ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ನಿಲ್ದಾಣ ಇನ್ನು ಶಾಪಿಂಗ್‌ ತಾಣ

ಬರಲಿವೆ ಬಗೆ ಬಗೆಯ ವಾಣಿಜ್ಯ ಮಳಿಗೆಗಳು–ಮಕ್ಕಳ ಡೇ–ಕೇರ್‌ ಸೆಂಟರ್‌ಗೂ ಅವಕಾಶ
Last Updated 1 ಜುಲೈ 2016, 19:37 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’  ನಿಲ್ದಾಣಗಳಿನ್ನು  ಪ್ರಯಾಣದ ಉದ್ದೇಶಕ್ಕೆ ಸೀಮಿತವಾಗಿರುವುದಿಲ್ಲ. ಮನೆಯಲ್ಲಿ ದಿನಸಿ ಸಾಮಗ್ರಿ ಮುಗಿದಿದ್ದರೆ, ರೈಲು ಹತ್ತುವ ಮುನ್ನ ನಿಲ್ದಾಣದಲ್ಲೇ ಅದನ್ನೂ ಖರೀದಿಸಬಹುದು. ಇಲ್ಲಿನ ಹೋಟೆಲ್‌ನಲ್ಲಿ ನಿಮ್ಮಿಷ್ಟದ ತಿನಿಸು  ಸೇವಿಸಬಹುದು, ಮೊಬೈಲ್‌ ಕೆಟ್ಟು ಹೋಗಿದ್ದರೆ ಇಲ್ಲೇ ದುರಸ್ತಿ ಪಡಿಸಬಹುದು, ಅಷ್ಟೇ ಅಲ್ಲ  ದಂಪತಿ ತಮ್ಮ ಪುಟ್ಟ ಮಕ್ಕಳನ್ನು ಇಲ್ಲಿನ ಡೇ–ಕೇರ್‌ ಸೆಂಟರ್‌ಗಳಲ್ಲೇ ಬಿಟ್ಟು ಕೆಲಸಕ್ಕೂ ಹೋಗಬಹುದು.
ಇಂತಹ ಹತ್ತು ಹಲವು ಅವಕಾಶಗಳು   ಇನ್ನು ಮೆಟ್ರೊ ನಿಲ್ದಾಣಗಳಲ್ಲೇ ಲಭ್ಯವಾಗಲಿವೆ.

ಪ್ರಯಾಣಿಕರ ಟಿಕೆಟ್‌ನಿಂದ ಬರುವ ಆದಾಯಕ್ಕೆ ಹೊರತಾಗಿ ಅನ್ಯ ಮೂಲಗಳಿಂದಲೂ ಆದಾಯ ಗಳಿಸಲು ಮುಂದಾಗಿರುವ  ಬೆಂಗಳೂರು ಮೆಟ್ರೊ ನಿಗಮವು ಐದು ನಿಲ್ದಾಣಗಳಲ್ಲಿ ಒಟ್ಟು 31 ವಾಣಿಜ್ಯ ಮಳಿಗೆಗಳನ್ನು ಸ್ಥಾಪಿಸುವುದಕ್ಕೆ ಟೆಂಡರ್‌ ಆಹ್ವಾನಿಸಿದೆ. 

‘ನಗರದ ಧಾವಂತದ ಬದುಕಿನಲ್ಲಿ ಪ್ರಯಾಣಿಕರಿಗೆ ಯಾವ ರೀತಿಯ ಸೇವೆಗಳನ್ನು ಕಲ್ಪಿಸಿದರೆ ಅನುಕೂಲ?,  ಯಾವ ನಿಲ್ದಾಣದಲ್ಲಿ ಎಂತಹ ಮಳಿಗೆ
ಗಳಿಗೆ ಹೆಚ್ಚು ಬೇಡಿಕೆ ಇದೆ ಎಂಬ ಬಗ್ಗೆ ನಾವು ಸಮೀಕ್ಷೆ ನಡೆಸಿದ್ದೇವೆ. ಅದರ ಅನುಗುಣವಾಗಿ ಮಳಿಗೆಗಳ ಸ್ಥಾಪನೆಗೆ ಅವಕಾಶ ಕಲ್ಪಿಸುತ್ತೇವೆ’ ಎಂದು  ನಿಗಮದ ವಕ್ತಾರ ಯು.ಎ.ವಸಂತರಾವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು ‘ಎಲ್ಲಾ ಕಡೆ ಒಂದೇ ರೀತಿಯ ಮಳಿಗೆ ಗಳಿಗೆ ಅನುಕೂಲ ಕಲ್ಪಿಸಿದರೆ ಅದು ಅನಾರೋಗ್ಯಕರ ಪೈಪೋಟಿಗೆ ಕಾರಣ ವಾಗಲಿದೆ. ಅದನ್ನು ತಪ್ಪಿಸುವ ಸಲುವಾಗಿ  ಯಾವ ನಿಲ್ದಾಣಗಳಲ್ಲಿ ಎಂತಹ ಮಳಿಗೆಗೆ  ಅವಕಾಶ ನೀಡಬೇಕು ಎಂಬ ಬಗ್ಗೆ ಪ್ರಯಾಣಿಕರ ಬೇಡಿಕೆಯನ್ನು ಆಧರಿಸಿ ನಾವೇ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದರು.

ಮಕ್ಕಳ ಡೇ ಕೇರ್‌ ಸೆಂಟರ್: ‘ಪತಿ, ಪತ್ನಿ ಇಬ್ಬರೂ ಉದ್ಯೋಗದಲ್ಲಿದ್ದು, ಮಗುವನ್ನು ಮಕ್ಕಳ ಆರೈಕೆ ಕೇಂದ್ರಗಳಲ್ಲಿ ಬಿಟ್ಟುಹೋಗುವವರ ಸಂಖ್ಯೆ ನಗರದಲ್ಲಿ ಬಹಳ ಇದೆ. ಅಂತಹವರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಮೆಟ್ರೊ ನಿಲ್ದಾಣ ದಲ್ಲಿ ಮಕ್ಕಳ ಡೇ ಕೇರ್‌  ಸೆಂಟರ್‌ ಗಳನ್ನು ಆರಂಭಿಸುವುದಕ್ಕೂ ಅವಕಾಶ ಕಲ್ಪಿಸಲಿದ್ದೇವೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಡೇ ಕೇರ್‌ ಸೆಂಟರ್‌ಗಳು ಕಾರ್ಯ ನಿರ್ವಹಿಸಲಿವೆ’    ಎಂದರು.

‘ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಇದಕ್ಕೆ ಈಗಾಗಲೇ ಜಾಗ ಗುರುತಿಸಿ ದ್ದೇವೆ. ಬೇಡಿಕೆ ನೋಡಿಕೊಂಡು ಬೇರೆ ನಿಲ್ದಾಣಗಳಲ್ಲೂ ಈ ಸೇವೆ ಆರಂಭಿಸ
ಲಾಗುತ್ತದೆ. ಮಕ್ಕಳ ಸುರಕ್ಷತೆಗೂ ಆದ್ಯತೆ ನೀಡಲಿದ್ದೇವೆ.  ಶುಚಿತ್ವ ಕಾಯ್ದುಕೊಳ್ಳುವುದಕ್ಕೂ ಮಹತ್ವ ಕೊಡುತ್ತೇವೆ. ಡೇ–ಕೇರ್‌ ಸೆಂಟರ್‌ನಲ್ಲಿ ಬೆಂಕಿಯನ್ನು ಬಳಸಿ ಅಡುಗೆ ಮಾಡಲು ಅವಕಾಶ ಇಲ್ಲ. ಮಕ್ಕಳಿಗೆ ನೀಡುವ ಆಹಾರ ಬೇಯಿಸಲು ಕೇವಲ ಇಂಡಕ್ಷನ್‌ ಸ್ಟೌಗಳನ್ನು ಮಾತ್ರ ಬಳಸಬೇಕು ಎಂದು ಸೂಚಿಸಲಾಗಿದೆ’ ಎಂದು ವಿವರಿಸಿದರು.

‘ಅನುಭವ ಇದ್ದವರಿಗೆ ಮಾತ್ರ ಮಕ್ಕಳ ಡೇ ಕೇರ್‌ ಸೆಂಟರ್‌ ನಡೆಸಲು ಅವಕಾಶ ಕಲ್ಪಿಸುತ್ತೇವೆ. ಅವರು ಈ ಬಗ್ಗೆ ಬಿಬಿಎಂಪಿಯಿಂದ ಅಥವಾ ಸಂಬಂಧಪಟ್ಟ ಸರ್ಕಾರಿ ಸಂಸ್ಥೆಯಿಂದ ಪರವಾನಗಿ ಪಡೆದಿರಬೇಕು.  ನಿಯಮಗಳಿಗೆ ಬದ್ಧರಾಗಿರಬೇಕು. ಮಕ್ಕಳ ಆರೈಕೆಗೂ ನುರಿತವರನ್ನೇ ನೇಮಿಸಬೇಕು. ಮಕ್ಕಳಿಗೆ ತುರ್ತು ಆರೈಕೆಯ ಅಗತ್ಯಬಿದ್ದರೆ ಅದಕ್ಕೂ ವ್ಯವಸ್ಥೆ ಹೊಂದಿರಬೇಕೆಂಬ ಷರತ್ತುಗಳನ್ನು ಟೆಂಡರ್‌ನಲ್ಲೇ ನಮೂದಿಸಿದ್ದೇವೆ’ ಎಂದರು.

26 ಬಗೆಯ ಮಳಿಗೆಗಳು: ‘ಮೊದಲ ಹಂತದಲ್ಲಿ ಒಟ್ಟು 25 ರೀತಿಯ ಮಳಿಗೆಗಳಿಗೆ ಅವಕಾಶ ಕಲ್ಪಿಸಲು ನಿಗಮವು ಮುಂದಾಗಿದೆ. ಈ ಮಳಿಗೆಗಳ ನಿರ್ವ
ಹಣೆಗೆ ಅಗತ್ಯವಿರುವ ವಿದ್ಯುತ್‌ ಸಂಪರ್ಕ, ಕುಡಿಯುವ ನೀರು ಮತ್ತಿತರ ಅಗತ್ಯ ಸೌಕರ್ಯ  ಒದಗಿಸಲು ಸಮಸ್ಯೆ ಇಲ್ಲ.  ನಿಲ್ದಾಣಗಳನ್ನು ನಿರ್ಮಿಸುವಾಗಲೇ ನಾವು ಅಲ್ಲಿ ಮಳಿಗೆಗಳನ್ನು ನಿರ್ಮಿಸುವ ಆಲೋಚನೆ ಹೊಂದಿದ್ದೆವು’  ಎನ್ನುತ್ತಾರೆ ವಸಂತರಾವ್.

ನೇರಳೆ ಮಾರ್ಗದಲ್ಲಿ ಐದು ನಿಲ್ದಾಣ
ಗಳಲ್ಲಿ  ಮಳಿಗೆ ತೆರೆಯಲು  ನಿಗಮವು ಟೆಂಡರ್‌ ಕರೆದಿದೆ.  ಮುಂದಿನ ತಿಂಗಳು ಮೈಸೂರು ರಸ್ತೆ ಕಡೆಯ ನಿಲ್ದಾಣಗಳಲ್ಲೂ ಮಳಿಗೆಗಳನ್ನು ತೆರೆಯುವುದಕ್ಕೆ  ಟೆಂಡರ್‌ ಆಹ್ವಾನಿಸಲು ಸಿದ್ಧತೆ ನಡೆದಿದೆ. ಎಂ.ಜಿ.ರಸ್ತೆ, ಮೆಜೆಸ್ಟಿಕ್‌ ನಿಲ್ದಾಣಗಳಲ್ಲೂ  ಶೀಘ್ರವೇ ಮಳಿಗೆಗಳು ಬರಲಿವೆ. 

‘1 ಸಾವಿರ ಚದರ ಅಡಿಗಿಂತ ಕಡಿಮೆ ಜಾಗವನ್ನು ಬಯಸುವ ಮಳಿಗೆಗಳ ಗುತ್ತಿಗೆ ಅವಧಿ  6 ವರ್ಷ. 1 ಸಾವಿರ ಚದರ ಅಡಿಗಿಂತ ಹೆಚ್ಚು ಚದರ ಅಡಿಯ ಮಳಿಗೆಗಳ ಗುತ್ತಿಗೆಯ ಅವಧಿ 10 ವರ್ಷ. ಗುತ್ತಿಗೆದಾರರು ಷರತ್ತುಗಳನ್ನು ಉಲ್ಲಂಘಿಸಿದರೆ, ಅಥವಾ ಅವಧಿಗೆ ಮುನ್ನವೇ ಮಳಿಗೆಗಳನ್ನು ತೆರವು
ಗೊಳಿಸಿದರೆ ಅವರು ನೀಡುವ ಠೇವಣಿಯನ್ನು ಹಿಂತಿರುಗಿಸುವುದಿಲ್ಲ’ ಎಂದು ಅವರು ತಿಳಿಸಿದರು.  

ಟೆಂಡರ್‌ ಅರ್ಜಿಗಳನ್ನು ನಿಗಮದ ಕಚೇರಿಯಿಂದ ಪಡೆದು ಇದೇ ತಿಂಗಳ 26ರವರೆಗೆ ಪಡೆಯಲು ಅವಕಾಶ ಇದೆ.  ಬೇರೆ ಬೇರೆ ನಿಲ್ದಾಣಗಳಿಗೆ ಪ್ರತ್ಯೇಕ ಟೆಂಡರ್‌ ಅರ್ಜಿ ಸಲ್ಲಿಸಬೇಕು. 27ರಂದು  ಬಿಡ್‌ ಪೂರ್ವಭಾವಿ ಸಭೆ ನಡೆಯಲಿದೆ. ಆಗಸ್ಟ್‌ 11ರೊಳಗೆ ಟೆಂಡರ್‌ಗೆ ಅರ್ಜಿ  ಸಲ್ಲಿಸಬೇಕು.  ಎಲ್ಲವೂ ನಿರೀಕ್ಷೆಯಂತೆ ನಡೆದರೆ, ಸೆಪ್ಟೆಂಬರ್‌ ವೇಳೆಗೆ ಮೆಟ್ರೊ ನಿಲ್ದಾಣಗಳಲ್ಲಿ ಶಾಪಿಂಗ್‌ ನಡೆಸುವ ಸುಯೋಗ ಪ್ರಯಾಣಿಕರಿಗೆ ಲಭ್ಯವಾಗಲಿದೆ.

ನವೋದ್ಯಮಗಳಿಗೆ ಉತ್ತೇಜನ
ನವೋದ್ಯಮಗಳಿಗೆ(ಸ್ಟಾರ್ಟ್‌ಅಪ್‌) ಉತ್ತೇಜನ ನೀಡುವ ಉದ್ದೇಶದಿಂದ,  ಉದ್ದಿಮೆ ಪ್ರೋತ್ಸಾಹ ಕೇಂದ್ರಗಳನ್ನು ನಿಲ್ದಾಣದಲ್ಲಿ ಆರಂಭಿಸಲು ನಿಗಮವು ಅವಕಾಶ ಕಲ್ಪಿಸಲಿದೆ.

‘ನವೋದ್ಯಮಗಳು ಭಾರತೀಯ ಕಂಪೆನಿ ಕಾಯ್ದೆಯ ನಿಯಮಗಳಿಗೆ ಬದ್ಧರಾಗಿರಬೇಕು ಹಾಗೂ ಕರ್ನಾಟಕ ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ (ಕೆಬಿಐಟಿಎಸ್‌) ನೋಂದಣಿ ಆಗಿರಬೇಕು.  ಈ ಕುರಿತ   ಪ್ರಮಾಣಪತ್ರ ಹೊಂದಿರಬೇಕು. ಅಂತಹವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ’ ಎಂದು ವಸಂತರಾವ್‌ ತಿಳಿಸಿದರು.

ಯಾವ ಮಳಿಗೆಗಳಿಗೆ ಅವಕಾಶ
* ಹೂವಿನ ಮಳಿಗೆ

* ಹೋಟೆಲ್‌
* ಪುಸ್ತಕ ಮತ್ತು ಉಡುಗೊರೆ
* ಸಿದ್ಧ ಆಹಾರಗಳನ್ನು ಬಿಸಿ ಮಾಡಿ ಪೂರೈಸುವುದು
*  ಟೀ–ಕೆಫೆ
* ಉದ್ದಿಮೆ ಪ್ರೋತ್ಸಾಹ ಕೇಂದ್ರ
* ಇ–ಕಾಮರ್ಸ್‌
* ಹೈಪರ್‌ ಮಾರ್ಕೆಟ್‌
* ಹೊರಾಂಗಣ ಚಟುವಟಿಕೆ/ ಕ್ರೀಡಾ ಕೇಂದ್ರ
* ಫುಡ್‌ ಕೋರ್ಟ್‌
* ಶೋರೂಮ್‌
* ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಮಾರಾಟ
* ಆರೋಗ್ಯವರ್ಧಕ ಉತ್ಪನ್ನಗಳ ಮಳಿಗೆ
* ಕಲಾ ಗ್ಯಾಲರಿ
* ದಿನಬಳಕೆ ಪರಿಕರಗಳ ದುರಸ್ತಿ
* ಮಕ್ಕಳ ಡೇ ಕೇರ್‌ ಸೆಂಟರ್‌
* ಬ್ಯಾಂಕಿಂಗ್‌ ಸೇವೆ
* ಬೇಕರಿ
* ಲಾಂಡ್ರಿ
* ಔಷಧ ಮಳಿಗೆ
* ತಾಜಾ ಹಣ್ಣಿನ ಮಳಿಗೆ
* ಹಾಲಿನ ಉತ್ಪನ್ನಗಳ ಮಳಿಗೆ
* ಮೊಬೈಲ್‌ ದುರಸ್ತಿ ಮತ್ತು ಪರಿಕರಗಳ ಮಳಿಗೆ
* ಆಪ್ಟಿಕಲ್‌ ಗೂಡ್ಸ್‌ ಮಳಿಗೆ
* ಶೀತಲೀಕರಿಸಿದ ಆಹಾರ ವಸ್ತುಗಳ ಮಳಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT