ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರೂ ಹಿತವರು...

‘ಮನೆಯಂಗಳದಲ್ಲಿ ಮಾತುಕತೆ’ಯಲ್ಲಿ ಎಂ.ಎಸ್. ಪ್ರಭಾಕರ
Last Updated 16 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು:  ‘ಸಾಹಿತ್ಯ, ಬೋಧಕ ವೃತ್ತಿ ಹಾಗೂ ಪತ್ರಿಕಾ ವೃತ್ತಿ. ಜೀವನದಲ್ಲಿ  ಈ ಮೂವರೂ ನನಗೆ ಹಿತವರು...’
-ಇದು ಕಾಮರೂಪಿ ಕಾವ್ಯನಾಮ ದಿಂದ ಖ್ಯಾತರಾದ ಸಾಹಿತಿ ಮೊಟ್ಣಹಳ್ಳಿ ಸೂರಪ್ಪ ಪ್ರಭಾಕರ ಅವರ ಮನದಾಳ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ನಯನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಮನೆಯಂಗಳ ದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಈವರೆಗಿನ ಜೀವನ ಪಯಣವನ್ನು ಮೆಲುಕು ಹಾಕಿದರು.

‘ಸಾಹಿತ್ಯ ಇಲ್ಲದೇ ನನ್ನನ್ನು ನಾನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಂಗ್ಲಿಷ್‌ ಸಾಹಿತ್ಯ ನನ್ನನ್ನು ರೂಪಿಸಿದೆ. ಕನ್ನಡ ಸಾಹಿತ್ಯ ಕೊಡಗೆಯೂ ಸಾಕಷ್ಟಿದೆ. ಪಾಠ ಮಾಡುವುದೂ ನನಗೆ ಮೆಚ್ಚು. ಈಗಲೂ ಹಳೇ ವಿದ್ಯಾರ್ಥಿಗಳು ಮಡದಿ, ಮಕ್ಕ ಳಾದಿಯಾಗಿ ಕುಟುಂಬ  ಸಹಿತ ನನ್ನ ಸಂಪರ್ಕದಲ್ಲಿದ್ದಾರೆ. ನನಗೆ ಸಂಸಾರ, ಕುಟುಂಬ ಇಲ್ಲ. ಈ ಕೊರತೆಯನ್ನು ಅದು  ನೀಗಿದೆ. ಇನ್ನು ಪತ್ರಿಕಾ ವೃತ್ತಿಯು ಸಂಬಳ, ದೇಶ ವಿದೇಶ ಸುತ್ತುವ ಅವಕಾಶ ಸೇರಿದಂತೆ ಸಾಕಷ್ಟು ಸೌಲಭ್ಯ ಒದಗಿಸಿತು’ ಎಂದು ನುಡಿದರು.

‘1936ರಲ್ಲಿ ಜನಿಸಿದೆ. ಹುಟ್ಟಿದ್ದು ಕೋಲಾರ ಅಲ್ಲ. ಬೆಳೆದಿದ್ದು ಮಾತ್ರ ಕೋಲಾರದಲ್ಲಿ. ಹುಟ್ಟಿದ್ದ ಊರು ಒಂದು ನಿಲ್ದಾಣವಷ್ಟೆ. ನನ್ನ ವ್ಯಕ್ತಿತ್ವದಲ್ಲೆಲ್ಲ ಕೋಲಾರದ ಛಾಪಿದೆ. ತುಂಟತನವೂ ಅದರಲ್ಲಿ ಸೇರುತ್ತದೆ’ ಎಂದು ನಕ್ಕರು.

‘1953ರಲ್ಲಿ ಶಿಕ್ಷಣಕ್ಕಾಗಿ ಬೆಂಗ ಳೂರಿಗೆ ಬಂದೆ. ನಂತರ ಧಾರವಾಡ ಸೇರಿದೆ. ಕಾಲೇಜು ಪಾಠದ ಆಚೆಗಿನ ಓದು, ಬರಹ ಅಲ್ಲಿ ಸಾಧ್ಯವಾಯಿತು. ನನ್ನಲ್ಲಿ ಹೊಸ ಪ್ರಜ್ಞೆ ಮೂಡಿದ್ದು ಅಲ್ಲೆ. ನನ್ನ ಹೆಸರಿನ ಕೊನೆಯ ಅಕ್ಷರ ಅರ್ಧಾಕ್ಷರ   ಆಗಿದ್ದೂ ಅಲ್ಲೇ. ಧಾರವಾಡ ಪೇಡ, ಶ್ರೀಖಂಡಕ್ಕೆ ಮನಸೋತೆ’ ಎಂದು ಗತವನ್ನು ನೆನಪಿಸಿಕೊಂಡರು.

‘ಮೊದಲಿನಿಂದಲೂ ದೇಶ ಸುತ್ತುವ ಆಸಕ್ತಿ. ಧಾರವಾಡದಿಂದ ಅಸ್ಸಾಂಗೆ ಹೋದೆ. ಆರಂಭದಲ್ಲಿ ಕಷ್ಟ ಎನಿಸಿತು. ಬಳಿಕ ಅಲ್ಲಿನ ಎಲ್ಲವೂ ಮೈ ಮನಸು ಆವರಿಸಿತು. ವಿದೇಶ ಸುತ್ತಿದ್ದರೂ, ಇದು ವರೆಗೂ ತಾಜಮಹಲ್‍ ನೋಡಿಲ್ಲ. ಆದರೆ, ಅಸ್ಸಾಂ ಸಾಕಷ್ಟು ತಿರುಗಿದ್ದೇನೆ. ಅದು ನನ್ನನ್ನು ರೂಪಿಸಿದೆ’ ಎಂದು ಕೃತಜ್ಞರಾಗಿ ನುಡಿದರು.

ಸೈಕಲ್‌ನಲ್ಲಿ ತಿರುಗಾಟ...:   ‘ರಾಜಕೀಯ ಸೆಳೆದಾಗ ಬೋಧಕ ವೃತ್ತಿ ಬಿಟ್ಟು, ಪತ್ರಕರ್ತನಾದೆ. ಎಕನಾಮಿಕ್‌ ಅಂಡ್‌ ಪೊಲಿಟಿಕಲ್‌ ವೀಕ್ಲಿ ನಿಯತಕಾಲಿಕೆ ಸೇರಿ ಮುಂಬೈಗೆ ಹೋದೆ. ಆಗ ಸೈಕಲ್‌ ತುಳಿಯುತ್ತಿದ್ದೆ. ಕೆಲಸ ಮುಗಿಸಿ, ಚಲನ ಚಿತ್ರ ನೋಡಿ, ಬೀರ್‌ ಹೀರಿ, ಬಾಡೂಟ ತಿಂದು ತಡರಾತ್ರಿ  ಮುಂಬೈ ಬೀದಿಗಳಲ್ಲಿ ಸೈಕಲ್‌ ಏರಿ ಮನೆಗೆ ಮರಳುತ್ತಿದ್ದೆ’ ಎಂದು ಮುಗುಳ್ನಕ್ಕರು.

‘ನಂತರ ದಿ ಹಿಂದೂ ಪತ್ರಿಕೆಗೆ ದುಡಿದೆ. ಮತ್ತೆ ಅಸ್ಸಾಂಗೆ ಹೋದೆ.  ಬೇಸರವಾಗಿ ದಕ್ಷಿಣ ಆಫ್ರಿಕಾಗೆ ತೆರಳಿ ವರದಿ ಮಾಡಿದೆ. ನೆಲ್ಸನ್‌ ಮಂಡೇಲಾ  ಸೇರಿದಂತೆ ಹಲವರ ಭೇಟಿ ಈಗಲೂ ಖುಷಿ ನೀಡುತ್ತದೆ’ ಎಂದರು. ಮಂಡೇಲಾ ಭೇಟಿಯ ಕೆಲ ಕ್ಷಣಗಳನ್ನೂ ಮೆಲುಕು ಹಾಕಿದರು.

ಕಾವ್ಯನಾಮದ ಗುಟ್ಟು: ‘ಕಾಮರೂಪಕ್ಕೆ ಹಲವು ಅರ್ಥಗಳಿವೆ. ಅದೊಂದು ಅಸ್ಸಾಮೀ ಪದ. ಇದೇ ಹೆಸರಿನ ಜಿಲ್ಲೆ ಯೂ ಅಲ್ಲಿದೆ. ಕಾಮರೂಪ ಎಂದರೆ ಒರಟರು ಎಂದರ್ಥ. ನಾನು ಸ್ವಲ್ಪ ಒರಟ. ಅದನ್ನೆ ಕಾವ್ಯನಾಮವಾಗಿ ಇಟ್ಟುಕೊಂಡೆ’ ಎಂದು ಗುಟ್ಟು ಬಿಚ್ಚಿಟ್ಟರು.‘ಕಾಮರೂಪಿ’ ಎಂದು ಕರೆಯಿಸಿ ಕೊಂಡರೂ ಮದುವೆ ಆಗದೇ ಉಳಿ ದಿರಲ್ಲ? ಎಂಬ ಸಭಿಕರ ಪ್ರಶ್ನೆಗೆ ‘ಮದುವೆಗೂ ಕಾಮಕ್ಕೂ ಏನೇನೂ ಸಂಬಂಧವಿಲ್ಲ. ವಿವಾಹ ಇಲ್ಲ ದ್ದಿದರೇನೇ ಕಾಮ ಚೆನ್ನಾಗಿರುತ್ತದೆ’ ಎಂದಾಗ ಸಭಿಕರು ಗೊಳ್ಳೆಂದು ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT