ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ಮಹಿಳೆಯರ ಮೇಲೆ ಹಲ್ಲೆ

ಮಧ್ಯಪ್ರದೇಶ: ದನದ ಮಾಂಸ ಮಾರಾಟ ಆರೋಪ
Last Updated 28 ಜುಲೈ 2016, 5:49 IST
ಅಕ್ಷರ ಗಾತ್ರ

ಮಂದ್‌ಸೌರ್, ಮಧ್ಯಪ್ರದೇಶ (ಪಿಟಿಐ): ದನದ ಮಾಂಸ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ  ಇಬ್ಬರು ಮುಸ್ಲಿಂ ಮಹಿಳೆಯರನ್ನು ಗುಂಪೊಂದು ಥಳಿಸಿದ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ ಸುಮಾರು 350 ಕಿ.ಮೀ. ದೂರದಲ್ಲಿರುವ ಮಂದ್‌ಸೌರ್‌ ಎಂಬಲ್ಲಿ ಮಂಗಳವಾರ ನಡೆದಿದೆ.

‘ಗೋರಕ್ಷಕರು’ ಎಂದು ಹೇಳಿಕೊಂಡ ಗುಂಪು ಮಂದ್‌ಸೌರ್‌ ರೈಲ್ವೆ ನಿಲ್ದಾಣದಲ್ಲಿ ಪೊಲೀಸರ ಸಮ್ಮುಖದಲ್ಲೇ ಮಹಿಳೆಯರನ್ನು ನೆಲಕ್ಕೆ ಕೆಡವಿ ಥಳಿಸಿದೆ. ಕೆಲವರು ಈ ದೃಶ್ಯವನ್ನು ಮೊಬೈಲ್‌ ಫೋನ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

ಹಸುವಿನ ಚರ್ಮ ಸುಲಿದ ಆರೋಪದಲ್ಲಿ ಗುಜರಾತ್‌ನಲ್ಲಿ ದಲಿತರ ಮೇಲೆ ಅಮಾನುಷ ಹಲ್ಲೆ ನಡೆಸಿದ ಘಟನೆ   ರಾಷ್ಟ್ರದಾದ್ಯಂತ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಈ ಪ್ರಕರಣ ನಡೆದಿದೆ.

ನಡೆದದ್ದೇನು?: ‘ದನದ ಮಾಂಸ ಮಾರಾಟಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂಬ ಆರೋಪದಲ್ಲಿ ಇಬ್ಬರು ಮಹಿಳೆಯರ ಮೇಲೆ ಗುಂಪೊಂದು ರೈಲ್ವೆ ನಿಲ್ದಾಣದಲ್ಲಿ ಹಲ್ಲೆ ನಡೆಸುತ್ತಿದೆ ಎಂದು ಒಬ್ಬ ವ್ಯಕ್ತಿ ದೂರವಾಣಿ ಕರೆ ಮಾಡಿ ತಿಳಿಸಿದ್ದಾನೆ’ ಎಂದು ಮಂದ್‌ಸೌರ್‌ ಎಸ್‌ಪಿ ಮನೋಜ್‌ ಶರ್ಮ ಹೇಳಿದ್ದಾರೆ.
‘ಮಹಿಳಾ ಪೊಲೀಸ್‌ ಸೇರಿದಂತೆ ಇಬ್ಬರು ಕಾನ್‌ಸ್ಟೆಬಲ್‌ಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಮಹಿಳೆಯರನ್ನು ದಾಳಿಕೋರರಿಂದ ರಕ್ಷಿಸಿದ್ದಾರೆ’ ಎಂದಿದ್ದಾರೆ.

‘ಮಹಿಳೆಯರ ಬಳಿಯಿದ್ದ ಮಾಂಸವನ್ನು ಪರೀಕ್ಷೆಗೆ ಕಳುಹಿಸಲಾಯಿತು. ಅದು ದನದ ಮಾಂಸ ಅಲ್ಲ. ಕೋಣದ ಮಾಂಸ ಎಂಬುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಇಬ್ಬರಲ್ಲಿ ಒಬ್ಬರ ವಿರುದ್ಧ ಈ ಹಿಂದೆ ಅಕ್ರಮವಾಗಿ ಮಾಂಸ ಸಾಗಿಸಿದ್ದಕ್ಕೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು’ ಎಂದು ತಿಳಿಸಿದ್ದಾರೆ.

ಪರವಾನಗಿ ಇಲ್ಲದೆ ಮಾಂಸ ಮಾರಾಟ ನಡೆಸಲು ಯತ್ನಿಸಿದ ಆರೋಪದಲ್ಲಿ ಈ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಕೊತ್ವಾಲಿ ಪೊಲೀಸ್ ಠಾಣೆಯ ಅಧಿಕಾರಿ ಎಂ.ಪಿ. ಸಿಂಗ್‌ ಘಟನೆ ಬಗ್ಗೆ ಭಿನ್ನ ಹೇಳಿಕೆ ನೀಡಿದ್ದು, ‘ಇಬ್ಬರು ಮಹಿಳೆಯರು ಗೋಮಾಂಸ ಮಾರಾಟಕ್ಕೆ ಒಯ್ಯುತ್ತಿದ್ದಾರೆ ಎಂಬ ಸುಳಿವು ದೊರೆತಿತ್ತು.

ಅದರ ಆಧಾರದಲ್ಲಿ ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ಅವರನ್ನು ಬಂಧಿಸಿ ಸುಮಾರು 30 ಕೆ.ಜಿ ಮಾಂಸ ವಶಪಡಿಸಿಕೊಳ್ಳಲಾಗಿತ್ತು’ ಎಂದಿದ್ದಾರೆ.
‘ಆದರೆ ಅವರ ಬಳಿಯಿದ್ದದ್ದು ದನದ ಮಾಂಸ ಅಲ್ಲ, ಕೋಣದ ಮಾಂಸ ಎಂಬುದು ಪರೀಕ್ಷೆಯಿಂದ ತಿಳಿದುಬಂದಿದೆ. ಗೋರಕ್ಷಕರು ಎಂದು ಹೇಳಿಕೊಂಡವರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ’ ಎಂದು ಹೇಳಿದ್ದಾರೆ.

ಹಲ್ಲೆ ನಡೆದಿಲ್ಲ: ಮುಸ್ಲಿಂ ಮಹಿಳೆಯರ ಮೇಲೆ ನಡೆದಿರುವ ಘಟನೆಯನ್ನು ಮಧ್ಯಪ್ರದೇಶ ಗೃಹ ಸಚಿವ ಭೂಪೇಂದ್ರ ಸಿಂಗ್‌ ಅಲ್ಲಗಳೆದಿದ್ದಾರೆ. ‘ಇಬ್ಬರು ಮಹಿಳೆಯರು ಮತ್ತು ಸಹ ಪ್ರಯಾಣಿಕರ ಜತೆ ಮಾತಿನ ಚಕಮಕಿ ನಡೆದಿದೆಯಷ್ಟೆ. ಮಹಿಳಾ ಪ್ರಯಾಣಿಕರು ಮುಸ್ಲಿಂ ಮಹಿಳೆಯರ ಮೇಲೆ ಹಲ್ಲೆ ನಡೆಸಿಲ್ಲ’ ಎಂದಿದ್ದಾರೆ. ‘ಹಲ್ಲೆ ನಡೆದಿರುವ ಬಗ್ಗೆ ಅವರು(ಇಬ್ಬರು ಮಹಿಳೆಯರು) ದೂರು ನೀಡಿದರೆ, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸುತ್ತೇವೆ’ ಎಂದಿದ್ದಾರೆ.

ರಾಜ್ಯಸಭೆಯಲ್ಲಿ ಕೋಲಾಹಲ
ನವದೆಹಲಿ: ಆಂಧ್ರ ಪ್ರದೇಶದಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರನ್ನು ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮತ್ತು ಬಿಎಸ್‌ಪಿ ರಾಜ್ಯಸಭೆಯಲ್ಲಿ ಬುಧವಾರ  ಕೋಲಾಹಲ ಎಬ್ಬಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದವು.

ಈ ವಿಷಯವನ್ನು ಪ್ರಸ್ತಾಪಿಸಿದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ‘ಪೊಲೀಸರ ಸಮ್ಮುಖದಲ್ಲೇ ಈ ಘಟನೆ ನಡೆದಿದೆ’ ಎಂದು ಆರೋಪಿಸಿದರು.
ಮುಸ್ಲಿಂ ಮಹಿಳೆಯರ ಮೇಲಿನ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಸಂಸದೀಯ ವ್ಯವಹಾರಗಳ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಪ್ರತಿಕ್ರಿಯಿಸಬೇಕು ಎಂದು ಅವರು ಆಗ್ರಹಿಸಿದರು.

ಬಿಎಸ್‌ಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ನಿಂತು ಸರ್ಕಾರದ ವಿರುದ್ಧ ಘೋಷಣೆ ಗಳನ್ನು ಕೂಗಿದರು. ಕಾಂಗ್ರೆಸ್‌ ಸದ ಸ್ಯರು ಅವರಿಗೆ ಸಾಥ್‌ ನೀಡಿದರು.

‘ಕಾಂಗ್ರೆಸ್‌ ಪಕ್ಷ ಗೋರಕ್ಷಣೆಯನ್ನು ವಿರೋಧಿಸುತ್ತಿಲ್ಲ. ಆದರೆ ಅದರ ಹೆಸರಲ್ಲಿ ದಲಿತರು ಮತ್ತು ಮುಸ್ಲಿಮರನ್ನು ಗುರಿಯಾಗಿಸುವುದನ್ನು ಖಂಡಿಸುತ್ತದೆ’ ಎಂದು ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಹೇಳಿದರು.

‘ಈ ಘಟನೆಗೆ ಸಂಬಂಧಿಸಿದಂತೆ ಮಧ್ಯ ಪ್ರದೇಶ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ’ ಎಂದು ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ  ಅವರು ಸದನಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT