ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಟ್ಟಿನ ಮನೆ ನಮ್ಮಲ್ಲಿಲ್ಲ...

Last Updated 11 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

‘ಭೂಮಿಕಾ’ದಲ್ಲಿ ಪ್ರಕಟವಾದ ‘ಮುಟ್ಟಿನ ಮನೆ’ ಲೇಖನ ಮತ್ತು ಅದಕ್ಕೆ ಪ್ರತಿಕ್ರಿಯೆಗಾಗಿ ಬಂದ ‘ನಾಯಿಗಿರುವ ಬೆಲೆ ನಮಗಿಲ್ಲ’ ಬರಹವನ್ನು ಓದಿದೆ. ಅಬ್ಬಾ ... ಇದೆಂತಹ ನೀಚ ಪದ್ಧತಿ! ಇಂದು ಈ ಪದ್ಧತಿ ಜೀವಂತವಾಗಿದೆ ಎಂದರೆ ಆಶ್ಚರ್ಯವಾಗುತ್ತದೆ.
ಈ ಬಗ್ಗೆ ಮುಸ್ಲಿಮರ ಪದ್ಧತಿಯ ಬಗ್ಗೆ ಓದುಗರ ಗಮನ ಸೆಳೆಯಲು ಬಯಸುತ್ತೇನೆ.

ಇಸ್ಲಾಂ ಧರ್ಮ ಸ್ತ್ರೀಯರಿಗೆ ಕೊಟ್ಟಿರುವ ಪ್ರಾಮುಖ್ಯ, ರಕ್ಷಣೆ, ಪಾವಿತ್ರ್ಯ, ಕಾಳಜಿ ವಿಶೇಷವಾದುದು. ಪ್ರತಿಯೊಬ್ಬ ಮುಸ್ಲಿಮ್ ದಿನಕ್ಕೆ ಐದು ಸಲ ನಮಾಝ್‌ (ದೇವನ ಪ್ರಾರ್ಥನೆ) ಕಡ್ಡಾಯವಾಗಿ ಮಾಡಬೇಕು, ಅದೂ ಅವರದೇ ಆದ ಐದು ಸಮಯಗಳಲ್ಲಿ ಹಾಗೂ ಆ ಸಮಯದಲ್ಲಿ ನಿರ್ವಹಿಸದಿದ್ದರೆ, ಮತ್ತೊಂದು ಸಮಯದಲ್ಲಿ ಕಡ್ಡಾಯವಾಗಿ ನಿರ್ವಹಿಸಲೇಬೇಕು. ನಿಂತು ನಮಾಝ್‌ ಮಾಡಬೇಕು, ಅದು ಸಾಧ್ಯವಿಲ್ಲದಿದ್ದರೆ ಕೂತು, ಅದೂ ಸಾಧ್ಯವಿಲ್ಲದಿದ್ದರೆ ಮಲಗಿ, ಅದೂ ಸಾಧ್ಯವಿಲ್ಲದಿದ್ದರೆ, ಕಣ್ಸನ್ನೆ ಮೂಲಕ, ಅದೂ ಸಾಧ್ಯವಿಲ್ಲದಿದ್ದರೆ ಮಾನಸಿಕವಾಗಿ ಮನಸ್ಸಿನ ಮೂಲಕ ನಿರ್ವಹಿಸಲೇಬೇಕು. ಆದರೆ ಮುಟ್ಟಿನ ದಿನಗಳಲ್ಲಿ ಮಾತ್ರ ನಮಾಝ್‌ ಮಾಡುವುದರಿಂದ ವಿನಾಯಿತಿ ನೀಡಿದೆ.

ರಂಜಾನ್‌ ಉಪವಾಸ ನಿರ್ವಹಿಸುವಂತೆ ಆಜ್ಞಾಪಿಸಿದೆ. ಆ ದಿನಗಳಲ್ಲಿ ಶುಚಿತ್ವವನ್ನು ಕಾಪಾಡಲು ತಿಳಿಸಿದೆ. ಅದು ಅಲ್ಲದೆ, ಮುಟ್ಟಿನ ಸಂದರ್ಭದಲ್ಲಿ ಗಂಡ ಹೆಂಡತಿಯೊಂದಿಗೆ ಒಂದೇ ಹಾಸಿಗೆಯನ್ನು ಹಂಚಿಕೊಂಡು ಮಲಗಲು ಸೂಚಿಸಿದೆ. ಹಾಗೂ ಆ ಸಮಯದಲ್ಲಿ ಲೈಂಗಿಕ ಕ್ರಿಯೆಯನ್ನು ಕಡ್ಡಾಯವಾಗಿ ನಿಷೇಧಿಸಿದೆ. ಹೊಕ್ಕಳಿನಿಂದ ಆರಂಭಿಸಿ, ಮೊಣಕಾಲಿನವರೆಗೆ ಇರುವ ಭಾಗವನ್ನು ಹೊರತುಪಡಿಸಿ, ಚುಂಬನ, ಅಪ್ಪುಗೆ ಮುಂತಾದ ಕ್ರಿಯೆಯಲ್ಲಿ ತೊಡಗಲು ಅನುಮತಿ ನೀಡಿದೆ.

ಈ ಕ್ರಮಗಳಿಂದಾಗಿ ಖಂಡಿತವಾಗಿಯೂ ಮುಸ್ಲಿಂ ಮಹಿಳೆ ಮಾನಸಿಕ ಒತ್ತಡಕ್ಕೆ ಒಳಗಾಗುವುದಿಲ್ಲ ಎಂದು ಹೇಳಬಹುದು.  ಮುಸ್ಲಿಮ್ ಸಮುದಾಯದಲ್ಲಿ ಮುಟ್ಟಿಗೆ ಸಂಬಂಧಿಸಿದಂತೆ ಬೇರೆ ಯಾವುದೇ ಅನಿಷ್ಟ ಪದ್ಧತಿಗಳಿಲ್ಲ ಎನ್ನಲು ಸಂತೋಷವಾಗುತ್ತದೆ.
– ಮಹಮ್ಮದ್ ಅಲಿ ಮುಕ್ಕ ಮಂಗಳೂರು

ನಮ್ಮ ಮಕ್ಕಳಿಗಾದರೂ ತಪ್ಪಲಿ ಸಂಕಷ್ಟ
ನಮ್ಮ ಹೆಣ್ಣುಮಕ್ಕಳು ವಿದ್ಯಾವಂತರಾಗಿಯೂ ಹಿರಿಯರ ಗೊಡ್ಡು ಸಂಪ್ರದಾಯಕ್ಕೆ ಬಾಯಿ ಮುಚ್ಚಿಕೊಂಡು ತಾಳ ಹಾಕುತ್ತ ಬಂದರೆ ಇಂತಹ ಪದ್ಧತಿಗಳೆಲ್ಲ ಹೀಗೆಯೇ ಮುಂದುವರಿಯುತ್ತ ಹೋಗುತ್ತವೆ. ಇಂದು ನಾವು ಅನುಭವಿಸುತ್ತಿರುವ ಈ ನೋವು, ಅವಮಾನವನ್ನು ನಮ್ಮ ಮುಂದಿನ ತಲೆಮಾರಿನವರಿಗೂ ಹೇರಿ, ಇದೇ ನರಕ ಯಾತನೆಯಲ್ಲಿ ನರಳುವಂತೆ ಮಾಡುತ್ತೇವೆ ಅಷ್ಟೆ.

ಅಷ್ಟಕ್ಕೂ ಈ ಗೊಡ್ಡು ಮಡಿವಂತಿಕೆಗೆ ವೈಜ್ಞಾನಿಕವಾಗಿ ಯಾವುದೇ ಆಧಾರವಿಲ್ಲ. ಈಗಲೂ ನಾವು ವೈಜ್ಞಾನಿಕವಾಗಿ ಯೋಚಿಸದೆ ‘ಅಜ್ಜ ನೆಟ್ಟ ಆಲದ ಮರಕ್ಕೇ ನೇಣು ಹಾಕಿಕೊಳ್ಳುತ್ತೇವೆ’ ಎಂದಾದರೆ ಹೆಣ್ಣು ಕುಲಕ್ಕೆ ಹೆಣ್ಣೇ ನೀಡುತ್ತಿರುವ ದೊಡ್ಡ ಪೀಡೆ, ಹಿಂಸೆ ಇದಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ನಾನು ಹುಟ್ಟಿ ಬೆಳೆದದ್ದು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಶ್ರೀಕ್ಷೇತ್ರ ಸುಬ್ರಹ್ಮಣ್ಯ ದೇವಾಲಯದ ಅವಾರದಲ್ಲಿ. ಇದೊಂದು ಅತ್ಯಂತ ಮಡಿವಂತಿಕೆಯ ಧಾರ್ಮಿಕ ಕ್ಷೇತ್ರ. ನಾನು ಚಿಕ್ಕವಳಾಗಿದ್ದ ದಿನಗಳಲ್ಲಿ ಮಡಿ ಮೈಲಿಗೆ, ಜಾತಿ ಪದ್ಧತಿಯನ್ನು ಕಟ್ಟುನಿಟ್ಟಾಗಿ ಆಚರಿಸುತ್ತಿದ್ದ ದಿನಗಳು. ಅಲ್ಲದೇ ನಾಗರ ಕ್ಷೇತ್ರ ಅದೆಂದೂ, ಎಲ್ಲಾದರೂ ಮೈಲಿಗೆ ಆದರೆ ನಾಗರಹಾವು ಕಾಣಿಸಿಕೊಳ್ಳುವುದು ಎಂಬುದು ಆ ದಿನಗಳ ನಂಬಿಕೆ. ನಾನು ಹೈಸ್ಕೂಲು ಶಿಕ್ಷಣ ಪಡೆಯುತ್ತಿದ್ದ ದಿನಗಳು; ಆಗ ದೇವಸ್ಥಾನದಲ್ಲಿ ಸಂಗೀತ, ತಾಳಮದ್ದಲೆ, ಕೀರ್ತನೆ ಇತ್ಯಾದಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದವು.

ಆಗ ನಾನು ತಿಂಗಳ ರಜಾ ದಿನವಾದರೂ ಕೇಳಬೇಕು. ಕಾರ್ಯಕ್ರಮ ನೋಡಬೇಕು ಎಂಬ ಉಮೇದಿನಲ್ಲಿ ಹುಂಬ ಧೈರ್ಯದಿಂದ ದೇವಸ್ಥಾನದ ಒಳಗೆ ಹೋಗಿಬಿಡುತ್ತಿದ್ದೆ. ಇದೇ ಧೈರ್ಯ, ಮುಂದಿನ ಕೆಲವು ಅನಿವಾರ್ಯಗಳಿಂದಾಗಿ ನಾನು ಆ ದಿನಗಳಲ್ಲಿ ದೇವಸ್ಥಾನಕ್ಕೆ ಹೋಗುವುದು, ದೇವಾಲಯದ ಬಾವಿಯಿಂದ ನೀರು ತರುವುದು ಎಲ್ಲಾ ಮಾಡುತ್ತಿದ್ದೆ. ಅಲ್ಲದೆ ಪ್ರವಾಸ, ವಿಶೇಷ ಸಂದರ್ಭಗಳಲ್ಲಿ ಇಂತಹ ಅನೇಕ ಮಡಿವಂತಿಕೆಯ ದೇವಸ್ಥಾನಗಳಿಗೆ ಧೈರ್ಯವಾಗಿ ಹೋಗಿದ್ದೇನೆ.

ಈಗ ನಾನೊಬ್ಬಳು ಶಿಕ್ಷಕಿ. ಕಳೆದ ಹದಿನೆಂಟು ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ಅನೇಕ ವೈಜ್ಞಾನಿಕ, ವೈಚಾರಿಕ ಪುಸ್ತಕಗಳನ್ನು ಓದಿದ್ದೇನೆ. ಈಗ ನಾನು ನಿರ್ಭಯವಾಗಿ ದೇವಸ್ಥಾನದಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳಲ್ಲಿ ಉಳಿದ ದಿನಗಳಂತೆ ಪಾಲ್ಗೊಳ್ಳುತ್ತೇನೆ. ಹಿರಿಯರು ನಡೆಸುವ ಮನೆಯ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೇನೆ. ನನ್ನ ಪಾಲಿಗೆ ಬಂದ ದೇವರ ಕಾರ್ಯವನ್ನೂ (ಇತರರಿಗೆ ನೋವಾಗದಂತೆ) ಆ ದಿನಗಳಲ್ಲಿ ಮಾಡುತ್ತೇನೆ.

ಗಣೇಶ ಚತುರ್ಥಿಯ ಸಂದರ್ಭದಲ್ಲಿ ದೇವರ ಮುಂದೆ ರಂಗೋಲಿ ಹಾಕುವುದು, ಮಂಟಪ ಅಲಂಕರಿಸುವುದು ಇವೆಲ್ಲ ನನ್ನ ಪಾಲಿಗೆ (ಕೂಡು ಕುಟುಂಬದಲ್ಲಿ) ಬರುವುದು. ಒಮ್ಮೆ ಆ ದಿನಗಳು ಆದರೂ ಯಾವ ಭಾವನೆಯೂ ಇಲ್ಲದೆ ಎಲ್ಲ ಕಾರ್ಯವನ್ನೂ ಮಾಡುತ್ತೇನೆ. ಇನ್ನು ನನ್ನ ಸ್ವಂತ ಮನೆ ‘ಸದಾಸುಖಿ’ಯಲ್ಲಿ ಯಾವ ಮಡಿ, ಮೈಲಿಗೆ, ಸೂತಕ, ಆಮೆ, ಒಳ್ಳೆ ದಿನ, ಕೆಟ್ಟ ದಿನ ಎಂಬ ಭೇದವೂ ಇಲ್ಲ. ಎಲ್ಲಾ ದಿನಗಳೂ ಶುಭ ದಿನಗಳೇ ನನಗೆ. ಆದರೆ ನನ್ನ ಈ ನಡೆ–ನುಡಿಯಿಂದ ಒಂದು ದಿನವೂ ನಾಗರಹಾವು ಕನಸಿನಲ್ಲಿಯೂ ಕಾಣಿಸಿಕೊಂಡಿಲ್ಲ.

ಇಂತಹ ಮೂಢನಂಬಿಕೆಗಳ ಸತ್ಯಾಸತ್ಯತೆಯನ್ನು ಅರಿತು ನಮ್ಮ ಹೆಣ್ಣು ಮಕ್ಕಳು ಈ ಮೌಢ್ಯದಿಂದ ಸಾತ್ವಿಕವಾಗಿ ಪ್ರತಿಭಟಿಸಿ ಹೊರಬರದಿದ್ದರೆ ಇನ್ನೊಂದು ಶತಮಾನ ಕಳೆದರೂ ನಮ್ಮ ‘ಆ ದಿನಗಳು’ ನಾಯಿಪಾಡಿಗಿಂತ ಹೆಚ್ಚೇನೂ ಬದಲಾಗದು!
–ಸುಧಾ ಭಂಡಾರಿ ಹಡಿನಬಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT