ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ವಿಗೆ ಅಲ್‌ಕೈದಾ ನಂಟು?

ದೆಹಲಿ ಪೊಲೀಸರಿಂದ ಬಂಧನ * 14 ತಿಂಗಳಿಂದ ಕಣ್ಗಾವಲು
Last Updated 8 ಜನವರಿ 2016, 19:51 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಅಲ್‌ ಕೈದಾ ಉಗ್ರಗಾಮಿ ಸಂಘಟನೆ ಜತೆ ಸಂಪರ್ಕ ಹೊಂದಿದ್ದ ಆರೋಪದಡಿ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್‌) ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಬೆಂಗಳೂರಿನ ಮೌಲ್ವಿ ಅಂಜಾರ್‌ ಶಾ ಖಾಸ್ಮಿಯನ್ನು ಜ. 20ರ ವರೆಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ.

‘ಖಾಸ್ಮಿಯನ್ನು  ಬುಧವಾರ ರಾತ್ರಿ ಬೆಂಗಳೂರಿನಲ್ಲಿ ಬಂಧಿಸಿ ನವದೆಹಲಿಗೆ ಕರೆತಂದ ಎಟಿಎಸ್‌ ಅಧಿಕಾರಿಗಳು, ಗುರುವಾರ ಇಲ್ಲಿನ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಆತನನ್ನು ಜನವರಿ 20ರ ವರೆಗೆ ಪೊಲೀಸ್‌ ವಶಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶಿಸಿದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ನಾಲ್ಕನೇ ವ್ಯಕ್ತಿ: ‘ಅಲ್‌ ಕೈದಾ ಜತೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಇತ್ತೀಚೆಗೆ ಬಂಧನಕ್ಕೆ ಒಳಗಾಗಿರುವ ನಾಲ್ಕನೇ ವ್ಯಕ್ತಿ ಖಾಸ್ಮಿ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದೆಹಲಿ ಪೊಲೀಸರು ಡಿಸೆಂಬರ್‌ನಲ್ಲಿ ಮೂವರು ಶಂಕಿತರನ್ನು ಬಂಧಿಸಿದ್ದರು. ಅಲ್‌–ಕೈದಾ ಪರ ಭಾರತದಲ್ಲಿ ಸಕ್ರಿಯವಾಗಿರುವ ಸಂಘಟನೆಯ ಸ್ಥಾಪಕ ಸದಸ್ಯ ಎನ್ನಲಾಗಿರುವ ಮೊಹಮ್ಮದ್‌ ಆಸಿಫ್‌ನನ್ನು (41) ಆಗ್ನೇಯ ದೆಹಲಿಯ ಸೀಲಾಂಪುರದಲ್ಲಿ ಬಂಧಿಸಲಾಗಿತ್ತು.

ಆ ಬಳಿಕ ಅಬ್ದುಲ್‌ ರೆಹಮಾನ್‌ (37) ಎಂಬಾತನನ್ನು ಒಡಿಶಾದ ಕಟಕ್‌ ಜಿಲ್ಲೆಯ ಜಗತ್‌ಪುರದಲ್ಲಿ ಮತ್ತು ಜಫರ್‌ ಮಸೂದ್‌ನನ್ನು ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯಲ್ಲೂ ವಶಕ್ಕೆ ಪಡೆಯಲಾಗಿತ್ತು. ಇದೀಗ ಬಂಧಿತನಾಗಿರುವ ಖಾಸ್ಮಿ, ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಧಾರ್ಮಿಕ ಸಭೆಯೊಂದರಲ್ಲಿ ಆಸಿಫ್‌ನನ್ನು ಭೇಟಿಯಾಗಿದ್ದ. ಆತನ ಮೂಲಕ ರೆಹಮಾನ್‌ ಮತ್ತು ಜಫರ್‌ನ ಪರಿಚಯವಾಗಿತ್ತು.

‘ಖಾಸ್ಮಿ, ರೆಹಮಾನ್‌ ಮತ್ತು ಮಸೂದ್‌ ಪರಸ್ಪರ ಸಂಪರ್ಕದ್ದಲ್ಲಿದ್ದರು ಎಂಬುದನ್ನು ಖಚಿತಪಡಿಸುವ ಸಾಕ್ಷ್ಯಗಳು ಎಟಿಎಸ್‌ಗೆ ದೊರೆತಿದೆ. ಇವರು ಆಂತರ್ಜಾಲ ಮೂಲಕ ಕರೆ (ವಿಒಐಪಿ) ಮಾಡುತ್ತಿದ್ದರು. ಅವರ ಜತೆ ಸಂಪರ್ಕದಲ್ಲಿದ್ದ ಇನ್ನೂ ಕೆಲವರ ಮಾಹಿತಿ ದೊರೆತಿದ್ದು, ಸದ್ಯದಲ್ಲೇ ಅವರನ್ನೂ  ಬಂಧಿಸಲಾಗುವುದು’ ಎಂದು ಅಧಿಕಾರಿ ತಿಳಿಸಿದ್ದಾರೆ.

‘ಪ್ರವಚನದ ಮೂಲಕ ಪ್ರಚೋದನೆ’
ಬೆಂಗಳೂರು: 
ಟೋಪಿ ಹಾಕಿಕೊಳ್ಳಿ, ಗಡ್ಡ ಬೋಳಿಸಬೇಡಿ, ಸಮುದಾಯಕ್ಕಾಗಿ ಕೆಲಸ ಮಾಡಿ ಎಂದೆಲ್ಲ ಖಾಸ್ಮಿ ಪ್ರವಚನದ ವೇಳೆ ಯುವಕರಿಗೆ ಬೈಯ್ಯುತ್ತಿದ್ದ. ಅಲ್ಲದೆ, ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಇಂಥ ಆರೋಪಗಳನ್ನು ನಿರಂತರವಾಗಿ ಕೇಳುತ್ತಿದ್ದೆ. ಆದರೆ, ಆತ ಉಗ್ರ ಸಂಘಟನೆ ಜತೆ ಸಂಪರ್ಕದಲ್ಲಿದ್ದ ಸಂಗತಿ ಕೇಳಿ ಆಘಾತವಾಗಿದೆ...

ಬನಶಂಕರಿ ಮದರಸಾದ ಮುಖ್ಯಸ್ಥ ನಯಾಜ್ ಪಾಷಾ ಅವರ ಮಾತುಗಳಿವು.

‘ಪ್ರಜಾವಾಣಿ’ ಜತೆ ಮಾತನಾಡಿದ  ಅವರು ‘ಬೇರೆ ದೇಶದ ಬಗ್ಗೆಯಾಗಲೀ, ಧರ್ಮದ ಬಗ್ಗೆಯಾಗಲೀ ಪ್ರಚೋದನಾಕಾರಿಯಾಗಿ ಮಾತನಾಡುವಂತಿಲ್ಲ. ಕುರಾನ್ ಏನು ಹೇಳುತ್ತಿದೆಯೋ ಅಷ್ಟನ್ನೂ ಮಾತ್ರ ಬೋಧಿಸಬೇಕು ಎಂಬ ಷರತ್ತುಗಳನ್ನು ವಿಧಿಸಿ 2010ರಲ್ಲಿ ಖಾಸ್ಮಿಯನ್ನು ಮದರಸಾಗೆ ಸೇರಿಸಿಕೊಳ್ಳಲಾಗಿತ್ತು’ ಎಂದರು.

‘14 ತಿಂಗಳ ಹಿಂದೆ ನಾನು ಹಜ್‌ ಯಾತ್ರೆಗೆ ಹೋಗಿದ್ದೆ. ಈ ವೇಳೆ ಖಾಸ್ಮಿ ಪ್ರಚೋದನಾಕಾರಿ ಪ್ರವಚನ ನೀಡಿ ಯುವಕರ ಮನಪರಿವರ್ತನೆಗೆ ಯತ್ನಿಸಿದ್ದ. ವಾಪಸ್ ಬಂದಾಗ ಈ ವಿಷಯ ತಿಳಿದು ಆತನನ್ನು ಮದರಸಾದಿಂದ ಬಹಿಷ್ಕಾರ ಮಾಡಲಾಗಿತ್ತು’ ಎಂದರು.

‘ಮೂರು ವಾರಗಳ ನಂತರ 400–500 ಮಂದಿ ಮುಸ್ಲಿಮರು ಮದರಸಾದ ಬಳಿ ಬಂದು ಪುನಃ ಖಾಸ್ಮಿಯನ್ನು ಸೇರಿಸಿಕೊಳ್ಳುವಂತೆ ಪುಸಲಾಯಿಸಿದ್ದರು. ಆತನನ್ನು ವಾಪಸ್ ಕೆಲಸಕ್ಕೆ ತೆಗೆದುಕೊಳ್ಳಬೇಕೆ, ಬೇಡವೇ ಎಂಬ ಬಗ್ಗೆ ಪೊಲೀಸರ ಸಮ್ಮುಖದಲ್ಲೇ ಮಾತುಕತೆ ನಡೆದಿತ್ತು. ಕೊನೆಗೆ ಸಮಿತಿ ಸಭೆಯ ತೀರ್ಮಾನದಂತೆ ಕೆಲ ಷರತ್ತುಗಳನ್ನು ಹೇರಿ ಮತ್ತೆ ಸೇರಿಸಿಕೊಂಡಿದ್ದೆವು.

‘ಇದಾದ ನಂತರ ಆತ ತನ್ನ ಪ್ರವಚನದ ಶೈಲಿಯನ್ನು ಬದಲಾವಣೆ ಮಾಡಿಕೊಂಡಿದ್ದ. ಹೀಗಾಗಿ ನಾನು ಆತನ ಚಲನವಲನಗಳ ಬಗ್ಗೆ ಅಷ್ಟಾಗಿ ಗಮನ ಹರಿಸಲಿಲ್ಲ.  ಬುಧವಾರ ರಾತ್ರಿ ಇಲಿಯಾಸ್ ನಗರದಿಂದ ಯಾರೋ ಆತನನ್ನು ಕರೆದುಕೊಂಡು ಹೋದ ಬಗ್ಗೆ ಸ್ಥಳೀಯರು ಕರೆ ಮಾಡಿ ಹೇಳಿದರು. ಸ್ನೇಹಿತರ ಜತೆ ಎಲ್ಲೋ ಹೋಗಿರಬೇಕು ಎಂದು ಭಾವಿಸಿದ್ದೆ. ಆದರೆ, ಗುರುವಾರ ಸಂಜೆ 4 ಗಂಟೆಗೆ ದೆಹಲಿಯಿಂದ ವಕೀಲರೊಬ್ಬರು ಕರೆ ಮಾಡಿ, ಖಾಸ್ಮಿ ಎಟಿಎಸ್ ವಶದಲ್ಲಿರುವುದನ್ನು ತಿಳಿಸಿದರು.

ಹುಟ್ಟಿ ಬೆಳೆದದ್ದು ಇಲ್ಲೇ: ‘ಖಾಸ್ಮಿ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೆ. ಪತ್ನಿ–ಮೂವರು ಮಕ್ಕಳ ಜತೆ ಮೊದಲು ಹೆಗ್ಡೆ ನಗರದಲ್ಲಿ ನೆಲೆಸಿದ್ದ. ಅಲ್ಲಿ ₹ 17 ಸಾವಿರ ಮನೆ ಬಾಡಿಗೆ ಕೊಡುತ್ತಿದ್ದ ಆತ, ಬಾಡಿಗೆ ಹೆಚ್ಚಿಸಿದ ಕಾರಣ ವಾಸ್ತವ್ಯವನ್ನು ಟ್ಯಾನರಿ ರಸ್ತೆಗೆ ಬದಲಾಯಿಸಿದ್ದ. ಇಲಿಯಾಸ್‌ ನಗರದಲ್ಲಿ ಹೊಸದಾಗಿ ಮನೆ ಕಟ್ಟಿಸಿ ತಿಂಗಳ ಹಿಂದಷ್ಟೇ ಅಲ್ಲಿಗೆ ತೆರಳಿದ್ದ’ ಎಂದು ನಯಾಜ್ ಮಾಹಿತಿ ನೀಡಿದರು.

ನೆಚ್ಚಿನ ಗುರುವಾಗಿದ್ದ: ‘ಪ್ರಚೋದನಾಕಾರಿ ಭಾಷಣದ ಮೂಲಕ ಕೆಲ ಮುಸ್ಲಿಂ ಯುವಕರ ನೆಚ್ಚಿನ ಗುರುವಾಗಿದ್ದ ಖಾಸ್ಮಿ, ಸ್ಥಳೀಯ ಮುಸ್ಲಿಂ ಯುವಕರ ತಂಡವನ್ನು ರಚಿಸಿಕೊಂಡು ಅವರ ಮೂಲಕ ತನ್ನ ಪ್ರವಚನದ ವಿಷಯಗಳನ್ನು ಮದರಸಾದ ಹೊರಗೂ ಪ್ರಚಾರ ಮಾಡಿಸುತ್ತಿದ್ದ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

‘ತಿಲಕನಗರ, ಬಿಸ್ಮಿಲ್ಲಾನಗರ, ಗುರುಪ್ಪನಪಾಳ್ಯ, ಬನಶಂಕರಿ ಸೇರಿದಂತೆ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಖಾಸ್ಮಿ ಬೆಂಬಲಿಗರು ಪ್ರವಚನದ ವಿವರಗಳುಳ್ಳ ಕರಪತ್ರಗಳನ್ನು ಹಂಚುತ್ತಿದ್ದರು. ಯಶವಂತಪುರ, ಕಾಡುಗೊಂಡನಹಳ್ಳಿ, ದೇವರಜೀವನಹಳ್ಳಿ, ಗೋರಿ ಪಾಳ್ಯದಿಂದ ಯುವಕರು ಆತನ ಪ್ರವಚನ ಕೇಳಲು ಮದರಸಾಗೆ ಬರುತ್ತಿದ್ದರು’ ಎಂದು ಎಂದು ಮಾಹಿತಿ ನೀಡಿದ್ದಾರೆ.
*
2007ರಲ್ಲಿ ಗ್ಲಾಸ್ಗೋ ವಿಮಾನ ನಿಲ್ದಾಣದಲ್ಲಿ ಸ್ಫೋಟಿಸಲು ಯತ್ನಿಸಿದ್ದ ಕಫೀಲ್ ಅಹಮದ್ ಜತೆಗೂ ಖಾಸ್ಮಿ ನಂಟು ಹೊಂದಿದ್ದ ಎನ್ನಲಾಗುತ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಇಲ್ಲ.
ಎನ್‌.ಎಸ್. ಮೇಘರಿಕ್,
ಬೆಂಗಳೂರು ನಗರ ಪೊಲೀಸ್ ಕಮಿಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT