತ್ರ್ಯವನ್ನು ನೀಡುವ ಸರ್ಕಾರ ಸೌಮ್ಯವಾದಿ ಸರ್ಕಾರವಾಗುತ್ತದೆ’.

ಇದು ಮನಮುಟ್ಟುವಂತಹ ಮತ್ತು ಅತ್ಯಂತ ಪ್ರಸ್ತುತವಾದ ವಾದ. ಆದರೆ ನಾವೊಂದು ಪ್ರಶ್ನೆಯನ್ನು ಕೇಳಿಕೊಳ್ಳಲೇಬೇಕು: ವಾಕ್ ಸ್ವಾತಂತ್ರ್ಯಕ್ಕೆ ಸಮರ್ಥನೀಯವಾದ ಅಥವಾ ನ್ಯಾಯಯುತವಾದ ಮಿತಿಗಳಿವೆಯೇ? ಅಥವಾ, ಜನರು ತಮಗೆ ಬೇಕಾದ್ದನ್ನು ಹೇಳುವುದಕ್ಕೆ ಅವಕಾಶ ನೀಡಬೇಕೇ? ಹಾಗಾದರೆ, ದ್ವೇಷ ಭಾಷಣವನ್ನು ಏನು ಮಾಡಬೇಕು? ಜರ್ಮನಿಯ ಹಿಟ್ಲರ್‌ನ ಆರಾಧಕರ ಬಗ್ಗೆ ಏನು ಹೇಳಬೇಕು? ಭಾರತದಲ್ಲಿ ನಾಥೂರಾಮ್ ಗೋಡ್ಸೆಯ ಆರಾಧಕರ ಬಗ್ಗೆ ಏನು ಹೇಳುವುದು?

ಸ್ಪಿನೋಜ ಕೂಡ ಈ ಎಲ್ಲ ವಿಚಾರಗಳ ಬಗ್ಗೆ ಚಿಂತಿಸಿದ್ದರು. ನಾನು ಈಗಾಗಲೇ ಉಲ್ಲೇಖಿಸಿರುವ ಅವರ 1670ರ ಪುಸ್ತಕದಲ್ಲಿ, ಸರ್ಕಾರವು ಜನರಿಗೆ ಮುಕ್ತ ಅಭಿವ್ಯಕ್ತಿಯ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಆದರೆ, ‘ಯಾವುದೇ ನಿರ್ಬಂಧ ಇಲ್ಲದ ವಾಕ್ ಸ್ವಾತಂತ್ರ್ಯವನ್ನು ಜನರಿಗೆ ನೀಡುವುದು ಅತ್ಯಂತ ಅಪಾಯಕಾರಿ. ಈ ಕಾರಣದಿಂದಲೇ ಸರ್ಕಾರದ ಸ್ಥಿರತೆಗೆ ಪೂರಕವಾದ ರೀತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಯಾವ ಪ್ರಮಾಣದಲ್ಲಿ ಈ ಸ್ವಾತಂತ್ರ್ಯವನ್ನು ನೀಡಬಹುದು ಮತ್ತು ನೀಡಬೇಕು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು’. ಹೀಗೆ ಸ್ಪಿನೋಜ ಒಬ್ಬ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಗಳನ್ನು ಗುರುತಿಸುತ್ತಾರೆ. ಉದಾಹರಣೆಗೆ, ಒಂದು ಭಾಷಣ, ಪುಸ್ತಕ, ಕಲಾಕೃತಿ ಅಥವಾ ಸಿನಿಮಾ ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ, ರಕ್ತಪಾತಕ್ಕೆ ಮತ್ತು ಅರಾಜಕತೆಗೆ ಕಾರಣವಾಗಬಹುದು ಅಥವಾ ಪ್ರಚೋದನೆ ನೀಡಬಹುದು ಎಂದಾದರೆ, ಆ ಮೂಲಕ ಅದು ದೇಶದ ಉಳಿವು ಅಥವಾ ಏಕತೆಗೆ ಬೆದರಿಕೆ ಒಡ್ಡಬಹುದು ಎಂದಾದರೆ ಬಹುಶಃ ಅದನ್ನು ಮುಕ್ತವಾಗಿ ಪ್ರಸಾರ ಮಾಡಲು ಅವಕಾಶ ನೀಡಬಾರದು.

ಅಭಿವ್ಯಕ್ತಿ ಸ್ವಾತಂತ್ರ್ಯದ  ಮಿತಿಯ ಬಗ್ಗೆ ಸ್ಪಿನೋಜ ಅವರ ನಿಲುವುಗಳನ್ನು ಈ ಬಗ್ಗೆ ಮಹಾತ್ಮ ಗಾಂಧಿ ಹೊಂದಿದ್ದ ನಿಲುವುಗಳ ಜತೆ ಹೋಲಿಸಿ ನೋಡೋಣ.  1910ರಲ್ಲಿ ಮಹಾತ್ಮ ಗಾಂಧಿ ಅವರು ದಕ್ಷಿಣ ಆಫ್ರಿಕಾದಲ್ಲಿದ್ದಾಗಲೇ ತಮ್ಮ ‘ಹಿಂದ್ ಸ್ವರಾಜ್’ ಪುಸ್ತಕ ಪ್ರಕಟಿಸಿದ್ದರು. ಮೂಲ ಗುಜರಾತಿ ಆವೃತ್ತಿಯನ್ನು ನತಾಲ್‌ನ ಫೀನಿಕ್ಸ್ ಸೆಟಲ್‌ಮೆಂಟ್ ಪ್ರಕಟಿಸಿತ್ತು. ಪುಸ್ತಕವನ್ನು ಕೆಲವರು ಭಾರತಕ್ಕೆ ಆಮದು ಮಾಡಿಕೊಳ್ಳಲು ಬಯಸಿದಾಗ ಬ್ರಿಟಿಷ್ ಇಂಡಿಯಾದ ಸರ್ಕಾರ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತು. ಅವರು ಓದಬಹುದಾದ ಭಾಷೆಗೆ (ಇಂಗ್ಲಿಷ್) ಪುಸ್ತಕವನ್ನು ಅನುವಾದ ಮಾಡಿದ ನಂತರ, ಪುಸ್ತಕವು ‘ಸ್ಪಷ್ಟವಾಗಿ ದೇಶದ್ರೋಹ’ ಎಂದು ಪರಿಗಣಿಸಿದ ಸರ್ಕಾರದ ಮುಖಂಡರು ಅದನ್ನು ನಿಷೇಧಿಸಿದರು.

ನಿಷೇಧದ ಬಗ್ಗೆ ತಿಳಿದಾಗ ಗಾಂಧಿ ಅವರು ಸರ್ಕಾರಕ್ಕೆ ಸುದೀರ್ಘವಾದ ಪತ್ರವೊಂದನ್ನು ಬರೆದು, ಇತರ ಎಲ್ಲ ಅಂಶಗಳ ಜತೆಗೆ ಇದು ಅಹಿಂಸೆಯ ಪ್ರತಿಪಾದನೆಯೂ ಹೌದು ಎಂದು ವಿವರಿಸಿದರು. (ಈ ಪತ್ರ ಗಾಂಧಿಯ ಕೃತಿ ಸಂಗ್ರಹದಲ್ಲಿ ಇಲ್ಲ. ಭಾರತದ ರಾಷ್ಟ್ರೀಯ ಪತ್ರಾಗಾರದಲ್ಲಿ ಇದೆ ಎಂಬ ಮಾಹಿತಿ ನೀಡಿದವರು ಇತಿಹಾಸಕಾರ ಎಸ್.ಆರ್. ಮೆಹ್ರೋತ್ರಾ). ‘ಪ್ರತಿ ವ್ಯಕ್ತಿಗೂ ಆತ ಆಯ್ಕೆ ಮಾಡಿಕೊಳ್ಳುವ ಅಭಿಪ್ರಾಯವನ್ನು ಹೊಂದುವ ಹಕ್ಕು ಇದೆ ಮತ್ತು ಅದರ ಅನುಷ್ಠಾನದಿಂದ ಎಲ್ಲಿವರೆಗೆ ಇತರರ ಮೇಲೆ ದೈಹಿಕ ಹಿಂಸೆ ಆಗುವುದಿಲ್ಲವೋ ಅಲ್ಲಿವರೆಗೆ ಅದನ್ನು ಅನುಷ್ಠಾನಗೊಳಿಸುವ ಹಕ್ಕು ಇದೆ ಎಂಬುದು ನನ್ನ ವಿನೀತವಾದ ಅಭಿಪ್ರಾಯ’ ಎಂದು ಗಾಂಧಿ ಪತ್ರದಲ್ಲಿ ಬರೆದಿದ್ದರು.

ಪ್ರಜಾಸತ್ತಾತ್ಮಕ ಸರ್ಕಾರವೊಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಯಾವ ಮಿತಿಗಳನ್ನು ಹೇರಬೇಕು ಎಂಬುದರ ವ್ಯಾಖ್ಯೆಯಾಗಿ ಈ ಹೇಳಿಕೆಯನ್ನು ಸ್ವಲ್ಪ ಬದಲಾವಣೆಯ ಜತೆಗೆ ಬಳಸಿಕೊಳ್ಳಬಹುದು ಎಂಬುದು ನನ್ನ ಅಭಿಪ್ರಾಯ. ನಾವು ಲಿಂಗತ್ವ ಪೂರ್ವಗ್ರಹದ ಗಾಂಧಿಯ ಭಾಷೆಯಿಂದ ಆಚೆಗೆ ಚಿಂತಿಸಬೇಕು; ‘ಹಿಂಸೆ ಆಗುವುದಿಲ್ಲವೋ’ ಎಂಬುದಕ್ಕೆ ‘ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ’ ಎಂಬ ಅರ್ಥವನ್ನೂ ಗಾಂಧಿ ಧ್ವನಿಸಿದ್ದರು ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಹಾಗಾಗಿ ನಾವು ಹೀಗೆ ಹೇಳಬಹುದು: ‘ಪ್ರತಿಯೊಬ್ಬ ಪುರುಷ ಮತ್ತು ಮಹಿಳೆ ಅವರು ಆಯ್ಕೆ ಮಾಡಿಕೊಳ್ಳುವ ಅಭಿಪ್ರಾಯವನ್ನು ಹೊಂದುವ ಹಕ್ಕು ಹೊಂದಿದ್ದು, ಅದು ಇತರರಿಗೆ ಎಲ್ಲಿವರೆಗೆ ದೈಹಿಕ ಹಿಂಸೆ ಉಂಟು ಮಾಡುವುದಿಲ್ಲ ಅಥವಾ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲವೋ ಅಲ್ಲಿವರೆಗೆ ಅದರ ಅನುಷ್ಠಾನದ ಹಕ್ಕನ್ನೂ ಹೊಂದಿರುತ್ತಾರೆ’.
ಈ ಅಂಶವನ್ನು ಗಮನದಲ್ಲಿ ಇರಿಸಿಕೊಂಡೇ ಸಮಕಾಲೀನ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಎಂಟು ಪ್ರಮುಖ ಬೆದರಿಕೆಗಳನ್ನು ವಿಶ್ಲೇಷಿಸೋಣ.

1.ಪುರಾತನ ವಸಾಹತು ಕಾನೂನು
ಪುರಾತನ ವಸಾಹತು ಕಾಲದ ಕಾನೂನನ್ನು ಉಳಿಸಿಕೊಂಡಿರುವುದು ಮೊದಲ ಬೆದರಿಕೆ. ಕಲಾಕೃತಿ, ಸಿನಿಮಾಗಳು

ಮತ್ತು ಪುಸ್ತಕಗಳನ್ನು ನಿಷೇಧಿಸಲು ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳನ್ನು ವ್ಯಾಪಕವಾಗಿ ಬಳಕೆ (ಮತ್ತು ದುರ್ಬಳಕೆ) ಮಾಡಿಕೊಳ್ಳಲಾಗುತ್ತಿದೆ. ಇವುಗಳಲ್ಲಿ ಸೆಕ್ಷನ್ 153 (‘ಗಲಭೆ ಸೃಷ್ಟಿಸುವ ಉದ್ದೇಶದಿಂದ ಪ್ರಚೋದನೆ ನೀಡುವುದು’); ಸೆಕ್ಷನ್ 153ಎ (‘ಧರ್ಮ, ಜನಾಂಗ, ಹುಟ್ಟಿದ ಪ್ರದೇಶ, ನಿವಾಸ, ಭಾಷೆ ಇತ್ಯಾದಿ ಆಧಾರದಲ್ಲಿ ವಿವಿಧ ಗುಂಪುಗಳ ನಡುವೆ ಶತ್ರುತ್ವಕ್ಕೆ ಪ್ರೋತ್ಸಾಹ ನೀಡುವುದು ಮತ್ತು ಸೌಹಾರ್ದದ ವಿರುದ್ಧ ಪೂರ್ವಗ್ರಹಪೀಡಿತ ಕೃತ್ಯಗಳು’); ಸೆಕ್ಷನ್ 295 (‘ಯಾವುದೇ ಧರ್ಮಕ್ಕೆ ಅವಮಾನ ಮಾಡುವ ಉದ್ದೇಶದಿಂದ ಧಾರ್ಮಿಕ ಸ್ಥಳವೊಂದನ್ನು ಹಾನಿಗೊಳಿಸುವುದು ಅಥವಾ ಅಪವಿತ್ರಗೊಳಿಸುವುದು’); ಸೆಕ್ಷನ್ 295ಎ (‘ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಲು ಉದ್ದೇಶಪೂರ್ವಕ ದುಷ್ಕೃತ್ಯ ಎಸಗುವುದು’); ಸೆಕ್ಷನ್ 298 (‘ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳಿಗೆ ಗಾಸಿಗೊಳಿಸಲು ಉದ್ದೇಶಪೂರ್ವಕವಾಗಿ ಏನನ್ನಾದರೂ ಹೇಳುವುದು’); ಸೆಕ್ಷನ್ 499 ಮತ್ತು 500- ವ್ಯಕ್ತಿಯೊಬ್ಬರ ‘ಹೆಸರು’ ಕೆಡಿಸುವುದಕ್ಕಾಗಿ ಮಾನನಷ್ಟ ಉಂಟು ಮಾಡುವುದು ಅಥವಾ ಹಾನಿ ಮಾಡುವುದು; ಸೆಕ್ಷನ್ 505 (‘ಸಾರ್ವಜನಿಕ ದುಷ್ಕೃತ್ಯಕ್ಕೆ ಕಾರಣವಾಗುವ ಹೇಳಿಕೆಗಳು’); ಮತ್ತು ಅತಿ ಹೆಚ್ಚು ಅಪಾಯಕಾರಿಯಾದ ಸೆಕ್ಷನ್ 124ಎ, ದೇಶದ್ರೋಹದ ಸೆಕ್ಷನ್ (‘ಲಿಖಿತ ಅಥವಾ ಮೌಖಿಕ ಪದಗಳು, ಅಥವಾ ಸಂಕೇತಗಳು, ಅಥವಾ ಯಾವುದೇ ದೃಶ್ಯ ಅಥವಾ ಇತರ ಕೃತ್ಯಗಳ ಮೂಲಕ ಭಾರತದ ಕಾನೂನು ಪ್ರಕಾರ ಸ್ಥಾಪಿತವಾದ ಸರ್ಕಾರದ ವಿರುದ್ಧ ದ್ವೇಷ ಅಥವಾ ಅವಹೇಳನ ಅಥವಾ ಅಸಮಾಧಾನ ಉಂಟು ಮಾಡಲು ಯತ್ನಿಸುವುದಕ್ಕೆ ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಬಹುದು’).

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಿತಿ ಹೇರಲು ಈ ಎಲ್ಲ ಸೆಕ್ಷನ್‌ಗಳು ನ್ಯಾಯಾಲಯಗಳಿಗೆ ಮತ್ತು ಸರ್ಕಾರಕ್ಕೆ ವ್ಯಾಪಕ ಅವಕಾಶಗಳನ್ನು ನೀಡುತ್ತವೆ. ವ್ಯಂಗ್ಯ ಏನೆಂದರೆ, ಈ ಎಲ್ಲ ಸೆಕ್ಷನ್‌ಗಳು ಇರುವ ಭಾರತೀಯ ದಂಡ ಸಂಹಿತೆಯನ್ನು ರಚಿಸಿದವನು ಥಾಮಸ್ ಬಾಬಿಂಗ್ಟನ್ ಮೆಕಾಲೆ. ಭಾರತದಲ್ಲಿ ಇಂಗ್ಲಿಷ್ ಭಾಷಾ ವಿದ್ಯಾಭ್ಯಾಸಕ್ಕೆ ಪ್ರೇರಣೆ ನೀಡಿದವನು ಕೂಡ ಇದೇ ಮೆಕಾಲೆ. ಸಾಮ್ರಾಜ್ಯವಾದಿ ಎಂಬ ಕಾರಣಕ್ಕೆ ಎಡಪಂಥೀಯ ದೇಶಭಕ್ತರಿಗೆ ಮೆಕಾಲೆ ಇಷ್ಟವಾಗುವುದಿಲ್ಲ; ಇಂಗ್ಲಿಷನ್ನು ಪ್ರೋತ್ಸಾಹಿಸುವ ಭರದಲ್ಲಿ ದೇಶಿ ಬೌದ್ಧಿಕ ಮತ್ತು ಸಾಹಿತ್ಯ ಪರಂಪರೆಯ ಬಗ್ಗೆ ಮೆಕಾಲೆಗೆ ಅಸಡ್ಡೆ ಇತ್ತು ಎಂಬ ಕಾರಣಕ್ಕೆ ಬಲಪಂಥೀಯ ದೇಶಭಕ್ತರು ಆತನನ್ನು ವಿರೋಧಿಸುತ್ತಾರೆ. ಇತರರಿಂದ ಬೇರ್ಪಟ್ಟು ಅನುಕೂಲಕರ ಸ್ಥಿತಿಯಲ್ಲಿರುವ, ಮುಖ್ಯವಾಗಿ ಇಂಗ್ಲಿಷ್‌ನಲ್ಲಿ ಬರೆಯುವ ಮತ್ತು ಪಾಶ್ಚಾತ್ಯ ಚಿಂತನೆ ಮತ್ತು ಪ್ರಭಾವಗಳಿಗೆ ಮುಕ್ತರಾಗಿರುವ ಚಿಂತಕರನ್ನು ಬಣ್ಣಿಸಲು ‘ಮೆಕಾಲೆ ಪುತ್ರ’ ಎಂಬ ನುಡಿಯನ್ನು ಕೂಡ ಹಿಂದುತ್ವ ಪ್ರತಿಪಾದಕರು ರೂಪಿಸಿದ್ದರು.

ಭಾರತದ ಎಡ ಮತ್ತು ಬಲಗಳೆರಡೂ ಮೆಕಾಲೆಯನ್ನು ವಿರೋಧಿಸುತ್ತವೆ. ಹಾಗಿದ್ದರೂ ಮೆಕಾಲೆ ರೂಪಿಸಿದ ಭಾರತೀಯ ದಂಡ ಸಂಹಿತೆಯನ್ನು ಸಿಪಿಎಂ ಮತ್ತು ಬಿಜೆಪಿಗಳೆರಡೂ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದಾಗ, ಮತ್ತು ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಅತ್ಯುತ್ಸಾಹದಿಂದ ಬಳಸಿವೆ.

ಕಾಂಗ್ರೆಸ್ ಪಕ್ಷದ ಸರ್ಕಾರಗಳು ಕೂಡ ಐಪಿಸಿಯ ಈ ಸೆಕ್ಷನ್‌ಗಳನ್ನು ವ್ಯಾಪಕವಾಗಿ ಬಳಸಿಕೊಂಡಿವೆ. ಮಹಾತ್ಮ ಗಾಂಧಿ ಬಗ್ಗೆ ಗೌರವ ಇದೆ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತಿದೆ ಮತ್ತು ಗಾಂಧಿ ಜೀವನಪರ್ಯಂತ ಕಾಂಗ್ರೆಸಿಗನಾಗಿಯೇ ಇದ್ದರು. ಅಸಲಿ ಅಥವಾ ಅತಿ ಶ್ರೇಷ್ಠ ಗಾಂಧಿ ಐಪಿಸಿಯ ದೇಶದ್ರೋಹ ವಿಧಿಯ ಸಂತ್ರಸ್ತರಾಗಿದ್ದರು ಎಂಬುದನ್ನು ಸೋನಿಯಾ ಮತ್ತು ರಾಹುಲ್ ಗಾಂಧಿಯವರ ಕಾಂಗ್ರೆಸ್‌ಗೆ ಯಾರಾದರು ನೆನಪಿಸಬೇಕಿದೆ. 1910ರಲ್ಲಿ ಗಾಂಧೀಜಿ ಪುಸ್ತಕ ‘ಹಿಂದ್ ಸ್ವರಾಜ್’ ಹೇಗೆ ನಿಷೇಧಕ್ಕೊಳಗಾಯಿತು ಎಂಬುದನ್ನು ನಾನು ಇಲ್ಲಿ ಪ್ರಸ್ತಾಪಿಸಿದ್ದೇನೆ. ಹನ್ನೆರಡು ವರ್ಷಗಳ ಬಳಿಕ, ಗಾಂಧಿ ಭಾರತಕ್ಕೆ ಹಿಂದಿರುಗಿದ ನಂತರ ಅವರು ಆರಂಭಿಸಿದ ಅಸಹಕಾರ ಚಳವಳಿಗೆ ಭಾರಿ ಜನಬೆಂಬಲ ವ್ಯಕ್ತವಾದಾಗ ಅವರನ್ನು ಬಂಧಿಸಲಾಯಿತು. ಈ ಜನ ಬೆಂಬಲದಿಂದ ಎದೆಗುಂದಿದ ಬ್ರಿಟಿಷರು ಗಾಂಧಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಲು ನಿರ್ಧರಿಸಿದರು. ‘ಯಂಗ್ ಇಂಡಿಯಾ' ನಿಯತಕಾಲಿಕದಲ್ಲಿ ಗಾಂಧಿ ಪ್ರಕಟಿಸಿದ ಲೇಖನಗಳಿಗಾಗಿ ಅವರ ವಿರುದ್ಧ ಐಪಿಸಿಯ 124ಎ ಸೆಕ್ಷನ್ ಅಡಿಯಲ್ಲಿ ‘ದೇಶದ್ರೋಹ’ ಪ್ರಕರಣ ದಾಖಲಿಸಲಾಯಿತು.

ಸರ್ಕಾರದ ನೀತಿಯ ಬಗ್ಗೆ ವಿಮರ್ಶಾತ್ಮಕ ಲೇಖನ ಬರೆದು ಬ್ರಿಟಿಷರಿಂದ ಜೈಲಿಗೆ ತಳ್ಳಿಸಿಕೊಂಡ ಮೊದಲ ವ್ಯಕ್ತಿಯೇನೂ ಅಲ್ಲ ಗಾಂಧಿ (ಅವರು ಕೊನೆಯವರೂ ಅಲ್ಲ). ಪ್ರಜಾಪ್ರಭುತ್ವ ಮತ್ತು ಮುಕ್ತ ಸರ್ಕಾರದಲ್ಲಿ ಈ ಕಾನೂನುಗಳಿಗೆ ಯಾವುದೇ ಅವಕಾಶ ಇಲ್ಲದಿರುವುದರಿಂದ ಸ್ವಾತಂತ್ರ್ಯಾನಂತರ ಈ ಕಾನೂನುಗಳು ರದ್ದಾಗುತ್ತವೆ ಎಂದು ಗಾಂಧಿ ಭಾವಿಸಿದ್ದರು. 1929ರಲ್ಲಿ ಗಾಂಧಿ ಅವರು ‘ಯಂಗ್ ಇಂಡಿಯಾ’ದಲ್ಲಿ ಸಂಚಲನ ಮೂಡಿಸುವಂತಹ ಸಂಪಾದಕೀಯ ಬರೆದು 124ಎ ಸೆಕ್ಷನ್ ರದ್ದತಿಗಾಗಿ ದೇಶವ್ಯಾಪಿ ಚಳವಳಿಗೆ ಕರೆ ನೀಡಿದ್ದರು. ‘ಈ ಸೆಕ್ಷನ್ ‘ಕಾನೂನು’ ಎಂಬ ಪದದ ಮೇಲೆ ಎಸಗಿದ ಅತ್ಯಾಚಾರ’ ಎಂದು ಹೇಳಿದ್ದ ಗಾಂಧಿ, ‘ನಾವು ಹಬ್ಬದ ಸಂಭ್ರಮದಲ್ಲಿರಲಿ, ಉಪವಾಸ ಮಾಡುತ್ತಿರಲಿ’ ಈ ಸೆಕ್ಷನ್ ತಲೆ ಮೇಲೆ ತೂಗುತ್ತಿರುತ್ತದೆ ಎಂದು ಬಣ್ಣಿಸಿದ್ದರು.

124ಎ ಸೆಕ್ಷನನ್ನು ‘ಖಡ್ಗದ ಬಲದಿಂದ ಸ್ಥಾಪಿಸಲಾಗಿದೆ, ನಿರಂಕುಶ ಆಡಳಿತಗಾರರ ಇಚ್ಛೆಗೆ ಅನುಸಾರ ನಮ್ಮ ಮೇಲೆ ಎರಗಲು ಸನ್ನದ್ಧವಾಗಿ ಇದನ್ನು ಇರಿಸಲಾಗಿದೆ. ಈ ಆಡಳಿತಗಾರರ ನೇಮಕದಲ್ಲಿ ಜನರ ಪಾತ್ರವೇ ಇಲ್ಲ’ ಎಂದು ಗಾಂಧಿ ವಿವರಿಸಿದ್ದರು. ‘ಈ ಕಾಯ್ದೆ ಮತ್ತು ಇಂತಹ ಇತರ ಕಾಯ್ದೆಗಳನ್ನು ರದ್ದು ಮಾಡುವುದು ಎಂದರೆ ಈಗ ಇರುವ ಸರ್ಕಾರದ ವ್ಯವಸ್ಥೆಯನ್ನು ರದ್ದುಪಡಿಸಿ ಸ್ವರಾಜ್ಯವನ್ನು ಪಡೆಯುವುದು. ಹಾಗಾಗಿ, ಈ ಸೆಕ್ಷನನ್ನು ರದ್ದುಪಡಿಸಲು ಬೇಕಾದ ಶಕ್ತಿ ಎಂದರೆ, ಸ್ವರಾಜ್ಯವನ್ನು ಪಡೆಯಲು ಬೇಕಿರುವ ಶಕ್ತಿ’ ಎಂದು ಗಾಂಧಿ ಹೇಳಿದ್ದರು.

ದುರಂತ ಎಂದರೆ, 1947ರ  ಆಗಸ್ಟ್‌ನಲ್ಲಿ ಭಾರತ ಸ್ವತಂತ್ರಗೊಂಡ ನಂತರ 124ಎ ಮತ್ತು ಇಂತಹ ಇತರ ಸೆಕ್ಷನ್‌ಗಳನ್ನು ನಾವು ಉಳಿಸಿಕೊಂಡದ್ದು ಮಾತ್ರವಲ್ಲದೆ, ಅವನ್ನು ಇನ್ನಷ್ಟು ಬಲಪಡಿಸಿದೆವು. ಏನೇ ಆದರೂ ಇದು ಹೀಗೆಯೇ ಆಗುತ್ತಿತ್ತು, ಯಾಕೆಂದರೆ, ಭಿನ್ನಮತವನ್ನು ದಮನ ಮಾಡಲು ಅಗಣಿತ ಅಧಿಕಾರ ನೀಡುವ ಕಾನೂನುಗಳನ್ನು ಸರ್ಕಾರಗಳು ಇಷ್ಟಪಡುತ್ತವೆ. ಆದರೆ, ಸ್ವಾತಂತ್ರ್ಯಾನಂತರ ತಕ್ಷಣದಲ್ಲಿ ನಡೆದ ಎರಡು ಘಟನೆಗಳು ಭಾರತದ ಅಸುರಕ್ಷತೆಯನ್ನು ಹೆಚ್ಚಿಸಿದವು.

ಮೊದಲನೆಯ ಘಟನೆ ಜನವರಿ 30ರಂದು ಮತಾಂಧನೊಬ್ಬನಿಂದ ಗಾಂಧೀಜಿ ಹತ್ಯೆ.  ಸ್ವ ಇಚ್ಛೆಯಿಂದ ಆತ ಗಾಂಧಿ ಅವರನ್ನು ಹತ್ಯೆ ಮಾಡಿದ ಎಂದು ತೋರಿಕೆಗೆ ಕಂಡರೂ ಅದು ಭಾರತವನ್ನು ‘ಹಿಂದೂ ಪಾಕಿಸ್ತಾನ’ವಾಗಿಸುವ ದೊಡ್ಡ ರಾಜಕೀಯ ಚಳವಳಿಯ ಭಾಗ. ಆರು ವಾರಗಳ ನಂತರ, ಕಲ್ಕತ್ತಾದಲ್ಲಿ ನಡೆದ ರಹಸ್ಯ ಸಮಾವೇಶದಲ್ಲಿ, ಭಾರತ ಸರ್ಕಾರದ ವಿರುದ್ಧ ಸಶಸ್ತ್ರ ಯುದ್ಧಕ್ಕೆ ಭಾರತೀಯ ಕಮ್ಯುನಿಸ್ಟ್ ಪಕ್ಷ ಕರೆ ನೀಡಿತು. ಹೀಗೆ, ಸ್ವತಂತ್ರ ಭಾರತದ ಆಗಷ್ಟೇ ಹುಟ್ಟಿದ ಹೊಸ ಸರ್ಕಾರ ಬಲಪಂಥೀಯ ತೀವ್ರವಾದ ಮತ್ತು ಎಡಪಂಥೀಯ ತೀವ್ರವಾದದ ಬೆದರಿಕೆಗೆ ಒಳಗಾಯಿತು. ಈ ಚಿಂತೆಗಳ ಜತೆಗೆ, ಆಹಾರದ ಕೊರತೆ, ದೇಶವಿಭಜನೆಯ ಲಕ್ಷಾಂತರ ನಿರಾಶ್ರಿತರಿಗೆ ಆಶ್ರಯ ಒದಗಿಸುವ ಸವಾಲು ಮತ್ತು ಪಾಕಿಸ್ತಾನದ ಜತೆಗೆ ಕಾಶ್ಮೀರಕ್ಕೆ ಸಂಬಂಧಿಸಿದ ಸಂಘರ್ಷಗಳೂ ಸೇರಿಕೊಂಡವು.

ಕೇಂದ್ರ ತನ್ನ ಆಧಿಪತ್ಯ ಸ್ಥಾಪಿಸುವುದು ಹೇಗೆ? ಇದು ಪ್ರಧಾನಿ ಜವಾಹರಲಾಲ್ ನೆಹರೂ, ಗೃಹ ಸಚಿವ ವಲ್ಲಭಭಾಯಿ ಪಟೇಲ್ ಮತ್ತು ಕಾನೂನು ಸಚಿವ ಬಿ.ಆರ್. ಅಂಬೇಡ್ಕರ್ ಅವರ ಮುಂದಿದ್ದ ಪ್ರಶ್ನೆ. ಎಡ ಮತ್ತು ಬಲ ಪಂಥದ ಹಿಂಸಾತ್ಮಕ ತೀವ್ರವಾದದ ವಿರುದ್ಧ ನಾಜೂಕಾಗಿದ್ದ ಕೇಂದ್ರವನ್ನು ಬಲಪಡಿಸುವುದಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖವಾಣಿ ‘ಆರ್ಗನೈಸರ್’ ಮತ್ತು ಕಮ್ಯುನಿಸ್ಟ್ ನಿಯತಕಾಲಿಕ ‘ಕ್ರಾಸ್‌ರೋಡ್ಸ್’ಗಳನ್ನು ನಿಷೇಧಿಸಲಾಯಿತು. ಈ ಪತ್ರಿಕೆಗಳ ಸಂಪಾದಕರು ಕೇಂದ್ರಕ್ಕೆ ಮನವಿ ಮಾಡಿದರು, ಮುಕ್ತ ಅಭಿವ್ಯಕ್ತಿಗೆ ಅವಕಾಶ ಇರಬೇಕು ಎಂದು ಅವರು ನಿಷೇಧವನ್ನು ನಿರ್ಲಕ್ಷಿಸಿದರು. ಆಗ ನೆಹರೂ, ಪಟೇಲ್ ಮತ್ತು ಅಂಬೇಡ್ಕರ್ ಭಾರತದ ಸಂವಿಧಾನಕ್ಕೆ ಮೊದಲ ತಿದ್ದುಪಡಿ ತಂದರು.

‘ಅಭಿವ್ಯಕ್ತಿ ಸ್ವಾತಂತ್ರ್ಯವು ಘನತೆ, ಅಥವಾ ನೈತಿಕತೆ ಅಥವಾ ಭದ್ರತೆಗೆ ಗಾಸಿ ಉಂಟು ಮಾಡಿದರೆ ಅಥವಾ ಸರ್ಕಾರವನ್ನು ಪದಚ್ಯುತಗೊಳಿಸಲು ಬಯಸಿದರೆ’ ಈ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಗೊಳಿಸುವ ಕಾನೂನು ರೂಪಿಸಲು ಸರ್ಕಾರಕ್ಕೆ ಅವಕಾಶ ಇದೆ ಎಂದು  ಸಂವಿಧಾನದ 19(2)ನೇ ವಿಧಿಯ ಮೂಲ ಪಠ್ಯ ಹೇಳುತ್ತಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸುವಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಮೊದಲನೇ ತಿದ್ದುಪಡಿಯು ಇನ್ನಷ್ಟು ವಿಸ್ತರಿಸಿತು. 19(2) ಪರಿಷ್ಕೃತ ವಿಧಿಯು ಹೀಗೆ ಹೇಳುತ್ತದೆ: ‘ದೇಶದ ಭದ್ರತೆ, ವಿದೇಶಗಳ ಜತೆ ಸ್ನೇಹಮಯ ಸಂಬಂಧ, ಸಾರ್ವಜನಿಕ ಸುವ್ಯವಸ್ಥೆ (ಮತ್ತು) ಘನತೆ ಅಥವಾ ನೈತಿಕತೆಯ ಹಿತಾಸಕ್ತಿಗಾಗಿ’ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಕಾನೂನುಗಳನ್ನು ಸರ್ಕಾರ ರೂಪಿಸಬಹುದು.

ಮೊದಲನೇ ತಿದ್ದುಪಡಿಯಲ್ಲಿ ‘ವಿದೇಶಗಳ ಜತೆ ಸ್ನೇಹಮಯ ಸಂಬಂಧ’ ಮತ್ತು ‘ಸಾರ್ವಜನಿಕ ಸುವ್ಯವಸ್ಥೆ’ ಎಂಬ ಅಂಶಗಳನ್ನು ಸೇರಿಸಲಾಯಿತು. ಇದರಲ್ಲಿ ವಿಶೇಷವಾಗಿ ಎರಡನೇ ಅಂಶವನ್ನು ಅತ್ಯಂತ ವ್ಯಾಪಕವಾದ ರೀತಿಯಲ್ಲಿ ವಿವರಿಸಲು ಅವಕಾಶ ಇದೆ. ಯಾವುದೇ ಪುಸ್ತಕ ಅಥವಾ ಸಿನಿಮಾ ಅಥವಾ ಕಲಾಕೃತಿ ಕೆಲವು ಜನರ ಮನ ನೋಯಿಸಿದರೆ ಮತ್ತು ಅವರು ಬೀದಿಗಿಳಿದು ಪ್ರತಿಭಟನೆ ನಡೆಸಿದರೆ ಅದನ್ನು ‘ಸಾರ್ವಜನಿಕ ಸುವ್ಯವಸ್ಥೆ’ಗೆ ಬೆದರಿಕೆ ಎಂದು ಪರಿಗಣಿಸಬಹುದು. ಸಂವಿಧಾನದ ಮೂಲ ವಿಧಿಯಲ್ಲಿ ನಿಷ್ಫಲವಾದ 153, 153ಎ, 295, 295ಎ, 499, 500 ಮತ್ತು 505ನೇ ಸೆಕ್ಷನ್‌ಗಳಿಗೆ ಅವಕಾಶ ಇತ್ತು. ಇವು ‘ಸಾರ್ವಜನಿಕ ದುರ್ನಡತೆ’, ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ’, ‘ಸ್ವೇಚ್ಛೆಯಿಂದ ಪ್ರಚೋದನೆ’, ‘ಹೆಸರು ಹಾಳು ಮಾಡುವುದು’ ಮುಂತಾದವುಗಳಿಗೆ ಸೀಮಿತವಾಗಿದ್ದು, ದೇಶಕ್ಕೆ ಬೆದರಿಕೆ ಎಂದು ಯಾವುದನ್ನೂ ಪರಿಗಣಿಸುವುದಿಲ್ಲ. ಆದರೆ, ಇವುಗಳನ್ನು ಕೂಡ ಸಂಪ್ರದಾಯವಾದಿ ನ್ಯಾಯಾಧೀಶ ಅಥವಾ ನ್ಯಾಯಾಂಗ ‘ಸಾರ್ವಜನಿಕ ಸುವ್ಯವಸ್ಥೆ’ಗೆ ಧಕ್ಕೆ ಎಂದು ಪರಿಗಣಿಸುವುದಕ್ಕೆ ಅವಕಾಶ ಇದೆ.

ಸ್ವತಂತ್ರ ಭಾರತದ ಅಸ್ತಿತ್ವವೇ ಅಪಾಯದಲ್ಲಿದ್ದಾಗ ನೆಹರೂ, ಪಟೇಲ್ ಮತ್ತು ಅಂಬೇಡ್ಕರ್ ಅವರು ಅಸಾಧಾರಣವಾದ ಕ್ರಮವನ್ನು ಕೈಗೊಂಡರು. ಹಿಂದಿನ ವಿಧಿಗೆ ಹೋಲಿಸಿದರೆ ಮೊದಲ ತಿದ್ದುಪಡಿಯು ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪೂರಕವಾಗಿರಲಿಲ್ಲ. ಇದು ಸಂವಿಧಾನವು ರದ್ದುಪಡಿಸಲು ಅಥವಾ ತಳ್ಳಿ ಹಾಕಲು ಬಯಸಿದ್ದ ವಸಾಹತುಶಾಹಿ ಕಾನೂನಿನ ಅಧಿಕಾರವನ್ನು ಮರಳಿ ಸ್ಥಾಪಿಸಿತು. ಈ ತಿದ್ದುಪಡಿಯು ಭಿನ್ನಮತ ಮತ್ತು ಟೀಕೆಯನ್ನು ದಮನ ಮಾಡಲು ಸ್ವತಂತ್ರ ಭಾರತದ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡಿತು. ಆದರೆ ಇದರಿಂದ ಭಿನ್ನಮತ ಮತ್ತು ಟೀಕೆಯನ್ನು ರಕ್ಷಿಸುವ ನ್ಯಾಯಾಲಯಗಳ ಅಧಿಕಾರ ಕುಂಠಿತಗೊಂಡಿತು.

ವಸಾಹತೋತ್ತರ, ಪ್ರಜಾಸತ್ತಾತ್ಮಕ ಎಂದು ಹೇಳಲಾಗುವ ನಮ್ಮ ಯುಗದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ವಸಾಹತುಶಾಹಿ ಕಾನೂನುಗಳನ್ನು ಬಳಸಲಾಗಿದೆ (ಮತ್ತು ದುರ್ಬಳಕೆ ಮಾಡಲಾಗಿದೆ). ಈ ಮಧ್ಯೆ, ಸ್ವತಂತ್ರ ಭಾರತವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಇನ್ನಷ್ಟು ಕಾನೂನುಗಳನ್ನು ರೂಪಿಸಿದೆ. ಮೊದಲ ತಿದ್ದುಪಡಿ ಅಲ್ಲದೆ, ನಂತರ ಬಂದ ‘1971ರ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ’ಯನ್ನು ನೋಡೋಣ. ರಾಷ್ಟ್ರಧ್ವಜವನ್ನು ಆಸನದ ಮೆತ್ತೆಗೆ ಬಳಸಿದರೆ, ಮಣ್ಣಿಗೆ ಅಥವಾ ನೆಲಕ್ಕೆ ಬೀಳಿಸಿದರೆ ಅಥವಾ ನೀರಿನಲ್ಲಿ ಕೊಚ್ಚಿ ಹೋಗುವಂತೆ ಮಾಡಿದರೆ ಅಂಥವರಿಗೆ ಮೂರು ವರ್ಷಗಳವರೆಗೆ ಶಿಕ್ಷೆ ವಿಧಿಸುವುದಕ್ಕೆ ಈ ಕಾಯ್ದೆ ಅವಕಾಶ ನೀಡುತ್ತದೆ.

ರಾಷ್ಟ್ರಗೀತೆ ಹಾಡುವುದನ್ನು ತಡೆಯಲು ಯತ್ನಿಸುವುದಕ್ಕೂ ಇಂತಹುದೇ ದಂಡನೆ ಇದೆ. ಇಂತಹ ನಿರ್ಬಂಧಾತ್ಮಕ ಕಾನೂನುಗಳಿಗೆ ತೀರಾ ಇತ್ತೀಚಿನ ಉದಾಹರಣೆ 2008ರ ಮಾಹಿತಿ ತಂತ್ರಜ್ಞಾನ ಕಾಯ್ದೆಯ 66ಎ ಸೆಕ್ಷನ್. ಈ ಸೆಕ್ಷನ್ ಅಡಿಯಲ್ಲಿ, ಸುಮ್ಮನೆ (ಅಹಿಂಸಾತ್ಮಕವಾಗಿ) ರಾಜಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಕೂಡ ಜೈಲು ಶಿಕ್ಷೆಗೆ ಕಾರಣವಾಗಬಹುದು. (2015ರ ಮೇಯಲ್ಲಿ ಸುಪ್ರೀಂ ಕೋರ್ಟ್ ಈ ಸೆಕ್ಷನನ್ನು ರದ್ದುಪಡಿಸಿತು. ಆದರೆ ಅದಕ್ಕೂ ಮುಂಚೆ ಹಲವು ಕಲಾವಿದರು ಮತ್ತು ಲೇಖಕರನ್ನು ಈ ಸೆಕ್ಷನ್ ಬಳಸಿ ಜೈಲಿಗೆ ತಳ್ಳಲಾಗಿದೆ).
ಹಾಗಾಗಿಯೇ, ಪುರಾತನವಾದ ಕಾನೂನುಗಳು ಮತ್ತು ಸ್ಪಷ್ಟವಾಗಿ ಪ್ರಜಾತಂತ್ರ ವಿರೋಧಿ ಉದ್ದೇಶದ ಕಾನೂನುಗಳೇ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಮೊದಲ ಬೆದರಿಕೆಗಳಾಗಿವೆ.

2.ಅಸಮರ್ಪಕ ನ್ಯಾಯಾಂಗ
ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಇರುವ ಅಸಮರ್ಪಕತೆಗಳು ಎರಡನೇ ಬೆದರಿಕೆಯನ್ನು ರೂಪಿಸುತ್ತವೆ. ಸಿನಿಮಾಗಳು, ಪುಸ್ತಕಗಳು ಅಥವಾ ಕಲಾಕೃತಿಗಳ ಮೇಲೆ ನಿಷೇಧ ಹೇರಬೇಕು ಎಂಬ ಬಿಡಿ ದೂರುಗಳು ಸಲ್ಲಿಕೆಯಾದಾಗ

ಅಂಥವುಗಳನ್ನು ಪುರಸ್ಕರಿಸಲು ನಮ್ಮ ಕೆಳ ಹಂತದ ನ್ಯಾಯಾಲಯಗಳು ಅತಿ ಆತುರ ಮತ್ತು ಅತಿ ಉತ್ಸಾಹ ತೋರುತ್ತವೆ. ಇಂತಹ ದೂರುಗಳು ಕ್ಷುಲ್ಲಕವಾಗಿರುತ್ತವೆ ಅಥವಾ ಅವುಗಳಲ್ಲಿ ಯಾವುದೇ ಸತ್ಯ ಇರುವುದಿಲ್ಲ ಅಥವಾ ಅವುಗಳು ರಾಜಕೀಯ ಪ್ರೇರಿತವಾಗಿರುತ್ತವೆ. ಹೀಗೆ ಸಲ್ಲಿಕೆಯಾಗುವ ದೂರುಗಳಲ್ಲಿ ಬಹುಶಃ ಶೇ 99.9ರಷ್ಟು  ವಜಾಗೊಳಿಸುವುದಕ್ಕಷ್ಟೇ ಅರ್ಹವಾಗಿರುತ್ತವೆ. ಆದರೆ ಹಾಗೆ ಮಾಡಲಾಗುವುದಿಲ್ಲ, ಯಾಕೆ? ಅದಕ್ಕೆ ಒಂದು ಕಾರಣ, ಲೇಖಕರು, ಕಲಾವಿದರು, ನಟರು, ರಾಜಕಾರಣಿಗಳು ಮತ್ತು ಕ್ರೀಡಾಪಟುಗಳ ಹಾಗೆಯೇ ನ್ಯಾಯಾಧೀಶರು ಕೂಡ ತಮ್ಮ ಹೆಸರು ಪತ್ರಿಕೆಗಳಲ್ಲಿ ಬರುವುದನ್ನು ಬಯಸುತ್ತಾರೆ. ಇದಲ್ಲದೆ, ಇತರ ಹೆಚ್ಚು ಗಟ್ಟಿಯಾದ ಪರಿಗಣನೆಗಳೂ ಇವೆ. ಅವುಗಳೆಂದರೆ, ಭೌತಿಕ ಹಿತಾಸಕ್ತಿ ಮತ್ತು/ಅಥವಾ ಸೈದ್ಧಾಂತಿಕ ಅಸಹಿಷ್ಣುತೆ.

ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್ ಕೆಲವೊಮ್ಮೆ ಲೇಖಕರು ಮತ್ತು ಕಲಾವಿದರ ಹಕ್ಕುಗಳ ಬಗ್ಗೆ ಹೆಚ್ಚು ಸಹಾನುಭೂತಿ ವ್ಯಕ್ತಪಡಿಸುತ್ತವೆ. ಆದರೆ ಕೆಳ ನ್ಯಾಯಾಲಯವೊಂದು ನಿಷೇಧ ಅಥವಾ ತಡೆಯಾಜ್ಞೆ ನೀಡಿದ್ದರೆ ನ್ಯಾಯಾಂಗ ಪ್ರಕ್ರಿಯೆಯ ಜಡತೆಯಿಂದಾಗಿ ಅದನ್ನು ತೆರವುಗೊಳಿಸಲು ವರ್ಷಗಳು, ಅಥವಾ ಕೆಲವೊಮ್ಮೆ ದಶಕಗಳೇ ಬೇಕಾಗುತ್ತವೆ. ಕೆಲವೇ ಕಲಾವಿದರು ಅಥವಾ ಪ್ರಕಾಶಕರಿಗೆ ಮಾತ್ರ ಇಷ್ಟೊಂದು ದೀರ್ಘ ಹೋರಾಟ ನಡೆಸುವುದಕ್ಕೆ ಬೇಕಾದ ಸಂಪನ್ಮೂಲ ಅಥವಾ ಶಕ್ತಿ ಇರುತ್ತದೆ. ಅಜ್ಞಾನಿ ಅಥವಾ ಪ್ರಚಾರಪ್ರೇಮಿ ನ್ಯಾಯಾಧೀಶರಿಗೆ ಪೂರಕವಾಗಿ ಕೆಲಸ ಮಾಡುವ ದುರುದ್ದೇಶಪೂರಿತ ದೂರುದಾರರು ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಮತ್ತೊಂದು ಗಂಭೀರ ಬೆದರಿಕೆಯಾಗಿದ್ದಾರೆ.

3.ಅಸ್ಮಿತಾವಾದಿ ರಾಜಕಾರಣ
ಹೆಚ್ಚುತ್ತಲೇ ಇರುವ  ಅಸ್ಮಿತಾವಾದಿ ರಾಜಕಾರಣ (ಐಡೆಂಟಿಟಿ ಪಾಲಿಟಿಕ್ಸ್) ಇನ್ನೊಂದು ಬೆದರಿಕೆಯಾಗಿದೆ. ಒಂದು

ಪುಸ್ತಕ ಅಥವಾ ಕಲಾಕೃತಿ ಅಥವಾ ಒಂದು ಸಿನಿಮಾವನ್ನು ನಿಷೇಧಿಸುವುದು ಬಹಳ ಸುಲಭ. ಒಂದು ಸಮುದಾಯ ಅಥವಾ ಯಾವುದೇ ಸಮುದಾಯ ತನ್ನ ಭಾವನೆಗಳಿಗೆ ಅಥವಾ ಯಾವುದೋ ಒಂದು ಭಾವನೆಗೆ ಗಾಸಿಯಾಗಿದೆ ಎಂದು ದೂರು ನೀಡಬಹುದು. ಮಂಡಲ್ ಮತ್ತು ಅಯೋಧ್ಯೆ ಚಳವಳಿಗಳು ಆರಂಭಗೊಂಡ 1990ರ ದಶಕದ ಆರಂಭಿಕ ವರ್ಷಗಳಲ್ಲಿ ಮೊದಲನೆಯದು ಜಾತಿ ಅಸ್ಮಿತೆಯ  ರಾಜಕಾರಣ ಮತ್ತು ಎರಡನೆಯದು ಧಾರ್ಮಿಕ ಅಸ್ಮಿತೆಯ  ರಾಜಕಾರಣಗಳಾಗಿದ್ದವು. ಆ ಸಂದರ್ಭದಲ್ಲಿ ಇತಿಹಾಸಕಾರ ಧರ್ಮ ಕುಮಾರ್ ಅವರು ‘ನಾವು ಕುಂದುಕೊರತೆಗಳನ್ನು ಸಂಗ್ರಹಿಸುವ ದೇಶವಾಗಿ ಮಾರ್ಪಟ್ಟಿದ್ದೇವೆ’ ಎಂದು ನನ್ನಲ್ಲಿ ಹೇಳಿದ್ದರು. ವಾಸ್ತವದಲ್ಲಿ, ನಾವು ಭಾರತೀಯರು ಕುಂದುಕೊರತೆಗಳನ್ನು ಸಂಗ್ರಹಿಸುವುದು ಮಾತ್ರವಲ್ಲ, ಅದಕ್ಕೆ ಪ್ರಚಾರ ನೀಡುತ್ತೇವೆ ಹಾಗೂ ಇತರರ ಮೇಲೆ ಹೇರುತ್ತವೆ. ಇದು ಕೂಡ ಮುಕ್ತ ಅಭಿವ್ಯಕ್ತಿಯ ಕುತ್ತಿಗೆ ಹಿಸುಕುತ್ತದೆ.

ಮಂಡಲ್ ಮತ್ತು ಅಯೋಧ್ಯೆ ಚಳವಳಿಗಳ ನಂತರ ಅಸ್ಮಿತಾವಾದಿ ರಾಜಕಾರಣದ ಪ್ರಭಾವ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಲೇ ಸಾಗಿದೆ. ಇದು ಭಾರತೀಯ ಸಮಾಜದ ಮೇಲೆ ಸಂಕೀರ್ಣ ರೀತಿಯ ಪ್ರಭಾವ ಉಂಟು ಮಾಡಿದೆ. ಹಿಂದೆ ವಿದ್ವಾಂಸರು ನಿರ್ಲಕ್ಷಿಸಿದ್ದ ವರ್ಗವನ್ನು ಕೇಂದ್ರ ಸ್ಥಾನಕ್ಕೆ ತರುವಂತಹ ಕೆಲವು ಪ್ರಯೋಜನಗಳು ಆಗಿವೆ. ಆದರೆ, ಅಸ್ಮಿತಾವಾದ ರಾಜಕಾರಣದ ಪ್ರಭಾವ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಏಕರೂಪವಾಗಿ ನಕಾರಾತ್ಮಕವೇ ಆಗಿದೆ. ಪ್ರತಿ ಪ್ರದೇಶ, ಜಾತಿ ಅಥವಾ ಸಮುದಾಯದ ಸಂಕೇತಗಳು ಅದರ ಬಗ್ಗೆ ಅಭಿಮಾನ ಇರುವ ಅಥವಾ ಅದನ್ನು ಆರಾಧಿಸುವವರಿಗೆ ದೋಷರಹಿತವಾಗಿರುತ್ತವೆ ಮತ್ತು ಟೀಕೆಗಳಿಗೆ ಅತೀತವಾದುದಾಗಿರುತ್ತವೆ.

1988ರಲ್ಲಿ ಸಲ್ಮಾನ್ ರಶ್ದಿ ಅವರ ‘ದ ಸಟಾನಿಕ್ ವರ್ಸಸ್’ ಕೃತಿಯ ಮೇಲಿನ ನಿಷೇಧ ಇದನ್ನು ಸ್ಪಷ್ಟಪಡಿಸುತ್ತದೆ. ಮೌಲ್ವಿಗಳು ನೀಡಿದ ದೂರು ಆ ಪುಸ್ತಕವನ್ನು ನೋಡಿಯೇ ಇಲ್ಲದಿದ್ದ ಮತ್ತು ಎಂದೂ ಓದುವ ಸಂಭವ ಇಲ್ಲದ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಲು ಕಾರಣವಾಯಿತು. ಈ ಪ್ರತಿಭಟನೆಗೆ ಆಗಿನ ಭಾರತ ಸರ್ಕಾರ ದಿಗಿಲಿನಿಂದ ಪ್ರತಿಕ್ರಿಯೆ ನೀಡಿತು. ಆಧುನಿಕ ಮನಸ್ಥಿತಿಯ ಪ್ರಧಾನಿ ರಾಜೀವ್ ಗಾಂಧಿ ದುರ್ಬಲರಾಗಿದ್ದರು ಮತ್ತು ಅವರಿಗೆ ಕೆಟ್ಟ ಸಲಹೆಗಳನ್ನು ನೀಡಲಾಯಿತು. ಸಾರ್ವತ್ರಿಕ ಚುನಾವಣೆ ಹತ್ತಿರದಲ್ಲಿತ್ತು.  ಭಾರತದ ಸಾಮಾನ್ಯ ಮುಸ್ಲಿಮರ ಮತ ಚಲಾವಣೆ ಮೇಲೆ ಮೌಲ್ವಿಗಳು ಹೊಂದಿರುವ ಪ್ರಭಾವದ ಬಗ್ಗೆ ರಾಜೀವ್ ಗಾಂಧಿ ಅವರ ಅಂದಾಜು ಉತ್ಪ್ರೇಕ್ಷಿತವಾದುದಾಗಿತ್ತು (ಅವರಿಗಿಂತ ಹಿಂದೆಯೂ ನಂತರವೂ ಕಾಂಗ್ರೆಸ್ ಮುಖಂಡರು ಇದೇ ರೀತಿ ಅಂದಾಜಿಸಿದ್ದಾರೆ). ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಛಿದ್ರಗೊಳಿಸುವ ಹೊಡೆತದ ರೀತಿಯಲ್ಲಿ ಭಾರತ ಸರ್ಕಾರ ಪುಸ್ತಕವನ್ನು ನಿಷೇಧಿಸಿತು. ಇರಾನ್ ಸರ್ಕಾರ ನಿಷೇಧ ಹೇರುವ ಮೊದಲೇ ಭಾರತದಲ್ಲಿ ಪುಸ್ತಕವನ್ನು ನಿಷೇಧಿಸಲಾಯಿತು.

ಪರಿಸ್ಥಿತಿಯನ್ನು ತಣ್ಣಗಾಗಿಸುವ ಬದಲಿಗೆ ‘ದ ಸಟಾನಿಕ್ ವರ್ಸಸ್’ನ ನಿಷೇಧ ಇತರ ಜನಾಂಗಗಳು ಮತ್ತು ಧರ್ಮಗಳ ಮುಖಂಡರು ಮತ್ತು ಧರ್ಮಾಂಧರು ಇನ್ನಷ್ಟು ಪ್ರಬಲರಾಗುವಂತೆ ಮಾಡಿತು. ತಮ್ಮ ಧರ್ಮಕ್ಕೆ ಸಂಬಂಧಿಸಿದ ಸಂಕೇತಗಳ ಬಗ್ಗೆ ಎಷ್ಟೇ ಸೌಮ್ಯ ಅಥವಾ ವಿದ್ವತ್‍ಪೂರ್ಣವಾದ ಟೀಕೆಗಳು ವ್ಯಕ್ತವಾದರೂ ಪ್ರತಿಭಟನೆ ಹೆಚ್ಚಾಯಿತು. ರವೀಂದ್ರನಾಥ ಟ್ಯಾಗೋರ್ ಬಗ್ಗೆ ದೆಹಲಿಯ ಲೇಖಕರೊಬ್ಬರ ವಿಮರ್ಶೆಗೆ ಪಶ್ಚಿಮ ಬಂಗಾಳ ಸರ್ಕಾರ ಕತ್ತರಿ ಪ್ರಯೋಗ ನಡೆಸಿತು. ಅಂಬೇಡ್ಕರ್ ಬಗ್ಗೆ ವಿಮರ್ಶಾತ್ಮಕವಾದ ಕೃತಿ ರಚಿಸಿದ ದೆಹಲಿಯ ಇನ್ನೊಬ್ಬ ಲೇಖಕರ ಮೇಲೆ ಹಲ್ಲೆ ನಡೆಸಲಾಯಿತು. ಶಿವಾಜಿಯ ಪಿತೃತ್ವದ ಬಗ್ಗೆ ಇದ್ದ ಹಳೆಯ ಕತೆಗಳನ್ನು ಪುನರಾವರ್ತಿಸಿದ (ಅವರು ಅದನ್ನು ಸಮರ್ಥಿಸಿಕೊಳ್ಳಲಿಲ್ಲ) ಅಮೆರಿಕದ ವಿದ್ವಾಂಸರೊಬ್ಬರ ಪುಸ್ತಕವನ್ನು ನಿಷೇಧಿಸಲಾಯಿತು ಮತ್ತು ಸುಟ್ಟು ಹಾಕಲಾಯಿತು. ಆ ವಿದ್ವಾಂಸ ಮರಳಿ ಭಾರತಕ್ಕೆ ಬರುವುದನ್ನು ನಿಷೇಧಿಸಲಾಯಿತು.

ಭಾರತದಲ್ಲಿ ಇಂದು, ನಮ್ಮ ಎಲ್ಲ ‘ಹೀರೊ’ಗಳು ಪರಿಪೂರ್ಣರು ಎಂದು ಭಾವಿಸಲಾಗುತ್ತದೆ. ಇದು ಹಿಂದೆಯೂ ಹೀಗೆಯೇ ಆಗಿತ್ತೇ ಎಂಬ ಬಗ್ಗೆ ನನ್ನಲ್ಲಿ ಸಂದೇಹ ಇದೆ. ಯುಧಿಷ್ಟಿರ ಮತ್ತು ರಾಮ ಕುಬುದ್ಧಿಯ ಮತ್ತು ಅಡ್ಡ ಹಾದಿ ಹಿಡಿಯುವ ಸಾಮರ್ಥ್ಯ ಇದ್ದವರಾಗಿದ್ದರು- ಈ ಬಗ್ಗೆ ಅರಿತಾಗ ನಮ್ಮ ಪೂರ್ವಜರು ಅಚ್ಚರಿಗೊಳ್ಳುವುದಾಗಲಿ, ಆಕ್ರೋಶಗೊಳ್ಳುವುದಾಗಲಿ ಮಾಡಿಲ್ಲ. ಆದರೆ, ಈಗ ಸುಭಾಷ್‌ಚಂದ್ರ ಬೋಸ್ ಬಗ್ಗೆ ಅತ್ಯಂತ ಸೌಮ್ಯವಾದ ಟೀಕೆಯನ್ನು ಬಂಗಾಳಿಗಳು, ಪೆರಿಯಾರ್ ಬಗೆಗಿನ ಅತ್ಯಂತ ಸೌಮ್ಯವಾದ ಟೀಕೆಯನ್ನು ತಮಿಳರು, ಶಿವಾಜಿ ಬಗೆಗಿನ ಅತ್ಯಂತ ಸೌಮ್ಯವಾದ ಟೀಕೆಯನ್ನು ಮರಾಠಿಗರು, ಅಂಬೇಡ್ಕರ್ ಬಗೆಗಿನ ಅತ್ಯಂತ ಸೌಮ್ಯವಾದ ಟೀಕೆಯನ್ನು ದಲಿತರು, ಸಾವರ್ಕರ್ ಬಗೆಗಿನ ಅತ್ಯಂತ ಸೌಮ್ಯವಾದ ಟೀಕೆಯನ್ನು ಹಿಂದುತ್ವವಾದಿಗಳು ಸಹಿಸುವುದಿಲ್ಲ.

ಬೋಸ್, ಸಾವರ್ಕರ್, ಪೆರಿಯಾರ್, ಅಂಬೇಡ್ಕರ್ ಮತ್ತು ಶಿವಾಜಿ ಎಲ್ಲರೂ ವಿಶಿಷ್ಟ ವ್ಯಕ್ತಿಗಳು. ಅವರ ಮಹತ್ವವನ್ನು ಅರ್ಥ ಮಾಡಿಕೊಳ್ಳಲು ಅವರ ಬಗ್ಗೆ ಪುಸ್ತಕಗಳು, ಸಿನಿಮಾಗಳು, ನಾಟಕಗಳು ಬರಬೇಕು. ಆದರೆ ಇವರ ಬಗ್ಗೆ ಯಾವುದೇ ಭೀತಿ ಇಲ್ಲದೆ ಬರೆಯಬಲ್ಲ ಲೇಖಕರು, ವಿದ್ವಾಂಸರು ಮತ್ತು ನಾಟಕಕಾರರು ಎಲ್ಲಿದ್ದಾರೆ? ಇವರ ಸಾಧನೆಗಳ ಜತೆಗೆ ವೈಫಲ್ಯಗಳನ್ನು, ಧೈರ್ಯದ ಜತೆಗೆ ಒರಟುತನ ಮತ್ತು ಪೂರ್ವಗ್ರಹಗಳನ್ನು ತುಲನೆ ಮಾಡಿ ಬರೆಯುವುದಕ್ಕೆ ಸಾಧ್ಯವೇ?

ವಿಚಿತ್ರವೆಂದರೆ, ಕಳೆದ ಸಾವಿರ ವರ್ಷಗಳ ಇತಿಹಾಸದಲ್ಲಿ ಅತ್ಯಂತ ಶ್ರೇಷ್ಠ ಅಥವಾ ಅತ್ಯಂತ ವಿವಾದಾತ್ಮಕ ಭಾರತೀಯನಾಗಿರುವ ಗಾಂಧಿ ಬಗ್ಗೆ ಇಂದು ಯಾವುದೇ ವ್ಯಕ್ತಿ ತನ್ನ ಜೀವಕ್ಕೆ ಅಥವಾ ಕೃತಿಗೆ ಯಾವುದೇ ಬೆದರಿಕೆ ಇಲ್ಲದೆ ತನಗೆ ಎಷ್ಟು ವಿಮರ್ಶಾತ್ಮಕವಾಗಿ ಬೇಕೋ ಅಷ್ಟು ವಿಮರ್ಶಾತ್ಮಕವಾಗಿ ಬರೆಯುವುದಕ್ಕೆ ಸಾಧ್ಯ ಇದೆ. ಶ್ರೇಷ್ಠ ಭಾರತೀಯರಲ್ಲಿ ಗಾಂಧಿ ಬಗ್ಗೆ ಮಾತ್ರ ಹೀಗೆ ಬರೆಯುವುದಕ್ಕೆ ಸಾಧ್ಯ. ಬೋಸ್, ಪೆರಿಯಾರ್, ಅಂಬೇಡ್ಕರ್ ಅಥವಾ ಶಿವಾಜಿ ಅವರಂತಲ್ಲದೆ ಗಾಂಧಿ ಎಲ್ಲರಿಗೂ ಸೇರಿದವರು ಮತ್ತು ಹಾಗಾಗಿ ಯಾರಿಗೂ ಸೇರದವರು. ಗಾಂಧಿ ಬಗ್ಗೆ ರಕ್ಷಣಾತ್ಮಕವಾಗಿರುವ ಆಕ್ರೋಶಿತ, ಆಕ್ರಮಣಕಾರಿ, ಅಸುರಕ್ಷಿತ ಮತ್ತು ಸೂಕ್ಷ್ಮವಾದ ಯಾವುದೇ ಜನಾಂಗ ಇಲ್ಲ.

ಅದೂ ಅಲ್ಲದೆ, ಗಾಂಧಿ ಅವರನ್ನು ಟೀಕೆಯಿಂದ ‘ರಕ್ಷಿಸಬೇಕು’ ಎಂದು ಯಾರಾದರೂ ಹೊರಟರೂ ಅವರು ವಿಫಲರಾಗುತ್ತಾರೆ. 2011ರಲ್ಲಿ ಅಮೆರಿಕದ ಲೇಖಕ ಜೋಸೆಫ್ ಲಿಲಿವೆಲ್ಡ್, ಗಾಂಧಿ ಬಗ್ಗೆ ಬರೆದ ಪುಸ್ತಕದಲ್ಲಿ, ದಕ್ಷಿಣ ಆಫ್ರಿಕಾದಲ್ಲಿದ್ದಾಗ ಅವರು ಸಲಿಂಗ ಸಂಬಂಧ ಹೊಂದಿದ್ದರು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮತ್ತು ರಾಷ್ಟ್ರ ರಾಜಕಾರಣ ಪ್ರವೇಶಿಸಲು ಬಯಸುತ್ತಿದ್ದ ನರೇಂದ್ರ ಮೋದಿ ತಮ್ಮ ರಾಜ್ಯದಲ್ಲಿ ಆ ಪುಸ್ತಕವನ್ನು ನಿಷೇಧಿಸುತ್ತಾರೆ. ಮಹಾತ್ಮ ಗಾಂಧಿಯ ಸಮರ್ಥಕ ತಾನು ಎಂದು ಬಿಂಬಿಸಿಕೊಳ್ಳುವ ಉದ್ದೇಶವೂ ಅವರಿಗೆ ಇತ್ತು.

ತಾನೇನು ಕಡಿಮೆ ಅಲ್ಲ ಎಂಬ ಭಾವನೆಯಲ್ಲಿ ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವೂ ಈ ಪುಸ್ತಕದ ದೇಶವ್ಯಾಪಿ ನಿಷೇಧಕ್ಕೆ ಚಿಂತನೆ ನಡೆಸಿತು. ಆದರೆ ಮಹಾತ್ಮ ಗಾಂಧಿ ಮೊಮ್ಮಕ್ಕಳಾದ ರಾಜ್‌ಮೋಹನ್ ಗಾಂಧಿ ಮತ್ತು ರಾಜತಾಂತ್ರಿಕ ಗೋಪಾಲಕೃಷ್ಣ ಗಾಂಧಿ ಅವರು ಮಧ್ಯಪ್ರವೇಶಿಸಿ ಗುಜರಾತ್ ಹೊರತುಪಡಿಸಿ ದೇಶದಲ್ಲಿ ಪುಸ್ತಕದ ಪ್ರಸಾರಕ್ಕೆ ಧಕ್ಕೆ ಆಗದಂತೆ ನೋಡಿಕೊಂಡರು. ವಾಗ್ವಾದ ಮತ್ತು ಸಂವಾದವನ್ನು ಸದಾ ಸ್ವಾಗತಿಸುತ್ತಿದ್ದ ಗಾಂಧಿಯ ಸ್ಫೂರ್ತಿಗೆ ಈ ನಿಷೇಧದ ಕ್ರಮ ವಿರುದ್ಧವಾದುದು ಎಂದು ಅವರು ವಾದಿಸಿದರು. ಜತೆಗೆ, ಇದು ಭಾರತದ ಪ್ರಜಾಸತ್ತಾತ್ಮಕ ವಿಶ್ವಾಸಾರ್ಹತೆಗೆ ಕುಂದುಂಟು ಮಾಡುತ್ತದೆ ಎಂಬುದು ಅವರ ಚಿಂತನೆಯಾಗಿತ್ತು. ದುಃಖದ ಸಂಗತಿ ಎಂದರೆ, ಭಾರತದ ಇತಿಹಾಸದ ಇತರ ನಾಯಕರ ಪೀಳಿಗೆಯವರು ಮತ್ತು ಸೈದ್ಧಾಂತಿಕ ಅನುಯಾಯಿಗಳಿಗೆ ಮುಕ್ತ ಅಭಿವ್ಯಕ್ತಿಯೆಡೆಗೆ ಇಂತಹ ತಾತ್ವಿಕ ಬದ್ಧತೆ ಇಲ್ಲ.
ಜನಾಂಗೀಯ ಹಿಂಸೆಯ ಇತಿಹಾಸವಿರುವ, ಬಹುಧಾರ್ಮಿಕ ಸಮಾಜದಲ್ಲಿ ಕೃಷ್ಣ, ಮೊಹಮ್ಮದ್, ಕ್ರಿಸ್ತ ಅಥವಾ ಗುರು ನಾನಕ್ ಅವರಂತಹ ಧಾರ್ಮಿಕ ಸಂಕೇತಗಳನ್ನು ಚಿತ್ರಿಸುವಾಗ ಅಥವಾ ವಿವರಿಸುವಾಗ ಕಲಾವಿದರು ಮತ್ತು ಲೇಖಕರು ಹೆಚ್ಚು ಸೂಕ್ಷ್ಮತೆ ತೋರಬೇಕಾದ ಅಗತ್ಯ ಬಹುಶಃ ಇದೆ. ಆದರೆ, ಇತಿಹಾಸದ ವ್ಯಕ್ತಿಗಳ ಜೀವನ ಮತ್ತು ಅವರ ಪರಂಪರೆಯನ್ನು ಪ್ರಾಮಾಣಿಕವಾಗಿ ಚರ್ಚಿಸಲು ಸಾಧ್ಯವಿಲ್ಲ ಎಂದಾದರೆ ಅದು ನಮ್ಮ ಪ್ರಜಾತಂತ್ರದ ಆರೋಗ್ಯಕ್ಕೆ ಒಳ್ಳೆಯದಲ್ಲ.

ಈ ಪ್ರಬಂಧದ ಆರಂಭದಲ್ಲಿ ಪರಿಚಯಿಸಿದ ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಖ್ಯೆಗೆ ಮತ್ತೆ ಹಿಂದಿರುಗೋಣ. ಆತ್ಮಗೌರವ ಇರುವ ಯಾವುದೇ ಪ್ರಜಾತಂತ್ರದಲ್ಲಿ ‘ಯಾವುದೇ ಪುರುಷ ಅಥವಾ ಮಹಿಳೆ ತಾವು ಆಯ್ಕೆ ಮಾಡುವ ಅಭಿಪ್ರಾಯವನ್ನು ಹೊಂದುವ ಮತ್ತು ಅದು ಎಲ್ಲಿಯವರೆಗೆ ಇತರರ ಮೇಲೆ ದೈಹಿಕ ಹಿಂಸೆ ಮಾಡುವುದಿಲ್ಲ ಮತ್ತು ಹಿಂಸೆಯನ್ನು ಪ್ರತಿಪಾದಿಸುವುದಿಲ್ಲವೋ ಅಲ್ಲಿವರೆಗೆ ಅದನ್ನು ಅನುಷ್ಠಾನಗೊಳಿಸುವ ಹಕ್ಕನ್ನು ಹೊಂದಿರುತ್ತಾರೆ’ ಎಂದು ಹಿಂದ್ ಸ್ವರಾಜ್ ಪುಸ್ತಕವನ್ನು ಭಾರತದ ಬ್ರಿಟಿಷ್ ಸರ್ಕಾರ ನಿಷೇಧಿಸಿದಾಗ ಗಾಂಧಿ ಹೇಳಿದ್ದನ್ನು ಸ್ವಲ್ಪ ಮಾರ್ಪಡಿಸಿ ನಾನು ಹೇಳಿದ್ದೆ. ಈ ಮಾನದಂಡದ ಪರೀಕ್ಷೆಯಲ್ಲಿ ಭಾರತದ ಪ್ರಜಾತಂತ್ರ ಅನುತ್ತೀರ್ಣಗೊಳ್ಳುತ್ತದೆ. ಪುಸ್ತಕಗಳು, ಸಿನಿಮಾಗಳು ಅಥವಾ ಕಲಾಕೃತಿಗಳನ್ನು ನಿಷೇಧಿಸಲು ಅಥವಾ ಪ್ರಸಾರದಿಂದ ಹಿಂದಕ್ಕೆ ಪಡೆಯಲು ಅವುಗಳು ಯಾವುದೇ ರೀತಿಯಲ್ಲಿ ದೈಹಿಕ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ ಅಥವಾ ಹಿಂಸೆಗೆ ಕಾರಣವಾಗುವುದಿಲ್ಲ ಎಂದಾದರೂ ಭಾರತದ ನ್ಯಾಯಾಲಯಗಳು ಮತ್ತು ಸರ್ಕಾರಗಳು ಸ್ವಯಂ ಆಗಿ ಅಥವಾ ಚಳವಳಿಕಾರರ ಒತ್ತಡದಿಂದಾಗಿ ಹಿಂದಕ್ಕೆ ಪಡೆಯಲು ಸದಾ ಸಿದ್ಧವಾಗಿರುತ್ತವೆ. ಈ ಕೃತಿಗಳು ಕೆಲವರ ಅತೃಪ್ತಿಗೆ ಕಾರಣವಾಗಿರಬಹುದು ಎಂಬುದಷ್ಟೇ ಅದಕ್ಕೆ ಕಾರಣ. ಯಾವುದೇ ಪ್ರಬುದ್ಧ ಪ್ರಜಾತಂತ್ರದಲ್ಲಿ, ಒಂದು ಪುಸ್ತಕದ ವಾದ ಇಷ್ಟವಾಗುವುದಿಲ್ಲ ಎಂದಾದರೆ ಅದಕ್ಕೆ ಖಂಡಿತವಾಗಿಯೂ ಉತ್ತರ ಇನ್ನೊಂದು ಪುಸ್ತಕ. ಒಂದು ಸಿನಿಮಾದ ವಿಷಯ ಅಥವಾ ಧಾಟಿಯನ್ನು ಒಪ್ಪುವುದಿಲ್ಲ ಎಂದಾದರೆ ಅದನ್ನು ನಿಷೇಧಿಸುವುದು ಬಹಳ ಸುಲಭ. ಆದರೆ, ಕಲಾತ್ಮಕ ಮತ್ತು ಸಾಹಿತ್ಯಕ ಕೃತಿಗಳಿಂದ ಆಕ್ರೋಶಗೊಂಡ ಗುಂಪುಗಳು ಘಾತುಕತನದ ವಿಧಾನಗಳ ಮೂಲಕ ನ್ಯಾಯಾಲಯ ಮತ್ತು ಸರ್ಕಾರದ ಮೇಲೆ ಒತ್ತಡ ಹೇರಿ ಕೃತಿಗಳನ್ನು ನಿಷೇಧಿಸುವುದು ಅಥವಾ ಹಿಂದಕ್ಕೆ ಪಡೆಯುವಂತೆ ಮಾಡುವುದು (ಸಾಮಾನ್ಯವಾಗಿ ಅವರಿಗೆ ಇದರಲ್ಲಿ ಯಶಸ್ಸು ದೊರೆಯುತ್ತದೆ) ನಮ್ಮ ಪ್ರಜಾತಂತ್ರವು ಪ್ರಬುದ್ಧತೆಯಿಂದ ಎಷ್ಟು ದೂರದಲ್ಲಿದೆ ಎಂಬುದನ್ನು ತೋರಿಸುತ್ತದೆ. ಇಲ್ಲಿ ನಮ್ಮ ವ್ಯಾಖ್ಯೆ ತಿರುವುಮುರುವಾಗಿದೆ; ಭಾರತದಲ್ಲಿ, ಲೇಖಕ ಅಥವಾ ಕಲಾವಿದ ಹಿಂಸೆ ಮಾಡದಿದ್ದಾಗ ಅಥವಾ ಹಿಂಸೆಯನ್ನು ಪ್ರತಿಪಾದಿಸದಿದ್ದಾಗ ಕೂಡ ಅವರ ಧ್ವನಿಯನ್ನು ಹತ್ತಿಕ್ಕುವುದಕ್ಕಾಗಿ ಅವರ ವಿರುದ್ಧವೇ ಹಿಂಸೆಯನ್ನು ಬಳಸಲಾಗುತ್ತದೆ ಅಥವಾ ಹಿಂಸೆಯ ಬೆದರಿಕೆ ಒಡ್ಡಲಾಗುತ್ತದೆ.

ಭಾರತೀಯರಲ್ಲಿ ಸೂಕ್ಷ್ಮ ಪ್ರವೃತ್ತಿ, ನೋಯುವ ಸ್ವಭಾವ, ಅಸಹಿಷ್ಣುತೆ ಹೆಚ್ಚುತ್ತಿದೆ. ಮತ್ತು  ನಮ್ಮಲ್ಲಿ ಹಾಸ್ಯಪ್ರಜ್ಞೆ ಕುಂಠಿತವಾಗುತ್ತಿರುವುದು ಇಲ್ಲಿ ಹೇಳಲೇಬೇಕಾದ ಮತ್ತೊಂದು ಅಂಶ.  ಚಾರಿತ್ರಿಕವಾಗಿ ನೋಡಿದರೆ ಹಿಂದೂ ಧರ್ಮದಲ್ಲಿ ದೈವನಿಂದೆ ಎಂಬ ಕಲ್ಪನೆ ಇಲ್ಲ. ಇಸ್ಲಾಂ ಅಥವಾ ಕ್ರೈಸ್ತ ಧರ್ಮದಂತಲ್ಲದೆ, ಹಿಂದೂ ಧರ್ಮದಲ್ಲಿ ದೇವರ ಬಗ್ಗೆ ಅಪಹಾಸ್ಯ ಮಾಡಿದರೂ ಅವರನ್ನು ಧರ್ಮಭ್ರಷ್ಟರು ಎಂದು ಕರೆಯಲಾಗುವುದಿಲ್ಲ. ಆದರೆ ಅದು ಈಗ ಬದಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂಗಳು ಕೂಡ ಮುಸ್ಲಿಮರು ಮತ್ತು ಕ್ರೈಸ್ತರಂತಾಗಿದ್ದಾರೆ. ಸಿಖ್ಖರು ಮತ್ತು ಜೈನರು ಕೂಡ ಇದೇ ರೀತಿ ಆಗಿದ್ದಾರೆ.

ಹಾಸ್ಯಪ್ರಜ್ಞೆರಹಿತ ನಮ್ಮ ಈ ಕಾಲದಲ್ಲಿ, ನಾನು ಆಗಾಗ ಓದುತ್ತಾ ಬೆಳೆದ ಮುಂಬೈಯ ಪಾರ್ಸಿ ವಿಡಂಬನಾ ಲೇಖಕ ‘ಬ್ಯುಸಿಬೀ’ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರಾಗಿದ್ದ ಬೆಹ್ರಾಂ ಕಾಂಟ್ರಾಕ್ಟರ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ಅವರು ಮೊದಲಿಗೆ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯಲ್ಲಿ, ನಂತರ ‘ಮಿಡ್‌ಡೇ’ ಮತ್ತು ಕೊನೆಗೆ ‘ಆಫ್ಟರ್‌ನೂನ್ ಡಿಸ್‌ಪ್ಯಾಚ್’ ಮತ್ತು ‘ಕೊರಿಯರ್’ ಪತ್ರಿಕೆಗಳಲ್ಲಿ ಮಿಂಚಿನಂತಹ ಅಂಕಣವೊಂದನ್ನು ಬರೆಯುತ್ತಿದ್ದರು. ಅವರ ನಿಧನಾನಂತರ ಅವರ ಹೆಂಡತಿ ಫರ್ಜಾನಾ ಈ ಅಂಕಣಗಳನ್ನು ಸಂಕಲಿಸಿ ಹಲವು ಪುಸ್ತಕಗಳನ್ನು ಪ್ರಕಟಿಸಿದರು. ನಾನು ಅವನ್ನು ಮತ್ತೆ ಮತ್ತೆ ಓದುತ್ತಿರುತ್ತೇನೆ. ಬ್ಯುಸಿಬೀ ಅತ್ಯುತ್ತಮ ವಿಡಂಬನಾಕಾರ. ಅವರು ಜೀವನ, ಜಗತ್ತು ಮತ್ತು ಈ ಯಾವುದಕ್ಕೂ ಕಡಿಮೆ ಇಲ್ಲದಂತೆ ತಮ್ಮದೇ ಪಾರ್ಸಿ ಸಮುದಾಯದ ಇತರರನ್ನು ಹಾಸ್ಯ ಮಾಡುತ್ತಿದ್ದರು.

ಈಗಲೂ ತಮ್ಮ ಬಗ್ಗೆ ತಾವೇ ನಗಲು ಬಯಸುವ ಏಕೈಕ ಸಮುದಾಯ ಭಾರತದಲ್ಲಿ ಪಾರ್ಸಿಗಳದ್ದು ಮಾತ್ರ.  ಪುಣೆಯಲ್ಲಿ ಬೆಳೆದ ಪಾರ್ಸಿ ಲೇಖಕ ಫಾರೂಕ್ ಧೋಂಡಿ ಅವರಿಂದ ನಾನು ಇತ್ತೀಚೆಗೆ ಸುಂದರವಾದ ಕತೆಯೊಂದನ್ನು ಕೇಳಿದೆ. ಅವರಿಗೆ ಅದನ್ನು ಪಾಕಿಸ್ತಾನದ ಪಾರ್ಸಿ ಲೇಖಕಿ ಬಾಪ್ಸಿ ಸಿಧ್ವಾ ಹೇಳಿದ್ದರು. ಸಿಧ್ವಾ ಅವರನ್ನು ಒಮ್ಮೆ ಒಬ್ಬರು ಹೀಗೆ ಕೇಳಿದರಂತೆ: ‘ಯಾಕೆ ಪಾರ್ಸಿಗಳ ಸಂಖ್ಯೆ ಇಷ್ಟೊಂದು ಕಡಿಮೆ ಇದೆ, ನೀವು ಯಾಕೆ ಹೆಚ್ಚು ಮಕ್ಕಳನ್ನು ಹೊಂದಬಾರದು, ನಿಮ್ಮದು ಮುಗಿದು ಹೋಗುತ್ತಿರುವ ಜನಾಂಗ. ಸಮಸ್ಯೆ ಏನು?’ ಅದಕ್ಕೆ ಸಿಧ್ವಾ ಹೀಗೆಂದರಂತೆ: ‘ಇದರಲ್ಲಿ ಸಮಸ್ಯೆ ಇರುವುದು ಪಾರ್ಸಿ ಗಂಡಸರದ್ದು. ನಮ್ಮಲ್ಲಿನ ಅರ್ಧ ಭಾಗದಷ್ಟು ಪುರುಷರು ಸಲಿಂಗಿಗಳು. ಉಳಿದ ಅರ್ಧ ಭಾಗ ಮುಂಬೈಯಲ್ಲಿ ಪ್ರತಿಮೆಗಳಾಗಿದ್ದಾರೆ’.

ತಮಿಳ ಮತ್ತು ಒಬ್ಬ ಹಿಂದೂ ಆಗಿರುವ ನಾನು, ತಮಿಳರು ಅಥವಾ ಹಿಂದೂಗಳ ಬಗ್ಗೆ ಇದರ ಅರ್ಧದಷ್ಟು ಕುಚೇಷ್ಟೆಯ ಜೋಕ್ ಹೇಳಿದರೆ ಸಮುದಾಯವನ್ನು ನಿಂದಿಸಿದೆ ಎಂದು ಹೀಯಾಳಿಕೆಗೆ ಒಳಗಾಗದೆ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ? ನನಗೆ ಅನಿಸುವ ಹಾಗೆ ಸಾಧ್ಯವಿಲ್ಲ. ಹಾಸ್ಯಪ್ರಜ್ಞೆರಹಿತ ಸ್ಥಿತಿ ಹೆಚ್ಚುತ್ತಿರುವುದು ಅಸ್ಮಿತವಾದಿ ರಾಜಕಾರಣ ತೀವ್ರಗೊಳ್ಳುತ್ತಿರುವುದರ ಇನ್ನೊಂದು ಮುಖ. ಹಾಗೆಯೇ ಹಾಸ್ಯಪ್ರಜ್ಞೆ ಇಲ್ಲದೆ ಶ್ರೇಷ್ಠ ಸಾಹಿತ್ಯ ಸೃಷ್ಟಿಯಾಗುವುದು ಸಾಧ್ಯವಿಲ್ಲ.


4.ಪೊಲೀಸರ ಅಸಡ್ಡೆ
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ನಾಲ್ಕನೇ ಬೆದರಿಕೆ ಪೊಲೀಸ್ ಪಡೆಯ ವರ್ತನೆ. ಲೇಖಕರು ಮತ್ತು ಕಲಾವಿದರ

ಪರವಾಗಿ ನ್ಯಾಯಾಲಯಗಳು ನಿಂತಾಗಲೂ ಅವರಿಗೆ ಕಿರುಕುಳ ನೀಡುವ ‘ಗೂಂಡಾಗಳ’ ಪರವಾಗಿ ಸಾಮಾನ್ಯವಾಗಿ ಪೊಲೀಸರು ನಿಲ್ಲುತ್ತಾರೆ. ಶಿವಾಜಿಯ ಬಗ್ಗೆ ಜೇಮ್ಸ್ ಲೇನ್ ಅವರ ಪುಸ್ತಕವನ್ನು ಮಹಾರಾಷ್ಟ್ರ ಸರ್ಕಾರ ನಿಷೇಧಿಸಿದಾಗ ಬಾಂಬೆ ಹೈಕೋರ್ಟ್ ಅದನ್ನು ರದ್ದುಪಡಿಸಿತು. ರಕ್ಷಣೆ ಕೊಡುವಂತೆ ಪ್ರಕಾಶಕರು ಪೊಲೀಸರನ್ನು ಸಂಪರ್ಕಿಸಿದಾಗ ಅವರು ರಕ್ಷಣೆ ನೀಡಲು ನಿರಾಕರಿಸಿದರು. ಅಹಮದಾಬಾದ್‌ನಲ್ಲಿ ಪ್ರಸಿದ್ಧ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ ಮತ್ತು ಶ್ರೇಷ್ಠ ಚಿತ್ರಕಾರ ಮಕ್ಬೂಲ್ ಫಿದಾ ಹುಸೇನ್ ನಡುವಣ ಹುಸೇನ್ ದೋಷಿ ಗುಫಾ ಎಂಬ ಹೆಸರಿನ ಕಲಾ ಸಹಯೋಗದಲ್ಲಿ ಬಜರಂಗ ದಳದ ಗೂಂಡಾಗಳು ನಡೆಸಿದ ದಾಂದಲೆಯನ್ನು ಗುಜರಾತ್ ಪೊಲೀಸರು ನೋಡುತ್ತಾ ನಿಂತರು.


5.ಪುಕ್ಕಲು ರಾಜಕಾರಣಿಗಳು
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಐದನೇ ಬೆದರಿಕೆ ರಾಜಕಾರಣಿಗಳ

ಪುಕ್ಕಲುತನ ಅಥವಾ ಹೆಚ್ಚು ಸಾಮಾನ್ಯವಾಗಿ ಕಂಡು ಬರುವ ಮೋಸದ ಪ್ರವೃತ್ತಿ. ಭಾರತದ ಯಾವುದೇ ಪ್ರಮುಖ ಅಥವಾ ಪ್ರಮುಖವಲ್ಲದ ರಾಜಕಾರಣಿ, ಹಾಗೆಯೇ ಯಾವುದೇ ಪ್ರಮುಖ ಅಥವಾ ಪ್ರಮುಖವಲ್ಲದ ರಾಜಕೀಯ ಪಕ್ಷ ಘಾತುಕರು ಅಥವಾ ಮತಾಂಧರ ವಿರುದ್ಧ ಲೇಖಕರು, ಕಲಾವಿದರು ಅಥವಾ ಸಿನಿಮಾ ನಿರ್ದೇಶಕರ ಪರವಾಗಿ ಯಾವತ್ತೂ ನಿಂತೇ ಇಲ್ಲ ಎಂಬುದು ಸತ್ಯ. ಅಯಾತುಲ್ಲಾ ಖೊಮೇನಿ ಅವರ ಸರ್ಕಾರ ಸಲ್ಮಾನ್ ರಶ್ದಿ ಅವರ ‘ದ ಸಟಾನಿಕ್ ವರ್ಸಸ್’ ಕೃತಿಯ ವಿರುದ್ಧ ಫತ್ವಾ ಹೊರಡಿಸುವುದಕ್ಕೆ ಮೊದಲೇ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಕೃತಿಯ ಮೇಲೆ ನಿಷೇಧ ಹೇರಿದ್ದನ್ನು ನಾನು ಈಗಾಗಲೇ ಉಲ್ಲೇಖಿಸಿದ್ದೇನೆ. ಪಶ್ಚಿಮ ಬಂಗಾಳದಲ್ಲಿ, (ಸುಶಿಕ್ಷಿತ ಮತ್ತು ಸಾಹಿತ್ಯ ಪ್ರೇಮಿಗಳೆಂದು ಹೇಳಿಕೊಳ್ಳುತ್ತಿದ್ದ) ಕಮ್ಯುನಿಸ್ಟ್ ಮುಖ್ಯಮಂತ್ರಿಗಳಾಗಿದ್ದ ಜ್ಯೋತಿ ಬಸು ಮತ್ತು ಬುದ್ಧದೇವ ಭಟ್ಟಾಚಾರ್ಯ ಅವರು ತಸ್ಲೀಮಾ ನಸ್ರೀನ್ ಅವರ ಕಾದಂಬರಿಗಳನ್ನು ನಿಷೇಧಿಸಿದ್ದಾರೆ, ಮಾತ್ರವಲ್ಲ, ತಸ್ಲೀಮಾ ಅವರನ್ನು ರಾಜ್ಯದಿಂದ ಹೊರದಬ್ಬಿದ್ದಾರೆ.

ಬಿಜೆಪಿ ಹೊಂದಿರುವ ದಾಖಲೆಯೂ ಇದಕ್ಕಿಂತ ಉತ್ತಮವಾದುದೇನೂ ಅಲ್ಲ. ಹುಸೇನ್ ದೋಷಿ ಗುಫಾದಲ್ಲಿ ದಾಂದಲೆ ನಡೆದಾಗ ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದರು. ಅವರು ಅದೇ ಹುದ್ದೆಯಲ್ಲಿದ್ದಾಗಲೇ ಭಾರತದ ಶ್ರೇಷ್ಠ ಕಲಾವಿದರು ಕಲಿತಿದ್ದ ಅಥವಾ ಪಾಠ ಮಾಡಿದ್ದ ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಲ್ಲಿದ್ದ ದೇಶದ ಅತ್ಯುತ್ತಮ ಕಲಾ ವಿಭಾಗವನ್ನು ಹಿಂದುತ್ವ ಕಾರ್ಯಕರ್ತರು ಸಂಪೂರ್ಣವಾಗಿ ನಾಶ ಮಾಡಿದ್ದರು. ಪ್ರಾದೇಶಿಕ ಪಕ್ಷಗಳ ಮುಖಂಡರತ್ತ ಬಂದರೆ, ತಮಿಳುನಾಡಿನ ಕೆಲವು ಧರ್ಮರಕ್ಷಕರು ಕಾದಂಬರಿಕಾರ ಪೆರುಮಾಳ್ ಮುರುಗನ್ ಅವರು ಬರೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಅವರ ಮೇಲೆ ಒತ್ತಡ ಹೇರುತ್ತಿದ್ದಾಗ ಅವರನ್ನು ರಕ್ಷಿಸಲು ಜಯಲಲಿತಾ ಆಗಲಿ, ಕರುಣಾನಿಧಿ ಆಗಲಿ ಏನನ್ನೂ ಮಾಡಲಿಲ್ಲ.

ಈ ರಾಜಕಾರಣಿಗಳು ಕೈಗೊಳ್ಳುವ ಕ್ರಮಗಳು (ಅಥವಾ ಕ್ರಮ ಕೈಗೊಳ್ಳದಿರುವುದು) ಮುಖ್ಯವಾಗಿ ಚುನಾವಣಾ ಪರಿಗಣನೆಗಳ ಆಧಾರದಲ್ಲೇ ಆಗಿರುತ್ತವೆ. ಯಾವುದೇ ಒಂದು ಜಾತಿ, ಸಮುದಾಯ ಅಥವಾ ಧಾರ್ಮಿಕ ಗುಂಪಿಗೆ ಅತೃಪ್ತಿ ಉಂಟು ಮಾಡಲು ಅಥವಾ ಅತೃಪ್ತಿ ಉಂಟು ಮಾಡುವಂತೆ ತೋರಿಸಿಕೊಳ್ಳಲು ಇವರು ಬಯಸುವುದಿಲ್ಲ. ಹಾಗೆ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಅವರು ತಮ್ಮ ವಿರುದ್ಧ ಮತ ಚಲಾಯಿಸಬಹುದು ಎಂದು ಇವರು ಭಾವಿಸುತ್ತಾರೆ.

ಲೇಖಕರು ಅಥವಾ ಕಲಾವಿದರ ಮೇಲೆ ದಾಳಿ ನಡೆಸುವ ದುಷ್ಕರ್ಮಿಗಳು ತಮ್ಮ ಜಾತಿ ಅಥವಾ ಸಮುದಾಯದ ಮೇಲೆ ಅತಿಯಾದ ಪ್ರಭಾವ ಹೊಂದಿದ್ದಾರೆ ಎಂದು ಬಹುತೇಕ ಎಲ್ಲ ಪ್ರಕರಣಗಳಲ್ಲಿಯೂ ರಾಜಕಾರಣಿಗಳು ತಪ್ಪಾಗಿ ಗ್ರಹಿಸಿಕೊಳ್ಳುತ್ತಾರೆ. ಜತೆಗೆ, ರಾಜಕಾರಣಿಗಳಿಗೆ ಕಲಾತ್ಮಕ ಅಥವಾ ಸಾಹಿತ್ಯಕ ಸ್ವಾತಂತ್ರ್ಯದ ಬಗ್ಗೆ ಇರುವ ಆಸಕ್ತಿಯೂ ಅಷ್ಟಕ್ಕಷ್ಟೇ ಆಗಿರುವುದರಿಂದ ಸಣ್ಣ ಪ್ರಮಾಣದ ಮತಗಳನ್ನು ಕೂಡ ಕಳೆದುಕೊಳ್ಳಲು ಅವರು ಸಿದ್ಧರಿರುವುದಿಲ್ಲ.

2006ರಲ್ಲಿ ಭಾರತದ ವಿವಿಧ ಭಾಗಗಳಲ್ಲಿನ ನ್ಯಾಯಾಲಯಗಳಲ್ಲಿ ಹಿಂದುತ್ವ ತೀವ್ರವಾದಿಗಳು ಎಂ.ಎಫ್. ಹುಸೇನ್ ವಿರುದ್ಧ ದಾಖಲಿಸಿದ ಪ್ರಕರಣಗಳಿಂದಾಗಿ ಅವರು ಅನಿವಾರ್ಯವಾಗಿ ದೇಶಭ್ರಷ್ಟರಾಗಬೇಕಾಯಿತು. 2009ರಲ್ಲಿ ಮತ್ತು ನಂತರ 2010ರಲ್ಲಿ ಹುಸೇನ್ ಅವರಿಗೆ ಭಾರತರತ್ನ ಮತ್ತು ಸಲ್ಮಾನ್ ರಶ್ದಿ ಅವರಿಗೆ (ಮುಲ್ಲಾಗಳ ಮನಸ್ಸಿಗೆ ನೋವಾಗಬಹುದು ಎಂಬ ಕಾರಣಕ್ಕೆ ಭಾರತದಲ್ಲಿ ಮಾತನಾಡುವುದಕ್ಕೆ ಅವರಿಗೆ ನಿಷೇಧ ಹೇರಲಾಗಿತ್ತು) ಪದ್ಮವಿಭೂಷಣ ಪ್ರಶಸ್ತಿ ನೀಡುವಂತೆ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲಹೆ ನೀಡಲಾಗಿತ್ತು. ಇದು ಈ ಇಬ್ಬರ ಕಲಾತ್ಮಕ ಸಾಧನೆಗೆ ನ್ಯಾಯಯುತ ಮತ್ತು ಸೂಕ್ತ ಮನ್ನಣೆ ಆಗುತ್ತಿತ್ತು. ಅದೇ ಹೊತ್ತಿಗೆ ಇದು ಹಿಂದೂ ಮತ್ತು ಹಾಗೆಯೇ ಮುಸ್ಲಿಂ ಧರ್ಮಾಂಧರಿಗೆ ನೀಡುವ ಉತ್ತರದ ಜತೆಗೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾದ ದೊಡ್ಡ ಕ್ರಮವಾಗುತ್ತಿತ್ತು. ಇದನ್ನು ಯಾರು ವಿರೋಧಿಸಬಹುದಿತ್ತು? ಮನಮೋಹನ್ ಸಿಂಗ್ ಅವರಿಗೆ ಈ ಪ್ರಸ್ತಾವದ ಮಹತ್ವದ ಅರಿವಾಗಿತ್ತು. ಆದರೆ ಅದನ್ನು ಅನುಷ್ಠಾನಕ್ಕೆ ತರುವ ಧೈರ್ಯ ಇರಲಿಲ್ಲ. 2011ರಲ್ಲಿ ಕತಾರ್‌ನಲ್ಲಿ ಹುಸೇನ್ ಮೃತಪಟ್ಟರು. ಹೀಗೆ ಭಾರತ ಪ್ರಜಾತಂತ್ರದ ಒಂದು ನಾಚಿಕೆಗೇಡಿನ ಅಧ್ಯಾಯ ಕೊನೆಗೊಂಡಿತು. ಆಗಿನ ಸರ್ಕಾರ ಹುಸೇನ್ ಅವರಿಗೆ ರಕ್ಷಣೆ ನೀಡಲು ನಿರಾಕರಿಸಿತು ಎಂಬ ಒಂದೇ ಕಾರಣಕ್ಕೆ ನಮ್ಮ ಶ್ರೇಷ್ಠ ಚಿತ್ರಕಾರ ತಾಯ್ನಾಡನ್ನು ತೊರೆಯಬೇಕಾಯಿತು.

ಎಲ್ಲ ಪಕ್ಷಗಳು ಮತ್ತು ಎಲ್ಲ ರೀತಿಯ ಸಿದ್ಧಾಂತಗಳನ್ನು ಹೊಂದಿರುವ ಭಾರತದ ರಾಜಕಾರಣಿಗಳು ಧರ್ಮಾಂಧರ ಮುಂದೆ ತಲೆ ಬಾಗುತ್ತಾರೆ. ಅವರು ಕೆಲವೊಮ್ಮೆ ಸಂಪಾದಕರು ಮತ್ತು ಪತ್ರಕರ್ತರನ್ನು ಬೆದರಿಸಲು ಅಧಿಕಾರವನ್ನು ಉಪಯೋಗಿಸುತ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೊಲ್ಲುವ ರಾಜಕಾರಣಿಗಳ ಅಧಿಕಾರಕ್ಕೆ ಭಾರತದ ನ್ಯಾಯ ವ್ಯವಸ್ಥೆಯ ಅಸಂಗತವಾದ ಒಂದು ಅಂಶವೂ ಪೂರಕವಾಗಿದೆ. ಬೇರೆ ಕ್ಷೇತ್ರಗಳಲ್ಲಿ ವ್ಯಾಪಾರಿ ಹಿತಾಸಕ್ತಿಗಳನ್ನು ಹೊಂದಿರುವ ಉದ್ಯಮಿಗಳು ಮಾಧ್ಯಮ ಸಂಸ್ಥೆಗಳನ್ನು ನಡೆಸುವುದಕ್ಕೆ ಇಲ್ಲಿ ಅವಕಾಶ ಇದೆ. ಯಾವುದಾದರೂ ಒಂದು ಪತ್ರಿಕೆಯು ಒಬ್ಬ ರಾಜಕಾರಣಿ ಅಥವಾ ಪಕ್ಷದ ವಿರುದ್ಧ ನಿರಂತರವಾಗಿ ಪ್ರತಿಕೂಲ ವರದಿಗಳನ್ನು ಪ್ರಕಟಿಸಿದರೆ, ಆ ಪತ್ರಿಕೆಯ ಮಾಲೀಕ ಒಂದು ರಾಸಾಯನಿಕ ಘಟಕ ಅಥವಾ ಒಂದು ಉಕ್ಕು ಕಾರ್ಖಾನೆ ಹೊಂದಿದ್ದರೆ ಕೈಗಾರಿಕಾ ಸಚಿವರು ಅವರಿಗೆ ಕರೆ ಮಾಡಿ ಪರವಾನಗಿ ನವೀಕರಿಸಲು ಸಮಯವಾಗಿದೆ ಎಂಬುದನ್ನು ನೆನಪಿಸಬಹುದು. ಇಂತಹ ಬೆದರಿಕೆಗಳು ಯಾವಾಗಲೂ ಸೂಕ್ಷ್ಮವಾಗಿ ಇರುವುದಿಲ್ಲ. ಇಂತಹ ಬೆದರಿಕೆಗಳು ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತಡೆ ಒಡ್ಡುತ್ತವೆ.

6.ಸರ್ಕಾರಿ ಜಾಹೀರಾತಿನ ಮೇಲೆ ಮಾಧ್ಯಮದ ಅವಲಂಬನೆ
ಸರ್ಕಾರಿ ಜಾಹೀರಾತಿನ ಮೇಲೆ ಮಾಧ್ಯಮದ ಅವಲಂಬನೆ ಅಭಿವ್ಯಕ್ತಿ ಸ್ವಾತಂತ್ರ್ಯದ ಆರನೇ ಬೆದರಿಕೆ. ಪ್ರಾದೇಶಿಕ ಮತ್ತು

ಅದಕ್ಕೂ ಕೆಳಗಿನ ಹಂತಗಳಲ್ಲಿರುವ ಮಾಧ್ಯಮದಲ್ಲಿ ಇದು ಹೆಚ್ಚು ತೀವ್ರವಾಗಿದೆ. ಉದಾಹರಣೆಗೆ, ಧಾರವಾಡದಿಂದ ಪ್ರಕಟವಾಗುವ ಕನ್ನಡ ಪತ್ರಿಕೆಯೊಂದು ಕರ್ನಾಟಕ ಸರ್ಕಾರ ನೀಡುವ ಟೆಂಡರ್, ನೇಮಕಾತಿ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳ ಜಾಹೀರಾತುಗಳ ಮೇಲೆ ದೊಡ್ಡ ಅವಲಂಬನೆ ಹೊಂದಿರುತ್ತದೆ. ಹಾಗಾಗಿ, ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ನಿರ್ಭೀತವಾಗಿ ಟೀಕಿಸುವ ಸಾಧ್ಯತೆ ಇಲ್ಲ.

‘ರಾಷ್ಟ್ರೀಯ’ ಮಾಧ್ಯಮ ಎಂದು ಕರೆದುಕೊಳ್ಳುವ ಮಾಧ್ಯಮ ತಲುಪಲು ಸಾಧ್ಯವಾಗದ ದೇಶದ ಮೂಲೆಗಳಲ್ಲಿ ಸ್ವತಂತ್ರ ವರದಿಗಾರಿಕೆಗೆ ಇರುವ ಬೆದರಿಕೆಗಳು ಇನ್ನೂ ತೀವ್ರ. 1988ರಲ್ಲಿ ನಾನು ಉತ್ತರಾಖಂಡದಲ್ಲಿ ಸಂಶೋಧನೆ ನಡೆಸುತ್ತಿದ್ದಾಗ ಉಮೇಶ್ ದೊಭಾಲ್ ಎಂಬ ದಿಟ್ಟ ಪತ್ರಕರ್ತನನ್ನು ಮದ್ಯ ಮಾಫಿಯ ಹತ್ಯೆ ಮಾಡಿತು. ಆದರೆ ರಾಜಕೀಯ ವರ್ಗದ ಜತೆ ಮದ್ಯ ಮಾಫಿಯ ಹೊಂದಿದ್ದ ನಿಕಟತೆ ಈ ಹತ್ಯೆಯ ತನಿಖೆಯನ್ನು ಭಗ್ನಗೊಳಿಸಿತು. ತೀರಾ ಇತ್ತೀಚೆಗೆ, ಛತ್ತೀಸಗಡದ ಬಸ್ತಾರ್‌ನಲ್ಲಿ, ಮಾವೊವಾದಿಗಳು ಮತ್ತು ಸರ್ಕಾರವೇ ರೂಪಿಸಿದ ಜನ ಸೇನೆಯ ನಡುವಣ ಅಂತರ್ಯುದ್ಧದ ಕರಾಳ ಮುಖಗಳನ್ನು ವರದಿ ಮಾಡುವುದನ್ನು ತಡೆಯುವುದಕ್ಕಾಗಿ ರಾಜ್ಯ ಸರ್ಕಾರ ಕೆಲವು ಪತ್ರಕರ್ತರನ್ನು ಬಂಧಿಸಿತು ಮತ್ತು ಕೆಲವರು ಈ ಪ್ರದೇಶವನ್ನು ತೊರೆದು ಹೋಗುವಂತೆ ಬಲವಂತ ಮಾಡಿತು.
ಉತ್ತರಾಖಂಡ ಮತ್ತು ಬಸ್ತಾರ್ ನಾನು ದೀರ್ಘ ಕಾಲದಿಂದ ಆಸಕ್ತನಾಗಿರುವ ಪ್ರದೇಶಗಳು. ಹಾಗೆ ನೋಡಿದರೆ, ಇಂತಹ ದಾಳಿಗಳು ದೇಶದ ಎಲ್ಲ ಭಾಗಗಳಲ್ಲಿಯೂ ನಡೆಯುತ್ತವೆ. ‘ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ’ದಲ್ಲಿ ಇತ್ತೀಚೆಗೆ ಭಾರತಕ್ಕೆ ದೊರೆತ ಸ್ಥಾನ 180ರಲ್ಲಿ 133. ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ ಮತ್ತು ರಷ್ಯಾಕ್ಕಿಂತ ಭಾರತ ಮೇಲಿದೆ (ಇದು ನಮ್ಮಲ್ಲಿ ಯಾವುದೇ ಸಮಾಧಾನ ಉಂಟು ಮಾಡಬಾರದು), ಆದರೆ ನೇಪಾಳದ ಸ್ಥಿತಿ ನಮಗಿಂತ ಉತ್ತಮವಾಗಿದೆ.

7.ಖಾಸಗಿ ಜಾಹೀರಾತಿನ ಪ್ರಭಾವ
ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಸ್ವತಂತ್ರ ವರದಿಗಾರಿಕೆಯನ್ನು ದಮನ ಮಾಡಲು ಅಥವಾ ತಡೆ ಒಡ್ಡಲು ಸಾಧ್ಯ

ಇದೆ ಮತ್ತು ಅದನ್ನು ಮಾಡಲಾಗುತ್ತದೆ. ಹಾಗೆಯೇ ಖಾಸಗಿ ವಲಯ ಕೂಡ ದಂಡನಾ ಕ್ರಮಗಳ ಬದಲಿಗೆ ಭೌತಿಕ ಅಂಶಗಳ ಮೂಲಕ ಇದನ್ನು ಮಾಡುತ್ತದೆ. ಹಾಗಾಗಿ, ವಾಣಿಜ್ಯ ಜಾಹೀರಾತುಗಳ ಮೇಲೆ ಮಾಧ್ಯಮದ ಅವಲಂಬನೆ ಅಭಿವ್ಯಕ್ತಿ ಸ್ವಾತಂತ್ರ್ಯದ ಏಳನೇ ಬೆದರಿಕೆಯಾಗಿದೆ. ಸ್ಥಿತಿವಂತ ಮಧ್ಯಮ ವರ್ಗವನ್ನು ಗುರಿಯಾಗಿರಿಸಿಕೊಂಡಿರುವ ಇಂಗ್ಲಿಷ್ ಭಾಷೆಯ ಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳಿಗೆ ಇದು ಹೆಚ್ಚು ಅನ್ವಯವಾಗುತ್ತದೆ. ಹಾನಿಕಾರಕ ಅಡ್ಡ ಪರಿಣಾಮಗಳನ್ನು ಉಂಟುಮಾಡುವ ಉತ್ಪನ್ನಗಳನ್ನು ತಯಾರಿಸುವ ಕಂಪೆನಿಗಳು ಟೀಕೆಗೆ ಒಳಗಾಗುವುದು ಬಹಳ ವಿರಳ. ಅವರು ಜಾಹೀರಾತು ನೀಡುವುದನ್ನು ನಿಲ್ಲಿಸಬಹುದು ಎಂಬ ಭಯ ಇದಕ್ಕೆ ಕಾರಣ. ತಮ್ಮ ಕಂಪೆನಿಗಳ ವಿರುದ್ಧ ವಿಮರ್ಶಾತ್ಮಕ ವರದಿಗಳನ್ನು ಪ್ರಕಟಿಸಿದ ಪತ್ರಿಕೆಗಳು ಅಥವಾ ಸುದ್ದಿ ವಾಹಿನಿಗಳಿಗೆ ನೀಡುತ್ತಿದ್ದ ಜಾಹೀರಾತುಗಳನ್ನು ಹಲವು ಪ್ರಮುಖ ಉದ್ಯಮ ಸಂಸ್ಥೆಗಳು ಹಿಂದಕ್ಕೆ ಪಡೆದ ನಿದರ್ಶನಗಳಿವೆ (ಟಾಟಾದಂತಹ ಸಂಸ್ಥೆಯೂ ಸೇರಿ).

ನನಗೆ ಚೆನ್ನಾಗಿ ಗೊತ್ತಿರುವ ಪರಿಸರ ಪತ್ರಿಕೋದ್ಯಮದಲ್ಲಿ ಮಾಧ್ಯಮದ ಸ್ವ ಸೆನ್ಸಾರ್‌ಶಿಪ್ ವ್ಯಾಪಕವಾಗಿದೆ. ರಾಸಾಯನಿಕ ಕಾರ್ಖಾನೆಗಳು, ಕಾಗದ ಕಾರ್ಖಾನೆಗಳು ಮತ್ತು ವಾಹನ ತಯಾರಿಕಾ ಕಂಪೆನಿಗಳು ಪರಿಸರಕ್ಕೆ ಭಾರಿ ಪ್ರಮಾಣದಲ್ಲಿ ಹಾನಿ ಉಂಟು ಮಾಡುತ್ತವೆ. ಇವರೆಲ್ಲರೂ ಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳಿಗೆ ದೊಡ್ಡ ಜಾಹೀರಾತುದಾರರು. ದೊಡ್ಡ ಜಾಹೀರಾತುದಾರರಿಂದ ಉಂಟಾಗುವ ಪರಿಸರ ನಾಶದ ಪುರಾವೆಗಳನ್ನು ಒದಗಿಸಿದಾಗ ಮಾಧ್ಯಮದ ಮಾಲೀಕರು ಮತ್ತು ಕೆಲವೊಮ್ಮೆ ಸಂಪಾದಕರು ಇದು ಅತಿಯಾದ ಪ್ರಚಾರ ದೊರೆಯುವುದನ್ನು ತಡೆಯಲು ಬಯಸುತ್ತಾರೆ. ಹಿಂದೆ, 1980ರ ದಶಕದಲ್ಲಿ ಭಾರತದ ಪ್ರತಿ ಪ್ರಮುಖ ಪತ್ರಿಕೆಯೂ  ಪ್ರತ್ಯೇಕ ಪರಿಸರ ವರದಿಗಾರನನ್ನು ಹೊಂದಿತ್ತು. ಗ್ರಾಹಕವಾದ ಉಚ್ಛ್ರಾಯ ಸ್ಥಿತಿಯಲ್ಲಿರುವ ಇಂದು ಅವರೆಲ್ಲರನ್ನೂ ಮನೆಗೆ ಕಳುಹಿಸಲಾಗಿದೆ ಅಥವಾ ಹೆಚ್ಚು ವಿಧೇಯವಾದ ಬೇರೆ ಕೆಲಸಗಳನ್ನು ನೀಡಲಾಗಿದೆ.
ಜಾಹೀರಾತುದಾರರ ವಾಣಿಜ್ಯ ಬೆಂಬಲ ಇಲ್ಲದೆ ಸ್ವತಂತ್ರ ಮಾಧ್ಯಮ ನೆಲೆ ನಿಲ್ಲುವುದು ಸಾಧ್ಯವಿಲ್ಲ ಎಂಬುದು ಖಚಿತ. ಸೋವಿಯತ್ ಒಕ್ಕೂಟದಂತಹ ಕಮ್ಯುನಿಸ್ಟ್ ದೇಶಗಳಷ್ಟು ಮಾಧ್ಯಮ ಸ್ವಾತಂತ್ರ್ಯ ಕಡಿಮೆ ಇರುವ ಬೇರೆ ದೇಶವೇ ಇಲ್ಲ. ಇಲ್ಲಿನ ಎರಡು ಮುಖ್ಯ ಪತ್ರಿಕೆಗಳ ರಷ್ಯನ್ ಹೆಸರಿನ ಅರ್ಥ ‘ಸತ್ಯ’ (ಪ್ರಾವ್ಡಾ) ಮತ್ತು ‘ಸುದ್ದಿ’ (ಇಜ್‌ವೆಸ್ಟಿಯಾ). ಇಲ್ಲಿ, ಸತ್ಯದಲ್ಲಿ ಸುದ್ದಿಯೂ ಸುದ್ದಿಯಲ್ಲಿ ಸತ್ಯವೂ ಇರುತ್ತಿರಲಿಲ್ಲ. ಪಶ್ಚಿಮ ಯುರೋಪ್ ಅಥವಾ ಅಮೆರಿಕದಂತಲ್ಲದೆ, ಭಾರತದಲ್ಲಿ ಕೆಲವೇ ಉದ್ಯಮ ಸಮೂಹಗಳು ಜಾಹೀರಾತು ಮಾರುಕಟ್ಟೆಯಲ್ಲಿ ದೊಡ್ಡ ಪಾಲು ಹೊಂದಿವೆ. ಹೀಗಾಗಿ, ಇವು ಮಾಧ್ಯಮ ಮಾಲೀಕರು ಮತ್ತು ಸಂಪಾದಕರ ಮೇಲೆ ಅಪಾರವಾದ ಒತ್ತಡವನ್ನೂ ಹೇರಬಲ್ಲವವಾಗಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಜಗತ್ತಿನ ಇತರ ದೇಶಗಳಲ್ಲಿರುವ ಮಾಧ್ಯಮ ಮಾಲೀಕರು ಮತ್ತು ಸಂಪಾದಕರಿಗೆ ಹೋಲಿಸಿದರೆ ಭಾರತದಲ್ಲಿರುವವರು ತಲೆ ಭಾಗುವ ಸಂಭವ ಹೆಚ್ಚು.

ಭಾರತದಲ್ಲಿ ಮಾಧ್ಯಮ ವರ್ತನೆಯನ್ನು ವಿರೂಪಗೊಳಿಸುವ ವಾಣಿಜ್ಯ ಹಿತಾಸಕ್ತಿಯ ವಿಲಕ್ಷಣ ಅಭಿವ್ಯಕ್ತಿಯಾಗಿ ಕೆಲವೊಮ್ಮೆ ಲೇಖಕರು ಮತ್ತು ಕಲಾವಿದರ ಮೇಲಿನ ದಾಳಿಗೆ ಸುದ್ದಿ ವಾಹಿನಿಗಳು ಪ್ರೋತ್ಸಾಹ ನೀಡುವುದನ್ನು ಕಾಣಬಹುದು. ಪತ್ರಕರ್ತನೊಬ್ಬನ ಮನೆ ಅಥವಾ ಕಲಾ ಪ್ರದರ್ಶನಕ್ಕೆ ‘ನೊಂದಿದ್ದೇವೆ’ ಎಂದು ಹೇಳಿಕೊಳ್ಳುವ ಗೂಂಡಾಗಳು ದಾಳಿ ನಡೆಸಿ ದಾಂದಲೆ ಮಾಡುವ ಮಾಹಿತಿ ಸಿಕ್ಕರೂ ಕೆಲವು ಸುದ್ದಿ ವಾಹಿನಿಗಳು ಅದನ್ನು ಪೊಲೀಸರಿಗೆ ತಿಳಿಸುವ ಬದಲು, ಕಾನೂನುಬಾಹಿರ ದಾಳಿಯ ‘ಎಕ್ಸ್‌ಕ್ಲೂಸಿವ್’, ‘ಲೈವ್’ ಸುದ್ದಿ ನೀಡಲು ಬಯಸುತ್ತವೆ.

8. ಲೇಖಕರ ಸ್ವಾರ್ಥ
ಈಗ ನಾನು ಅಭಿವ್ಯಕ್ತಿ ಸ್ವಾತಂತ್ರ್ಯ ಎದುರಿಸುವ ಎಂಟನೆಯ ಮತ್ತು ಕೊನೆಯ ಬೆದರಿಕೆಗೆ ಬರುತ್ತೇನೆ. ಇದರಲ್ಲಿ

ಒಳಗೊಂಡಿರುವವರು ಸ್ವಾರ್ಥಿ ಅಥವಾ ಸಿದ್ಧಾಂತವನ್ನೇ ಗಟ್ಟಿ ಹಿಡಿದು ಸಾಗುವ ಲೇಖಕರು. ಹೆಚ್ಚಿನ ಲೇಖಕರು ಮತ್ತು ಕಲಾವಿದರು ರಾಜಕೀಯ ಮತ್ತು ಸಮಾಜದ ಬಗ್ಗೆ ಬಲವಾದ ಅಭಿಪ್ರಾಯವನ್ನು ಹೊಂದಿರುತ್ತಾರೆ. ಈ ಕಾರಣಕ್ಕಾಗಿಯೇ ನಾವು ಬರೆಯುತ್ತೇವೆ, ಅದಕ್ಕಾಗಿಯೇ ನಾವು ಚಿತ್ರ ಬಿಡಿಸುತ್ತೇವೆ, ಅದಕ್ಕಾಗಿಯೇ ನಾವು ಸಿನಿಮಾ ಮಾಡುತ್ತೇವೆ ಮತ್ತು ಅದಕ್ಕಾಗಿಯೇ ನಾವು ನಾಟಕ ಬರೆಯುತ್ತೇವೆ. ಯಾವುದೇ ಸೃಜನಶೀಲ ವ್ಯಕ್ತಿ ತನ್ನ ಸ್ವಾತಂತ್ರ್ಯವನ್ನು, ತನ್ನ ಆತ್ಮಸಾಕ್ಷಿಯನ್ನು ಯಾವುದೇ ರಾಜಕೀಯ ಪಕ್ಷಕ್ಕೆ ಒತ್ತೆ ಇರಿಸುವಷ್ಟು ಮೂರ್ಖ ಆಗಿರುವುದಿಲ್ಲ.

ದುರದೃಷ್ಟವೆಂದರೆ, ಭಾರತದಲ್ಲಿ ಹಲವು ಲೇಖಕರು, ವಿದ್ವಾಂಸರು, ಕಲಾವಿದರು ಮತ್ತು ಸಂಪಾದಕರು ಯಾವುದಾದರೂ ಒಂದು ಪಕ್ಷದ ಜತೆ ಅಥವಾ ಒಬ್ಬ ರಾಜಕಾರಣಿಯ ಜತೆ ಗುರುತಿಸಿಕೊಳ್ಳುತ್ತಾರೆ. ಈ ಸಂಬಂಧವೇ ಸತ್ಯವನ್ನು ದಮನ ಮಾಡಲು ಅಥವಾ ಅಭಿಪ್ರಾಯಗಳನ್ನು ತಿರುಚಲು ಕಾರಣವಾಗುತ್ತದೆ. ಈ ವಂಚನೆ- ಇದು ಸ್ವಲ್ಪ ಕಠಿಣ ಪದವಾದರೂ ಇಲ್ಲಿ ಸಂಪೂರ್ಣ ಸಮರ್ಥನೀಯ- ಎಲ್ಲಡೆಯೂ ಕಂಡು ಬರುತ್ತಿದೆ. ಈ ಲೇಖಕರು ಮತ್ತು ಕಲಾವಿದರು ಭಾರತೀಯ ಜನತಾ ಪಕ್ಷದ ಪರ ಪ್ರಚಾರ ನಡೆಸುತ್ತಾರೆ; ಕೆಲವು ಲೇಖಕರು ಮತ್ತು ಕಲಾವಿದರು ಕಾಂಗ್ರೆಸ್ ಪಕ್ಷದ ಸಮರ್ಥಕರಾಗುತ್ತಾರೆ; ಕೆಲವರು ಸಿಪಿಎಂನ ವಕ್ತಾರರಾಗುತ್ತಾರೆ; ಲೇಖಕರು ಮತ್ತು ಕಲಾವಿದರು ಮಾವೊವಾದಿಗಳಿಗೆ ಉಪಯುಕ್ತರಾದ ಮೂರ್ಖರಾಗುತ್ತಾರೆ. ಕೆಲವೊಮ್ಮೆ ಸೈದ್ಧಾಂತಿಕ ಪೂರ್ವಗ್ರಹದಿಂದ ಸತ್ಯ ದಮನಕ್ಕೆ ಒಳಗಾಗುತ್ತದೆ; ಪಕ್ಷದ ಹಿತಾಸಕ್ತಿಯೇ ಸತ್ಯಕ್ಕಿಂತ ಹೆಚ್ಚು ಮುಖ್ಯ ಎಂದು ಲೇಖಕರು ಭಾವಿಸುತ್ತಾರೆ. ಕೆಲವೊಮ್ಮೆ ಭ್ರಷ್ಟಚಾರದಿಂದ ಆಗುವ ಲಾಭದ ಕಾರಣಕ್ಕೆ, ಲೇಖಕರು ಅಥವಾ ಸಂಪಾದಕರು ತುಂಡು ನೆಲಕ್ಕಾಗಿ ಅಥವಾ ರಾಜ್ಯಸಭೆಯ ಸ್ಥಾನಕ್ಕಾಗಿ ಅಥವಾ ಸರ್ಕಾರದಲ್ಲಿನ ಯಾವುದೋ ಹುದ್ದೆಗಾಗಿ, ರಾಯಭಾರಿಯಾಗುವುದಕ್ಕಾಗಿ ಸತ್ಯವನ್ನು ಮರೆ ಮಾಚುತ್ತಾರೆ.

ಪಕ್ಷದೊಂದಿಗಿನ ಗುರುತಿಸುವಿಕೆ ಆಯ್ದ ಅಂಶಗಳ ಬಗ್ಗೆ ಮಾತ್ರ ಆಕ್ರೋಶಗೊಳ್ಳುವುದಕ್ಕೆ ಕಾರಣವಾಗುತ್ತದೆ; ಲೇಖಕರು ಮತ್ತು ಕಲಾವಿದರು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಕೆಲವು ಬೆದರಿಕೆಗಳಿಗೆ ಮಾತ್ರ ಗಮನ ಕೇಂದ್ರೀಕರಿಸಿ ಇತರ ಕೆಲವನ್ನು ನಿರ್ಲಕ್ಷಿಸುತ್ತಾರೆ. ಎಂ.ಎಫ್. ಹುಸೇನ್ ಪರವಾಗಿ ಎಡಪಂಥೀಯ ಗುಂಪು ಸಹಮತ್ ಅತ್ಯಂತ ದಿಟ್ಟವಾದ ಅಭಿಯಾನವನ್ನು ನಡೆಸಿತು; ಆದರೆ ಪಶ್ಚಿಮ ಬಂಗಾಳದ ಎಡರಂಗದ ಸರ್ಕಾರ ತಸ್ಲೀಮಾ ನಸ್ರೀನ್ ಅವರನ್ನು ನಡೆಸಿಕೊಂಡ ರೀತಿಯ ಬಗ್ಗೆ ಚಕಾರವನ್ನೂ ಎತ್ತಲಿಲ್ಲ. ತಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಭಾರತದ ಮಾರ್ಕ್ಸ್‌ವಾದಿಗಳು ಗಟ್ಟಿ ಧ್ವನಿ ಎತ್ತುತ್ತಾರಾದರೂ ಚೀನಾ ಮತ್ತು ಕ್ಯೂಬಾದಲ್ಲಿ ಲೇಖಕರ ಮೇಲೆ ಹೇರಲಾಗುವ ಅನಾಗರಿಕ ಒತ್ತಡದ ಬಗ್ಗೆ ಏನನ್ನೂ ಹೇಳುವುದಿಲ್ಲ. ಇನ್ನೊಂದೆಡೆ, ಬಿಜೆಪಿಯೊಂದಿಗೆ ಗುರುತಿಸಿಕೊಳ್ಳುವ ಲೇಖಕರು ಸಲ್ಮಾನ್ ರಶ್ದಿ ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತಾರೆ. ಮುಸ್ಲಿಂ ಮೂಲಭೂತವಾದಿಗಳು ಮಾತ್ರ ರಶ್ದಿಯನ್ನು ವಿರೋಧಿಸುವುದು ಇದಕ್ಕೆ ಕಾರಣ. ಅದರ ಜತೆಗೆ, ಲೇಖಕರು ಮತ್ತು ಸಿನಿಮಾ ನಿರ್ದೇಶಕರ ಮೇಲೆ ಹಿಂದುತ್ವ ತೀವ್ರವಾದಿಗಳು ನಡೆಸುವ ದಾಳಿಯನ್ನು ಇವರು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾರೆ.
ಪಶ್ಚಿಮದ ಪ್ರಜಾತಂತ್ರಗಳಲ್ಲಿ ಇರುವಂತೆ ಭಾರತದಲ್ಲಿ ಸದಸ್ಯರ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವ ಸಹಕಾರಿ ಸಮಿತಿಗಳು ಇಲ್ಲದಿರುವುದು ಇಲ್ಲಿ ಪರಿಸ್ಥಿತಿಯನ್ನು ಇನ್ನಷ್ಟು ಕ್ಲಿಷ್ಟಕರವಾಗಿಸಿದೆ ಎಂಬುದು ಇನ್ನೊಂದು ವಾಸ್ತವ. ಭಾರತೀಯ ಪತ್ರಿಕಾ ಮಂಡಳಿ ಮತ್ತು ಸಂಪಾದಕರ ಸಂಘಟನೆಗಳಿಗೆ ಹಲ್ಲಿಲ್ಲ. ಮತ್ತೊಂದು ಗಮನಿಸಬೇಕಾದ ಅಂಶ ‘ಪೆನ್’ಗೆ  ಭಾರತದಲ್ಲಿ ಶಾಖೆ ಇಲ್ಲ.                               

ಹಾಗೆಯೇ ಸೆನ್ಸಾರ್‌ ವಿರುದ್ಧ ನಿರಂತರವಾಗಿ ಹೋರಾಡುವ ಸಾಮರ್ಥ್ಯ ಅಥವಾ ಇಚ್ಛೆ ಇರುವ ಸಿನಿಮಾ ನಿರ್ದೇಶಕರ ಅಖಿಲ ಭಾರತ ಮಟ್ಟದ ಸಂಘಟನೆಗಳೂ ಇಲ್ಲ. ಚಿಂತಕರನ್ನು ಬೆದರಿಕೆಗಳಿಂದ ಸಂರಕ್ಷಿಸುವುದಕ್ಕಾಗಿ ಅಕಾಡೆಮಿ ಫ್ರಾಂಕಾಯ್ಸ್ ಅಥವಾ ಬ್ರಿಟಿಷ್ ಅಕಾಡೆಮಿಯಂತಹ ಸಂಘಟನೆಗಳೂ ಭಾರತದಲ್ಲಿ ಇಲ್ಲ. ಲೇಖಕ ಅಥವಾ ಕಲಾವಿದ ಅಥವಾ ವಿದ್ವಾಂಸ ಅಥವಾ ಸಿನಿಮಾ ನಿರ್ದೇಶಕ ಅಥವಾ ಪತ್ರಕರ್ತನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆದರಿಕೆ ಎದುರಾದಾಗ ಅದನ್ನು ಸಾಮಾನ್ಯವಾಗಿ ಆ ವ್ಯಕ್ತಿಯೇ ಏಕಾಂಗಿಯಾಗಿ ಎದುರಿಸಬೇಕಾದಂತಹ ಪರಿಸ್ಥಿತಿ ಇದೆ.
ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆದರಿಕೆ ಒಡ್ಡುವ ಎಂಟು ಅಂಶಗಳನ್ನು ನಾನು ಗುರುತಿಸಿದ್ದೇನೆ: ಪುರಾತನವಾದ ಕಾನೂನುಗಳು, ನ್ಯಾಯಾಂಗ ವ್ಯವಸ್ಥೆಯ ಅಸಮರ್ಪಕತೆಗಳು, ಅಸ್ತಿತ್ವವಾದಿ ರಾಜಕಾರಣದ ಬೆಳವಣಿಗೆ, ಬೆದರಿಕೆ ಒಡ್ಡುವವರೊಂದಿಗೆ ಪೊಲೀಸರ ಷಾಮೀಲಾಗುವಿಕೆ, ರಾಜಕೀಯ ವರ್ಗದ ಪುಕ್ಕಲುತನ, ಸರ್ಕಾರದ ಜಾಹೀರಾತಿನ ಮೇಲೆ ಮಾಧ್ಯಮದ ಅವಲಂಬನೆ, ವಾಣಿಜ್ಯ ಜಾಹೀರಾತುಗಳ ಮೇಲೆ ಮಾಧ್ಯಮದ ಅವಲಂಬನೆ, ಮತ್ತು ಕೊನೆಯದಾಗಿ, ಸಿದ್ಧಾಂತಬದ್ಧ ಅಥವಾ ಸ್ವಾರ್ಥಿ ಲೇಖಕರು, ಸಂಪಾದಕರು, ಕಲಾವಿದರು ಮತ್ತು ಸಿನಿಮಾ ನಿರ್ದೇಶಕರು. ಈ ಎಂಟು ಬೆದರಿಕೆಗಳು ಭಾರತದ ಪ್ರಜಾತಂತ್ರದ ನೈತಿಕ ಮತ್ತು ಸಾಂಸ್ಥಿಕ ನೆಲೆಗಟ್ಟನ್ನು ತಿಂದು ಹಾಕುತ್ತಿವೆ. ಚೀನಾ, ರಷ್ಯಾಗಳಂತಹ ಅರೆ ನಿರಂಕುಶಾಧಿಪತ್ಯದ ದೇಶಗಳಿಗೆ ಹೋಲಿಸಿದರೆ ನಮ್ಮ ಲೇಖಕರು, ಕಲಾವಿದರು ಮತ್ತು ಸಿನಿಮಾ ನಿರ್ದೇಶಕರು ಹೆಚ್ಚಿನ ಅಭಿವ್ಯಕ್ತಿ ಸ್ವಾತಂತ್ರ್ಯ ಹೊಂದಿದ್ದಾರೆ. ಆದರೆ ಸ್ವೀಡನ್ ಅಥವಾ ಕೆನಡಾದಂತಹ ಸಂಪೂರ್ಣ ಬೆಳೆದಿರುವ ಪ್ರಜಾತಂತ್ರಗಳಿಗೆ ಹೋಲಿಸಿದರೆ ನಮ್ಮಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲ ಎನ್ನಬಹುದು.

2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಅಸಹಿಷ್ಣುತೆ, ಲೇಖಕರು ಮತ್ತು ಕಲಾವಿದರ ಮೇಲಿನ ದಾಳಿಗಳ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಆದರೆ, ಕಾಂಗ್ರೆಸ್ ಆಗಲಿ, ಎಡ ಪಕ್ಷಗಳಾಗಲಿ ಅಥವಾ ಪ್ರಾದೇಶಿಕ ಪಕ್ಷಗಳಾಗಲಿ ತಾವು ಅಧಿಕಾರದಲ್ಲಿದ್ದಾಗ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪ್ರೋತ್ಸಾಹ ನೀಡುವ ಯಾವ ಕ್ರಮಗಳನ್ನೂ ಕೈಗೊಂಡಿಲ್ಲ. ಭಾರತಕ್ಕೆ ಸಂಬಂಧಿಸಿ ಕಲಾತ್ಮಕ ಅಥವಾ ಬೌದ್ಧಿಕ ಸ್ವಾತಂತ್ರ್ಯದ ಸುವರ್ಣ ಯುಗ ಎಂಬುದಿಲ್ಲ. ನೆಹರೂ ಮತ್ತು ಅಂಬೇಡ್ಕರ್ ವಾಕ್ ಸ್ವಾತಂತ್ರ್ಯವನ್ನು ನಿರ್ಬಂಧಿಸಿ ಕಾಯ್ದೆ ತಿದ್ದುಪಡಿ ಮಾಡಿದರು. ಇದು ಪರಿಸ್ಥಿತಿಯ ಒತ್ತಡಕ್ಕೆ ಒಳಗಾಗಿ  ಕೈಗೊಂಡ ಕ್ರಮ ಎನ್ನಬಹುದು. ಆದರೆ ಭಾರತದ ಒಗ್ಗಟ್ಟು ಖಚಿತವಾದಾಗ ಮತ್ತು ದೇಶದಲ್ಲಿ ಬಹುಪಕ್ಷೀಯ ಪ್ರಜಾತಂತ್ರ ಸ್ಥಾಪನೆಯಾದಾಗ ಈ ತಿದ್ದುಪಡಿಯನ್ನು ಯಾಕೆ ಕೈಬಿಟ್ಟಿಲ್ಲ? ಕಾಂಗ್ರೆಸ್‌ನ ಒಬ್ಬ ಪ್ರಧಾನಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದರೆ, ಇನ್ನೊಬ್ಬರು ‘ಸಟಾನಿಕ್ ವರ್ಸಸ್’ ಕೃತಿಯನ್ನು ನಿಷೇಧಿಸಿದರು; ನಮ್ಮ ದೇಶದ ಶ್ರೇಷ್ಠ ಕಲಾವಿದರೊಬ್ಬರು ತಾಯ್ನಾಡಿನಲ್ಲಿ ಜೀವಿಸಲು (ಮತ್ತು ಸಾಯಲು) ಅಗತ್ಯವಾದ ಸುರಕ್ಷತೆಯನ್ನು ಮತ್ತೊಬ್ಬ ಪ್ರಧಾನಿ ಒದಗಿಸಲಿಲ್ಲ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ಬಿಜೆಪಿ ಮತ್ತು ಆರ್‍ಎಸ್‍ಎಸ್ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದವು ಎಂದು

ಹೇಳುವುದಕ್ಕೂ ಸಾಧ್ಯವಿಲ್ಲ. ಆದರೆ, ತಮ್ಮದೇ ಆದ ತಪ್ಪುಗಳನ್ನು ಮಾಡಲು ಅವರಿಗೆ ಕಾಂಗ್ರೆಸ್‌ನ (ಮತ್ತು ಎಡಪಕ್ಷಗಳ) ಅಪರಾಧಗಳು ಸುಲಭ ದಾರಿ ಒದಗಿಸಿದವು. ಹಾಗಿದ್ದರೂ, ಈಗ ವಾಸ್ತವ ಪರಿಸ್ಥಿತಿ ಹಿಂದೆಂದಿಗಿಂತಲೂ ಕೆಟ್ಟದಾಗಿದೆ ಎಂಬುದು ನಿಜ. ಕೇಂದ್ರದಲ್ಲಿ ಈಗ ಇರುವ ಸರ್ಕಾರ ಭಾರತ ಕಂಡ ಅತ್ಯಂತ ದೊಡ್ಡ ಬೌದ್ಧಿಕತೆ ವಿರೋಧಿ ಸರ್ಕಾರ ಎಂಬುದರಲ್ಲಿ ಎರಡು ಮಾತಿಲ್ಲ. ಭಾರತೀಯ ಇತಿಹಾಸ ಸಂಶೋಧನಾ ಸಂಸ್ಥೆ, ಭಾರತೀಯ ಸಿನಿಮಾ ಮತ್ತು ಟೆಲಿವಿಷನ್ ಸಂಸ್ಥೆ ಮತ್ತು ಭಾರತೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಗಳಿಗೆ ಈ ಸರ್ಕಾರ ಮಾಡಿರುವ ನೇಮಕಗಳು ಬೌದ್ಧಿಕತೆ, ಸಾಹಿತ್ಯ ಮತ್ತು ಕಲೆಯ ಬಗ್ಗೆ ಹೊಂದಿರುವ ಸಂಪೂರ್ಣ ಅಸಡ್ಡೆಗೆ ಉದಾಹರಣೆಗಳಾಗಿವೆ. ಸರ್ಕಾರ ಮತ್ತು ಅದರ ಉನ್ನತ ನಾಯಕತ್ವದಲ್ಲಿ ಅರಸಿಕತೆ ಗಾಢವಾಗಿ ಹೆಣೆದುಕೊಂಡಿದೆ. ಚಿಂತಕರು, ಲೇಖಕರು ಮತ್ತು ಕಲಾವಿದರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬಲ್ಲರು ಎಂಬ ಭಾವನೆ ಪ್ರಧಾನಿಯಲ್ಲಿಯೇ ಇಲ್ಲ. ಸ್ವತಂತ್ರ ಚಿಂತನೆ ಮತ್ತು ಚಿಂತಕರ ಬಗೆಗಿನ ಈ ತಿರಸ್ಕಾರ ಮೇಲಿನಿಂದ ಕೆಳಗಿನವರೆಗೆ ಹರಿದು ಬಂದಿದೆ.
ಹಿಂದೆ, ಕೆಲವು ಲೇಖಕರ ಪುಸ್ತಕಗಳನ್ನು ಸುಡಲಾಗಿದೆ, ಕೆಲವು ನಿರ್ದೇಶಕರ ಸಿನಿಮಾಗಳನ್ನು ಸೆನ್ಸಾರ್‌ಗೆ ಒಳಪಡಿಸಲಾಗಿದೆ ಮತ್ತು ಕೆಲವು ಕಲಾವಿದರ ಕಲಾಕೃತಿಗಳನ್ನು ನಾಶ ಮಾಡಲಾಗಿದೆ. ಆದರೆ ಈಗ, ಬಹುಶಃ ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜನರ ಗೌರವ ಸಂಪಾದಿಸಿದ್ದ, ಗಂಭೀರ ಲೇಖಕರ ಹತ್ಯೆ ಮಾಡಲಾಗಿದೆ. ನಿಲುವುಗಳ ಕಾರಣಕ್ಕಾಗಿ ಅವರನ್ನು ನಿರ್ಮೂಲನೆ ಮಾಡಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಅಂತಹ ಮೂರು ಹತ್ಯೆಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಮಹಾರಾಷ್ಟ್ರದಲ್ಲಿ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪಾನ್ಸರೆ ಅವರ ಹತ್ಯೆಯಾದರೆ ಕರ್ನಾಟಕದಲ್ಲಿ ಎಂ.ಎಂ ಕಲಬುರ್ಗಿ ಅವರ ಹತ್ಯೆಯಾಗಿದೆ.

ಈ ಮೂವರೂ ಲೇಖಕರು ತಮ್ಮ ಮಾತೃಭಾಷೆಯಲ್ಲಿಯೇ ಬರೆಯುತ್ತಿದ್ದರು ಎಂಬುದು ಆಕಸ್ಮಿಕವಲ್ಲ. ಭಾರತದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಬರೆಯುವ ಲೇಖಕರು ಹೆಚ್ಚು ಸುರಕ್ಷಿತ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರು ಹೊಂದಿರುವ ಹೆಸರು ಮತ್ತು ಮಾಧ್ಯಮದಲ್ಲಿ ಅವರಿಗೆ ದೊರೆಯುವ ಆದ್ಯತೆಗಳು ಈ ಹೆಚ್ಚಿನ ಸುರಕ್ಷತೆಗೆ ಕಾರಣ. ಇದರ ಜತೆಗೆ, ಇಂಗ್ಲಿಷ್‌ನಲ್ಲಿ ಬರೆಯುವವರು ಉನ್ನತವಾದ ಸಣ್ಣ ವರ್ಗಕ್ಕೆ ಮಾತ್ರ ತಲುಪುವುದರಿಂದ ಮೂಲಭೂತವಾದಿ ಅಥವಾ ತೀವ್ರವಾದಿ ಶಕ್ತಿಗಳಿಗೆ ಇವರು ಕಡಿಮೆ ಅಪಾಯಕಾರಿ ಎಂಬಂತೆ ಕಾಣುವುದು ಇನ್ನೊಂದು ಕಾರಣ.
ನಾನು ಪ್ರಸ್ತಾಪಿಸಿರುವ ಮೂರೂ ಹತ್ಯೆಗಳ ರಾಜಕೀಯ ಸಂದರ್ಭಗಳು ಭಿನ್ನ. ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ದಾಭೋಲ್ಕರ್ ಹತ್ಯೆ ನಡೆಯಿತು. ಪಾನ್ಸರೆ ಹತ್ಯೆಯಾದಾಗ ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು. ಕಲಬುರ್ಗಿ ಹತ್ಯೆ ನಡೆದಾಗ ಕೇಂದ್ರದಲ್ಲಿ ಬಿಜೆಪಿ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆದರೆ, ಈ ಮೂರೂ ಹತ್ಯೆಗಳಲ್ಲಿ ಒಂದು ನಡುಕ ಹುಟ್ಟಿಸುವ ಸಾಮ್ಯತೆ ಇದೆ. ಈ ಮೂವರೂ ಹತ್ಯೆ ಆಗಿರುವುದು ತಮ್ಮ ನಾಸ್ತಿಕವಾದಿ ಮತ್ತು ವಿಚಾರವಾದಿ ನಿಲುವುಗಳಿಗಾಗಿ ಮತ್ತು ಹಿಂದೂ ಪರಂಪರೆಯ ವಿಮರ್ಶಾತ್ಮಕ ಹಾಗೂ ಸಂದೇಹವಾದಿ ಗ್ರಹಿಕೆಗಳಿಂದಾಗಿ. ಈ ಮೂವರನ್ನೂ ಹಿಂದೂ ಮೂಲಭೂತವಾದಿಗಳೇ ಹತ್ಯೆ ಮಾಡಿದ್ದಾರೆ ಎಂಬುದು ಬಹುತೇಕ ಖಚಿತ. ಹೀಗೆ ಈ ಪ್ರಕರಣಗಳು ಭಾರತವನ್ನು ನಾಸ್ತಿಕರು, ಜಾತ್ಯತೀತರು, ಕ್ರೈಸ್ತರು ಮತ್ತು ಹಿಂದೂಗಳನ್ನು ಮುಸ್ಲಿಂ ಮೂಲಭೂತವಾದಿಗಳು ಹತ್ಯೆ ಮಾಡುವ ಬಾಂಗ್ಲಾ ದೇಶದ ಪ್ರತಿಬಿಂಬವಾಗಿಸುತ್ತದೆ.

ನಾನು ದಶಕದ ಹಿಂದೆ ವರ್ಣಿಸಿದಂತೆ ಭಾರತ ಈಗಲೂ 50-50 ಪ್ರಜಾತಂತ್ರವೇ? ಸಮಾಜಗಳು ಮತ್ತು ದೇಶಗಳು ಯಾವತ್ತೂ ಸರಳ ರೇಖಾತ್ಮಕವಾಗಿ ಮುಂದಕ್ಕೆ ಸಾಗುವುದಿಲ್ಲ. ಒಂದು ಕ್ಷೇತ್ರದಲ್ಲಿ ಮುನ್ನಡೆ ಇದ್ದರೆ ಮತ್ತೊಂದರಲ್ಲಿ ಹಿನ್ನಡೆ ಇರುತ್ತದೆ. ಹತ್ತು ಅಥವಾ ಇಪ್ಪತ್ತೈದು ವರ್ಷಗಳ ಹಿಂದಿನ ದಿನಗಳಿಗೆ ಹೋಲಿಸಿದರೆ ಯುವ ಭಾರತೀಯರಿಗೆ (ವಿಶೇಷವಾಗಿ ನಗರಗಳಲ್ಲಿ) ಯಾವ ವೃತ್ತಿ ಆಯ್ಕೆ ಮಾಡಿಕೊಳ್ಳಬೇಕು ಮತ್ತು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ಈಗ ಹೆಚ್ಚಿನ ಸ್ವಾತಂತ್ರ್ಯ ಇದೆ. ಜಾತಿ ಮತ್ತು ಲಿಂಗ ಶ್ರೇಣೀಕರಣಗಳು ಈಗಲೂ ಬಹುಪಾಲು ಅಸ್ತಿತ್ವದಲ್ಲಿದ್ದರೂ ಅವುಗಳನ್ನು ಸಮರ್ಥಿಸಿಕೊಳ್ಳುವ ಸಿದ್ಧಾಂತಗಳು ಪ್ರಭಾವ ಕಳೆದುಕೊಂಡಿರುವುದು ಗಮನಾರ್ಹ. ಆದರೆ ಇನ್ನೊಂದು ಆಯಾಮದಿಂದ ನೋಡಿದರೆ, 1975-77ರ ತುರ್ತುಸ್ಥಿತಿಯ ನಂತರದ ಯಾವುದೇ ಕಾಲಕ್ಕೆ ಹೋಲಿಸಿದರೆ, ಲೇಖಕರು, ಕಲಾವಿದರು, ಸಿನಿಮಾ ನಿರ್ದೇಶಕರು ಕಡಿಮೆ ಸ್ವತಂತ್ರರಾಗಿದ್ದಾರೆ ಮತ್ತು ಹೆಚ್ಚು ದುರ್ಬಲರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT