ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯ ಶಿಕ್ಷಕನಿಗೆ ಸಾರ್ವಜನಿಕರಿಂದ ಥಳಿತ

ಮೈಸೂರು ತಾಲ್ಲೂಕಿನ ಸಿದ್ದಲಿಂಗಪುರದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ
Last Updated 30 ಡಿಸೆಂಬರ್ 2015, 20:21 IST
ಅಕ್ಷರ ಗಾತ್ರ

ಮೈಸೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮೈಸೂರು ತಾಲ್ಲೂಕಿನ ಸಿದ್ದಲಿಂಗಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಾಮಮೂರ್ತಿಯನ್ನು (58) ಸಾರ್ವಜನಿಕರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರ ನಡೆದಿದೆ.

ಮೂಲತಃ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ರಾಮಮೂರ್ತಿ ಕುಟುಂಬ ಮೈಸೂರು ತಾಲ್ಲೂಕಿನ ನಾಗನಹಳ್ಳಿಯಲ್ಲಿ ನೆಲೆಸಿದೆ. ಸಿದ್ದಲಿಂಗಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 13 ವರ್ಷದ ವಿದ್ಯಾರ್ಥಿನಿಗೆ ಮುಖ್ಯ ಶಿಕ್ಷಕ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತು ವಿದ್ಯಾರ್ಥಿನಿಯು ಪೋಷಕರಿಗೆ ಮಾಹಿತಿ ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಇದರಿಂದ ಕುಪಿತರಾದ ಪೋಷಕರು ಬುಧವಾರ ಬೆಳಿಗ್ಗೆ ವಿದ್ಯಾರ್ಥಿನಿಯೊಂದಿಗೆ ಶಾಲೆಗೆ ತೆರಳಿದರು. ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ರಾಮಮೂರ್ತಿಯನ್ನು ಪ್ರಶ್ನಿಸಿದ್ದಾರೆ. ಗಲಾಟೆಯನ್ನು ಕಂಡು ಶಾಲೆಯ ಬಳಿ ನೆರೆದ ಸಾರ್ವಜನಿಕರು ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ರಾಮಮೂರ್ತಿಯನ್ನು ಹಿಡಿದು ಥಳಿಸಿದ್ದಾರೆ.

ವಿಷಯ ತಿಳಿದು ಮೇಟಗಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ರಾಮಮೂರ್ತಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯರು, ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಪಟ್ಟು ಹಿಡಿದರು. ಶಾಲೆಯ ಆವರಣದಲ್ಲಿ ಧರಣಿ ಕುಳಿತು ಘೋಷಣೆ ಕೂಗಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಸಾರ್ವಜನಿಕರಿಂದ ಹಲ್ಲೆಗೆ ಒಳಗಾಗಿರುವ ಶಿಕ್ಷಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಮೇಟಗಳ್ಳಿ ಠಾಣೆಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT