ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಲ್ಬರ್ನ್‌, ದೆಹಲಿಯ ಸುಂದರ ನೆನಪು...

Last Updated 27 ಜುಲೈ 2014, 19:30 IST
ಅಕ್ಷರ ಗಾತ್ರ

ಕಾಮನ್‌ವೆಲ್ತ್‌ ಕ್ರೀಡಾಕೂಟ ಎಂದೊಡನೆ ಮೆಲ್ಬರ್ನ್‌ ನಗರದ ಆ ಸುಂದರ ನೆನಪುಗಳು ನನ್ನ ಸ್ಮೃತಿಪಠಲದಲ್ಲಿ ಮೂಡತೊಡಗುತ್ತವೆ. ಅಲ್ಲಿನ ಪಾರ್ಕ್‌ವಿಲೆ ಪ್ರದೇಶದಲ್ಲಿ ನಾನು ಓಡಾಡಿದ ಕ್ಷಣಗಳು ಮನಸ್ಸಿಗೆ ಮುದ ನೀಡುತ್ತವೆ. ಜತೆಗೆ ದೆಹಲಿಯ ಕಾಮನ್‌ವೆಲ್ತ್‌ ಕ್ರೀಡಾಕೂಟದ ಹಾಕಿ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡವನ್ನು ಟೈಬ್ರೇಕರ್‌ನಲ್ಲಿ ಸೋಲಿಸಿ ಫೈನಲ್‌ ತಲುಪಿದ ಆ ರೋಚಕ ಕ್ಷಣಗಳು ಇವತ್ತಿಗೂ ಮೈ ನವಿರೇಳಿಸುವಂತಿವೆ.

ಕಾಮನ್‌ವೆಲ್ತ್‌ ಕ್ರೀಡೆಯಲ್ಲಿ ಹಾಕಿ ಬಹಳ ತಡವಾಗಿ ಸೇರ್ಪಡೆಗೊಂಡಿದೆ, ನಿಜ. ಅರ್ಧ ಶತಮಾನದ ಹಿಂದೆ ಈ ಕ್ರೀಡೆ ಕಾಮನ್‌ವೆಲ್ತ್‌ ಕೂಟದಲ್ಲಿ ಇದ್ದಿದ್ದರೆ ಭಾರತ ಚಿನ್ನ ಗೆದ್ದಿರುತಿತ್ತೇನೊ. ಏಕೆಂದರೆ ಒಲಿಂಪಿಕ್ಸ್‌ನಲ್ಲಿ 1928ರಿಂದ 56ರವರೆಗೆ ಸತತ ಚಿನ್ನ ಗೆದ್ದ ಅದ್ಭುತ ಪರಂಪರೆ ನಮ್ಮದು ತಾನೆ. ಆದರೆ 1998ರಲ್ಲಿ ಕ್ವಾಲಾಲಂಪುರದಲ್ಲಿ ನಡೆದ ಕಾಮನ್‌ವೆಲ್ತ್‌ ಕೂಟದಲ್ಲಿ ಹಾಕಿಯನ್ನು ಸೇರಿಸಲಾಯಿತು. ಅಲ್ಲಿಂದ ಈವರೆಗೆ ಮ್ಯಾಂಚೆಸ್ಟರ್‌, ಮೆಲ್ಬರ್ನ್‌, ದೆಹಲಿಗಳಲ್ಲಿ ನಡೆದಿರುವ ಈ ಕೂಟದಲ್ಲಿ ಆಸ್ಟ್ರೇಲಿಯ ತಂಡವೇ ಚಿನ್ನದ ಪದಕ ಗೆಲ್ಲುತ್ತಾ ಬಂದಿದೆ. ಇವುಗಳ ನಡುವೆ ಒಮ್ಮೆ ಭಾರತ ಬೆಳ್ಳಿಯ ಸಾಧನೆ ಮಾಡಿತಲ್ಲಾ, ಆ ತಂಡದಲ್ಲಿ ನಾನಿದ್ದೆ ಎನ್ನುವುದೇ ನನ್ನ ಬದುಕಿನ ಸಾರ್ಥಕ ಕ್ಷಣ ಎಂಬ ಸಂತೃಪ್ತಿ ನನಗಿದೆ.

ಕಾಮನ್‌ವೆಲ್ತ್‌ ಕ್ರೀಡಾ ಕೂಟದ ಹಾಕಿಗೆ ಸಂಬಂಧಿಸಿದಂತೆ ಹೇಳುವುದಿದ್ದರೆ ಒಲಿಂಪಿಕ್ಸ್‌ ಮತ್ತು ಏಷ್ಯನ್‌ ಕ್ರೀಡಾಕೂಟಗಳಿಗಿಂತ ಇಲ್ಲಿಯ ಪೈಪೋಟಿ ಭಿನ್ನವೇ ಹೌದು. ನಾವು ಏಷ್ಯನ್‌ ಗೇಮ್ಸ್‌ನಲ್ಲಾದರೂ ಗೆಲ್ಲಬಹುದು, ಕಾಮನ್‌ವೆಲ್ತ್‌ ಕೂಟದಲ್ಲಿ ಎತ್ತರಕ್ಕೇರುವುದು ಬಲು ಕಷ್ಟ. ಏಕೆಂದರೆ ಏಷ್ಯನ್‌ ಗೇಮ್ಸ್‌ನಲ್ಲಿ ಪಾಕಿಸ್ತಾನ, ದಕ್ಷಿಣ ಕೊರಿಯ, ಮಲೇಷ್ಯಾಗಳಿಂದ ಎದುರಾಗುವ ಸವಾಲನ್ನು ಶ್ರಮಪಟ್ಟು ಎದುರಿಸಬಹುದು. ಏಕೆಂದರೆ ನಮ್ಮೆಲ್ಲರ ತಂತ್ರಗಳು ಪರಸ್ಪರ ಪರಿಚಿತವೇ. ಆದರೆ ಕಾಮನ್‌ವೆಲ್ತ್‌ನಲ್ಲಿ ಪಾಕ್‌, ಮಲೇಷ್ಯಾಗಳಷ್ಟೇ ಅಲ್ಲ, ವಿಶ್ವದ ಪ್ರಬಲ ತಂಡಗಳಾದ ಆಸ್ಟ್ರೇಲಿಯ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ ತಂಡಗಳೂ ಇರುತ್ತವೆ. ಒಲಿಂಪಿಕ್ಸ್‌ನಲ್ಲಿ ಈ ಎಲ್ಲಾ ತಂಡಗಳ ಜತೆಗೆ ಜರ್ಮನಿ, ಹಾಲೆಂಡ್‌ಗಳೂ ಇರುವುದರಿಂದ ಪೈಪೋಟಿ ಇನ್ನಷ್ಟೂ ಕಷ್ಟವಿರುತ್ತದೆ ಎನ್ನಬಹುದು.

ಆಸ್ಟ್ರೇಲಿಯದ ಮೆಲ್ಬರ್ನ್‌ ನಗರದಲ್ಲಿ 2006ರ ಮಾರ್ಚ್‌ 17ರಿಂದ 26ರವರೆಗೆ ಕಾಮನ್‌ವೆಲ್ತ್‌ ಕ್ರೀಡೆಯ ಹಾಕಿ ಸೆಣಸಾಟ ನಡೆದಿತ್ತಲ್ಲಾ, ನನಗದು ಹೊಸ ಅನುಭವ. ಆಗ ಕಿರಿಯ ಆಟಗಾರರ ಮೇಲೆಯೇ ಹೆಚ್ಚಿನ ಒಲವು ತೋರಿದ್ದ ಆಯ್ಕೆ ಸಮಿತಿ ನಮ್ಮ ತಂಡವನ್ನು ರೂಪಿಸಿತ್ತು. ನಮ್ಮ ತಂಡದಲ್ಲಿ ಆಗ ಅನುಭವಿಗಳ ಕೊರತೆ ಕಾಡುತಿತ್ತು. ನಮಗೆಲ್ಲರಿಗೂ ಕಾಮನ್‌ವೆಲ್ತ್‌ ಕೂಟ ಹೊಸ ಅನುಭವ. ಮೊದಲ ಪಂದ್ಯದಲ್ಲಿ ಮಲೇಷ್ಯಾ ಎದುರು ಪಾಯಿಂಟ್ಸ್‌ ಹಂಚಿಕೊಳ್ಳಬೇಕಾಯಿತು. ನಮಗೆ ಸಿಕ್ಕಿದ್ದ ಹಲವು ಅವಕಾಶಗಳಲ್ಲಿ ಒಂದನ್ನು ಯಶಃ ಪಡಿಸಿದ್ದರೂ ನಾವು ಅಲ್ಲಿ ಸೆಮಿಫೈನಲ್‌ ತಲುಪುವ ಸಾಧ್ಯತೆ ಇತ್ತು. ಆಗ ‘ಬಿ’ ಗುಂಪಿನಲ್ಲಿ ಪಾಕಿಸ್ತಾನ 10 ಪಾಯಿಂಟ್ಸ್‌ ಗಳಿಸಿ ಅಗ್ರಸ್ಥಾನಕ್ಕೆ ಏರಿದ್ದರೆ, ಮಲೇಷ್ಯಾ ಮತ್ತು ನಮ್ಮ ತಂಡ ತಲಾ 7 ಪಾಯಿಂಟ್ಸ್‌ ಗಳಿಸಿದ್ದೆವು. ಕೊನೆಗೆ ಎರಡನೇ ಸ್ಥಾನ ನಿರ್ಧರಿಸುವುದಕ್ಕೆ ಸಂಬಂಧಿಸಿದಂತೆ ಗೋಲು ಸರಾಸರಿಯ ಲೆಕ್ಕಾಚಾರವನ್ನು ಪರಿಗಣನೆಗೆ ತೆಗೆದುಕೊಳ್ಳಲಾಯಿತು.

ಮಲೇಷ್ಯಾ 16 ಗೋಲು ಹೊಡೆದಿದ್ದರೆ, ಭಾರತ 14ಸಲ ಚೆಂಡನ್ನು ಗುರಿ ಮುಟ್ಟಿಸಿತ್ತು. ಹೀಗಾಗಿ ಮಲೇಷ್ಯಾ ಸೆಮಿಫೈನಲ್‌ ತಲುಪಿತು. ಅಲ್ಲಿ ನಾವು ಟ್ರಿನಿಡಾಡ್‌ ಮತ್ತು ಟೊಬಾಗೊ ವಿರುದ್ಧ 10–1ಗೋಲುಗಳಿಂದ ಗೆದ್ದರೆ, ದಕ್ಷಿಣ ಆಫ್ರಿಕ ಎದುರು 1–0 ಗೋಲಿನಿಂದ ಗೆದ್ದಿದ್ದೆವು. ಆದರೆ ಪಾಕಿಸ್ತಾನ ನಮ್ಮನ್ನು    4–1ಗೋಲುಗಳಿಂದ ಸೋಲಿಸಿದ್ದು ತೀರಾ ಕಹಿ ಅನುಭವ. ಕೊನೆಗೆ ಐದನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿಯೂ ನ್ಯೂಜಿಲೆಂಡ್‌ ಎದುರು 1–2 ಗೋಲುಗಳಿಂದ ಸೋಲನುಭವಿಸಿದೆವೆನ್ನಿ. ಅಲ್ಲಿ ಹತ್ತು ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಿ ರೌಂಡ್‌ ರಾಬಿನ್‌ ಲೀಗ್‌ ಮಾದರಿಯಲ್ಲಿ ಆಡಿಸಲಾಗಿತ್ತು. ಇನ್ನೊಂದು ಗುಂಪಿನಲ್ಲಿ ಆಸ್ಟ್ರೇಲಿಯ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ಸ್ಕಾಟ್ಲೆಂಡ್‌, ಕೆನಡಾ ತಂಡಗಳಿದ್ದವು.

ಅರ್ಜುನ್‌ ಹಾಲಪ್ಪ
ಭಾರತ ಕಂಡ ಕೆಲವು ಅಪರೂಪದ ಹಾಕಿ ಆಟಗಾರರಲ್ಲಿ ಅರ್ಜುನ್‌ ಹಾಲಪ್ಪ ಒಬ್ಬರು. ಕೊಡಗು ಜಿಲ್ಲೆಯ ಸೋಮವಾರಪೇಟೆ ಹತ್ತು ಹಲವು ಅಂತರರಾಷ್ಟ್ರೀಯ ಹಾಕಿ ಆಟಗಾರರ ತವರು. ಎಪ್ಪತ್ತರ ದಶಕದ ಆರಂಭದಲ್ಲಿ ಇದೇ ಊರಿನ ಬಿ.ಪಿ.ಗೋವಿಂದ ಭಾರತ ತಂಡವನ್ನು ಪ್ರತಿನಿಧಿಸಿದರು. ಅವರ ಜತೆಗೇ ಆಡುತ್ತಿದ್ದ ಬಿ.ಕೆ.ಹಾಲಪ್ಪ ಅವರು ಕೋಲ್ಕತ್ತದ ಈಸ್ಟ್‌ಬೆಂಗಾಲ್‌ ಕ್ಲಬ್‌ ಪರ ಆಡಿದ್ದರು.  ಹಾಲಪ್ಪ ಅವರ ಪುತ್ರ ಅರ್ಜುನ್‌ ಎಳವೆಯಲ್ಲಿಯೇ ಸೋಮವಾರಪೇಟೆಯಲ್ಲಿ ಹಾಕಿಯ ‘ಅ..ಆ..ಇ..ಈ..’ ಕಲಿತರು. 1998ರಲ್ಲಿ ಇವರು ಬೆಂಗಳೂರಿನಲ್ಲಿ ಭಾರತ ಕ್ರೀಡಾ ಪ್ರಾಧಿಕಾರದ ಸೆಂಟರ್‌ ಆಫ್‌ ಎಕ್ಸಲೆನ್ಸ್‌ಗೆ ಸೇರಿದರು. ಆ ನಂತರ ಅವರು ಹಿಂತಿರುಗಿ ನೋಡಿದ್ದೇ ಇಲ್ಲ.

1999ರಲ್ಲಿ ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಪರ ಆಡಿದ್ದರು. ಅದರ ಮರುವರ್ಷ ನಡೆದ ಜೂನಿಯರ್‌ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ತಂಡದ ಪರ ಆಡಿದರು. ಆ ಟೂರ್ನಿಯಲ್ಲಿ ಒಟ್ಟು ಎಂಟು ಗೋಲು ಗಳಿಸಿ ರಾಷ್ಟ್ರೀಯ ಆಯ್ಕೆ ಸಮಿತಿಯ ಗಮನ ಸೆಳೆದಿದ್ದರು. 2001ರಲ್ಲಿ ಈಜಿಪ್ಟ್‌ನ ಕೈರೊ ನಗರದಲ್ಲಿ ನಡೆದಿದ್ದ ಪ್ರೈಮ್‌ ಮಿನಿಸ್ಟರ್ಸ್‌ ಗೋಲ್ಡ್‌ ಕಪ್‌ನಲ್ಲಿ ಪಾಲ್ಗೊಂಡಿದ್ದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಅದೇ ವರ್ಷ ಕ್ವಾಲಾಲಂಪುರದಲ್ಲಿ ನಡೆದಿದ್ದ ಚಾಂಪಿಯನ್ಸ್‌ ಚಾಲೆಂಜ್‌ ಕಪ್‌ ಟೂರ್ನಿಯಲ್ಲಿ ಇವರು ಆಡಿದ್ದ ಭಾರತ ತಂಡ ಚಿನ್ನದ ಪದಕ ಗೆದ್ದಿತ್ತು.

ಅಥೆನ್ಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಏಳನೇ ಸ್ಥಾನ ಪಡೆದ ಭಾರತ ತಂಡದಲ್ಲಿದ್ದರು. 2010ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ರಜತ ಪದಕ ಗಳಿಸಿದ ಭಾರತ ತಂಡದಲ್ಲಿ ಇವರು ಆಡಿದ್ದರು. 2006ರಲ್ಲಿ ಮೆಲ್ಬರ್ನ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಆಡಿದ್ದ ಭಾರತ ತಂಡದಲ್ಲಿಯೂ ಇವರಿದ್ದರು. 2010ರಲ್ಲಿ ಗುವಾಂಗ್‌ಜೌನಲ್ಲಿ ನಡೆದಿದ್ದ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದಲ್ಲಿಯೂ ಇವರು ಆಡಿದ್ದರು. 2011ರಲ್ಲಿ ಕ್ವಾಲಾಲಂಪುರದಲ್ಲಿ ನಡೆದಿದ್ದ ಸುಲ್ತಾನ್‌ ಅಜ್ಲನ್‌ಷಾ ಕಪ್‌ ಹಾಕಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಭಾರತ ತಂಡದ ನಾಯಕತ್ವ ವಹಿಸಿದ್ದರು.


ಹಿಂದೆ ಧನರಾಜ್‌ ಪಿಳ್ಳೆ, ಬಲ್‌ಜಿತ್‌ಸಿಂಗ್‌ ದಿಲ್ಲಾನ್‌ ಮುಂತಾದ ಹಿರಿಯರು ಭಾರತ ತಂಡಕ್ಕೆ ಸ್ಫೂರ್ತಿಯ ಚೇತನದಂತಿದ್ದವರು. ಅವರ ಮಾರ್ಗದರ್ಶನದಲ್ಲಿ ನಾನು ನನ್ನ ಅದೆಷ್ಟೋ ತಪ್ಪುಗಳನ್ನು ತಿದ್ದಿಕೊಂಡಿದ್ದೇನೆ. ಮೆಲ್ಬರ್ನ್‌ನಲ್ಲಿ ಅವರಿಲ್ಲದ ಕೊರತೆಯೂ ನಮಗೆ ಇನ್ನಿಲ್ಲದಂತೆ ಕಾಡಿತ್ತು.  ಅದೇನೇ ಹೇಳಿ. 2005 ಮತ್ತು 2006ನೇ ವರ್ಷಗಳು ಭಾರತದ ಹಾಕಿಯ ಪಾಲಿಗೆ ನಿರಾಶಾದಾಯಕವೇ ಆಗಿತ್ತು. ಅನುಭವಿಗಳು ದೂರವಾಗುತ್ತಿದ್ದರು, ಹೊಸಬರು ಹೊಂದಿಕೊಳ್ಳಲು ಪಡಿಪಾಟಲು ಪಡುತ್ತಿದ್ದರು. ಒಂದಿಲ್ಲಾ ಒಂದು ವಿವಾದಗಳು ಸುದ್ದಿಯಾಗುತ್ತಿದ್ದವು. ಗಾಯಾಳುಗಳ ಸಮಸ್ಯೆಯೂ ಹೆಚ್ಚು ಎನ್ನುವಂತಿತ್ತು. ಅಂತಹದ್ದೊಂದು ಸಂದಿಗ್ಧ ಕಾಲಘಟ್ಟದಲ್ಲಿ ನಾವು ಮೆಲ್ಬರ್ನ್‌ ಕಾಮನ್‌ವೆಲ್ತ್‌ ಕೂಟದಲ್ಲಿ ನಾಲ್ಕರ ಘಟ್ಟ ತಲುಪಲಾಗದೇ ವಾಪಸಾಗಿದ್ದನ್ನು ನೆನಪಿಸಿಕೊಂಡರೆ ಇವತ್ತಿಗೂ ಮನಸ್ಸು ಪಿಚ್ಚೆನ್ನುತ್ತದೆ. ಆದರೆ 2003 ರಿಂದ 2005ರವರೆಗಿನ ಕಾಲವನ್ನೂ ನಾನು ನೋಡಿದ್ದೇನೆ. ಆ ಸಂದರ್ಭದಲ್ಲಿ ಭಾರತದ ಯಶೋಗಾಥೆ ಗಮನಾರ್ಹ. ನಾನು ಆ ಕಾಲದಲ್ಲೂ ರಾಷ್ಟ್ರೀಯ ತಂಡದಲ್ಲಿದ್ದವನು ತಾನೆ.

ಆದರೆ ಮೆಲ್ಬರ್ನ್‌ ಎಂಬ ಊರಿದೆಯಲ್ಲಾ ಅದನ್ನು ಹೇಗೆ ಮರೆಯಲಿ ನಾನು. ಅದು ಬಿಸಿಲ ಕಾಲ. ಕಡು ನೀಲಿ ಬಣ್ಣದ ಶುಭ್ರ ಆಗಸ. ಸೂರ್ಯ ನಮ್ಮನ್ನು ನುಂಗಿ ಬಿಡುತ್ತಾನೇನೋ ಎಂಬಷ್ಟು ಹತ್ತಿರದಲ್ಲಿ ಕಾಣುತ್ತಿದ್ದ. ಅದು ಕ್ರೀಡಾಕೂಟ ನಡೆಯುತ್ತಿದ್ದ ಸಂದರ್ಭವಾಗಿದ್ದರಿಂದಲೋ ಏನೋ ಜನರ ಓಡಾಟ ಹೆಚ್ಚಿತ್ತು. ಆದರೆ ಸದ್ದು ಗದ್ದಲ ತೀರಾ ಕಡಿಮೆ ಎನ್ನಬಹುದು.

ಅಲ್ಲಿನ ರಸ್ತೆಗಳು ಅತ್ಯಂತ ಸುಂದರ. ಅಲ್ಲಿನ ಜನರಿಗೆ ‘ಟ್ರಾಫಿಕ್‌್ ಸೆನ್ಸ್‌’ ತುಂಬಾ ಚೆನ್ನಾಗಿದೆ. ಸಣ್ಣ ವಾಹನಗಳಿಗೆ ಹೆಚ್ಚಿನ ಪ್ರಾಶಸ್ತ್ಯ. ಪಾದಚಾರಿಗಳಿಗೆ ಅಪಾರ ಗೌರವ. ಒಬ್ಬ ರಸ್ತೆ ದಾಟುತ್ತಿದ್ದಾನೆಂದು ಕಂಡರೆ ಚಾಲಕರು ಅಷ್ಟು ದೂರದಲ್ಲೇ ವಾಹನ ನಿಲ್ಲಿಸಿಬಿಡುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಅಂಗವಿಕಲರ ನೆರವಿಗೆ ಎಲ್ಲರೂ ನಿಲ್ಲುತ್ತಾರೆ. ಅವರನ್ನು ಗೌರವದಿಂದ ನಡೆಸಿಕೊಳ್ಳುತ್ತಾರೆ. ಸಣ್ಣ ಸಣ್ಣ ಪ್ರವಾಸಿ ಕೇಂದ್ರಗಳನ್ನು ಸುಂದರವಾಗಿ ಅಭಿವೃದ್ಧಿಗೊಳಿಸಿದ್ದಾರೆ. ಮೆಲ್ಬರ್ನ್‌ ನಗರದ ಯಾವುದೇ ಮೂಲೆಗೆ ಹೋದರೂ ‘ಸರ್ದಾರ್ಜಿ’ಗಳು ಕಾಣಸಿಗುವುದು ಸಾಮಾನ್ಯ. ನಿಜಕ್ಕೂ ಪಂಜಾಬ್‌ನ ಈ ಕಷ್ಟಸಹಿಷ್ಣುಗಳ ಸಾಹಸ ಪ್ರವೃತ್ತಿ ಬಗ್ಗೆ ಹೆಮ್ಮೆ ಎನಿಸುತ್ತದೆ.

ಭಾರತ 2010ರಲ್ಲಿ ಮೊದಲ ಬಾರಿಗೆ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿತ್ತು. ದೆಹಲಿಯಲ್ಲಿ ಆ ಕೂಟ ನಡೆದಿತ್ತು. ಅಲ್ಲಿ ಭಾರತ ಹಾಕಿ ತಂಡ ತೋರಿದ ಸಾಮರ್ಥ್ಯದ ಬಗ್ಗೆ ನನಗೆ ಹೆಮ್ಮೆ ಇದೆ. ನಾನೂ ಆ ತಂಡದ ಆಟಗಾರನಾಗಿದ್ದೆನಲ್ಲಾ.

ದೆಹಲಿಯ ಧ್ಯಾನ್‌ಚಂದ್‌ ಕ್ರೀಡಾಂಗಣದಲ್ಲಿ 2010ರ ಅಕ್ಟೋಬರ್‌ 4ರಿಂದ 14ರವರೆಗೆ ಹಾಕಿ ಪಂದ್ಯಗಳು ನಡೆದಿದ್ದವು. ವಿದೇಶದಲ್ಲಿ ಆಡುವುದಕ್ಕೂ, ತವರಿನಲ್ಲೇ ಆಡುವುದಕ್ಕೂ ವ್ಯತ್ಯಾಸವಿದೆ ತಾನೆ. ನನ್ನ ಹಲವು ಗೆಳೆಯರು, ಬಂಧುಗಳು ಭಾರತದ ಆಟ ನೋಡಲು ದೆಹಲಿಗೆ ಬಂದು ಗ್ಯಾಲರಿಯಲ್ಲಿ ಕುಳಿತ್ತಿದ್ದರು. ಇಲ್ಲಿ ನಾವು ಎ ಗುಂಪಿನಲ್ಲಿದ್ದೆವು. ಮೊದಲ ಪಂದ್ಯದಲ್ಲಿ ಮಲೇಷ್ಯಾ ಎದುರು 3–2 ಗೋಲುಗಳಿಂದ ಗೆದ್ದೆವು. ಮೆಲ್ಬರ್ನ್‌ನಲ್ಲಿ ಇದೇ ತಂಡದ ಎದುರು ಮಾಡಿದ್ದ ತಪ್ಪುಗಳನ್ನು ಇಲ್ಲಿ ತಿದ್ದಿಕೊಂಡಿದ್ದೆವು.  ಆಸ್ಟ್ರೇಲಿಯ ಎದುರು 2–5 ಗೋಲುಗಳಿಂದ ಸೋತೆವು. ಆ ಸೋಲು ನಮ್ಮ ಆತ್ಮವಿಶ್ವಾಸವನ್ನೇನೂ ಕುಂದಿಸಲಿಲ್ಲ.

ಸ್ಕಾಟ್ಲೆಂಡ್‌ ವಿರುದ್ಧ 4–0 ಗೋಲುಗಳಿಂದ ಗೆದ್ದೆವು. ಆದರೆ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ನಾವು    7–4 ಗೋಲುಗಳಿಂದ ಗೆದ್ದಿದ್ದು ಇದೆಯಲ್ಲಾ ಅದೊಂದು ಅವಿಸ್ಮರಣೀಯ ಕ್ಷಣ. ತೀವ್ರ ಪೈಪೋಟಿಯಿಂದ ಕೂಡಿದ್ದ ಹೋರಾಟವದು. ಎರಡೂ ದೇಶಗಳಲ್ಲಿ ಲಕ್ಷಾಂತರ ಹಾಕಿಪ್ರಿಯರು ಅಂದು ಟೀವಿ ಎದುರು ಕುಳಿತು ಆ ಪಂದ್ಯ ವೀಕ್ಷಿಸುತ್ತಿದ್ದಾರೆಂಬ ಪರಿಕಲ್ಪನೆ ನಮಗೆ ಅವತ್ತು ಇತ್ತು.  ಗೋಲ್‌ಕೀಪರ್‌ ಭರತ್‌ ಚೆಟ್ರಿ, ಸಂದೀಪ್‌ ಸಿಂಗ್‌, ಪ್ರಬೋದ್‌ ಟರ್ಕಿ, ಸರ್ದಾರ್‌ಸಿಂಗ್‌, ಶಿವೇಂದ್ರ, ಮುಜ್ತಾಬಾ, ಧರ್ಮವೀರ್‌ ಹೀಗೆ ಒಬ್ಬರಿಗಿಂತ ಒಬ್ಬರು ಅತ್ಯುತ್ತಮವಾಗಿ ಆಡಿದ್ದರು. 1982ರ ಏಷ್ಯನ್‌ ಗೇಮ್ಸ್‌ ವೇಳೆ ಅದೇ ಮೈದಾನ ದಲ್ಲಿ ಪಾಕಿಸ್ತಾನದ ಆಟಗಾರರು ಭಾರತ ತಂಡವನ್ನು ಮಣಿಸಿದ್ದರಲ್ಲಾ, ಆ ಸೇಡನ್ನು ತೀರಿಸಿ ಕೊಳ್ಳುವ ತವಕ ನಮ್ಮೆಲ್ಲರಲ್ಲೂ ಇತ್ತು. ಒಂದು ತಂಡವಾಗಿ ಅತ್ಯುತ್ತಮ ಸಾಮರ್ಥ್ಯ ತೋರಿದ್ದೆವು. ವೀರೋಚಿತ ಗೆಲುವು ಪಡೆದ ನಾವು ಸೆಮಿಫೈನಲ್‌ ತಲುಪಿದೆವು.

ನಾಲ್ಕರ ಘಟ್ಟದಲ್ಲಿ ಇಂಗ್ಲೆಂಡ್‌ ವಿರುದ್ಧದ ಆಟವನ್ನು ಮರೆಯುವುದೆಂತು ? ರೋಚಕ ಹೋರಾಟ ಕಂಡು ಬಂದಿತು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ತಲಾ ಮೂರು ಗೋಲು ಗಳಿಸಿದವು. ಕೊನೆಗೆ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್‌ ಮೊರೆ ಹೋಗಬೇಕಾಯಿತು. ಅಲ್ಲಿ ಸರವನ್‌ಜಿತ್‌, ವಿಕ್ರಮ್‌ ಪಿಳ್ಳೆ, ಸಂದೀಪ್‌, ಶಿವೇಂದ್ರ ಮತ್ತು ನಾನು ತಲಾ ಒಂದು ಗೋಲು ಗಳಿಸಿದೆವು. ಗೆಲುವು ನಮ್ಮದಾಗಿತ್ತು. ಆದರೆ ಆಸ್ಟ್ರೇಲಿಯ ಎದುರು ಸೋತೆವು ಬಿಡಿ. ಆದರೂ ಕಾಮನ್‌ವೆಲ್ತ್‌ ಕೂಟದ ಹಾಕಿ ಇತಿಹಾಸದಲ್ಲಿ ಬೆಳ್ಳಿಯ ಸಾಧನೆ ಮಾಡಿದ್ದೇ ಭಾರತದ ಅತ್ಯುತ್ತಮ ಸಾಮರ್ಥ್ಯ. ಅಂತಹದ್ದೊಂದು ತಂಡದ ಭಾಗವಾಗಿದ್ದ ನನ್ನಲ್ಲಿ ಇವತ್ತು ಸಂತೃಪ್ತಿಯ ಭಾವ ಇದೆ. ದೆಹಲಿಯ ಆ ರೋಚಕ ಕ್ಷಣಗಳು ನನ್ನ ಬದುಕಿನ ಅವಿಸ್ಮರಣೀಯ ಕ್ಷಣಗಳು ತಾನೆ. ನಾನು ನಿಜಕ್ಕೂ ಅದೃಷ್ಟವಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT