ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಗಳ ಅಧಃಪತನ

ತಾತ್ವಿಕತೆಯ ಸ್ಥಾನವನ್ನು ಜಾತಿ, ಮತ, ಪಂಥ ಮತ್ತು ಹಣ ಆಕ್ರಮಿಸಿವೆ
Last Updated 24 ಏಪ್ರಿಲ್ 2016, 19:34 IST
ಅಕ್ಷರ ಗಾತ್ರ

ಈಗ್ಗೆ ನಲವತ್ತು  ವರ್ಷಗಳ ಹಿಂದೆ ಒಬ್ಬ ಸಂಸದರು ಒಂದು ನುಡಿಮುತ್ತನ್ನು ಆಡಿದರು. ‘ಎಚ್ಚೆತ್ತ ಭಾರತ ಎತ್ತ ಸಾಗುತ್ತಿದೆ’ ಎಂದು. ಅವರೇ ಉತ್ತರಿಸುತ್ತಾ ‘ಅವನತಿಯತ್ತ ಸಾಗುತ್ತಿದೆ’ ಎಂದರು. ಕಾಲ ಸರಿದಂತೆ ಮೌಲ್ಯಗಳು ನಾಶವಾಗುತ್ತಿವೆ. ಆಧುನಿಕತೆ ಜೀವನದ ವಿವಿಧ ಕ್ಷೇತ್ರಗಳಲ್ಲಿ ಹಾಸು ಹೊಕ್ಕಿದೆ. ಮೊಬೈಲುಗಳು, ವಾಟ್ಸ್‌ ಆ್ಯಪ್‌ಗಳು ಇಂದು ಚಾಲ್ತಿಯಲ್ಲಿವೆ, ಜನಜನಿತವಾಗಿವೆ, ಜನಪ್ರಿಯವಾಗಿವೆ. ಆದರೆ ಇವುಗಳ ಉಪಯುಕ್ತತೆಯೊಂದಿಗೆ ದುಷ್ಪರಿಣಾಮಗಳೂ ಹೆಚ್ಚಾಗುತ್ತಿವೆ.

ಇಂಥ ಅಧುನಿಕತೆ ನಮಗೆ ಬೇಕಿತ್ತೇ? ಆದ್ದರಿಂದಲೇ ದಿವಂಗತ ರಾಷ್ಟ್ರಕವಿ ಕುವೆಂಪು ಅವರ ‘ಆಧುನಿಕತೆ ಎಂಬ ನಾಗಿಣಿಯು ಕಚ್ಚದೆ ಚುಂಬಿಸಿಯೇ ಕೊಲ್ಲುತಿಹಳು’ ಎಂಬ ನುಡಿಮುತ್ತು ಇಂದು ಪ್ರಸ್ತುತವೇನೊ ಅನ್ನಿಸುತ್ತಿದೆ. ಇಂದಿನ ವಿಷಮ ಪರಿಸ್ಥಿತಿಯನ್ನು ಗಮನಿಸಿದಾಗ ಕವಿಯ ಮಾತು ಎಷ್ಟು ಪ್ರಸ್ತುತ ಎಂದು ನಮಗೆ ಮನದಟ್ಟಾಗುತ್ತದೆ. ಸುಮಾರು ನಾಲ್ಕು ದಶಕಗಳ ಹಿಂದಿನ ಮಾತು. ಶಿಕ್ಷಣ ಇಲಾಖೆಯ ಕೇಂದ್ರ ಕಚೇರಿಯಲ್ಲಿ ನಿರ್ದೇಶಕರ ಹುದ್ದೆ ಇತ್ತು (ಡಿ.ಪಿ.ಐ.). ಅದನ್ನು ಬದಲಾಯಿಸಿ ಕಮಿಷನರ್‌ ಆಫ್‌ ಪಬ್ಲಿಕ್‌ ಇನ್‌್ಸಪೆಕ್ಷನ್‌ ಎಂದು ಬದಲಾಯಿಸುವ ಯೋಜನೆ ಜಾರಿಗೆ ಬಂತು.

ಆಗ ಪ್ರಸಿದ್ಧ ವಿದ್ಯಾಧಿಕಾರಿಗಳಾಗಿದ್ದ ಎಚ್‌.ವಿ.ಶ್ರೀರಂಗರಾಜು ಅವರು ಅದನ್ನು ತಾತ್ವಿಕವಾಗಿ ಪ್ರಬಲವಾಗಿ ವಿರೋಧಿಸಿದರು. ಏಕೆಂದರೆ ಒಮ್ಮೆ ಅದು ಅಸ್ತಿತ್ವಕ್ಕೆ ಬಂದರೆ ಐ.ಎ.ಎಸ್‌. ಅಧಿಕಾರಿಗಳು ಆ ಹುದ್ದೆಗೆ ಬರುವ ಆತಂಕವಿತ್ತು.  ಅವರಿಗೆ ಯಾವುದೇ ರೀತಿಯಲ್ಲೂ ಶಿಕ್ಷಣ ಇಲಾಖೆಯ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಇರುವುದಿಲ್ಲ ಎಂಬ ಗುಮಾನಿಯಿತ್ತು. ಡಿ.ಪಿ.ಐ. ಹುದ್ದೆ ಮುಂದುವರೆದಿದ್ದರೆ ಶಿಕ್ಷಣ ಇಲಾಖೆಯವರು ಅನುಭವ ಮತ್ತು ಅರ್ಹತೆಯಿಂದ ಅಧಿಕಾರಿಗಳಾಗುತ್ತಿದ್ದರು. ಅವರಿಗೆ ನಾಡಿನ ವಿದ್ಯಾ ಇಲಾಖೆಯ ಸಂಪೂರ್ಣ ಮಾಹಿತಿ ಲಭ್ಯವಿತ್ತು ಮತ್ತು ಇಲಾಖೆಯ ಮೇಲೆ ಹಿಡಿತವಿತ್ತು.

ಅವರು ಕೇವಲ ಅನುಭವ ಮತ್ತು ಅರ್ಹತೆಯಿಂದ ಅಧಿಕಾರವನ್ನು ಪಡೆಯುತ್ತಿದ್ದರು. ಯಾರು ಹೇಗೆ ಎನ್ನುವ ಸಾಮಾನ್ಯ ತಿಳಿವಳಿಕೆ ಇರುತ್ತಿತ್ತು. ಆದರೆ ಇಂದೇನಾಗಿದೆ? ಐ.ಎ.ಎಸ್‌. ಅಧಿಕಾರಿಗಳು ಶಿಕ್ಷಣ ಇಲಾಖೆಗೆ ಬಂದು ಪಿ.ಯು.ಸಿ. ಪ್ರಶ್ನೆಪತ್ರಿಕೆಗಳು ಬಯಲಾಗುತ್ತಿವೆ. ‘ತಾತ್ವಿಕತೆ’ ಎನ್ನುವ ಪದ ಇಂದು ಅದರ ಅರ್ಥ ಕಳೆದುಕೊಳ್ಳುತ್ತಿದೆ. ತಾತ್ವಿಕತೆಯ ಸ್ಥಾನವನ್ನು ಜಾತಿ, ಮತ, ಪಂಥ ಮತ್ತು ಹಣ ಆಕ್ರಮಿಸಿಕೊಂಡಿವೆ. ಹಾಗಾದರೆ ತಾತ್ವಿಕತೆ ಎಂದರೇನು? ಸುಮಾರು ಐದು ದಶಕಗಳ ಹಿಂದಿನ ಮಾತು.

ಸುಪ್ರಸಿದ್ಧ ಅಧ್ಯಾಪಕರಾಗಿದ್ದ ತ.ಸು. ಶಾಮರಾಯರು ತಾತ್ವಿಕತೆಗೆ ಹೆಸರಾಗಿದ್ದರು.  ನಾನು ಶಾಮರಾಯರ ಮಗ. ನಮ್ಮ ಮನೆ ಬಡ ವಿದ್ಯಾರ್ಥಿಗಳಿಗೆ ಮತ್ತು ಬಂಧುವರ್ಗದವರ ಮಕ್ಕಳಿಗೆ ಆಶ್ರಯಧಾಮವಾಗಿತ್ತು. ಅಂದು ಪರೀಕ್ಷೆಗಳು ನಡೆಯುತ್ತಿದ್ದಂತಹ ಸಮಯ. ಆ ವರ್ಷ ನನ್ನ ದೊಡ್ಡಪ್ಪ ವೆಂಕಣ್ಣಯ್ಯನವರ ಮಗ ಮತ್ತು ನನ್ನ ಚಿಕ್ಕಪ್ಪ ಹನುಮಂತರಾಯರ ಮಗ ಡಿಗ್ರಿ ತರಗತಿಯ ವಿದ್ಯಾರ್ಥಿಗಳಾಗಿದ್ದರು. ಅವರು ಕನ್ನಡ ಪರೀಕ್ಷೆಯನ್ನು ಮುಗಿಸಿ ಮನೆಗೆ ಹಿಂತಿರುಗಿದಾಗ ಅವರನ್ನು ಕುರಿತು ನನ್ನ ತಂದೆ, ‘ಏನ್ರಯ್ಯ, ಹೇಗೆ ಮಾಡಿದ್ದೀರಿ ಪರೀಕ್ಷೆಯಲ್ಲಿ’ ಎಂದು ಕೇಳಿದರು.

ಒಡನೆಯೆ ನಮ್ಮಿಬ್ಬರು ಸಹೋದರರು ಅಂದಿನ ಪ್ರಶ್ನೆಪತ್ರಿಕೆ ಬಹಳ ಕ್ಲಿಷ್ಟಕರವಾಗಿತ್ತೆಂದು ಹೇಳುತ್ತಾ, ಪೇಪರ್‌ ಸೆಟ್‌ ಮಾಡಿದವರನ್ನು ಬಾಯಿಗೆ ಬಂದಂತೆ ವಿಧವಿಧವಾಗಿ ಟೀಕಿಸಿದರು. ಅವರನ್ನು ಕಟುಕ ಎಂದು ನಿಂದನೆ ಮಾಡಿದರು. ಆಗ ನನ್ನ ತಂದೆ ಶಾಮರಾಯರು ಅವರನ್ನು ಕುರಿತು ‘ಅಯ್ಯಾ ಆ ಕಟುಕ ಬೇರೆ ಯಾರಲ್ಲ, ಆ ನೀಚ ಬೇರೆ ಯಾರಲ್ಲ, ನಾನೇ’ ಎಂದಾಗ ನಮ್ಮಿಬ್ಬರು ಅಣ್ಣಂದಿರು ಅವಾಕ್ಕಾದರು ಮತ್ತು ಮೂಕವಿಸ್ಮಿತರಾದರು. ಮೌಲ್ಯಗಳಿಗೆ ಬೆಲೆ ಕೊಡುವ ವ್ಯಕ್ತಿಗಳು ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕೇ? 

ಮೌಲ್ಯಗಳಿಗೆ ಬೆಲೆ ನೀಡುವ ವ್ಯಕ್ತಿಗಳು ಯಾವ ರೀತಿ ನಡೆದುಕೊಳ್ಳಬೇಕು ಹಾಗೂ ಅವರು ಯಾವುದೇ ಕ್ಷೇತ್ರಕ್ಕೆ ಸಂಬಂಧಪಟ್ಟವರಾಗಿರಬಹುದು ಎನ್ನುವುದಕ್ಕೆ ಮತ್ತೊಂದು ನಿದರ್ಶನ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ನಿಂತಿದೆ. ದಿವಂಗತ ಡಾ.ಹಾ.ಮಾ.ನಾಯಕರು, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಯಾದ ಸಂದರ್ಭದಲ್ಲಿ ಮೈಸೂರಿನ ಶತಮಾನೋತ್ಸವ ಸಭಾಂಗಣದಲ್ಲಿ ಒಂದು ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಆ ಸಮಾರಂಭದ ಅಧ್ಯಕ್ಷತೆಯನ್ನು ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ವಹಿಸಿದ್ದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಾಯಕರು ಸಮಾರಂಭದ ಅಧ್ಯಕ್ಷರನ್ನು ಕುರಿತು, ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಕಾರಣಕ್ಕೆ ತತ್ವಭಂಗವಾದರೆ ತಾವು ಕುಲಪತಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ತಿಳಿಸಿದರು. ವಿಶ್ವವಿದ್ಯಾಲಯದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ಹಾ.ಮಾ.ನಾಯಕರು ತಕ್ಷಣ ರಾಜೀನಾಮೆ ನೀಡಿ ಮೈಸೂರಿಗೆ ಹಿಂತಿರುಗಿ ಬಂದರು. ನಾಯಕರು ಇದಕ್ಕೆ ಕಾರಣಕರ್ತರಾಗಿರಲಿಲ್ಲ. ಆದರೂ ತಾತ್ವಿಕವಾಗಿ ಅವರು ನುಡಿದಂತೆ ನಡೆದರು. 

ಲಾಲ್‌ಬಹದ್ದೂರ್‌ ಶಾಸ್ತ್ರಿಗಳು ರೈಲ್ವೆ ಸಚಿವರಾಗಿದ್ದ ಕಾಲದಲ್ಲಿ ಅರಿಯಾಲೂರು, ತಂಜಾವೂರು ರೈಲು ಅಪಘಾತವಾಯಿತು. ಶಾಸ್ತ್ರಿಗಳು ತಕ್ಷಣ ರಾಜೀನಾಮೆ ಸಲ್ಲಿಸಿದರು. ಈ ಬಾರಿ ಪಿಯುಸಿ ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆ ಎರಡು ಬಾರಿ ಬಯಲಾಯಿತು. ಮೂರನೆಯ ಬಾರಿ ಬಯಲಾದರೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದು ಶಿಕ್ಷಣ ಸಚಿವರು ಹೇಳಿದ್ದರು. ಆದರೆ ಅವರು ಮೊದಲನೆಯ ಬಾರಿ ಪ್ರಶ್ನೆಪತ್ರಿಕೆ ಬಯಲಾದಾಗಲೇ ರಾಜೀನಾಮೆ ನೀಡ ಬೇಕಾಗಿತ್ತು. ಆಗ ಅದಕ್ಕೆ ಹೆಚ್ಚಿನ ಮಹತ್ವ ಇರುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT