ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದು ಮಕ್ಕಳನ್ನು ಕಳೆದುಕೊಂಡ ಪೋಷಕರನ್ನು ಸಂತೈಸುವವರಾರು?

Last Updated 22 ಜೂನ್ 2016, 5:41 IST
ಅಕ್ಷರ ಗಾತ್ರ

ಕುಂದಾಪುರ: ತಾಲ್ಲೂಕಿನ ಗಂಗೊಳ್ಳಿ ಸಮೀಪದ ಮೊವಾಡಿ ರಸ್ತೆಯಲ್ಲಿರುವ ಡಾನ್‌ ಬಾಸ್ಕೊ ಶಾಲೆಗೆಂದು ಹೊರಟಿದ್ದ ಹೆಮ್ಮಾಡಿಯ ಪರಿಸರದ 17 ಮಕ್ಕಳಿಗೆ ಮಂಗಳವಾರ ಎಂದಿನ ‘ಮಂಗಳ’ಕರ ಆಗಿರಲಿಲ್ಲ. ಶಾಲೆ ಇನ್ನೇನು ಕೂಗಲತೆ ದೂರವಿದೆ ಎನ್ನುವಾಗಲೇ ಸಂಭವಿಸಿದ ಭೀಕರ ಅಪಘಾತದಲ್ಲಿ ಭವ್ಯ ಭವಿಷ್ಯ ವನ್ನು ಕಾಣಬೇಕಾದ 8 ಮುಗ್ಧ ಮಕ್ಕಳು ತಮ್ಮ ಇಹಲೋಕದ ಯಾತ್ರೆಯನ್ನು ಮುಗಿಸುವಂತಾಗಿದೆ.

ಮೊವಾಡಿ ಕ್ರಾಸ್‌ನಲ್ಲಿ 7 ವರ್ಷಗಳ ಹಿಂದೆ ಆರಂಭವಾಗಿದ್ದ ಡಾನ್‌ ಬಾಸ್ಕೊ ಆಂಗ್ಲ ಮಾಧ್ಯಮ ಶಾಲೆಗೆ ತಾಲ್ಲೂಕಿನ ವಿವಿಧ ಕಡೆಯಿಂದ ವಿದ್ಯಾರ್ಥಿಗಳು ಬರುತ್ತಾರೆ. ಶಾಲೆಗೆ ಬರುವ ದೂರದ ಮಕ್ಕಳಿಗೆ ಶಾಲೆಯಿಂದಲೇ ವಾಹನದ ವ್ಯವಸ್ಥೆಯೂ ಇದೆ. ಆದರೆ, ಹೆಮ್ಮಾಡಿ ಪರಿಸರದ ಕಟ್ಟು, ದೇವಲ್ಕುಂದ, ಕಟ್‌ ಬೇಲ್ತೂರು, ಮುವತ್ತುಮುಡಿ, ತಲ್ಲೂರು ಭಾಗದ ಕೆಲವು ಕಡೆಗಳಲ್ಲಿ ಶಾಲೆಯ ಬಸ್‌ ಸೌಲಭ್ಯ ಇಲ್ಲ. ಈ ಕಾರಣಕ್ಕಾಗಿ ಇದೇ ಶಾಲೆಯ ಶಿಕ್ಷಕಿ ಫಿಲೋಮಿನಾ ಎಂಬವರ ಪತಿ ಮಾರ್ಟಿನ್‌ ತನ್ನ  ಆಮ್ನಿಯಲ್ಲಿ ಈ ಪರಿಸರದ ಮಕ್ಕಳನ್ನು ಶಾಲೆಗೆ ಕರೆತರುವ ಕಾರ್ಯವನ್ನು ಮಾಡುತ್ತಿದ್ದರು.

ಯು.ಕೆ.ಜಿ ಯಿಂದ ಆರಂಭವಾಗಿ ಎಸ್ಸೆಸ್ಸೆಲ್ಸಿ ವರೆಗಿನ ಬೇರೆ ಬೇರೆ ತರಗತಿಯ 17 ಮಕ್ಕಳು ತಮ್ಮ ಟೀಚರ್‌ ಫಿಲೋಮಿನಾ ಅವರೊಂದಿಗೆ ಮಂಗಳ ವಾರ ಈ ವಾಹನದಲ್ಲಿ ಪ್ರಯಾಣಿಸು ತ್ತಿದ್ದರು. ಹೆಮ್ಮಾಡಿಯ ಮುವತ್ತುಮುಡಿ ಯಲ್ಲಿ ನಾಲ್ಕು ಮಕ್ಕಳನ್ನು ಹತ್ತಿಸಿಕೊಂಡ ಬಳಿಕ ರಾ.ಹೆ. 66 ರಲ್ಲಿ ಸಾಗಿದ ವಾಹನವನ್ನು ಚಾಲಕ ಮೊವಾಡಿ ಕ್ರಾಸ್‌ ಬಳಿಯಲ್ಲಿ ಬಲ ಭಾಗಕ್ಕೆ ತಿರುಗಿಸಿದಾಗ, ಎದುರು ದಿಕ್ಕಿನಿಂದ ಬಂದ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ.

ಅಪಘಾತದ ಮಾಹಿತಿ ಬಂದ ತಕ್ಷಣವೇ ಸ್ಪಂದಿಸಿದ ಸ್ಥಳೀಯರು ಹಾಗೂ ಪೊಲೀಸರು ಮಕ್ಕಳನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದ್ದರು. ಆದರೆ, ಸ್ಥಳದಲ್ಲೇ ಮೂವರು ಮೃತಪಟ್ಟರೆ, ಇಬ್ಬರು ದಾರಿ ಮಧ್ಯೆ ಕೊನೆಯುಸಿರೆಳೆದರು. ಬದುಕಿನ ಉಸಿರನ್ನು ಬಿಗಿ ಹಿಡಿದು ಆಸ್ಪತ್ರೆವರೆಗೆ ತಲುಪಿದ ಇನ್ನೂ 3 ಮಕ್ಕಳು ಆಸ್ಪತ್ರೆಯಲ್ಲಿ ಮೃತರಾದರು.

ದುರಂತದಲ್ಲಿ ಬಲಿಯಾದ 8 ಮಕ್ಕಳಲ್ಲಿ ಒಂದೇ ಕುಟುಂಬದ ನಾಲ್ವರು ಮಕ್ಕಳಿದ್ದಾರೆ. ಮುವತ್ತುಮುಡಿಯ ಸ್ಟೀವನ್‌ ಹಾಗೂ ಆಲ್ವಿನ್‌ ಹತ್ತಿರದ ಸಂಬಂಧಿಗಳು. ಸ್ಟೀವನ್‌ ಅವರ ಇಬ್ಬರು ಮಕ್ಕಳಾದ ಕ್ಲರೀಶಾ, ಕ್ಲಲಿಸ್ಟಾ ಹಾಗೂ ಆಲ್ವಿನ್‌ ಅವರ ಮಕ್ಕಳಾದ ಆನ್ಸಿಟಾ ಹಾಗೂ ಅಲ್ವಿಟಾ ದುರಂತದಲ್ಲಿ ಸಾವನಪ್ಪಿದ್ದಾರೆ.

ಕಟ್‌ಬೇಲ್ತೂರಿನ ನಿವೃತ್ತ ಯೋಧ ಡಬ್ಲ್ಯೂ ಸ್ಟ್ಯಾನ್ಲಿ ಡಿಸಿಲ್ವಾ ಅವರ ಪುತ್ರ ಲಾಯ್ಡ್‌ ಡಿಸಿಲ್ವಾ ಅವರ ಇಬ್ಬರ ಹೆಣ್ಣು ಮಕ್ಕಳಾದ ನಿಖಿತಾ ಹಾಗೂ ಅನನ್ಯ ದುರಂತದಲ್ಲಿ ಬಲಿಯಾಗಿದ್ದಾರೆ. ಶಾಲೆಯಲ್ಲಿ ಪ್ರತಿಭಾನ್ವಿತರಾಗಿದ್ದ ಈ ಇಬ್ಬರು ಸಹೋದರಿಯರ ಪೈಕಿ ನಿಖಿತಾ ಶಾಲೆಯ ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿನಿ. ಈ ಮಕ್ಕಳ ತಾಯಿ ಮರೀನಾ ಡಿಸಿಲ್ವಾ ಅವರು ಸ್ವಲ್ಪ ಸಮ ಯ ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಮನೆಯ ಮಕ್ಕಳನ್ನೇ ಕಳೆದುಕೊಂಡು ಅನಾಥವಾಗಿರುವ ಕುಟುಂಬದವರನ್ನು ಹೇಗೆ ಸಂತೈಸುವುದು ಎನ್ನುವ ಜಿಜ್ಞಾಸೆ ಬಂಧುಗಳನ್ನು ಕಾಡುತ್ತಿದೆ.

ಮರಳಿ ಬಾರದ ಲೋಕಕ್ಕೆ ಪಯಣಿಸಿದ ಮಕ್ಕಳ ಹೆತ್ತವರ ಸಂಕಟ ಕಲ್ಲೇದೆಯವರನ್ನು ಕರಗಿಸುತ್ತಿದೆ. ಶಾಲೆಗೆಂದು ತೆರಳಿದ್ದ ಮಕ್ಕಳು ಮರಳಿ ನಮ್ಮೂರಿಗೆ ಬಂದಿಲ್ಲ ಎನ್ನುವ ನೋವಿನಿಂದಾಗಿ ಗ್ರಾಮದಲ್ಲಿ ನಿಶಬ್ದ ಮನೆ ಮಾಡಿದೆ. ಮಕ್ಕಳನ್ನು ಕಳೆದುಕೊಂಡ ಹೆತ್ತವರಿಗೆ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳುವ ಪ್ರಯತ್ನವನ್ನು ಊರಿನವರು ಹಾಗೂ ಬಂಧುಗಳು ಮಾಡುತ್ತಿದ್ದರಾದರೂ, ಯಾವ ಸಾಂತ್ವನದ ಮಾತುಗಳು ಮಕ್ಕಳನ್ನು ಕಳೆದುಕೊಂಡ ಕರುಳ ಸಂಕಟವನ್ನು ನೀಗಿಸುತ್ತಿಲ್ಲ.

ಅಪಘಾತ ಸಂಭವಿಸಿದ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಮುತುವರ್ಜಿ ವಹಿಸಿದ ಕನ್ನಡಕುದ್ರುವಿನ ಸಮಾಜ ಸೇವಕ ಜೆರಾಲ್ಡ್‌ ಕ್ರಾಸ್ತಾ ಅವರು ಘಟನೆಯ ಕುರಿತು ‘ಪ್ರಜಾವಾಣಿ’ ಜತೆ ಮಾತನಾ ಡುತ್ತಾ, ಮಕ್ಕಳನ್ನು ಉಳಿಸಿಕೊಳ್ಳಲೆಂದು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುವಾಗಲೇ ನನ್ನ ಕೈಯಲ್ಲಿಯೇ ಮಕ್ಕಳು ಪ್ರಾಣ ಬಿಡುವಂತಾಯಿತು ಎಂದು ಗದ್ಗದಿತರಾದರು.

ಮರೆಯಾಗದ ನೆನಪು: ಇಂದಿನ ದುರ್ಘಟನೆ ಸಂಭವಿಸಿದ ಸ್ಥಳದಿಂದ ಕೇವಲ ಕೆಲವೇ ಫರ್ಲಾಂಗ್‌ ದೂರದಲ್ಲಿ ಇರುವ ಅಣ್ಣಪ್ಪಯ್ಯ ಸಭಾಭವನದ ಬಳಿಯ ರಾ.ಹೆ. 66 ರಲ್ಲಿ 2001ಯ ಜು. 9 ರಂದು ಸಂಭವಿಸಿದ್ದ ಟಾಟಾ ಸುಮೋ ಹಾಗೂ ಖಾಸಗಿ ಬಸ್ಸು ಡಿಕ್ಕಿ ಯಲ್ಲಿ ಸುಮೋ ವಾಹನದಲ್ಲಿ ಪ್ರಯಾಣಿ ಸುತ್ತಿದ್ದ ಬೆಂಗಳೂರಿನ ನೆಲಮಂಗಲದ 11 ಮಂದಿ ಸಾವಿಗೀಡಾಗಿದ್ದರು.

ಇಂದು ಹೆಮ್ಮಾಡಿ ಬಂದ್‌
ಕುಂದಾಪುರ: ಮಂಗಳವಾರ ತ್ರಾಸಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತರಾದ 8 ಮಕ್ಕಳ ಶೋಕಾರ್ಥವಾಗಿ ಬುಧವಾರ ಹೆಮ್ಮಾಡಿ ಪರಿಸರದಲ್ಲಿ ಅಂಗಡಿ–ಮುಗ್ಗಟ್ಟಗಳನ್ನು ಮುಚ್ಚಿ ಹರತಾಳವನ್ನು ಆಚರಿಸಲಾಗುವುದು ಎಂದು ವಸಂತ ಹೆಮ್ಮಾಡಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಅಧಿಕೃತ ವಾಹನಗಳನ್ನು ಬಿಟ್ಟು ಉಳಿದ ಯಾವುದೇ ಖಾಸಗಿ ವಾಹನಗಳಲ್ಲಿಯೂ ಶಾಲಾ ಮಕ್ಕಳನ್ನು ಗುಂಪಾಗಿ ಸಾಗಿಸುವುದನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿರುವ ಅವರು ಚಾಲಕರು ಮಾಡುವ ತಪ್ಪಿನಿಂದಾಗಿ ಮುಗ್ದ ಮಕ್ಕಳ ಪ್ರಾಣ ಹರಣವಾಗುವುದನ್ನು ತಡೆಯಲು ಸಂಬಂಧಿಸಿದ ಇಲಾಖೆ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
- ರಾಜೇಶ್‌ ಕೆ.ಸಿ ಕುಂದಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT