ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ವಿರುದ್ಧ ಹೇಳಿಕೆ: ವರುಣ್‌ಗೆ ಪ್ರತಿಕೂಲ

Last Updated 16 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಉತ್ತರ ಪ್ರದೇಶ ‘ಸಿಂಹಾಸನ’ (ಮುಖ್ಯಮಂತ್ರಿ ಕುರ್ಚಿ) ಮೇಲೆ ಮಗನನ್ನು ಕೂರಿಸುವ ಮಹತ್ವಾಕಾಂಕ್ಷೆ ಹೊಂದಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಅವರಿಗೆ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರ ತೀರ್ಮಾನದಿಂದ ಹಿನ್ನಡೆಯಾಗಿದೆ’ ಎನ್ನುವ ವ್ಯಾಖ್ಯಾನ ಬಿಜೆಪಿಯೊಳಗೆ ಕೇಳಿಬರುತ್ತಿದೆ.

ಸುಲ್ತಾನ್‌ಪುರ ಲೋಕಸಭೆ ಸದಸ್ಯ, ನೆಹರು– ಗಾಂಧಿ ಕುಟುಂಬದ ಕುಡಿ ವರುಣ್‌ ಗಾಂಧಿ ಅವರನ್ನು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಶನಿವಾರ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೈಬಿಟ್ಟಿದ್ದಾರೆ. ಒಂದೇ ಕುಟುಂಬದ ಇಬ್ಬರು ಸದಸ್ಯರಿಗೆ ಪ್ರಮುಖ ಹುದ್ದೆ­ಗಳನ್ನು ನೀಡುವುದಕ್ಕೆ ಪಕ್ಷದೊಳಗೆ ಅವಕಾಶ ಇಲ್ಲದಿರುವುದರಿಂದ  ಅವರನ್ನು ಕೈಬಿಡಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಆದರೆ, ಲೋಕಸಭೆ ಚುನಾವಣೆಗಿಂತ ಮೊದಲೂ  ನರೇಂದ್ರ ಮೋದಿ ಹಾಗೂ ವರುಣ್‌ ಜತೆ  ಸೌಹಾರ್ದ ಇರಲಿಲ್ಲ. ವರುಣ್‌ ಅನೇಕ ಸಂದರ್ಭಗಳಲ್ಲಿ ಈ ನಾಯಕನ ವಿರುದ್ಧ ಹೇಳಿಕೆಗಳನ್ನು ನೀಡಿ ಮುಜುಗರ ಸೃಷ್ಟಿಸಿದ್ದಾರೆ. ಮೇ ಒಂದರಂದು ಬರೇಲಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಹುದ್ದೆಗೆ ರಾಜ­ನಾಥ್‌ ಸಿಂಗ್‌ ಯೋಗ್ಯ ನಾಯಕ. ಅಟಲ್‌ ಬಿಹಾರಿ ವಾಜಪೇಯಿ ಬಳಿಕ ಎಲ್ಲ ಜಾತಿ, ಧರ್ಮಗಳ ಜನರನ್ನು ಒಟ್ಟಿಗೆ ಕರೆದೊಯ್ಯುವ ಸಾಮರ್ಥ್ಯ ಇರುವುದು ಅವರಿಗೆ ಮಾತ್ರ ಎಂದು ಹೇಳಿಕೆ ನೀಡಿ ಪರೋಕ್ಷವಾಗಿ ಮೋದಿ ಅವರ ನಾಯಕತ್ವ ವಿರೋಧಿಸಿದ್ದರು.

ಮೋದಿ ದೇಶದ ಪ್ರಧಾನಿ ಆಗಬೇಕೆಂಬ ಕೂಗು ಬಲವಾಗಿದ್ದ ಸಂದರ್ಭದಲ್ಲಿ ವರುಣ್‌ ಅಪಸ್ವರ ತೆಗೆದಿದ್ದರು. ಅಷ್ಟೇ ಅಲ್ಲ, ಮೋದಿ ಅವರು ಫೆಬ್ರುವರಿಯಲ್ಲಿ ಕೋಲ್ಕತ್ತಾದಲ್ಲಿ ನಡೆಸಿದ ಸಭೆಗೆ ಸೇರಿದ್ದ ಜನರ ಸಂಖ್ಯೆ 50 ಸಾವಿರಕ್ಕಿಂತ ಹೆಚ್ಚಿರಲಿಲ್ಲ ಎಂದು ಪ್ರತಿಪಾದಿಸಿದ್ದರು. ಆದರೆ, ಪಕ್ಷ ಇದೊಂದು ಅಭೂತಪೂರ್ವ ಸಭೆ ಎಂದು ಹೇಳಿಕೊಂಡಿತ್ತು.

ಮೋದಿ ಸಭೆ ನಡೆಸಿದ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಉಸ್ತುವಾರಿ ಹೊತ್ತಿದ್ದವರು ವರುಣ್‌ ಗಾಂಧಿ. ಅವರೇ ತಡವಾಗಿ ಈ ಸಭೆಗೆ ಬಂದಿದ್ದರು. ತಾವು ಗಾಂಧಿ ಕುಟುಂಬದ ಸದಸ್ಯ, ಸಂಜಯ್‌ ಪುತ್ರ ಎಂಬ ಕಾರಣಕ್ಕೆ ಸ್ಥಾನಮಾನಗಳನ್ನು ನೀಡುವಂತೆ ಕೇಳುತ್ತಿದ್ದರು. ಪಕ್ಷದ ನೀತಿ– ಸಿದ್ಧಾಂತಗಳನ್ನು ಮೀರಿ ವರುಣ್‌ ರಾಹುಲ್‌ ಮತ್ತು ಪ್ರಿಯಾಂಕ ಅವರ ಜತೆ ಸಂಪರ್ಕ ಇಟ್ಟುಕೊಂಡಿದ್ದರು ಎನ್ನಲಾಗಿದೆ.

ಸುಲ್ತಾನ್‌ಪುರಕ್ಕೆ ಹೊಂದಿಕೊಂಡಿರುವ ಅಮೇಥಿ ಲೋಕಸಭೆ ಕ್ಷೇತ್ರದಲ್ಲಿ ರಾಹುಲ್‌ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆಂದು ಬೆನ್ನು ತಟ್ಟುವ ಮೂಲಕ ವರುಣ್‌ ಬಿಜೆಪಿಯೊಳಗೆ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇವೆಲ್ಲ ಕಾರಣಗಳಿಂದ ವರುಣ್‌ ಅವರನ್ನು ಪಕ್ಷದ ಪದಾಧಿಕಾರಿ ಹುದ್ದೆ­ಯಿಂದ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಈಚೆಗೆ ಉತ್ತರ ಪ್ರದೇಶಕ್ಕೆ ಮಗ ಮುಖ್ಯಮಂತ್ರಿ ಆಗಬೇಕೆಂದು ಹೇಳುವ ಮೂಲಕ ಮೇನಕಾ ಗಾಂಧಿ ಲಕ್ಷ್ಮಣ ರೇಖೆಯನ್ನು ದಾಟಿದ್ದಾರೆ.

ದೇಶದ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಿರುವ ದೊಡ್ಡ ರಾಜ್ಯದ ಪ್ರತಿಯೊಂದು ವ್ಯವಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಳಜಿ ವಹಿಸುತ್ತಿದ್ದಾರೆ. ಮೇನಕಾ ಅವರ ಹೇಳಿಕೆ ಮೋದಿ ಅವರಿಗೆ ಇಷ್ಟವಾಗಿಲ್ಲ ಎಂದು ಪಕ್ಷದ ಮೂಲಗಳು ವಿಶ್ಲೇಷಿಸಿವೆ.

ಮೋದಿ ಅವರ ಮನದಾಳದ ಇಂಗಿತವನ್ನು ಅರ್ಥ ಮಾಡಿಕೊಂಡೇ ಅಮಿತ್‌ ಷಾ ಪದಾಧಿಕಾರಿಗಳ ಪಟ್ಟಿ ಸಿದ್ಧಪಡಿಸಿದ್ದಾರೆ. ಪ್ರಧಾನಿ ಜತೆ ಸುಮಧುರ ಸಂಬಂಧ ಹೊಂದಿರದ ವರುಣ್‌ ಅವರಿಗೆ ಕೊಕ್‌ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಮೋದಿ ತಮ್ಮ ರಾಜಕೀಯ ಎದುರಾಳಿಗಳನ್ನು ಸಹಿಸಿಕೊಳ್ಳುವುದಿಲ್ಲ ಎನ್ನುವುದಕ್ಕೆ ಗಾಂಧಿ ಕುಟುಂಬದ ಈ ಕುಡಿ ಸಾಕ್ಷಿಯಾಗಿದೆ ಎನ್ನಲಾಗುತ್ತಿದೆ.

ಬಿಜೆಪಿ ಪದಾಧಿಕಾರಿಗಳು
ಬಿಜೆಪಿ ಉಪಾಧ್ಯಕ್ಷರು: ಮುಖ್ತಾರ್ ಅಬ್ಬಾಸ್‌ ನಕ್ವಿ, ಬಂಡಾರು ದತ್ತಾತ್ರೇಯ, ಸತ್ಯಪಾಲ್‌ ಮಲ್ಲಿಕ್‌, ಪುರುಷೋತ್ತಮ ರೂಪ್ಲ, ಪ್ರಭಾತ್‌ ಝಾ, ರಘುವರ ದಾಸ್‌, ಕಿರಣ್‌ ಮಹೇಶ್ವರಿ,  ವಿನಯ್‌ ಸಹಸ್ರಬುದ್ಧೆ, ರೇಣುದೇವಿ, ದಿನೇಶ್‌ ಶರ್ಮ

ಪ್ರಧಾನ ಕಾರ್ಯದರ್ಶಿಗಳು: ಜೆ.ಪಿ. ನಡ್ಡಾ, ರಾಜೀವ್‌ ಪ್ರತಾಪ್‌ ರೂಡಿ, ಮುರಳೀಧರ ರಾವ್‌, ರಾಮಲಾಲ್‌, ಸರೋಜಾ ಪಾಂಡೆ, ಭೂಪೇಂದ್ರ ಯಾದವ್‌ ಹಾಗೂ ರಾಂ ಶಂಕರ್‌ ಕಟಾರಿಯಾ.

ಯುವ ಮೋರ್ಚಾ ಅಧ್ಯಕ್ಷರಾಗಿ ಅನುರಾಗ್‌ ಠಾಕೂರ್‌ ಅವರನ್ನು ಮುಂದುವರಿಸಲಾಗಿದೆ. ಮಹಿಳಾ ಮೋರ್ಚಾ ಮುಖ್ಯಸ್ಥೆ ಸ್ಥಾನಕ್ಕೆ ಔರಂಗಾಬಾದ್‌ ಮೇಯರ್‌ ವಿಜಯಾ ರಹತ್ಕರ್‌ ಅವರನ್ನು ನೇಮಿಸಲಾಗಿದೆ.

ವಕ್ತಾರರು: ಎಂ.ಜೆ. ಅಕ್ಬರ್‌, ಷಾ ನವಾಜ್‌ ಹುಸೇನ್‌, ಸುಧಾಂಶು ತ್ರಿವೇದಿ, ಮೀನಾಕ್ಷಿ ಲೇಖಿ,  ವಿಜಯ್‌ ಸೋನ್ಕರ್‌ ಶಾಸ್ತ್ರಿ, ನಳಿನ್‌ ಕೊಹ್ಲಿ, ಸಂಬಿತ್‌ ಪಾತ್ರಾ, ಅನಿಲ್‌ ಬಲೂನಿ, ಜಿ.ವಿ.ಎಲ್‌ ನರಸಿಂಹರಾವ್‌, ಲಲಿತಾ ಕುಮಾರಮಂಗಳಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT