ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊದಲ್ಲಿ ವಾರಾಂತ್ಯದ ಮೋಜಿನ ಯಾನ

Last Updated 30 ಏಪ್ರಿಲ್ 2016, 19:42 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆ ಪ್ರವೇಶ ದ್ವಾರದವರೆಗಿನ ‘ನಮ್ಮ ಮೆಟ್ರೊ’ ಸುರಂಗ ಮಾರ್ಗದಲ್ಲಿ ಮೊದಲ ದಿನ ವಾರಾಂತ್ಯದಲ್ಲಿ ಮೋಜಿಗಾಗಿ ಪ್ರಯಾಣಿಸಿದವರು ಪ್ರತಿ ನಿಲ್ದಾಣದಲ್ಲೂ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದು, ಸ್ನೇಹಿತರಿಗೆ ಆ ಚಿತ್ರವನ್ನು ಕಳುಹಿಸಿ ಸಂಭ್ರಮಿಸಿದರು.

ನಿಲ್ದಾಣ ಪ್ರವೇಶಿಸುವಾಗಿನ ಭದ್ರತಾ ವ್ಯವಸ್ಥೆ, ಎಸ್ಕಲೇಟರ್‌ ವ್ಯವಸ್ಥೆ, ನಿಲ್ದಾಣಗಳಲ್ಲಿನ ಹವಾನಿಯಂತ್ರಣ ವ್ಯವಸ್ಥೆ ಮುಂತಾದ ಅತ್ಯಾಧುನಿಕ ವ್ಯವಸ್ಥೆಗಳಿಂದ   ಬೆಂಗಳೂರಿನ ಸಾರಿಗೆ ವ್ಯವಸ್ಥೆಗೊಂದು ಮೆಟ್ರೊ ಸಾರಿಗೆ ಕಳಶಪ್ರಾಯ ಎಂಬಂತೆ ಪ್ರಯಾಣಿಕರಿಗೆ ಭಾಸವಾಯಿತು.

ಬಿರುಬಿಸಿಲಿನಲ್ಲಿ ಬೆಂದು ಬಸವಳಿದವರಿಗೆ ಮೆಟ್ರೊ ಪ್ರಯಾಣ ದುಪ್ಪಟ್ಟು ಖುಷಿ ನೀಡಿತು. ತಂಪನೆಯ ವಾತಾವರಣವನ್ನು ಆನಂದಿಸಿದವರು ಅಸಂಖ್ಯ ಮಂದಿ. ‘ಇಷ್ಟು ಬೇಗ ಸುರಂಗ ಮುಗಿದು ಹೋಯಿತಲ್ಲ? ಈಗ ಇಳಿಯಲೇಬೇಕಲ್ಲ’ ಎಂದು ಬೇಸರಪಟ್ಟವರು ಹಲವರು.

ಪೂರ್ವ–ಪಶ್ಚಿಮ ಕಾರಿಡಾರ್‌: ಪೂರ್ವ– ಪಶ್ಚಿಮ ಕಾರಿಡಾರ್‌ನ ಎಂ.ಜಿ.ರಸ್ತೆ–ಬೈಯಪ್ಪನಹಳ್ಳಿ ನಡುವಿನ ಎತ್ತರಿಸಿದ ಮಾರ್ಗದಲ್ಲಿ 2011ರಲ್ಲಿ ಸಂಚಾರ ಆರಂಭವಾಗಿತ್ತು. ನಾಯಂಡಹಳ್ಳಿ–ಮಾಗಡಿ ರಸ್ತೆ ನಡುವಿನ ಎತ್ತರಿಸಿದ ಮಾರ್ಗ ಕಳೆದ ವರ್ಷ ಉದ್ಘಾಟನೆಯಾಗಿತ್ತು. ಈ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವ 4.8 ಕಿ.ಮೀ. ಉದ್ದದ ಮಾರ್ಗ ಶುಕ್ರವಾರ ಉದ್ಘಾಟನೆಗೊಂಡಿತ್ತು.

ಪೂರ್ವ–ಪಶ್ಚಿಮ ಕಾರಿಡಾರ್‌ನಲ್ಲಿ ಶನಿವಾರ ಬೆಳಿಗ್ಗೆ 6ರಿಂದ ವಾಣಿಜ್ಯ ಸಂಚಾರ ಆರಂಭಗೊಂಡಿತು. ಮೊದಲ ಎರಡು ಗಂಟೆ ಜನದಟ್ಟಣೆ ಜಾಸ್ತಿ ಇರಲಿಲ್ಲ. 8  ಗಂಟೆ ದಾಟುತ್ತಿದ್ದಂತೆ  ಪ್ರಯಾಣಿಕರು ರೈಲಿಗೆ ದಾಂಗುಡಿ ಇಟ್ಟರು.  

ಉದ್ಯೋಗಕ್ಕೆ ತೆರಳುವವರ ಜತೆಗೆ ವಾರಾಂತ್ಯದ ಜಾಲಿ ಯಾನಕ್ಕೆ ಬಂದವರ ಸಂಖ್ಯೆಯೂ ದೊಡ್ಡದಿತ್ತು. ರೈಲು ಬಂಡಿಗಳು ತುಂಬಿ ತುಳುಕಿದವು. ಬಹುತೇಕ ಪ್ರಯಾಣಿಕರು ಒಲವು ತೋರಿದ್ದು ಮೆಜೆಸ್ಟಿಕ್‌ನಿಂದ ಎಂ.ಜಿ. ರಸ್ತೆ ನಿಲ್ದಾಣದ ವರೆಗಿನ ಸಂಚಾರಕ್ಕೆ. ಈ ಎರಡು ನಿಲ್ದಾಣಗಳಲ್ಲಿ ರೈಲಿನ ಅರ್ಧದಷ್ಟು ಪ್ರಯಾಣಿಕರು ಖಾಲಿಯಾಗುತ್ತಿದ್ದರು. ಸಂಜೆಯಂತೂ ಮೆಟ್ರೊ ಬೋಗಿಗಳು ತುಂಬಿ ತುಳುಕಿದವು. 
 
6 ನಿಮಿಷಕ್ಕೊಂದು ರೈಲು:
ಸಾಮಾನ್ಯವಾಗಿ ಬೆಳಿಗ್ಗೆ 6ರಿಂದ 8ರ ವರೆಗೆ ಹಾಗೂ ರಾತ್ರಿ 8ರಿಂದ 10ರ ವರೆಗೆ 15 ನಿಮಿಷಕ್ಕೊಂದು, ಉಳಿದ ಸಮಯದಲ್ಲಿ 10 ನಿಮಿಷಕ್ಕೊಂದು ರೈಲುಗಳು ಸಂಚರಿಸುತ್ತಿವೆ. ಮೊದಲ ದಿನ ಪ್ರಯಾಣಿಕರ ದಟ್ಟಣೆ ಜಾಸ್ತಿ ಇರಲಿದೆ ಎಂದು ನಿರೀಕ್ಷಿಸಿದ್ದ ಮೆಟ್ರೊ ನಿಗಮವು, ಶನಿವಾರ 6 ನಿಮಿಷಕ್ಕೊಂದು ರೈಲು ಓಡಿಸಿತು.

‘ಹಲವು ವರ್ಷಗಳಿಂದ ಕಾದಿದ್ದೆ. ಮಾಗಡಿ ರಸ್ತೆ ಟೋಲ್‌ಗೇಟ್‌, ಸುಜಾತ ಚಿತ್ರಮಂದಿರ, ಓಕಳಿಪುರ ಜಂಕ್ಷನ್‌ನಲ್ಲಿ ನಿತ್ಯ ಉಂಟಾಗುವ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ಅನುಭವಿಸುತ್ತಿದ್ದ ಕಿರಿಕಿರಿಗೆ  ಕೊನೆಗೂ ಮುಕ್ತಿ ಸಿಕ್ಕಿತು. ಹೊಸಹಳ್ಳಿ ಮೆಟ್ರೊ ನಿಲ್ದಾಣದಿಂದ ಶರವೇಗದಲ್ಲಿ ಬಂದ ರೈಲು ಕೇವಲ 15 ನಿಮಿಷದಲ್ಲಿ ನನ್ನನ್ನು ಕಚೇರಿಗೆ ತಲುಪಿಸಿತು. ಈ ಹಾದಿಯನ್ನು ನಾನು ದ್ವಿಚಕ್ರ ವಾಹನದಲ್ಲಿ ಕ್ರಮಿಸಲು ಸುಮಾರು ಒಂದೂವರೆ ಗಂಟೆ ವ್ಯಯಿಸಬೇಕಿತ್ತು’ ಎಂದು ಪ್ರಯಾಣಿಕ ಅರವಿಂದ್‌ ಸಂತಸ ಹಂಚಿಕೊಂಡರು.

‘2011ರಲ್ಲಿ ಎಂ.ಜಿ.ರಸ್ತೆ–ಬೈಯಪ್ಪನಹಳ್ಳಿ ನಡುವೆ ‘ನಮ್ಮ ಮೆಟ್ರೊ’ದ ಸಂಚಾರ ಶುರುವಾದ ಸಂದರ್ಭದಲ್ಲೂ ಮೊದಲ ದಿನ ಪ್ರಯಾಣಿಕರ ಪ್ರತಿಕ್ರಿಯೆ ಅಭೂತಪೂರ್ವವಾಗಿತ್ತು. ಮೊದಲ ದಿನ 50 ಸಾವಿರ ಮಂದಿ ಪ್ರಯಾಣ ಮಾಡಿದ್ದರು. ದಿನ ಕಳೆದಂತೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ಈ ಮಾರ್ಗದಲ್ಲಿ ಈಗ ನಿತ್ಯ 20 ಸಾವಿರ ಮಂದಿ ಸಂಚಾರ ಮಾಡುತ್ತಿದ್ದಾರೆ. ಆರಂಭದಲ್ಲಿ ಕುತೂಹಲ ಇರುತ್ತದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ವಾರಾಂತ್ಯದಲ್ಲೇ ಸುರಂಗ ಸಂಚಾರ ಆರಂಭವಾಗಿದೆ. ಮಾಲ್‌, ಸಿನಿಮಾ ಸೇರಿದಂತೆ ಇತರ ಮನರಂಜನೆಗೆ ಹೋಗುವವರು ಇಂದು ಮೆಟ್ರೊಗೆ ಬಂದಿದ್ದಾರೆ. ಭಾನುವಾರವೂ ಇದೇ ರೀತಿಯ ದಟ್ಟಣೆ ಇರಲಿದೆ. ಆ ನಂತರ ಕೆಲವು ದಿನ ಪ್ರಯಾಣಿಕರ ಸಂಖ್ಯೆ ಸ್ವಲ್ಪ ಕಡಿಮೆಯಾಗಲಿದೆ. 3–4 ವಾರ ಕಳೆದ ಬಳಿಕ ಪ್ರಯಾಣಿಕರ ಸಂಖ್ಯೆ ಮತ್ತೆ ಹೆಚ್ಚಲಿದೆ’ ಎಂದು ಅವರು ವಿಶ್ಲೇಷಿಸುತ್ತಾರೆ.

‘ಪ್ರತಿ ರೈಲು ಗಾಡಿಯಲ್ಲಿ ಸಾವಿರ ಪ್ರಯಾಣಿಕರು ಸಂಚಾರಿಸಬಹುದು. ಪೂರ್ವ– ಪಶ್ಚಿಮ ಕಾರಿಡಾರ್‌ನಲ್ಲಿ ದಿನಕ್ಕೆ 160 ಟ್ರಿಪ್‌ಗಳಿವೆ. ಪ್ರತಿನಿತ್ಯದ ಪ್ರಯಾಣಿಕರ ಸಂಖ್ಯೆ ಲಕ್ಷ ದಾಟುವ ವಿಶ್ವಾಸ ಇದೆ’ ಎಂದು ಅವರು ತಿಳಿಸುತ್ತಾರೆ.

ಮೊಬೈಲ್‌ ನೆಟ್‌ವರ್ಕ್‌ ಇಲ್ಲ: ಸುರಂಗದೊಳಗೆ ಸಂಚಾರದ ವೇಳೆಗೆ ಮೊಬೈಲ್‌ ನೆಟ್‌ವರ್ಕ್‌ ಸಿಗುತ್ತಿರಲಿಲ್ಲ. ‘ಈ ಸಮಸ್ಯೆ ಒಂದೆರಡು ತಿಂಗಳಲ್ಲಿ ಬಗೆಹರಿಯಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

₹25 ಲಕ್ಷ ಆದಾಯ
‘ಸುರಂಗ ಮಾರ್ಗ ಇರುವ ಪೂರ್ವ–ಪಶ್ಚಿಮ ಕಾರಿಡಾರ್‌ನಲ್ಲಿ ಶನಿವಾರ 90,482 ಮಂದಿ ಪ್ರಯಾಣ ಮಾಡಿದ್ದಾರೆ’ ಎಂದು ನಿಗಮದ ವಕ್ತಾರ ಯು. ವಸಂತ ರಾವ್‌ ತಿಳಿಸಿದರು.

‘ಮಧ್ಯಾಹ್ನದವರೆಗೆ ಸಂಚಾರ ಮಾಡಿದವರು 30 ಸಾವಿರ ಮಂದಿ.  ಮಧ್ಯಾಹ್ನದ ಬಳಿಕ ನಿರೀಕ್ಷೆಯೂ ಮೀರಿ ಜನಸಾಗರ ಹರಿದುಬಂತು. ಈ ಮಾರ್ಗದಲ್ಲಿ ಶನಿವಾರವೇ ನಿಗಮಕ್ಕೆ ₹25 ಲಕ್ಷ ಆದಾಯ ಬಂದಿದೆ’ ಎಂದರು.

‘ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್‌ ಪಂದ್ಯಗಳ ಸಂದರ್ಭದಲ್ಲಿ ಮೆಟ್ರೊ ಅವಧಿಯನ್ನು ವಿಸ್ತರಿಸುತ್ತೇವೆ’ ಎಂದು ಅವರು ಹೇಳಿದರು.

ಪ್ರಯಾಣಿಕರ ಪ್ರತಿಕ್ರಿಯೆಗಳು...
ಅತ್ತಿಗುಪ್ಪೆಯಿಂದ ಕಬ್ಬನ್ ಪಾರ್ಕ್ ನಿಲ್ದಾಣಕ್ಕೆ 20 ನಿಮಿಷದಲ್ಲಿ ಬಂದಿದ್ದೇನೆ.  ಬಸ್‌ನಲ್ಲಿ ಬಂದಿದ್ದರೆ ಒಂದು ಗಂಟೆ ಆಗುತ್ತಿತ್ತು. ಇದರಿಂದ ಸಮಯ ಉಳಿತಾಯವಾಗಿದೆ. ಮೆಟ್ರೊ ನಿಲ್ದಾಣಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು.
–ಶ್ರದ್ಧಾ, ನಾಗರಬಾವಿ ನಿವಾಸಿ
*
ವಾಹನ ದಟ್ಟಣೆಯಿಂದಾಗಿ ಮೈಸೂರು ಬ್ಯಾಂಕ್ ವೃತ್ತದಿಂದ ಮೆಜೆಸ್ಟಿಕ್ ಹೋಗಲು ಪ್ರಯಾಸ ಪಡಬೇಕಿತ್ತು. ಮೆಟ್ರೊ ಸೇವೆ ಆರಂಭವಾಗಿರುವುದರಿಂದ ದಟ್ಟಣೆ ಕಿರಿಕಿರಿ ಇಲ್ಲದೆ ಬೇಗ ತಲುಪಬಹುದು. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ.
-ಶಶಿಕಾಂತ್, ಎಂಬಿಎ ವಿದ್ಯಾರ್ಥಿ (ಸೆಂಟ್ರಲ್ ಕಾಲೇಜು)
*
ಕೋರಮಂಗಲದಲ್ಲಿರುವ ಐಬಿಎಂ ಕಂಪೆನಿಗೆ ವಿಜಯನಗರದಿಂದ ಬೈಕ್‌ನಲ್ಲಿ ಹೋಗುತ್ತಿದ್ದೆ. ಇನ್ನು ಮುಂದೆ ಮೆಟ್ರೊದಲ್ಲಿ ಓಡಾಡಲು ನಿರ್ಧರಿಸಿದ್ದೇನೆ.
-ದೋಂಡುಸಾ, ಸಾಫ್ಟ್‌ವೇರ್ ಉದ್ಯೋಗಿ
*
ಮೆಟ್ರೊ ಸೇವೆಯಿಂದಾಗಿ ನಗರದ ವಿವಿಧ ಸ್ಥಳಗಳಿಗೆ ಬೇಗ ತಲುಪಬಹುದಾಗಿದೆ. ಮೆಟ್ರೊ ನಿಲ್ದಾಣಗಳಿಂದ ಬೇರೆ ಸ್ಥಳಗಳಿಗೆ ಹೋಗಲು ಫೀಡರ್ ಬಸ್‌ಗಳ ವ್ಯವಸ್ಥೆ ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ.
-ರಂಗನಾಥ್, ವಿಜಯನಗರ ನಿವಾಸಿ
*
ಸಮಯ ಸಾಕಷ್ಟು ಉಳಿಯುತ್ತದೆ. ಬೆಳಗಾವಿಯಿಂದ ರಾಜಧಾನಿಗೆ ಕೆಲಸ ನಿಮಿತ್ತ ಬರುವ ನಾವು ಸಂಚಾರ ಕಿರಿಕಿರಿ ಇಲ್ಲದೆ ವಿಧಾನಸೌಧಕ್ಕೆ ಬೇಗ ಬರಬಹುದು. ಕೆಂಪೇಗೌಡ ನಿಲ್ದಾಣ ನಿಲ್ದಾಣ ಎಂದರೆ ತಕ್ಷಣ ಗೊತ್ತಾಗುವುದಿಲ್ಲ.  ಮೆಜೆಸ್ಟಿಕ್‌ ಎಂದು ಕೂಗಿದರೆ ಉತ್ತಮ.
-ರಾಯಣ್ಣ ಭಂಗಿ, ಬೆಳಗಾವಿ ನಿವಾಸಿ
*
ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಬೈಯಪ್ಪನಹಳ್ಳಿಯಲ್ಲಿ ವಾಸವಿದ್ದು, ಅಲ್ಲಿಂದ ಎಂ.ಜಿ. ರಸ್ತೆ, ಮೆಜೆಸ್ಟಿಕ್‌ಗೆ ಬರಲು ಮೆಟ್ರೊ ಅನುಕೂಲವಾಗಿದೆ. ಸಮಯ ಸಾಕಷ್ಟು ಉಳಿಯುತ್ತದೆ.
-ಎನ್. ಮಹೇಶ್‌
*
ವಿಜಯಪುರದ ನಾನು ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದೇನೆ. ಮೆಟ್ರೊದಿಂದ ಕಡಿಮೆ ಸಮಯದಲ್ಲಿ  ಉದ್ಯೋಗ ಸ್ಥಳಕ್ಕೆ ಹಾಗೂ ಊರಿಗೆ ಹೋಗುವ ವೇಳೆ ರೈಲು, ಬಸ್‌ ನಿಲ್ದಾಣ ತಲುಪಬಹುದು.
-ಶ್ರೀಕಾಂತ್‌ ಮಂಕಳಿ
*
ಮೆಟ್ರೊ ಹೇಗಿದೆ ಎಂದು ನೋಡಲು ಬಂದಿದ್ದೇನೆ. ಮೊದಲ ಬಾರಿ ಓಡಾಡಿದ್ದರಿಂದ ಖುಷಿಯಾಗಿದೆ. ಬಸ್‌ ಬದಲು ಇದರಲ್ಲೇ ಸಂಚರಿಸುವುದು ಉತ್ತಮವೆನಿಸಿದೆ.
-ಆರ್‌.ಸಿ.ನಾಗರಾಜ್‌
*
ವಿಜಯನಗರದಲ್ಲಿ ಮನೆ ಇದೆ. ಪ್ರತಿದಿನವೂ ಬಸ್‌ನಲ್ಲಿ ಕಚೇರಿಗೆ ಹೋಗುವುದಕ್ಕೆ ಸಾಕಷ್ಟು ಸಮಯ ಬೇಕು. ಮೆಟ್ರೊ ಆರಂಭವಾಗಿದ್ದು, ಬಹುಬೇಗನೇ ಕೆಲಸಕ್ಕೆ ಹೋಗಬಹುದು.
-ಶಿಲ್ಪಾ, ವಿಧಾನಸೌಧದಲ್ಲಿ ಉದ್ಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT