ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಗಿ: ಮಿತಿಗಿಂತ ಕಡಿಮೆ ಸೀಸ

Last Updated 6 ಜೂನ್ 2015, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಇಲಾಖೆಯು ನಾಗರಬಾವಿಯ ರೋಬಸ್ಟ್‌ ಮೆಟೀರಿಯಲ್‌ ಟೆಕ್ನಾಲಜಿ  ಪ್ರೈ. ಲಿ ಮೂಲಕ ನಡೆಸಿರುವ ಪರೀಕ್ಷೆಯಲ್ಲಿ ಮ್ಯಾಗಿಯಲ್ಲಿನ ಸೀಸದ ಪ್ರಮಾಣ ನಿಗದಿತ ಮಿತಿಗಿಂತಲೂ (2.5 ಪಿಪಿಎಂ) ಕಡಿಮೆ ಇರುವುದು ಕಂಡು ಬಂದಿದೆ.

ಮ್ಯಾಗಿಯಲ್ಲಿರುವ ಎಂಎಸ್‌ಜಿ ಪ್ರಮಾಣವನ್ನು ಪತ್ತೆ ಹಚ್ಚುವುದಕ್ಕೆ ಪೀಣ್ಯದ ಪ್ರಯೋಗಾಲಯವೊಂದಕ್ಕೆ  ಮಾದರಿ ಕಳುಹಿಸಲಾಗಿದೆ. ಅದರ ವರದಿಗಾಗಿ ಕಾಯುತ್ತಿದ್ದೇವೆ. ಸೋಮವಾರ ವರದಿ ಕೈ ಸೇರುವ ನಿರೀಕ್ಷೆ ಇದೆ. ಆ ನಂತರ ಈ ವರದಿಗಳನ್ನು  ಕೋಲ್ಕತ್ತದಲ್ಲಿರುವ ಕೇಂದ್ರ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು’ ಎಂದು ಆರೋಗ್ಯ ಸಚಿವ ಯು.ಟಿ ಖಾದರ್‌ ವಿವರಿಸಿದರು.

‘ಬೇಯಿಸಿದ ಮ್ಯಾಗಿ ನೂಡಲ್ಸ್‌ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗುವುದು.  ವರದಿ ಬಂದ ನಂತರವಷ್ಟೇ ಮ್ಯಾಗಿ ವಿರುದ್ಧ ಸಂಪೂರ್ಣ ನಿಷೇಧ ಹೇರುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಸದ್ಯದ ಮಟ್ಟಿಗೆ, ಎಫ್‌ಎಸ್‌ಎಸ್‌ಎಐ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಮಾರುಕಟ್ಟೆಯಲ್ಲಿ ಮ್ಯಾಗಿ ಮಾರಾಟದ ಮೇಲೆ ನಿಗಾ ಇಡಲಿದ್ದಾರೆ’ ಎಂದರು.

ಸಿಎಫ್‌ಟಿಆರ್‌ಐ ವಿರುದ್ಧ ಅಸಮಾಧಾನ: ಮ್ಯಾಗಿ ನೂಡಲ್ಸ್‌ ಮಾದರಿಯ ಪರೀಕ್ಷೆ ನಡೆಸಲು ನಿರಾಕರಿಸಿದ ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಖಾದರ್‌, ‘ಒಂದು ವೇಳೆ ಸಂಸ್ಥೆ ಪರೀಕ್ಷೆ ನಡೆಸಿದ್ದರೆ, ರಾಜ್ಯದಲ್ಲಿ ಮ್ಯಾಗಿ ನೂಡಲ್ಸ್‌ ಪೂರ್ಣವಾಗಿ ನಿಷೇಧ ಹೇರುವ ಬಗ್ಗೆ ಈಗಾಗಲೇ ನಿರ್ಧಾರ ಕೈಗೊಳ್ಳಬಹುದಿತ್ತು’ ಎಂದರು.

‘ಸಿಎಫ್‌ಟಿಆರ್‌ಐಯು ಕೆಲವು ಉಪ ನಿಯಮಗಳನ್ನು ಉಲ್ಲೇಖಿಸಿ ಮಾದರಿಯನ್ನು ಕೋಲ್ಕತ್ತದಲ್ಲಿರುವ ಕೇಂದ್ರ ಪ್ರಯೋಗಾಲಯಕ್ಕೆ ಕಳುಹಿಸಲು ತಿಳಿಸಿತು. ಇದೊಂದು ತುರ್ತು ಪರಿಸ್ಥಿತಿ. ಸಿಎಫ್‌ಟಿಆರ್‌ಐಯು ನಿಯಮಗಳನ್ನು ಬದಿಗೊತ್ತಿ ಇಲಾಖೆಗೆ ನೆರವು ನೀಡಬೇಕಿತ್ತು. ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ’ ಎಂದು  ಅವರು ಹೇಳಿದರು.

ಪಾಸ್ತಾ, ಮ್ಯಾಕ್ರೊನಿ ಕೂಡ ಪರೀಕ್ಷೆಗೆ
ನವದೆಹಲಿ (ಪಿಟಿಐ):  ಮ್ಯಾಗಿ ನೂಡಲ್ಸ್‌ ಅನ್ನು ದೇಶದಾದ್ಯಂತ ನಿಷೇಧಿಸಿರುವ ಆಹಾರ ಸುರಕ್ಷತೆ  ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ವಿವಿಧ ಬ್ರಾಂಡ್‌ಗಳ ಪಾಸ್ತಾ ಹಾಗೂ ಮ್ಯಾಕ್ರೊನಿಗಳನ್ನು ಸಹ ಪರೀಕ್ಷೆಗೆ ಒಳಪಡಿಸುವುದಾಗಿ ತಿಳಿಸಿದೆ.

ಅಲ್ಲದೇ ಇತರ ಬ್ರಾಂಡ್‌ಗಳ ನೂಡಲ್ಸ್‌ಗಳನ್ನು ಸಹ ಪರೀಕ್ಷೆಗೆ ಒಳಪಡಿಸುವುದಾಗಿ ತಿಳಿಸಿದೆ. ಐಟಿಸಿಯ ಸನ್‌ಫೀಸ್ಟ್‌ ಯಿಪ್ಪಿ, ಹಲ್‌ ಕಂಪೆನಿಯ ನೋರ್‌, ನಿಸಿನ್‌ ಫುಡ್ಸ್‌ನ ಟಾಪ್‌ ರೇಮನ್‌ ಇತರ ನೂಡಲ್‌ ಬ್ರಾಂಡ್‌ಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT