ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ಮತದಾನ: ಕ್ರಮಕ್ಕೆ ಸೂಚನೆ

ನೀತಿ ಸಂಹಿತೆ: ಕಟ್ಟುನಿಟ್ಟಾಗಿರಲು ತಾಕೀತು
Last Updated 12 ಫೆಬ್ರುವರಿ 2016, 9:21 IST
ಅಕ್ಷರ ಗಾತ್ರ

ಕುಷ್ಟಗಿ: ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಗುರುವಾರ ಇಲ್ಲಿ ಅಧಿಕಾರಿಗಳಿಗೆ ಹೇಳಿದರು.

ಚುನಾವಣೆ ಸಿದ್ಧತೆಗೆ ಸಂಬಂಧಿಸಿದಂತೆ ಇಲ್ಲಿಯ ತಹಶೀಲ್ದಾರ್‌ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಭೆ ನಡೆಸಿದ ಅವರು, ಚುನಾವಣಾ ಕರ್ತವ್ಯದಲ್ಲಿ ಪಾಲ್ಗೊಳ್ಳುವ ಮತಗಟ್ಟೆ ಅಧಿಕಾರಿಗಳಿಗೆ ನಿಯಮಗಳ ಕುರಿತು ಮನವರಿಕೆ ಮಾಡಿಕೊಡುವಂತೆ ತಹಶೀಲ್ದಾರ್‌ ಅವರಿಗೆ ಸೂಚಿಸಿದರು. ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ವಿಷಯದಲ್ಲಿ ಕಟ್ಟುನಿಟ್ಟಾಗಿ ನಡೆದುಕೊಳ್ಳುವಂತೆ ತಾಕೀತು ಮಾಡಿದರು.

ನಂತರ ಸರ್ಕಾರಿ ಪದವಿ ಕಾಲೇಜಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಮತದಾನಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ವಿತರಿಸುವ ಮತ್ತು ಮತದಾನದ ನಂತರ ಸ್ವೀಕರಿಸುವ ಕೇಂದ್ರ ಹಾಗೂ ಮತ ಎಣಿಕೆ ಕೇಂದ್ರದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಎಲೆಕ್ಟ್ರಾನಿಕ್‌ ಮತಯಂತ್ರಗಳು ಬಳಕೆಯಾಗುತ್ತಿದ್ದು, ಬ್ಯಾಲೆಟ್‌ ಯೂನಿಟ್‌ದಲ್ಲಿ ಮತಪತ್ರ ಅಳವಡಿಸುವುದು ಮತ್ತು ದತ್ತಾಂಶ ಸಂಗ್ರಹಿಸುವ ಕಂಟ್ರೋಲ್‌ ಯೂನಿಟ್‌ ಯಂತ್ರಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಚರ್ಚಿಸಿ ಸಲಹೆ ಸೂಚನೆ ನೀಡಿದರು.

ತಾಲ್ಲೂಕಿನಲ್ಲಿ 218 ಮತಗಟ್ಟೆಗಳಿದ್ದು, ತಲಾ ಒಂದರಂತೆ ಬ್ಯಾಲಟ್‌ ಮತ್ತು ಕಂಟ್ರೋಲ್‌ ಯೂನಿಟ್‌ ಯಂತ್ರಗಳನ್ನು ನೀಡಲಾಗುತ್ತದೆ. ಈ ಮತಯಂತ್ರಗಳ ನಿರ್ವಹಣೆ ಮತ್ತು ಮತದಾನದಲ್ಲಿ ಅನುಸರಿಸಬೇಕಾದ ನೀತಿ ನಿಯಮಗಳ ಕುರಿತು ಮತಗಟ್ಟೆ ಅಧಿಕಾರಿ ಮತ್ತು ಸಹಾಯಕ ಅಧಿಕಾರಿಗಳಿಗೆ ಫೆ.14ರಂದು ಪದವಿ ಕಾಲೇಜಿನಲ್ಲಿ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್‌ ವೇದವ್ಯಾಸ ಮುತಾಲಿಕ್‌  ವಿವರಿಸಿದರು.

ಸರ್ಕಾರಿ ಪದವಿ ಕಾಲೇಜಿನಲ್ಲಿ ಮತಯಂತ್ರಗಳನ್ನು ಸಂಗ್ರಹಿಸಿಡಲು ತಾಲ್ಲೂಕು ಪಂಚಾಯಿತಿಯ 2 ಮತ್ತು ಜಿಲ್ಲಾ ಪಂಚಾಯಿತಿ 1 ಸ್ಟ್ರಾಂಗ್‌ ರೂಂ ಇರುತ್ತವೆ. ಮತ ಎಣಿಕೆಗೆ ತಾಲ್ಲೂಕು ಪಂಚಾಯಿತಿಗೆ 4 ಮತ್ತು ಜಿಲ್ಲಾ ಪಂಚಾಯಿತಿಗೆ 3 ಕೊಠಡಿಗಳನ್ನು ನಿಗದಿಪಡಿಸಲಾಗುತ್ತದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT