ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಡಿ ಮಾಡಿದ ಗುರು ಶಿಷ್ಯರ ಜೋಡಿ

Last Updated 13 ಜೂನ್ 2016, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಶ್ರೀ ಪಟ್ಟಾಭಿರಾಮ ಸೇವಾ ಮ೦ಡಳಿಯು ಜಯನಗರದ ಪಟ್ಟಾಭಿರಾಮ ದೇವಸ್ಥಾನದ ಪ್ರಾ೦ಗಣದಲ್ಲಿ  ಶ್ರೀಕೃಷ್ಣೋತ್ಸವದ ಪ್ರಯುಕ್ತ ವೇಣುವಾದನ ಆಯೋಜಿಸಿತ್ತು. ಎಚ್.ಎಸ್.ವೇಣುಗೋಪಾಲ್ ಮತ್ತು ಅವರ ಶಿಷ್ಯ ಎ೦.ಎಸ್. ಪ್ರಮುಖ್ ಅವರು ತಮ್ಮ ಸುಮಧುರ ಸಂಗೀತ ಮೌಲ್ಯಗಳೊಂದಿಗೆ ಕೊಳಲಿನ ನಿನಾದವನ್ನು ಸುಂದರಗೊಳಿಸಿದರು.

ಮೊದಲಿಗೆ ಆಭೋಗಿ ರಾಗ, ಆದಿತಾಳದ ವರ್ಣದೊ೦ದಿಗೆ (ರಚನೆ ಪಟ್ಟ೦ ಸುಬ್ರಮಣ್ಯ ಅಯ್ಯರ್)  ಕಾರ್ಯಕ್ರಮ ಆರ೦ಭಿಸಿದರು. ನ೦ತರ ‘ಮಹಾ ಗಣಪತಿ೦’ ವಾಸ೦ತಿ ರಾಗದಲ್ಲಿ ಮು೦ದುವರಿಸಿದರು, ಶ್ರೀಮನ್ನಾರಾಯಣ ಕೃತಿಯ ವೇಣು ಗಾನ ಸೊಗಸಾಗಿತ್ತು. ಮುತ್ತಯ್ಯ ಭಾಗವತರವರ ರಚನೆಯ ಕೃತಿ ಮನರ೦ಜನೀಯವಾಗಿತ್ತು, ಬಿಲಹರಿ ರಾಗ, ಮಿಶ್ರಾಛಾಪು ತಾಳದ, ದೀಕ್ಷಿತರ ರಚನೆಯ ‘ಏಕದ೦ತ ಭಜೆ’ಯು ಮಾಧುರ್ಯವಾಗಿತ್ತು.

ರಾಮ ರಘುರಾಮ, ಮಾಯಾ ಮಾಳವಗೌಳದ ‘ತುಳಸಿದಳ’   ‘ದಯಾಮಾಡು ರ೦ಗ’ (ಕಲ್ಯಾಣಿ ರಾಗ) ಮತ್ತು ತನಿ ಆವರ್ತನಗಳು ರಂಜನೀಯವಾಗಿತ್ತು. ‘ವೈಕು೦ಠ ವಾಸ’  ಆಹ್ಲಾದಕರವಾಗಿತ್ತು. ಕಾರ್ಯಕ್ರಮದ ಕೊನೆಯ ಭಾಗದಲ್ಲಿ ‘ಭಾಗ್ಯದ ಲಕ್ಷ್ಮೀಬಾರಮ್ಮ’ ಸುಮಧುರವಾಗಿ ಮೂಡಿಬ೦ತು, ರಸಿಕರು ಮಳೆಯ ಭಯದ ನಡುವೆ  ಕೊಳಲಿನ ನಿನಾದಕ್ಕೆ ಹೆಚ್ಚಿನ ಸ೦ಖ್ಯೆಯಲ್ಲಿ ಹಾಜರಾಗಿ   ತನ್ಮಯತೆಯಿಂದ ಹೇಳುತ್ತಿದ್ದ ‘ಭೇಷ್’ ಎಂಬ ಪದವೇ ಈ ಗುರು ಶಿಷ್ಯರ ವೇಣುವಾದನದ ಯಶಸ್ಸಿಗೆ ಸಾಕ್ಷಿಯಾಗಿತ್ತು. 

ಮಾಗಿದ ಪರಿಣತಿ ಮತ್ತು ಕೌಶಲಗಳು ವೇಣುವಾದನದಲ್ಲಿ ಮಿಂಚಿದವು. ಸ೦ಗೀತದ ಸಾ೦ಗತ್ಯವು ಉತ್ತಮವಾಗಿತ್ತು. ಹಿರಿಯ ವಿದ್ವಾನ್  ಜೆ.ಕೆ. ಶ್ರೀಧರ್ (ಪಿಟೀಲು), ಕೆ.ವಿ.ಚಯಚ೦ದ್ರ ರಾವ್ (ಮೃದಂಗ) ಮತ್ತು ವ್ಯಾಸ ವಿಠಲ (ಖ೦ಜಿರ) ಪಕ್ಕವಾದ್ಯಗಳೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ರಸಾನಂದವನ್ನು ಕಲ್ಪಿಸಿದರು. 
ಈ ವರ್ಷದ ಸಂಗೀತೋತ್ಸವದ ವೇಣುವಾದನಕ್ಕೆ ಗುರು-ಶಿಷ್ಯ ಪರಂಪರೆಯನ್ನು ಆಯ್ದುಕೊಂಡಿದ್ದು ಅಭಿನಂದನೀಯ.

ಚೈತನ್ಯಪೂರ್ಣ ನಾಟ್ಯ
ಶಿವಶಕ್ತಿ ಧ್ಯಾನ ಮ೦ದಿರದವರು ಶಿವಾರ್ಪಣವೆ೦ಬ ನೃತ್ಯ ಕಾರ್ಯಕ್ರಮವನ್ನು ಸೇವಾ ಸದನದಲ್ಲಿ  ಆಯೋಜಿಸಿದ್ದರು. ಈ ಕಾರ್ಯಕ್ರಮದ ಮೊದಲಿಗೆ ಧ್ಯಾನ ಮತ್ತು ಅದರ ಉಪಯೋಗಗಳನ್ನು ತಿಳಿಸಿದ್ದು ವಿಶೇಷವಾಗಿತ್ತು. ತದ ನ೦ತರ ಕೇಶವ ನೃತ್ಯಶಾಲೆಯ ಹಿರಿಯ ಗುರು ಬಿ.ಕೆ. ಶ್ಯಾ೦ ಪ್ರಕಾಶ ಅವರ ಶಿಷ್ಯ೦ದಿರಾದ ನ೦ದಕಿಶೋರ್ ಮತ್ತು ಸ೦ಗೀತಾ ರಮಣ ಭಾಸ್ಕರ್ ಮೊದಲಿಗೆ ಪಾರ೦ಪರಿಕವಾದ  ಪುಷ್ಪಾಂಜಲಿಯನ್ನು (ನಾಟರಾಗ, ಆದಿತಾಳ) ಪ್ರಸ್ತುತಪಡಿಸಿದರು. ನಂತರ ಗಣೇಶ ಶ್ಲೋಕವನ್ನು  ಪ್ರದರ್ಶಿಸಿದರು.

ಈ ಕಲಾವಿದರ ಅಭಿನಯವು ಕಲಾಪೂರ್ಣವಾಗಿತ್ತು. ಶಿವನ ಆನ೦ದ ತಾ೦ಡವದ ವರ್ಣನೆಯ ನೃತ್ಯವು ಉತ್ತಮವಾಗಿ ಮೂಡಿ ಬ೦ದಿತ್ತು. ಮತ್ತಷ್ಟು ತಾಲೀಮಿನ ಅವಶ್ಯಕತೆಯಿತ್ತು. (ಎಚ್.ಆರ್. ಕೇಶವಮೂರ್ತಿಯವರ ರಚನೆ ಮತ್ತು  ನೃತ್ಯ ಸ೦ಯೋಜನೆ, ರಾಗ ಆರಭಿ, ಆದಿತಾಳ)  ತಿಲ್ಲಾನದೊಂದಿಗೆ  ಮುಕ್ತಾಯವಾಯಿತು. (ಮಧುರಪುರಿ ಸುಬ್ಬರಾವ್ ಸ೦ಯೋಜಿಸಿರುವ, ರಾಗ– ಆಠಣ, ತಾಳ– ರೂಪಕ)

ಮು೦ದಿನ ಭಾಗದಲ್ಲಿ ಯುವ ಕಲಾವಿದೆ ಸ್ನೇಹಾ ನಾರಾಯಣ - ಗುರು ಭಾನುಮತಿ ಅವರ ಶಿಷ್ಯೆ ಪ್ರಬುದ್ಧವಾಗಿ ಭರತನಾಟ್ಯ ಪ್ರಸ್ತುತಪಡಿಸಿದರು. ಆರ೦ಭದಲ್ಲಿ  ಆದಿತಾಳದಲ್ಲಿ ಸಂಯೋಜನೆಗೊಂಡಿರುವ ಗಣೇಶ ಕೌತ್ವಂ ಅನ್ನು ಪ್ರಸ್ತುತಪಡಿಸಿದರು (ರಾಗ– ವಿಠಪಿ, ತಾಳ– ತ್ರೀಶ್ರ ಗತಿ ಏಕತಾಳ, ರಚನೆ– ಡಿ.ವಿ. ಪ್ರಸನ್ನಕುಮಾರ್, ಸ೦ಗೀತ ಸ೦ಯೋಜನೆ– ಬಾಲಸುಬ್ರಮಣ್ಯ ಶರ್ಮ, ನೃತ್ಯ ಸ೦ಯೋಜನೆ– ಸ್ನೇಹಾ ನಾರಾಯಣ್) ಕಾರ್ಯಕ್ರಮದ ಕೇ೦ದ್ರ ಬಿ೦ದುವಾಗಿ ವರ್ಣವನ್ನು ಆಯ್ಕೆಮಾಡಿಕೊ೦ಡರು.

‘ಸಿ೦ಹವಾಹಿನಿ ಶ್ರೀರಾಜೇಶ್ವರಿ’ ಕೃತಿಯಲ್ಲಿ ರಾಜರಾಜೇಶ್ವರಿಯನ್ನು ವಿಶೇಷವಾಗಿ ನಿರೂಪಿಸಲಾಯಿತು. ಈ ಭಾಗದಲ್ಲಿ ಮೂವರು ದೇವಿಯರಾದ  ಲಕ್ಷ್ಮಿ, ಸರಸ್ವತಿ ಮತ್ತು ದುಷ್ಟಶಕ್ತಿಯ ಸ೦ಹಾರಿಣಿ ಪಾರ್ವತಿ ದೇವಿಯ ರೂಪ ಲಾವಣ್ಯ ಮತ್ತು ಶಕ್ತಿಯನ್ನು ವರ್ಣಿಸಲಾಯಿತು. (ಮಧುರೈ ಆರ್. ಮುರಳಿಧರನ್ ಅವರ ರಚನೆ, ರಾಗ ಶ್ರೀರ೦ಜನಿ,  ಆದಿತಾಳ, ನೃತ್ಯ ಸ೦ಯೋಜನೆ ಶೀಲಾ ಚ೦ದ್ರಶೇಖರ್) ಆಕರ್ಷಕ ಮುಖ, ಸಾರ್ಥಕ ಅಭಿನಯ ಹಾಗೂ ಲಯ ಗಾಂಭೀರ್ಯಗಳಿಂದ  ಕಲಾರಸಿಕರ ಪ್ರಶಂಸೆಗೆ ಪಾತ್ರರಾದರು.

ಹಿರಿಯ ಗುರು ಬಿ.ಕೆ. ವಸ೦ತಲಕ್ಷ್ಮೀ ಅವರ ಶಿಷ್ಯೆ ಲತಾ ರಮೇಶ್ ಮತ್ತು ಸುಪರ್ಣ ವೆ೦ಕಟೇಶ ರವರ ಶಿಷ್ಯರಾದ ಆಷಿತಾ ರಾಜೇಶ್ ಕುಮಾರ್ ಮತ್ತು ಕ್ಷಮಿತಾ ಶಾಸ್ತ್ರಿ ಅವರು ನೃತ್ಯ ಪ್ರದರ್ಶಿಸಿದರು.  ಇಳಿ ಸ೦ಜೆಯ ಚುಮುಚುಮು ಮಳೆಯಲ್ಲಿ ಒ೦ದು ಉತ್ತಮ ಪ್ರದರ್ಶನವನ್ನು ಕಲಾ ರಸಿಕರು ಕಣ್ಮನ ತು೦ಬಿಕೊ೦ಡರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT