ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಜುಲೈನಲ್ಲಿ ಟೆಂಡರ್‌

Last Updated 25 ಜೂನ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು– ಬೆಂಗಳೂರು ನಡುವಿನ ರಾಜ್ಯ ಹೆದ್ದಾರಿ ಸಂಪರ್ಕವನ್ನು ವಿಶ್ವದರ್ಜೆಗೆ ಏರಿಸುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆಗೆ ಜುಲೈ ತಿಂಗಳಲ್ಲಿ ಟೆಂಡರ್‌ ಪ್ರಕ್ರಿಯೆ ಆರಂಭವಾಗಲಿದೆ.

ಟೋಲ್‌ ರಹಿತ ರಾಜ್ಯ ಹೆದ್ದಾರಿಯನ್ನು ಕೆಲ ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸುಪರ್ದಿಗೆ ನೀಡಲಾಗಿದೆ. ಪ್ರಾಧಿಕಾರವು ಟೋಲ್‌ ಸಹಿತ ಆರು ಪಥ ಹಾಗೂ ಟೋಲ್‌ ರಹಿತ ನಾಲ್ಕು ಪಥಗಳ ಸರ್ವಿಸ್‌ ರಸ್ತೆಯನ್ನು ನಿರ್ಮಿಸಲಿದೆ.

ಯೋಜನೆಗಾಗಿ ರಾಜ್ಯ ಸರ್ಕಾರವು ಭೂಸ್ವಾಧೀನ ಪ್ರಕ್ರಿಯೆಯನ್ನು ಶೇ 90ರಷ್ಟು ಪೂರ್ಣ ಮಾಡಿದೆ. ಜೂನ್‌ನಲ್ಲಿ ಟೆಂಡರ್‌ ಪ್ರಕ್ರಿಯೆ ಆರಂಭ ಮಾಡಿ  ಡಿಸೆಂಬರ್‌ ಒಳಗೆ ಕಾಮಗಾರಿ ಆರಂಭಿಸುವಂತೆ ರಾಜ್ಯ ಸರ್ಕಾರ ಒತ್ತಡ ಹೇರುತ್ತಿದೆ ಎಂದು ಪ್ರಾಧಿಕಾರದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಯೋಜನೆಯನ್ನು 30 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಗಡುವು ನೀಡಲಾಗುತ್ತದೆ.

ಕೆಂಗೇರಿ ಬಳಿಯ ನೈಸ್‌ ರಸ್ತೆಯ ಅಂಚಿನಲ್ಲಿರುವ ವಿಶ್ವ ಒಕ್ಕಲಿಗರ ಮಠದಿಂದ ಆರಂಭವಾಗಿ ಮೈಸೂರು ವರ್ತುಲ ರಸ್ತೆಯ ಆರಂಭದಲ್ಲಿ ಮುಕ್ತಾಯವಾಗುವ ರಸ್ತೆಯಲ್ಲಿ ಹಲವು ವೈಶಿಷ್ಟ್ಯಗಳಿವೆ.

ರಾಷ್ಟ್ರೀಯ ಹೆದ್ದಾರಿ ಮಾನದಂಡದ ಪ್ರಕಾರ 40 ಕಿ.ಮೀಗೆ ಒಂದು ಕಡೆ ರೆಸ್ಟೊರೆಂಟ್‌, ಡೀಸೆಲ್‌ ಬಂಕ್‌, ಶೌಚಾಲಯ, ವಾಹನ ನಿಲುಗಡೆ ಪ್ರದೇಶ ಇರಬೇಕು. ಈ ಹೆದ್ದಾರಿಯಲ್ಲಿ ಸುಮಾರು 55 ಕಿ.ಮೀ ಒಳಗೆ ಎಡ ಹಾಗೂ ಬಲ ಬದಿಯಲ್ಲಿ ಈ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ಈಗಿರುವ ರೆಸ್ಟೊರೆಂಟ್‌ಗಳಿಗೆ ಟೋಲ್‌ ಹೆದ್ದಾರಿಯ ಸಂಪರ್ಕ ಇರುವುದಿಲ್ಲ.

ಈ ರಸ್ತೆ ಅಭಿವೃದ್ಧಿಗೆ ನೈಸ್‌ ಕಂಪೆನಿಯು ತನ್ನ ಆಕ್ಷೇಪವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಪ್ರಸ್ತುತ ಬೆಂಗಳೂರು ಮೈಸೂರು ರಸ್ತೆಯಲ್ಲಿ 60 ಸಾವಿರ ವಾಹನ ಓಡಾಡುತ್ತಿದೆ.

ಹೀಗಾಗಿ ಒಂದು ವೇಳೆ ನೈಸ್‌ ಕಂಪೆನಿಯು ಬೆಂಗಳೂರು– ಮೈಸೂರಿಗೆ ರಸ್ತೆ ನಿರ್ಮಿಸಿದರೂ ಸಹ ನಷ್ಟ ಸಂಭವಿಸುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆ ವಾದ ಮಂಡಿಸಿತ್ತು. ಈ ವಾದವನ್ನು ಕೇಂದ್ರ ಪುರಸ್ಕರಿಸಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಹಸಿರು ನಿಶಾನೆ ತೋರಿಸಿದೆ ಎಂದು ಮೂಲಗಳು ತಿಳಿಸಿವೆ.

*  ನಾಲ್ಕು ನಗರಗಳಿಗೆ ಬೈಪಾಸ್‌. ರಾಮನಗರ, ಚನ್ನಪಟ್ಟಣಕ್ಕೆ ಒಂದು ಬೈಪಾಸ್‌. ಮಂಡ್ಯ ಮತ್ತು ಶ್ರೀರಂಗಪಟ್ಟಣಕ್ಕೆ ಪ್ರತ್ಯೇಕ ಬೈಪಾಸ್‌. ಈ ನಗರಗಳ ಪ್ರವೇಶಕ್ಕೆ ಹೆದ್ದಾರಿಯಿಂದ ಪ್ರತ್ಯೇಕ ಮಾರ್ಗ.

*ಈಗಿರುವ ರಸ್ತೆಯ ಎರಡೂ ಬದಿ ಪಿಲ್ಲರ್‌ ನಿರ್ಮಾಣ. ಒಂದು ಸಾಲಿನ ಪಿಲ್ಲರ್‌ಗಳ ಮೇಲೆ ಮೂರು ಪಥ ನಿರ್ಮಾಣ. ಈಗಿರುವ ರಸ್ತೆಯ ಸಂಚಾರಕ್ಕೆ ಹೆಚ್ಚು ತೊಂದರೆ ಆಗದಂತೆ ಕಾಮಗಾರಿ.

ಯೋಜನೆಯ ವಿಶೇಷಗಳು
* ವಿಶ್ವ ಒಕ್ಕಲಿಗರ ಆಶ್ರಮದಿಂದ ಕುಂಬಳಗೋಡು ಹಾಗೂ ಮದ್ದೂರು ಬಳಿ ಎತ್ತರಿಸಿದ ಮಾರ್ಗ. 30 ಮೀಟರ್‌ಗೆ ಒಂದರ ಬದಲು 65 ಮೀಟರ್‌ಗೆ ಒಂದರಂತೆ ಪಿಲ್ಲರ್‌ಗಳು.

*ಇದರಿಂದ ಎತ್ತರಿಸಿದ ಮಾರ್ಗದಲ್ಲಿ ರಸ್ತೆ ಜೋಡಣೆ ಕಡಿಮೆಯಾಗುತ್ತದೆ. 260 ಮೀಟರ್‌ಗೆ ಒಂದು ಜೋಡಣೆ. ಇದರಿಂದ ಸುಗಮ ಸಂಚಾರ. (ಸಾಮಾನ್ಯವಾಗಿ 30 ಮೀಟರ್‌ಗೆ ಒಂದು ಜೋಡಣೆ)

ಮೇಲು ಸೇತುವೆಯ ಪಿಲ್ಲರ್‌ಗಳಿಗೆ  ಬಳ್ಳಿಗಳನ್ನು ಹಬ್ಬಿಸಲಾಗುತ್ತದೆ. ಎರಡೂ ರಸ್ತೆಯ ನಡುವೆ ಹಾಗೂ ಎರಡೂ ಬದಿಗಳಲ್ಲಿ ನಾಲ್ಕು ಸಾಲಿನ ಗಿಡಗಳನ್ನು ನೆಡಲಾಗುತ್ತದೆ.ಇದರಿಂದ ವಾಯು ಹಾಗೂ ಶಬ್ಧ ಮಾಲಿನ್ಯಕ್ಕೆ ಕಡಿವಾಣ ಹಾಕುವ ಚಿಂತನೆಯಿದೆ.

* ನೈಸ್‌ ರಸ್ತೆಯಿಂದ ರಾಮನಗರದವರೆಗೆ ಟೋಲ್‌ ರಹಿತ ಮಾರ್ಗದ ಅಂಚಿನಲ್ಲಿ 30 ಕಿ.ಮೀ ಸೈಕಲ್‌ ಪಥ ನಿರ್ಮಾಣ.

*ಸ್ಥಳೀಯ ಸಂಚಾರಕ್ಕೂ ತೊಂದರೆಯಾಗದಂತೆ ಒಂದು ಬದಿ ಏಳು ಮೀಟರ್‌ಗಳ ಎರಡು ಪಥದ ಸರ್ವಿಸ್‌ ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT