ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ಕರ ನಿಲ್ಲಲಿಲ್ಲ, ಪಡಿಪಾಟಲು ತಪ್ಪಲಿಲ್ಲ

ಪೊಲೀಸ್‌ ಸರ್ಪಗಾವಲಿನಲ್ಲಿ ಸಂಚಾರ ಯತ್ನ* ಜನರಿಲ್ಲದೆ ಭಣಗುಟ್ಟಿದ ಮೆಜೆಸ್ಟಿಕ್‌
Last Updated 26 ಜುಲೈ 2016, 20:25 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ಮುಷ್ಕರಕ್ಕೆ ಬೆಂಬಲ ಸೂಚಿಸಿ ಬಿಎಂಟಿಸಿ ಚಾಲಕ ಹಾಗೂ ನಿರ್ವಾಹಕರು ಮಂಗಳವಾರವೂ ಸೇವೆಗೆ ಗೈರಾದರು. ಪೊಲೀಸ್‌ ಬಂದೋಬಸ್ತ್‌ನಲ್ಲಿ ಬೆರಳೆಣಿಕೆಯ ಬಸ್‌ಗಳಷ್ಟೇ ಸಂಚಾರ ನಡೆಸಿದವು. ಹೀಗಾಗಿ  ಪ್ರಯಾಣಿಕರ ಪಡಿಪಾಟಲು ಮುಂದುವರಿಯಿತು.

ರಾಜ್ಯದ ಬೇರೆ ಬೇರೆ ಭಾಗ ಹಾಗೂ ಬೇರೆ ರಾಜ್ಯಗಳಿಂದ ರೈಲಿನಲ್ಲಿ ಬೆಳಿಗ್ಗೆ ನಗರಕ್ಕೆ ಬಂದ ನೂರಾರು ಪ್ರಯಾಣಿಕರು ಬಸ್‌ ಸಿಗದೆ ಪ್ರಯಾಸಪಟ್ಟರು. ಅವರು ಆಟೊ ರಿಕ್ಷಾ ಹಾಗೂ ಖಾಸಗಿ ವಾಹನಗಳ ಮೊರೆ ಹೋದರು. ಕೆಲವು ವಾಹನ ಚಾಲಕರು ದುಪ್ಪಟ್ಟು ದರ ವಸೂಲಿ ಮಾಡಿದರು.

ಭದ್ರತೆ ನಡುವೆ ಬಸ್ ಸಂಚಾರ: ಮಂಗಳವಾರ ಮಧ್ಯಾಹ್ನ 3 ಗಂಟೆ ನಂತರ ಪೊಲೀಸ್ ಹಾಗೂ ಬಿಎಂಟಿಸಿ ವಿಚಕ್ಷಣ ದಳದ ಸಿಬ್ಬಂದಿಯ ಭದ್ರತೆ ನಡುವೆ ಕೆಲ ಬಸ್‌ಗಳು ಸಂಚಾರ ಪ್ರಾರಂಭಿಸಿದವು. ಆದರೆ, ರಾತ್ರಿ ವೇಳೆಗೆ ಅವುಗಳ ಓಡಾಟವೂ ನಿಂತು ಹೋಗಿದ್ದರಿಂದ ಸಾರ್ವಜನಿಕರು ತೊಂದರೆ ಎದುರಿಸಿದರು.

ಶಾಂತಿನಗರ, ಮೆಜೆಸ್ಟಿಕ್, ಶಿವಾಜಿನಗರ ನಿಲ್ದಾಣಗಳಿಂದ ಬಸ್‌ಗಳು ಪ್ರಯಾಣಿಕರನ್ನು ಕರೆದುಕೊಂಡು ಹೊರಟವು. ಪ್ರತಿ ಬಸ್‌ನಲ್ಲೂ ಒಬ್ಬರು ಪೊಲೀಸ್ ಹಾಗೂ ಬಿಎಂಟಿಸಿಯ ಇಬ್ಬರು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ಮೂವರು ಪೊಲೀಸರು ಇರುವ ಹೊಯ್ಸಳ ವಾಹನವನ್ನು ಬಸ್‌ಗಳ ಹಿಂದೆಯೇ ಕಳುಹಿಸಲಾಗಿತ್ತು. ಅಹಿತಕರ ಘಟನೆ ಜರುಗಿದರೆ, ಚಿತ್ರೀಕರಿಸಿಕೊಳ್ಳುವಂತೆ ಸಿಬ್ಬಂದಿಗೆ ಹ್ಯಾಂಡಿಕ್ಯಾಮ್ ನೀಡಲಾಗಿತ್ತು.

‘ಸಂಸ್ಥೆಯ ಚಾಲಕರು ಹಾಗೂ ನಿರ್ವಾಹಕರು ಸೇವೆಗೆ ಹಾಜರಾಗಿಲ್ಲ. ಸಂಸ್ಥೆಯ ಮೆಕ್ಯಾನಿಕ್‌ಗಳು, ಅಧಿಕಾರಿಗಳ ಕಾರು ಚಾಲಕರನ್ನು ಬಳಸಿ ಕಾರ್ಯಾಚರಣೆ ನಡೆಸಲಾಗಿದೆ. ಅವರ ಬಳಿ ಚಾಲನಾ ಪರವಾನಗಿಯೂ ಇರಲಿಲ್ಲ’ ಎಂದು ಮುಷ್ಕರ ನಿರತರು ಆರೋಪಿಸಿದರು.

ಮತ್ತೆ ಟ್ರಾಫಿಕ್‌ ಜಾಮ್‌:  ಖಾಸಗಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು. ನಾಗವಾರ, ಐಟಿಪಿಎಲ್‌ ಬಳಿ  ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. 

ಫೀಡರ್‌ ಸೇವೆ ಇಲ್ಲದೆ ಸಮಸ್ಯೆ: ಕೆಲವು ಪ್ರಯಾಣಿಕರು ಬಿಎಂಟಿಸಿ ಬಸ್‌ಗಳ ಬದಲು ಮೆಟ್ರೊ  ರೈಲುಗಳಲ್ಲಿ  ಪ್ರಯಾಣಿಸಿದರು.  ಆದರೆ ಮೆಟ್ರೊ ನಿಲ್ದಾಣಗಳಲ್ಲಿ ಫೀಡರ್‌ ಬಸ್‌ ಸೇವೆ ಲಭ್ಯ ಇಲ್ಲದ ಕಾರಣ ಪ್ರಯಾಣಿಕರು ಆಟೊಗಳಲ್ಲಿ ಹಾಗೂ ಕ್ಯಾಬ್‌ಗಳಲ್ಲಿ ಹೆಚ್ಚು ದರ ತೆತ್ತು ಪ್ರಯಾಣಿಸಬೇಕಾಯಿತು. 


ಬೈಕ್‌ ಸೇವೆಗೆ ಬೇಡಿಕೆ: ಬೈಯಪ್ಪನಹಳ್ಳಿ ಹಾಗೂ ಟ್ರಿನಿಟಿ ಮೆಟ್ರೊ ನಿಲ್ದಾಣಗಳಲ್ಲಿ ಮೆಟ್ರೊ ಬೈಕ್‌ ಸೇವೆಗೆ ಎಂದಿಗಿಂತ ಹೆಚ್ಚು ಬೇಡಿಕೆ ಇತ್ತು. 
‘ನಮ್ಮ ಸಂಸ್ಥೆಯು ಟ್ರಿನಿಟಿ ನಿಲ್ದಾಣದಲ್ಲಿ 20 ಹಾಗೂ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ 60 ಬೈಕ್‌ಗಳನ್ನು ಬಾಡಿಗೆಗೆ ಒದಗಿಸುತ್ತಿದೆ.

ಸೋಮವಾರ ಹಾಗೂ ಮಂಗಳವಾರ ಎಲ್ಲ ಬೈಕ್‌ಗಳನ್ನು ಬಾಡಿಗೆಗೆ ನೀಡಿದ್ದೇವೆ.  ಬಿಎಂಟಿಸಿ ಬಸ್‌ ಮುಷ್ಕರದಿಂದಾಗಿ   ಬೈಕ್‌ ಸೇವೆಗೆ ಸ್ವಲ್ಪ ಹೆಚ್ಚು ಬೇಡಿಕೆ ಇತ್ತು’ ಎಂದು ಮೆಟ್ರೊಬೈಕ್‌ ಸರ್ವೀಸ್‌ನ ಮುಖ್ಯಸ್ಥ  ರಜತ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಖಾಸಗಿ ಮಿನಿಬಸ್‌ಗಳ ಭರಾಟೆ: ಖಾಸಗಿ ಮಿನಿಬಸ್‌ಗಳು ಹಾಗೂ ಟೆಂಪೊ ಟ್ರಾವೆಲರ್‌ಗಳು ನಗರದಾದ್ಯಂತ ಸಂಚರಿಸುವ ಮೂಲಕ ಬಿಎಂಟಿಸಿಗಳು ಇಲ್ಲದ ಕೊರತೆಯನ್ನು ಸ್ವಲ್ಪಮಟ್ಟಿಗೆ ನೀಗಿಸಿದವು.

ಇಂದೂ ಶಾಲಾ ಕಾಲೇಜುಗಳಿಗೆ ರಜೆ
ಮುಷ್ಕರದ ಕಾರಣ ನಗರ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಬುಧವಾರವೂ ರಜೆ ಘೋಷಿಸಲಾಗಿದೆ. ‘ಮುನ್ನೆಚ್ಚರಿಕಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ವಿ.ಶಂಕರ್‌ ತಿಳಿಸಿದರು.

ನಮ್ಮ ಸಿಬ್ಬಂದಿ ಬಸ್‌ ಓಡಿಸಿದ್ದಾರೆ ಎಂಬುದು ಸುಳ್ಳು. ಇಲಾಖೆಯ ವಾಹನಗಳಿಗೇ ಚಾಲಕರಿಲ್ಲ. ಹೀಗಿರುವಾಗ ಸಾರಿಗೆ ನಿಗಮಗಳಿಗೆ ಹೇಗೆ ನಿಯೋಜಿಸಲು ಸಾಧ್ಯ?
-ಚರಣ್ ರೆಡ್ಡಿ, ಹೆಚ್ಚುವರಿ ಪೊಲೀಸ್‌ ಕಮಿಷನರ್‌

‘ನಿಲ್ಸಲ್ಲ ಅಂತಿದ್ದಾರೆ’
ಕಣ್ಣಿನ ಶಸ್ತ್ರಚಿಕಿತ್ಸೆಗೆ ಮಿಂಟೊ ಆಸ್ಪತ್ರೆಗೆ ಬಂದಿದ್ದೆ. ಇಂದು ಬಿಡುಗಡೆ ಆಯಿತು. ತುರುವೇಕೆರೆಗೆ ಹೋಗಬೇಕು. ಬಸ್ ಇಲ್ಲ. ಖಾಸಗಿ ಬಸ್‌ ಇವೆ. ಆದರೆ, ನಮ್ಮ ಊರಿನ ತನಕ ಸಿಗಲ್ಲ. ಎಂಟನೇ ಮೈಲಿಯಲ್ಲಿ ನೆಂಟರ ಮನೆ ಇದೆ. ಅಲ್ಲಿಗೆ ಹೋಗ್ಬೇಕು. ಆದರೆ, ಖಾಸಗಿ ಬಸ್‌ ಅಲ್ಲಿ ನಿಲ್ಸಲ್ಲ ಎನ್ನುತ್ತಿದ್ದಾರೆ
–ಎಂ.ಎಸ್‌.ಮಂಜುನಾಥ್, ತುರುವೇಕೆರೆ ಯುವಕ

ಅಲ್ಲಿಂದ ನಡೆದು ಬಂದೆ...
ನಾನು ಇಸ್ರೊ ಲೇಔಟ್‌ ನಿವಾಸಿ.  ಆನಂದ್‌ ರಾವ್‌ ವೃತ್ತದ ಕಚೇರಿಯಲ್ಲಿ ಅಟೆಂಡರ್‌. ನನ್ನದು ಬಿಎಂಟಿಸಿ ತಿಂಗಳ ಪಾಸಿದೆ. ಆದರೆ, ಬಸ್‌ ಇಲ್ಲದಿದ್ದಕ್ಕೆ ಬೆಳಿಗ್ಗೆ ಬನಶಂಕರಿಯಿಂದ ನಡೆದು ಬಂದೆ. ಕೆಲಸ ಬಿಟ್ಟರೆ ಕೂಲಿ ಇಲ್ಲ. ಆಟೊದವರು ನೋಡಿದರೆ ₹200 ಕೇಳುತ್ತಾರೆ. ಏನು ಮಾಡುವುದು?
–ಎನ್‌.ರಾಜಗೋಪಾಲ್‌, ಸಹಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT