ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಫೋಟೊ ಮುದ್ರಿಸುವ ‘ಸ್ನ್ಯಾಪ್‌ಜೆಟ್’

Last Updated 2 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಸ್ಮಾ  ರ್ಟ್‌ಫೋನಿನಲ್ಲಿ ಕ್ಲಿಕ್ಕಿಸಿದ ಚಿತ್ರಗಳನ್ನು ಮುದ್ರಿಸಿಕೊಳ್ಳುವ ಸಲುವಾಗಿ ಫೋಟೊ ಪ್ರಿಂಟಿಂಗ್‌ ಸ್ಟುಡಿಯೊಗೆ ತೆರಳಿಗೆ ಮೆಮೊರಿ ಕಾರ್ಡ್‌ ಕೊಟ್ಟು ಕಾಯುತ್ತಾ ನಿಲ್ಲುವುದೇಕೆ? ನೀವೇ ಕ್ಷಣ ಮಾತ್ರದಲ್ಲಿ ಫೋಟೊ ಮುದ್ರಿಸಿಕೊಳ್ಳುವಂತಿದ್ದರೆ, ಬೇರೆಯವರಿಗೂ ತ್ವರಿತಗತಿಯಲ್ಲಿ ಮೊಬೈಲ್‌ನಲ್ಲಿರುವ ಚಿತ್ರಗಳನ್ನು ಮುದ್ರಿಸಿಕೊಡುವಂತಿದ್ದರೆ ಹೇಗೆ!

ಇದೇನು ಆಗದ ಹೋಗದ ಬರೀ ಮಾಯಿ ಮಾತಿನ ಕೆಲಸವೇನೂ ಅಲ್ಲ. ಊಹೆಗೂ ನಿಲುಕದ ಇಂತಹದ್ದೊಂದು ಕೆಲಸವನ್ನು ಅಮೆರಿಕದ ಸಹೋದರರಿಬ್ಬರು ‘ಸ್ನ್ಯಾಪ್‌ಜೆಟ್’ ಎಂಬ ಸಾಧನವೊಂದನ್ನು ಅಭಿವೃದ್ಧಿಪಡಿಸುವ ಮೂಲಕ ಸುಲಭ ಸಾಧ್ಯವಾಗಿಸಿದ್ದಾರೆ.

ವೈಫೈ, ಬ್ಲೂಟೂತ್‌, ಕೇಬಲ್‌ ಕನೆಕ್ಷನ್, ಅಪ್ಲಿಕೇಷನ್ ಸಹಯಾದಿಂದಲೇ ಹಾಗೂ ಯಾವುದೇ ಕೇಬಲ್‌ ಸಂಪರ್ಕದ ಅಗತ್ಯವೂ ಇಲ್ಲದೇ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ಫೋಟೊಗಳನ್ನು ಸುಲಭದಲ್ಲಿ ಮುದ್ರಿಸಿಕೊಳ್ಳಬಹುದು.

ಐಫೋನ್‌ ಮತ್ತು ಆ್ಯಂಡ್ರಾಯ್ಡ್‌ ನಿರ್ವಹಣಾ ತಂತ್ರಾಂಶವಿರುವ ಸ್ಮಾರ್ಟ್‌ಫೋನ್‌ಗಳಿಂದ ಫೋಟೊ ಮುದ್ರಣ ಬಲು ಸುಲಭದ ಕೆಲಸ.
ಮೊಬೈಲ್‌ನಲ್ಲಿ ಚಿತ್ರಗಳನ್ನು ಚೆಂದವಾಗಿ ಮುದ್ರಿಸಿಕೊಡಬಲ್ಲ ಈ ಸಾಧನ ಮೊಬೈಲ್‌ನಷ್ಟೇ ಪುಟ್ಟ  ಗಾತ್ರದ್ದು. ಜೇಬಿನಲ್ಲಿ ಆರಾಮವಾಗಿ ಇಟ್ಟುಕೊಳ್ಳಬಹುದಾದ ‘ಸ್ನ್ಯಾಪ್‌ಜೆಟ್’ ಅನ್ನು ಕಚೇರಿ, ಪ್ರವಾಸ ಸ್ಥಳ, ಕಾಫಿ ಷಾಪ್‌... ಎಲ್ಲಿಗೆ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದಾಗಿದೆ.

ಫೋಟೊ ಪ್ರಿಂಟ್ ಹೇಗೆ?
‘ಸ್ನ್ಯಾಪ್‌ಜೆಟ್’ ಸಾಧನ ಸ್ಕ್ಯಾನರ್ ಹಾಗೂ ಪ್ರಿಂಟರ್‌ನಂತೆ ಎರಡೂ ರೀತಿಯಲ್ಲಿ ಕಾರ್ಯನಿರ್ವಹಿಸಬಲ್ಲದು. ಸ್ಮಾರ್ಟ್‌ಫೋನ್‌ನಿಂದ ಆಗಷ್ಟೇ ಕ್ಕಿಕಿಸಿದ ಚಿತ್ರವಿರಬಹುದು, ಫೋನ್‌ನ ಫೋಲ್ಡರ್‌ಗಳಲ್ಲಿ ಸಂಗ್ರಹಿಸಿಟ್ಟಿರುವ ಚಿತ್ರವೇ ಆಗಿರಬಹುದು ಅದನ್ನು ತೆರೆದಿಟ್ಟುಕೊಂಡು ಫೋನ್‌ನ ಪರದೆಯನ್ನು
‘ಸ್ನ್ಯಾಪ್‌ ಜೆಟ್‌’ಗೆ ಮುಖಮಾಡಿ ಇಡಬೇಕು. ನಂತರ, ಸ್ನ್ಯಾಪ್‌ಜೆಟ್‌ನಲ್ಲಿರುವ ಪ್ರಿಂಟ್‌ ಬಟನ್‌ ಕ್ಲಿಕ್‌ ಮಾಡಬೇಕು. ಕೂಡಲೇ ಫೋನ್‌ನ ಪರದೆಯಲ್ಲಿ ಗೋಚರಿಸುತ್ತಿರುವ ಚಿತ್ರವನ್ನು ಸ್ನ್ಯಾಪ್‌ ಮಾಡಿಕೊಳ್ಳುವ ‘ಸ್ನ್ಯಾಪ್‌ಜೆಟ್‌’, ಕ್ಷಣ ಮಾತ್ರದಲ್ಲಿಯೇ 1200 ಡಿಪಿಐ (ಡಾಟ್ಸ್‌ ಪರ್‌ ಇಂಚ್) ರೆಸಲೂಷನ್ ಸಾಮರ್ಥ್ಯದ ಚಿತ್ರವನ್ನು ಮುದ್ರಿಸಿ ಹೊರಹಾಕುತ್ತದೆ.

‘ಸ್ಮಾರ್ಟ್‌ ಫೋನ್‌ಗಳ ರೆಟಿನಾ(ಅಕ್ಷಿಪಟಲದಂತಹ) ಡಿಸ್‌ಪ್ಲೆ ಸಾಮರ್ಥ್ಯ 326 ಪಿಪಿಐ (ಪಿಕ್ಸೆಲ್ಸ್‌ ಪರ್ ಇಂಚ್) ಅಥವಾ ಅದಕ್ಕೂ ಹೆಚ್ಚಿನದ್ದಾಗಿರುವುದರ ಜತೆಗೆ, ಉತ್ತಮ ಕಲರ್‌ ಕಾಂಬಿನೇಷನ್‌ (ಬಣ್ಣಗಳ ಹೊಂದಾಣಿಕೆ) ಇರುವುದೇ ‘ಸ್ನ್ಯಾಪ್‌ಜೆಟ್‌’ ಅಭಿವೃದ್ಧಿಗೆ ವರವಾಗಿದೆ. ಈ ಕುರಿತು ಹಲವು ಪ್ರಯೋಗಗಳನ್ನು ಮಾಡಿದ ನಂತರ, ಸ್ಮಾರ್ಟ್‌ಫೋನ್ ಡಿಸ್‌ಪ್ಲೆಯಿಂದ ಹೊರಹೊಮ್ಮುವ ಬೆಳಕನ್ನೇ ಕೇಂದ್ರಿಕರಿಸಿ ಚಿತ್ರವನ್ನು ಮುದ್ರಿಸಲು ಅನುಕೂಲವಾಗುವಂತೆ ಈ ಸಾಧನವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಯಿತು’ ಎಂದು ‘ಸ್ನ್ಯಾಪ್‌ಜೆಟ್‌’ ಕಂಪೆನಿಯ ಸಂಸ್ಥಾಪಕ ಸಹೋದರರಾದ ಇಸ್ಮಾಯಿಲ್ ದೆಗಾನಿ ಮತ್ತು ಇಸಾಕ್ ದೆಗಾನಿ ‘ಕಿಕ್‌ಸ್ಟಾರ್ಟರ್‌’ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದ್ದಾರೆ.

‘ಸ್ನ್ಯಾಪ್‌ಜೆಟ್‌’ ಸಾಧನವು ವಿಂಟೇಜ್ ಅನಲಾಗ್ ಇನ್‌ಸ್ಟಂಟ್‌ ಫಿಲ್ಮ್‌ ಮತ್ತು ಕಟ್ಟಿಂಗ್‌ ಎಡ್ಜ್‌ ಫೈಬರ್ ಆಫ್ಟಿಕ್‌ ಟೆಕ್ನಾಲಜಿಯನ್ನು ಒಳಗೊಂಡಿದೆ. ಪೊಲಾರಾಯ್ಡ್‌ 300 ಅಥವಾ ಫ್ಯುಜಿಫಿಲ್ಮ್‌ ಇನ್ಸ್ಟಾಕ್ಸ್‌ ಪ್ರಿಂಟ್‌ಗಳ ಮೂಲಕ ಚಿತ್ರವನ್ನು ಮುದ್ರಿಸಬಹು­ದಾಗಿದೆ. ಇನ್ನೂ ಅಭಿವೃದ್ಧಿ ಹಂತದಲ್ಲಿದ್ದು, ಇನ್ನಷ್ಟೇ ಮಾರುಕಟ್ಟೆ ಪ್ರವೇಶಿಸಬೇಕಿದೆ. ಈ ಸಾಧನದ ಸಂಪೂರ್ಣ ಮಾಹಿತಿಯನ್ನು ‘ಕಿಕ್‌ಸ್ಟಾರ್ಟರ್‌’ನಲ್ಲಿ ಹಂಚಿಕೊಳ್ಳಲಾಗಿದ್ದು, ಕುತೂಹಲವುಳ್ಳವರು ಈ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ಕ್ಯಾಮೆರಾದಿಂದ ತೆಗೆದ ಚಿತ್ರವನ್ನು ಕೂಡಲೇ ಪ್ರಿಂಟ್‌ ತೆಗೆದು ಗ್ರಾಹಕರಿಗೆ ಕೊಡುವ ಸಾಧನಗಳು ಈಗಾಗಲೇ ಇವೆ. ಇದಕ್ಕೆ ಪರ್ಯಾಯವಾಗಿ ಮೊಬೈಲ್‌ನಿಂದ ಕ್ಲಿಕ್ಕಿಸಿದ ಚಿತ್ರಗಳನ್ನು ಆ ಕೂಡಲೇ ಪ್ರಿಂಟ್‌ ತೆಗೆಯಬಲ್ಲ ತಂತ್ರಜ್ಞಾನ ಹೊಂದಿರುವ ‘ಸ್ನ್ಯಾಪ್‌ಜೆಟ್‌’ ಸಾಧನವನ್ನು ಕ್ಯಾಮೆರಾ ಇರುವ ಎಲ್ಲಾ ಬಗೆಯ ಮೊಬೈಲ್‌ಗಳಿಗೂ ಬಳಕೆಯಾಗುವಂತೆ ಅಭಿವೃದ್ಧಿಪಡಿಸುವತ್ತಲೂ ‘ಸ್ನ್ಯಾಪ್‌ಪ್‌ಜೆಟ್‌’ ತಂಡ ತನ್ನ ಚಿತ್ತ ಹರಿಸಿದೆ.

ಕಳೆದ ಒಂದು ವರ್ಷದಿಂದ ‘ಸ್ನ್ಯಾಪ್‌ಜೆಟ್‌’ ಸಂಶೋಧನೆಯಲ್ಲಿ ತಂಡ ತೊಡಗಿಸಿಕೊಂಡಿದ್ದು, ಸದ್ಯದಲ್ಲೇ ಇದಕ್ಕೊಂದು ಪೂರ್ಣ ಸ್ವರೂಪ ಕೊಡಲಿದೆ. ಅಂದುಕೊಂಡಂತೆ ಎಲ್ಲಾ ನಡೆದರೆ 2015ರ ಡಿಸೆಂಬರ್‌ ವೇಳೆಗೆ ಸುಮಾರು 132 ಡಾಲರ್‌ (₨8,000) ಬೆಲೆಯೊಂದಿಗೆ ‘ಸ್ನ್ಯಾಪ್‌ಜೆಟ್‌’ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT