ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆಯ ಮಳೆದಾರಿಯಲಿ...

Last Updated 23 ಜುಲೈ 2016, 19:30 IST
ಅಕ್ಷರ ಗಾತ್ರ

ಮೂಡಿಗೆರೆ ಪ್ರಕೃತಿಪ್ರಿಯ ಪ್ರವಾಸಿಗರ ನೆಚ್ಚಿನ ಪ್ರವಾಸಿತಾಣ. ವಾರಾಂತ್ಯದ ಎರಡು ದಿನಗಳಲ್ಲಿ ಮೂಡಿಗೆರೆಯನ್ನು ಕೇಂದ್ರವಾಗಿಸಿಕೊಂಡು ಏನೆಲ್ಲ ನೋಡಬಹುದು ಗೊತ್ತೇ?

ಬೇಲೂರು, ಚಿಕ್ಕಮಗಳೂರು ಅಥವಾ ಮಂಗಳೂರು ಕಡೆಯಿಂದ ಮೂಡಿಗೆರೆ ಪ್ರವೇಶಿಸಬಹುದು. ಯಾವ ಕಡೆಯಿಂದ ಬಂದರೂ  ರಸ್ತೆ, ಮನೆ, ಕಣ, ಗಿಡಗಂಟೆ – ಅಷ್ಟೇ ಏಕೆ, ಇಡೀ ಪರಿಸರವೇ ನೀರಿನಲ್ಲಿ ತೊಳೆದಿಟ್ಟಂತೆ ದೂಳುರಹಿತ ಶುಭ್ರ ಅಹ್ಲಾದಕರ ವಾತಾವರಣ ಎದುರಾಗುತ್ತದೆ. ದಾರಿಯುದ್ದಕ್ಕೂ ಬೆಟ್ಟಗುಡ್ಡಗಳ ಇಕ್ಕೆಲಗಳಲ್ಲಿರುವ ಕಾಫಿತೋಟದ ನಡುವಿನ ತಿರುಗಾಟ ಸಹೃದಯರನ್ನು ಪುಳಕಗೊಳಿಸುತ್ತದೆ.

ಮೂಡಿಗೆರೆಯಲ್ಲಿ ಸರಳವಾದ ಊಟ–ವಸತಿ ಸೌಕರ್ಯ ಇದೆ. ಲೋಕೋಪಯೋಗಿ ಇಲಾಖೆಯ ಸಂಪರ್ಕವಿರುವವರಿಗೆ ಐ.ಬಿ., ಅರಣ್ಯ ಇಲಾಖೆಯ ಸಂಪರ್ಕ ಇರುವವರಿಗೆ ಮೂಡಿಗೆರೆಯಿಂದ ಇಪ್ಪತ್ತು ಕಿ.ಮೀ. ದೂರದಲ್ಲಿರುವ ಕೊಟ್ಟಿಗೇಹಾರದ ಚಾರ್ಮುಡಿ ಘಾಟಿಯ ತುದಿಯ ವಿಹಂಗಮ ಸ್ಥಳದಲ್ಲಿರುವ ‘ಮಲಯ ಮಾರುತ’ ವಿಶ್ರಾಂತಿ ಗೃಹವಿದೆ.

ಮೂಡಿಗೆರೆ ಪಟ್ಟಣದಲ್ಲಿ ಅತಿಥಿ ವಸತಿ ಗೃಹ, ಕುಂದೂರು ಲಾಡ್ಜ್, ಮೂಡಿಗೆರೆ ಲಾಡ್ಜ್, ಮನ್‌ಮೋಹನ್ ಲಾಡ್ಜ್ ಹಾಗೂ ಮೂಡಿಗೆರೆ ಕ್ಲಬ್‌ಗಳು ಪ್ರವಾಸಿಗರ ವಸತಿಯ ಅಗತ್ಯಕ್ಕೆ ಒದಗುತ್ತವೆ. ಇವುಗಳ ಹೊರತಾಗಿ ಅಂತರ್ಜಾಲದಲ್ಲಿ ರೆಸಾರ್ಟ್‌, ಹೋಂ ಸ್ಟೇಗಳ ಮಾಹಿತಿ ಪಡೆಯಬಹುದು.

ಮೂಡಿಗೆರೆ–ಮಂಗಳೂರು ಹೆದ್ದಾರಿಯಲ್ಲಿ ಸಾಗುವಾಗ ಜೇನುಕಲ್ಲು ಗುಡ್ಡ ಸಿಗುತ್ತದೆ. ಇಲ್ಲಿಗೆ ಕೊಟ್ಟಿಗೇಹಾರದಿಂದ 8–10 ಕಿ.ಮೀ. ಅಂತರ. ಅಲ್ಲಿಂದ ಚಾರ್ಮುಡಿ ಘಾಟಿಯಲ್ಲಿ ಧುಮುಕುವ ಜಲಧಾರೆಯನ್ನು ಕಣ್ತುಂಬಿಕೊಂಡು ಗಾಳಿ ಗಂಡಿಯಲ್ಲಿ (ಮಳೆಗಾಲದ ಮಾರುತಗಳು ಸಾಗಿಬಂದು ತಾಲ್ಲೂಕಿಗೆ ಅಪ್ಪಳಿಸುವ ಗಂಡಿ) ಕಣಿವೆಯ ವಿಹಂಗಮ ನೋಟವನ್ನು ನೋಡಿ ವಾಪಸ್ಸು ಕೊಟ್ಟಿಗೇಹಾರಕ್ಕೆ ಬರಬಹುದು.

ಅಲ್ಲಿಂದ ಕಳಸ ಮಾರ್ಗವಾಗಿ ಕುದುರೆಮುಖದ ಊರಾದ ಮಲ್ಲೇಶ್ವರ ನೋಡಬಹುದು. ಅಲ್ಲಿಂದ ವಾಪಸ್ಸು ಕಳಸಕ್ಕೆ ಬಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ನೋಡಬಹುದು. ಕಳಸದಿಂದ ಮೇರ್ತಿಖಾನ್ ಮೂಲಕ ಶೃಂಗೇರಿ ನೋಡಿಕೊಂಡು,

ಅಲ್ಲಿಂದ ಅಂದಾಜು ನಲವತ್ತು ಕಿ.ಮೀ. ದೂರದಲ್ಲಿರುವ ಕುವೆಂಪು ಜನ್ಮಸ್ಥಳ ‘ಕುಪ್ಪಳಿ’ಗೆ ಭೇಟಿ ನೀಡಬಹುದು. ಅಲ್ಲಿಂದ ಕೊಪ್ಪ, ಬಾಳೇಹೊನ್ನೂರು ಮುಖಾಂತರ ನೂರು ಕಿ.ಮೀ. ದೂರದಲ್ಲಿರುವ ಮೂಡಿಗೆರೆಯನ್ನು ಮರಳಿ ತಲುಪಬಹುದು.

ಚಾರಣ ಪ್ರಿಯರಿಗೆ ಮೂಡಿಗೆರೆಯಿಂದ ದಾರದಳ್ಳಿ ಮುಖಾಂತರ 25 ಕಿ.ಮೀ. ದೂರದಲ್ಲಿ ಭೈರಾಪುರ ಎನ್ನುವ ಊರಿದೆ. ಅಲ್ಲಿನ ಒಂದು ಸಾವಿರ ವರ್ಷಗಳ ಇತಿಹಾಸವಿರುವ ನಾಣ್ಯದ ಭೈರವೇಶ್ವರ ದೇವಸ್ಥಾನದ ಹಿಂಬದಿಯಲ್ಲಿರುವ ಶಿಶಿಲ ಗುಡ್ಡ (ಇದನ್ನು ಎತ್ತಿನ ಭುಜದ ಗುಡ್ಡ ಎಂದೂ ಕರೆಯವರು) ಹತ್ತಬಹುದು.

ಮೂಡಿಗೆರೆ ಜನ್ನಾಪುರ ಬೆಟ್ಟದಮನೆ ಮಾರ್ಗವಾಗಿ 20 ಕಿ.ಮೀ. ದೂರದಲ್ಲಿ ಹೊಯ್ಸಳರ ಮೂಲ ಸ್ಥಾನ ಅಂಗಡಿ ಗ್ರಾಮದಲ್ಲಿದೆ. ಮೂಡಿಗೆರೆ ಸಬ್ಬೇನಹಳ್ಳಿ, ಗುತ್ತಿ ಮಾರ್ಗವಾಗಿ ದೇವರ ಮನೆ ಗ್ರಾಮದಲ್ಲಿ ಚೋಳರ ಕಾಲದ ಕಾಲ ಭೈರವೇಶ್ವರ ದೇವಸ್ಥಾನದ ಹಿಂಬದಿ ಗುಡ್ಡವನ್ನು ಹತ್ತಿ ಪಶ್ಚಿಮ ಘಟ್ಟಗಳ ರಮಣೀಯ ನೋಟವನ್ನು ಸವಿಯಬಹುದು.

ಮೂಡಿಗೆರೆ–ಕಳಸ ಮಾರ್ಗದ ಮಧ್ಯೆ 40 ಕಿ.ಮೀ. ದೂರದಲ್ಲಿರುವ ಕೆಳಗೂರು ಟೀ ಎಸ್ಟೇಟ್ ಸೌಂದರ್ಯವನ್ನು ನೋಡುತ್ತಾ ಅಲ್ಲಿಂದ ಮೂರು ಕಿ.ಮೀ. ಮುಂದೆ ಸಾಗಿದರೆ ದುರ್ಗದ ಹಳ್ಳಿ ಸಿಗುತ್ತದೆ. ಅಲ್ಲಿ ಎಡಕ್ಕೆ ತಿರುಗಿದರೆ ಬಲ್ಲಾಳರಾಯನ ದುರ್ಗಕ್ಕೆ ಭೇಟಿ ನೀಡಬಹುದು.

ಹೊಯ್ಸಳರ ರಾಜ ಎರಡನೇ ಬಲ್ಲಾಳ ರಾಯನು ಕೋಟೆಯನ್ನು ನಿರ್ಮಿಸಿ ಅಲ್ಲಿನ ವ್ಯಾಪಾರ ಮಾರ್ಗವನ್ನು ತನ್ನ ಹಿಡಿತದಲ್ಲಿ ಹಿಡಿದಿಟ್ಟುಕೊಂಡ ಸ್ಥಳ ಇದು. ಕೋಟೆ ಬಾಗಿಲುಗಳಿಗೆ ಭೈರವನ ಬಾಗಿಲು, ಸಿಂಹ ಬಾಗಿಲು, ದಿಡ್ಡಿ ಬಾಗಿಲೆಂದು ಹೆಸರಿದ್ದು, ಕೋಟೆಯ ಗೋಡೆ ಮೂರೂವರೆ ಅಡಿ ಅಗಲವಿದ್ದು, ನಾಲ್ಕೂವರೆ ಅಡಿ ಎತ್ತರವಿದೆ. ಇಲ್ಲಿಂದ ಸುತ್ತಮುತ್ತಲ ಹಲವಾರು ಊರುಗಳನ್ನೂ ದೂರದ ಮಂಗಳೂರನ್ನೂ ವೀಕ್ಷಿಸಬಹುದಾಗಿದೆ.

ಸೂರ್ಯೋದಯದ ಅರ್ಧ ತಾಸು ಮುಂಚಿತವಾಗಿ ಈ ಯಾವುದೇ ಗುಡ್ಡಗಳ ತುದಿಯಲ್ಲಿದ್ದರೆ ಸೂರ್ಯೋದಯದ ಅದ್ಭುತ ಕ್ಷಣಗಳನ್ನು ಅನುಭವಿಸಬಹುದು. ಡಿಸೆಂಬರ್–ಜನವರಿಯಲ್ಲಿ ಬೆಟ್ಟಗುಡ್ಡಗಳು ಮಾತ್ರ ಕಾಣುತ್ತವಲ್ಲದೆ, ಮಿಕ್ಕ ಎಲ್ಲಾ ಭೂಮಿ ಮೋಡದಲ್ಲಿ ಮುಳುಗಿರುವಂತೆ ರಮಣೀಯವಾಗಿ ಕಾಣುವ ‘ಮಂಜಿನ ಕಡಲ’ನ್ನೂ ನೋಡಬಹುದು.

ಕುದುರೆಮುಖದಿಂದ 10 ಕಿ.ಮೀ. ದೂರದಲ್ಲಿರುವ ಗಂಗಾ ಮೂಲವು ತಾಲ್ಲೂಕಿನ ಜೀವನದಿಗಳಾದ ತುಂಗಾ, ಭದ್ರಾ, ನೇತ್ರಾವತಿಯ ಉಗಮ ಸ್ಥಳವಾಗಿದೆ. ತುಂಗಾ–ಭದ್ರ ಪೂರ್ವಕ್ಕೆ ಹರಿದು ಸಾವಿರ ಕಿ.ಮೀ. ಸಾಗಿ ಸಮುದ್ರ ಸೇರಿದರೆ ನೇತ್ರಾವತಿ ಪಶ್ಚಿಮಕ್ಕೆ ಹರಿದು ಕೇವಲ ನೂರು ಕಿ.ಮೀ. ಅಂತರದಲ್ಲಿರುವ ಅರಬ್ಬಿ ಸಮುದ್ರವನ್ನು ಮಂಗಳೂರಿನಲ್ಲಿ ಸೇರುತ್ತದೆ.

ಇನ್ನೊಂದು ಜೀವ ನದಿಯಾದ ಹೇಮಾವತಿಯು ಮೂಡಿಗೆರೆ–ಕಳಸ–ಕುದುರೆಮುಖ ಮಾರ್ಗದಲ್ಲಿ ಚಲಿಸುವಾಗ ಮೂಡಿಗೆರೆಯಿಂದ 24 ಕಿ.ಮೀ. ದೂರದಲ್ಲಿ ಸಿಗುವ ಜಾವಳಿ ಎನ್ನುವಲ್ಲಿ ಬಲಕ್ಕೆ ಎರಡು ಕಿ.ಮಿ. ಸಾಗಿದರೆ ಉಗಮಸ್ಥಾನವನ್ನು ತಲುಪಬಹುದು.

ತಮ್ಮ ವಿಶಿಷ್ಟ ಬರವಣಿಗೆಗಳಿಂದ ಕರ್ನಾಟಕದಾದ್ಯಂತ ಮೂಡಿಗೆರೆಯ ಹೆಸರನ್ನು ಚಿರಪರಿಚಿತಗೊಳಿಸಿದ ಕೀರ್ತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರದು. ಅವರ ಗೌರವಾರ್ಥ ರೂಪುಗೊಂಡಿರುವ ‘ವಿಸ್ಮಯ ಪ್ರತಿಷ್ಠಾನ’ – ತೇಜಸ್ವಿಯರ ಆಸಕ್ತಿಯ ಕ್ಷೇತ್ರಗಳಿಂದ ಪ್ರೇರಿತರಾಗಿ ಇಲ್ಲಿಗೆ ಬರುವವರಿಗೆ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಮೂಲಭೂತ ಸೌಕರ್ಯ ನೀಡಿ ಉತ್ತೇಜಿಸಲು ಶ್ರಮಿಸುತ್ತಿರುವ ಸಂಸ್ಥೆ.

ಇದು ಕೊಟ್ಟಿಗೆಹಾರದ ಬಸ್ ಸ್ಟ್ಯಾಂಡ್ ಹಿಂಭಾಗದಲ್ಲಿ ತಾತ್ಕಾಲಿಕ ಕಚೇರಿ ಹೊಂದಿದೆ; ಪೂರ್ಣ ಪ್ರಮಾಣದ ಸಂಶೋಧನಾ ಕೇಂದ್ರವನ್ನು ತೆರೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT