ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಷ್ಟ್ರು ಹೇಳಿದ ಸೈಕಲ್ ಕಥೆ

ಮಕ್ಕಳ ಕಥೆ
Last Updated 28 ಮೇ 2016, 19:30 IST
ಅಕ್ಷರ ಗಾತ್ರ

ಪ್ರತಿ ಸಂಜೆ ಶಾಲೆಯಲ್ಲಿ ಮಕ್ಕಳಿಗೆ ಕಥೆ ಹೇಳುವ ರೂಢಿಯನ್ನು ಅನಿಲ ಮೇಷ್ಟು ಇಟ್ಟುಕೊಂಡಿದ್ದರು. ಒಮ್ಮೊಮ್ಮೆ ತಾವೇ ಬರೆದ ಕಥೆ ಹೇಳಿ, ಮಕ್ಕಳಿಂದ ಅಭಿಪ್ರಾಯ ಪಡೆಯುತ್ತಿದ್ದರು. ಕಥೆಯ ಚರ್ಚೆಯಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸುತ್ತಿದ್ದರು. ಕಥೆಗಳ ಕಾರಣದಿಂದಾಗಿ ಗುರುಶಿಷ್ಯರ ನಡುವೆ ಅನ್ಯೋನ್ಯ ಸಂಬಂಧ ಬೆಳೆದಿತ್ತು.

ಒಂದು ದಿನ ‘ಸರ್, ಇವತ್ತ ಚಲೋ ಕಥಿ ಹೇಳಾಕಬೇಕ್ರಿ’ ಎಂದಳು ಮೇಘಾ. ‘ನಗಿಸು ಕಥಿ ಇರಲಿ’ ಅಂದಳು ಸ್ಪೂರ್ತಿ. ‘ನೀವ ಬರೆದ ಕಥಿ ಇದ್ರ ಅದನ ಹೇಳ್ರಿ’ ಅಂದ ಮಂಜುರೆಡ್ಡಿ.

‘ಆಯಿತು, ನಾನೊಂದು ಸತ್ಯ ಕಥೆ ಹೇಳತಿನಿ ಕೇಳ್ರೀ’ ಎಂದು ಮೇಷ್ಟ್ರು ಅಂದಾಗ– ‘ಹಂಗಂದ್ರ ಏನ್ರಿ’ ಅಂತ ಕೇಳಿದ ಹಸನ. ‘ನಡೆದ ಘಟನೆಯನ್ನ ಸ್ವಾರಸ್ಯಕರವಾಗಿ, ಕುತೂಹಲದಿಂದ ಕೇಳುವ ರೀತಿಯಲ್ಲಿ ಹೇಳುವುದು’ ಎಂದಾಕ್ಷಣ, ‘ಓಹೋ!’ ಅಂತ ಎಲ್ಲಾ ಮಕ್ಕಳು ಜೋರಾಗಿ ಕೂಗಿದರು.

‘ಒಂದ ತಿಂಗಳಿನ ಹಿಂದೆ ನಮ್ಮ ವೀರೇಂದ್ರನ ಸೈಕಲ್ ಕಳುವಾಗಿದ್ದ ಸುದ್ದಿ ಹೇಳಿದ್ದಿನಲ್ಲಾ...’ ‘ಹಾಂ! ಸರ್, ತಪ್ಪು ವೀರೇಂದ್ರನದ್ದು ಇತ್ತು. ಆತ ಸೈಕಗೆ ಚಾವಿ ಹಾಕಿರಲಿಲ್ಲಾ, ಮನೆಯಲ್ಲಿ ಯಾರೂ ಇರಲಿಲ್ಲಾ, ಮೇಲಾಗಿ ಊರ ಹೊರಗಿನ ಮನಿ ನಿಮ್ಮದು, ಹಿಂಗಾಗಿ ಕಳು ಆಗೈತಿ’ ವಿದ್ಯಾ ವಿವರಣೆ ನೀಡಿದಳು.

‘ಖರೆ ಐತಿ, ಕಳು ಆದ ಮೇಲೆ ವೀರೇಂದ್ರಾ ಹೊಸ ಸೈಕಲ್ಲಿಗೆ, ಅವರ ಅವ್ವನ ಕಡೆಯಿಂದ ಬಾಳ ಒತ್ತಾಯ ಮಾಡಿಸಿದ್ರೂ ನಾನೇನ ಕೊಡಸಲಿಲ್ಲಾ’. ‘ಯಾಕ್ರಿ ಸರ್, ನಿಮಗೇನ ಪಗಾರ ಐತಿ, ಒಬ್ಬನ ಮಗಾ ಕೊಡಸಬೇಕ್ರೀ, ಅಂವಾ ಮುದ್ದಾಮ ಮಾಡಿಲ್ಲ’ ಎಂದು ವಕೀಲಿಕಿ ಗತ್ತನಾಗ ಜೋರಾಗಿ ಸಂಗೀತಾ ಕೇಳಿದಳು.

‘ಹೌದವಾ ನೀ ಹೇಳುವುದು ಖರೆ ಐತಿ, ಆದ್ರ ಜವಾಬ್ದಾರಿ ಬೇಕಲ್ಲಾ’ ಎಂದು ಮೇಷ್ಟ್ರು ಕೇಳಿದಾಗ ‘ಈಗೇನಾಯಿತ್ರಿ?’ ಎಂದು ಪ್ರಶ್ನಿಸಿದಳು ಪೂರ್ಣಿಮಾ. ‘ಮೊನ್ನೆ ಶನಿವಾರ ಶಾಲೆ ಮುಗಿಸಿ ಮನೆಗೆ ಮಧ್ಯಾಹ್ನಕ್ಕೆ ಹೋದೆ. ಮನೆಯಲ್ಲಿ ಯಾರೂ ಇರಲಿಲ್ಲ. ದಣಿವಾಗಿತ್ತು, ವಿಶ್ರಾಂತಿಗಾಗಿ ಸೋಫಾ ಮೇಲೆ ಕಣ್ಣು ಮುಚ್ಚಿಕೊಂಡ ಕುಳಿತೆ.

ಸ್ವಲ್ಪ ಹೊತ್ತ ಕಳೆದಿರಬೇಕು, ಕಂಪೌಂಡ ಗೇಟ್ ಕಿರ್... ಕಿರ್... ಆಂತ ಸಪ್ಪಳ ಕೇಳಿಸಿತು, ಎದ್ದು ಕಿಟಕಿ ಗ್ಲಾಸಿನಿಂದ ಇಣುಕಿ ನೋಡಿದೆ. ಒಬ್ಬ ಹೆಣ್ಣು ಮಗಳು ಒಬ್ಬ ಹುಡುಗನೊಂದಿಗೆ ಒಳಗ ಬಂದಳು, ಜೊತೆಗೆ ಹಳೆ ಸೈಕಲ್ ಬ್ಯಾರೆ ಇತ್ತು.   

ಬಾಗಿಲು ತೆಗೆದು ಹೊರಬಂದ ಮೇಲೆ, ಗಾಬರಿಯಾದ ಅವಳು ‘ಸರ್ ನನ್ನ ಮಗಾ ತಪ್ಪು ಮಾಡಿದ್ದಾನೆ. ನಿಮ್ಮ ಮನೆಯೊಳಗಿನ ಸೈಕಲ್ ಕದ್ದು ಶಿಗಟ್ಟಿ ತಾಂಡಾ ಹುಡುಗನಿಗೆ ಎರಡು ನೂರು ರೂಪಾಯಿಗಳಿಗೆ ಮಾರಿದ್ದ, ಬಿಡಿಸಿ ತಂದಿದ್ದೇನೆ, ದಯವಿಟ್ಟು ನಿಮ್ಮ ಸೈಕಲ್ ತೊಗೊಂಡು ನಮ್ಮನ್ನ ಕ್ಷಮಿಸಿ’ ಎಂದಳು. ನನಗೆ ತುಂಬಾ ಆಶ್ಚರ್ಯವಾಯಿತು.

ಕದ್ದ ವಸ್ತು ಮರಳಿ ಬರೂದು, ಅಷ್ಟೊಂದು ಸುಲಭ ಅಲ್ಲ. ನಾನು ಇಬ್ಬರನ್ನೂ ಮನೆ ಒಳಗೆ ಕರೆದೆ. ಕುಡಿಯಲು ನೀರು ಕೊಟ್ಟೆ, ತಿನ್ನಲು ಬಾಳೆ ಹಣ್ಣು ನೀಡಿದೆ. ಆಮೇಲೆ ನೂರರ ಎರಡು ನೋಟು ಕೊಡಲು ಹೋದೆ.

‘ಬೇಡ ಸರ್, ನಿಜವಾಗಿ ನಾವು ಹೆದರುತ್ತಾ ಬಂದಿದ್ದಿವಿ, ನೀವ್ಯಾರೋ ಗೊತ್ತಿರಲಿಲ್ಲ. ಎಲ್ಲಿ ಓಣಿಯಲ್ಲಿ ಬೈದಾಡಿ ನಮ್ಮ ಮರ್ಯಾದೆ ಕಳೆಯುತ್ತಾರೋ ಅಂತಾ ಭಾವಿಸಿದ್ದೆ’ ಎಂದಳು.

ಮತ್ತೊಮ್ಮೆ ಹಣ ತೆಗೆದುಕೊಳ್ಳಲು ಒತ್ತಾಯಿಸಿದಾಗ, ‘ಹಾಗಾದರೆ ನಿಮ್ಮ ಮನೆಯಲ್ಲಿ ನೀರು ಹಣ್ಣು ತೆಗೆದುಕೊಳ್ಳುವುದಿಲ್ಲ’ ಎಂದು ಹಣ ನಿರಾಕರಿಸಿದಳು. ಆಯಿತು ಎಂದೆ. ತಾಯಿ ಮಗ ಹಣ್ಣು ತಿನ್ನತೊಡಗಿದರು.

‘ಈಗ ಹೇಳಿ, ಮಗ ಸೈಕಲ್ ಕದ್ದ ವಿಷಯ ನಿಮಗೆ ಹೇಗೆ ಗೊತ್ತಾಯಿತು?’ ಎಂದಾಗ– ಮಗ ತುಮರಿಕೊಪ್ಪದ ಸಂತ ಜೇವಿಯರ್ ಶಾಲೆಯಲ್ಲಿ ಏಳನೆಯ ತರಗತಿ ಓದುತ್ತಿದ್ದಾನೆ ಎಂದೂ, ಸೈಕಲ್ ಕಳುವಿನ ಹಣದ ವಿಷಯಕ್ಕೆ ಗೆಳೆಯರಲ್ಲಿ ಜಗಳ ಬಂದಾಗ ಇದನ್ನ ಗಮನಿಸಿದ ಬೇರೆ ಹುಡುಗ ಶಾಲೆಯ ಮುಖ್ಯಶಿಕ್ಷಕರಿಗೆ ಕಳುವಿನ ಬಗ್ಗೆ ದೂರು ಹೇಳಿದ್ದಾನೆ, ಹೀಗಾಗಿ ಅವರು ನಮ್ಮನ್ನು ಕರೆಯಿಸಿ ‘ಕಳ್ಳತನ ಮಾಡುವ ಮಕ್ಕಳು ನಮ್ಮ ಶಾಲೆಯಲ್ಲಿ ಬೇಡ.

ಸೈಕಲ್ ಯಾರದ್ದೋ ಅವರಿಗೆ ಪರತ್ ನೀಡಿ, ನಿಮ್ಮ ಮಗಾ ಅವರಲ್ಲಿ ಕ್ಷಮೆ ಕೇಳಿದಾಗ ಮಾತ್ರ ನಮ್ಮ ಶಾಲೆಯಲ್ಲಿ ನಿಮ್ಮ ಮಗನ ವಿದ್ಯಾಭ್ಯಾಸ ಮುಂದುವರೆಸಲು ಅವಕಾಶ’ ಎಂದು ಕಟ್ಟುನಿಟ್ಟಾಗಿ ಹೇಳಿದರು. ಎಂದು ವಿವರವಾದ ಕಥೆ ಹೇಳಿದಳು.

‘ಯಾಕೋ ಹೀಗೆ ಮಾಡಿದೆ? ನಿನ್ನಿಂದಾಗಿ ನಿನ್ನ ತಾಯಿ ತಲೆತಗ್ಗಿಸುವಂತಾಯಿತು, ಇದು ಒಳ್ಳೆಯದಾ?’ ಎಂದು ಹುಡುಗನನ್ನು ಪ್ರಶ್ನಿಸಿದಾಗ– ‘ಸರ್, ನನಗೆ ತುಂಬಾ ನೋವಾಗಿದೆ. ಸೈಕಲ್ ಬಿಡಿಸಿಕೊಂಡು ಬರಲು ಹಣಕ್ಕಾಗಿ ನಾನೇ ಒಂದೆರಡು ದಿನ ಶಾಲೆ ಬಿಟ್ಟು ಮನೆ ಕಟ್ಟುವ ಗೌಂಡಿ ಕಡೆ ಕೆಲಸಕ್ಕೆ ಸೇರಿದ್ದೆ, ಅವ್ವನಿಗೆ ಗೊತ್ತಾಗಿ ಬೈದು ಕೆಲಸದಿಂದ ಬಿಡಿಸಿ ಕರೆತಂದಳು’ ಅಂದ.

‘ಮಕ್ಕಳೇ ಈಗ ಹೇಳಿ ನಿಮಗೇನ ಅನಿಸುತ್ತದೆ...’ ಮಾಲತಿ ಎದ್ದು ನಿಂತು– ‘ಸರ್, ಮೊದಲನೆದಾಗಿ ಮತ್ತೊಬ್ಬರ ವಸ್ತು ಕದ್ದು ಮನೆಯವರಿಗೆ ಅಗೌರವ ತರು ಕೆಲಸಾ ಮಾಡಬಾರದ್ರಿ’ ಎಂದು ಅಭಿಪ್ರಾಯ ಹೇಳಿದಳು.

‘ಸರ್, ದೂರು ಕೊಟ್ಟ ಹುಡುಗನ ಜವಾಬ್ದಾರಿ ಬಗ್ಗೆ ಅಭಿಮಾನ ಮೂಡುತ್ತದೆ’ ಎಂದಳು ಸ್ವಾತಿ, ‘ಹೆಡ್ಮಾಸ್ಟರ್ ತಪ್ಪನ್ನು ಸಹಿಸದ ಹಾಗೂ ಖಡಾಮುಡಿ ಹೇಳಿದ ರೀತಿ ಒಳ್ಳೆಯದು’– ಸಲೀಮ್ ಧ್ವನಿಗೂಡಿಸಿದ. ‘ಮಗನ ಬಗ್ಗೆ ತಾಯಿ ಕ್ಷಮೆ ಕೇಳಿದ್ದು ನೋವಾಯಿತು’ ಅಂದ ಮಂಜಣ್ಣ.

ಎಂದೂ ಚರ್ಚೆಯಲ್ಲಿ ಮಾತಾಡದಿದ್ದ ಕಡೆಮನಿ ಶೈಲಾ ಕೈ ಎತ್ತಿದಳು. ‘ಹೇಳು’ ಎಂದಾಗ– ‘ನೀವು ತಾಯಿ ಮಗನ್ನ ಬೈಯದೇ ಪ್ರೀತಿಯಿಂದ ಸತ್ಕರಿಸಿದ ರೀತಿ ಖುಷಿಯಾಯಿತು’ ಎಂದಳು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT